Thursday, December 12, 2024

ಕನ್ನಡ ಸಾಹಿತ್ಯ ಲೋಕದ ಮಹಂತರು: ಡಾ. ಶಿವರಾಮ ಕಾರಂತರು

Most read

ಕಾರಂತರು ಒಬ್ಬ ವ್ಯಕ್ತಿಯಲ್ಲ’, ‘ಅವರೊಂದು ಸಂಸ್ಥೆ,’ ಅವರೊಂದು ವಿಶ್ವವಿದ್ಯಾಲಯ,’ ‘ಅವರು ನಡೆದಾಡುವ ವಿಶ್ವಕೋಶ ಎಂಬಿತ್ಯಾದಿ  ಮಾತುಗಳು ಕೋಟ ಶಿವರಾಮ ಕಾರಂತರ ಬಹುಮುಖ ಸಾಧನೆಗೆ ಕೈಗನ್ನಡಿಯಾಗಿದೆ. ಅವರ ಜನ್ಮ ದಿನವಾದ ಇಂದು ( ಅಕ್ಟೋಬರ್‌ 10) ಅವರ ಸ್ಮರಣಾರ್ಥ ಅವರ ಸಾಹಿತ್ಯಕ ಸಾಧನೆಗಳ ಮೇಲೊಂದು ಇಣುಕು ನೋಟ ಬೀರಿದ್ದಾರೆ  ದಾವಣಗೆರೆಯ ಡಾ. ಗಂಗಾಧರಯ್ಯ ಹಿರೇಮಠ.

ಕನ್ನಡಕ್ಕಾಗಿ ದುಡಿದು, ಕನ್ನಡದಲ್ಲಿಯೇ ‘ನಾಲ್ಕು ನೂರಕ್ಕೂ’ ಹೆಚ್ಚು ಗ್ರಂಥಗಳನ್ನು ಬರೆದು ಕನ್ನಡ ಸಂಸ್ಕೃತಿ, ಸಾಹಿತ್ಯದ ಮಹತ್ವವನ್ನು ವಿಶ್ವ ಸಾಹಿತ್ಯ ಪ್ರಪಂಚದ ಎತ್ತರಕ್ಕೆ ಏರಿಸಿದ ಲೇಖಕ ಕೋಟ ಡಾ. ಶಿವರಾಮ ಕಾರಂತರು. ಕನ್ನಡದ ಕಿರೀಟಕ್ಕೆ ‘ಮೂರನೇ’ ಜ್ಞಾನಪೀಠ ಪ್ರಶಸ್ತಿಯ ಗರಿಯನ್ನು ಕಾದಂಬರಿ ಸಾಹಿತ್ಯದ ಮೂಲಕ ಸಿಕ್ಕಿಸಿದರು.  ಕಾರಂತರ ಕಾದಂಬರಿ ಸಾಹಿತ್ಯ, ನಾಟಕಗಳು, ಕಥೆ, ಪ್ರವಾಸ ಕಥನ, ಆತ್ಮ ಚರಿತ್ರೆ, ವಿಡಂಬನೆ, ವೈಚಾರಿಕ ಬರಹಗಳು, ಬಾಲ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಯಕ್ಷಗಾನ, ವಾಸ್ತುಶಿಲ್ಪ, ಚಿತ್ರಕಲೆ ಮುಂತಾದ ಕ್ಷೇತ್ರಗಳಲ್ಲಿಯ ಅವರ ಸಾಧನೆಯ ಕೃಷಿಗೆ ಕಾರಂತರಿಗೆ ಕಾರಂತರೇ ಸಾಟಿ ಎಂಬಂತಿದೆ. ಬಹುಮುಖ ವ್ಯಕ್ತಿತ್ವದ ಶಿವರಾಮ ಕಾರಂತರ  (ಅಕ್ಟೋಬರ್ -10) ಜನ್ಮ ದಿನದ ಪ್ರಯುಕ್ತ ಅವರನ್ನು ಸ್ಮರಿಸುವ ಕಿರು ಪ್ರಯತ್ನ ಇಲ್ಲಿದೆ.

ಜನನ, ಶಿಕ್ಷಣ, ಕೌಟುಂಬಿಕ ಜೀವನ

ದಕ್ಷಿಣ ಕನ್ನಡ ಜಿಲ್ಲೆಯ ಕುಂದಾಪುರ ತಾಲೂಕಿನ ‘ಕೋಟ’ ಗ್ರಾಮದಲ್ಲಿ 1902 ಅಕ್ಟೋಬರ್ 10 ರಂದು ಶಿವರಾಮ ಕಾರಂತರು ಜನಿಸಿದರು.  ತಂದೆ ಶೇಷ ಕಾರಂತರು, ತಾಯಿ ಲಕ್ಷ್ಮೀ. ಅವರದು ನಾಲ್ವರು ಅಣ್ಣಂದಿರು, ನಾಲ್ವರು ತಮ್ಮಂದಿರು ಹಾಗೂ ಮೂವರು ತಂಗಿಯರ ತುಂಬು ಕುಟುಂಬ. ಬಾಲ್ಯದ ವಿದ್ಯಾಭ್ಯಾಸ ‘ಕೋಟ’ ಗ್ರಾಮದಲ್ಲಿ, ಪ್ರೌಢಶಿಕ್ಷಣ ಕುಂದಾಪುರದಲ್ಲಿ ನಡೆದು ಕಾಲೇಜು ಶಿಕ್ಷಣಕ್ಕೆ ಮಂಗಳೂರಿನ ಸರ್ಕಾರಿ ಕಾಲೇಜು ಸೇರಿದರು.  1921 ರಲ್ಲಿ ಗಾಂಧೀಜಿಯ ಅಸಹಕಾರ ಚಳುವಳಿಯ ಪ್ರಭಾವದಿಂದಾಗಿ ವಿದ್ಯಾರ್ಥಿ ಬದುಕಿಗೆ ವಿದಾಯ ಹೇಳಿ ಚಳುವಳಿಯಲ್ಲಿ ಧುಮುಕಿದರು. ಖಾದಿ ಪ್ರಚಾರ, ಅಸ್ಪೃಶ್ಯತಾ ನಿವಾರಣೆ, ಮದ್ಯಪಾನ ನಿಷೇಧ, ಸ್ವದೇಶಿ ಪ್ರಚಾರದಲ್ಲಿ ಮನೆ-ಮಾರು ತೊರೆದು ದೇಶ ಸೇವೆಯಲ್ಲಿ ತೊಡಗಿದರು. 1924ರಲ್ಲಿ ‘ವಸಂತ ಮಾಸ’ ಪತ್ರಿಕೆಯ ಸಂಪಾದಕರಾದರು.  1936 ರಲ್ಲಿ ‘ಲೀಲಾ’ ಅವರನ್ನು ಅಂತರ್ಜಾತಿ ವಿವಾಹವಾದರು.  ಎರಡು ಗಂಡು, ಎರಡು ಹೆಣ್ಣು ಮಕ್ಕಳ ತಂದೆಯಾದರು.  ತಮ್ಮ ಬದುಕಿನುದ್ದಕ್ಕೂ ಒಬ್ಬ ಹೋರಾಟಗಾರನಂತೆ ಬಾಳಿದರು. ಕೆಡಕುಗಳನ್ನು ಖಂಡಿಸಿದರು.  1997 ಡಿಸೆಂಬರ್ 9ರಂದು ತಮ್ಮ 95ನೇ ವರ್ಷದಲ್ಲಿ ನಿಧನರಾದರು.

ಕಾರಂತರ ಕೃತಿಗಳು

ಬಾಲ ಸಾಹಿತ್ಯ – 231, ಕಾದಂಬರಿ-45, ನಾಟಕಗಳು-31, ಕಲೆ-13, ಅನುವಾದಿತ – 16, ವೈಚಾರಿಕ-9, ವಿಶ್ವಕೋಶಗಳು-9, ಜೀವನ ಚರಿತ್ರೆ-09, ಬಿಡಿ ಬರಹಗಳು-08, ವಿಜ್ಞಾನ-8, ಹರಟೆ / ವಿಡಂಬನೆ -06, ಸಂಪಾದಿತ -05, ವಯಸ್ಕರ ಶಿಕ್ಷಣ – 08, ಪ್ರವಾಸ ಕಥನ-06, ಸಣ್ಣಕತೆ-04, ಕವಿತೆ-02, ನಿಘಂಟು -01, ಆಂಗ್ಲಭಾಷಾ ಕೃತಿಗಳು -06, ಒಟ್ಟು 417 ಕೃತಿಗಳನ್ನು ಬರೆದು ಕನ್ನಡ ಸಾಹಿತ್ಯ ದಿಗ್ಗಜರೆನಿಸಿಕೊಂಡಿದ್ದಾರೆ.

ಕಾರಂತರಿಗೆ ಸಂದ ಗೌರವ, ಪ್ರಶಸ್ತಿ ಪುರಸ್ಕಾರಗಳು

ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – 1954, ವಿವಿಧ ವಿಶ್ವವಿದ್ಯಾನಿಲಯಗಳಿಂದ ಗೌರವ ಡಿ.ಲಿಟ್ ಪದವಿ -1962, ಕ.ವಿ.ವಿ. 1963, ಮೈಸೂರು ವಿವಿ, 1976, ಮೀರತ್ ವಿ.ವಿ 1983, ಮಂಗಳೂರು ವಿ.ವಿ 1993, ಜಬಲ್‍ಪುರ್ ವಿ.ವಿ 1986, ವರ್ಲ್ಡ್‌ ಅಕಾಡೆಮಿ 1996, ವಿಶ್ವಭಾರತಿ ವಿವಿ 1996, ನಾಡೋಜ ಕನ್ನಡ ವಿವಿ ಹಂಪಿ 1968, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ 1978, ಜ್ಞಾನಪೀಠ ಪ್ರಶಸ್ತಿ (ಮೂಕಜ್ಜಿಯ ಕನಸುಗಳು) 1990, ದಾದಾಬಾಯಿ ಮೆಮೋರಿಯಲ್ ಪ್ರಶಸ್ತಿ, 1992, ಪಂಪ ಪ್ರಶಸ್ತಿ, 1994 ಇಂದಿರಾಗಾಂಧಿ ಪರ್ಯಾವರಣ ಪುರಸ್ಕಾರ, 1995 – ಸರ್ ಎಂ.ವಿ. ವಿಶ್ವೇಶ್ವರಯ್ಯ ಸ್ಮಾರಕ ಪ್ರಶಸ್ತಿ, 1959 – ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, 1973 – ಕೇಂದ್ರ ಸಂಗೀತ ನಾಟಕ ಅಕಾಡೆಮಿ ಗೌರವ ಫೆಲೋಷಿಪ್, 1990 – ತುಲಸೀ ಸನ್ಮಾನ್ ಮಧ್ಯಪ್ರದೇಶ ಸರ್ಕಾರದಿಂದ, 1992 ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆಯ ಫೆಲೋಷಿಪ್, ಹೀಗೆ ಇನ್ನೂ ಅನೇಕ ಪ್ರಶಸ್ತಿ, ಪುರಸ್ಕಾರ, ಗೌರವ ಡಾಕ್ಟರೇಟ್‍ಗಳು ದೊರೆತಿವೆ.

ಕಾರಂತರ ಬಾಲ ಸಾಹಿತ್ಯ, ವಿಜ್ಞಾನ ಸಾಹಿತ್ಯ

ಮಕ್ಕಳ ಶಿಕ್ಷಣ ಮತ್ತು ಮನೋವಿಕಾಸಕ್ಕೆ ಅಪಾರವಾಗಿ ಶ್ರಮಿಸಿದರು.  ಅವರು ಸ್ಥಾಪಿಸಿದ ‘ಬಾಲವನ’ ದಲ್ಲಿ ಅನೇಕ ಶಿಬಿರ, ಪ್ರಯೋಗಗಳು ನಡೆದು ಜನ ಮೆಚ್ಚುಗೆ ಪಡೆದವು. ಬಾಲ ಪ್ರಪಂಚ, ವಿಜ್ಞಾನ ಪ್ರಪಂಚ ಮತ್ತು ಪ್ರಾಣಿ ಪ್ರಪಂಚವೆಂಬ ವಿಶ್ವಕೋಶಗಳು, ನಮ್ಮ ಭೂಖಂಡಗಳು, 1965 ರಲ್ಲಿ ವಿಚಿತ್ರ ಖಗೋಲ, ವಿಜ್ಞಾನ ಮತ್ತು ಅಂಧಶ್ರದ್ಧೆ, ವಿಶಾಲ ಸಾಗರಗಳು ಎಂಬ ವಿಜ್ಞಾನ ಪುಸ್ತಕಗಳು.  ‘ಸಿರಿಗನ್ನಡ ಪಾಠಮಾಲೆ’ , ಹೂಗನ್ನಡ ಪಾಠಮಾಲೆ ಎಂಬ ಪಠ್ಯ ಪುಸ್ತಕಗಳು ಹೀಗೆ ಮಕ್ಕಳ ಸಾಹಿತ್ಯಕ್ಕೆ ಕಾರಂತರು ನೀಡಿದ ಕೊಡುಗೆ ಅಪಾರ.

ಕಾರಂತರ ಕನ್ನಡ ಕಾದಂಬರಿ ಸಾಹಿತ್ಯ

ಕನ್ನಡ ಕಾದಂಬರಿಗಳಲ್ಲಿ ಶಿವರಾಮ ಕಾರಂತರಿಗೆ ಅಗ್ರಸ್ಥಾನವಿದೆ.  ಆರು ದಶಕಗಳಲ್ಲಿ (1923-1986) ಸುಮಾರು 45  ಕಾದಂಬರಿ ಬರೆದಿದ್ದಾರೆ.  ಕಾದಂಬರಿ ಸಾಹಿತ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಪಡೆದ ಶ್ರೇಷ್ಠ ಸಾಹಿತ್ಯ ದಿಗ್ಗಜರು ಇವರು.  1923ರಲ್ಲಿ ಬರೆದ ‘ವಿಚಿತ್ರ ಕೂಟ’ ಕಾರಂತರ ಪ್ರಥಮ ಕಾದಂಬರಿ. 1986 ರಲ್ಲಿ ಬರೆದ ‘ಅಂಟದ ಅಪರಂಜಿ’ ಕೊನೆಯ ಕಾದಂಬರಿ. ಮೂಕಜ್ಜಿಯ ಕನಸುಗಳು’ ಜ್ಞಾನಪೀಠ ಪ್ರಶಸ್ತಿ ಪಡೆದ ಕಾದಂಬರಿ. ‘ಚೋಮನದುಡಿ’, ‘ಮರಳಿ ಮಣ್ಣಿಗೆ’ ಅಳಿದ ಮೇಲೆ, ಮೈಮನಗಳ ಸುಳಿಯಲ್ಲಿ, ಕರುಳಿನ ಕರೆ, ಸರಸಮ್ಮನ ಸಮಾಧಿ, ಒಡಹುಟ್ಟಿದವರು, ಜನಮೆಚ್ಚಿದ ಕಾದಂಬರಿಗಳು. ಇವು ಬಹುತೇಕ ಸಾಮಾಜಿಕ ಕಾದಂಬರಿಗಳಾಗಿವೆ.  ಬದುಕಿನ ಸಮಸ್ಯೆಗಳು, ಅಂತಃ ಸತ್ವ ತಾಳ್ಮೆ, ಅರಿವು, ಮನುಷ್ಯನ ಬದುಕಿಗೆ ಯಾವುದು ಆಧಾರ ಎಂಬ ಅಂಶಗಳು ಕಾದಂಬರಿಯ ತಿರುಳಾಗಿವೆ.  ಒಟ್ಟಾರೆ ಕನ್ನಡ ಸಾಹಿತ್ಯಕ್ಕೆ ಅವರ ಕಾದಂಬರಿಗಳು ವಿಶಿಷ್ಟವೆನಿಸಿವೆ. 

ಡಾ. ಕಾರಂತರು ಬರೆದ ನಾಟಕಗಳು

ವೃತ್ತಿ ರಂಗಭೂಮಿಗಾಗಿ ‘ಕರ್ಣಾರ್ಜುನ’, ‘ಜ್ವಾಲಾಬಂಧನ’, ‘ಗದಾಯುದ್ಧ’, ‘ಕಠಾರಿ ಭೈರವ’, ‘ಗೋಮಾತೆ’, ವಿಜಯನಗರ ಸೂರ್ಯ, ‘ನಿಶಾಮಹಿಮೆ’, ದೆಹಲಿಯ ದೌರ್ಭಾಗ್ಯ ಮುಂತಾದ ನಾಟಕ ಬರೆದು ನಿರ್ದೇಶಿಸಿದ ಕೀರ್ತಿ ಇವರದು. ತಮ್ಮ ರಂಗಾಸಕ್ತ ಮಿತ್ರರೊಂದಿಗೆ ಆಗಾಗ ಕೆಲವು ಪ್ರಯೋಗಗಳನ್ನು ನಟರ ಸಾಮರ್ಥ್ಯಗಳನ್ನು ಬಳಸಿಕೊಂಡು ಗೀತನಾಟಕ, ನೃತ್ಯ ನಾಟಕ, ಮೂಕ ನಾಟಕ ಕೈಗೊಂಡು ನಾಟಕ ಮಾಧ್ಯಮವನ್ನು ಪರಿಣಾಮಕಾರಿಯಾಗಿ ಸಾಧಿಸಿ ತೋರಿಸಿದರು. ‘ಮುಕ್ತದ್ವಾರ’ ಕಾರಂತರ ಪ್ರಥಮ ಗೀತ ನಾಟಕ, ಸನ್ಯಾಸಿಯ ಬದುಕು, ಕಣ್ಣಿದ್ದೂ ಕಾಣರು, ಕನ್ಯಾಬಲಿ, ಕೇವಲ ಮನುಷ್ಯರು ಮುಂತಾದ ನಾಟಕಗಳಲ್ಲಿ ಸಮಾಜದ ಹುಳುಕನ್ನು ಎತ್ತಿ ತೋರಿಸಿದ್ದಾರೆ.  ‘ಗರ್ಭಗುಡಿ’ ಬಿತ್ತಿದ ಬೆಳೆ ಅವರ ಪ್ರಮುಖ ನಾಟಕಗಳು. ಹೀಗೆ ಒಟ್ಟು 31 ನಾಟಕಗಳನ್ನು ರಚಿಸಿದ ಕೀರ್ತಿ ಕಾರಂತರದು.

ಶಿವರಾಮ ಕಾರಂತರು ಮತ್ತು ಯಕ್ಷಗಾನ

ಕಾರಂತರು ಯಕ್ಷಲೋಕ ವಿಹಾರಿ, ಯಕ್ಷಗಾನ ಅವರ ಆಸಕ್ತಿಯ ಬಹುದೊಡ್ಡ ಕ್ಷೇತ್ರ. ಯಕ್ಷಗಾನ ಕಲೆಯ ವಿಶಿಷ್ಟ ನೃತ್ಯ, ಹಾಡುಗಾರಿಕೆ, ಅಭಿನಯ ಹಾಗೂ ಬಣ್ಣಗಾರಿಕೆ ಶ್ರದ್ಧೆಯಿಂದ ಕಲಿತರು.  ಯಕ್ಷಗಾನವನ್ನು ಗೀತ ರೂಪಕವಾಗಿ ಸಾದರ ಪಡಿಸುವ ಸಾಹಸ ಮಾಡಿದ ಪ್ರಥಮರು.  1934 ರಿಂದ 20 ವರ್ಷಗಳ ಕಾಲ ಈ ಕಲೆಯ ಅನ್ವೇಷಣೆಗಾಗಿ ಅಲೆದಾಡಿ 1957 ರಲ್ಲಿ ‘ಯಕ್ಷಗಾನ ಬಯಲಾಟ’ ಎಂಬ ಗ್ರಂಥ ರಚಿಸಿದರು.  ಅದರಲ್ಲಿಯ ನಾಲ್ಕು ಕಲಾ ಸಂಪ್ರದಾಯವನ್ನು ಪರಿಚಯಿಸಿದರು. ಕ್ರಿ.ಶ 11ನೇ ಶತಮಾನದ ‘ಯಕ್ಷಗಾನ ಕಲೆಯೇ’ ಮೊದಲ ನಾಟಕ ಎಂದು ತಿಳಿಸಿ ಅವರ 90ನೇ ಜನ್ಮದಿನದ ಸಮಾರಂಭದಲ್ಲಿ ಕಾರಂತರು ಕಾಲಿಗೆ ಗೆಜ್ಜೆಕಟ್ಟಿ ಅರ್ಧಗಂಟೆ ನೃತ್ಯಾಭಿನಯ ಪ್ರದರ್ಶಿಸಿ ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದ್ದರು. ವಿಶ್ವದಲ್ಲೇ ಅದಕ್ಕೊಂದು ಸ್ಥಾನ ಗಳಿಸಿಕೊಟ್ಟ ಕಾರಂತರು ‘ಯಕ್ಷಲೋಕದ’ ಶಕ ಪುರುಷರೇ ಸರಿ.

ಶಿವರಾಮ ಕಾರಂತರ ದೃಷ್ಟಿಯಲ್ಲಿ ಕನ್ನಡ ನುಡಿ

ಕನ್ನಡಕ್ಕಾಗಿ ದುಡಿದವರಲ್ಲಿ, ಕನ್ನಡ ಕೈಂಕರ್ಯವನ್ನು ಕಾಯಾ, ವಾಚಾ, ಮನಸಾ ಕೈಗೊಂಡ ಪ್ರಮುಖರು.  ಕರ್ನಾಟಕ ಏಕೀಕರಣ ಹಾಗೂ ಕನ್ನಡ ನಾಡು ನುಡಿಯ ಏಳಿಗೆಗಾಗಿ ಕನಸು ಕಂಡವರು.  ಕನ್ನಡಮ್ಮನ ಸೇವೆಯನ್ನು ನೈಜ ಅರ್ಥದಲ್ಲಿ ಅವರ ಬರಹಗಳಲ್ಲಿ ಕನ್ನಡದ ಸೊಗಸನ್ನು ತೋರಿಸಿದ್ದಾರೆ.  1923 ರಷ್ಟು ಹಿಂದೆಯೇ ಗ್ರಾಮೀಣ ಪ್ರದೇಶದಲ್ಲಿ ‘ವಸಂತ’ ಕನ್ನಡ ಮಾಸ ಪತ್ರಿಕೆ ಮೂಲಕ ತಮ್ಮ ವಿಚಾರಗಳನ್ನು ತಿಳಿಸಿದರು.  ಮಕ್ಕಳ ಶಿಕ್ಷಣದಲ್ಲೂ ಕನ್ನಡಕ್ಕೆ ಹೆಚ್ಚು ಮಹತ್ವ . ತುಳು, ಕೊಂಕಣಿ ಭಾಷೆಯ ಪ್ರಭಾವದಲ್ಲಿಯೂ ‘ಕನ್ನಡ ಪುಸ್ತಕ’ ಪ್ರಕಟಿಸುವ ಸಾಹಸ ಮಾಡಿದ ಕನ್ನಡ ನಾಡು ನುಡಿಯ ಗೌರವವನ್ನು ಹೆಚ್ಚಿಸಿದ ಕೀರ್ತಿ ಇವರದು. ಕಾರಂತರ ವ್ಯಕ್ತಿತ್ವ, ಬಹುಮುಖ ಪ್ರತಿಭೆ ತಿಳಿಯಬೇಕಾದರೆ ಅವರ ಸಮಗ್ರ ಸಾಹಿತ್ಯ ಅಧ್ಯಯನ ಮಾಡಿಯೇ ತಿಳಿಯಬೇಕು

ಡಾ. ಗಂಗಾಧರಯ್ಯ ಹಿರೇಮಠ, ದಾವಣಗೆರೆ

ವಿಶ್ರಾಂತ ಪ್ರಾಧ್ಯಾಪಕರು,

ಮೊ: 9880093613

ಇದನ್ನೂ ಓದಿ-ಮೊಬೈಲ್‌ ಪರದೆ ಮತ್ತು ಈಗಿನ ಪೀಳಿಗೆ

More articles

Latest article