ಕಾರ್ಕಳದ ತಕ್ಕಮಟ್ಟಿನ ಸುಸಜ್ಜಿತ ಮನೆ ಮಾರಿ, ಸುಳ್ಯ ತಾಲೂಕಿನ ಗುತ್ತಿಗಾರು ಬಳಿಯ ವಳಲಂಬೆ, ಪುರ್ಲುಮಕ್ಕಿಯ ದೊಡ್ಡಮ್ಮನ (ತಾಯಿಯ ಅಕ್ಕ) ಮನೆಯ, ಕೊಟ್ಟಗೆಯಂತಹ ಗುಡಿಸಲಿನಲ್ಲಿ ತಾತ್ಕಾಲಿಕವಾಗಿ ನೆಲೆ ನಿಂತೆವು. ಗುಡಿಸಲು ಚಿಕ್ಕದಿತ್ತು, ಆದರೆ ದೊಡ್ಡಪ್ಪ ದೊಡ್ಡಮ್ಮನ ಮಕ್ಕಳಾದ ಗುಡ್ಡಪ್ಪ, ರಾಮಣ್ಣ, ಚಂದ್ರ, ಈಶ್ವರ, ಚೆನ್ನಕ್ಕ ಸಹಿತ ಎಲ್ಲರ ಮನಸು ದೊಡ್ಡದಿತ್ತು; ನಮ್ಮನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು.
ಅಲ್ಲಿಂದ, ಸ್ವಂತಕ್ಕೊಂದು ಜಮೀನು ಹುಡುಕುವ ಕೆಲಸ ಮೊದಲಾಯಿತು. ಬಾಳುಗೋಡು, ಚೊಕ್ಕಾಡಿ, ಎಲಿಮಲೆ ಮೊದಲಾದೆಡೆ ಜಮೀನು ಹುಡುಕಿದೆವು. ಕಿರಿಯ ಅಣ್ಣ ಉಮೇಶ ಈ ಕೆಲಸದಲ್ಲಿ ಮುಂಚೂಣಿಯಲ್ಲಿದ್ದ. ಆತ ಹೇಳುವಂತೆ, ಬಾಳುಗೋಡಿನಲ್ಲಿ ಹೊಲ, ತೋಟ, ಮನೆ, ಧಾರಾಳ ನೀರು ಇರುವ ಐದೆಕರೆ, ಒಳ್ಳೆಯ ಒಂದು ಜಮೀನು ಕೇವಲ 40 ಸಾವಿರಕ್ಕೆ ಲಭ್ಯ ಇತ್ತು. ಆದರೆ, ಜಮೀನು ತೋರಿಸಲು ನಮ್ಮನ್ನು ಕರೆದೊಯ್ದವರು, ʼಅದು ಬೇಡʼ ಎಂದು ದಾರಿ ತಪ್ಪಿಸಿದರು.
ಎಲಿಮಲೆಯಲ್ಲಿ ಜಾಗ ಹುಡುಕುವಾಗ ನಾನೂ ಹೋಗಿದ್ದೆ. ಎಲಿಮಲೆಯ ಬೀದಿಬದಿಯಲ್ಲಿ ಕಣಿವೆಯಂತಹ ಜಾಗ ಇತ್ತು. ಅಡಕೆ ತೋಟ ಇದ್ದ ಜಮೀನು. ಆದರೆ ಅದು ಯಾಕೋ ಸರಿ ಹೋಗಲಿಲ್ಲ. ಇನ್ನೂ ಒಂದು ಸಮಸ್ಯೆಯೆಂದರೆ, ನಮ್ಮ ಬಳಿ ಇದ್ದುದು ಕೇವಲ 65 ಸಾವಿರ ರುಪಾಯಿ. 30 ಸಾವಿರದಲ್ಲಿ ಜಮೀನು, 35 ಸಾವಿರದಲ್ಲಿ ಮನೆ ನಿರ್ಮಾಣವಾಗಬೇಕು ಎಂಬುದು ಲೆಕ್ಕಾಚಾರ. ಕಾರ್ಕಳದ ನಮ್ಮ ಮನೆ ಖರೀದಿಸಿದವರು ಪೂರ್ತಿ ಹಣವನ್ನೂ ಕೊಟ್ಟಿರಲಿಲ್ಲ ಬೇರೆ.
ಅಂತೂ ಇಂತೂ, ಕೊನೆಗೆ ವಳಲಂಬೆಯ ಹೊಸೋಳಿಕೆ ಬೈಲಿನಲ್ಲಿ ಅಚ್ಯುತ ಗೌಡರ ಒಂದೆಕರೆ ಜಮೀನು ಸಿಕ್ಕಿತು. ಅದನ್ನೇ ಖರೀದಿ ಮಾಡುವುದೆಂದು ನಿರ್ಧಾರವಾಯಿತು. ಗದ್ದೆ, ತೆಂಗಿನ ಮರ ಇತ್ಯಾದಿ ಇದ್ದ ಜಮೀನು. ಒಂದು ಮೂಲೆ, ಮನೆ ನಿರ್ಮಾಣಕ್ಕೆ ಯೋಗ್ಯವಾಗಿತ್ತು. ಸುತ್ತಲೂ ಬೇರೆಯವರ ಹೊಲ ಮತ್ತು ತೋಟಗಳಿದ್ದವು. ನಮ್ಮ ಜಮೀನಿಗೆ ಹೋಗಬೇಕಾದರೆ ಗದ್ದೆಯ ಬದುವಿನಲ್ಲಿಯೇ ನಡೆದು ಹೋಗಬೇಕು. ರಸ್ತೆ ಸಂಪರ್ಕ ಇಲ್ಲ. ಮನೆಗೆ ಬೇಕಾದ ಎಲ್ಲ ಸರಕುಗಳನ್ನೂ ತಲೆಹೊರೆಯಲ್ಲಿ ತಲಪಿಸಬೇಕಿತ್ತು.
ನಮ್ಮ ಜಮೀನಿನ ಉತ್ತರಕ್ಕೆ ಕೆಲವೇ ಮೀಟರ್ ದೂರದಲ್ಲಿ ಬಂಟಮಲೆ ಕಾಡು ಶುರುವಾಗುತ್ತಿತ್ತು. (ಬಂಟಮಲೆ ಕಾಡಿನಿಂದಲೇ ನಾವು ಉರುವಲು ಕಟ್ಟಿಗೆ ಇತ್ಯಾದಿ ತರುತ್ತಿದ್ದೆವು. ನಮ್ಮ ತಂದೆ ಮತ್ತು ಮುಂದೆ ನನ್ನ ಹಿರಿಯ ಅಣ್ಣ ಕೂಡಾ ಅರಣ್ಯ ಇಲಾಖೆಯ ಸಿಬ್ಬಂದಿಗಳಾಗಿದ್ದವರು. ಆದರೂ ಬಂಟಮಲೆಯಿಂದ ಕಟ್ಟಿಗೆ ಒಯ್ಯುವಾಗ ಅರಣ್ಯ ಇಲಾಖೆಯ ಗಾರ್ಡನ ಕಿರಿ ಕಿರಿ, ಅವಮಾನ ಅನುಭವಿಸುತ್ತಲೇ ಇರಬೇಕಾಗುತ್ತಿತ್ತು). ಬಂಟಮಲೆ ಗುಡ್ಡ ಹತ್ತಿ, ಇಜಿನು ಕಾಡಿನಲ್ಲಿ, ಇನ್ನೂ ಉತ್ತರಕ್ಕೆ ಹೋದರೆ, ಆಚೆ ಮಗ್ಗುಲಿನಲ್ಲಿ ಬಿಳಿಮಲೆ. ಅರ್ಧ ಗಂಟೆಯ ನಡಿಗೆಯ ದಾರಿ ಅಲ್ಲಿಗೆ. ಅಲ್ಲಿಂದಾಚೆಗೆ ಕೂತ್ಕುಂಜ ದಾಟಿ ಏಳೆಂಟು ಕಿಲೋಮೀಟರ್ ಕ್ರಮಿಸಿದರೆ ಪಂಜ ಪೇಟೆ.
ಮನೆಯ ಕೆಳಭಾಗದ ತೋಟದ ಪುಟ್ಟ ಕೆರೆಯಲ್ಲಿ ಒಂದಿಷ್ಟು ನೀರು ಇತ್ತು. ಆದರೆ, ಅದು ತೋಟಕ್ಕೆ, ಮನೆಗೆ ಸಾಲದು (ನೀರು ಇದ್ದಾಗ ಸೀಮೆ ಎಣ್ಣೆಯ ಪಂಪ್ ಬಳಸಿ ಮನೆಯ ಪಕ್ಕದ ಟಾಂಕಿಗೆ ನೀರು ತುಂಬಿಸುತ್ತಿದ್ದುದೂ ಇತ್ತು). ಹಾಗಾಗಿ ಮನೆ ನಿರ್ಮಾಣಕ್ಕೆ ನಿಗದಿಪಡಿಸಿದ ಜಾಗದ ಪಕ್ಕದಲ್ಲಿ ಒಂದು ಬಾವಿ ತೋಡಲು ಶುರುಮಾಡಿದೆವು. ಎಷ್ಟು ತೋಡಿದರೂ ನೀರು ಸಿಗಲಿಲ್ಲ. ಅದನ್ನು ಮುಚ್ಚಿ ಅದರಲ್ಲೊಂದು ಗಿಡ ನೆಟ್ಟೆವು. ಕೆಲ ತಿಂಗಳ ಬಳಿಕ ಇನ್ನೊಂದು ಕಡೆ ಪುಟ್ಟ ಕೆರೆ ತೋಡಲು ಶುರುಮಾಡಿದೆವು. ಮುರಕಲ್ಲು ದಾಟಿದ ಮೇಲೆ ನೀರೇನೋ ದೊರೆಯಿತು. ಆದರೆ ಅಚ್ಚರಿಯೆಂಬಂತೆ ಕೆರೆಯ ಆಳದಲ್ಲಿ ತೂಬಿನಂತ ಒಂದು ರಚನೆಯಿದ್ದು, ಅಲ್ಲಿಂದ ಕೆರೆಯ ನೀರು ನಮ್ಮ ಜಮೀನಿನ ಕೆಳಭಾಗದ ಇನ್ನೊಬ್ಬರ ಜಮೀನಿನ ಕಡೆ ಹೋಗಿಬಿಡುತ್ತಿತ್ತು. ನೀರು ನಿಲ್ಲುತ್ತಿರಲಿಲ್ಲ. ಮಳೆಗಾಲದಲ್ಲಿ ಇದರ ತುಂಬ ಫಳಫಳ ನೀರು ಇರುತ್ತಿತ್ತು. ನಾನು ಅದರಲ್ಲಿ ಈಜು ಹೊಡೆಯುತ್ತಿದ್ದೆ. ಕೆಲ ವರ್ಷಗಳ ಬಳಿಕ ಗದ್ದೆಯಲ್ಲಿ ಒಂದು ಬಾವಿ ತೋಡಿದೆವು. ಅದರಲ್ಲೂ ಸರಿಯಾಗಿ ನೀರು ಸಿಗಲಿಲ್ಲ. ನಮ್ಮ ಜೀವನವಿಡೀ ಬಾವಿ ತೋಡುವುದರಲ್ಲಿಯೇ ಹೋಯಿತು. ಕಾರ್ಕಳದಲ್ಲಿ ಮೂರು ಬಾವಿ, ಇಲ್ಲಿ ನಾಲ್ಕು ಬಾವಿ. ನೀರು ನೋಡಿಯೇ ಜಮೀನು ಖರೀದಿ ಮಾಡಬೇಕು ಎಂದು ಬಲ್ಲವರು ಹೇಳುತ್ತಿದ್ದುದು ಇದಕ್ಕೇ.
ಜಮೀನು ಖರೀದಿಸಿದ ಒಂದೆರಡು ತಿಂಗಳ ಬಳಿಕ ಮನೆ ನಿರ್ಮಾಣದ ಕಾರ್ಯ ಶುರುವಾಯಿತು. ಕಾರ್ಮಿಕರಾದ ರುಕ್ಮಯ್ಯ, ಪರಮೇಶ್ವರ, ಸೀತಾರಾಮ ಸಹೋದರರು ಜಮೀನು ಅಗೆದು ಸಮತಟ್ಟು ಮಾಡಿ, ಮಣ್ಣನ್ನು ಹದಗೊಳಿಸಿ ಗೋಡೆ ಎಬ್ಬಿಸತೊಡಗಿದರು. ಆ ಬಳಿಕ ಮಾಡಿಗೆ ಪಕ್ಕಾಸು, ರೀಪು ಇರಿಸುವ ಕಾರ್ಯ ಶುರುವಾಯಿತು. ಮಂಗಳೂರು ಹೆಂಚೂ ಬಂತು. ಮಣ್ಣಿನ ಗೋಡೆಗೆ ಸಿಮೆಂಟ್ ಸಾರಣೆಯೂ ಆಯಿತು. ಮನೆ ಬಾಗಿಲು ದಾಟಿದರೆ ಒಂದು ಪುಟ್ಟ ಹಾಲ್, ಆ ಕಡೆ ಈ ಕಡೆ ಎರಡು ರೂಮುಗಳು. ಹಾಲ್ ದಾಟಿ ಆಚೆ ಹೋದರೆ ಊಟದ ಕೋಣೆ, ಅಡುಗೆ ಮನೆ. ಇಷ್ಟೇ ಇದ್ದುದು ಆರಂಭದಲ್ಲಿ (ಮುಂದೆ ಒಂದು ಮಗ್ಗುಲಲ್ಲಿ ಮಾಡು ಇಳಿಸಿ, ಹೆಚ್ಚುವರಿ ಅಡುಗೆ ಕೋಣೆ ನಿರ್ಮಾಣವಾಯಿತು). 1985ರ ಎಪ್ರಿಲ್ ಗಾಗುವಾಗ ವಳಲಂಬೆ ಹೊಸೋಳಿಕೆಯ ನಮ್ಮ ಹೊಸಮನೆ ನಿರ್ಮಾಣ 90% ಪೂರ್ಣಗೊಂಡಿತು. ಮನೆಯ ಹೊರಗಡೆ ದನಕ್ಕೆ ಒಂದು ಕೊಟ್ಟಗೆ, ಒಂದು ಬದಿಯಲ್ಲಿ ಕಚ್ಚಾ ಬಚ್ಚಲು ಮನೆ ನಿರ್ಮಾಣವಾಯಿತು. 1985ರ ಮಧ್ಯಭಾಗದಲ್ಲಿ ಒಕ್ಕಲಾದೆವು.
ಅಪ್ಪನ ಸಂಬಳ ಅಲ್ಲಿಂದಲ್ಲಿಗೆ. ನನ್ನ ಉದ್ಯೋಗ ಖಾಯಂ ಆಗಿರಲಿಲ್ಲ. ಹಿರಿಯ ಅಣ್ಣನ ಉದ್ಯೋಗ ತೂಗುಯ್ಯಾಲೆಯಲ್ಲಿತ್ತು. ಕಿರಿಯ ಅಣ್ಣ ಉಮೇಶನಿಗೆ ಮಾತ್ರ ತಕ್ಕ ಮಟ್ಟಿನ ಸಂಬಳ. ನಾವು ಮನೆ ಮಂದಿ ಜಮೀನಿನಲ್ಲಿ ಅಕ್ಷರಶಃ ಬೆವರು ಹರಿಸಿ ದುಡಿದೆವು. ಬದುಕಿನಲ್ಲಿ ಯಾವತ್ತೂ ಹಸಿರು ಭೂಮಿ ಹೊಂದಿರದ ನಾವು ಮೊದಲ ಬಾರಿಗೆ ಅದನ್ನು ಹೊಂದಿದ್ದೆವು. ಗದ್ದೆ ಇತ್ತು, ಫಲ ಕೊಡುವ ತೆಂಗುಗಳಿದ್ದವು. ಅಪ್ಪನಿಗೆ ಗುಂಡಿ ತೋಡಿ ತೆಂಗು, ಕಂಗು, ಮಾವು ನೆಡುವುದೇ ಕೆಲಸ. ನಮಗೆ ಹೂವಿನ ಗಿಡ ಅದೂ ಇದೂ ನೆಡುವ ಕೆಲಸ. ಮನೆಯ ಸುತ್ತ ಬಾಳೆ, ಬಿಂಬುಳಿ, ಬೇವು, ನುಗ್ಗೆ, ಹಲಸು, ಪೇರಳೆ, ಕರಿಮೆಣಸು ಹೀಗೆ ಗಿಡಗಳು ಮೇಲೇಳ ತೊಡಗಿದವು. ನೀರಿನ ಸಮಸ್ಯೆಯೊಂದನ್ನು ಹೊರತುಪಡಿಸಿದರೆ, ಬಡವರಾದ ನಮಗೆ ಬೇಕಾದ ಎಲ್ಲವೂ ಅಲ್ಲಿದ್ದವು. ನಾನೂ ವಾರ ವಾರ ಅಲ್ಲಿಗೆ ಓಡುತ್ತಿದ್ದೆ. ಅಮ್ಮನನ್ನು ಭೇಟಿಯಾಗುತ್ತಿದ್ದೆ. ಅಲ್ಲಿ ಸಮಯ ಕಳೆಯುವುದೇ ಒಂದು ಖುಷಿ ಅನಿಸುತ್ತಿತ್ತು. ಮಳೆಗಾಲದ ಅಲ್ಲಿನ ಅನುಭವವನ್ನಂತೂ ವರ್ಣಿಸಲು ಪದಗಳು ಸಾಲವು.
ಇಂದಿರಾ ಗಾಂಧಿ ಹತ್ಯೆ; ಮಂಗಳೂರಿನಿಂದ ಪಣಂಬೂರಿಗೆ ನಡೆದೇ ಹೋದೆ

ತೂತುಕುಡಿಯಿಂದ (ಟ್ಯುಟಿಕೋರಿನ್) ಮಂಗಳೂರಿಗೆ ವಾಪಸಾದ ಬಳಿಕ ನಮ್ಮನ್ನು, ಹೊಸದಾಗಿ ನಿರ್ಮಾಣಗೊಂಡ ಡಿಎಪಿ ಸ್ಥಾವರಕ್ಕೆ ಹಾಕಿದರು. ಕಾರ್ಖಾನೆಯ ಕಮಿಷನಿಂಗ್ ಕೆಲಸ ಶುರುವಾಗಿತ್ತು. ಜಪಾನಿನ ಸುಮಾರು ಐದಾರು ಮಂದಿ ಎಂಜೀನಿಯರ್ ಗಳು ಆ ಕೆಲಸ ಮಾಡುತ್ತಿದ್ದರು. ನಾವು ಅವರಿಗೆ ಸಹಾಯಕರಾಗಿದ್ದೆವು.
ಈ ಜಪಾನಿ ಎಂಜೀನಿಯರ್ ಗಳ ಕತೆ ಸ್ವಾರಸ್ಯಕರವಾಗಿರುತ್ತಿತ್ತು. ಅವರು ಆಗ ಉಳಿದುಕೊಳ್ಳುತ್ತಿದ್ದುದು ಮಂಗಳೂರಿನ ಪ್ರತಿಷ್ಠಿತ ಮೋತಿಮಹಲ್ ಹೋಟೆಲ್ ನಲ್ಲಿ. ಅವರಿಗೆ ನಮ್ಮ ಆಹಾರ ಸೇರುತ್ತಿರಲಿಲ್ಲ. ಹಾಗಾಗಿ ಅವರು ಹೋದಲ್ಲೆಲ್ಲ ಅವರ ಆಹಾರ ಅವರೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಕಾರ್ಖಾನೆಯಲ್ಲಿಯೂ ಅವರಿಗೆ ಒಂದು ಪ್ರತ್ಯೇಕ ರೂಮು ಇರುತ್ತಿತ್ತು. ಅಲ್ಲಿ ಅವರ ಸಾಮಗ್ರಿಗಳು, ಚಹಾ ತಯಾರಿಸುವ ವ್ಯವಸ್ಥೆ ಎಲ್ಲ ಇತ್ತು. ಅವರ ರೂಮಿಗೆ ಆಗಲೇ ಒಂದು ನಂಬರ್ ಲಾಕ್ ಇತ್ತು. ಆದರೆ ಭಾರತೀಯರು ಹ್ಯಾಕಿಂಗ್ ನಲ್ಲಿ [ಪ್ರವೀಣರಲ್ಲವೇ? ಅವರಿಲ್ಲದಾಗ ನಮ್ಮ ಹುಡುಗರು ಪರ್ಮುಟೇಶನ್ ಕಾಂಬಿನೇಶನ್ ತಂತ್ರದ ಮೂಲಕ ಅದರ ನಂಬರ್ ಪತ್ತೆ ಹಚ್ಚಿಯೇ ಬಿಟ್ಟರು. ಅಲ್ಲಿಂದ ಕೆಲ ಸಾಮಗ್ರಿಗಳನ್ನು ಎಗರಿಸಿದರು ಕೂಡಾ. ಭಾರತದಲ್ಲಿದ್ದಾಗ ಈ ಜಪಾನೀಯರು ಸೆಲೂನಿಗೆ ಹೋಗಿ ಲೆಕ್ಕಕ್ಕಿಂತ ಹೆಚ್ಚೇ ತಲೆಕೂದಲು ಕತ್ತರಿಸಿಕೊಳ್ಳುತ್ತಿದ್ದರು. ಇದು ಯಾಕೆ ಎಂದು ಒಮ್ಮೆ ಅವರಲ್ಲಿ ಒಬ್ಬನನ್ನು ಪ್ರಶ್ನಿಸಿದೆ. ಇಲ್ಲಿ ಹತ್ತು ರುಪಾಯಿಯಲ್ಲಿ ಆಗುವ ಕೆಲಸಕ್ಕೆ ಜಪಾನಿನಲ್ಲಿ ನೂರು ರುಪಾಯಿ ತೆರಬೇಕು, ಇಲ್ಲಿ ಸೆಲೂನು ಇತ್ಯಾದಿ ಎಲ್ಲವೂ ಅಗ್ಗ ಎಂದು ಆತ ನಕ್ಕ.
ಇಂದಿರಾ ಗಾಂಧಿಯವರಿಗೂ ಪಣಂಬೂರಿನ ಎಂ ಸಿ ಎಫ್ (ಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್) ಗೂ ಒಂದು ವಿಶೇಷ ನಂಟು ಇತ್ತು. ಅದಾಗ ದೇಶ ಸ್ವತಂತ್ರಗೊಂಡು ಕೇವಲ ಹದಿನಾಲ್ಕು ವರ್ಷಗಳಾಗಿದ್ದವು. ಜನಸಂಖ್ಯೆ ಏರುತ್ತಿತ್ತು. ಆಹಾರಕ್ಕಾಗಿ ಅಮೆರಿಕಾ ಇತ್ಯಾದಿ ಬೇರೆ ದೇಶಗಳನ್ನು ಅವಲಂಬಿಸಬೇಕಿತ್ತು. ದೇಶದಲ್ಲಿ ಆಹಾರ ಸ್ವಾವಲಂಬನೆ ಸಾಧಿಸಲು ಮತ್ತು ಹಸಿರು ಕ್ರಾಂತಿಯನ್ನು ಸಾಕಾರಗೊಳಿಸಲು ದೇಶದ ಸರಕಾರ ನಾನಾ ಮಾರ್ಗಗಳನ್ನು ಹುಡುಕುತ್ತಿತ್ತು. ಇದರ ಭಾಗವಾಗಿ, ಅಂದಿನ ಮೈಸೂರು ರಾಜ್ಯದ ಮಂಗಳೂರಿನಲ್ಲಿ ಬೃಹತ್ ರಸಗೊಬ್ಬರ ಕಾರ್ಖಾನೆಯ ನಿರ್ಮಾಣವಾಗಬೇಕು ಎಂದು ನೆಹರೂ ಸರಕಾರದ ತಾಂತ್ರಿಕ ಸಮಿತಿ 1960 ರಲ್ಲಿ ಶಿಫಾರಸು ಮಾಡಿತ್ತು.
ಫಲವಾಗಿ, 1966 ರಲ್ಲಿ ʼಮಲಬಾರ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ʼ ಹೆಸರಿನ ʼಪ್ರೈವೆಟ್ ಲಿಮಿಟೆಡ್ ಕಂಪೆನಿʼ ಅಸ್ತಿತ್ವಕ್ಕೆ ಬಂತು. ಅದರ ಕೇಂದ್ರ ಕಚೇರಿ ಇದ್ದುದು ದೆಹಲಿಯಲ್ಲಿ. ಮೈಸೂರು ರಾಜ್ಯ ಸರಕಾರ ʼಮಲಬಾರ್ ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ʼ ಕಂಪೆನಿಯನ್ನು ವಶಕ್ಕೆ ತೆಗೆದುಕೊಂಡಾಗ, 1969 ರಲ್ಲಿ, ಜಂಟಿ ವಲಯದ ʼಮಂಗಳೂರು ಕೆಮಿಕಲ್ಸ್ ಅಂಡ್ ಫರ್ಟಿಲೈಸರ್ಸ್ʼ ಸಂಸ್ಥೆ ಅಸ್ತಿತ್ವಕ್ಕೆ ಬಂತು. ಕೇಂದ್ರ ಕಚೇರಿ ಬೆಂಗಳೂರಿಗೆ ಬಂತು.

ಮುಂದೆ ಅಮೋನಿಯಾ ಮತ್ತು ಯೂರಿಯಾ ಸ್ಥಾವರಗಳಿಗಾಗಿ ʼಹಂಫ್ರೀಸ್ ಅಂಡ್ ಗ್ಲಾಸ್ಗೋ ಲಂಡನ್ʼ ಮತ್ತು ನೆದರ್ಲ್ಯಾಂಡ್ ನ ʼಸ್ಟೆಮಿಕಾರ್ಬನ್ ಎನ್ ವಿʼ ಸಂಸ್ಥೆಗಳೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಯಿತು. 1972 ರ ಅಕ್ಟೋಬರ್ 15 ರಂದು ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಅವರು ಕೈಗಾರಿಕಾ ಮಂತ್ರಿ ಎಸ್ ಎಂ ಕೃಷ್ಣ, ಸಹಕಾರ ಸಚಿವ ಶಂಕರ ಆಳ್ವ ಮತ್ತು ಕೇಂದ್ರ ಮಂತ್ರಿ ಟಿ ಎ ಪೈ ಯವರ ಉಪಸ್ಥಿತಿಯಲ್ಲಿ ಕಾರ್ಖಾನೆಯ ಅಡಿಗಲ್ಲಿಗಾಗಿ ಭೂಮಿ ಕೊರೆಯುವ (ಪೈಲ್ ಡ್ರೈವಿಂಗ್) ಕೆಲಸ ಉದ್ಘಾಟಿಸಿದರು. ಆದರೆ, ಕಾರ್ಖಾನೆ ನಿರ್ಮಾಣ ಪೂರ್ಣಗೊಂಡು ಅದನ್ನು ಉದ್ಘಾಟಿಸಿದ್ದು ಅಂದಿನ ಪ್ರಧಾನಿ ಇಂದಿರಾ ಗಾಂಧಿಯವರು; 1975 ರ ಜನವರಿ 11 ರಂದು. ನವಮಂಗಳೂರು ಬಂದರು ಮತ್ತು ಎಂಸಿಎಫ್ ಎರಡನ್ನೂ ಅವರು ಒಂದೇ ದಿನ ಉದ್ಘಾಟಿಸಿದರು.
1984 ಪಂಜಾಬ್ ನ ಉಗ್ರಗಾಮಿಗಳ ಉಪಟಳ ತೀವ್ರವಾಗಿದ್ದ ದಿನಗಳವು. ಭಿಂದ್ರನ್ ವಾಲೆ ಈ ಖಾಲಿಸ್ತಾನಿ ಉಗ್ರರ ನಾಯಕನಾಗಿದ್ದು ಅಮೃತಸರದ ಸ್ವರ್ಣ ಮಂದಿರದೊಳಗೆ ಕುಳಿತೇ ಆತ ಉಗ್ರಗಾಮಿಗಳ ಕಾರ್ಯಾಚರಣೆ ನಿರ್ವಹಿಸುತ್ತಿದ್ದ. ಪಂಜಾಬ್ ನಲ್ಲಿ ಮಾರಣಹೋಮ ಯಾವ ಮಟ್ಟಕ್ಕೆ ಹೋಯಿತು ಎಂದರೆ, ಸ್ವರ್ಣ ಮಂದಿರಕ್ಕೆ ಸೈನ್ಯ ನುಗ್ಗಿಸಿ ಉಗ್ರರನ್ನು ಸದೆಬಡಿಯುವುದು ಸರಕಾರಕ್ಕೆ ಅನಿವಾರ್ಯವಾಯಿತು. ಇಂದಿರಾಗಾಂಧಿ ದಿಟ್ಟ ನಿರ್ಧಾರ ಕೈಗೊಂಡು, ಸೈನ್ಯ ನುಗ್ಗಿಸಿ, ಭಿಂದ್ರನ್ ವಾಲೆ ಸಹಿತ ಉಗ್ರರನ್ನು ನಿಗ್ರಹಿಸಿದರು. ಎರಡೂ ಕಡೆ ಅಪಾರ ಸಾವು ನೋವುಗಳು ಉಂಟಾದವು. ಈ ಬ್ಲೂಸ್ಟಾರ್ ಕಾರ್ಯಾಚರಣೆಯಲ್ಲಿ ಸ್ವರ್ಣಮಂದಿರಕ್ಕೂ ಹಾನಿಯಾಯಿತು. ಸ್ವರ್ಣ ಮಂದಿರಕ್ಕೆ ಹಾನಿಯಾದುದು ಸಿಖ್ ಸಮುದಾಯವನ್ನು ರೊಚ್ಚಿಗೆಬ್ಬಿಸಿತು.
1984 ರ ಅಕ್ಟೋಬರ್ 31. ನನಗಂದು ರಜಾದಿನ. ಮಾರನೇ ದಿನ ದ್ವಿತೀಯ ಪಾಳಿಯ ಕೆಲಸ. ಪ್ರಧಾನಿ ಇಂದಿರಾಗಾಂಧಿಯವರ ಮೇಲೆ ದಾಳಿ ನಡೆದಿದೆಯಂತೆ ಎಂಬ ಗುಸುಗುಸು ಹರಡಲಾರಂಭಿಸಿದವು. ಇಂದಿನಂತೆ ಖಾಸಗಿ ಸುದ್ದಿಮಾಧ್ಯಮಗಳು, ಸಾಮಾಜಿಕ ಮಾಧ್ಯಮಗಳು ಇಲ್ಲದ ಕಾರಣ, ಸರಕಾರ ಹೊರಗೆ ಬಿಟ್ಟದ್ದಷ್ಟೇ ಸುದ್ದಿ. ಆದರೆ, ಇಂದಿರಾಗಾಂಧಿಯವರ ಹತ್ಯೆಯಾಗಿದೆ ಎಂದು ಮೊದಲು ಸುದ್ದಿ ಪ್ರಸಾರ ಮಾಡಿದ್ದು ಬಿಬಿಸಿ. ಆನಂತರ ಸುದ್ದಿ ಬಚ್ಚಿಡುವುದು ಸರಕಾರಕ್ಕೆ ಕಷ್ಟವಾಯಿತು. ಸ್ವರ್ಣಮಂದಿರ ದಾಳಿಯಿಂದ ನೊಂದಿದ್ದ, ಸಿಖ್ ಅಂಗರಕ್ಷಕರಾದ ಸತ್ವಂತ್ ಸಿಂಗ್ ಮತ್ತು ಬಿಯಾಂತ್ ಸಿಂಗ್ ಇಂದಿರಾ ಮೇಲೆ ಗುಂಡಿನ ದಾಳಿ ನಡೆಸಿ ಕೊಂದು ಹಾಕಿದ್ದರು. ಅವರು ವಾಸ್ತವದಲ್ಲಿ ಕೊಂದುದು ಇಂದಿರಾ ಅವರನ್ನಲ್ಲ; ನಂಬಿಕೆಯನ್ನು. ಬ್ಲೂಸ್ಟಾರ್ ಕಾರ್ಯಾಚರಣೆಯ ಬಳಿಕವೂ ಇಂದಿರಾ ಅವರಿಗೆ ಸಿಖ್ಖರ ಮೇಲೆ ನಂಬಿಕೆ ಹೋಗಿರಲಿಲ್ಲ. ಆದ್ದರಿಂದಲೇ ಅವರು ಸಿಖ್ ಅಂಗರಕ್ಷಕರನ್ನೇ ತಮ್ಮ ಬಳಿ ಉಳಿಸಿಕೊಂಡಿದ್ದರು. ಆದರೆ ಅವರು ನಂಬಿಕೆ ದ್ರೋಹ ಎಸಗಿದರು.
ಇಂದಿರಾ ಅವರ ಕಾರಣವಾಗಿ ದೇಶಕ್ಕೆ ದೂರದರ್ಶನ ಬಂದಿತ್ತು; ಆದರೆ ಇನ್ನೂ ವ್ಯಾಪಕವಾಗಿರಲಿಲ್ಲ. ದುರದೃಷ್ಟವಶಾತ್, ದೇಶ ಅದೇ ದೂರದರ್ಶನದಲ್ಲಿ ಅವರ ಮೃತದೇಹ ನೋಡಬೇಕಾಗಿ ಬಂತು. ನಾನು ಕಂಕನಾಡಿಯ ಒಂದು ಅಂಗಡಿಯ ಟಿವಿಯಲ್ಲಿ ಇಂದಿರಾ ಅವರ ಮೃತದೇಹದ ದೃಶ್ಯ ನೋಡಿದ್ದೆ. ಎಲ್ಲೆಲ್ಲೂ ಮಡುಗಟ್ಟಿದ ದುಃಖದ ವಾತಾವರಣ; ಗಾಢ ಮೌನ. ಅಂಗಡಿಗಳು ಮುಚ್ಚಲಾರಂಭಿಸಿದ್ದವು. ರಾತ್ರಿ ಕಳೆಯಿತು. ಮಾರನೇ ದಿನ ಎಲ್ಲೆಲ್ಲೂ ಅಘೋಷಿತ ಬಂದ್. ವಾಹನ ಸಂಚಾರವಿರಲಿಲ್ಲ. ಅಂಗಡಿಗಳು ತೆರೆದಿರಲಿಲ್ಲ. ಅದು ಕಾಂಗ್ರೆಸ್ ಪ್ರಬಲವಾಗಿದ್ದ ಕಾಲವಾಗಿದ್ದುದರಿಂದ ಅಂಗಡಿಗಳವರಲ್ಲಿ ಕಾಂಗ್ರೆಸ್ ಗೂಂಡಾಗಳ ಬಗ್ಗೆ ಭಯ ಕೂಡಾ ಇತ್ತು.
ನಾನು ಮಾರ್ನಮಿಕಟ್ಟೆಯಲ್ಲಿ ಕಲಾವಿದ ಗೆಳೆಯ ಸುದೇಶನ ಮನೆಯಲ್ಲಿದ್ದೆ. ಸ್ವಲ್ಪ ಹೊತ್ತಿನ ಬಳಿಕ ನಗರ ಹೇಗಿದೆ ನೋಡೋಣ ಎಂದು ನಾನೂ ಅವನೂ ನಡೆಯುತ್ತ ಹೋದೆವು. ಇಡೀ ನಗರ ಕಾಲ್ನಡಿಗೆಯಲ್ಲಿಯೇ ಸುತ್ತಿದೆವು. ಮಂಗಳೂರಿನಂತಹ ಮಹಾನಗರ ನಂಬಲೇ ಅಗದ ರೀತಿಯಲ್ಲಿ ಸ್ತಬ್ಧವಾಗಿತ್ತು. ವಾಹನ ಸಂಚಾರ, ಜನಸಂಚಾರ ವಿರಳವಾಗಿತ್ತು. ರೈಲು ಓಡಾಟ ಕೂಡಾ ನಿಂತಿತ್ತು ಅಥವಾ ಕಡಿಮೆಯಾಗಿತ್ತು ಎಂದು ಕಾಣುತ್ತದೆ. ರೈಲು ಹಳಿಗಳ ನಡುವೆ ಮಕ್ಕಳು ಕ್ರಿಕೆಟ್ ಆಡುತ್ತಿದ್ದುದು ಕಣ್ಣಿಗೆ ಬಿತ್ತು.
ಮಧ್ಯಾಹ್ನವಾಯಿತು. ನಾನಾಗಲೂ ಟ್ರೇನಿ. ಹಾಗಾಗಿ ರಜೆ ಮಾಡುವಂತಿರಲಿಲ್ಲ. ಮಂಗಳೂರಿನಿಂದ ಪಣಂಬೂರಿಗೆ ಹೋಗುತ್ತಿದ್ದುದು ಸಿಟಿ ಬಸ್ ನಲ್ಲಿ. ಅಂದು ಸಿಟಿ ಬಸ್ ಕೂಡಾ ಇಲ್ಲ. ನನ್ನ ಬಳಿ ದ್ವಿಚಕ್ರ ವಾಹನ ಇರಲಿಲ್ಲ; ಇದ್ದರೂ ಕಾಂಗ್ರೆಸ್ ಕಾರ್ಯಕರ್ತರು ಬಿಡುತ್ತಿರಲಿಲ್ಲ. ವಿಶೇಷವಾಗಿ ಕೂಳೂರಿನಲ್ಲಿ ಆಗ ಕಾಂಗ್ರೆಸ್ ನ ಕೆಲವು ಕಾರ್ಯಕರ್ತರು ರೌಡಿಗಳಂತೆ ವರ್ತಿಸುತ್ತಿದ್ದರು.
ಹತ್ತು ಕಿಲೋಮೀಟರ್ ಗಳ ದಾರಿ. ಏನು ಮಾಡುವುದು? ಬಹಳ ಯೋಚಿಸಿದ ಬಳಿಕ, ನಡೆದೇ ಹೋಗುವುದು ಎಂಬ ನಿರ್ಧಾರಕ್ಕೆ ಬಂದೆ. ಮಧ್ಯಾಹ್ನ 12 ಕ್ಕೆ ಕದ್ರಿಯಿಂದ ಹೊರಟೆ. ಪಿವಿಎಸ್, ಲೇಡಿಹಿಲ್, ಕೊಟ್ಟಾರ, ಕೂಳೂರು ಹೀಗೆ ಬಿರುಬಿಸಿಲಿನಲ್ಲಿ ಸರಿಸುಮಾರು ಒಂದೂವರೆ ಗಂಟೆ ನಿರಂತರ ನಡೆದು, ಮಧ್ಯಾಹ್ನ ಒಂದೂವರೆಗೆ ಪಣಂಬೂರು ತಲಪಿದೆ.
ಕಾರ್ಖಾನೆಯ ತುಂಬ ಇಂದಿರಾ ಹತ್ಯೆಯದೇ ಸುದ್ದಿ. ನಾನಾ ರಾಜಕೀಯ ಚರ್ಚೆಗಳು. ನಾಳೆ ಏನಾಗುತ್ತದೋ ಎಂಬ ಭಯ. ಇದೇ ಕಾರ್ಖಾನೆಯ ಉದ್ಘಾಟನೆಗೆ ಒಂಭತ್ತು ವರ್ಷಗಳ ಹಿಂದೆ ಇಂದಿರಾಗಾಂಧಿ ಬಂದಿದ್ದರು ಎಂಬುದನ್ನು ನಂಬುವುದಕ್ಕೂ ಆಗುತ್ತಿರಲಿಲ್ಲ. ರಾತ್ರಿ ಮತ್ತೆ ವಾಹನ ಸವಲತ್ತು ಇಲ್ಲದ ಕಾರಣ ಕಾರ್ಖಾನೆಯಲ್ಲಿಯೇ ಉಳಿದುಕೊಂಡೆ. ಇಂದಿರಾ ಅಂತಿಮ ಸಂಸ್ಕಾರ ಮುಗಿಯಿತು, ಮಾರನೇ ದಿನ ಪರಿಸ್ಥಿತಿ ನಿಧಾನಕ್ಕೆ ಮಾಮೂಲಿಗೆ ಬಂತು.

ವಿಫಲಗೊಂಡ ಡಿಎಪಿ ಘಟಕ
ಜಪಾನಿನ ಸಂಸ್ಥೆ ಶುರುಮಾಡಹೊರಟ ಜಗತ್ತಿನಲ್ಲೇ ಮೊಟ್ಟ ಮೊದಲ, ಅತ್ಯಾಧುನಿಕ ತಂತ್ರಜ್ಞಾನದ ಡಿಎಪಿ (ಡೈ ಅಮೋನಿಯಂ ಫಾಸ್ಪೇಟ್) ಸ್ಥಾವರ ಆರಂಭದಿಂದಲೇ ಸಮಸ್ಯೆ ಎದುರಿಸಲಾರಂಭಿಸಿತು. ಪೈಲಟ್ ಪ್ರೊಜೆಕ್ಟ್ ಆಗಿ ಜಪಾನಿನಲ್ಲಿ ಅದನ್ನು ಅವರು ಪ್ರಯೋಗಿಸಿ ನೋಡಿದ್ದರಂತೆ. ಆದರೆ ಇಲ್ಲಿ ಅದೇಕೋ ಯಶಸ್ವಿಯಾಗಲಿಲ್ಲ. ತಿಂಗಳುಗಟ್ಟಲೆ ಜಪಾನಿ ಎಂಜೀನಿಯರ್ ಗಳು ಅದನ್ನು ಯಶಸ್ವಿಗೊಳಿಸಲು ಯತ್ನಿಸಿದರು. ಯಂತ್ರಗಳಲ್ಲಿ ಮಾರ್ಪಾಡು ಮಾಡಲಾಯಿತು. ಆದರೂ ಉಹುಂ, ಅದು ಕೆಲಸ ಮಾಡಲು ನಿರಾಕರಿಸಿತು. ದ್ರವ ರೂಪದಲ್ಲಿ ಡಿಎಪಿ ತಯಾರಾಗುತ್ತಿತ್ತು, ಆದರೆ ಅದನ್ನು ಹರಳು ರೂಪಕ್ಕೆ ಮಾರ್ಪಡಿಸುವ ಕೆಲಸ ಯಶಸ್ವಿಯಾಗಲಿಲ್ಲ. ಅಂತಿಮವಾಗಿ ಇಡೀ ಕಾರ್ಯಾಚರಣೆ ಕೈಬಿಡುವ ನಿರ್ಧಾರಕ್ಕೆ ಬರಲಾಯಿತು. ಹಲವು ಕೋಟಿ ರುಪಾಯಿಯ ಹೂಡಿಕೆ ವ್ಯರ್ಥವಾಯಿತು. ಇಲ್ಲಿನ ಸ್ಥಾವರದ ಜವಾಬ್ದಾರಿ ವಹಿಸಿಕೊಂಡ ಮುಖ್ಯ ಎಂಜೀನಿಯರ್ ಜಪಾನಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಎಂಬ ಸುದ್ದಿಯೂ ಬಂತು. ಆ ಸುದ್ದಿ ಎಷ್ಟು ಸತ್ಯವೋ ಗೊತ್ತಿಲ್ಲ.
ಇಂತಹ ಕಾರ್ಖಾನೆ ಸ್ಥಾಪಿಸುವಾಗ ಕಟ್ಟುನಿಟ್ಟಿನ ಒಪ್ಪಂದ ಮಾಡಿಕೊಂಡಿರುತ್ತಾರೆ. ಅದೇ ಕಾರಣದಿಂದಲೋ ಏನೋ, ವಿಫಲಗೊಂಡ ಡಿಎಪಿ ಸ್ಥಾವರಕ್ಕೆ ಬದಲಿಯಾಗಿ, ಈಗಾಗಲೇ ಚಾಲ್ತಿಯಲ್ಲಿರುವ ತಂತ್ರಜ್ಞಾನದ ಡಿಎಪಿ ಕಾರ್ಖಾನೆಯನ್ನು ಸ್ಥಾಪಿಸಿಕೊಡಲು ಜಪಾನಿನ ಸಂಸ್ಥೆ ಒಪ್ಪಿಕೊಂಡಿತು; ಹಾಗೆಯೇ ಮಾಡಿಕೊಟ್ಟಿತು.
ಆದರೆ, ಹೊಸ ಕಾರ್ಖಾನೆ ನಿರ್ಮಾಣವಾಗಲು ಕೆಲವು ವರ್ಷಗಳು ಬೇಕು. ಹಾಗಾಗಿ, ನಮಗೆ ವಿಫಲಗೊಂಡ ಕಾರ್ಖಾನೆಯಲ್ಲಿ ಏನೂ ಕೆಲಸವಿರಲಿಲ್ಲ. ಎಂದೇ, ನಮ್ಮನ್ನು ಬೇರೆ ಬೇರೆ ಘಟಕಗಳಿಗೆ ಹಂಚಿ ಹಾಕಲಾಯಿತು. ನಾನೀಗ ಯೂರಿಯಾ ವಿಭಾಗಕ್ಕೆ ಬಂದೆ (ಕೊನೆಯ ತನಕವೂ ಅಲ್ಲೇ ಕೆಲಸ ಮಾಡುತ್ತಿದ್ದೆ). ಯೂರಿಯಾ ವಿಭಾಗದಲ್ಲಿ ಮುಖ್ಯವಾಗಿ ಮೂರು ಘಟಕಗಳು. ಕಂಟ್ರೋಲ್ ರೂಂ. ಕಂಪ್ರೆಸರ್ ಮತ್ತು ಫೀಲ್ಡ್. ಕಂಟ್ರೋಲ್ ರೂಂ ನಿಂದ ಇಡೀ ಕಾರ್ಖಾನೆಯ ಕೆಲಸಗಳನ್ನು ನಿಯಂತ್ರಿಸಲಾಗುತ್ತದೆ. ಎರಡು ಕಂಪ್ರೆಸರ್ ಗಳಿದ್ದು ಅವುಗಳ ಮೂಲಕ ಕಾರ್ಬನ್ ಡೈ ಆಕ್ಸೈಡ್ ಅನ್ನು ಕಂಪ್ರೆಸ್ ಮಾಡಿ ಕಳುಹಿಸಲಾಗುತ್ತದೆ. ಫೀಲ್ಡ್ ನಲ್ಲಿ ಅನೇಕ ಪಂಪ್ ಗಳು, ಸ್ಟೋರೇಜ್ ಗಳು ಇದ್ದು ಇಲ್ಲಿ ಅಮೋನಿಯಾವನ್ನು ಪಂಪ್ ಮಾಡಲಾತ್ತದೆ. ಅಮೋನಿಯಾ ಮತ್ತು ಕಾರ್ಬನ್ ಡೈ ಆಕ್ಸೈಡ್ ರಾಸಾಯನಿಕ ಕ್ರಿಯೆಯ ನಡುವಿನ ಘಟ್ಟದಲ್ಲಿ ʼಅಮೋನಿಯಂ ಕಾರ್ಬಮೇಟ್ʼ ಉತ್ಪತ್ತಿಯಾಗುತ್ತದೆ. ಇದು ಮುಂದೆ ಯೂರಿಯಾ ಅಗಿ ದ್ರವ ರೂಪದಲ್ಲಿ ಟವರ್ ನ ತುತ್ತ ತುದಿಗೆ ಹೋಗುತ್ತದೆ. ಅಲ್ಲಿಂದ ತೂತುಗಳಿರುವ, ತೀವ್ರ ವೇಗದಲ್ಲಿ ತಿರುಗುವ ಲೋಹದ ಬಕೆಟ್ ಮೂಲಕ ಹನಿ ಹನಿಯಾಗಿ ಉದುರುತ್ತದೆ. ಅದೇ ಹೊತ್ತಿನಲ್ಲಿ ನಾಲ್ಕು ಬೃಹತ್ ಫ್ಯಾನ್ ಗಳು ಗಾಳಿಯನ್ನು ಮೇಲಕ್ಕೆತ್ತುತ್ತವೆ. ಕೆಳಗೆ ತಲಪುವಾಗ ಯೂರಿಯಾ ಹನಿಗಳು ಹರಳುಗಳಾಗಿ ಅಲ್ಲಿಂದ ಕನ್ವೇಯರ್ ಬೆಲ್ಟ್ ಮೂಲಕ ಬ್ಯಾಗಿಂಗ್ ವಿಭಾಗಕ್ಕೆ ಹೋಗುತ್ತದೆ. ಅಲ್ಲಿ ಯೂರಿಯಾವನ್ನು ಬ್ಯಾಗ್ ಗೆ ತುಂಬಿ ಬಾಯಿ ಹೊಲಿದು ಲಾರಿಗಳಿಗೆ ಲೋಡ್ ಮಾಡಲಾಗುತ್ತದೆ. ನಮಗೆ ರೊಟೇಶನ್ ಪ್ರಕಾರ ಈ ಮೂರೂ ವಿಭಾಗಗಳಲ್ಲಿ ಕೆಲಸವಿರುತ್ತಿತ್ತು.
ನೇಮಕಾತಿ ಆದೇಶದ ಪ್ರಕಾರ ನಮಗೆ ಒಂದೂವರೆ ವರ್ಷಗಳ ತರಬೇತಿ. 1983ರ ಆಗಸ್ಟ್ 21 ಕ್ಕೆ ನಾನು ಕೆಲಸಕ್ಕೆ ಹಾಜರಾದುದು. ಆ ಪ್ರಕಾರ 1985 ರ ಮಾರ್ಚ್ ಗೆ ನಮ್ಮ ತರಬೇತಿ ಅವಧಿ ಮುಗಿಯಬೇಕು. ಆದರೆ ಕಂಪೆನಿ ನಮ್ಮನ್ನು 1985 ರ ಜನವರಿಯಲ್ಲಿಯೇ ಖಾಯಂ ನೌಕರರ ಸವಲತ್ತಿನ ಉದ್ಯೋಗಿಯನ್ನಾಗಿ ʼಜೂನಿಯರ್ ಆಪರೇಟರ್ʼ ಹುದ್ದೆಯಲ್ಲಿ ನೇಮಕಗೊಳಿಸಿಕೊಂಡಿತು (ಮುಂದಿನ ಒಂದು ವರ್ಷ ಪ್ರೊಬೇಷನರಿ ಅವಧಿ). ಈಗ ನಾನು ಕಂಪೆನಿ ನಿಯಮದ ಪ್ರಕಾರದ ವಿಡಿಎ, ಮನೆಬಾಡಿಗೆ, ಗ್ರಾಚುಯಿಟಿ, ಪಿ ಎಫ್, ಸಿ ಎಲ್, ಎಸ್ ಎಲ್, ಇ ಎಲ್ ಇತ್ಯಾದಿ ರಜಾ ಸೌಲಭ್ಯಗಳು, ಕ್ವಾರ್ಟರ್ಸ್, ಪ್ರಯಾಣ ಭತ್ಯೆ, ಎಲ್ ಟಿ ಸಿ, ಬೋನಸ್ ಎಲ್ಲವಕ್ಕೂ ಅರ್ಹನಾಗಿದ್ದೆ. ಆರ್ಥಿಕ ಕಷ್ಟದ ದಿನಗಳು ತಾತ್ಕಾಲಿಕವಾಗಿ ದೂರವಾದವು.
ಶ್ರೀನಿವಾಸ ಕಾರ್ಕಳ
ಸಮಾಜ ಚಿಂತಕರು.
ಇದನ್ನೂ ಓದಿ- https://kannadaplanet.com/its-a-big-story-part-of-atma-katha-32/ ಅದೊಂದು ದೊಡ್ಡ ಕತೆ- ಆತ್ಮ ಕಥನ ಸರಣಿ- 32 | ತಮಿಳುನಾಡಿನಲ್ಲಿ ಒಂದು ತಿಂಗಳು


