ಅಕಸ್ಮಾತ್ ಬಿಜೆಪಿ 2029ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ ಅದು ಕೇವಲ ಒಂದು ರಾಜಕೀಯ ಹಿನ್ನಡೆ ಮಾತ್ರವಲ್ಲ; ಈ ಸರ್ಕಾರದ ಸಂಪೂರ್ಣ ಹಗರಣಗಳು ಹೊರಬಂದು ದೊಡ್ಡಮಟ್ಟದಲ್ಲಿ ಏಟುಬೀಳುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಮುಂದಿನ ಕೆಲವು ದಶಕಗಳವರೆಗೆ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಪುಟಿದೇಳುವುದು ಕಷ್ಟವಾಗಬಹುದು. ಅದನ್ನು ಮನಗಂಡೇ, 2029ರೊಳಗೆ ಡಿಲಿಮಿಟೇಷನ್ ಮಾಡಿ ಮುಗಿಸಲು ಬಿಜೆಪಿ ಇಷ್ಟು ಆತುರ ತೋರಿತ್ತು – ಮಾಚಯ್ಯ ಎಂ ಹಿಪ್ಪರಿಗಿ, ರಾಜಕೀಯ ವಿಶ್ಲೇಷಕರು.
ಡಿಲಿಮಿಟೇಷನ್ ಜಾರಿಗೆ ತರಲು ಬಿಜೆಪಿ ಯಾಕಿಷ್ಟು ಆತುರ ತೋರಿತ್ತು? ಈ ಪ್ರಶ್ನೆ 2029ರ ಲೋಕಸಭಾ ಚುನಾವಣೆಯ ಕುರಿತು ಬಿಜೆಪಿಗಿರುವ ಬಹುದೊಡ್ಡ ಭಯವನ್ನು ಅನಾವರಣಗೊಳಿಸುತ್ತದೆ. ಅದಕ್ಕು ಮುನ್ನ, ಡಿಲಿಮಿಟೇಷನ್ ಜಾರಿಗೆ ತರಲು ಬಿಜೆಪಿ ನಡೆಸಿದ ಪ್ರಯತ್ನ ಆತುರದ್ದಾಗಿತ್ತು ಎಂದು ಹೇಗೆ ತೀರ್ಮಾನಕ್ಕೆ ಬರುತ್ತೀರಿ? ಎಂಬ ಪ್ರಶ್ನೆ ಕೆಲವರನ್ನು ಕಾಡಬಹುದು. ಅದನ್ನು ಮೊದಲು ಬಗೆಹರಿಸಿಕೊಂಡು ಬಿಡೋಣ.
ಎರಡು ಆಯಾಮಗಳು ನಮಗೆ ಈ ವಿಚಾರದಲ್ಲಿ ಬಿಜೆಪಿಯ ಆತುರವನ್ನು ಸ್ಪಷ್ಟಗೊಳಿಸುತ್ತವೆ. ಮೊದಲನೆಯದ್ದು, 2026ರ ಜನಗಣತಿಗು ಮೊದಲೇ 2011ರ ಜನಗಣತಿ ಅಂಕಿಅಂಶ ಬಳಸಿಕೊಂಡು ಅದು ಡಿಲಿಮಿಟೇಷನ್ ಮಾಡಲು ಮುಂದಾಗಿದ್ದು. ಜನಸಂಖ್ಯೆಯ ಆಧಾರದ ಮೇಲೆ ಕ್ಷೇತ್ರ ಮರುವಿಂಗಡಣೆ (ಡಿಲಿಮಿಟೇಷನ್) ಮಾಡಲು ಮುಂದಾದರೆ, ಜನಸಂಖ್ಯೆ ನಿಯಂತ್ರಣದಲ್ಲಿ ಮುನ್ನಡೆ ಸಾಧಿಸಿದ ರಾಜ್ಯಗಳಿಗೆ, ಮುಖ್ಯವಾಗಿ ದಕ್ಷಿಣ ಭಾರತದ ರಾಜ್ಯಗಳಿಗೆ ಹಿನ್ನಡೆಯಾಗುತ್ತದೆಂಬ ವಾದ ಮುನ್ನೆಲೆಗೆ ಬಂದಿದ್ದರಿಂದ 1971ರ ಜನಗಣತಿಯನ್ನು ಮಾತ್ರ ಪರಿಗಣಿಸಬೇಕು ಎಂಬ Constitutional freeze ಅನ್ನು ಸಂವಿಧಾನದ 42ನೇ ತಿದ್ದುಪಡಿ ಮೂಲಕ 1976ರಲ್ಲಿ ನಿರ್ಧರಿಸಲಾಯ್ತು. 2000ನೇ ಇಸವಿಯವರೆಗೆ ಈ freezing ಜಾರಿಯಲ್ಲಿತ್ತು. ಅಷ್ಟರೊಳಗೆ ಎಲ್ಲಾ ರಾಜ್ಯಗಳಲ್ಲು ಜನಸಂಖ್ಯೆ ನಿಯಂತ್ರಣವು ಯಶಸ್ವಿಯಾಗಲಿದ್ದು, ಜನಸಂಖ್ಯಾ ಬೆಳವಣಿಗೆ ದರ ಹೆಚ್ಚೂ ಕಡಿಮೆ ಸಮಪ್ರಮಾಣದ ಹಂತಕ್ಕೆ ಬರುವುದರಿಂದ, ಅಲ್ಲಿಂದಾಚೆಗೆ ಹೊಸ ಜನಸಂಖ್ಯೆಗೆ ಅನುಗುಣವಾಗಿ ಕ್ಷೇತ್ರ ಮರುವಿಂಗಡಣೆ ಮಾಡಿಕೊಳ್ಳಬಹುದೆಂಬುದು ಆ ತಿದ್ದುಪಡಿಯ ಉದ್ದೇಶವಾಗಿತ್ತು. ಆದರೆ 2000ನೇ ಇಸವಿ ಸಮೀಪಿಸಿದಂತೆ, ಜನಸಂಖ್ಯಾ ನಿಯಂತ್ರಣದಲ್ಲಿ ಸಮಾನತೆಯ ಬದಲು ಅಜಗಜಾಂತರ ವ್ಯತ್ಯಾಸ ಉಂಟಾಯಿತು. ದಕ್ಷಿಣದ ರಾಜ್ಯಗಳು ಗಣನೀಯವಾಗಿ ಜನಸಂಖ್ಯೆ ನಿಯಂತ್ರಣ ಜಾರಿಗೆ ತಂದವು. ಆದರೆ ಉತ್ತರದ ಹಿಂದಿ ಭಾಷಿಕ ರಾಜ್ಯಗಳು ಜನಸಂಖ್ಯೆ ನಿಯಂತ್ರಣಕ್ಕೆ ಅಷ್ಟು ಗಮನಕೊಡಲಿಲ್ಲ. 2001ರ ಜನಗಣತಿಯ ಅಂಕಿಅಂಶವನ್ನೇ ನೋಡುವುದಾದರೆ, ಹಿಂದಿನ 10 ವರ್ಷಗಳಲ್ಲಿ (1991 ರಿಂದ 2001ರ ನಡುವೆ) ಕರ್ನಾಟಕದ ಜನಸಂಖ್ಯಾ ಹೆಚ್ಚಳ ದರ 17.5% ಇದ್ದರೆ ಉತ್ತರಪ್ರದೇಶದ ದರ 25.8%ಗೆ ತಲುಪಿತ್ತು. ಜನಸಂಖ್ಯಾ ನಿಯಂತ್ರಣ ಎನ್ನುವುದು ಕೇವಲ ಒಂದು ಆಯಾಮದ ಪ್ರಗತಿ ಮಾತ್ರವಲ್ಲ. ಜನಸಂಖ್ಯೆ ನಿಯಂತ್ರಣದಿಂದ ಶಿಕ್ಷಣದ ಗುಣಮಟ್ಟ ಹೆಚ್ಚಾಗುತ್ತದೆ, ಮೂಲಸೌಕರ್ಯಗಳು ಅಭಿವೃದ್ಧಿಹೊಂದುತ್ತವೆ, ಉದ್ಯೋಗ ಸೃಷ್ಟಿ ಮತ್ತು ತಲಾದಾಯ ಹೆಚ್ಚಾಗುತ್ತದೆ, ಈ ಎಲ್ಲಾ ಕಾರಣದಿಂದಾಗಿ ಹೂಡಿಕೆಗಳು ಹರಿದುಬರುತ್ತವೆ, ರಾಜ್ಯದ ಜಿಎಸ್‌ಡಿಪಿ ಉತ್ತಮವಾಗುತ್ತದೆ, ಅದರಿಂದ ತೆರಿಗೆ ಸಂಗ್ರಹ, ಆರ್ಥಿಕ ಪ್ರಗತಿಯೂ ಹೆಚ್ಚಾಗುತ್ತದೆ. ಕರ್ನಾಟಕ, ಕೇರಳ, ತಮಿಳುನಾಡು, ಅವಿಭಜಿತ ಆಂಧ್ರಪ್ರದೇಶಗಳು ಇದನ್ನು ಮಾಡಿ ತೋರಿಸಿದವು. ಆದರೆ ಜನಸಂಖ್ಯಾ ನಿಯಂತ್ರಣದಲ್ಲಿ ನಿರ್ಲಕ್ಷ್ಯವಹಿಸಿದ ಉತ್ತರದ ಹಿಂದಿಭಾಷಿಕ ರಾಜ್ಯಗಳು ತಮ್ಮವರಿಂದಲೇ ‘ಬಿಮಾರು’ ರಾಜ್ಯಗಳೆಂಬ ಅಪಖ್ಯಾತಿಗೆ ತುತ್ತಾದವು.

ಸಮಾನತೆ ಸಾಧ್ಯವಾಗಲಿದೆ ಎಂಬ ಅಂದಾಜಿನಲ್ಲಿ ನಿರ್ಧರಿಸಲಾಗಿದ್ದ Constitutional freeze ಅಂತ್ಯಗೊಳ್ಳುವ 2000ನೇ ಇಸವಿಯ ಗಡಿ ಸಮೀಪಿಸುವ ವೇಳೆಗೆ ಉತ್ತರ ಮತ್ತು ದಕ್ಷಿಣದ ರಾಜ್ಯಗಳ ನಡುವೆ ಜನಸಂಖ್ಯಾ ನಿಯಂತ್ರಣ ಮತ್ತು ಪೂರಕ ಅಭಿವೃದ್ಧಿಯಲ್ಲಿ ವ್ಯತ್ಯಯ ಮತ್ತಷ್ಟು ಹೆಚ್ಚಾಗಿತ್ತು. 2001ರ ಜನಗಣತಿಯ ನಂತರ, ಹೊಸ ಜನಸಂಖ್ಯೆಯ ಮಾನದಂಡಗಳ ಅನ್ವಯ ಡಿಲಿಮಿಟೇಷನ್‌ಗೆ ಸರ್ಕಾರ ಮುಂದಾಗಬಹುದೆಂಬ ಆತಂಕ ದಕ್ಷಿಣ ರಾಜ್ಯಗಳಿಗೆ ಕಾಡಲಾರಂಭಿಸಿ ಅವು ಪ್ರತಿರೋಧಕ್ಕೆ ಮುಂದಾದವು. ಇಂತಹ ಅವಿಶ್ವಾಸ ಭಾರತ ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರಬಹುದೆಂದರಿತ ಅಂದಿನ ವಾಜಪೇಯಿಯವರ ಸರ್ಕಾರ 2001ರಲ್ಲಿ ಸಂವಿಧಾನಕ್ಕೆ 84ನೇ ತಿದ್ದುಪಡಿ ತಂದು 1971ರ Constitutional freeze ಅನ್ನು ಮತ್ತೆ 25 ವರ್ಷಗಳವರೆಗೆ (2026ರವರೆಗೆ) ಮುಂದುವರೆಸಿತು. ಅಂದರೆ 2026ರ ನಂತರ ನಡೆಯುವ ಜನಗಣತಿಯನ್ನು ಆಧರಿಸಿ, ಡಿಲಿಮಿಟೇಷನ್ ಮಾಡಲು ಅವಕಾಶ ಸೃಷ್ಟಿಸಲಾಯ್ತು. ಅದೂ, ಜನಸಂಖ್ಯಾ ನಿಯಂತ್ರಣದಲ್ಲಿ ಎಲ್ಲಾ ರಾಜ್ಯಗಳಲ್ಲಿ ಸಮಾನತೆ ಬಂದು, ಅಸಮಾನತೆಯ ಅಪಸ್ವರ ಕೇಳಿಬರದಿದ್ದರೆ ಮಾತ್ರ!
ನಾವೀಗ ಆ 2026ಕ್ಕೆ ಬಂದು ತಲುಪಿದ್ದೇವೆ. ಪ್ರತಿ ಹತ್ತು ವರ್ಷಕ್ಕೊಮ್ಮೆ ನಡೆಸಿಕೊಂಡು ಬರಲಾಗುತ್ತಿದ್ದ ಜನಗಣತಿಯನ್ನು 2021ರಲ್ಲಿ ಮಾಡಬೇಕಿತ್ತಾದರೂ, ಬಿಜೆಪಿ ಸರ್ಕಾರ ಬೇಕಂತಲೇ ಮುಂದೂಡುತ್ತಾ ಬಂತು. ಯಾಕೆಂದರೆ, 2021ರಲ್ಲಿ ಜನಗಣತಿ ನಡೆದರೆ, ಮುಂದಿನ ಜನಗಣತಿ ನಡೆಯೋದು (2026ರ ಫ್ರೀಜಿಂಗ್ ಮುಕ್ತಾಯದ ನಂತರದ್ದು) 2031ರಲ್ಲಿ. ಅಲ್ಲಿಯವರೆಗೆ ಡಿಲಿಮಿಟೇಷನ್ ಸಾಧ್ಯವಿರಲಿಲ್ಲ. ಹಾಗಾಗಿ 2026ರವರೆಗೆ ಜನಗಣತಿಯನ್ನೇ ಬಿಜೆಪಿ ಸರ್ಕಾರ ನಡೆಸಲಿಲ್ಲ. ಈಗ ಆ ಕೆಲಸಕ್ಕೆ ಮುಂದಾಗಿದೆ. ಇದು ಡಿಲಿಮಿಟೇಷನ್ ವಿಚಾರದಲ್ಲಿ ಬಿಜೆಪಿಯ ವ್ಯವಸ್ಥಿತ ದುರುದ್ದೇಶವನ್ನು ತೋರುತ್ತದೆ.
ಆದರೆ ಬಿಜೆಪಿಯ ಆತುರವನ್ನು ಅರ್ಥ ಮಾಡಿಕೊಳ್ಳಬೇಕೆಂದರೆ, ನಾವು ಇದನ್ನು ಬೇರೆಯದೇ ಆಯಾಮದಿಂದ ನೋಡಬೇಕಿದೆ. ಒಂದುವೇಳೆ, ಬಿಜೆಪಿಗೆ ಆತುರವಿರದೇ ಇದ್ದಿದ್ದರೆ, ಅದು ತಮ್ಮದೇ ವಾಜಪೇಯಿಯವರ ಸರ್ಕಾರ ರೂಪಿಸಿದ್ದ 2026ರ ಜನಗಣತಿಯ ಅಂಕಿಅಂಶಗಳ ಆಧಾರದ ಮೇಲೆ ಡಿಲಿಮಿಟೇಷನ್‌ಗೆ ಮುಂದಾಗಬೇಕಿತ್ತು. ಆದರೆ ಬಿಜೆಪಿ ಹಾಗೆ ಮಾಡಲಿಲ್ಲ, 2026ರ ಅಂಕಿಅಂಶಗಳಿಗೂ ಕಾಯದೆ, 2011ರ ಜನಗಣತಿಯ ಆಧಾರದಲ್ಲೆ ಡಿಲಿಮಿಟೇಷನ್ ಮಾಡಿಬಿಡಲು ಸಂವಿಧಾನಕ್ಕೆ 131ನೇ ತಿದ್ದುಪಡಿ ತರಲು ಮಸೂದೆ ಮಂಡಿಸಿತು!
ಯಾಕೆ?
ಉತ್ತರ ಸರಳ. ಭಾರತದಂತಹ ಬೃಹತ್ ಜನಸಂಖ್ಯೆಯ ದೇಶವೊಂದರಲ್ಲಿ ಜನಗಣತಿ ಎನ್ನುವುದು ಸುದೀರ್ಘ ಪ್ರಕ್ರಿಯೆ. ಜನಗಣತಿ ಶುರುವಾಗಿ ಅಂತಿಮ ಅಂಕಿಅಂಶಗಳು ಪ್ರಕಟಗೊಳ್ಳಲು ಏನಿಲ್ಲವೆಂದರೂ ಮೂರು ವರ್ಷಗಳ ಸಮಯ ಬೇಕಾಗುತ್ತದೆ. 2011ರ ಜನಗಣತಿಯನ್ನೇ ಉದಾಹರಣೆಗೆ ತೆಗೆದುಕೊಳ್ಳುವುದಾದರೆ, ಮೊದಲ ಹಂತವಾದ ಮನೆಗಣತಿ ಶುರುವಾಗಿದ್ದು ಏಪ್ರಿಲ್ 2010ರಲ್ಲಿ. ನಂತರ ತಲೆಗಣತಿ, ಡಾಟಾ ಪ್ರೊಸೆಸಿಂಗ್ ಮುಗಿದು ಅಂತಿಮ ಅಂಕಿಅಂಶಗಳು ಪ್ರಕಟವಾದದ್ದು 2013 ಏಪ್ರಿಲ್ 30ರಂದು. ಅಂದರೆ ಬರೋಬ್ಬರಿ ಮೂರು ವರ್ಷ. 2026ರ ಜನಸಂಖ್ಯೆಗೆ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ವೇಳಾಪಟ್ಟಿ ಕೂಡಾ ಇಷ್ಟೇ ಸುದೀರ್ಘ ಕಾಲಾವಧಿಯದ್ದು. ಏಪ್ರಿಲ್ 2026ರಲ್ಲಿ ಶುರುವಾಗಿರುವ ಜನಗಣತಿ ತನ್ನ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ 2029ರ ಮೊದಲ ತ್ರೈಮಾಸಿಕದಲ್ಲಿ ಅಂತಿಮ ದತ್ತಾಂಶಗಳನ್ನು ಪ್ರಕಟಿಸುವ ಸಂಭವವಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಅಂದರೆ 2026ರ ಜನಗಣತಿಯನ್ನು ನಂಬಿಕೊಂಡರೆ 2029ರ ಲೋಕಸಭಾ ಚುನಾವಣೆ ವೇಳೆಗು ಮುನ್ನ ಡಿಲಿಮಿಟೇಷನ್ ಮಾಡಲು ಸಾಧ್ಯವಿಲ್ಲ ಎಂಬುದು ಬಿಜೆಪಿಗೆ ಮನವರಿಕೆಯಾಯ್ತು. ಯಾಕೆಂದರೆ ಜನಗಣತಿಯ ಅಂತಿಮ ಅಂಕಿಅಂಶಗಳು ಲಭ್ಯವಾದ ನಂತರ, ಅವುಗಳ ಆಧಾರದಲ್ಲಿ ಕ್ಷೇತ್ರಗಳ ಮರುವಿಂಗಡಣೆ ಮಾಡಲು 2029ರಿಂದಾಚೆಗೆ ಏನಿಲ್ಲವೆಂದರೂ ಕನಿಷ್ಠ 2 ವರ್ಷ ಬೇಕಾಗುತ್ತದೆ. ಅಷ್ಟರೊಳಗೆ 2029ರ ಚುನಾವಣೆಯೇ ಮುಗಿದುಹೋಗಿರುತ್ತದೆ. ಹಾಗಾಗಿ ತಮ್ಮದೇ ವಾಜಪೇಯಿಯವರು ನಿಗದಿಪಡಿಸಿದ್ದ 2026ರ ಜನಗಣತಿ ಮಿತಿಯನ್ನು ಕಿತ್ತೆಸೆದು, ಈಗ ಯಾವುದು ಲಭ್ಯವಿದೆಯೋ ಅದರ ಆಧಾರದಲ್ಲಿ (2011) ಡಿಲಿಮಿಟೇಷನ್‌ಗೆ ಬಿಜೆಪಿ ಮುಂದಾಗಿದ್ದು ಆತುರವಲ್ಲದೆ ಮತ್ತೇನು?
ಇನ್ನು ಬಿಜೆಪಿಯ ಆತುರವನ್ನು ಅರ್ಥ ಮಾಡಿಸುವ ಎರಡನೇ ಆಯಾಮ ನೋಡೋಣ. ಡಿಲಿಮಿಟೇಷನ್ ಕುರಿತು ಎನ್‌ಡಿಎ ಸರ್ಕಾರ ಮಂಡಿಸಿರುವ ಸಂವಿಧಾನ ತಿದ್ದುಪಡಿ ಮಸೂದೆಗೆ ಲೋಕಸಭಾ ಮತ್ತು ರಾಜ್ಯಸಭೆಗಳಲ್ಲಿ ಅನುಮೋದನೆ ದೊರಕುವ ತಾಂತ್ರಿಕ ಸಾಧ್ಯತೆ ಇರಲಿಲ್ಲವೆಂಬುದು ಮೊದಲೇ ತಿಳಿದಿತ್ತು. ಬೇರೆಲ್ಲ ಮಸೂದೆಗಳಂತೆ ಸರಳ ಬಹುತದೊಂದಿಗೆ ಇದಕ್ಕೆ ಅನುಮೋದನೆ ಪಡೆಯಲು ಸಾಧ್ಯವಿರಲಿಲ್ಲ. ಯಾಕೆಂದರೆ, ಇದು ಸಂವಿಧಾನಕ್ಕೆ ತಿದ್ದುಪಡಿ ತರುವ ಮಸೂದೆಯಾಗಿರುವುದರಿಂದ ಆರ್ಟಿಕಲ್ 368ರ ಪ್ರಕಾರ ವಿಶೇಷ ಬಹುಮತ (Special Majority) ಬೇಕಾಗುತ್ತದೆ. ಎನ್‌ಡಿಎ ಮೈತ್ರಿಕೂಟದ ಬಳಿ ವಿಶೇಷ ಬಹುಮತ ಪಡೆಯಲು ಬೇಕಾದ 360 ಗಡಿ ತಲುಪಲು ಬೇಕಾದಷ್ಟು ಸಂಖ್ಯಾಬಲವೇ ಇಲ್ಲ. ಹಾಗಾಗಿಯೇ ಈಗ ಮಸೂದೆಗೆ ಸೋಲುಂಟಾಗಿದೆ.

ಇಂಥಾ ಹಿನ್ನಡೆ ಸಾಧ್ಯತೆ ಬಿಜೆಪಿಗೆ ಮೊದಲೇ ಅರ್ಥವಾಗಿತ್ತು. ಒಂದುವೇಳೆ, ಬಿಜೆಪಿಗೆ ಡಿಲಿಮಿಟೇಷನ್ ಅನ್ನು ತುರ್ತಾಗಿ ಜಾರಿಗೆ ತರುವ ಆತುರ ಇಲ್ಲದಿದ್ದರೆ, ಸೂಕ್ತ ಸಂಖ್ಯಾಬಲ ವೃದ್ಧಿಸಿಕೊಳ್ಳುವವರೆಗೆ ಈ ಸಾಹಸಕ್ಕೆ ಕೈಹಾಕುತ್ತಿರಲಿಲ್ಲ. ಆದರೆ, 2029ರ ಚುನಾವಣೆಯ ಒಳಗೆ ಡಿಲಿಮಿಟೇಷನ್ ಮಾಡಿ ಮುಗಿಸುವ ಆತುರ ಇದ್ದುದರಿಂದಲೇ, ವಿರೋಧ ಪಕ್ಷಗಳನ್ನು ಇಕ್ಕಟ್ಟಿಗೆ ಸಿಲುಕಿಸಿ ಮಸೂದೆ ಪರವಾಗಿ ಮತ ಹಾಕಿಸಿಕೊಳ್ಳಲು ಈಗಾಗಲೇ 2023ರಲ್ಲೆ ಸರ್ವಾನುಮತದಿಂದ ಅನುಮೋದನೆಗೊಂಡಿದ್ದ ನಾರಿಶಕ್ತಿ ವಂದನಾ ಅಧಿಯನಿಯಮ (ಮಹಿಳಾ ಮೀಸಲಾತಿ) ಮಸೂದೆಯನ್ನೂ ಇದರೊಂದಿಗೆ ಬೆಸೆದು ಮತ್ತೆ ಮತದಾನಕ್ಕೆ ತಳ್ಳಿತ್ತು. ಡಿಲಿಮಿಟೇಷನ್ ಮಸೂದೆ ವಿರುದ್ಧ ವಿರೋಧ ಪಕ್ಷಗಳು ಮತಚಲಾಯಿಸಿದರೆ, ಅವರು ಮಹಿಳಾ ಮೀಸಲಾತಿಗೂ ವಿರುದ್ಧವಿದ್ದಾರೆ ಎಂದು ವಿರೋಧಪಕ್ಷಗಳ ಮೇಲೆ ದಾಳಿ ಮಾಡಬಹುದು ಎಂಬುದು ಬಿಜೆಪಿಯ ಲೆಕ್ಕಾಚಾರ. ಈಗ ಅದು ಅದನ್ನೇ ಮಾಡುತ್ತಿದೆ. ಈಗಷ್ಟೇ ಅಲ್ಲ, ಇನ್ನೂ ಐವತ್ತು-ನೂರು ವರ್ಷಗಳ ನಂತರ ಈ ಸುಳ್ಳನ್ನೇ ಸತ್ಯವಾಗಿಸಲು ಹೆಣಗಾಡುತ್ತದೆ. ಈಗ ನಮಗೆ ಗಾಂಧಿ-ನೆಹರೂ ಕುರಿತು ಅರೆಬೆಂದ ಸುಳ್ಳುಗಳನ್ನು ಒಪ್ಪಿಸುತ್ತಿರುವ ರೀತಿಯಲ್ಲಿ!
ನಿಜಕ್ಕೂ ಮಹಿಳಾ ಮೀಸಲಾತಿ ಅನುಷ್ಠಾನಕ್ಕೆ ತರುವ ಕಾಳಜಿ ಬಿಜೆಪಿಗೆ ಇದ್ದಿದ್ದರೆ, 2023ರ ಮಸೂದೆಗೆ ಆರ್ಟಿಕಲ್ 334ಎ ಅನ್ನು ಸೇರಿಸುವ ಮೂಲಕ ಹೊಸ ಜನಗಣತಿ, ಡಿಲಿಮಿಟೇಷನ್ ಆಗುವವರೆಗೆ ಮಹಿಳಾ ಮೀಸಲಾತಿ ಸಾಧ್ಯವಿಲ್ಲ ಎಂಬ ಅಡ್ಡಿಯನ್ನು ಅದು ಸೃಷ್ಟಿಸುತ್ತಿರಲಿಲ್ಲ. ಜನಗಣತಿ ಅಥವಾ ಡಿಲಿಮಿಟೇಷನ್‌ವರೆಗೆ ಕಾಯದೆ ಪ್ರಸ್ತುತ 540 ಕ್ಷೇತ್ರಗಳಲ್ಲೆ ಮಹಿಳೆಯರಿಗೆ ಮೂರನೇ ಒಂದರಷ್ಟು ಕ್ಷೇತ್ರಗಳನ್ನು ಮೀಸಲಿಡಬಹುದಿತ್ತು. ಆದರೆ ಮಹಿಳಾ ಮೀಸಲಾತಿಯ ಬಗ್ಗೆ ಕಾಳಜಿ ಇಲ್ಲದ ಬಿಜೆಪಿ ಅದನ್ನು ತನ್ನ ರಾಜಕೀಯ ಅಜೆಂಡಾಕ್ಕೆ ಗುರಾಣಿಯಾಗಿ ಬಳಸಿಕೊಳ್ಳಲು ಡಿಲಿಮಿಟೇಷನ್ ಜೊತೆ ಬೆಸೆಯಿತು. ಡಿಲಿಮಿಟೇಷನ್ ಪರಿಣಾಮವಾಗಿ ಈಗ ಮಹಿಳಾ ಮಸೂದೆಯೂ ವಿಳಂಬವಾಗಬೇಕಾಗಿದೆ. ಹೀಗಾಗುತ್ತೆ ಎಂದು ಗೊತ್ತಿದ್ದೂ, ವಿರೋಧ ಪಕ್ಷಗಳಿಗೆ ಕೆಟ್ಟ ಹೆಸರು ತರುವ ಏಕೈಕ ಕಾರಣಕ್ಕೆ ಒಂದು ಅತ್ಯುತ್ತಮ ಪರಿವರ್ತನೆಗೆ ಸ್ವತಃ ಬಿಜೆಪಿಯೇ ಅಡ್ಡಗಾಲು ಹಾಕಿದಂತಾಗಿದೆ. ಈ ತಂತ್ರವು ಡಿಲಿಮಿಟೇಷನ್ ವಿಚಾರದಲ್ಲಿ ಬಿಜೆಪಿಗಿದ್ದ ಆತುರ ಮತ್ತು ಮಹಿಳಾ ಮೀಸಲಾತಿ ವಿಚಾರದಲ್ಲಿ ಅದರ ಇಬ್ಬಂದಿತನವನ್ನು ಅರ್ಥ ಮಾಡಿಸುತ್ತವೆ.
ಈಗ ಮುಖ್ಯಪ್ರಶ್ನೆಗೆ ಮರಳೋಣ. ಇಷ್ಟೆಲ್ಲಾ ಕಸರತ್ತುಗಳನ್ನು ಮಾಡಿ 2029ರ ಚುನಾವಣೆಯ ಒಳಗೆ ಡಿಲಿಮಿಟೇಷನ್ ಮಾಡಬೇಕೆಂದಿದ್ದ ಬಿಜೆಪಿಯ ಆತುರಕ್ಕೆ ಕಾರಣವೇನು?
ಜನರಿಂದ ತಿರಸ್ಕಾರದ ಭೀತಿ! ಹೌದು, 2029ರ ಚುನಾವಣೆಯಲ್ಲಿ ತನ್ನ ಯಾವ ತಂತ್ರಗಳೂ ಫಲಿಸದೆ ಹೀನಾಯವಾಗಿ ಸೋಲಬೇಕಾಗುತ್ತದೆಂಬ ಸತ್ಯ ಬಿಜೆಪಿಗೆ ಮನದಟ್ಟಾಗಿದೆ.
ಅಬ್ ಕೀ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆ ಮೊಳಗಿಸಿದ್ದ 2024ರ ಚುನಾವಣೆಯಲ್ಲಿ ಬಿಜೆಪಿಗೆ ಆದ ಹಿನ್ನಡೆಯು ಬಿಜೆಪಿಯ ಆತ್ಮವಿಶ್ವಾಸವನ್ನಷ್ಟೆ ಕಡಿಮೆ ಮಾಡಿಲ್ಲ, ಜೊತೆಗೆ ವಿರೋಧ ಪಕ್ಷಗಳ ಸಂಖ್ಯಾಬಲ, ಧೈರ್ಯ ಮತ್ತು ಒಗ್ಗಟ್ಟು ಹೆಚ್ಚಿಸಿದೆ; ತತ್ಪರಿಣಾಮವಾಗಿ ಜನರಲ್ಲಿ ಬಿಜೆಪಿ ವಿರುದ್ಧ ಪ್ರತಿರೋಧದ ಎದೆಗಾರಿಕೆಯನ್ನೂ ಹೆಚ್ಚಿಸಿದೆ. ಅದಕ್ಕು ಮುನ್ನ ಬಿಜೆಪಿ ಮತ್ತು ಮೋದಿಯವರ ವಿರುದ್ಧ ಮಾತಾಡಲು ಅಂಜಿಕೊಳ್ಳುವ ವಾತಾವರಣವಿತ್ತು. ಆದರೆ ಬಿಜೆಪಿಯನ್ನು ಮತ್ತು ಅವರ ದಬ್ಬಾಳಿಕೆಯನ್ನು ಸೋಲಿಸಲು ಸಾಧ್ಯವಿದೆ ಎಂಬುದು 2024ರ ಫಲಿತಾಂಶದಿಂದ ಅರ್ಥವಾದ ನಂತರ ಮೋದಿ ಸರ್ಕಾರದ ವೈಫಲ್ಯಗಳು, ಹಗರಣಗಳು, ಗುಮಾನಿಗಳು ಮುಲಾಜಿಲ್ಲದೆ ಚರ್ಚೆಗೀಡಾಗುತ್ತಿವೆ. ಬಿಜೆಪಿ ನಾಯಕರು ಈಗ ಸೋಷಿಯಲ್ ಮೀಡಿಯಾದ ದಿನನಿತ್ಯದ ನಗೆಪಾಟಲಿನ ಸರಕುಗಳಾಗಿ ಬದಲಾಗಿದ್ದಾರೆ. ಈ ವಾತಾವರಣ ದಿನೇದಿನೇ ಬಿಜೆಪಿಯ ಹಾಗೂ ಮೋದಿಯವರ ವರ್ಚಸ್ಸನ್ನು ಕುಗ್ಗಿಸುತ್ತಿದೆ. ಎನ್‌ಡಿಎ ಸರ್ಕಾರದ ವಿದೇಶಾಂಗ ನೀತಿಯ ವೈಫಲ್ಯ, ಆಡಳಿತ ನಿರ್ವಹಣೆಯ ದೋಷಗಳು, ಅಧಿಕಾರ ದುರ್ಬಳಕೆ, ಮೀಡಿಯಾ ನಿಯಂತ್ರಣಗಳು, ಚುನಾವಣಾ ಅಕ್ರಮಗಳು ಲೇವಡಿಗೆ ತುತ್ತಾಗುತ್ತಿವೆ. ಈ ಹಿನ್ನಡೆ ಅದೆಷ್ಟು ಕೈಮೀರಿ ಹೋಗಿದೆಯೆಂದರೆ ಎಂತಹ ಕಸರತ್ತುಗಳು ಕೂಡಾ 2029ರ ವೇಳೆಗೆ ಬಿಜೆಪಿಯನ್ನು ಬಚಾವು ಮಾಡಲು ಸಾಧ್ಯವಿಲ್ಲ ಎನ್ನುವಂತಾಗಿದೆ.
ಹಾಗಂತ ಕೈಕಟ್ಟಿ ಕೂರಲು ಸಾಧ್ಯವೇ? ಅಕಸ್ಮಾತ್ ಬಿಜೆಪಿ 2029ರ ಚುನಾವಣೆಯಲ್ಲಿ ಅಧಿಕಾರ ಕಳೆದುಕೊಂಡರೆ ಅದು ಕೇವಲ ಒಂದು ರಾಜಕೀಯ ಹಿನ್ನಡೆ ಮಾತ್ರವಲ್ಲ; ಈ ಸರ್ಕಾರದ ಸಂಪೂರ್ಣ ಹಗರಣಗಳು ಹೊರಬಂದು ದೊಡ್ಡಮಟ್ಟದಲ್ಲಿ ಏಟುಬೀಳುವ ಸಾಧ್ಯತೆ ಇದೆ. ಹಾಗೇನಾದರೂ ಆದಲ್ಲಿ, ಮುಂದಿನ ಕೆಲವು ದಶಕಗಳವರೆಗೆ ಬಿಜೆಪಿ ಮತ್ತು ಆರೆಸ್ಸೆಸ್‌ಗೆ ಪುಟಿದೇಳುವುದು ಕಷ್ಟವಾಗಬಹುದು. ಅದನ್ನು ಮನಗಂಡೇ, 2029ರೊಳಗೆ ಡಿಲಿಮಿಟೇಷನ್ ಮಾಡಿ ಮುಗಿಸಲು ಬಿಜೆಪಿ ಇಷ್ಟು ಆತುರ ತೋರಿತ್ತು.
ಪ್ರಜಾಪ್ರಭುತ್ವದ ಮುಂದೆ ಬಿಜೆಪಿಯ ದುರುದ್ದೇಶ ಮಣಿದಿದೆ. ಆದರೆ ಅದಕ್ಕಾಗಿ ಮಹಿಳಾ ಮೀಸಲಾತಿಯನ್ನು ಬಲಿಕೊಟ್ಟ ಬಿಜೆಪಿಯ ಕುತಂತ್ರಕ್ಕೆ ಈ ದೇಶ ತಕ್ಕ ಉತ್ತರ ಕೊಡುವುದು ಬಾಕಿ ಇದೆ. 2029ಕ್ಕು ಮುನ್ನವೇ ಆ ಪಾಠ ಬಿಜೆಪಿಯನ್ನು ಅಪ್ಪಳಿಸುವ ಸಾಧ್ಯತೆಗಳುಂಟು.
ಮಾಚಯ್ಯ ಎಂ ಹಿಪ್ಪರಿಗಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ‘ಟಾರ್ಗೆಟ್ ಮುಸ್ಲಿಂ’ ಕಾರ್ಯತಂತ್ರದ ಹಿಂದೆ ಡಿಕೆಶಿ-ಬಿಜೆಪಿ ಗೇಮ್ಪ್ಲ್ಯಾನ್?


