Wednesday, June 12, 2024

ಹುಂಡಿ ಹಣ ವಿವಾದ- ಧರ್ಮದ್ವೇಷವಷ್ಟೇ ಕಾರಣ

Most read

ವಿವಿಧ ಕಾಣಿಕೆ ರೂಪದಲ್ಲಿ ಧನ ಕನಕ ಧಾನ್ಯಗಳನ್ನು ಕೊಡುವ ಭಕ್ತಾದಿಗಳಿಗೆ ಈ ದೇವಸ್ಥಾನಗಳು ಕೊಟ್ಟಿದ್ದಾದರೂ ಏನು? ಉಚಿತ ಪಾರ್ಕಿಂಗ್ ಇಲ್ಲವೇ ಪಾದರಕ್ಷೆ ಬಿಡಲಾದರೂ ಅನುಕೂಲ ಮಾಡಿಕೊಟ್ಟಿದ್ದಾರಾ? ಭಕ್ತರಿಗೆ ದಣಿವಾರಿಸಿಕೊಳ್ಳಲು ಉಚಿತ ವಸತಿ ನಿಲಯಗಳನ್ನು ಕಟ್ಟಿಸಿದ್ದಾರಾ? ಸಿ ಕೆಟಗರಿ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ನೀರು ನೆಲೆ ವ್ಯವಸ್ಥೆಗಳಿವೆಯಾ? – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಕರ್ನಾಟಕದ ದೇವಸ್ಥಾನಗಳ ಆದಾಯ ಹಂಚಿಕೆಯ ಸಂಗತಿ ಈಗ ವಿವಾದ ಹುಟ್ಟಿಸಿದೆ. ಧಾರ್ಮಿಕ ದತ್ತಿ ಇಲಾಖೆ ಅಲಿಯಾಸ್ ಮುಜರಾಯಿ ಇಲಾಖೆಯ ವಿಧೇಯಕಕ್ಕೆ  ಸಿಎಂ ಸಿದ್ದರಾಮಯ್ಯನವರ ಸರಕಾರ ತಿದ್ದುಪಡಿ ತಂದು ಅಧಿವೇಶನದಲ್ಲಿ ಮಂಡಿಸಿ ವಿಧಾನಸಭೆಯಲ್ಲಿ ಬಹುಮತದ ಒಪ್ಪಿಗೆ ಪಡೆಯುವಲ್ಲಿ ಯಶಸ್ವಿಯಾಗಿದೆ. ಪರಿಷತ್ತಿನ ಒಪ್ಪಿಗೆ ಬಾಕಿ ಇದೆ. ಆದರೆ ಧರ್ಮ ದೇವರು ದೇವಸ್ಥಾನಗಳ ವಿಷಯಗಳನ್ನು ಗುತ್ತಿಗೆ ಪಡೆದಂತೆ ಆಡುವ ಬಿಜೆಪಿ ಪಕ್ಷದವರು ಬುಡಕ್ಕೆ ಬೆಂಕಿ ಬಿದ್ದಂತೆ ತಿದ್ದುಪಡಿ ಮಸೂದೆಯನ್ನು ವಿರೋಧಿಸುತ್ತಾ “ದೇವಸ್ಥಾನಗಳ ಹುಂಡಿಗೆ ಸರಕಾರ ಕನ್ನ ಹಾಕುತ್ತಿದೆ” ಎಂದು ಆರೋಪಿಸುತ್ತಿದ್ದಾರೆ.

ಇದೇನೂ ಹೊಸದಾಗಿ ಜಾರಿಯಾದ ಮಸೂದೆ ಏನಲ್ಲ. ಕರ್ನಾಟಕ ಧಾರ್ಮಿಕ ಹಾಗೂ ಧರ್ಮಾದಾಯ ದತ್ತಿ ಕಾಯಿದೆ 1997 ನ್ನು 2001, 2003 ರಲ್ಲಿ ತಿದ್ದುಪಡಿ ಮಾಡಲಾಗಿತ್ತು. ಬಿಜೆಪಿ ಸರಕಾರ ಇದ್ದಾಗ 2011 ರಲ್ಲಿ ಪೂರ್ಣ ಪ್ರಮಾಣದಲ್ಲಿ ಜಾರಿಯಾಗಿತ್ತು. ಮುಜರಾಯಿ ಇಲಾಖೆಯ ಅಡಿಯಲ್ಲಿ ಬರುವ ರಾಜ್ಯದಲ್ಲಿರುವ ಒಟ್ಟು 34,560 ದೇವಸ್ಥಾನಗಳನ್ನು ಮೂರು ಕೆಟಗರಿಯಲ್ಲಿ ವಿಭಾಗಿಸಲಾಗಿತ್ತು. 25 ಲಕ್ಷಕ್ಕಿಂತ ಹೆಚ್ಚು ಆದಾಯವಿರುವ ಸುಮಾರು 205 ಶ್ರೀಮಂತ ದೇವಸ್ಥಾನಗಳನ್ನು ಎ ಕೆಟಗರಿ ಎಂದೂ, 5 ಲಕ್ಷದಿಂದ 25 ಲಕ್ಷದೊಳಗೆ ಆದಾಯ ವಿರುವ 193 ದೇವಸ್ಥಾನಗಳನ್ನು ಬಿ ಕೆಟಗರಿ ಎಂದೂ ಹಾಗೂ 5 ಲಕ್ಷದ ಒಳಗೆ ವರಮಾನ ಇರುವ 34,000 ದಷ್ಟು ದೇವಾಲಯಗಳನ್ನು ಸಿ ಕೆಟಗರಿಯೆಂದೂ ವಿಭಾಗೀಕರಣ ಮಾಡಲಾಗಿತ್ತು. ಎ ಕೆಟಗರಿ ದೇಗುಲಗಳು ತಮ್ಮ ಆದಾಯದಲ್ಲಿ 10% ಹಣವನ್ನು ಮುಜರಾಯಿ ಇಲಾಖೆಯ ಧಾರ್ಮಿಕ ಪರಿಷತ್ತಿಗೆ ಸಲ್ಲಿಸಬೇಕು ಹಾಗೂ ಬಿ ಕೆಟಗರಿಯ ದೇವಸ್ಥಾನಗಳು ಆದಾಯದ 5% ಹಣವನ್ನು  ಕೊಡಬೇಕು ಮತ್ತು ಸಿ ಕೆಟಗರಿಯಲ್ಲಿ ಬರುವ ಬಹುಸಂಖ್ಯಾತ ದೇವಸ್ಥಾನಗಳು ಯಾವುದೇ ಹಣವನ್ನೂ ಕೊಡುವಂತಿಲ್ಲ ಎಂಬುದು 2011 ರ ತಿದ್ದುಪಡಿ ಮಸೂದೆಯ ಸಾರಾಂಶವಾಗಿತ್ತು. ಮತ್ತು ಎ ಕೆಟಗರಿ ದೇವಸ್ಥಾನಗಳು ಸಿ ಕೆಟಗರಿ ದೇವಾಲಯಗಳನ್ನು ದತ್ತು ಪಡೆದು ಅಭಿವೃದ್ಧಿ ಪಡಿಸಬಹುದು ಎಂದೂ ಹೇಳಲಾಗಿತ್ತು. 

ಇದೇ ಮಸೂದೆಗೆ ಈಗ ಕಾಂಗ್ರೆಸ್ ಸರಕಾರ ಮತ್ತೆ ತಿದ್ದುಪಡಿ ತಂದಿದೆ. 10 ಲಕ್ಷದ ಆದಾಯದವರೆಗೂ ಸಿ ಕೆಟಗರಿ ದೇವಾಲಯಗಳು ಯಾವ ಹಣವನ್ನೂ ಮುಜರಾಯಿ ಇಲಾಖೆಗೆ ಕಟ್ಟುವ ಅಗತ್ಯವಿಲ್ಲ. 10 ಲಕ್ಷದಿಂದ ಒಂದು ಕೋಟಿಯ ವರೆಗೂ ಆದಾಯವಿರುವ ಬಿ ಕೆಟಗರಿಯ ದೇವಸ್ಥಾನಗಳು ಕೇವಲ 5% ಕೊಟ್ಟರೆ ಸಾಕು ಹಾಗೂ ಒಂದು ಕೋಟಿಗಿಂತಲೂ ಹೆಚ್ಚಾಗಿ ವರಮಾನ ಇರುವ ದೇವಸ್ಥಾನಗಳು  ಆದಾಯದಲ್ಲಿ 10% ಮಾತ್ರ ಇಲಾಖೆಗೆ ಸಲ್ಲಿಸಬೇಕು. ಈ ತಿದ್ದುಪಡಿ ದೇವಸ್ಥಾನಗಳಿಗೆ ಇನ್ನೂ ಹೆಚ್ಚು ಅನುಕೂಲ ಮಾಡಿಕೊಡುವಂತಿದೆ.‌ ಮೊದಲು 5 ಲಕ್ಷದ ಒಳಗಿನ ಆದಾಯದ ದೇವಸ್ಥಾನಗಳು ಈಗ 10 ಲಕ್ಷದ ವರೆಗೂ ಯಾವುದೇ ಹಣ ಕಟ್ಟುವ ಅಗತ್ಯವಿಲ್ಲ. ಬಂದ ಹಣವನ್ನು ದೇವಸ್ಥಾನದ ಅಭಿವೃದ್ಧಿಗೆ ಬಳಸಬಹುದು. ಹಾಗೆಯೇ ಬಿ ಕೆಟಗರಿಯವರ ಮಿತಿಯನ್ನೂ ಹೆಚ್ಚಿಸಲಾಗಿದೆ. 1 ಕೋಟಿಯವರೆಗಿನ ಆದಾಯಕ್ಕೆ 10% ಬದಲಾಗಿ 5% ಕಟ್ಟಿದರೆ ಸಾಕು.  ದೇವಸ್ಥಾನಗಳಿಗೆ ಹೆಚ್ಚಿನ ಅನುಕೂಲ ಇರುವಾಗ ಈ ಬಿಜೆಪಿಯವರ ತಕರಾರೇನು? 

ವಿಜಯೇಂದ್ರ

ಮುಜರಾಯಿ ಇಲಾಖೆಯ ಹಾಲಿ ಸಚಿವರಾದ ರಾಮಲಿಂಗಾರೆಡ್ಡಿಯವರು “ಈ ತಿದ್ದುಪಡಿ ವಿಧೇಯಕದಿಂದ ಮುಜರಾಯಿ ಇಲಾಖೆಗೆ ಮೂವತ್ತರಿಂದ ಮೂವತ್ತೈದು ಕೋಟಿ ಹಣ ಬರಬಹುದು. ಈ ಹಣವನ್ನೂ ಸಹ ಅರ್ಚಕರ ಸಂಬಳಕ್ಕೆ, ವಿಮಾ ಸೌಲಭ್ಯಕ್ಕೆ, ಅವರ ಮಕ್ಕಳ ಶಿಕ್ಷಣಕ್ಕೆ ಹಾಗೂ ಹಿಂದೂ ದೇವಸ್ಥಾನಗಳ ನಿರ್ವಹಣೆಗೆ ಬಳಸಲಾಗುತ್ತದೆ” ಎಂದು ಸಮರ್ಥನೆಯನ್ನೂ ಕೊಟ್ಟಿದ್ದಾರೆ. ಮುಜರಾಯಿ ಇಲಾಖೆಯ ಹಣವನ್ನು ಸರಕಾರ ಬೇರೆ ಯೋಜನೆಗೆ ಬಳಸುವ ಅವಕಾಶವೇ ಮಸೂದೆಯಲ್ಲಿ ಇಲ್ಲ. ಎ ಮತ್ತು ಬಿ ಕೆಟಗರಿ ದೇವಸ್ಥಾನಗಳಿಂದ ಬಂದ ಆದಾಯದ ಹಣವನ್ನು “ಸಾಮಾನ್ಯ ಸಂಗ್ರಹ ನಿಧಿ” ಎನ್ನುವ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ. ಈ ಖಾತೆಯನ್ನು ಜಿಲ್ಲಾಧಿಕಾರಿಗಳು, ಆಯುಕ್ತರು ನಿರ್ವಹಿಸುತ್ತಾರೆ. ಇದಕ್ಕೂ ಕಾಯಿದೆಯ 17 ನೇ ನಿಯಮ ಮತ್ತು 18 ಹಾಗೂ 19 ರ ನಿಯಮಗಳೇ ಅನ್ವಯವಾಗುತ್ತವೆ. ಹುಂಡಿ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಸಲಾಗುತ್ತದೆ ಎನ್ನುವುದೇ ಭಕ್ತಾದಿಗಳ ದಾರಿ ತಪ್ಪಿಸಿ ಸರಕಾರದ ಮೇಲೆ ಹಿಂದೂಗಳನ್ನು ಎತ್ತಿಕಟ್ಟುವ ಸಂಘಿಗಳ ಹುನ್ನಾರವಾಗಿದೆ. 

ಇಷ್ಟಕ್ಕೂ ದೇವಸ್ಥಾನಗಳು ಭಕ್ತರಿಗೆ ಶ್ರದ್ಧಾ ಕೇಂದ್ರಗಳಾಗಿದ್ದರೆ ದೇವಸ್ಥಾನಗಳ ನಿರ್ವಾಹಕರಿಗೆ ಆದಾಯ ಕೇಂದ್ರಗಳಾಗಿವೆ. ಚಪ್ಪಲಿ ಬಿಡುವುದರಿಂದ ಹಿಡಿದು, ಪಾರ್ಕಿಂಗ್ ಹಣ, ಅರ್ಚನೆ ಪೂಜೆ ಪ್ರಸಾದ ಹಾಗೂ ತರಾವರಿ ಅಭಿಷೇಕಕ್ಕೆ ಹಣ, ಯಾಗ ಹವನ ತುಲಾಭಾರಕ್ಕೆ ಹಣ, ವಿಶೇಷ ಪೂಜೆಗಳಿಗೆ ಹೆಚ್ಚಿನ ಹಣವನ್ನು ಭಕ್ತಾದಿಗಳಿಂದ ಪಡೆಯಲಾಗುತ್ತದೆ. ಇದರ ಮೇಲೆ ತಟ್ಟೆಕಾಸು ಮತ್ತು ಹುಂಡಿಗೆ ಹಣ. ಯಾವುದೇ ದೇವಸ್ಥಾನಗಳಿಗೆ ಹೋದರೂ ಎಲ್ಲದಕ್ಕೂ ಒಂದೊಂದು ರೇಟ್ ಮೆನು ಫಿಕ್ಸ್ ಮಾಡಿರುತ್ತಾರೆ. ಹೀಗಾಗಿ ದೇವರ ದರ್ಶನಕ್ಕೆ ಭಕ್ತಿಯಿಂದ ಹೋಗುವ ಬಹುತೇಕರು ಅಲ್ಲಿನ ವ್ಯಾಪಾರಿ ಸಂಸ್ಕೃತಿಗೆ ಈಡಾಗುತ್ತಾರೆ. ದೇವಸ್ಥಾನಗಳು ಹೀಗೆ ಸುಲಿಗೆ ಕೇಂದ್ರಗಳಾಗಿರುವಾಗ, ವಸೂಲಿಯೇ ದೇವಾಲಯಗಳ ಆಡಳಿತ ಮಂಡಳಿಗಳ ಕಾಯಕವಾಗಿರುವಾಗ  ಅವುಗಳನ್ನು ಶ್ರದ್ಧಾ ಭಕ್ತಿ ಕೇಂದ್ರಗಳು ಎಂದು ಕರೆಯುವುದು ಹೇಗೆ? ಭಕ್ತರು ಕೊಟ್ಟ ಹಣದಲ್ಲಿ ಬಹುತೇಕ ಪಾಲು ಭಕ್ತಾದಿಗಳ ಅನುಕೂಲಕ್ಕೆ ಬಳಕೆಯಾಗುವುದು ನ್ಯಾಯಸಮ್ಮತವಾದದ್ದು. ವಿವಿಧ ಕಾಣಿಕೆ ರೂಪದಲ್ಲಿ ಧನ ಕನಕ ಧಾನ್ಯಗಳನ್ನು ಕೊಡುವ ಭಕ್ತಾದಿಗಳಿಗೆ ಈ ದೇವಸ್ಥಾನಗಳು ಕೊಟ್ಟಿದ್ದಾದರೂ ಏನು? ಉಚಿತ ಪಾರ್ಕಿಂಗ್ ಇಲ್ಲವೇ ಪಾದರಕ್ಷೆ ಬಿಡಲಾದರೂ ಅನುಕೂಲ ಮಾಡಿಕೊಟ್ಟಿದ್ದಾರಾ? ಭಕ್ತರಿಗೆ ದಣಿವಾರಿಸಿಕೊಳ್ಳಲು ಉಚಿತ ವಸತಿ ನಿಲಯಗಳನ್ನು ಕಟ್ಟಿಸಿದ್ದಾರಾ? ಸಿ ಕೆಟಗರಿ ದೇವಸ್ಥಾನಗಳಲ್ಲಿ ಭಕ್ತಾದಿಗಳಿಗೆ ನೀರು ನೆಲೆ ವ್ಯವಸ್ಥೆಗಳಿವೆಯಾ? ದೇವರಂತೂ ಯಾವ ಹಣವನ್ನೂ ಮುಟ್ಟುವುದಿಲ್ಲ.  ಭಕ್ತರ ಹಣ ಭಕ್ತರ ಕಲ್ಯಾಣಕ್ಕಾಗಿ ಬಳಸುವುದು ಸೂಕ್ತವಲ್ಲವೇ? ದೇವರ ಹೆಸರಲ್ಲಿ ದೇವಸ್ಥಾನಗಳಲ್ಲಿ ನಡೆಯುವ ಸುಲಿಗೆಗೆ ಮೊದಲು ಕಡಿವಾಣ ಹಾಕಬೇಕಿದೆ. ದೇವಾಲಯಗಳ ಆಡಳಿತ ಮಂಡಳಿಯ ಧನದಾಹವನ್ನು ನಿಯಂತ್ರಿಸಬೇಕಿದೆ. ಅರ್ಚಕರಿಂದಾಗುವ ವಸೂಲಾತಿಯನ್ನು ನಿಲ್ಲಿಸಬೇಕಿದೆ. 

‘ದೇವಾಲಯಗಳಿಂದ ಬಂದ ಆದಾಯವನ್ನು ಅರ್ಚಕರ ಅನುಕೂಲಕ್ಕೆ ಬಳಸಲಾಗುತ್ತದೆ’ ಎಂದು ಸರಕಾರ ಹೇಳುತ್ತದೆ. ಭಕ್ತಾದಿಗಳು ಹಣ ಕೊಡುವುದು ದೇವರಿಗೆ ಹೊರತು ಮಧ್ಯವರ್ತಿಗಳಾದ ಅರ್ಚಕರಿಗಲ್ಲ. ಅರ್ಚಕರಿಗೆ ಸಂಬಳವನ್ನೂ ಕೊಡಲಾಗುತ್ತದೆ ಹಾಗೂ ಸಂಬಳಕ್ಕಿಂತಲೂ ತಟ್ಟೆಕಾಸು ಕಾಣಿಕೆಯೇ ಬೇಕಾದಷ್ಟು ಸಿಕ್ಕುತ್ತದೆ. ಭಕ್ತಾದಿಗಳ ಮನೆಗೆ ಹೋಗಿ ಪೂಜೆ ಹೋಮ ಹವನ ಮಾಡುವ ಹಣವೆಲ್ಲಾ ಪೂಜಾರಿಗಳದ್ದೇ. ಆದರೂ ಕೆಲವು ಬಡ ಅರ್ಚಕರಿದ್ದಾರೆ. ಅವರನ್ನು ದೇವಸ್ಥಾನದ ಆಡಳಿತ ಮಂಡಳಿ ಶೋಷಣೆ ಮಾಡುತ್ತದೆ. ತಟ್ಟೆಕಾಸನ್ನೂ ವಸೂಲಿ ಮಾಡಿಕೊಳ್ಳುತ್ತದೆ. 

ಕೋಟ ಶ್ರೀನಿವಾಸ ಪೊಜಾರಿ

ಹೋಗಲಿ ಮುಜರಾಯಿ ಇಲಾಖೆಗೆ ವಾರ್ಷಿಕವಾಗಿ ದೇವಸ್ಥಾನಗಳಿಂದ ಬರಬಹುದಾದ ಆದಾಯದ ಪಾಲು 30 ಕೋಟಿಯಾದರೆ ಸರಕಾರ ಪ್ರತಿ ದೇವಸ್ಥಾನಗಳ ಅರ್ಚಕರಿಗೆ ಕೊಡುವ ಸಂಬಳವೇ 133 ಕೋಟಿ. ಪ್ರತಿ ದೇವಸ್ಥಾನದ ನಿರ್ವಹಣೆಗೆ ವಾರ್ಷಿಕವಾಗಿ 48 ಸಾವಿರ ಹಣ ಕೊಡಲಾಗುತ್ತದೆ. ಪ್ರಭಾವಶಾಲಿ ದೇವಸ್ಥಾನಗಳಿಗೆ ವಾರ್ಷಿಕವಾಗಿ ನೂರಾರು ಕೋಟಿ ಅನುದಾನವನ್ನೂ ಕೊಡಲಾಗುತ್ತದೆ. ಮಠಗಳಿಗೆ ಕೊಡುವ ಅನುದಾನಗಳಿಗೇನೂ ಬರ ಇಲ್ಲ. ಹಾಗಾದರೆ ಈ ಹೆಚ್ಚುವರಿ ಅನುದಾನದ ಹಣ ಎಲ್ಲಾ ಧರ್ಮೀಯರು ಸರಕಾರಕ್ಕೆ ಕಟ್ಟಿದ ತೆರಿಗೆಯಿಂದ ಬಂದಿದ್ದಲ್ಲವೇ?. ಎಲ್ಲಾ ದೇವಸ್ಥಾನಗಳಿಂದ ಬರುವ ಆದಾಯ ಕೇವಲ ಅರ್ಚಕರ ಸಂಬಳಕ್ಕೆ ಸಾಲದು. ಹೀಗಿರುವಾಗ ದೇವಸ್ಥಾನಗಳ ಆದಾಯವನ್ನು ದೇವಸ್ಥಾನಗಳಿಗೆ ಬಳಸಬೇಕು ಎನ್ನುವುದಾದರೆ ಅದನ್ನು ಹೊರತು ಪಡಿಸಿ ಜನರ ತೆರಿಗೆ ಹಣವನ್ನು ಯಾಕೆ ದೇವಸ್ಥಾನಗಳಿಗೆ ಕೊಡಲಾಗುತ್ತದೆ? 

“ಅಯ್ಯೋ ಹಿಂದೂ ದೇವಸ್ಥಾನಗಳ ಆದಾಯದ ಹಣವನ್ನು ಅನ್ಯಧರ್ಮೀಯರ ಆರಾಧನಾಲಯಗಳಿಗೆ ಕೊಡಲಾಗುತ್ತದೆ” ಎಂದು ಸಂಘಿಗಳು ಧರ್ಮದ್ವೇಷವನ್ನು ಬಿತ್ತುತ್ತಲೇ ಇರುತ್ತಾರಲ್ಲಾ.. ದೇವಾಲಯಗಳಿಂದ ಬರುವ ಆದಾಯದ ಪಾಲು ಅರ್ಚಕರಿಗೆ ಸಾಲದಾಗಿರುವಾಗ ಬೇರೆಯವರಿಗೆ ಎಲ್ಲಿಂದ ಕೊಡುವುದು?. ತೆರಿಗೆಯನ್ನು ಕೇವಲ ಹಿಂದೂಗಳಿಂದ ಮಾತ್ರ ವಸೂಲಿ ಮಾಡಲಾಗುತ್ತದಾ? ಎಲ್ಲಾ ಧರ್ಮೀಯರೂ ಪ್ರತ್ಯಕ್ಷ ಹಾಗೂ ಪರೋಕ್ಷ ತೆರಿಗೆ ಕಟ್ಟುತ್ತಾರಲ್ಲವಾ? ತೆರಿಗೆ ಹಣದಲ್ಲಿ ಹಿಂದೂ ದೇವಸ್ಥಾನಗಳಿಗೆ ಅನುದಾನ ಕೊಡುವ ಹಾಗೆ ಮಸೀದಿ ಚರ್ಚುಗಳಿಗೂ ಕೊಟ್ಟರೆ ತಪ್ಪೇನು? ಈ ಸಂಗತಿಯನ್ನು ಈ ಸರಕಾರ ಮನವರಿಕೆ ಮಾಡಿಕೊಡುತ್ತಿಲ್ಲ. ಸಂಘಿಗಳು ಧರ್ಮದ್ವೇಷವನ್ನು ಹೆಚ್ಚಿಸುವುದು ತಪ್ಪುವುದಿಲ್ಲ. 

ಹೋಗಲಿ ಪ್ರತಿಯೊಂದಕ್ಕೂ ಸರಕಾರ ತೆರಿಗೆ ವಸೂಲಿ ಮಾಡುತ್ತದೆ. ಆದಾಯ ತೆರಿಗೆ, ಸೇವಾ ತೆರಿಗೆ, ಕಮರ್ಷಿಯಲ್ ಟ್ಯಾಕ್ಸ್, ಜಿಎಸ್ಟಿ, ಸೆಸ್ ಅದೂ ಇದೂ ಅಂತಾ ಎಲ್ಲದಕ್ಕೂ ತೆರಿಗೆ ಇದ್ದೇ ಇದೆ. ಆದರೆ ದೇವಸ್ಥಾನಗಳನ್ನು ಯಾಕೆ ಈ ತೆರಿಗೆಯ ವ್ಯಾಪ್ತಿಯಿಂದ ಹೊರಗಿಡಲಾಗಿದೆ? ದೇವಸ್ಥಾನಗಳು ಭಕ್ತರಿಗೆ ಸೇವೆಯನ್ನು ಒದಗಿಸಿದರೆ ಸೇವಾ ತೆರಿಗೆ, ಆದಾಯ ಗಳಿಸಿದರೆ ಆದಾಯ ತೆರಿಗೆ ಯಾಕೆ ವಿಧಿಸುವುದಿಲ್ಲ?. ಮಠ ಮಾನ್ಯಗಳೂ ಸಹ ತೆರಿಗೆ ಕಟ್ಟುವ ಹಾಗಿಲ್ಲ. ಇದು ಅನ್ಯಾಯವಲ್ಲವೇ? ಯಾರಾದರೂ ಬೆಲೆಬಾಳುವ ಗಿಫ್ಟ್ ಕೊಂಡರೂ ಕೊಟ್ಟರೂ ತೆರಿಗೆ ಕಟ್ಟಲೇಬೇಕು, ಸರಕಾರಕ್ಕೆ ಲೆಕ್ಕ ಒಪ್ಪಿಸಲೇಬೇಕು. ಆದರೆ ಭಕ್ತಾದಿಗಳು ದೇವಸ್ಥಾನಕ್ಕೆ ಕೊಡುವ ಕಾಣಿಕೆಗೆ ದೇವಸ್ಥಾನಗಳು ಯಾಕೆ ಲೆಕ್ಕ ಕೊಡುವಂತಿಲ್ಲ. ಬೇರೆ ಬೇರೆ ಬಾಬ್ತುಗಳಿಂದ ದೇವಾಲಯಗಳಿಗೆ ಬರುವ ಆದಾಯಕ್ಕೆ ಯಾಕೆ ತೆರಿಗೆ ವಿಧಿಸುತ್ತಿಲ್ಲ?. ಚರ್ಚು ಮಸೀದಿ ಮಂದಿರ ಯಾವುದೇ ಇರಲಿ ಎಲ್ಲವನ್ನೂ ತೆರಿಗೆ ವ್ಯಾಪ್ತಿಗೆ ತರಬೇಕಲ್ಲವೇ? ಹೀಗೇನಾದರೂ ಪ್ರಶ್ನಿಸಿದವರು ದೈವದ್ರೋಹಿಗಳೆಂದು ನಿಂದಿಸಲ್ಪಡುತ್ತಾರೆ. ಧರ್ಮದ್ರೋಹಿ ಎಂದು ಹಲ್ಲೆಗೆ ಒಳಗಾಗುತ್ತಾರೆ. ಅದಕ್ಕಾಗಿ ಯಾರೂ ಪ್ರಶ್ನಿಸುತ್ತಿಲ್ಲ. ದೇವರ ದಲ್ಲಾಳಿಗಳ ವಸೂಲಾತಿಗೆ ಕೊನೆಮೊದಲಿಲ್ಲ. 

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು   

ಇದನ್ನೂ ಓದಿ-http://“ನವಶತಮಾನವೂ, ನವೀನ ಸಂಬಂಧಗಳೂ” https://kannadaplanet.com/new-century-new-relationships/

More articles

Latest article