Saturday, December 7, 2024

ಇನ್ನುಮುಂದೆ ರಾಜ್ಯದಲ್ಲಿ ಬಿಡಿಯಾಗಿ ಸಿಗರೇಟ್ ಮಾರಾಟ ಮಾಡುವಂತಿಲ್ಲ: ರಾಜ್ಯ ಸರ್ಕಾರ

Most read

ಬಿಡಿಯಾಗಿ ಸಿಗರೇಟ್ ಮಾರಾಟಕ್ಕೆ ನಿರ್ಬಂಧ ಹಾಗೂ ಹುಕ್ಕಾ ಬಾರ್ ಸಂಪೂರ್ಣ ನಿಷೇಧ ಅಂಶವನ್ನೊಳಗೊಂಡ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ವನ್ನು ವಿಧಾನ ಪರಿಷತ್ ಅಂಗೀಕರಿಸಿತು.

ವಿಧಾನ ಪರಿಷತ್ ಶಾಸನ ರಚನಾ ಕಲಾಪದಲ್ಲಿ ವಿಧಾನಸಭೆಯಿಂದ ಅಂಗೀಕೃತ ರೂಪದಲ್ಲಿದ್ದ ಸಿಗರೇಟುಗಳ ಮತ್ತು ತಂಬಾಕು ಉತ್ಪನ್ನಗಳ (ಜಾಹೀರಾತು ನಿಷೇಧ ಮತ್ತು ವ್ಯಾಪಾರ ಮತ್ತು ವಾಣಿಜ್ಯ, ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ) ವಿಧೇಯಕ-2024 ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಂಡಿಸಿದರು.

ವಿಧೇಯಕದ ಕುರಿತು ವಿವರಣೆ ನೀಡಿದ ಸಚಿವರು, ಹುಕ್ಕಾಬಾರ್ ಸಂಪೂರ್ಣ ನಿಷೇಧ ಮತ್ತು ಸಿಗರೇಟ್ ಮಾರಾಟ ವಯಸ್ಸು 18 ರಿಂದ 21 ಕ್ಕೆ ಹೆಚ್ಚಳ, ಶಾಲಾ ಕಾಲೇಜುಗಳ ವ್ಯಾಪ್ತಿಯಿಂದ ಬೀಡಿ ಸಿಗರೇಟ್ ಮಾರಾಟಕ್ಕೆ ಇರುವ ನಿರ್ಭಂಧವನ್ನು ನೂರು ಯಾರ್ಡ್ ಬದಲು ನೂರು ಮೀಟರ್ ಎಂದು ಬದಲಿಸಲಾಗಿದೆ. ಸಿಂಗಲ್ ಸಿಗರೇಟ್ ಮಾರಾಟಕ್ಕೆ ನಿರ್ಬಂಧಿಸಿದ್ದು, ಪ್ಯಾಕ್ ಲೆಕ್ಕದಲ್ಲಿ ಖರೀದಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದಿದಲ್ಲಿ ಇದ್ದ ದಂಡದ ಮೊತ್ತ 200 ರೂ. ಅನ್ನು 1000 ರೂ.ಗೆ ಹೆಚ್ಚಳ ಮಾಡಿದ್ದು, ನಿರ್ಬಂಧವಿದ್ದರೂ ಅಕ್ರಮವಾಗಿ ಹುಕ್ಕಾ ಬಾರ್ ನಡೆಸಿದರೆ 1-3 ವರ್ಷದವರೆಗೆ ಕಾರಾಗೃಹ ಶಿಕ್ಷೆ ಹಾಗೂ 50 ಸಾವಿರದಿಂದ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಲಾಗುತ್ತದೆ ಎನ್ನುವ ಅಂಶವನ್ನು ವಿಧೇಯಕದಲ್ಲಿ ಸೇರಿಸಲಾಗಿದೆ ಎಂದರು.

More articles

Latest article