ಚಿಕ್ಕಮಗಳೂರು : ನೀಟ್ ವಿವಾದಕ್ಕೆ ಸಂಬಂಧಿಸಿದಂತೆ ನಡೆದ ಬಿಜೆಪಿ ಪ್ರತಿಭಟನೆಯೊಂದರಲ್ಲಿ ದ್ವೇಷಪೂರಿತ ಭಾಷಣ ಮಾಡಿದ ಆರೋಪದ ಮೇಲೆ, ಶುಕ್ರವಾರದಂದು ಬಿಜೆಪಿ ನಾಯಕ ಸಿ.ಟಿ. ರವಿ ಅವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ದೂರಿನ ಪ್ರಕಾರ, ಚಿಕ್ಕಮಗಳೂರು ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ರವಿ ಅವರು, ಜುಲೈ 23 ರಂದು ಆಜಾದ್ ಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ನೀಟ್ ಪರೀಕ್ಷೆಯ ಅಕ್ರಮಗಳ ಆರೋಪದ ಕುರಿತು ನಡೆದ ಪ್ರತಿಭಟನೆಯ ಸಂದರ್ಭದಲ್ಲಿ, “ಒಬ್ಬ ಮುಲ್ಲಾನ ಎದೆಯನ್ನು ಸೀಳಿದರೂ, ಅದರಲ್ಲಿ ಮೂರು ಅಕ್ಷರಗಳು (ಶಿಕ್ಷಣ) ಸಿಗುವುದಿಲ್ಲ” ಎಂದು ಅವರು ಹೇಳಿಕೆ ನೀಡಿದ್ದರು.
ಚಿಕ್ಕಮಗಳೂರಿನ ಜಾಮಿಯಾ ಮಸೀದಿಯ ಅಧ್ಯಕ್ಷರಾದ ಮುದಾಸೀರ್ ಪಾಷಾ ಅವರು ಈ ದೂರು ದಾಖಲಿಸಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ (CAA), ರಾಷ್ಟ್ರೀಯ ಪೌರತ್ವ ನೋಂದಣಿ ಮತ್ತು ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ಕುರಿತು ಪ್ರಸ್ತಾಪಿಸುವಾಗ ರವಿ ಅವರು ಮುಸ್ಲಿಮರನ್ನು “ತುಕ್ಡೆ ಗ್ಯಾಂಗ್” ಎಂದು ಕರೆದಿದ್ದಾರೆ ಎಂದು ಪಾಷಾ ಆರೋಪಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡಿದ ಈ ಭಾಷಣವು ಮುಸ್ಲಿಂ ಸಮುದಾಯದ ವಿರುದ್ಧ ಅವಹೇಳನಕಾರಿ ಉಲ್ಲೇಖಗಳನ್ನು ಒಳಗೊಂಡಿತ್ತು ಹಾಗೂ ಇದು ದ್ವೇಷವನ್ನು ಉತ್ತೇಜಿಸುವ, ಕೋಮು ಸೌಹಾರ್ದತೆಯನ್ನು ಕದಡುವ ಮತ್ತು ಸಮುದಾಯಗಳ ನಡುವೆ ಸಂಘರ್ಷವನ್ನು ಉಂಟುಮಾಡುವ ಉದ್ದೇಶವನ್ನು ಹೊಂದಿತ್ತು ಎಂದು ಹೇಳಲಾಗಿದೆ.
ಧರ್ಮ, ಜನಾಂಗ, ಭಾಷೆ, ಜಾತಿ ಅಥವಾ ಸಮುದಾಯದ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷ, ವೈಷಮ್ಯ ಅಥವಾ ಶತ್ರುತ್ವವನ್ನು ಉಂಟುಮಾಡುವ ಅಥವಾ ಉತ್ತೇಜಿಸುವ ಉದ್ದೇಶದಿಂದ ಸುಳ್ಳು ಹೇಳಿಕೆಗಳು, ವದಂತಿಗಳು ಅಥವಾ ವರದಿಗಳನ್ನು ಸೃಷ್ಟಿಸುವುದು, ಪ್ರಕಟಿಸುವುದು ಅಥವಾ ಹರಡುವುದು, ಹಾಗೂ ಸಾರ್ವಜನಿಕ ಶಾಂತಿಗೆ ಭಂಗ ತರುವಂತಹ ಕೃತ್ಯಗಳನ್ನು ಎಸಗಿದ ಆರೋಪದ ಮೇಲೆ ಚಿಕ್ಕಮಗಳೂರು ನಗರ ಪೊಲೀಸರು ರವಿ ವಿರುದ್ಧ ಪ್ರಥಮ ಮಾಹಿತಿ ವರದಿಯನ್ನು (ಎಫ್‌ಐಆರ್) ದಾಖಲಿಸಿದ್ದಾರೆ.
ಏತನ್ಮಧ್ಯೆ, ಶನಿವಾರ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ‘ಕರ್ನಾಟಕ ರಾಜ್ಯ ಮುಸ್ಲಿಂ ಒಕ್ಕೂಟ’ವು ರವಿ ಅವರ ಹೇಳಿಕೆಗಳನ್ನು “ಆಘಾತಕಾರಿ ಮತ್ತು ತೀವ್ರ ಪ್ರಚೋದನಕಾರಿ” ಎಂದು ಬಣ್ಣಿಸಿದ್ದು, ಅವರನ್ನು ತಕ್ಷಣವೇ ಬಂಧಿಸುವಂತೆ ಆಗ್ರಹಿಸಿದೆ.

