ಮಂಗಳೂರು : ಹಿರಿಯ ಪತ್ರಕರ್ತ, ಚಿಂತಕ, ದಲಿತ್ ವಾಯ್ಸ್ ನಿಯತಕಾಲಿಕದ ಸ್ಥಾಪಕ ಸಂಪಾದಕ ವಿ ಟಿ ರಾಜಶೇಖರ್ (93) ಅವರು ಬುಧವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಅವರು ಕೆಲವು ವರ್ಷಗಳಿಂದ ಮಂಗಳೂರಿನ ಶಿವಭಾಗ್ ನಲ್ಲಿ ನಿವೃತ್ತ ಜೀವನ ನಡೆಸುತ್ತಿದ್ದರು. ಇತ್ತೀಚಿನ ಕೆಲವು ತಿಂಗಳಿನಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಜುಲೈ 17, 1932 ರಂದು ಉಡುಪಿ ಜಿಲ್ಲೆಯ ವೊಂಟಿಬೆಟ್ಟುವಿನಲ್ಲಿ ಜನಿಸಿದ ವಿಟಿಆರ್ ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಎರಡು ದಶಕಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿದ್ದರು. ನಂತರ ಅವರು ದಲಿತರ ಧ್ವನಿಯಾಗಿ ಕೆಲಸ ಮಾಡಲು ಆರಂಭಿಸಿ 1981 ರಲ್ಲಿ ದಲಿತ್ ವಾಯ್ಸ್ ನಿಯತಕಾಲಿಕ ಪ್ರಾರಂಭಿಸಿದ್ದರು. ದೇಶಾದ್ಯಂತ ದಲಿತ್ ವಾಯ್ಸ್ ಹಾಗು ಅದರಲ್ಲಿ ಪ್ರಕಟಿತ ಅವರ ಬರಹಗಳು ಭಾರೀ ಚರ್ಚೆಗೆ ಕಾರಣವಾಗುತ್ತಿದ್ದವು.
ಮೀಸಲಾತಿ ಹಾಗು ದಲಿತರ ಹಕ್ಕುಗಳ ಪ್ರಬಲ ಪ್ರತಿಪಾದಕರಾಗಿದ್ದ ರಾಜಶೇಖರ್ ಅವರು ಬ್ರಾಹ್ಮಣ್ಯ ಹಾಗು ಸಂಘ ಪರಿವಾರದ ಕಟು ಟೀಕಾಕಾರರಾಗಿದ್ದರು. ಹಲವು ಮಹತ್ವದ ಕೃತಿಗಳನ್ನು ರಚಿಸಿರುವ ವಿ ಟಿ ರಾಜಶೇಖರ್ ಅವರು ರಾಷ್ಟ್ರೀಯ, ಅಂತರ್ ರಾಷ್ಟ್ರೀಯ ಪ್ರಶಸ್ತಿ, ಗೌರವಗಳಿಗೆ ಪಾತ್ರರಾಗಿದ್ದರು. ರಾಜಶೇಖರ್ ಅವರ ಪತ್ನಿ ಈ ಹಿಂದೆಯೇ ನಿಧನರಾಗಿದ್ದು, ಪುತ್ರ ಸಲೀಲ್ ಶೆಟ್ಟಿ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಸಂಘಟನೆಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ರಾಜಶೇಖರ್ ಅವರ ಅಂತಿಮ ಸಂಸ್ಕಾರ ಉಡುಪಿಯ ಓಂತಿಬೆಟ್ಟುವಿನಲ್ಲಿ ಇಂದು ನಡೆಯಿತು.
ಇವರ ನಿಧನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಅನೇಕ ಗಣ್ಯರು ಕಂಬನಿ ಮಿಡಿದಿದ್ದಾರೆ.