ಮತದಾರರ ಪ್ರಜಾಪ್ರತಿನಿಧಿಗಳಾದ ಶಾಸಕರ ಅಭಿಪ್ರಾಯವನ್ನೂ ಕೇಳದೆ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಹೈಕಮಾಂಡ್ ಮಾಡಿದ್ದೇ ಸಂವಿಧಾನ ವಿರೋಧಿ ಕೃತ್ಯ. ಈಗ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದರೂ ಪಕ್ಷದ ಪ್ರತಿಯೊಬ್ಬ ಶಾಸಕರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಿ ಬಹುಮತ ಇದ್ದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಅದನ್ನೂ ಮಾಡದೆ ಇಂತವರು ಬೇಡಾ, ಇಂತವರು ಇರಲಿ ಎಂದು ಹೈಕಮಾಂಡ್ ನಿರ್ಧರಿಸಿದ್ದು ರಾಜ್ಯದ ಮೇಲೆ ಹೇರಲಾದ ಹೇರಿಕೆಯಾಗಿದೆ. ಶಾಸಕರ ಹಕ್ಕಿನ ಉಲ್ಲಂಘನೆಯಾಗಿದೆ. ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು
“ಹೈಕಮಾಂಡ್ ಹೇಳಿದ್ದಕ್ಕೆ ಸ್ವ ಇಚ್ಛೆಯಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ” ಎಂದು ಮೇ 28 ರ ತಮ್ಮ ವಿದಾಯ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯನವರು ಹೇಳಿದರು. ಹೈಕಮಾಂಡ್ ಆದೇಶದಿಂದಾಗಿ ರಾಜೀನಾಮೆ ಕೊಟ್ಟಿದ್ದೇ ಆಗಿದ್ದರೆ ಇದರಲ್ಲಿ ಸ್ವ ಇಚ್ಚೆ ಎಲ್ಲಿ ಬಂತು? ಸಿದ್ದರಾಮಯ್ಯನವರ ವರ್ತನೆ, ನಡೆ ನುಡಿ ಗಮನಿಸಿದರೆ ಇಷ್ಟ ಪಟ್ಟು ರಾಜೀನಾಮೆ ಕೊಟ್ಟಿದ್ದಾರೆಂದು ಅನ್ನಿಸುತ್ತಿಲ್ಲ. ರಾಹುಲ್ ಗಾಂಧಿಯವರ ಒತ್ತಾಯಕ್ಕೆ ಮಾನ್ಯತೆ ಕೊಟ್ಟು ಪಟ್ಟವನ್ನು ಬಿಟ್ಟು ಕೊಟ್ಟಿರುವುದು ನೂರಕ್ಕೆ ನೂರು ಸತ್ಯ.
2023 ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವವಾದ ಬಹುಮತದಿಂದ ಆಯ್ಕೆಯಾಗಿತ್ತು. ಆ ಯಶಸ್ಸಿನ ಹಿಂದೆ ಮಾನ್ಯ ಸಿದ್ದರಾಮಯ್ಯನವರ ಮಾಸ್ ಇಮೇಜ್ ಹಾಗೂ ಮಾನ್ಯ ಡಿ.ಕೆ.ಶಿವಕುಮಾರರವರ ಸಂಘಟನಾ ಸಾಮರ್ಥ್ಯ ಇತ್ತು. ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರ ನಡುವೆ ಪೈಪೋಟಿ ಏರ್ಪಟ್ಟಿತ್ತು. ಆಗ ಕಾಂಗ್ರೆಸ್ ಹೈಕಮಾಂಡ್ ಎರಡೂವರೆ ವರ್ಷ ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾಗಿರಲಿ ಹಾಗೂ ಬಾಕಿ ಎರಡೂವರೆ ವರ್ಷ ಡಿಕೆ ಶಿವಕುಮಾರರವರು ಸಿಎಂ ಆಗಲಿ ಎನ್ನುವ ಒಪ್ಪಂದಕ್ಕೆ ಇಬ್ಬರನ್ನೂ ಒಪ್ಪಿಸಿತ್ತು. ಆದರೆ ಈ ಮೌಖಿಕ ಒಪ್ಪಂದ ಈ ಇಬ್ಬರ ಹೊರತಾಗಿ ರಾಹುಲ್ ಗಾಂಧಿಯವರು ಹಾಗೂ ಮಲ್ಲಿಕಾರ್ಜುನ ಖರ್ಗೆಯವರಿಗೆ ಮಾತ್ರ ಗೊತ್ತಿತ್ತು. ಯಾರೂ ಈ ವಿಷಯದ ಬಗ್ಗೆ ಅಧಿಕೃತವಾಗಿ ಹೇಳದೇ ಹೋದರೂ ಪವರ್ ಶೇರಿಂಗ್ ಡೀಲ್ ಕುರಿತು ಚರ್ಚೆ ನಡೆಯುತ್ತಲೇ ಇತ್ತು. ಸಿದ್ದರಾಮಯ್ಯನವರು ಹಾಗೂ ಡಿಕೆಶಿ ಯವರು ನಿರಾಕರಿಸಿದರೂ ಬಿಜೆಪಿ ಹಾಗೂ ಜೆಡಿಎಸ್ ನಾಯಕರುಗಳು ಕುರ್ಚಿ ಕದನ ಎಂದು ಆರಂಭದಿಂದಲೂ ಬಹಿರಂಗವಾಗಿ ಆರೋಪಿಸ ತೊಡಗಿದರು.
ಹಾಗೂ ಹೀಗೂ ಎರಡೂವರೆ ವರ್ಷದ ಅವಧಿ ಮುಗಿದ ನಂತರ ಉಪಮುಖ್ಯಮಂತ್ರಿಗಳಾದ ಡಿಕೆಶಿ ಯವರು ತಮ್ಮ ಪ್ರಯತ್ನ ಮುಂದುವರೆಸಿದರು. ಹೈಕಮಾಂಡ್ ಮೇಲೆ ಒತ್ತಡ ತರತೊಡಗಿದರು. ಮಾಡಿದ ಕೆಲಸಕ್ಕೆ ಕೂಲಿ ಕೊಡಿ ಎಂದು ಕೇಳತೊಡಗಿದರು. ಒತ್ತಡ ಹೆಚ್ಚಾಗುತ್ತಿದ್ದಂತೆ ಕಾಂಗ್ರೆಸ್ ಅಧ್ಯಕ್ಷರಾದ ಖರ್ಗೆಯವರು ‘ ಒಟ್ಟಾಗಿ ಕೂತು ನೀವು ನೀವೇ ಬಗೆಹರಿಸಿಕೊಳ್ಳಿ’ ಎಂದರು. ಆ ಪ್ರಯತ್ನವು ವಿಫಲವಾಯ್ತು. ರಾಹುಲ್ ಗಾಂಧಿಯವರು ಡಿಕೆ ಶಿವಕುಮಾರರವರಿಗೆ ಭೇಟಿಯಾಗಲು ಅವಕಾಶವನ್ನೇ ಕೊಡಲಿಲ್ಲ. ರಾಜ್ಯದ ಅಧಿವೇಶನ, ಬಜೆಟ್ ಮಂಡನೆ, ಪಂಚ ರಾಜ್ಯಗಳ ಚುನಾವಣೆ ಎನ್ನುವ ಕಾರಣಗಳನ್ನು ಮುಂದೊಡ್ಡಿ ಮತ್ತೆ ಆರು ತಿಂಗಳು ಅಧಿಕಾರ ಹಸ್ತಾಂತರ ಒಪ್ಪಂದವನ್ನು ಮುಂದೂಡುತ್ತಲೇ ಬರಲಾಯ್ತು. ಆದರೆ ಶಿವಕುಮಾರರವರು ತಮ್ಮ ಪ್ರಯತ್ನ ಬಿಡಲಿಲ್ಲ. ಪ್ರಯತ್ನ ಹಾಗೂ ಟೆಂಪಲ್ ರನ್ ಪ್ರಾರ್ಥನೆ ಎರಡನ್ನೂ ಜಾರಿಯಲ್ಲಿಟ್ಟಿದ್ದರು. ಆಗಾಗ ಒಪ್ಪಂದದ ಬಗ್ಗೆ ಕರ್ನಾಟಕದ ಉಸ್ತುವಾರಿ ಸುರ್ಜೆವಾಲ ಅವರ ಮೂಲಕ ಹೈಕಮಾಂಡಿಗೆ ನೆನಪಿಸುತ್ತಲೇ ಇದ್ದರು. ಕೆಪಿಸಿಸಿ ಕಾರ್ಯದರ್ಶಿಗಳಾದ ವೇಣುಗೋಪಾಲರವರ ಮೇಲೆ ಒತ್ತಡ ಹಾಕತೊಡಗಿದರು. ಡಿಕೆಶಿ ಯವರ ಗಾಡ್ ಮದರ್ ಆಗಿರುವ ಸೋನಿಯಾ ಗಾಂಧಿಯವರನ್ನೂ ಆಗ್ರಹಿಸತೊಡಗಿದರು.

ಕೊನೆಗೂ ಕಾಂಗ್ರೆಸ್ ಹೈಕಮಾಂಡ್ ಅತಿಯಾದ ಒತ್ತಡಕ್ಕೆ ಮಣಿಯಲೇ ಬೇಕಾಯ್ತು. ಸಿದ್ದರಾಮಯ್ಯನವರ ತಲೆದಂಡ ನಿರ್ಧಾರವಾಯ್ತು. ಯಾವಾಗ ತಮ್ಮ ಪದಚ್ಯುತಿ ಬಗ್ಗೆ ರಾಹುಲ್ ಗಾಂಧಿಯವರು ಸೂಚಿಸಿದರೋ ಆಗ ಸಿದ್ದರಾಮಯ್ಯನವರು ಪ್ರತಿರೋಧಿಸಲಿಲ್ಲ. ತಾನೇ ಮುಂದುವರೆಯುವುದಾಗಿ ಹಠ ಮಾಡಲಿಲ್ಲ. ಶಾಸಕರು ಹಾಗೂ ಸಚಿವರುಗಳ ಅಭಿಪ್ರಾಯ ಕೇಳಿ ರಾಜೀನಾಮೆ ಕುರಿತು ನಿರ್ಧರಿಸುವೆ ಎಂದೂ ಹೇಳಲಿಲ್ಲ. “ನೀವು ಹೇಳಿದ ಮೇಲೆ ಆಯ್ತು” ಎಂದು ರಾಹುಲ್ ರವರಿಗೆ ತಿಳಿಸಿ ಬೆಂಗಳೂರಿಗೆ ಬಂದವರು ಮಾರನೆಯ ದಿನ ರಾಜ್ಯಪಾಲರ ಲೋಕಭವನಕ್ಕೆ ತೆರಳಿ ರಾಜ್ಯಪಾಲರ ಕಾರ್ಯದರ್ಶಿಗಳಿಗೆ ತಮ್ಮ ರಾಜೀನಾಮೆ ಸಲ್ಲಿಸಿ ʼತ್ಯಾಗರಾಮಯ್ಯʼ ಎಂದೆನಿಸಿಕೊಂಡರು.
ರಾಜೀನಾಮೆ ನಂತರ ನಡೆದ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯನವರು “ಸಂವಿಧಾನವೇ ನನ್ನ ಧರ್ಮ, ಮತದಾರರೇ ನನ್ನ ದೇವರು” ಎಂದು ಹೇಳಿದರು. ಆದರೆ ಅದರಂತೆ ನಡೆದುಕೊಂಡರಾ?
ಸಂವಿಧಾನದಲ್ಲಿ ಹೈಕಮಾಂಡ್ ಎನ್ನುವುದಕ್ಕೆ ಯಾವುದೇ ಅಸ್ತಿತ್ವವಿಲ್ಲ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ವಿದ್ಯಮಾನಗಳನ್ನು ಈ ಹೈಕಮಾಂಡ್ ಎನ್ನುವುದು ನಿಯಂತ್ರಿಸುತ್ತಲೇ ಬಂದಿದೆ. ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಇರಲಿ ಇಲ್ಲವೇ ಬಿಜೆಪಿ ಇರಲಿ, ಈ ಹೈಕಮಾಂಡ್ ಹೇರಿಕೆ ಸಂಸ್ಕೃತಿಯು ಆಯಾ ಪಕ್ಷದ ಆಡಳಿತವಿರುವ ರಾಜ್ಯಗಳ ಆಡಳಿತದ ಮೇಲೆ ಹಿಡಿತವನ್ನು ಸಾಧಿಸುತ್ತದೆ. ಇದಕ್ಕೆ ಕರ್ನಾಟಕವೂ ಹೊರತಲ್ಲ.
ಯಾರು ಮುಖ್ಯಮಂತ್ರಿ ಆಗಬೇಕು ಹಾಗೂ ಯಾವ ಮುಖ್ಯಮಂತ್ರಿ ಬದಲಾಗಬೇಕೆಂಬುದು ಸಂವಿಧಾನದ ಪ್ರಕಾರ ಶಾಸಕರ ಬಹುಮತದ ಆಯ್ಕೆಯಾಗಿರುತ್ತದೆ. ಮತದಾರರ ಪ್ರಜಾಪ್ರತಿನಿಧಿಗಳಾದ ಶಾಸಕರ ಅಭಿಪ್ರಾಯವನ್ನೂ ಕೇಳದೆ ಅಧಿಕಾರ ಹಂಚಿಕೆಯ ಒಪ್ಪಂದವನ್ನು ಹೈಕಮಾಂಡ್ ಮಾಡಿದ್ದೇ ಸಂವಿಧಾನ ವಿರೋಧಿ ಕೃತ್ಯ. ಈಗ ಮುಖ್ಯಮಂತ್ರಿಯನ್ನು ಬದಲಾಯಿಸಬೇಕಾದರೂ ಪಕ್ಷದ ಪ್ರತಿಯೊಬ್ಬ ಶಾಸಕರ ಅನಿಸಿಕೆ ಅಭಿಪ್ರಾಯಗಳನ್ನು ಕೇಳಿ ಬಹುಮತ ಇದ್ದವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಬೇಕಿತ್ತು. ಅದನ್ನೂ ಮಾಡದೆ ಇಂತವರು ಬೇಡಾ, ಇಂತವರು ಇರಲಿ ಎಂದು ಹೈಕಮಾಂಡ್ ನಿರ್ಧರಿಸಿದ್ದು ರಾಜ್ಯದ ಮೇಲೆ ಹೇರಲಾದ ಹೇರಿಕೆಯಾಗಿದೆ. ಶಾಸಕರ ಹಕ್ಕಿನ ಉಲ್ಲಂಘನೆಯಾಗಿದೆ. ಸಂವಿಧಾನಕ್ಕೆ ಮಾಡುವ ಅಪಚಾರವಾಗಿದೆ.
ಈಗ ಸಿದ್ದರಾಮಯ್ಯನವರಿಗೆ ಅತಿ ಹೆಚ್ಚು ಶಾಸಕರ ಬೆಂಬಲ ಇರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಅದನ್ನು ಕಡೆಗಣಿಸಿ ಅತೀ ಕಡಿಮೆ ಬೆಂಬಲಿತ ಶಾಸಕರನ್ನು ಹೊಂದಿರುವವರನ್ನು ಮುಖ್ಯಮಂತ್ರಿಯನ್ನಾಗಿ ಘೋಷಿಸುವುದು ಅಸಾಂವಿಧಾನಿಕ ಕ್ರಮ. ಮೊದಲಿನಿಂದಲೂ ಕಾಂಗ್ರೆಸ್ ಹೈಕಮಾಂಡ್ ಮುಖ್ಯಮಂತ್ರಿಗಳ ಬದಲಾವಣೆಯಲ್ಲಿ ಇಂತಹುದೇ ಅಸಾಂವಿಧಾನಿಕ ಕ್ರಮಗಳನ್ನು ಕೈಗೊಂಡಿದೆ. ಇದಕ್ಕೆ ಬಿಜೆಪಿ ಹೈಕಮಾಂಡೇನೂ ಹೊರತಲ್ಲ.
ಹೆಚ್ಚು ಶಾಸಕರ ಬೆಂಬಲ ಹೊಂದಿರುವ ಮುಖ್ಯಮಂತ್ರಿಯನ್ನು ಪದಚ್ಯುತಗೊಳಿಸಿದ್ದನ್ನು ಶಾಸಕರುಗಳು ಪ್ರಶ್ನಿಸಬಹುದಾಗಿತ್ತು, ಪ್ರಶ್ನಿಸಲಿಲ್ಲ. ತಮ್ಮ ಅಭಿಪ್ರಾಯ ಕೇಳದೇ ಮುಖ್ಯಮಂತ್ರಿಗಳನ್ನು ಬದಲಾಯಿಸಿದ್ದು ತಪ್ಪು ನಿರ್ಧಾರವೆಂದು ವಿರೋಧಿಸಬಹುದಾಗಿತ್ತು, ವಿರೋಧಿಸಲಿಲ್ಲ. ಹೈಕಮಾಂಡಿನ ಹೇರಿಕೆ ಸಂಸ್ಕೃತಿಯನ್ನು ಪ್ರತಿರೋಧಿಸಲಾಗದಷ್ಟು ಗುಲಾಮಿತನ ಶಾಸಕರಿಗೆ ಇರಬಾರದಿತ್ತು. ಶಾಸಕರ ಸಹಿ ಸಂಗ್ರಹ ಮಾಡೋಣವೆಂದು ಕೆಲವು ಶಾಸಕರು ಹೇಳಿದಾಗ ಸಿದ್ದರಾಮಯ್ಯನವರು ತಡೆಯಬಾರದಿತ್ತು.
ಏನೇ ಆದರೂ ಬಹುಸಂಖ್ಯಾತ ಶಾಸಕರ ಬೆಂಬಲ ಇರುವ ಸಿದ್ದರಾಮಯ್ಯನವರು ಹೈಕಮಾಂಡ್ ಸಂಸ್ಕೃತಿಗೆ ತಲೆಬಾಗಬಾರದಿತ್ತು. ಒಪ್ಪಂದ ಏನೇ ಇರಲಿ, ಶಾಸಕರ ಅಭಿಪ್ರಾಯದಂತೆ ನಡೆದುಕೊಳ್ಳುವೆ ಎಂದಾದರೂ ಹೇಳಬಹುದಾಗಿತ್ತು. ಅದನ್ನು ಹೇಳಲಿಲ್ಲ. ಶಾಸಕರ ಅಭಿಪ್ರಾಯ ಪಡೆಯಲು ಪ್ರಯತ್ನಿಸದೇ ಹೈಕಮಾಂಡ್ ನಿರ್ಧಾರಕ್ಕೆ ಒಪ್ಪಿ ರಾಜೀನಾಮೆ ಇತ್ತ ಮಾನ್ಯ ಸಿದ್ದರಾಮಯ್ಯನವರು “ಸಂವಿಧಾನವೇ ನನ್ನ ಧರ್ಮ” ಎಂದು ಹೇಳಿದ್ದರಲ್ಲಿ ಅರ್ಥವಿಲ್ಲ. ಮತದಾರರ ಜನಪ್ರತಿನಿಧಿಗಳಾದ ಶಾಸಕರ ಅಭಿಪ್ರಾಯವನ್ನೂ ಕೇಳದೇ ಪದತ್ಯಾಗ ಮಾಡಿದ್ದು “ಮತದಾರರೇ ನನ್ನ ದೇವರು” ಎಂದು ಹೇಳಿದ್ದು ಸೂಕ್ತವಲ್ಲ. ಹೀಗೆ ಧರ್ಮ ಮತ್ತು ದೇವರ ಅಭಿಪ್ರಾಯಕ್ಕೆ ಮಾನ್ಯತೆ ಕೊಡದೇ ಅಧಿಕಾರ ಬಿಟ್ಟುಕೊಟ್ಟಿದ್ದು ನೈತಿಕವಾಗಿ ಸಮರ್ಥನೀಯವಲ್ಲ.

ಇಷ್ಟಕ್ಕೂ ಈಗ ರಾಜೀನಾಮೆ ಕೊಡುವಂತಹ ಯಾವ ಗುರುತರ ಆರೋಪವೂ ಸಿದ್ದರಾಮಯ್ಯನವರ ಮೇಲಿರಲಿಲ್ಲ. ಶಾಸಕರು ಅವಿಶ್ವಾಸ ಮಂಡನೆ ಮಾಡಿರಲಿಲ್ಲ. ಉಪಚುನಾವಣೆಗಳಲ್ಲಿ ಪಕ್ಷಕ್ಕೆ ಹಿನ್ನಡೆಯೂ ಆಗಿರಲಿಲ್ಲ. ಹೀಗಿದ್ದರೂ ರಾಜೀನಾಮೆ ಕೊಟ್ಟಿದ್ದು ಬಹುಸಂಖ್ಯಾತ ಜನರ ಆಶೋತ್ತರಗಳಿಗೆ ಪೂರಕವಾಗಿಲ್ಲ.
ಯಾವುದೇ ಪ್ರತಿರೋಧ ಇಲ್ಲದೇ ಅಧಿಕಾರ ಬಿಟ್ಟುಕೊಟ್ಟು ತ್ಯಾಗರಾಮಯ್ಯ ಎನ್ನಿಸಿಕೊಂಡಿರಬಹುದು. ಅಧಿಕಾರ ಹಂಚಿಕೆ ಒಪ್ಪಂದಕ್ಕೆ ಕಟ್ಟುಬಿದ್ದು ನುಡಿದಂತೆ ನಡೆದಿದ್ದೇನೆ ಎಂದು ಹೇಳಿಕೊಳ್ಳಬಹುದು. ಅಪಾರವಾದ ಶಾಸಕರ ಬೆಂಬಲವಿದ್ದರೂ ಹೈಕಮಾಂಡ್ ಹೇಳಿದ್ದಕ್ಕೆ ಬದ್ಧತೆ ತೋರಿ ಪಕ್ಷನಿಷ್ಠ ಎಂದೆನ್ನಿಸಿಕೊಂಡಿರಬಹುದು. ಆದರೆ ಸಿದ್ದರಾಮಯ್ಯನವರ ನಾಯಕತ್ವವನ್ನು ನಂಬಿ ಮತ ಹಾಕಿದ ಜನರಿಗೆ ಭ್ರಮನಿರಸ ಮಾಡಿದ್ದಂತೂ ಸತ್ಯ. ಸಿದ್ದರಾಮಯ್ಯನವರು ತಮ್ಮ ಸಮುದಾಯಗಳ ಹಿತ ಕಾಪಾಡುತ್ತಾರೆಂದು ಬೆಂಬಲಿಸಿದ ಅಹಿಂದ ಸಮುದಾಯದವರಿಗೆ ನೋವಾಗಿದ್ದಂತೂ ದಿಟ. ಇದರ ಪರಿಣಾಮವನ್ನು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಅನುಭವಿಸುತ್ತದೆ. ಅಹಿಂದ ಸಮುದಾಯದ ಪ್ರಶ್ನಾತೀತ ನಾಯಕನ ಅಕಾಲಿಕ ಪದಚ್ಯುತಿಗೆ ಕಾಂಗ್ರೆಸ್ ಬೆಲೆ ತೆರಲೇ ಬೇಕಾಗುತ್ತದೆ.
ಈ ರಾಜಕೀಯ ಸ್ಥಿತ್ಯಂತರಗಳು ಏನೇ ಇರಲಿ. ಅಧಿಕಾರ ಹಸ್ತಾಂತರ ಎನ್ನುವುದು ಇಷ್ಟೊಂದು ಸರಳವಾಗಿ ಹಾಗೂ ಗೌರವಾನ್ವಿತವಾಗಿ ಆಗಿದ್ದು ಕರ್ನಾಟಕದ ಇತಿಹಾಸದಲ್ಲೇ ಮೊದಲನೆಯದು. ತಮ್ಮಲ್ಲಿ ಅದೆಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಬಹಿರಂಗವಾಗಿ ತೋರಿಸಿಕೊಡದೆ ಮೇಲ್ನೋಟಕ್ಕಾದರೂ ಒಗ್ಗಟ್ಟನ್ನು ಪ್ರದರ್ಶಿಸುತ್ತಲೇ ಬಂದ ಮಾನ್ಯ ಸಿದ್ದರಾಮಯ್ಯನವರು ಹಾಗೂ ಮಾನ್ಯ ಡಿಕೆ ಶಿವಕುಮಾರರವರ ತಾಳ್ಮೆ, ಸಹನೆ, ಪಕ್ಷ ನಿಷ್ಟೆಗಳು ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದಾಖಲಾರ್ಹ ಸಂಗತಿಗಳು. ರಾಜಕೀಯ ಅಂದರೆ ದ್ವೇಷ, ಅಸೂಯೆ, ಆರೋಪ, ಪ್ರತ್ಯಾರೋಪಗಳು ಎಂದುಕೊಂಡಿದ್ದವರಿಗೆ ಈ ಇಬ್ಬರೂ ನಾಯಕರ ನಡೆ ನುಡಿಗಳು ಮುಂದಿನವರಿಗೆ ಮಾದರಿಯಾಗಿವೆ.
ಘನತೆಯಿಂದ ನಿರ್ಗಮಿಸುತ್ತಿರುವ ಮಾನ್ಯ ಸಿದ್ದರಾಮಯ್ಯನವರಿಗೆ ಅಭಿನಂದನೆ. ಸಿದ್ದರಾಮಯ್ಯನವರ ಸಾಮಾಜಿಕ ನ್ಯಾಯದ ರಾಜಕಾರಣವನ್ನು ಮುಂದುವರೆಸಿಕೊಂಡು ಹೋಗುವ ಹೊಣೆಗಾರಿಕೆಯನ್ನು ಹೊತ್ತು ಮುಖ್ಯಮಂತ್ರಿಯಾಗುತ್ತಿರುವ ಮಾನ್ಯ ಡಿಕೆ ಶಿವಕುಮಾರರವರಿಗೆ ಸ್ವಾಗತ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಸಂಪಾದಕೀಯ | ಸಿದ್ಧರಾಮಯ್ಯ ಎಂಬ ರಾಜಕೀಯ ದಾರ್ಶನಿಕನನ್ನು ಇತಿಹಾಸ ನೆನಪಿಟ್ಟುಕೊಳ್ಳಲಿದೆ!


