Wednesday, December 11, 2024

21.17 ಕೋಟಿ ರೂ. ಮೌಲ್ಯದ ಡ್ರಗ್ಸ್ ಸಿಸಿಬಿ, ಕಸ್ಟಮ್ಸ್ ಇಲಾಖೆ ವಶಕ್ಕೆ

Most read

ವಿವಿಧ ದೇಶಗಳಿಂದ ಅಂಚೆ ಇಲಾಖೆ ಮೂಲಕ ಬೆಂಗಳೂರಿಗೆ ತರಿಸಿಕೊಂಡಿದ್ದ 21.17 ಕೋಟಿ ರೂಪಾಯಿ ಬೆಲೆ ಬಾಳುವ ವಿವಿಧ ಬಗೆಯ ಡ್ರಗ್ಸ್ ಅನ್ನು ಸಿಸಿಬಿ ಮಾದಕ ದ್ರವ್ಯ ನಿಗ್ರಹ ದಳ ಮತ್ತು ಕಸ್ಟಮ್ಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.

ಅಂಚೆ ಮೂಲಕ ತರಿಸಿಕೊಂಡಿದ್ದ 28 ಕೆ.ಜಿ
ಹೈಡ್ರೋ ಗಾಂಜಾ, 2,569 ಎಲ್‌ಎಸ್‌ಡಿ ಸ್ಕ್ರಿಪ್ಟ್ , 1 ಕೆ.ಜಿ 618 ಗ್ರಾಂ ಎಂಡಿಎಂಎ ಕ್ರಿಸ್ಟಲ್, 11,908
ಎಕ್ಸ್‌ಟೆಸಿ ಮಾತ್ರೆಗಳು, 770 ಗ್ರಾಂ ಹೆರಾಯಿನ್,
102 ಗ್ರಾಂ ಕೋಕೆನ್, 336 ಗ್ರಾಂ ಚರಸ್, 1
ಕೆ.ಜಿ 217 ಗ್ರಾಂ ಗಾಂಜಾ ಎಣ್ಣೆ, 445 ಗ್ರಾಂ
ಮ್ಯಾಥಾಕ್ಲಿನಾ, 11 ಇ-ಸಿಗರೇಟ್, 102 ಎಂಎಲ್
ನಿಕೋಟಿನ್ ಜಪ್ತಿ ಮಾಡಲಾಗಿದೆ.

ಅಂಚೆ ಇಲಾಖೆ ಮೂಲಕ ನಿಷೇಧಿತ ಮಾದಕ ವಸ್ತುಗಳನ್ನು ತರಿಸಿಕೊಳ್ಳುತ್ತಿದ್ದ ಖಚಿತ ಮಾಹಿತಿ ಲಭ್ಯವಾಗಿತ್ತು. ಸಿಸಿಬಿ ಪೊಲೀಸರು ನಿರಂತರವಾಗಿ ನಿಗಾ ಇರಿಸಿದ್ದರು. ಈ ಸಂಬಂಧ ಸೆಪ್ಟೆಂಬರ್‌ನಲ್ಲಿ ಎಚ್‌ಎಸ್ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ ಸಿಸಿಬಿ ಠಾಣೆಯಲ್ಲಿ ಒಂದು ಪ್ರಕರಣವನ್ನು ದಾಖಲಿಸಲಾಗಿತ್ತು. ಆಗ ಕಾರ್ಯಾಚರಣೆ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಅವರನ್ನು ವಿಚಾರಣೆ ನಡೆಸಿದಾಗ ವಿದೇಶದಿಂದ ಡ್ರಗ್ಸ್ ತರಿಸಿಕೊಳ್ಳುತ್ತಿದ್ದ ಮಾಹಿತಿ ಲಭ್ಯವಾಗಿತ್ತು ಎಂದು ನಗರ ಪೊಲೀಸ್ ಕಮಿಷನರ್ ಬಿ.ದಯಾನಂದ ತಿಳಿಸಿದ್ದಾರೆ.

ನಂತರ ಅಂಚೆ ಕಚೇರಿಯಲ್ಲಿ ಪರಿಶೀಲನೆ ನಡೆಸಲಾಯಿತು. ಚಾಮರಾಜಪೇಟೆಯಲ್ಲಿರುವ ವಿದೇಶಿ ಅಂಚೆ ಕಚೇರಿ ಮೇಲೆ ಜಂಟಿ ದಾಳಿ ನಡೆಸಿದಾಗ ಅಮೆರಿಕ, ಥಾಯ್ಲೆಂಡ್, ಯುಕೆ, ನೆದರ್ ಲ್ಯಾಂಡ್ಸ್, ಬೆಲ್ಜಿಯಂ ಸೇರಿದಂತೆ ಇತರೆ ದೇಶಗಳಿಂದ ಬೆಂಗಳೂರಿಗೆ ಸುಮಾರು 3,500 ಪೆಟ್ಟಿಗೆಗಳನ್ನು ತರಿಸಿಕೊಳ್ಳಲಾಗಿತ್ತು. ಶ್ವಾನದಳದಿಂದ ಪರಿಶೀಲನೆ ನಡೆಸಿದಾಗ 606 ಪೆಟ್ಟಿಗೆಗಳಲ್ಲಿ ವಿವಿಧ ಮಾದರಿಯ ಮಾದಕವಸ್ತು ಪತ್ತೆಯಾಗಿದೆ. ಆ ಎಲ್ಲ ಬಾಕ್ಸ್ ಗಳನ್ನು ಜಪ್ತಿ ಮಾಡಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ವಿದೇಶಗಳಿಂದ ಕಡಿಮೆ ಬೆಲೆಗೆ ಡ್ರಗ್ಸ್ ತರಿಸಿಕೊಂಡು ಬೆಂಗಳೂರಿನಲ್ಲಿ ಹೆಚ್ಚಿನ ಬೆಲೆಗೆ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿತ್ತು. ಈ ಡ್ರಗ್ಸ್ ಅನ್ನು ತರಿಸಿಕೊಂಡವರು ಯಾರು ಎನ್ನುವುದು ತಿಳಿದು ಬಂದಿಲ್ಲ. ಆದರೂ ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

More articles

Latest article