Saturday, July 27, 2024

ಅಧಿವೇಶನದಲ್ಲಿ ಬಜೆಟ್ ಮಂಡನೆ; ಹೊರಗೆ ಪ್ರತಿಪಕ್ಷಗಳ ಸಮೂಹ ಗಾನ ಖಂಡನೆ

Most read

ವಿರೋಧಕ್ಕಾಗಿ ವಿರೋಧ ಮಾಡುವುದು, ಆಧಾರ ಪುರಾವೆಗಳಿಲ್ಲದೇ ಆರೋಪ ಮಾಡುವುದು, ಬಾಲಿಶವಾದ ಹೇಳಿಕೆ ಕೊಡುವುದು ಹಾಗೂ ಮಾಧ್ಯಮಗಳ ಮುಂದೆ ಸಮೂಹ ಗಾನ ಹಾಡುವುದೆಲ್ಲಾ ಪ್ರತಿಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ. ಇದೆಲ್ಲವನ್ನೂ ಸುದ್ದಿ ಮಾಧ್ಯಮಗಳ ಮೂಲಕ ಕರ್ನಾಟಕದ ಜನತೆ ಗಮನಿಸುತ್ತಲೇ ಇದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಗಲಾಡಿಗಳ ಪಕ್ಷವನ್ನು ಸೋಲಿಸಿ ಪಾಠ ಕಲಿಸುತ್ತಾರೆ, ಇಲ್ಲವೇ ಆಸೆ ಆಮಿಷಕ್ಕೆ ಒಳಗಾಗಿ ಗೆಲ್ಲಿಸಿದರೆ ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಸಿಎಂ ಸಿದ್ದರಾಮಯ್ಯನವರು ಫೆ. 16 ರಂದು ವಿಧಾನಸೌಧದಲ್ಲಿ ನಡೆದ ಅಧಿವೇಶನದಲ್ಲಿ ತಮ್ಮ 15 ನೇ ಬಾರಿಯ ಬಜೆಟ್ ಮಂಡಿಸಿ ದಾಖಲೆ ಸೃಷ್ಟಿಸಿದ್ದಾರೆ. ಯಾವುದೇ ಬಜೆಟ್ಟಿನ ಸಕಾರಾತ್ಮಕ ಇಲ್ಲವೇ ನಕಾರಾತ್ಮಕ ಅಂಶಗಳು ಏನೇ ಇರಲಿ, ವಿರೋಧ ಪಕ್ಷಗಳ ನಾಯಕರು ಅಧಿವೇಶನದಲ್ಲಿದ್ದು ಸಂಪೂರ್ಣ ಬಜೆಟ್ ಕೇಳಿದ ನಂತರ ತಮ್ಮ ಟೀಕೆ ಟಿಪ್ಪಣೆ ಮಾಡುವುದು ಸಂಸದೀಯ ವ್ಯವಸ್ಥೆಯಲ್ಲಿ ಅಪೇಕ್ಷಣೀಯ. ಆದರೆ ಇತ್ತ ಸಿದ್ದರಾಮಯ್ಯನವರು ಬಜೆಟ್ ಮಂಡನೆ ಮಾಡುತ್ತಿದ್ದಂತೆಯೇ ಅತ್ತ ಅಧಿವೇಶನ ಬಹಿಷ್ಕರಿಸಿ ಹೊರಗೆ ನಡೆದ ಪ್ರತಿಪಕ್ಷಗಳಾದ ಬಿಜೆಪಿ ಹಾಗೂ ಜೆಡಿಎಸ್ ಪಕ್ಷದ ನಾಯಕರುಗಳು ವಿಧಾನ ಸೌಧದ ಮೆಟ್ಟಲುಗಳ ಮೇಲೆ ಬಜೆಟ್ ವಿರುದ್ದ ಘೋಷಣೆ ಕೂಗುತ್ತಾ ಸೆನ್ಸೇಶನ್ ಸೃಷ್ಟಿಸಿದ್ದು ನಿಜಕ್ಕೂ ಅವಿವೇಕತನ.

ಬಜೆಟ್ ಮಂಡನೆಗೆ ಮುನ್ನವೇ ವಾಕೌಟ್ ನಿರ್ಧಾರ ಮಾಡಿಕೊಂಡೇ ಬಂದಿದ್ದ ಈ ವಿಪಕ್ಷಗಳ ನಾಯಕರುಗಳು ತಮ್ಮ ಪೂರ್ವಯೋಜನೆಯಂತೆ ಪ್ಲಕಾರ್ಡಗಳನ್ನು ಸಿದ್ದಪಡಿಸಿಕೊಂಡು ಬಂದಿದ್ದವು. ಅಧಿವೇಶನದಲ್ಲಿ ಮುಖ್ಯಮಂತ್ರಿಗಳು ಬಜೆಟ್ ಮಂಡನೆ ಮಾಡುತ್ತಿದ್ದರೆ ಹೊರಗಡೆ ಟಿವಿ ಕ್ಯಾಮರಾಗಳ ಮುಂದೆ ನಿಂತ ಈ ನಾಯಕರುಗಳು ಪ್ಲಕಾರ್ಡ್ ಹಿಡಿದು “ಏನಿಲ್ಲ ಏನಿಲ್ಲಾ ಸಿದ್ದರಾಮಯ್ಯನ ಬಜೆಟ್‌ ನಲ್ಲಿ ಏನಿಲ್ಲಾ” ಎಂದು ಗಾರ್ಧಭ ಸ್ವರದಲ್ಲಿ ಕೋರಸ್ ಹಾಡು ಹಾಡತೊಡಗಿದರು. ” ಓಳು ಬರಿ ಓಳು ಸಿದ್ದರಾಮಯ್ಯನವರ ಬಜೆಟ್ ಬರೀ ಓಳು” ಎಂದು ಸಿನೆಮಾ ಹಾಡನ್ನು ತಿರುಚಿ ರೀಲ್ಸ್ ಮಾದರಿಯಲ್ಲಿ ಹಾಡಿದರು.

” ಇದೊಂದು ಶೂನ್ಯ ಬಜೆಟ್. ರಾಜ್ಯವನ್ನು 20 ವರ್ಷ ಹಿಂದಕ್ಕೆ ತೆಗೆದುಕೊಂಡು ಹೋಗುವ ಬಜೆಟ್” ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಹೇಳಿದರೆ, “ನನ್ನ ಜೀವಮಾನದಲ್ಲೇ ಇಂತಹ ಕಳಪೆ ಬಜೆಟ್ ನೋಡಿರಲಿಲ್ಲ” ಎಂದು ಈ ರಾಜ್ಯಾಧ್ಯಕ್ಷರ ಅಪ್ಪ ಯಡಿಯೂರಪ್ಪ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಬಿಜೆಪಿಯ ವಿರೋಧ ಪಕ್ಷದ ನಾಯಕ ಆರ್.ಅಶೋಕರವರಂತೂ ಏನಿಲ್ಲಾ ಏನಿಲ್ಲಾ ಎಂದು ಗುಂಪು ಸೇರಿಸಿ ಸಮೂಹ ಗಾನದಲ್ಲಿ ತಲ್ಲೀನರಾಗಿದ್ದರು. “ನಿರಾಶಾದಾಯಕ ಬಜೆಟ್” ಎಂದು ಮಾಜಿ ಸಿಎಂ ಕುಮಾರಸ್ವಾಮಿಯವರು ತಮ್ಮ ಅಸಮಾಧಾನ ವ್ಯಕ್ತ ಪಡಿಸಿದರು.

ಯಾವುದೇ ಪಕ್ಷ ಅಧಿಕಾರದಲ್ಲಿದ್ದು ಬಜೆಟ್ ಮಂಡನೆ ಮಾಡಿದರೂ ಅದನ್ನು ವಿರೋಧ ಪಕ್ಷಗಳು ವಿರೋಧಿಸುತ್ತಲೇ ಬರುವುದು ಸಾಮಾನ್ಯ. ಆದರೆ ವಿಧಾನಸಭೆ ಇತಿಹಾಸದಲ್ಲಿ ಮೊದಲ ಬಾರಿಗೆ ಬಜೆಟ್ ಮಂಡನೆ ಕೇಳದೇ, ಅದರಲ್ಲಿ ಏನಿದೆ ಎಂದೂ ತಿಳಿಯದೇ ಅಧಿವೇಶನ ಬಹಿಷ್ಕರಿಸಿ ವಿಧಾನಸೌಧದ ಹೊರಗೆ ‘ಏನಿಲ್ಲ ಏನಿಲ್ಲಾ’ ಅಂತಾ ಕೂಗಾಡಿದ್ದು ಅತಿರೇಕದ ಪರಮಾವಧಿ. ವಿರೋಧ ಪಕ್ಷಗಳು ಇರುವುದೇ ಆಳುವ ಪಕ್ಷದ ಎಲ್ಲಾ ನಿರ್ಧಾರಗಳನ್ನು ವಿವೇಚನೆ ಇಲ್ಲದೇ ವಿರೋಧಿಸಲಿಕ್ಕೆ ಎಂದು ಬಿಜೆಪಿಯವರು ತಿಳಿದಂತಿದೆ. ಅಧಿವೇಶನದಲ್ಲಿದ್ದು, ಪೂರ್ತಿ ಬಜೆಟ್ ಮಂಡನೆಗೆ ಸಾಕ್ಷಿಯಾಗಿ, ಸಾಧಕ ಬಾಧಕಗಳ ಪಟ್ಟಿ ಮಾಡಿಕೊಂಡು ತದನಂತರ ವಸ್ತುನಿಷ್ಟವಾಗಿ ವಿರೋಧ ವ್ಯಕ್ತಪಡಿಸಿದ್ದರೆ ಅಂತಹ ವಿರೋಧಕ್ಕೂ ಬೆಲೆ ಇರುತ್ತಿತ್ತು. ಅದು ವಿರೋಧ ಪಕ್ಷಗಳ ಹೊಣೆಗಾರಿಕೆಯೂ ಆಗಿತ್ತು.

ಆದರೆ ಬಜೆಟ್‌ ನಲ್ಲಿ ಏನಿದೆಯೆಂದು ಘೋಷಿಸುವ ಮುನ್ನವೇ ಏನಿಲ್ಲಾ ಎಂದು ಸಮೂಹ ಗಾನ ಹಾಡುವುದು, ಬಜೆಟ್ ಮಂಡನೆ ಪೂರ್ಣಗೊಳ್ಳುವ ಮೊದಲೇ ಪ್ಲಕಾರ್ಡ್ ಹಿಡಿದು ಓಳು ಬರಿ ಓಳು ಎನ್ನುವುದು ವಿರೋಧ ಪಕ್ಷಗಳ ನಾಯಕರ ಅತಿರೇಕ ಅಧಿಕಪ್ರಸಂಗತನ ಹಾಗೂ ಬೇಜವಾಬ್ದಾರಿತನವಾಗಿದೆ.

ಈ ಬಜೆಟ್ ಎನ್ನುವುದು ಒಂದು ರಾಜ್ಯದ ಮುಂದಿನ ಅಗುಹೋಗುಗಳ ನೀಲಿನಕ್ಷೆಯಾಗಿದ್ದು ಅದಕ್ಕೆ ಸಾಕ್ಷಿಯಾಗಬೇಕಾದದ್ದು ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ನಾಯಕರುಗಳ ಕರ್ತವ್ಯವಾಗಿದೆ. ಯಾವುದೇ ಪಕ್ಷವಿರಲಿ, ಅವುಗಳ ಸಿದ್ಧಾಂತಗಳು ಏನೇ ಇರಲಿ, ಇಲ್ಲಿ ರಾಜ್ಯದ ಹಿತಾಸಕ್ತಿ ಮುಖ್ಯವಾಗಬೇಕಿದೆ. ಆಳುವ ಪಕ್ಷ ಮಂಡಿಸುವ ಬಜೆಟ್ ನಲ್ಲಿ ಏನಾದರೂ ದೋಷಗಳಿದ್ದರೆ, ಜನವಿರೋಧಿ ಅಂಶಗಳಿದ್ದರೆ ಅವುಗಳ ಕುರಿತು ದ್ವನಿ ಎತ್ತುವ, ಆಳುವ ಪಕ್ಷವನ್ನು ಎಚ್ಚರಿಸುವ ಹಾಗೂ ಜನರಿಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ವಿರೋಧ ಪಕ್ಷಗಳು ಮಾಡಬೇಕಿದೆ. ಅಧಿವೇಶನವನ್ನೂ ಬಹಿಷ್ಕರಿಸಿ, ಬಜೆಟ್‌ ನಲ್ಲಿ ಏನಿದೆ ಎಂಬುದನ್ನೂ ಅರಿಯದೇ ಬಜೆಟ್ ಮಂಡನೆಗೆ ಮುನ್ನವೇ ಇಡೀ ಬಜೆಟ್ಟಲ್ಲಿ ಏನಿಲ್ಲಾ ಎಂದು ಹೇಳುವುದು ವಿರೋಧ ಪಕ್ಷಗಳ ಮೇಲಿನ ವಿಶ್ವಾಸಾರ್ಹತೆಗೆ ಕುಂದು ತರುವಂತಹದ್ದಾಗಿದೆ.

ಇದನ್ನೂ ಓದಿ- ಬಜೆಟ್‌ | ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಜೊತೆಜೊತೆಗೆ ಸಾಧಿಸುವಂತಿದೆ

ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಕುರಿತು ಪ್ರತಿಪಕ್ಷಗಳು ಕೇಳಬೇಕಾದ ಮೌಲಿಕ ಪ್ರಶ್ನೆಗಳು ಇದ್ದವು. ಬಜೆಟ್ ಗಾತ್ರ ಯಾಕೆ 3.71 ಲಕ್ಷ ಕೋಟಿ ಆಯಿತು. ಇಷ್ಟೊಂದು ಖರ್ಚಿನ ಬಾಬತ್ತಿಗೆ ಆದಾಯದ ಮೂಲ ಯಾವುದು. ಈಗಾಗಲೇ ಕರ್ನಾಟಕ ರಾಜ್ಯ ಸಾಲದಲ್ಲಿರುವಾಗ, ಆದಾಯದಲ್ಲಿ 18% ದಷ್ಟು ಈಗಾಗಲೇ ಮಾಡಿದ ಸಾಲಕ್ಕೆ ಬಡ್ಡಿ ಕಟ್ಟುತ್ತಿರುವಾಗ ಮತ್ತೆ 1.1 ಲಕ್ಷ ಕೋಟಿ ಹಣ ಸಾಲ ಮಾಡುವ ಅಗತ್ಯವಿತ್ತಾ? ಮಾಡಿದ ಸಾಲವನ್ನು ಹೇಗೆ ತೀರಿಸಲಾಗುತ್ತದೆ? ಘೋಷಿತ ಅಭಿವೃದ್ದಿ ಯೋಜನೆಗಳನ್ನು ಹೇಗೆ ಕಾಲಮಿತಿಯಲ್ಲಿ ಅನುಷ್ಟಾನಕ್ಕೆ ತಂದು ಕಾರ್ಯಗತಗೊಳಿಸುತ್ತೀರಿ? ಹೀಗೆ ಹಲವಾರು ಮೌಲಿಕ ಹಾಗೂ ಅತ್ಯಗತ್ಯವಾದ ಅನುಮಾನಗಳನ್ನು ಅಧಿವೇಶನದಲ್ಲಿ ಎತ್ತಿದ್ದರೆ, ಇಲ್ಲವೇ ಆ ನಂತರವಾದರೂ ಮಾಧ್ಯಮಗಳ ಮೂಲಕ ಪ್ರಶ್ನಿಸಿದ್ದರೆ ವಿರೋಧ ಪಕ್ಷಗಳ ನಾಯಕರ ಮಾತಿಗೆ ತೂಕ ಇರುತ್ತಿತ್ತು. ಪ್ರತಿಪಕ್ಷವಾಗಿ ಸಂಸದೀಯ ಹೊಣೆಗಾರಿಕೆಯನ್ನು ನಿಭಾಯಿಸಿದಂತಾಗುತ್ತಿತ್ತು.

ಆದರೆ ಈ ಯಾವ ಹೊಣೆಗಾರಿಕೆಯನ್ನೂ ನಿಭಾಯಿಸದೇ ವಿರೋಧಕ್ಕಾಗಿ ವಿರೋಧ ಮಾಡುವುದು, ಆಧಾರ ಪುರಾವೆಗಳಿಲ್ಲದೇ ಆರೋಪ ಮಾಡುವುದು, ಬಾಲಿಶವಾದ ಹೇಳಿಕೆ ಕೊಡುವುದು ಹಾಗೂ ಮಾಧ್ಯಮಗಳ ಮುಂದೆ ಸಮೂಹ ಗಾನ ಹಾಡುವುದೆಲ್ಲಾ ಪ್ರತಿಪಕ್ಷಗಳ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿಯಾಗಿವೆ. ಇದೆಲ್ಲವನ್ನೂ ಸುದ್ದಿ ಮಾಧ್ಯಮಗಳ ಮೂಲಕ ಕರ್ನಾಟಕದ ಜನತೆ ಗಮನಿಸುತ್ತಲೇ ಇದ್ದಾರೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸೋಗಲಾಡಿಗಳ ಪಕ್ಷವನ್ನು ಸೋಲಿಸಿ ಪಾಠ ಕಲಿಸುತ್ತಾರೆ, ಇಲ್ಲವೇ ಆಸೆ ಆಮಿಷಕ್ಕೆ ಒಳಗಾಗಿ ಗೆಲ್ಲಿಸಿದರೆ ಅದರ ಪರಿಣಾಮಗಳನ್ನು ಅನುಭವಿಸುತ್ತಾರೆ.

ಇದನ್ನೂ ಓದಿ-2024-25ರ ಬಜೆಟ್: ಭರವಸೆಯ ಬಿತ್ತನೆ ಮತ್ತು ನಿರೀಕ್ಷೆಯ ಪರೀಕ್ಷೆ

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article