Saturday, December 7, 2024

ಬಜೆಟ್‌ | ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಜೊತೆಜೊತೆಗೆ ಸಾಧಿಸುವಂತಿದೆ

Most read

ಅಭಿವೃದ್ಧಿ ಎಂಬುದು ಬಡವರನ್ನು ಹೊರಗಿಡುವುದಲ್ಲ; ಆರ್ಥಿಕ ಅಭಿವೃದ್ಧಿ ಮತ್ತು ಸಾಮಾಜಿಕ ಅಭಿವೃದ್ಧಿ ಎಂಬುದನ್ನು ಜೊತೆಜೊತೆ ಒಯ್ಯಬಹುದೆನ್ನುವುದನ್ನು ಈ ಬಜೆಟ್ ಸಾಧಿಸಿದೆ. ತಳಸ್ತರ ಜನರ ಸಾಮಾಜಿಕ ಅಭಿವೃದ್ಧಿ  ದೃಷ್ಟಿಯಿಂದ ಈ ಬಜೆಟ್‌ನ್ನು ನೋಡಿದರೆ ಬಜೆಟ್‌ನ ಪ್ರಾಮುಖ್ಯತೆ ಅರ್ಥವಾಗಬಹುದು- ಪ್ರೊ. ಎಂ. ಚಂದ್ರಪುಜಾರಿ, ಅಭಿವೃದ್ಧಿ ಚಿಂತಕರು.

ಜನಸಾಮಾನ್ಯರು ತೆರಿಗೆ ಕೊಡುವುದಿಲ್ಲ ಎನ್ನುವುದು ತಪ್ಪು. ರಾಜ್ಯ, ದೇಶದ ಸಂಪನ್ಮೂಲಗಳಲ್ಲಿ ಬಡವರು ನೀಡುವ  ಪರೋಕ್ಷ ತೆರಿಗೆ ಪಾಲು ಅತಿ ಹೆಚ್ಚು ಎಂಬುದನ್ನು ಮರೆಯಬಾರದು. ಕೇಂದ್ರ, ರಾಜ್ಯಗಳು ನಮಗೆ ಕೊಟ್ಟಿದ್ದು ಎಂಬುದಕ್ಕೆ ಅರ್ಥವಿಲ್ಲ. ನಮ್ಮಿಂದ ಹೋಗಿದ್ದು  ಅಲ್ಪ ಪ್ರಮಾಣದಲ್ಲಿ ವಾಪಸ್‌ ಬಂದಿದೆ ಎಂಬುದು ವಾಸ್ತವ. ಕರ್ನಾಟಕದ ಬಜೆಟ್‌ನಲ್ಲಿ ಹಿಂದೆಲ್ಲ ಅಂಚಿನ ಜನರಿಗೆ ಒಟ್ಟು ಬಜೆಟ್‌ನಲ್ಲಿ ಕೊಡುತ್ತಿದ್ದ ಪಾಲು ಶೇಕಡ ನಾಲ್ಕೈದು ದಾಟುವುದು ಅಪರೂಪ. ಇಂತಹ ಸಂದರ್ಭದಲ್ಲಿ ಒಟ್ಟು ಬಜೆಟ್‌ನ ಶೇ.15 ರಷ್ಟು ತಳಸ್ತರದ ಜನರಿಗೆ ನೀಡುವುದನ್ನು ಉಹಿಸಲಾಗುತ್ತಿಲ್ಲ. ನಮ್ಮ ಒಟ್ಟು ಬಜೆಟ್‌ ಗಾತ್ರ 3,71,383 ಕೋಟಿ. ಗ್ಯಾರಂಟಿ ಹಾಗೂ ಇತರೆ ಸಹಾಯಧನವನ್ನು  ಒಟ್ಟುಗೂಡಿಸಿದರೆ‌ 60 ಸಾವಿರ ಕೋಟಿಯಾಗಬಹುದು. ಇದು ಒಟ್ಟು ಬಜೆಟ್‌ ಗಾತ್ರದಲ್ಲಿ ಬಡವರಿಗೆ ಹಂಚಿಕೆಯಾಗುವುದು ಸುಮಾರು ಶೇ. 15 ರಷ್ಟಾಗಿದೆ. ತಳಸ್ತರಕ್ಕೆ ತಲುಪುವ ಬಜೆಟ್‌ನ ಶೇ.15 ನಮ್ಮ ರಾಜ್ಯದ ಅಭಿವೃದ್ಧಿಯ ಗತಿಯನ್ನು ಬದಲಾಯಿಸಬಹುದು. ಏಕೆಂದರೆ ಈ ಮೊತ್ತ ಇವರ ಖರೀದಿಸುವ ಶಕ್ತಿಯನ್ನು ಹೆಚ್ಚಿಸುತ್ತದೆ. ಇವರ ಖರೀದಿ ಶಕ್ತಿ ಹೆಚ್ಚಿದರೆ ಕೃಷಿ, ಕೈಗಾರಿಕೆಗಳ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚುತ್ತದೆ. ಅಭಿವೃದ್ದಿ ಎಂಬುದು ಇಂತಹ ಸಾವಯವ ಸಂಬಂಧ ಹೊಂದಿರುತ್ತದೆ. ಒಟ್ಟಾರೆ ಸರಕು, ಸೇವೆಗಳ ಬೇಡಿಕೆ ಹೆಚ್ಚುತ್ತದೆ. ಬಡವರ ಆಯ್ಕೆಯ ಅವಕಾಶಗಳು ವಿಸ್ತರಿಸುತ್ತವೆ. ಅಭಿವೃದ್ಧಿ ಎಂದರೆ ಸ್ವಾತಂತ್ರ‍್ಯ. ಸ್ವಾತಂತ್ರ‍್ಯ ಎಂದರೆ ಆಯ್ಕೆಗಳು ಎಂದು ಅಮರ್ತ್ಯ ಸೇನ್‌ ವ್ಯಾಖ್ಯಾನಿಸುತ್ತಾರೆ. ನಮ್ಮ ಗಮನ ಇರಬೇಕಾಗಿರುವುದು ಆಯ್ಕೆಗಳೇ ಇಲ್ಲದವರಿಗೆ ಅವನ್ನು ಕಲ್ಪಿಸುವುದೇ ಆಗಿದೆ. ಪಿರಮಿಡ್‌ನ ತುದಿಯಲ್ಲಿರುವವರನ್ನು ಪೋಷಿಸಿದರೆ ಬುಡದಲ್ಲಿರುವವರಿಗೆ ಯಾವುದೇ ಪ್ರಯೋಜನವಾಗುವುದಿಲ್ಲ. ಬಡವರ ಮನೆ ಮುಂದೆ ಚತುಷ್ಪಥವಲ್ಲ ೨೪ ಪಥವಾದರೂ ಯಾವುದೇ  ಉಪಯೋಗವಾಗುವುದಿಲ್ಲ.

ಎಂ. ಚಂದ್ರಪುಜಾರಿ, ಅಭಿವೃದ್ಧಿ ಚಿಂತಕರು

More articles

Latest article