Saturday, July 27, 2024

ಕಿತ್ತೂರು ಕಥನ | ಭಾಗ 1

Most read

ಕರುನಾಡ ನಡುಭಾಗದಲ್ಲಿದ್ದ, ಸುತ್ತುಮುತ್ತಿಗೆಲ್ಲ ಖ್ಯಾತವಾಗಿದ್ದ ಕಿತ್ತೂರು ಸಂಸ್ಥಾನವು ಬಿಕ್ಕಟ್ಟಿನಲ್ಲಿತ್ತು. ಅರಸನಾಗಿದ್ದ ಮಲ್ಲಸರ್ಜನ ಮಗ ಎಳೆಯ ವಯಸ್ಸಿನ ಶಿವಲಿಂಗ ರುದ್ರಸರ್ಜ ಮಕ್ಕಳಿಲ್ಲದೆ ತೀರಿಹೋಗಿದ್ದ. ಅವನ ಪತ್ನಿ ವೀರಮ್ಮನಿಗಿನ್ನೂ ಹನ್ನೊಂದು ವರುಷ. ಅವನ ತಾಯಿ ಅಧ್ಯಾತ್ಮ ಚಿಂತನೆಯಲ್ಲಿ ಮುಳುಗಿ ಸಾಮ್ರಾಜ್ಯದ ಚಿಂತೆಯನ್ನೇ ಬಿಟ್ಟಿದ್ದಳು. ದಿಟ್ಟತನ, ಯುದ್ಧಕೌಶಲ್ಯ, ಮುಂದಾಳ್ತಿ ಗುಣ, ದೂರದೃಷ್ಟಿಗಳೆಲ್ಲ ಮೇಳವಿಸಿದ್ದರೂ ರುದ್ರಸರ್ಜನ ಚಿಕ್ಕಮ್ಮನಾಗಿದ್ದ ಚೆನ್ನಮ್ಮ ಹೆಣ್ಣೆಂಬ ಕಾರಣಕ್ಕೆ ಆಳಲು ಅನರ್ಹಳೆನಿಸಿಕೊಂಡಿದ್ದಳು. ಆಳುವ ವಯಸ್ಸು, ಸಾಮರ್ಥ್ಯ ಇದೆಯೋ ಇಲ್ಲವೋ, ಅರಸೊತ್ತಿಗೆಯ ಸ್ಥಾನವನ್ನು ಅಲಂಕರಿಸಲು ನೆಪಕ್ಕಾದರೂ ಒಂದು ಗಂಡು ಬೇಕಿತ್ತು. ಉತ್ತರಾಧಿಕಾರಿಯಾಗಲು ಗಂಡುಮಕ್ಕಳಿರದ ರಾಜ್ಯವನ್ನು ತಮ್ಮದಾಗಿಸಿಕೊಳ್ಳಲು ಬ್ರಿಟಿಷರು ಹವಣಿಕೆಯಲ್ಲಿದ್ದರು. ಅವರ ಕುಟಿಲೋಪಾಯಗಳಿಗೆ ಜಗ್ಗದೆ ತಮ್ಮ ರಾಜ್ಯಕ್ಕೆ ಸಂಬಂಧಿಸಿದ ನಿರ್ಧಾರ ತೆಗೆದುಕೊಳ್ಳುವ ಹಕ್ಕನ್ನು ತಾವೇ ಇಟ್ಟುಕೊಂಡದ್ದಕ್ಕೆ ಯುದ್ಧ ಕಿತ್ತೂರು ಕೋಟೆಯ ಬಾಗಿಲಿಗೇ ಬಂದಿತ್ತು.

ಕಿತ್ತೂರ ಕೋಟೆ

ಕೋಟೆಯ ಒಳಗೆ ಎಡೆಬಿಡದ ರಾಜಕೀಯ ಸಮಾಲೋಚನೆ ನಡೆಯುತ್ತಿದ್ದವು. ಮೂರಂತಸ್ತಿನ ಅರಮನೆಯ ಸುತ್ತಮುತ್ತ ಕಿತ್ತೂರ ಸೈನ್ಯ ಜಮಾಯಿಸಿತು. ಕೋಟೆಯ ಹೊರಗೆ ಧಾರವಾಡದ ಕಲೆಕ್ಟರನೂ, ಬ್ರಿಟಿಷ್ ರಾಜಕೀಯ ಏಜೆಂಟನೂ ಆದ ಥ್ಯಾಕರೆ ತನ್ನ ಸೈನ್ಯದೊಡನೆ ಸನ್ನದ್ಧನಾಗಿದ್ದ. ೨೪ ನಿಮಿಷದಲ್ಲಿ ದಿಡ್ಡಿ ಬಾಗಿಲು ತೆಗೆಯದಿದ್ದರೆ ತೋಪಿನಿಂದ ಒಡೆಯುತ್ತೇವೆಂದು ಕೂಗಿ ಹೇಳುತ್ತಿದ್ದ.

ಒಂದು.. ಎರಡು.. ಮೂರು.. ನಾಲ್ಕು..

ಎಣಿಕೆ ಆರಂಭವಾಯಿತು. ನಿಮಿಷಕ್ಕೊಮ್ಮೆ ರಣಭೇರಿ ಮೊಳಗಿ ಮತ್ತೊಂದು ನಿಮಿಷ ಜಾರಿದ್ದನ್ನು ಸೂಚಿಸುತ್ತಿತ್ತು.

ಐದು.. ಆರು.. ಏಳು.. .. ಹತ್ತು.. ಇಪ್ಪತ್ತು..

ಎಣಿಕೆ ಇಪ್ಪತ್ತು ದಾಟಿದರೂ ಶರಣಾಗುವ ಸೂಚನೆಗಳು ಕಾಣಲಿಲ್ಲ. ಬಾಗಿಲ ಒಡೆಯಲು ತೋಪು ಉಡಾಯಿಸುವುದೇ ಎಂದು ಥ್ಯಾಕರೆಯ ಸೈನಿಕರು ಸಿದ್ಧರಾಗತೊಡಗಿದರು. ತೋಪಿನ ಗಾಡಿಗಳ ಚಲನವಲನ ಆರಂಭವಾಗುತ್ತ, ಥ್ಯಾಕರೆ ನಿರ್ದೇಶನ ನೀಡುತ್ತಿರುವಾಗ ಎಲಎಲಾ, ಇದೇನಿದೇನಿದು! ಧಢಾರನೆ ಭಾರೀ ದಿಡ್ಡಿಬಾಗಿಲು ಒಳಬದಿಗಲ್ಲ, ಹೊರಗೆ ತೆರೆದುಕೊಂಡಿತು! ಬಾಗಿಲ ಬಳಿಯೇ ನಿಂತಿದ್ದ ಬ್ರಿಟಿಷ್ ಸೈನಿಕರು ತತರಪತರಗೊಂಡು ಕೆಳಬಿದ್ದು, ಚೆಲ್ಲಾಪಿಲ್ಲಿಯಾದರು. ಬಿರುಗಾಳಿಯಂತೆ ನುಗ್ಗಿದ ಕಿತ್ತೂರಿನ ಸೈನಿಕರು ಒಮ್ಮೆಲೇ ಬ್ರಿಟಿಷರ ಮೇಲೆರಗಿದರು. ಬಿದ್ದವರು ಮೇಲೇಳಲೂ ಅವಕಾಶ ಕೊಡಲಿಲ್ಲ. ಕೋಟೆಯ ಮೇಲ್ಭಾಗದಿಂದ ದಿಗ್ದರ್ಶನ ಕೊಡುತ್ತಿದ್ದ ಕಿತ್ತೂರಿನ ರಾಣಿ ಚೆನ್ನಮ್ಮ ತನ್ನ ಸೈನಿಕರನ್ನು ಹುರಿದುಂಬಿಸುತ್ತ ಕೆಳಗಿಳಿದು ಬಂದಳು. ಕುದುರೆ ಮೇಲೆ ಕುಳಿತು ಕತ್ತಿ ಬೀಸುತ್ತ, ಕಂಚಿನ ಕಂಠದಿಂದ ಉದ್ಘೋಷ ಮಾಡುತ್ತ ಬಂದವಳೆಡೆಗೆ ಥ್ಯಾಕರೆ ಮುನ್ನುಗ್ಗಿದ. ಅವಳೊಬ್ಬಳನ್ನು ನಿವಾರಿಸಿದರೆ ಕಿತ್ತೂರ ತುತ್ತು ತನ್ನ ಬಾಯಿಗೇ ಬೀಳುವುದೆಂದು ಅವ ಅರಿತಿದ್ದ. ವೇಗದಿಂದ ಥ್ಯಾಕರೆ ಧಾವಿಸುವುದ ಕಂಡು ರಾಣಿಯ ಅಂಗರಕ್ಷಕ ಅಮಟೂರು ಬಾಳಪ್ಪ ಅವನೆದೆಗೆ ಗುಂಡು ಹಾರಿಸಿದ. ಕೆಳಬಿದ್ದವನ ಮೇಲೆ ಕಿತ್ತೂರು ಸೈನಿಕರು ಮುಗಿಬಿದ್ದರು. ಬ್ರಿಟಿಷರ ಸೇನೆ ಚದುರಿ ಛಿದ್ರವಾಯಿತು. ಹಲವರು ಸತ್ತರು, ಅಳಿದುಳಿದ ಕೆಲವರು ಓಡಿಹೋಗಿ ಪ್ರಾಣವುಳಿಸಿಕೊಂಡರು.

ನಲವತ್ತು ಬ್ರಿಟಿಷ್ ಸೈನಿಕರ ಸೆರೆ, ಎಂಬತ್ತು ಜನರ ಸಾವು. ಆ ಸಲ ವಿಜಯದಶಮಿಯ ಮರುದಿವಸವೂ ಕಿತ್ತೂರು ವಿಜಯ ದಿವಸವನ್ನು ಆಚರಿಸಿತು. ಕೋಟೆ ಮೇಲೆ ದೀಪ ಬೆಳಗಿದವು. ಸೈನಿಕರಿಗೆ, ಸರದಾರರಿಗೆ ರಾಣಿಯು ಬಟ್ಟೆ, ಬಂಗಾರ, ಹಣದ ಇನಾಮು ನೀಡಿದಳು.

ಆದರೆ ಈ ಸೋಲನ್ನು ಬ್ರಿಟಿಷರು ಸಹಿಸಿಕೊಳ್ಳಲಾರರು ಎಂದವಳು ಅರಿತಿದ್ದಳು. ವಿಜಯೋತ್ಸವ ಮುಗಿದದ್ದೇ ಹಿರಿಯರನ್ನು ಅರಮನೆಗೆ ಕರೆಸಿ ಮುಂದಿನ ದಾರಿಗಳ ಬಗೆಗೆ ಚರ್ಚಿಸಿದಳು. ಬಂಧನದಲ್ಲಿರುವ ಬ್ರಿಟಿಷ್ ಅಧಿಕಾರಿಗಳು, ಮಹಿಳೆಯರು, ಮಕ್ಕಳನ್ನು ಬಳಸಿ ಸಂಧಾನಕ್ಕೆ ಪ್ರಯತ್ನ ನಡೆಸಬಹುದೇ ಎಂದು ತರ್ಕಿಸಿದಳು. ಬಂಧಿತರ ಬಳಿಹೋಗಿ, ಇದು ರಾಜಕಾರಣದ ಅನಿವಾರ್ಯ ನಡೆಯೇ ಹೊರತು ನಿಮಗ್ಯಾವುದೇ ತೊಂದರೆಯಾಗದು ಎಂದು ಧೈರ್ಯ ತುಂಬಿದಳು. `ಪರಂಗಿ’ ಮಕ್ಕಳೊಡನೆ ಆಟವಾಡಿದಳು. ಯುದ್ಧ ವಿನಾಶಕಾರಿ ಎಂದು ಅವಳ ಹೆಣ್ಣು ಸಹಜ ಒಳಅರಿವು ತಿಳಿಸಿತ್ತು. ಆದರೆ ಸಂಸ್ಥಾನದ ಸ್ವಾತಂತ್ರ್ಯದ ಬೆಲೆ ತೆತ್ತು ಶರಣಾಗಲು ಸ್ವಾಭಿಮಾನಿಯಾದ ಅವಳು, ಕಿತ್ತೂರಿನ ಸರದಾರರು ಒಪ್ಪಲು ಸಾಧ್ಯವೇ ಇರಲಿಲ್ಲ.

ಮುಂದೇನು? ಇದು ಅವರ ಮುಂದಿದ್ದ ದೊಡ್ಡ ಪ್ರಶ್ನೆಯಾಗಿತ್ತು.

ಅರಮನೆ ಪ್ರವೇಶ

ಈಗ ಈ ಸಾಲುಗಳನ್ನು ಓದುವಾಗ ನಮ್ಮದೇ ನೆಲವನ್ನು ನಾವೇ ಆಳಲು ಯಾರ ಅಣತಿ ಯಾಕೆ ಬೇಕು ಎಂದೆನ್ನಿಸಬಹುದು. ಆದರೆ ಅಂದು ದೂರದ ಯೂರೋಪಿನ ಪುಟ್ಟ ದ್ವೀಪದಿಂದ ತಕ್ಕಡಿ ಹಿಡಿದು ವ್ಯಾಪಾರಕ್ಕೆಂದು ಬಂದವರ ಕುತಂತ್ರ, ದೇಶೀ ರಾಜರುಗಳ ವೈರ, ಸ್ಪರ್ಧೆಗಳು ನಮ್ಮದನ್ನು ಪಡೆಯಲು ನಾವೇ ಹೋರಾಡಬೇಕಾದ ವೈರುಧ್ಯಮಯ ಸನ್ನಿವೇಶವನ್ನು ಸೃಷ್ಟಿಸಿದ್ದವು. ಇಂತಹ ವಿಷಮ ಪರಿಸ್ಥಿತಿಗೆ ಕಿತ್ತೂರು ಹೇಗೆ ಬಂತು? ಈ ಬಿಕ್ಕಟ್ಟನ್ನು ಸಶಕ್ತವಾಗಿ ಎದುರಿಸಿತೇ?

ಇವೆಲ್ಲ ತಿಳಿಯುವ ಮೊದಲು ಕಿತ್ತೂರಿನ ಸಂಕ್ಷಿಪ್ತ ಇತಿಹಾಸ ತಿಳಿಯಬೇಕು.

ಬಸವಾದಿ ಶರಣರು ಕಲ್ಯಾಣದಲ್ಲಿ ಸಮಾಜ ಬದಲಾವಣೆಯ ಮಹಾಪ್ರಯತ್ನ ಆರಂಭಿಸಿದ 12 ನೆಯ ಶತಮಾನದ ವೇಳೆ ಕಿತ್ತೂರು ಗೀಜಗನಹಳ್ಳಿ ಎಂದು ಕರೆಸಿಕೊಂಡಿತ್ತು. ಕಾಲಾನಂತರದಲ್ಲಿ ಕಿತ್ತೂರು ಆಯಿತು. 1585 ರಲ್ಲಿ ಶಿವಮೊಗ್ಗ ಜಿಲ್ಲೆ ಸಾಗರದ ಹಿರೇಮಲ್ಲ ಶೆಟ್ಟಿ, ಚಿಕ್ಕಮಲ್ಲ ಶೆಟ್ಟಿ ಎನ್ನುವ ಇಬ್ಬರು ಧೈರ್ಯಶಾಲಿಗಳು ಬಿಜಾಪುರದ ಆದಿಲ್‌ಶಾಹಿ ಅರಸರಿಂದ ಹುಬ್ಬಳ್ಳಿ ಪರಗಣದ ಸರ್‌ದೇಶಮುಖಿಯನ್ನು ಬಳುವಳಿಯಾಗಿ ಪಡೆದರು. ಹಿರೇಮಲ್ಲಶೆಟ್ಟಿ `ಶಮಶೇರ್ ಜಂಗ್ ಬಹಾದ್ದೂರ್’ ಎಂಬ ಬಿರುದು ಪಡೆದ. ಬಳಿಕ ಸೋದರರು ಸಂಪಗಾಂವದಲ್ಲಿ ನೆಲೆಯಾಗಿ ತಮ್ಮದೇ ಸಂಸ್ಥಾನವನ್ನು ಕಟ್ಟಿದರು. 1585-1824 ರ ವರೆಗಿನ 239 ವರ್ಷಗಳ ಅವಧಿಯಲ್ಲಿ ಕಿತ್ತೂರು ಒಂದು ಸ್ವತಂತ್ರ ಸಂಸ್ಥಾನವಾಗಿ ರೂಪುಗೊಂಡು 12 ಸಮರ್ಥ ಆಳರಸರನ್ನು ಕಂಡಿತು. ಕಿತ್ತೂರು ರಾಜ್ಯ ಇಂದಿನ ಬೆಳಗಾವಿ, ಧಾರವಾಡ, ಕಾರವಾರ ಜಿಲ್ಲೆಗಳ ಭಾಗಗಳನ್ನೊಳಗೊಂಡಿತ್ತು.

1660 ರಿಂದ 1691 ರವರೆಗೆ 31ವರ್ಷ ಆಡಳಿತ ನಡೆಸಿದ ಅಲ್ಲಪ್ಪಗೌಡ ಸರದೇಸಾಯಿಯ ಕಾಲದಲ್ಲಿ ಕಿತ್ತೂರು ರಾಜಧಾನಿಯಾಯಿತು. ಅರಮನೆ, ಕೋಟೆಗಳ ನಿರ್ಮಾಣವಾಯಿತು. ಸಂಸ್ಥಾನವು ಖ್ಯಾತವಾಯಿತು. ನಂತರ ಮುದಿಮಲ್ಲಪ್ಪ ಗೌಡದೇಸಾಯಿಯ ಕಾಲದಲ್ಲಿ ಆದಿಲ್‌ಶಾಹಿಗಳ ಪ್ರಭಾವ ಇಳಿಕೆ ಕಂಡು ದಖ್ಖನವು ದೆಹಲಿಯ ಔರಂಗಜೇಬನ ಹಿಡಿತಕ್ಕೆ ಬಂತು. ಸವಣೂರ ನವಾಬರ ಜೊತೆ ಒಪ್ಪಂದ ಮಾಡಿಕೊಂಡ ಕಿತ್ತೂರು ಸ್ವತಂತ್ರವಾಗುಳಿಯಿತು. ಶಿವನಗೌಡ ಸರದೇಸಾಯಿ, ರುದ್ರಗೌಡ ಅಲಿಯಾಸ್ ಫಕೀರ ರುದ್ರಸರ್ಜರು ಆಡಳಿತ ನಡೆಸಿದರು. ಫಕೀರ ರುದ್ರಸರ್ಜನ ಹೆಂಡತಿ ಮಲ್ಲಮ್ಮ ಆಡಳಿತದ ಒಳಹೊರಗು ತಿಳಿದಿದ್ದಳು. ಪತಿಯು ನಿರಂಜನಿ ಎಂಬವಳಲ್ಲಿ ಅನುರಕ್ತನಾಗಿ ಕಿತ್ತೂರನ್ನು ಮರೆತೇಬಿಟ್ಟಾಗ ರಾಜ್ಯಭಾರದ ಪೂರ್ಣ ಹೊಣೆಯನ್ನು ತಾನೇ ನಿರ್ವಹಿಸಿದಳು.

ದರ್ಬಾರ್‌ ಹಾಲ್

ರಾಜ್ಯಾಧಿಕಾರ ಕೈ ಬದಲಿಸುವ ಇತಿಹಾಸ ಎಲ್ಲೆಡೆ ಹೇಗೋ ಇಲ್ಲಿಯೂ ಹಾಗೆಯೇ ಸಾಗಿತ್ತು. ನೆರೆಹೊರೆಯವರೊಡನೆ ಸ್ನೇಹದ ಸಮೀಕರಣಗಳು ಬದಲಾಗುತ್ತ ಇಂದು ಸ್ನೇಹಬಳಗದಲ್ಲಿದ್ದವರೇ ನಾಳೆ ಹಗೆಗಳಾಗುತ್ತಿದ್ದರು. 1746 ರಲ್ಲಿ ಸವಣೂರ ನವಾಬನು ಕಿತ್ತೂರನ್ನು ಮರಾಠರಿಗೆ ಬಿಟ್ಟುಕೊಟ್ಟಾಗ ರಾಜ್ಯವು ಪೇಶ್ವೆಗಳ ಆಡಳಿತಕ್ಕೆ ಒಳಪಟ್ಟಿತು.

ರುದ್ರಗೌಡನ ನಂತರ ಬಂದ ವೀರಪ್ಪಗೌಡ 33 ವರ್ಷಗಳ ಕಾಲ 1782ರವರೆಗೆ ರಾಜ್ಯವನ್ನಾಳಿದನು. ಹೈದರಾಲಿಯು ಪೇಶ್ವೆಗಳನ್ನು ಸೋಲಿಸಿದಾಗ ಅವನೊಡನೆ ಸಂಧಾನ ಮಾಡಿಕೊಂಡು ಕಿತ್ತೂರು ದೇಸಗತಿಯನ್ನು ಸ್ವತಂತ್ರವಾಗಿಟ್ಟುಕೊಂಡನು. ಆದರೆ 1779 ರಲ್ಲಿ ಪೇಶ್ವೆಗಳು ಗೋಕಾಕದ ಮೇಲೆ ದಾಳಿ ನಡೆಸಿ ವೀರಪ್ಪ ಗೌಡನನ್ನು ಬಂಧಿಸಿ ಆತ ಸೆರೆಮನೆಯಲ್ಲಿಯೇ 1782 ರಲ್ಲಿ ಮರಣ ಹೊಂದಿದ. ಅವನಿಗೆ ಮಕ್ಕಳಿರದ ಕಾರಣ ಕಿತ್ತೂರಿನ ರಾಜಮನೆತನದವರು ಮಲ್ಲಸರ್ಜ ಎಂಬ ತರುಣನನ್ನು ದತ್ತಕ ತೆಗೆದುಕೊಂಡರು.

1782 ರಲ್ಲಿ ಪಟ್ಟಕ್ಕೆ ಬಂದ ಮಲ್ಲಸರ್ಜ ಕಿತ್ತೂರನ್ನು ಆಳಿದ 12 ಅರಸರಲ್ಲಿ ಅತ್ಯಂತ ಪ್ರಭಾವಶಾಲಿಯಾದವನು. ದೇಶವು ರಾಜಕೀಯವಾಗಿ ಅಭದ್ರತೆ, ಸಂದಿಗ್ಧಗಳನ್ನೆದುರಿಸುತ್ತಿದ್ದ ಕಾಲದಲ್ಲಿ 35 ವರ್ಷ ಕಿತ್ತೂರನ್ನು ಆಳಿದವನು. ಅವನ ಮೊದಲ ರಾಣಿ ತಲ್ಲೂರು ದೇಸಾಯರ ಮಗಳಾಗಿದ್ದ ರುದ್ರಮ್ಮ.

1785 ರಲ್ಲಿ ಕಿತ್ತೂರನ್ನು ವಶಪಡಿಸಿಕೊಂಡ ಟಿಪ್ಪು ಮಲ್ಲಸರ್ಜನನ್ನು ಬಂಧಿಸಿ ಪಿರಿಯಾಪಟ್ಟಣದ ಬಳಿಯಿರುವ ದುರ್ಗಮಕೋಟೆ ಕಬ್ಬಾಳದುರ್ಗದಲ್ಲಿಟ್ಟ. ೨೦ ವರ್ಷ ವಯಸ್ಸಿನ ಮಲ್ಲಸರ್ಜ ಕೋಟೆಯಿಂದ ತಪ್ಪಿಸಿಕೊಂಡು ಬ್ರಿಟಿಷರ ನೆರವಿನೊಂದಿಗೆ ಅವರ ಸೀಮೆಗಳ ಹಾಯ್ದು ಬಬಲೇಶ್ವರಕ್ಕೆ ಬಂದು ಕಿತ್ತೂರಿಗೆ ಮರಳಿದ. 1792 ರ ಟಿಪ್ಪು-ಮರಾಠ ಸಂಧಾನದ ಅನುಸಾರ ಕಿತ್ತೂರು ಮತ್ತೆ ಪೇಶ್ವೆಗಳ ಸುಪರ್ದಿಗೆ ಬಂತು. ಸುಯೋಧ ಮಲ್ಲಸರ್ಜನಿಗೆ ಯುದ್ಧವಿದ್ಯೆಯಲ್ಲಿ ಪರಿಣತಳಾಗಿದ್ದ, ಕಿತ್ತೂರಿನಿಂದ ಮೂವತ್ತು ಮೈಲು ದೂರದ ಕಾಕತಿಯ ಹದಿನೈದರ ತರುಣಿ ಚೆನ್ನಮ್ಮ1792 ರಲ್ಲಿ ಎರಡನೆಯ ಮಡದಿಯಾಗಿ ಬಂದಳು. ಅಂತಃಪುರದ ಮತ್ತು ರಾಜ್ಯದ ಬಿಕ್ಕಟ್ಟುಗಳನ್ನು ಬಹುಬೇಗ ಅರಿತುಕೊಂಡು ಬಾಳಸಂಗಾತಿಯ ಹೆಗಲಿಗೆ ಹೆಗಲಾಗಿ ನಿಂತಳು. 1802 ರಲ್ಲಿ ಮಲ್ಲಸರ್ಜ ಸಂಗೊಳ್ಳಿಯಲ್ಲಿ ಸೈನ್ಯ ಇಟ್ಟುಕೊಳ್ಳಲು ಬ್ರಿಟಿಷರಿಗೆ ಅವಕಾಶ ನೀಡಿದ. ಅದೇವೇಳೆ ಪೇಶ್ವೆಗಳಿಗೂ ವಾರ್ಷಿಕ 1,75,000 ರೂಪಾಯಿ ವರ್ಷಾಶನವನ್ನೂ ನೀಡಿ ತನ್ನ ನಾಡನ್ನು ಸ್ವತಂತ್ರವಾಗಿಟ್ಟುಕೊಂಡ. (ಆಗ ಕಿತ್ತೂರಿನ ವಾರ್ಷಿಕ ವರಮಾನ ಐದು ಲಕ್ಷ ರೂ.ಗಳಷ್ಟಿತ್ತು.) ಆದರೆ ಮೋಸದಿಂದ ಅವನನ್ನು ಬಂಧಿಸಿ ಸೆರೆಯಲ್ಲಿಟ್ಟ ಪೇಶ್ವೆಗಳು ಮೂರು ವರ್ಷಗಳ ನಂತರ ಬಿಡುಗಡೆ ಮಾಡಿದರು. ಕಿತ್ತೂರಿಗೆ ಬಂದ ಮೂರ‍್ನಾಲ್ಕು ದಿನಗಳಲ್ಲೇ 1816 ರಲ್ಲಿ ಮಲ್ಲಸರ್ಜ ತೀರಿಕೊಂಡ. ಬಂಧನದಲ್ಲಿ ಅವನಿಗೆ ವಿಷಪ್ರಾಶನ ಮಾಡಿದರೆಂಬ ಸುದ್ದಿ ಕಾಡ್ಗಿಚ್ಚಿನಂತೆ ಹಬ್ಬಿತು.

ಚೆನ್ನಮ್ಮ ಮೆಮೋರಿಯಲ್‌ ಮ್ಯೂಸಿಯಂ

ಬಳಿಕ ಶಿವಲಿಂಗ ರುದ್ರಸರ್ಜ ರಾಜನಾದ. ತರುಣ ಅರಸನಿಗೆ ಸಾಹಿತ್ಯ, ಕಲೆಗಳಲ್ಲೇ ಹೆಚ್ಚು ಆಸಕ್ತಿ. ಅನಾರೋಗ್ಯವೂ ಕಾಡುತ್ತಿತ್ತು. ಅವನ ತಾಯಿ ರುದ್ರಮ್ಮ ಅಧ್ಯಾತ್ಮದತ್ತ ಒಲವು ತೋರಿಸಿದ ಕಾರಣ ಚಿಕ್ಕಮ್ಮ ಚೆನ್ನಮ್ಮನೇ ಆಡಳಿತ ನಡೆಸಬೇಕಾದ ಅನಿವಾರ್ಯತೆ ಸೃಷ್ಟಿಯಾಯಿತು. ಪೇಶ್ವೆಗಳು ಮತ್ತು ಟಿಪ್ಪುವಿನ ಉಪಟಳ ಹತ್ತಿಕ್ಕಲು ಕಿತ್ತೂರು ಬ್ರಿಟಿಷರತ್ತ ಸ್ನೇಹ ಹಸ್ತ ಚಾಚಿತು. ಸ್ನೇಹಕ್ಕೆ ಬೆಲೆ ಕಟ್ಟಲಾದೀತೇ? ಕಟ್ಟಲೇಬೇಕು. ಬ್ರಿಟಿಷರ ಸ್ನೇಹಕ್ಕೆ ವರ್ಷಕ್ಕೆ 1,70,000ರೂಪಾಯಿ ಸ್ಥಾನಿಕ ಖರ್ಚನ್ನು ಕೊಡಬೇಕಾಯಿತು.

ಕ್ಷಯರೋಗದಿಂದ ಬಳಲುತ್ತಿದ್ದ ಶಿವಲಿಂಗ ರುದ್ರಸರ್ಜ 1824 ರಲ್ಲಿ ತೀರಿಕೊಂಡಾಗ `ಗಂಡು ಉತ್ತರಾಧಿಕಾರಿ’ ಯಾರಿರಲಿಲ್ಲ. ಪತ್ನಿ ವೀರಮ್ಮ ಅಪ್ರಾಪ್ತಳು. ಅವನ ಮರಣಕ್ಕಿಂತ ಎರಡು ತಿಂಗಳು ಮೊದಲು ರಾಣಿ ಚೆನ್ನಮ್ಮ ಮತ್ತು ಸಂಸ್ಥಾನದ ಹಿತೈಷಿಗಳು ರಾಜಮನೆತನದ ಸಂಬಂಧಿಗಳಾದ ನಾಲ್ಕೈದು ಹುಡುಗರನ್ನು ಕರೆಸಿ, ಪರಿಶೀಲಿಸಿ ಮಾಸ್ತಮರಡಿ ಗೌಡರ ಮಗ ಶಿವಬಸಪ್ಪನನ್ನು ದತ್ತಕ ತೆಗೆದುಕೊಂಡಿದ್ದರು. ಈ ವಿಷಯವನ್ನು ಧಾರವಾಡದ ಕಲೆಕ್ಟರ್ ಥ್ಯಾಕರೆಗೆ ತಿಳಿಸಿ ಪತ್ರ ಬರೆದಿದ್ದರು. ಆದರೆ ಪತ್ರ ಥ್ಯಾಕರೆಗೆ ಮುಟ್ಟುವ ಮೊದಲೇ ಶಿವಲಿಂಗ ರುದ್ರಸರ್ಜ ಮರಣಿಸಿದ. ಇದಕ್ಕೆ ಥ್ಯಾಕರೆ ತಕರಾರು ತೆಗೆದ. ಪತ್ರದಲ್ಲಿ ಹಾಕಿದ ತಾರೀಖು, ರುದ್ರಸರ್ಜನ ಮರಣದ ತಾರೀಖಿಗೆ ತಾಳೆಯಾಗಿಲ್ಲ; ಅವನು ಪ್ರಜ್ಞಾಶೂನ್ಯನಾದ ಮೇಲೆ ಅಥವಾ ಸತ್ತಮೇಲೆ ದತ್ತಕ ನಡೆದಿದೆ, ದತ್ತಕ ಪ್ರಕ್ರಿಯೆ ಕ್ರಮಬದ್ಧವಾಗಿಲ್ಲದಿರುವುದರಿಂದ ಅದು ಅಸಿಂಧು ಎಂದು ಆರೋಪಿಸಿ ಕಿತ್ತೂರು ವಾರಸುದಾರರಿಲ್ಲದ ಸಂಸ್ಥಾನ ಎಂದು ಘೋಷಿಸಲು ಉತ್ಸುಕನಾದ. ಗಂಡು ದಿಕ್ಕಿಲ್ಲದ ಕಿತ್ತೂರಿನ ಖಜಾನೆಯ ಸುರಕ್ಷತೆ ಬಗೆಗೆ ಕ್ರಮ ತೆಗೆದುಕೊಳ್ಳಬೇಕಾಗಿದೆಯೆಂದು ಡೆಕ್ಕನ್ ಕಮಿಷನರ್ ಚಾಪ್ಲಿನ್‌ಗೆ ವರದಿ ಕಳಿಸಿ ಆಡಳಿತದಲ್ಲಿ ಹಸ್ತಕ್ಷೇಪ ಮಾಡತೊಡಗಿದ.

`ಗಂಡು ದಿಕ್ಕಿಲ್ಲದ ರಾಜ್ಯ’

ಕಿತ್ತೂರೆಂಬ ಊರಿನ ತುಂಬ ಗಂಡಸರಿದ್ದರು. ಆ ಗಂಡಸರನ್ನು ಹೆತ್ತು, ಹೊತ್ತು ಅವರ ಎರಡು ಪಟ್ಟು ಸಾಮರ್ಥ್ಯ ಗಳಿಸಿದ್ದ ಹೆಂಗಸರೂ ಇದ್ದರು. ಆದರೂ ಬ್ರಿಟಿಷರು `ಗಂಡು ದಿಕ್ಕಿಲ್ಲದ’ ಕಿತ್ತೂರಿನ ಸುರಕ್ಷೆ ತಮ್ಮದೆಂದು ಆರೋಪಿಸಿಕೊಂಡು ಭಾರೀ ಉಪಕಾರ ಮಾಡಲು ಮುಂದಾದರು! (ಆಗಿನ್ನೂ ಡಾಲ್‌ಹೌಸಿಯ ಡಾಕ್ಟ್ರಿನ್ ಆಫ್ ಲಾಪ್ಸ್ ಜಾರಿಗೆ ಬಂದಿರಲಿಲ್ಲ. ಅದಕ್ಕೆ ಮೊದಲೇ ಅನ್ಯಾಯದ ಆ ನೀತಿಯನ್ನು ಈಸ್ಟ್ ಇಂಡಿಯಾ ಕಂಪನಿ ಅನ್ವಯಿಸತೊಡಗಿತ್ತು.) ಸಂಸ್ಥಾನದ ದೈನಂದಿನ ಆಡಳಿತ ನೋಡಿಕೊಳ್ಳಲಿಕ್ಕೆ ಮಲ್ಲಪ್ಪ ಶೆಟ್ಟಿ ಹಾಗೂ ಹಾವೇರಿ ವೆಂಕಟರಾವ್ ಅವರನ್ನು ಕಳಿಸಿ ಖಜಾನೆಗೆ ಬೀಗ ಹಾಕಲಾಯಿತು. ಖಜಾನೆಯ ಕಾವಲಿಗೆ, ದಿನದಿನದ ಆಡಳಿತಕ್ಕೆ ಕಂಪನಿಯ ಅಧಿಕಾರಿಗಳನ್ನು ನೇಮಿಸಲಾಯಿತು. ಇದನ್ನು ವಿರೋಧಿಸಿ ಮನ್ರೋ, ಥ್ಯಾಕರೆ, ಚಾಪ್ಲಿನ್ನನಿಗೆ ರಾಣಿ ಚೆನ್ನಮ್ಮ ಪತ್ರ ಬರೆದಳು. ವೀರಮ್ಮನೂ ಚಾಪ್ಲಿನ್ನನಿಗೆ ಪತ್ರ ಬರೆದಳು.

ಸ್ನೇಹಹಸ್ತ ಚಾಚಿದ್ದ ಬ್ರಿಟಿಷರು ಈಗ ಕಿತ್ತೂರನ್ನೇ ನುಂಗಲು ಹವಣಿಸತೊಡಗಿದ್ದರು. ಊರ ಒಳಗೂ, ಹೊರಗೂ ಕಿತ್ತೂರಿಗೆ ದ್ರೋಹ ಬಗೆವ ವಿರೋಧಿಗಳು ಗುಟ್ಟಾಗಿ ಸೇರಿಕೊಂಡಿದ್ದರು. ಒಂದೆಡೆ ಈ ಬಿಕ್ಕಟ್ಟು, ಮತ್ತೊಂದೆಡೆ ಬ್ರಿಟಿಷರ ಸಂಚು.  ಸ್ವಾಭಿಮಾನಿ ಚೆನ್ನಮ್ಮ ಕೆರಳಿದರೂ ತಾಳ್ಮೆ ವಹಿಸಿದಳು. ಯಾವುದಕ್ಕೂ ಇರಲಿ ಎಂದು ಕೊಲ್ಲಾಪುರ ಸಂಸ್ಥಾನಕ್ಕೆ ಸಹಾಯ ಕೋರಿ ಪತ್ರ ಹಾಕಿದಳು. ರಾಜ್ಯದ ಹಿರೀಕರೊಡನೆ ಮಾತನಾಡಿದಳು. ಬ್ರಿಟಿಷರು ಒಪ್ಪಿಕೊಳ್ಳದಿದ್ದರೂ ಚೆನ್ನಮ್ಮನೇ ತಮ್ಮ ಅಧಿನಾಯಕಿಯೆಂದು ಕಿತ್ತೂರಿನ ಸರದಾರರೆಲ್ಲರೂ ಸ್ವೀಕರಿಸಿದರು. ಕಿತ್ತೂರಿನ ಸೈನ್ಯಬಲದ ಬಗೆಗೆ ಸೇನಾಧಿಕಾರಿ ಗುರುಸಿದ್ದಪ್ಪ ಅವರೊಡನೆ ಚೆನ್ನಮ್ಮ ಚರ್ಚಿಸಿದಳು. ಎಲ್ಲ ಸುಬೇದಾರರು, ಸರದಾರರು, ಕಿಲ್ಲೇದಾರರು, ದಳವಾಯಿ, ಶೇತ್ ಸನದಿಗಳಿಗೆ ಯುದ್ಧಕ್ಕೆ ಸನ್ನದ್ಧರಾಗಿ ಕಿತ್ತೂರಿಗೆ ಬರುವಂತೆ ಹೇಳಿಕಳಿಸಿದಳು. ಬದುಕು, ಸಾವುಗಳ ಹಂಗು ತೊರೆದು ಕಾದಲು ಎಲ್ಲರೂ ಸಿದ್ಧರಾದರು. ಈ ಹಂತದಲ್ಲಿ ಕಿತ್ತೂರು ಸೇನೆ ಸೇರಿದ್ದ ಸಂಗೊಳ್ಳಿ ಊರಿನ ತರುಣ ರಾಯಣ್ಣನು ರಾಣಿಗೆ ತನ್ನ ನಿಷ್ಠೆ ಮೆರೆದು ಯುದ್ಧ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ.

ಕಿತ್ತೂರು ಯುದ್ಧಕ್ಕೆ ಸಿದ್ಧವಾಗುತ್ತಿರುವ ಸುದ್ದಿ ಥ್ಯಾಕರೆಗೆ ಹೋಯಿತು. ಅವರನ್ನು ಕೆಣಕಲೆಂದು ಅಕ್ಟೋಬರ್21, 1824 ರಂದು ಖಜಾನೆ ಸುರಕ್ಷತೆ ಕರಾರಿಗೆ ಸಹಿ ಹಾಕುವಂತೆ ಕೋಟೆಯೊಳಗಿದ್ದ ಸರದಾರರಿಗೆ ಥ್ಯಾಕರೆ ಕರಾರು ಪತ್ರ ಕಳಿಸಿದ. ಚೆನ್ನಮ್ಮನನ್ನು ಮೀರಿ ಅವಳ ಸರದಾರರಿಗೆ ಖಜಾನೆ ಅಧಿಕಾರ ನೀಡುವೆನೆಂದು ಆಮಿಷಗೊಳಿಸುವ ಯತ್ನ ಅದು. ತಮ್ಮ ರಾಣಿಯ ಆಜ್ಞೆಯಂತೆ ತಾವು ನಡೆಯುವವರೇ ಹೊರತು ಅವನ ಒತ್ತಾಯಕ್ಕೆ ಮಣಿಯಲಾರೆವು ಎಂದು ಉತ್ತರಿಸಿದ ಅವರು ಸಹಿ ಹಾಕಲು ನಿರಾಕರಿಸಿದರು.

ರಾಣಿಯೊಂದಿಗೆ ತಾನೇ ಮಾತನಾಡುವೆನೆಂದು ಥ್ಯಾಕರೆ ಅರಮನೆಗೆ ಹೋದ. ಅವತ್ತು ಮಹಾನವಮಿ. ಅರಮನೆಯಲ್ಲಿ ಹಬ್ಬದ ಆಚರಣೆ ನಡೆದಿತ್ತು. ಚೆನ್ನಮ್ಮ ಹೊರಗೆ ಬರಲೇ ಇಲ್ಲ. ತನ್ನನ್ನು ಯಾರೂ ಕ್ಯಾರೇ ಅನ್ನದಾಗ ಕಾದು ಕಾದು ಕೋಪಗೊಂಡಿದ್ದ ಥ್ಯಾಕರೆ ವ್ಯಗ್ರನಾಗಿ ಹೊರನಡೆದ. ಕೋಟೆಯ ಹೊರಹೋದವನೇ ಸೇನೆಯೊಡನೆ ಬೀಡುಬಿಟ್ಟ. ತನ್ನ ಕಮ್ಯಾಂಡರನಿಗೆ ಕೋಟೆಯ ಬಾಗಿಲಿನ ಕಡೆಗೆ ತೋಪಿನ ಗಾಡಿ ನಡೆಸುವಂತೆ ತಿಳಿಸಿ ಶರಣಾಗತಿ ಅಥವಾ ಪರಿಣಾಮ ಎದುರಿಸುವುದು – ಈ ಎರಡರಲ್ಲಿ ಒಂದಕ್ಕೆ ಸಿದ್ಧವಾಗಲು ಕಿತ್ತೂರಿನವರಿಗೆ ಹೇಳಿಕಳಿಸಿದ.

ಆ ದಿನ, ಮರುದಿನ ಏನೂ ಸಂಭವಿಸಲಿಲ್ಲ. ಯುದ್ಧವನ್ನು ಮೈಮೇಲೆಳೆದುಕೊಳ್ಳಬಾರದೆಂಬ, ಕಾದು ನೋಡುವ ತಂತ್ರ ಚೆನ್ನಮ್ಮನದು. ಕೊಲ್ಲಾಪುರ ಸಂಸ್ಥಾನದಿಂದ ಏನೂ ಉತ್ತರ ಬಂದಿರಲಿಲ್ಲ. ಹಾಗಂತ ತಾವು ಶಸ್ತ್ರಾಸ್ತ್ರ ಒಪ್ಪಿಸಿ ಶರಣಾಗುವುದೂ ಸಾಧ್ಯವಿರಲಿಲ್ಲ. ತನ್ನ ಸರದಾರರನ್ನು ಸೇರಿಸಿ, `ಕಿತ್ತೂರು ನಮ್ಮದು. ನಮ್ಮ ರಾಜ್ಯದ ಒಡೆಯರು ನಾವೇ. ಥ್ಯಾಕರೆಯ ಅವಮಾನ, ಹಸ್ತಕ್ಷೇಪ ಸಹಿಸಲು ಸಾಧ್ಯವೇ ಇಲ್ಲ. ಪ್ರಾಣಕ್ಕಿಂತ ಹೆಚ್ಚು ಸ್ವಾತಂತ್ರ್ಯವನ್ನು ಪ್ರೀತಿಸುವ ನಾವು ಬ್ರಿಟಿಷರೊಡನೆ ಹೋರಾಡೋಣ. ಗುಲಾಮರಾಗಿ ಬಾಳುವುದಕ್ಕಿಂತ ಬದುಕು, ಸಾವು ಎರಡರಲ್ಲೊಂದನ್ನು ಹೋರಾಡಿ ನಿರ್ಧರಿಸೋಣ’ ಎಂದು ಹೇಳಿದಳು.

ಅವಳ ತಂತ್ರಗಾರಿಕೆ, ಸಿದ್ಧತೆಗೆ ಮೊದಲ ಯಶಸ್ಸು ದೊರಕಿತು. ಥ್ಯಾಕರೆಯ ಸೀಮಿತ ಸೈನ್ಯದ ಮೇಲೆ ಕಿತ್ತೂರಿನ ಸೈನಿಕರು ಎರಗಿದರು. ಥ್ಯಾಕರೆ ಮರಣ ಹೊಂದಿದ. ಬ್ರಿಟಿಷ್ ಅಧಿಕಾರಿಗಳಾದ ಸ್ಟಿವನ್ಸನ್ ಮತ್ತು ಇಲಿಯಟ್, ಸೈನಿಕರು, ಮಹಿಳೆಯರು, ಮಕ್ಕಳು ಸೆರೆಸಿಕ್ಕರು. ಬಂಧಿತರನ್ನಿಟ್ಟುಕೊಂಡು ಬ್ರಿಟಿಷರನ್ನು ಬಗ್ಗಿಸಲು ಸಾಧ್ಯವಾದೀತೋ ಎಂದು ಚೆನ್ನಮ್ಮ ಕಾದು ನೋಡುವ ತಂತ್ರ ಅನುಸರಿಸಲು ಸರದಾರರನ್ನು ಒಪ್ಪಿಸಿದಳು.

ಸತ್ಯ ವಾಕ್ಯಕೆ ತಪ್ಪಿ ನಡೆದರು

ಇತ್ತ ಬ್ರಿಟಿಷರು ಸಂಧಾನದ ಮಾತುಕತೆ ಮುಂದುವರೆಸಿದ ನಾಟಕ ಆಡಿದರು. ಒಳಗೊಳಗೇ ಆಮಿಷಗಳನ್ನೊಡ್ಡಿ ಕಿತ್ತೂರು ಪ್ರಜೆಗಳಲ್ಲಿ ಒಡಕು ತರುವ ಪ್ರಯತ್ನ ನಡೆಸಿದರು. ಬೇರೆಡೆಗಳಿಂದ ಸೈನ್ಯ ಜಮಾವಣೆ ಮಾಡಿಕೊಂಡರು. ಧಾರವಾಡದ ಕಲೆಕ್ಟರ್ ಆಗಿ ಬಂದ ಮನ್ರೋ ಪುಣೆಯ ಚಾಪ್ಲಿನ್ನನ ಬಳಿ, ಮುಂಬಯಿಯ ಗವರ್ನರ್ ಎಲ್ಫಿನ್‌ಸ್ಟನ್ ಬಳಿ ವಿಷಯ ಚರ್ಚಿಸಿ ಕಿತ್ತೂರಿನ ಮೇಲೆ ಆಕ್ರಮಣ ನಡೆಸುವ ಅಧಿಕಾರ ಮತ್ತು ತಯಾರಿಯೊಂದಿಗೆ ಹಿಂದಿರುಗಿದ.

ನಲವತ್ತು ದಿನಗಳು ಕಳೆದವು. ಮಾತುಕತೆಗಳೂ ನಡೆಯುತ್ತಿದ್ದವು. ಸದಾಶಯದ ನಡೆಯಾಗಿ ರಾಣಿ ಚೆನ್ನಮ್ಮ40 ಬಂಧಿತ ಬ್ರಿಟಿಷರನ್ನು ಬಿಡುಗಡೆ ಮಾಡಿದಳು. ಆದರೆ ಇಬ್ಬರು ಹಿರಿಯ ಅಧಿಕಾರಿಗಳನ್ನಿನ್ನೂ ಇಟ್ಟುಕೊಂಡಿದ್ದಳು. ೧೮೨೪, ಡಿಸೆಂಬರ್ ೧ರ ಮಧ್ಯರಾತ್ರಿಯೊಳಗೆ ಅಧಿಕಾರಿಗಳನ್ನು ಬಿಡುಗಡೆ ಮಾಡದಿದ್ದರೆ, ಆಯುಧ ಕೆಳಗಿಟ್ಟು ಶರಣಾಗದಿದ್ದರೆ ಕಿತ್ತೂರನ್ನು ನಾಶಗೊಳಿಸುವುದಾಗಿ ಚಾಪ್ಲಿನ್ ಹೇಳಿಕಳಿಸಿದ. ಯುದ್ಧ ಮಾಡುವುದಿಲ್ಲವೆಂದು ಮಾತು ಕೊಟ್ಟರೆ ಮಾತ್ರ ಆ ಇಬ್ಬರನ್ನು ಬಿಡುಗಡೆ ಮಾಡುವುದಾಗಿ ರಾಣಿ ಮರು ಓಲೆ ಕಳಿಸಿದಳು. ಚಾಪ್ಲಿನ್ ಅದಕ್ಕೊಪ್ಪಿದ. ಅದರಂತೆ ಇಬ್ಬರು ಅಧಿಕಾರಿಗಳು ಬಿಡುಗಡೆಯಾದರು.

ಆದರೆ ಚಾಪ್ಲಿನ್ ಮಾತು ತಪ್ಪಿದ. ಡಿಸೆಂಬರ್ 3 ನೇ ತಾರೀಖು 10 ಗಂಟೆಯೊಳಗೆ ಶರಣಾಗದಿದ್ದರೆ ಆಕ್ರಮಣ ನಡೆಸುವುದಾಗಿ ತಿಳಿಸಿದ.

ಇದ್ಯಾವ ಸೀಮೆಯ ನ್ಯಾಯ? ಆದರೆ ಆಗಲೂ ಚೆನ್ನಮ್ಮ ಸಂಯಮದಿಂದಲೇ ಪತ್ರ ಬರೆದಳು. `ನಾನು ನ್ಯಾಯ ಮತ್ತು ಸತ್ಯಕ್ಕೆ ನಿಷ್ಠಳಾಗಿರುವವಳು. ನೀವೂ ಹಾಗೆಯೇ ವರ್ತಿಸಿ ಈ ಮೊದಲು ಕೊಟ್ಟ ಸನ್ನದಿನಂತೆ ಸ್ವತಂತ್ರವಾಗಿ ಆಡಳಿತ ನಡೆಸಲು ಕಿತ್ತೂರಿಗೆ ಅವಕಾಶ ನೀಡಿ’ ಎಂದು ತಿಳಿಸಿದಳು. ಕಿತ್ತೂರಿಗೆ ಸ್ವಾತಂತ್ರ್ಯ ಬೇಕೇಬೇಕು; ಸಿಗದಿದ್ದರೆ ಪ್ರಾಣದ ಹಂಗು ತೊರೆದು ಹೋರಾಡಲು ತಾವು ಸಿದ್ಧ ಎಂಬ ಸಂದೇಶ ಕಳಿಸಿದಳು.

ಕಿತ್ತೂರಿನಲ್ಲಿ ಲೇಖಕಿ

ಬ್ರಿಟಿಷರೊಡನೆ ಸ್ನೇಹಭಾವದ ಎಲ್ಲ ಪ್ರಯತ್ನಗಳೂ ವಿಫಲವಾದವು. ಯುದ್ಧ ಮಾಡದೇ ಬೇರೆ ದಾರಿಯೇ ಇರಲಿಲ್ಲ.1824, ಡಿಸೆಂಬರ್ 3,4,5 ಎರಡೂ ಪಡೆಗಳ ನಡುವೆ ಕಾಳಗ ನಡೆಯಿತು. ರಾಯಣ್ಣನ ಗ್ರಾಮೀಣ ಭಾಗದ ಕಲಿಗಳ ದಂಡೂ ಬ್ರಿಟಿಷ್ ಸೇನೆಯ ವಿರುದ್ಧ ಹೋರಾಡಿತು. ಎರಡೂ ಕಡೆ ಸಾಕಷ್ಟು ಜನ ಜೀವ ತೆತ್ತರು. ಕಿತ್ತೂರು ಸೈನ್ಯಕ್ಕೆ ಅಪಾರ ಹಾನಿಯಾಯಿತು. ಸೈನ್ಯ ಕೋಟೆಗೆ ಹಿಮ್ಮೆಟ್ಟಿತು. ಬ್ರಿಟಿಷರು ಫಿರಂಗಿ ಬಳಸಿ ಕೋಟೆ ಗೋಡೆ ಒಡೆಯಲೆತ್ನಿಸಿದರು. ಕಿತ್ತೂರಿನ ಕೆಲವರ ದ್ರೋಹದಿಂದ ಕೋಟೆ ರಕ್ಷಿಸುವುದು ಅಸಾಧ್ಯವಾಯಿತು. ತೋಪು ಸಿಡಿಯದಾಯಿತು. ಡಿಸೆಂಬರ್ 4 ರಂದು ಸರದಾರ ಗುರುಸಿದ್ದಪ್ಪ ಸೆರೆಯಾದ. ಡಿಸೆಂಬರ್ 5 ರಂದು ಶಿವಲಿಂಗ ರುದ್ರಸರ್ಜನ ಮಡದಿ ವೀರಮ್ಮ, ಶಿವಬಸವರಾಜನ ಪತ್ನಿ ಜಾನಕಿಬಾಯಿವರೊಡನೆ ಚೆನ್ನಮ್ಮ ತಪ್ಪಿಸಿಕೊಳ್ಳಲು ನೋಡಿದರೂ ದ್ರೋಹಿಗಳು ನೀಡಿದ ಸುಳಿವಿನಿಂದ ಸೆರೆಯಾದಳು. ಕೋಟೆಯ ವಿಶಾಲ ಆವರಣ ಸೈನಿಕರ ಮೃತದೇಹಗಳಿಂದ ತುಂಬಿರುವುದನ್ನು ನೋಡುತ್ತಲೇ ಬಂಧನಕ್ಕೆ ಒಳಗಾದಳು. ಮನ್ರೋ ಯುದ್ಧದಲ್ಲಿ ಗಾಯಗೊಂಡರೂ ಅವನ ಪಡೆ ವಿಜಯ ಸಾಧಿಸಿ ಕೋಟೆಯನ್ನು ವಶಕ್ಕೆ ಪಡೆಯಿತು. ಕಿತ್ತೂರು ಖಜಾನೆ ಲೂಟಿಯಾಯಿತು. 16 ಲಕ್ಷ ರೂಪಾಯಿ, 4 ಲಕ್ಷ ಬೆಲೆಬಾಳುವ ರತ್ನಾಭರಣಗಳೆಲ್ಲ ಚಾಪ್ಲಿನ್ನನ ವಶಕ್ಕೆ ಹೋದವು. ಒಂದು ವಾರದ ನಂತರ ರಾಜಕುಟುಂಬದ ಮೂವರು ಮಹಿಳೆಯರನ್ನು ಬೈಲಹೊಂಗಲ ಕೋಟೆಗೆ ಸ್ಥಳಾಂತರಿಸಿದ. ಮೂವರಿಗೂ ವಾರ್ಷಿಕ 40,000 ರೂಪಾಯಿಗಳ ನಿವೃತ್ತಿ ವೇತನ ಗೊತ್ತುಪಡಿಸಿದ. ರಾಣಿ ಚೆನ್ನಮ್ಮ ಊರು ಬಿಟ್ಟ ಬಳಿಕ ಚಾಪ್ಲಿನ್ ಅರಮನೆಯನ್ನು ನೆಲಸಮ ಮಾಡಲು ಆದೇಶಿಸಿದ. ಭಾರೀ ಮರದ ದಿಮ್ಮಿಗಳಿಂದ ತಯಾರಿಸಿದ ಬಾಗಿಲು, ತೊಲೆ, ಕಿಟಕಿ, ಬಟ್ಟೆ, ಪಾತ್ರೆಯೇ ಮೊದಲಾಗಿ ಎಲ್ಲವನ್ನು ಹರಾಜು ಹಾಕಿದ. ಉಳಿದಿದ್ದನ್ನು ಮುಕ್ತವಾಗಿ ಲೂಟಿ ಹೊಡೆಯಲು ತನ್ನ ಸೈನಿಕರಿಗೆ ಅವಕಾಶ ನೀಡಿದ. ಅರಮನೆಯ ಮುಂಬಾಗಿಲನ್ನು ಕೆಡವಿದರು. ಮರಮುಟ್ಟು, ದಾಖಲೆಗಳಿಗೆ ಬೆಂಕಿ ಹಚ್ಚಿದರು. ನೆಲ ಅಗೆದು ಅಲಂಕೃತ ಕಲ್ಲುಗಳ ಒಡೆದು ನಿಧಿಗಾಗಿ ಶೋಧ ನಡೆಸಿದರು.

(ಮುಂದಿನ ಭಾಗ ನಾಳೆ (19-02-2024)ಪ್ರಕಟವಾಗಲಿದೆ.)

ಡಾ. ಎಚ್‌ ಎಸ್‌ ಅನುಪಮಾ

ವೈದ್ಯರು, ಮಹಿಳಾ ದೌರ್ಜನ್ಯ ವಿರೋಧಿ ವೇದಿಕೆಯಲ್ಲಿ ಸಕ್ರಿಯರು

More articles

Latest article