Saturday, May 18, 2024

2024-25ರ ಬಜೆಟ್: ಭರವಸೆಯ ಬಿತ್ತನೆ ಮತ್ತು ನಿರೀಕ್ಷೆಯ ಪರೀಕ್ಷೆ

Most read

ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ರಂಗದ ಶಿಕ್ಷಣ ಸಂಸ್ಥೆಗಳನ್ನು ಮುಕ್ತ ಮಾರುಕಟ್ಟೆ ಬಲ ಪಡೆಯುವ ಹೊತ್ತಲ್ಲಿ ಇನ್ನಷ್ಟು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಆದರೆ ಖಾಲಿ ಇರುವ ಹುದ್ದೆಗಳನ್ನು ತುಂಬುವುದೇ ಆದಲ್ಲಿ ಈಗ ಹಂಚಿಕೆಯಾದ ಅನುದಾನ ಸಾಲದು. ಇದು ಹುದ್ದೆ ತುಂಬುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು

2024-25 ನೇ ಸಾಲಿಗೆ 3,71,383 ಕೋಟಿ ಗಾತ್ರದ ಸುಮಾರು 3,000ಕೋಟಿ ಕೊರತೆಯ ಬಜೆಟ್ ಮಂಡಿಸಿದ ರಾಜ್ಯದ ಮುಖ್ಯಮಂತ್ರಿ ಶ್ರೀ ಸಿದ್ದರಾಮನ ಹುಂಡಿ ಸಿದ್ದರಾಮಯ್ಯ ತಮ್ಮ ಆಡಳಿತದ ಆದ್ಯತೆಯನ್ನು ಬಹಳ ಸ್ಪಷ್ಟವಾಗಿಯೇ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಇವತ್ತು ಮಂಡಿಸಿದ ಸುಮಾರು 175 ಪುಟಗಳ ದಾಖಲೆಯಲ್ಲಿ ತಿಳಿಸಿದ ವಿವರಗಳು ಮತ್ತು ಅಂಕಿ ಅಂಶಗಳು ಜೀವ ಪಡೆದು ಜನರ ಬದುಕಿಗೆ ಬದಲಾವಣೆಯ ಸ್ಪರ್ಶ ನೀಡಬೇಕಾದರೆ ಕನಿಷ್ಠ ಪಕ್ಷ ಇನ್ನಾರು ತಿಂಗಳಾದರೂ ಆಡಳಿತದ ಯಂತ್ರ ಮತ್ತು ಇದರ ಹಿಂದೆ ಇರುವ ರಾಜ್ಯದ ಕಾರ್ಯಾಂಗ ‘ಬಡ ಬೋರೆ’ ಗೌಡನ ಅಥವಾ ಗೌಡತಿಯ ಮುಖದ ಸುಕ್ಕುಗಳನ್ನು ಬಿಡಿಸುವ ಪ್ರಯತ್ನ ಮಾಡಬೇಕು. ಇರಲಿ, ಇವತ್ತು ಮಂಡಿಸಿದ ಬಜೆಟ್‌ನ ಮಹತ್ವವನ್ನು ಮೊನ್ನೆಯಷ್ಟೇ ಅನಾವರಣಗೊಳಿಸಿದ ಬಸವಣ್ಣನ ಚಿತ್ರ ಮತ್ತು ವಚನಗಳು ರಾಜ್ಯದ ಸಾಂಸ್ಕೃತಿಕ ರಾಯಭಾರಿಯಾಗಿ ಬಸವಣ್ಣನವರನ್ನು ಸ್ವೀಕರಿಸಿದ (ಮೂಡಲ್ಲಿ) ಜಾಡಲ್ಲಿಯೇ ಯೋಜನೆಗಳಿವೆ. ಈ ರಾಜ್ಯದ ಬಹುಸಂಖ್ಯಾತರಾದ ಮಹಿಳೆಯರು, ಹಿಂದುಳಿದವರು, ಬಡವರು, ದುರ್ಬಲ ವರ್ಗದ ಜನ ಮತ್ತು ರೈತರನ್ನು ಪರಿಗಣಿಸಿ ಅವರ ಜೀವನ ಸುಧಾರಣೆಯ ಬಗ್ಗೆ ಒತ್ತು ನೀಡಲಾಗಿದೆ. ‌

ವಾಣಿಜ್ಯ ತೆರಿಗೆ, ಅಬಕಾರಿ, ಮುದ್ರಾಂಕ, ವಾಹನ ತೆರಿಗೆ ಮತ್ತಿತರ ಮೂಲಗಳಿಂದ ಬರುವ ಒಂದು ರೂಪಾಯಿಯನ್ನು ಸಾಲ ಮರುಪಾವತಿ, ಆರ್ಥಿಕ ಸೇವೆ, ಆರೋಗ್ಯ, ಕೃಷಿ ಹಾಗೂ ನೀರಾವರಿ, ಸಮಾಜ ಕಲ್ಯಾಣ ಶಿಕ್ಷಣ, ಕುಡಿಯುವ ನೀರು ಪೂರೈಕೆ, ಮತ್ತಿತರ ಬಾಬ್ತುಗಳಿಗೆ ವಿನಿಯೋಗಿಸುವ ಕುರಿತಂತೆ ಹಂಚಿಕೆ ಮಾಡಲಾಗಿದೆ. ಇದರೊಳಗೆ ಗ್ಯಾರಂಟಿ ಯೋಜನೆಗಳಿಗೆ 53,000ಸಾವಿರ ಕೋಟಿಯ ಹಂಚಿಕೆಗೆ ಆದ್ಯತೆ ನೀಡುವ ಮೂಲಕ ತಮ್ಮ ಗ್ಯಾರಂಟಿ ಯೋಜನೆಗಳ ಮುಂದುವರಿಕೆಯ ಕುರಿತಂತೆ ಇದ್ದ ಅನುಮಾನಗಳಿಗೆ ತೆರೆ ಎಳೆದಿದ್ದಾರೆ. ಗ್ರಾಮೀಣ ಭಾಗದಲ್ಲಿ ಆರ್ಥಿಕ ಚಟುವಟಿಕೆಗಳಿಗೆ ವೇಗ ನೀಡುವ ದೃಷ್ಟಿಯಿಂದ ಅಮೃತ್ ಮಹಲ್ ಕರುಗಳ ಪೂರೈಕೆ, ಹಸು ಮತ್ತು ಎಮ್ಮೆಗಳ ಮೇಲೆ ಸಾಲ ಪಡೆದ ಮಹಿಳೆಯರು ಸಾಲ ಮರುಪಾವತಿಸಿದಲ್ಲಿ ಇನ್ನೂ ಹೆಚ್ಚಿನ ಸಾಲ ನೀಡುವ ಕ್ರಮ ಸ್ವಾಗತಾರ್ಹ. ಐದು ಸಾವಿರ ಕೆರೆಗಳ ಅಭಿವೃದ್ಧಿ 200 ಪಶು ವೈದ್ಯಕೀಯ ಸಂಸ್ಥೆಗಳಿಗೆ 100 ಕೋಟಿ ರೂಪಾಯಿಗಳ ಅನುದಾನ, ಚಿಕ್ಕ ಮಗಳೂರಿನ ಸ್ಪೈಸ್ ಪಾರ್ಕ್, 36 ಲಕ್ಷ ರೈತರಿಗೆ ಸುಮಾರು 2,700ಕೋಟಿ ಸಾಲ ಒದಗಿಸುವಿಕೆ, ಡಿಸಿಸಿ ಬ್ಯಾಂಕಿನಲ್ಲಿ ಸಾಲದ ಮೇಲಿನ ಸುಸ್ತಿ ಬಡ್ಡಿ ಮನ್ನಾದಂತಹ ಕಾರ್ಯಕ್ರಮ, ಏತ ನೀರಾವರಿ ಕೆರೆ ತುಂಬಿಸುವ ಸಣ್ಣ ನೀರಾವರಿ ಯೋಜನೆ, ಮಹಿಳೆಯರಲ್ಲಿ ಆರ್ಥಿಕ ಚೈತನ್ಯ ನೀಡುವ ಕಾಫಿ ಕಿಯೋಸ್ಕ್ಗಳ ಸ್ಥಾಪನೆ, ರಾಮನಗರ ಮತ್ತು ಶಿಡ್ಲಘಟ್ಟದಲ್ಲಿ ರೇಷ್ಮೆ ಮಾರುಕಟ್ಟೆ ಅಭಿವೃದ್ಧಿಗೆ ಬಂಡವಾಳ ಒದಗಿಸುವಿಕೆ, ಅಲೆಮಾರಿಗಳು ಮತ್ತು ಅರೆ ಅಲೆಮಾರಿಗಳಿಗೆ ನಿಗಮ ಸ್ಥಾಪನೆಯಂತಹ ಕ್ರಮ ಮೇಲ್ನೋಟಕ್ಕೆ ಮತ್ತು ತಾತ್ವಿಕವಾಗಿ ಉತ್ತಮ ಕಾರ್ಯಕ್ರಮ.

ರಾಣಿಬೆನ್ನೂರು ಒಣಮೆಣಸಿನ ಕಾಯಿ ಮಾರುಕಟ್ಟೆ, ಸ್ವಸಹಾಯ ಗುಂಪುಗಳ ಉತ್ಪನ್ನಗಳ ಮಾರಾಟ ಸುಧಾರಣೆಗೆ ಮಾರುಕಟ್ಟೆಯ ಕ್ರಮ, ಉದ್ಯಮಶೀಲತೆ ಉತ್ಕರ್ಷಕ್ಕೆ 10 ಜಿಲ್ಲೆಗಳಲ್ಲಿ ಇನ್‌ಕುಬೇಷನ್ ((incubation)) ಕೇಂದ್ರಗಳ ಸ್ಥಾಪನೆ,2 ಲಕ್ಷ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ, ಅಂಗನವಾಡಿಗಳಿಗೆ ಸ್ವಂತ ಕಟ್ಟಡ, ಇವರನ್ನು ಹೆಚ್ಚುವರಿ ದುಡಿಸಬಲ್ಲ ಸ್ಮಾರ್ಟ್ ಫೋನ್,  (ಇವೆಲ್ಲ ಸರಿ. ಆದರೆ ಅವರ ದುಡಿಮೆಗೆ ತಕ್ಕ ವೇತನ ಹೆಚ್ಚಳದ ವಿಷಯ ಸ್ಪಷ್ಟವಾಗಿಲ್ಲ) ವಸತಿ ರಹಿತರಿಗೆ ಮನೆ ಒದಗಿಸುವ ಯೋಜನೆ, ಕಾರ್ಮಿಕರಿಗೆ ತಾತ್ಕಾಲಿಕ ವಸತಿ ಕಲ್ಪಿಸುವ ಯೋಜನೆಗೆ ಹಣಕಾಸು ಒದಗಿಸಿದ್ದು, ಇ.ಎಸ್.ಐ. ವಿಶೇಷ ಆಸ್ಪತ್ರೆ,  ಆರೋಗ್ಯ ಸೇವೆಗೆ ಒತ್ತು ನೀಡಿದ್ದೇ ಮುಂತಾದ ಯೋಜನೆಗಳು ಬಜೆಟ್‌ನಲ್ಲಿ ಮಹತ್ವ ಪಡೆದಿರುವುದು ಆಶಾದಾಯಕ.

ನೀರಾವರಿಯ ವಿಷಯದಲ್ಲಿಯೂ ಹೇಮಾವತಿ, ಮೇಕೆದಾಟು, ಎತ್ತಿನಹೊಳೆ ಕಾಮಗಾರಿಕೆಗೆ ಸಂಪನ್ಮೂಲ ಒದಗಿಸಿದೆ. ಸರಕಾರ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಹೊಸ ಬಂದರುಗಳ ಆರಂಭ, ಮಂಗಳೂರು, ಮಲ್ಪೆ, ಕಾರವಾರ ಸೇರಿದಂತೆ ಈಗಿರುವ ಬಂದರುಗಳಲ್ಲಿ ಮೂಲಭೂತ ಸೌಕರ್ಯ ಕಲ್ಪಿಸುವ ಮತ್ತು ವಿಸ್ತರಿಸುವ ಪ್ರಸ್ತಾವಗಳು ಸ್ವಾಗತಾರ್ಹ. ಸಮುದ್ರ ಆಂಬುಲೆನ್ಸ್ ಒದಗಿಸುವುದು ಮತ್ತು ಮೀನುಗಾರರ ಪರಿಹಾರ ಧನದಲ್ಲಿ ಏರಿಕೆಗಳೆಲ್ಲ ಇಲಾಖಾವಾರು ನಡೆಸಿದ ಚರ್ಚೆಯು ಫಲಶ್ರುತಿಯಾಗಿರುವುದನ್ನು ಸೂಚಿಸುತ್ತದೆ.

ಇನ್ನು ಶಿಕ್ಷಣ ಕ್ಷೇತ್ರದಲ್ಲಿ ಸಾರ್ವಜನಿಕ ರಂಗದ ಶಿಕ್ಷಣ ಸಂಸ್ಥೆಗಳನ್ನು ಮುಕ್ತ ಮಾರುಕಟ್ಟೆ ಬಲ ಪಡೆಯುವ ಹೊತ್ತಲ್ಲಿ ಇನ್ನಷ್ಟು ಬಲಿಷ್ಠವಾಗಿ ಕಟ್ಟುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಹೆಚ್ಚಿನ ಅನುದಾನ ಒದಗಿಸಲಾಗಿದೆ. ಆದರೆ ಖಾಲಿ ಇರುವ ಹುದ್ದೆಗಳನ್ನು ತುಂಬುವುದೇ ಆದಲ್ಲಿ ಈಗ ಹಂಚಿಕೆಯಾದ ಅನುದಾನ ಸಾಲದು. ಇದು ಹುದ್ದೆ ತುಂಬುವ ಬಗ್ಗೆ ಅನುಮಾನಗಳನ್ನು ಸೃಷ್ಟಿಸಿದೆ. ರಾಜ್ಯ ಶಿಕ್ಷಣ ಆಯೋಗ ರಚನೆಯಾಗಿದೆ ಆದರೆ ಅದರ ನೀತಿಯ ಅಂತಿಮ ಸ್ವರೂಪದ ಬಗ್ಗೆ ಮತ್ತು ಈಗಾಗಲೇ ಇರುವ ಗೊಂದಲಗಳ ಬಗ್ಗೆ ಖಚಿತತೆ ಬಹಳ ಮುಖ್ಯ. ಈ ಕುರಿತು ಇನ್ನಷ್ಟು ವಿವರಗಳು ತಿಳಿದು ಬರಬೇಕಿದೆ. ಆಡಳಿತಾತ್ಮಕವಾಗಿ ಹಣಕಾಸಿನ ಹೆಚ್ಚುವರಿ ಹೊರೆಯೇ ಇಲ್ಲದ ಕೆಲವು ಕ್ರಮಗಳನ್ನು ಕೈಗೊಳ್ಳಲು ಸರಕಾರ ಇನ್ನೂ ಮೀನಾ- ಮೇಷ ಎಣಿಸುವುದು ನೋಡಿದರೆ ಶಿಕ್ಷಣ ರಂಗದ ಬಗ್ಗೆ ಸರಕಾರ ಘೋಷಿಸಿರುವ ಯೋಜನೆಗಳ ಅನುಷ್ಠಾನದ ಕುರಿತು ದೊಡ್ಡ ಆಶಾಭಾವನೆ ಏನೂ ಮೂಡುತ್ತಲಿಲ್ಲ. ಮೊರಾರ್ಜಿ ದೇಸಾಯಿ ಹೆಚ್ಚುವರಿ ಶಾಲೆಗಳ ಆರಂಭ, ಶಾಲೆಗಳಲ್ಲಿ ವಸತಿ ಗೃಹ ನಿರ್ಮಾಣ, 2.000 ಶಾಲೆಗಳನ್ನು ಆಂಗ್ಲ ಮಾಧ್ಯಮ ಶಾಲೆಗಳಾಗಿ ಪರಿವರ್ತಿಸಿರುವುದು ಸ್ವಾಗತಾರ್ಹ.

ಅಲ್ಪಸಂಖ್ಯಾತರಲ್ಲಿನ ವಿವಿಧ ವರ್ಗಗಳಿಗೆ ಕೊಡುಗೆ ನೀಡಿದ್ದು, ನಾಡಿನ ಮತ್ತು ದೇಶದ ವಿವಿದೆಡೆಯ ತೀರ್ಥಕ್ಷೇತ್ರದಲ್ಲಿ ಕರ್ನಾಟಕದ ಭಕ್ತರಿಗೂ ಅನುಕೂಲ ಕಲ್ಪಿಸುವ ಯೋಜನೆಗಳತ್ತವೂ ಸಿದ್ಧರಾಮಯ್ಯನವರು ಗಮನ ಹರಿಸಿದ್ದಾರೆ. ಅಂಜನಾದ್ರಿ ಕ್ಷೇತ್ರಕ್ಕೆ ದೊಡ್ಡ ಮೊತ್ತವನ್ನೇ ನೀಡಲಾಗಿದೆ. ಉನ್ನತ ಶಿಕ್ಷಣ ರಂಗದಲ್ಲಿ ಪರಿಶಿಷ್ಟ ಜಾತಿ ಪಂಗಡದ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡುವ ಮತ್ತು ವಿದ್ಯಾರ್ಥಿಗಳಲ್ಲಿ ಸಂಶೋಧನೆಯ ಬಗ್ಗೆ ಒಲವು ಮೂಡಿಸಲು ವಿಜ್ಞಾನ ಶಿಕ್ಷಣ ಮತ್ತು ವೃತ್ತಿ ಶಿಕ್ಷಣ ಪಡೆಯಲು ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲಕರ ಯೋಜನೆಗಳನ್ನು ರೂಪಿಸಿರುವುದು ಸ್ವಾಗತಾರ್ಹ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ದಾಖಲಾತಿ ಹೆಚ್ಚಿಸಲು ಮತ್ತು ಗುಣಮಟ್ಟ ಉತ್ತಮ ಪಡಿಸುವ ಯೋಜನೆಗಳ ಕುರಿತು ಹಣಕಾಸು ಒದಗಿಸಲಾಗಿದೆ.

ಬೆಂಗಳೂರನ್ನು ‘ಬ್ರಾಂಡ್ ಬೆಂಗಳೂರು’ ಯೋಜನೆಯನ್ವಯ ಅಭಿವೃದ್ಧಿ ಪಡಿಸಲು ಕಾರ್ಯಯೋಜನೆ ಸಿದ್ಧಪಡಿಸಿ ರಾಜ್ಯದ ಉಳಿದ ಹತ್ತು ಮಹಾನಗರ ಪಾಲಿಕೆಗಳನ್ನು ಅಭಿವೃದ್ಧಿಪಡಿಸುವ ಕುರಿತು ಸಂಪನ್ಮೂಲ ಹಂಚಿಕೆ ಮಾಡಿದ್ದು ಒಳ್ಳೆಯದು. ಬೆಂಗಳೂರಿನಲ್ಲಿ ‘ಜ್ಞಾನ (ಪಟ್ಟಣ) ಕೇಂದ್ರ’ “ವಿಜ್ಞಾನ ಸಿಟಿ”  “ಇನೋವೇಶನ್ ಪಾರ್ಕ್” ಆರಂಭಿಸುವ ಯೋಜನೆಯ ಗಮನ ಸೆಳೆದರೆ ವಿವರಗಳು ದೊರೆತ ಮೇಲಷ್ಟೇ ಸ್ಪಷ್ಟ ಚಿತ್ರಣ ದೊರೆಯಲಿದೆ.

ಬಜೆಟ್‌ನಲ್ಲಿರುವ ಇನ್ನಿತರ ವಿಷಯಗಳೂ ಮೇಲ್ನೋಟಕ್ಕೆ ಜನಪರ ಎಂದು ತೋರುತ್ತವೆ. ಅಧಿವೇಶನದ ಮಿಕ್ಕುಳಿದ ಸಮಯದಲ್ಲಿ ಶಾಸಕಾಂಗ ಮತ್ತು ಕಾರ್ಯಾಂಗ ಸದ್ಯದ ರಾಜಕೀಯವನ್ನು ಬದಿಗಿಟ್ಟು ಅಂಕಿ ಅಂಶಗಳ ಆಧಾರದ ಜನತಾ ಜನಾರ್ಧನರಿಗೆ ನ್ಯಾಯ ಒದಗಿಸುವ ಬದ್ಧತೆಯಿಂದ ಸರಿಯಾದ ದಿಕ್ಕಿನಲ್ಲಿ ಸಮಗ್ರವಾದ ಚರ್ಚೆ ನಡೆಸಿ ಕಾರ್ಯಕ್ರಮಗಳು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುವ ರಾಜಕೀಯ ಮುತ್ಸದ್ದಿತನ ಮೆರೆಯಬೇಕು. ಬೆವರಿನ ಬೆಲೆಯ ಮೂಲಕ ವಿಧಾನ ಸೌಧದಲ್ಲಿ ತಮ್ಮನ್ನು ಸಲಹುವ ಜನತಾ ಜನಾರ್ಧನರಿಗೆ ನ್ಯಾಯ ಒದಗಿಸುವ ಬದ್ಧತೆ ಜನಪ್ರತಿನಿಧಿಗಳಿಗೆ ಇಲ್ಲದೇ ಹೋದರೆ ಸಂವಿಧಾನದ ಆಶಯ ಸೋಲುತ್ತದೆ. ಇಂತಹ ವಿವರಗಳನ್ನು ಜನರ ಮುಂದಿಡುವ ಕೆಲಸವನ್ನು ಮಾಧ್ಯಮಗಳು ಮಾಡಿದರೆ, ಒಂದೊಮ್ಮೆ ಬಜೆಟ್‌ನಲ್ಲಿ ಇರುವ ಲೋಪಗಳನ್ನು ಮೀರಿ ಜನರ ನಿರೀಕ್ಷೆಗಳೂ ಈಡೇರ ಬಹುದು. ಇಲ್ಲವಾದರೆ ಬೆಟ್ಟ ಅಗೆದು ಇಲಿ ಹಿಡಿದ ಕತೆಯಾಗಿಯೇ ಉಳಿಯಬಹುದು. ಯಾಕೆಂದರೆ ನಾಡಿಗೆ ನೀಡಬಹುದಾದ ಎಲ್ಲವನ್ನೂ ಒಳಗೊಳ್ಳುವ ಬಜೆಟ್ ಇರುವುದಿಲ್ಲ. ನಮ್ಮ ಮುಂದಿರುವುದರನ್ನು ಪರಿಣಾಮಕಾರಿಯನ್ನಾಗಿ ಮಾಡುವುದು ಹೇಗೆ? ಇದು ಸರಕಾರಕ್ಕೆ ಸವಾಲಾದರೆ, ವಿರೋಧ ಪಕ್ಷಕ್ಕೆ ಅವಕಾಶ.

ಪೌರಕಾರ್ಮಿಕರ ಖಾಯಮಾತಿ, ವಡ್ಡರ್ಸೆಯವರ ನೆನಪಿನಲ್ಲಿ ಸ್ಥಾಪನೆಯಾಗುವ ಪ್ರಶಸ್ತಿ ನಾವಿನ್ನೂ ಭರವಸೆಯನ್ನು ಉಳಿಸಿಕೊಳ್ಳಬಹುದು ಎನ್ನುವುದನ್ನು ಸೂಚಿಸುತ್ತದೆ. ರಾಜ್ಯ ಹಣಕಾಸು ಆಯೋಗ ಸ್ಥಾಪನೆ, ಕಲ್ಯಾಣ ಕರ್ನಾಟಕ ಉನ್ನತಾಧಿಕಾರ ರಚನೆ, ಬಸವ ಅಭಿವೃದ್ಧಿ ಪ್ರಾಧಿಕಾರ, ಘಾಟಿ ಸುಬ್ರಮಣ್ಯ ಅಭಿವೃದ್ಧಿ ಪ್ರಾಧಿಕಾರ ರಚನೆ, ಬದನವಾಳು ಗ್ರಾಮದಲ್ಲಿ ಖಾದಿ ಪಾರ್ಕ್, ಕಾಂಗ್ರೆಸ್ ಅಧಿವೇಶನದ ಸ್ಮರಣೆಯಲ್ಲಿ ಬೆಳಗಾವಿಯಲ್ಲಿ ಗಾಂಧಿ ನೆನಪಿನ ಕಾರ್ಯಕ್ರಮಕ್ಕೆ ಮೊತ್ತ ಮೀಸಲಿರಿಸಿರುವುದು ಇತ್ಯಾದಿ ಕ್ರಮಗಳು ರಾಜಕೀಯ ಮುತ್ಸದ್ದಿತನವನ್ನು ತೋರಿಸಿದೆ.

ಡಾ. ಉದಯಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು

More articles

Latest article