Saturday, July 27, 2024

ಚುನಾವಣಾ ಬಾಂಡ್; ಕೇಂದ್ರದ ನಡೆಗೆ ಸುಪ್ರೀಂ ತಡೆ

Most read

ಈಗ ಸುಪ್ರೀಂ ಕೋರ್ಟ್ ತೀರ್ಮಾನದಿಂದ ಮೋದಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮತ್ತೆ ಇದೇ ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇ ಆದರೆ ಈ ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲು ಮಾಡಲು ಅದು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ ಸುಗ್ರೀವಾಜ್ಞೆ ಮೂಲಕ ಅಂದುಕೊಂಡಿದ್ದನ್ನು ಖಂಡಿತಾ ಜಾರಿಗೊಳಿಸುತ್ತದೆ. ಇಡೀ ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶವಾಗುತ್ತದೆ-ಶಶಿಕಾಂತ ಯಡಹಳ್ಳಿ, ಪತ್ರಕರ್ತರು

ಈ ಸುಪ್ರೀಂ ಕೋರ್ಟ್ ಆದೇಶಗಳೇ ಹೀಗೆ. ಕೆಲವು ತೀರ್ಪುಗಳು ನಿರಾಸೆಯನ್ನು ಹುಟ್ಟಿಸಿದರೆ ಹಲವಾರು ತೀರ್ಪುಗಳು ನ್ಯಾಯಾಂಗದ ಮೇಲಿನ ಭರವಸೆಯನ್ನು ಹೆಚ್ಚಿಸುತ್ತವೆ.  ಫೆ. 15 ರಂದು ಸುಪ್ರೀಂ ತೀರ್ಪು ಕೊಟ್ಟ ಏಟಿದೆಯಲ್ಲಾ ಬಿಜೆಪಿಯಂತಹ ಜಗತ್ತಿನ ಸಿರಿವಂತ ಪಕ್ಷವನ್ನೇ ನಡುಗಿಸಿದೆ. ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕಪಾಳಮೋಕ್ಷ ಮಾಡಿದಂತಿದೆ.

ರಾಜಕೀಯ ಪಕ್ಷಗಳ ಚುನಾವಣೆ ನಿಧಿ ಸಂಗ್ರಹದ ಅಪಾರದರ್ಶಕತೆ ಕುರಿತ ಕೇಸೊಂದು ಕಳೆದ ಐದು ವರ್ಷಗಳಿಂದ ಸುಪ್ರೀಂ ಕೋರ್ಟಲ್ಲಿ ವಿಚಾರಣೆಯಲ್ಲಿತ್ತು.  ಈಗ ಮಹತ್ವದ ತೀರ್ಪು ಹೊರಬಂದಿದೆ. “ಚುನಾವಣಾ ಬಾಂಡ್ ನಿಂದ ಕಪ್ಪು ಹಣ ನಿಗ್ರಹ ಅಸಾಧ್ಯ. ಈ ಬಾಂಡ್ ಯೋಜನೆಯೇ ಅಸಾಂವಿಧಾನಿಕ.  ಈ ಯೋಜನೆಯೇ ಮೂಲಭೂತ ಹಕ್ಕುಗಳ ಉಲ್ಲಂಘನೆ. ರಾಜಕೀಯ ಪಕ್ಷಗಳಿಗೆ ಬಾಂಡ್ ಕೊಡುವುದನ್ನು ನಿಲ್ಲಿಸಿಬಿಡಿ” ಎಂದು ಸಿಜೆಐ ಡಿ.ವೈ.ಚಂದ್ರಚೂಡ ನೇತೃತ್ವದ ಐವರು ನ್ಯಾಯಮೂರ್ತಿಗಳ ಪೀಠವು ಐತಿಹಾಸಿಕ ತೀರ್ಪೊಂದನ್ನು ನೀಡಿದೆ. ಈ ಬಾಂಡ್‌ ಗಳ ಕುರಿತು ಮಾಹಿತಿ ನೀಡುವಂತೆ ಎಸ್ ಬಿ ಐ ಬ್ಯಾಂಕಿಗೆ ಕೋರ್ಟ್ ಸೂಚನೆ ನೀಡಿದೆ.

ಮೊದಲು ರಾಜಕೀಯ ಪಕ್ಷಗಳು ಇಪ್ಪತ್ತು ಸಾವಿರಕ್ಕಿಂತ ಹೆಚ್ಚಿನ ದೇಣಿಗೆ ಪಡೆದ ಲೆಕ್ಕವನ್ನು ಸಾರ್ವಜನಿಕವಾಗಿ ನೀಡಬೇಕಿತ್ತು. ಹಾಗೂ ಕಾರ್ಪೋರೇಟ್ ಕಂಪನಿಗಳು ತಮ್ಮ ಒಟ್ಟು ಲಾಭದ 7.5% ಅಥವಾ ಆದಾಯದ 10% ಕ್ಕಿಂತ ಹೆಚ್ಚಿನ ಮೊತ್ತವನ್ನು ಯಾವುದೇ ಪಕ್ಷಗಳಿಗೆ ದೇಣಿಗೆ ನೀಡಲು ಕಾನೂನಿನಲ್ಲಿ ಅವಕಾಶ ಇರಲಿಲ್ಲ. ಇದು ಚುನಾವಣೆಗೆ ಹೆಚ್ಚಿನ ಹಣ ಸಂಗ್ರಹಿಸಲು ಬಿಜೆಪಿ ಪಕ್ಷಕ್ಕೆ ಅಡೆತಡೆಯಾಗಿತ್ತು. ಈ ಕಟ್ಟಳೆಯನ್ನೇ ತೆಗೆದುಹಾಕಲು 2016 ಮತ್ತು 2017 ರಲ್ಲಿ ಬಿಜೆಪಿ ಸರಕಾರವು ಹಣಕಾಸು ಕಾಯಿದೆಯನ್ನೇ ಬದಲಾಯಿಸಿ ಎಲೆಕ್ಟ್ರೋರಲ್ ಬಾಂಡ್ ಯೋಜನೆಯನ್ನು ಪರಿಚಯಿಸಲು ಇದ್ದ ಕಾಯಿದೆಗೆ ತಿದ್ದುಪಡಿ ತಂದಿತು. 2018 ರಲ್ಲಿ ಚುನಾವಣಾ ಬಾಂಡ್ ಯೋಜನೆಯನ್ನು ಸಾಂವಿಧಾನಿಕ ತಿದ್ದುಪಡಿ ಇಲ್ಲದೇ ಹಣಕಾಸು ಮಸೂದೆಯಾಗಿ ಜಾರಿಗೆ ತರಲಾಯಿತು. ಆರ್ ಬಿ ಐ, ಚುನಾವಣಾ ಆಯೋಗ ಹಾಗೂ ಪ್ರತಿಪಕ್ಷಗಳ ಆಕ್ಷೇಪಣೆಯನ್ನು ಲೆಕ್ಕಿಸದೇ ಈ ಮಸೂದೆಯನ್ನು ಜಾರಿಗೆ ತರಲಾಯಿತು.

ಇದನ್ನೂ ಓದಿ-ಚುನಾವಣಾ ಬಾಂಡ್ – ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ

ಈ ಯೋಜನೆ ಜಾರಿಗೆ ಬಂದ ನಂತರ ಸಂಗ್ರಹವಾದ ಒಟ್ಟು ದೇಣಿಗೆಯಲ್ಲಿ  ಕಾಂಗ್ರೆಸ್ ಪಕ್ಷದ್ದು 10% ಇದ್ದರೆ ಬಿಜೆಪಿ ಪಕ್ಷದ್ದು 57% ಹಾಗೂ ಬಾಕಿ ಎಲ್ಲಾ ಪಕ್ಷಗಳದ್ದು 33% ಇದೆ. ಬಿಜೆಪಿ ಪಕ್ಷ ಒಂದೇ ಅತೀ ಗರಿಷ್ಠ ಅಂದರೆ 9,200 ಕೋಟಿಗೂ ಅಧಿಕ ದೇಣಿಗೆಯನ್ನು ಪಡೆದು ಶ್ರೀಮಂತ ಪಕ್ಷವಾಗಿ ಮುನ್ನಡೆ ಸಾಧಿಸಿದೆ. ಯಾರಿಂದ ಎಷ್ಟು ಪ್ರಮಾಣದ ದೇಣಿಗೆ ಬಂದಿದೆ ಲೆಕ್ಕ ಕೊಡಿ ಎಂದು ಕೇಳಿದಾಗ “ಅದನ್ನು ಕೇಳುವ ಹಕ್ಕು ಸಾರ್ವಜನಿಕರಿಗಿಲ್ಲ” ಎಂದು ಸರಕಾರ ಹೇಳಿತು. ಸಾರ್ವಜನಿಕರಿಂದ ಸಂಗ್ರಹಿಸಿದ ಹಣಕ್ಕೆ ಲೆಕ್ಕ ಕೇಳುವುದು ಸಾರ್ವಜನಿಕರ ಹಕ್ಕು ಎಂದು ಕೋರ್ಟಲ್ಲಿ ಪ್ರಶ್ನಿಸಿದಾಗ ” ಮೂಲಭೂತ ಹಕ್ಕುಗಳ ಮೇಲೆ ನಿರ್ಬಂಧ ಹೇರುವ ಹಕ್ಕು ಸರಕಾರಕ್ಕಿದೆ” ಎಂದು 2023 ಅಕ್ಟೋಬರ್ 30 ರಂದು ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿತು. ಯಾಕೆಂದರೆ ಚುನಾವಣೆಯಲ್ಲಿ ಹಣಬಲದಿಂದ ಗೆಲ್ಲಲು ಬಿಜೆಪಿ ಪಕ್ಷವು ದೊಡ್ಡ ಬಂಡವಾಳಶಾಹಿಗಳಿಂದ, ವಿದೇಶಿ ಹಾಗೂ ಸ್ವದೇಶಿ ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳಿಂದ ಅಪಾರ ಪ್ರಮಾಣದ ದೇಣಿಗೆ ಸಂಗ್ರಹಿಸಿತ್ತು. ಯಾರು ಎಷ್ಟು ಹಣ ಕೊಟ್ಟರು ಎಂಬುದು ಯಾರಿಗೂ ಗೊತ್ತಾಗದ ಹಾಗೆ ಸಿಕ್ರೇಟ್ ಮೇಂಟೇನ್ ಮಾಡಬೇಕಾಗಿತ್ತು. ಅದಕ್ಕಾಗಿಯೇ ಮೂಲಭೂತ ಹಕ್ಕುಗಳನ್ನು ನಿರ್ಬಂಧಿಸುವ ಹಕ್ಕನ್ನು ಬಿಜೆಪಿ ಸರಕಾರ ಕೋರ್ಟಲ್ಲಿ  ಸಮರ್ಥಿಸಿಕೊಂಡಿತು.

“ರಾಜಕೀಯದಲ್ಲಿ ಕಪ್ಪು ಹಣದ ಪ್ರಭಾವವನ್ನು ಕಡಿಮೆ ಮಾಡಲು ಹಾಗೂ ಪಕ್ಷಗಳಿಗೆ ದೇಣಿಗೆ ನೀಡಬಯಸುವ ವ್ಯಕ್ತಿಗಳು ಹಾಗೂ ಸಂಸ್ಥೆಗಳಿಗೆ ಕಾನೂನಾತ್ಮಕ ಪಾರದರ್ಶಕ ಕ್ರಮವನ್ನು ಜಾರಿಗೆಗೊಳಿಸಲು ಮತ್ತು ದೇಶದಲ್ಲಿ ರಾಜಕೀಯ ನಿಧಿ ವ್ಯವಸ್ಥೆಯನ್ನು ಶುದ್ಧೀಕರಿಸಲು ಎಲೆಕ್ಟ್ರೊರಲ್ ಬಾಂಡ್ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ” ಎಂದು ಕೇಂದ್ರ ಸರಕಾರ ಹೇಳಿತು. ಆದರೆ ನಿಜವಾದ ಹಿಡನ್ ಅಜೆಂಡಾ ಬೇರೆಯದೇ ಆಗಿತ್ತು.  ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುವವರು ಎಸ್ ಬಿ ಐ ಬ್ಯಾಂಕಲ್ಲಿ ಮಿತಿಯಿಲ್ಲದಷ್ಟು ಮೊತ್ತಕ್ಕೆ ಚುನಾವಣಾ ಬಾಂಡ್ ಖರೀದಿಸಿ ಪಕ್ಷಗಳಿಗೆ ಕೊಡಬಹುದಾಗಿತ್ತು.‌ ಹೀಗೆ ಬಾಂಡ್ ಮೂಲಕ ಹಣ ಕೊಡುವವರು ತಮ್ಮ ಹೆಸರು ಹಾಗೂ ಯಾರಿಗೆ ದೇಣಿಗೆ ಕೊಡಲಾಗುತ್ತದೆ ಎನ್ನುವ ಯಾವುದೇ ಮಾಹಿತಿಯನ್ನು ಬಾಂಡ್ ತೆಗೆದುಕೊಳ್ಳುವಾಗ ನಮೂದಿಸುವ ಅವಶ್ಯಕತೆ ಇಲ್ಲವಾಗಿದೆ.‌ ಹೀಗಾಗಿ ಈ ಬಾಂಡ್ ವ್ಯವಹಾರವೇ ಅನಾಮಧೇಯವಾಗಿದೆ. ಯಾರು ಯಾರಿಗೆ ಎಷ್ಟು ಹಣ ಕೊಟ್ಟರು ಎನ್ನುವುದು ಯಾರಿಗೂ ಗೊತ್ತಾಗದ ಹಾಗೆ ಮಾಡಲಾಗಿದೆ. ವಿದೇಶಿ ಕಂಪನಿಗಳ ಭಾರತೀಯ ಅಂಗಸಂಸ್ಥೆಗಳಿಂದಲೂ ದೇಣಿಗೆ ಸಂಗ್ರಹಿಸಲು ಅನುಮತಿ ನೀಡಲಾಗಿದೆ. ಬೇನಾಮಿ ಹೆಸರಿನ ಶೆಲ್ ಕಂಪನಿಗಳೂ ಬೇನಾಮಿ ದೇಣಿಗೆ ಕೊಡಲು ಅನುಕೂಲವಾಗಿದೆ. ವಿಪರ್ಯಾಸ ಅಂದರೆ 2,000 ರೂಗಳನ್ನು ನಗದು ರೂಪದಲ್ಲಿ ಪಕ್ಷಕ್ಕೆ ದೇಣಿಗೆ ನೀಡುವ ಪ್ರಜೆಗಳು ತಮ್ಮ ಹೆಸರನ್ನು ಬಹಿರಂಗಪಡಿಸಬೇಕಿದೆ.

ಈ ಗುಟ್ಟಿನ ವ್ಯವಹಾರವನ್ನು ಪ್ರಶ್ನಿಸಿ, ಈ ಬಾಂಡ್ ಯೋಜನೆಯೇ ಅಸಾಂವಿಧಾನಿಕ ಹಾಗೂ ಪ್ರಜಾತಂತ್ರಕ್ಕೆ ಮಾರಕ ಎಂದು ಪ್ರಶಾಂತ ಭೂಷಣ್, ಕಪಿಲ್ ಸಿಬಲ್, ನಿಜಾಮ್ ಪಾಷಾ ರವರಂತಹ ಹಿರಿಯ ವಕೀಲರು ಸುಪ್ರೀಂ ಕೋರ್ಟಲ್ಲಿ ದಾವೆ ಹೂಡಿದರು. ಸಿಪಿಎಂ ಪಕ್ಷ ಹಾಗೂ ಕೆಲವಾರು ಸಂಘ ಸಂಸ್ಥೆಗಳೂ ಕೋರ್ಟಲ್ಲಿ ಪ್ರಶ್ನಿಸಿದವು. ಆದರೆ ಈ ಯಾವ ತಕರಾರು ಅರ್ಜಿಗಳ ವಿಚಾರಣೆ ಆಗದಂತೆ ಕೇಂದ್ರ ಸರಕಾರ ನ್ಯಾಯಾಧೀಶರ ಮೇಲೆ ಒತ್ತಡ ಹೇರಿತ್ತು ಎನ್ನುವ ಆರೋಪವೂ ಇದೆ. ಈ ಆರೋಪಕ್ಕೆ ನಾಲ್ಕು ವರ್ಷಗಳ ಕಾಲ ಕೋರ್ಟ್ ನಲ್ಲಿ ವಿಚಾರಣೆ ನೆನಗುದಿಗೆ ಬಿದ್ದಿರುವುದೇ ಸಾಕ್ಷಿಯಾಗಿದೆ. ಕೊನೆಗೂ  2022 ಅಕ್ಟೋಬರ್ 31 ರಿಂದ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ವಿಚಾರಣೆಯನ್ನು ಆರಂಭಿಸಿ 2024 ಫೆಬ್ರವರಿ 15 ರಂದು ಇಡೀ ಯೋಜನೆಯೇ ಅಸಾಂವಿಧಾನಿಕ ಎಂದು ತೀರ್ಪನ್ನು ಕೊಟ್ಟಿದೆ. ಕೇಂದ್ರ ಸರಕಾರಕ್ಕೆ ತೀವ್ರ ಮುಖಭಂಗವಾಗಿದೆ. ಆದರೆ ಮುಂದಿನ ಲೋಕಸಭಾ ಚುನಾವಣೆ ಖರ್ಚಿಗೆ ಎಷ್ಟು ಬೇಕೋ ಅದರ ಹಲವು ಪಟ್ಟು ಹಣವನ್ನು ಬಿಜೆಪಿ ಈಗಾಗಲೇ ಸಂಗ್ರಹಿಸಿಟ್ಟು ಕೊಂಡಿದೆ.

ಇಷ್ಟಕ್ಕೂ ಈ ಬಂಡವಾಳಿಗರು, ಬಹುರಾಷ್ಟ್ರೀಯ ಕಾರ್ಪೋರೇಟ್ ಕಂಪನಿಗಳು ಯಾಕೆ ಸಾವಿರಾರು ಕೋಟಿ ಹಣವನ್ನು ಆಳುವ ಪಕ್ಷಕ್ಕೆ ದಾನ ಮಾಡುತ್ತಾರೆ? ಉತ್ತರ ಬಹಳ ಸ್ಪಷ್ಟವಾಗಿದೆ. ಅವರು ಕೊಟ್ಟ ದಾನಕ್ಕಿಂತ ಹಲವು ಪಟ್ಟು ಲಾಭವನ್ನು, ಅನುಕೂಲಗಳನ್ನು ಆಳುವ ಸರಕಾರದಿಂದ ಮರಳಿ ಪಡೆಯುತ್ತಾರೆ. ಉದ್ಯಮಿಗಳ ಋಣ ಸಂದಾಯ ಮಾಡಲು ಆಳುವ ಪಕ್ಷ ಸದಾ ಸಿದ್ಧವಾಗಿರುತ್ತದೆ. ಉದಾಹರಣೆಗೆ ರೈತರ ಸಾಲ ಮನ್ನಾ ಮಾಡದ ಕೇಂದ್ರ ಸರಕಾರ ಈ ಕಾರ್ಪೋರೇಟ್ ಕಂಪನಿಗಳ 15 ಲಕ್ಷ ಕೋಟಿ ಬ್ಯಾಂಕ್ ಸಾಲ ಮನ್ನಾ ಮಾಡುತ್ತದೆ. ಶೇಕಡಾ 8 ರಷ್ಟು ಕಾರ್ಪೋರೇಟ್ ತೆರಿಗೆ ಕಡಿಮೆ ಮಾಡುತ್ತದೆ. ಈ ದೇಶದ ಸಂಪನ್ಮೂಲಗಳನ್ನು ದೋಚಲು ಅಡ್ಡಿಯಾಗುವ ಅರಣ್ಯ ಕಾಯಿದೆ, ಕೃಷಿ ಕಾಯಿದೆಗಳನ್ನು ಬಂಡವಾಳಿಗರ ಹಿತಾಸಕ್ತಿಗೆ ಪೂರಕವಾಗಿ ತಿದ್ದುಪಡಿ ಮಾಡಲಾಗುತ್ತದೆ. ಲಾಭದಾಯಕ ಸಾರ್ವಜನಿಕ ಉದ್ದಿಮೆಗಳಲ್ಲಿರುವ ಸರಕಾರಿ ಶೇರುಗಳನ್ನು ಆದಾನಿ ಅಂಬಾನಿಯಂತವರಿಗೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗುತ್ತದೆ. ಉದ್ಯಮಿಗಳಿಗೆ ಅನುಕೂಲ ಆಗುವ ಹಾಗೆ ಕಾರ್ಮಿಕ ಕಾಯಿದೆಗಳಿಗೆ ಬದಲಾವಣೆ ತರಲಾಗುತ್ತದೆ. ದೇಶದ ಸಾರ್ವಜನಿಕ ಆಸ್ತಿಗಳಾದ ವಿಮಾನ ಹಾಗೂ ರೈಲು ನಿಲ್ದಾಣಗಳ ನಿರ್ವಹಣೆ,  ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಮುಂತಾದವುಗಳು ಈಗಾಗಲೇ ಆದಾನಿ ಅಂಬಾನಿಗಳ ಪಾಲಾಗಿವೆ. ಅದಕ್ಕೆ ಬದಲಾಗಿ ಈ ಉದ್ಯಮಪತಿಗಳು ಉದಾರವಾಗಿ ಬೇನಾಮಿ ದೇಣಿಗೆಯನ್ನು ಆಳುವ ಹಾಗೂ ಗೆಲ್ಲುವ ಪಕ್ಷಕ್ಕೆ ಉದಾರವಾಗಿ ಕೊಡುತ್ತವೆ. ದಾನ ಕೊಟ್ಟವರ ಋಣ ಸಂದಾಯಕ್ಕೆ ಆಳುವ ಸರಕಾರವೂ ಬದ್ಧವಾಗಿದೆ.

ಇದನ್ನೂ ಓದಿ- ‘ಚುನಾವಣಾ ಬಾಂಡ್’ ಅಸಾಂವಿಧಾನಿಕ | ಕೇಂದ್ರಕ್ಕೆ ಪ್ರಹಾರ ನೀಡಿದ ಸುಪ್ರೀಂ ಕೋರ್ಟ್ ತೀರ್ಪು

ಈಗ ಸುಪ್ರೀಂ ಕೋರ್ಟ್ ತೀರ್ಮಾನದಿಂದ ಮೋದಿ ಸರಕಾರಕ್ಕೆ ತೀವ್ರ ಹಿನ್ನಡೆಯಾಗಿದೆ. ಮತ್ತೆ ಇದೇ ಸರಕಾರ ಚುನಾವಣೆಯಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದ್ದೇ ಆದರೆ ಈ ಸುಪ್ರೀಂ ಕೋರ್ಟ್ ಆದೇಶವನ್ನೇ ಬುಡಮೇಲು ಮಾಡಲು ಅದು ಪ್ರಯತ್ನಿಸುತ್ತದೆ. ಸಾಧ್ಯವಾಗದಿದ್ದರೆ ಸುಗ್ರೀವಾಜ್ಞೆ ಮೂಲಕ ಅಂದುಕೊಂಡಿದ್ದನ್ನು ಖಂಡಿತಾ ಜಾರಿಗೊಳಿಸುತ್ತದೆ. ಇಡೀ ದೇಶದ ಸಂಪತ್ತು ಹಾಗೂ ಸಂಪನ್ಮೂಲಗಳನ್ನು ಲೂಟಿ ಮಾಡಲು ಕಾರ್ಪೋರೇಟ್ ಕಂಪನಿಗಳಿಗೆ ಅವಕಾಶವಾಗುತ್ತದೆ.

ಈ ದೇಶದ ಸಂವಿಧಾನ, ಪ್ರಜಾಪ್ರಭುತ್ವ ವ್ಯವಸ್ಥೆ ಉಳಿಯ ಬೇಕೆಂದರೆ, ಸಾರ್ವಜನಿಕ ಸಂಪನ್ಮೂಲಗಳು ಜನರಿಗಾಗಿಯೇ ಇರಬೇಕೆಂದರೆ ಈ ದೇಶದ ಜನರು ಬಿಜೆಪಿ ಪಕ್ಷವನ್ನು ಲೋಕಸಭಾ ಚುನಾವಣೆಯಲ್ಲಿ ಸೋಲಿಸಲೇಬೇಕಿದೆ. ಸೋಲಿಸದೇ ಹೋದರೆ ಈ ದೇಶದ ಸಂಪತ್ತು ಕಾರ್ಪೋರೇಟ್ ಕಂಪನಿಗಳ ಪಾಲಾಗುವುದರಲ್ಲಿ ಸಂದೇಹವೇ ಇಲ್ಲ.

ಶಶಿಕಾಂತ ಯಡಹಳ್ಳಿ

ಪತ್ರಕರ್ತರು

More articles

Latest article