Saturday, July 27, 2024

ಚುನಾವಣಾ ಬಾಂಡ್ – ಸರ್ಕಾರಿ ಪ್ರಾಯೋಜಿತ ಭ್ರಷ್ಟಾಚಾರ

Most read

ಚುನಾವಣಾ ಬಾಂಡ್ (Electoral Bond) ಎನ್ನುವುದು, ಭಾರತದ ಸರಕಾರಿ ಪ್ರಾಯೋಜಿತವಾದ ಅತಿದೊಡ್ಡದೊಂದು ಭ್ರಷ್ಟಾಚಾರ. ಜಗತ್ತಿನ ಅತಿದೊಡ್ಡ ಪ್ರಜಾತಂತ್ರದಲ್ಲಿ, ಅತ್ಯಂತ ಅಪಾರದರ್ಶಕವಾಗಿ ನಡೆಯುವ ಸಾವಿರಾರು ಕೋಟಿಯ ಆರ್ಥಿಕ ವ್ಯವಹಾರ. 

2017 ರಲ್ಲಿ ಮೋದಿ ಸರಕಾರ ಈ ಚುನಾವಣಾ ಬಾಂಡ್ ಅನ್ನು ಜಾರಿಗೆ ತಂದಿತು. ಆ ಮೂಲಕ ಕಾರ್ಪೋರೇಟ್ ಕಂಪನಿಗಳಿಗೆ ಮತ್ತು ಬಿಲಿಯಾಧಿಪತಿಗಳಿಗೆ ಸೀಮಾತೀತ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ಕೊಡಲು ಮತ್ತು ಕೊಟ್ಟೂ ಅನಾಮಿಕವಾಗಿ ಉಳಿಯಲು ಅವಕಾಶ ಮಾಡಿಕೊಟ್ಟಿತು. ಈ ಬಾಂಡ್ ಗಳ ಮೂಲಕ ಇದುವರೆಗೆ ಸುಮಾರು 16 ಸಾವಿರ ಕೋಟಿ ರುಪಾಯಿ ಹಣ ರಾಜಕೀಯ ಪಕ್ಷಗಳಿಗೆ ಸಂದಾಯವಾಗಿದೆ.

ಇದನ್ನು ಜಾರಿ ಮಾಡುವಾಗ ಸರಕಾರವು ಆರ್ ಬಿ ಐ ಯ ಹಣದ ಅಕ್ರಮ ವರ್ಗಾವಣೆ ಕುರಿತ ಎಚ್ಚರಿಕೆಯನ್ನು ಕಡೆಗಣಿಸಿತು. ಚುನಾವಣಾ ಆಯೋಗ ವ್ಯಕ್ತಪಡಿಸಿದ ಆತಂಕವನ್ನು ಬದಿಗೆ ಸರಿಸಿತು. ಜನರೇ ಈ ಅನಾಮಿಕ ಹಣ ವರ್ಗಾವಣೆಯನ್ನು ಬಯಸುತ್ತಿದ್ದಾರೆ ಎಂದು ಸುಳ್ಳು ಹೇಳಿತು. ಕಾನೂನು ಅಂಗೀಕರಿಸುವಾಗ ಕುತಂತ್ರದ ಹಾದಿಯ ಮೂಲಕ ರಾಜ್ಯಸಭೆಯನ್ನು ಬೈಪಾಸ್ ಮಾಡಿತು.

ಚುನಾವಣೆಗೆ ಸಂಬಂಧ ಪಟ್ಟ ವಿಷಯವಾದ ಕಾರಣ, ಇಲ್ಲಿ ಹಣ ಯಾರು ಕೊಟ್ಟದ್ದು, ಯಾರಿಗೆ ಕೊಟ್ಟದ್ದು ಎಂದು ತಿಳಿಯಬೇಕಾದುದು ಮುಖ್ಯವಾಗಿ ಮತದಾರರಿಗೆ. ಆದರೆ ಇಲ್ಲಿ ಮತದಾರರಿಗೆ ಬಿಡಿ, ವಿಪಕ್ಷಗಳಿಗೂ ಇದನ್ನು ತಿಳಿಯುವ ಅವಕಾಶವಿಲ್ಲ. 

ಸರಕಾರವನ್ನು ನಡೆಸುವ ಪಕ್ಷಕ್ಕೆ ಅನುಕೂಲ

ಆದರೆ, ಇದು ಸ್ಟೇಟ್ ಬ್ಯಾಂಕ್ ಮೂಲಕ ನಡೆಯುವ ವ್ಯವಹಾರವಾದುದರಿಂದ ಇದನ್ನು ತಿಳಿಯುವುದು ಕೇಂದ್ರ ಸರ್ಕಾರಕ್ಕೆ (ಅಂದರೆ ಕೇಂದ್ರ ಸರಕಾರವನ್ನು ನಡೆಸುತ್ತಿರುವ ಪಕ್ಷಕ್ಕೆ) ಬಲು ಸುಲಭ. ಇದರ ಮುಂದರಿಕೆಯಾಗಿ ತನಗೆ ಹಣ ಕೊಡದೆ ವಿಪಕ್ಷಗಳಿಗೆ ಹಣ ದೇಣಿಗೆ ಕೊಟ್ಟವರನ್ನು ಟಾರ್ಗೆಟ್ ಮಾಡುವುದೂ ಕೇಂದ್ರ ಸರ್ಕಾರಕ್ಕೆ ಬಲು ಸುಲಭ. ಹಾಗಾಗಿ ಆಮಿಷ ಮತ್ತು ಬೆದರಿಕೆಯ ಕಾರಣ ಚುನಾವಣಾ ಬಾಂಡ್ ಮೂಲಕ ಗರಿಷ್ಠ ಹಣ ಸಂದಾಯವಾಗುವುದು ಅಧಿಕಾರದಲ್ಲಿರುವ ಪಕ್ಷಕ್ಕೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. 

ದೇಶದಲ್ಲಿ ಸುಮಾರು 105 ರಾಜಕೀಯ ಪಕ್ಷಗಳಿದ್ದರೆ ಅವುಗಳಲ್ಲಿ ಚುನಾವಣಾ ಬಾಂಡ್ ‍ಲಾಭ ಸಿಕ್ಕಿದ್ದು ಕೇವಲ 17 – 19 ಪಕ್ಷಗಳಿಗೆ. ಜಾರಿಗೊಂಡ ಮೂರು ವರ್ಷಗಳಲ್ಲಿ ಈ ಬಾಂಡ್ ಮೂಲಕ ಸಂದಾಯವಾದ ಹಣದಲ್ಲಿ (6201 ಕೋಟಿ) 68% ಹಣ ಹೋದುದು ಕೇವಲ ಬಿಜೆಪಿಗೆ!

ಇದು ಜಾರಿಗೆ ಬಂದ 2017 ರಿಂದಲೂ ಇದರ ವಿರುದ್ಧ ಸುಪ್ರೀಂ ಕೋರ್ಟ್ ನಲ್ಲಿ ಹೋರಾಡಲಾಗುತ್ತಿದೆ. ಆದರೆ ಪ್ರಯೋಜನವಾಗಲಿಲ್ಲ. ಕೋರ್ಟ್ ಸರಕಾರದ ಪರವೇ ನಿಲ್ಲುತ್ತ ಹೋಯಿತು. ಕಳೆದ ನವೆಂಬರ್‌, 2023 ರ ಕೊನೆಗೆ ಸುಪ್ರೀಂ ಕೋರ್ಟ್ ನಲ್ಲಿ ಸಿಜೆಐ ಚಂದ್ರಚೂಡ ನೇತೃತ್ವದ ಸಂವಿಧಾನ ಪೀಠದಲ್ಲಿ ಮತ್ತೆ ವಿಚಾರಣೆ ನಡೆದು ಇದೀಗ ತೀರ್ಪು ಕಾಯ್ದಿರಿಸಲಾಗಿದೆ. ಬೇಗನೇ ತೀರ್ಪು ನೀಡಿ ಈ ಅವ್ಯವಹಾರಕ್ಕೆ ತಡೆಹಾಕುತ್ತಿದ್ದರೆ ಈ ಬಹುದೊಡ್ಡದೊಂದು ಚುನಾವಣಾ ಭ್ರಷ್ಟಾಚಾರಕ್ಕೆ ಈಗಾಗಲೇ ಕೊನೆ ಹಾಡಬಹುದಿತ್ತು. ಆದರೆ ಅದನ್ನು ಮಾಡಿಲ್ಲ. ಈ ‘ಸುವರ್ಣಾವಕಾಶ’ ಬಳಸಿಕೊಂಡು ಮೋದಿ ಸರಕಾರ ಇದೇ ಜನವರಿ 2 ರಂದು ಮತ್ತೆ ಎ(ಕ)ಲೆಕ್ಷನ್ ಬಾಂಡ್ ಓಪನ್ ಮಾಡಿದೆ. ಮತ್ತೆ ಚುನಾವಣಾ ಬಾಂಡ್ ಮೂಲಕ ದೊಡ್ಡ ಮೊತ್ತ ಬಿಜೆಪಿಗೆ ಹೋಗಲಿದೆ. ಇದು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಹೋರಾಡಲು ಅದಕ್ಕೆ ಮತ್ತಷ್ಟು ಆರ್ಥಿಕ ಬಲ ನೀಡಲಿದೆ.

Level playing field ಎಲ್ಲಿದೆ?

ಒಂದೆಡೆಯಲ್ಲಿ ಸಾವಿರ ಸಾವಿರ ಕೋಟಿ ಹಣ ಆಡಳಿತಾರೂಢ ಪಕ್ಷದ ಕೈಯಲ್ಲಿ. ಇನ್ನೊಂದೆಡೆ ಹತ್ತಾರು ಕೋಟಿಯೂ ಇಲ್ಲದ ಇತರ ಪಕ್ಷಗಳು!! level playing field ಎನ್ನುವುದೇ ಇಲ್ಲದ ಇಂತಹ ವಿಪರ್ಯಾಸಕರ ಸ್ಥಿತಿಯಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪ್ರಜಾತಂತ್ರದ ಚುನಾವಣೆ ನಡೆಯುವುದು!! ಅಲ್ಲಿಂದ ನಾವು ಭಾರತದ ಚುನಾವಣೆಯನ್ನು ಪ್ರಜಾತಂತ್ರದ ಹಬ್ಬ ಎನ್ನುತ್ತೇವೆ!!?

ಇನ್ನು ಕೆಲವೇ ದಿನಗಳಲ್ಲಿ ಸುಪ್ರೀಂ ಕೋರ್ಟ್ ಈ ಸಂಬಂಧ ತನ್ನ ತೀರ್ಪು ಬಹಿರಂಗಪಡಿಸಲಿದೆ. ಅದರಲ್ಲಿ ಏನಾಗಬಹುದು, ಈ ಸರಕಾರಿ ಭ್ರಷ್ಟಾಚಾರಕ್ಕೆ ಕೊನೆಗಾದರೂ ಅಂತ್ಯ ಹಾಡಲಾಗುತ್ತದೆಯೇ, ಅಂತ್ಯ ಹಾಡಿದಲ್ಲಿ ಈಗಿನ ಸರಕಾರ ಮತ್ತೆ ಅಡ್ಡಹಾದಿ ಹಿಡಿದು ಹಣ ಸಂಗ್ರಹಿಸುವ ಬೇರೆ ದಾರಿ ಕಂಡುಕೊಳ್ಳುತ್ತದೆಯೇ (ಈ ಸರಕಾರ ಸುಪ್ರೀಂ ಕೋರ್ಟ್ ನ ತೀರ್ಪನ್ನು ಧಿಕ್ಕರಿಸಿ ಸಂಸತ್ ನ ಬಹುಮತ ಬಳಸಿಕೊಂಡು, ಕಾನೂನು ತಂದು ತನ್ನ ಕೆಲಸ ಸಾಧಿಸಿದ ಅನೇಕ ಉದಾಹರಣೆ ಇದೆ) ಎಂಬುದನ್ನು ಕಾಲವೇ ಹೇಳಬೇಕು.

(ಚಿತ್ರಗಳು: ಗೂಗಲ್)

ಶ್ರೀನಿವಾಸ ಕಾರ್ಕಳ

ಚಿಂತಕರು

More articles

Latest article