ಡಾ. ರೂಪಾ ರಾವ್‌ ಅವರ ಪುಸ್ತಕಗಳ ಲೋಕಾರ್ಪಣೆ

Most read

ಕಥೆಗಳು ಎಲ್ಲರಿಗೂ ಇಷ್ಟ. ಹಾರರ್‌ ಸ್ಟೋರಿ ಎಂದಾಗ ಕುತೂಹಲ ಮೂಡಿದರೂ ಮನಸಿನಾಳದಲ್ಲಿ ಸಣ್ಣ ಭಯ, ಆತಂಕ ಮನೆ ಮಾಡಿರುತ್ತದೆ. ಮನೋವಿಜ್ಞಾನದ ವಾಸ್ತವ ಆಯಾಮಗಳನ್ನು ಪರಿಚಯಿಸಲು ಕಥೆಗಿಂತ ಉತ್ತಮ ಮಾಧ್ಯಮ ಬೇರೆ ಇಲ್ಲ. ಅಲ್ಲಿ ಇಲ್ಲಿ ನಡೆದ ಘಟನೆಗಳನ್ನೊಳಗೊಂಡ  ಮನೋವೈಜ್ಞಾನಿಕ ಕಥೆಗಳ ಗುಚ್ಛವೇ ಡಾ. ರೂಪಾ ರಾವ್‌ ಅವರ ಸೈಕೋ ಹಾರರ್‌ ಕಥೆಗಳು. ಜತೆಗೆ ಇವರು ತಮ್ಮ  ಕೌನ್ಸೆಲಿಂಗ್‌ ಕೋಚಿಂಗ್‌ ಸಂದರ್ಭದ ಅನುಭವಗಳು ಹಾಗೂ ಪ್ರಶ್ನೋತ್ತರಗಳನ್ನು ದಾಖಲಿಸಿದ ಕೃತಿ ʼಮನಸಿಗೊಂದು ಕೈಗನ್ನಡಿʼ. ಈ ಎರಡೂ ಕೃತಿಗಳ  ಬಿಡುಗಡೆ ಸಮಾರಂಭವು ಫೆ. 2 ರಂದು ಬೆಂಗಳೂರಿನ ಕೆಂಪೇಗೌಡ ನಗರದ ಉದಯಬಾನು ಕಲಾಸಂಘದಲ್ಲಿ ನಡೆಯಲಿದೆ. ಸೈಕೋ ಹಾರರ್‌ ಕಥೆಗಳಲ್ಲಿನ ಒಂದು ಕಥೆಯ ಆಯ್ದ ಭಾಗ ಇಲ್ಲಿದೆ.

ಕಥೆಯ ಹೆಸರು : ಅಂತಿಮ ತೀರ್ಪು

“ಮೇಡಮ್ , ಇವತ್ತಾದರೂ ಅಪಾಯಿಂಟ್ಮೆಂಟ್ ಕೊಡ್ತೀರಾ?” ಮೊಬೈಲ್ ನಿಂದ ಬಂದ ಕರೆಗೆ ಇಲ್ಲವೆನ್ನಲಾಗಲಿಲ್ಲ.

ಒಂದು ವಾರದ ಹಿಂದೆ ಆ ವ್ಯಕ್ತಿ ಕಾಲ್ ಮಾಡಿದ್ದರು. “ಸಮಸ್ಯೆಯೊಂದರಲ್ಲಿ ಸಿಕ್ಕಿ ಗೊಂದಲಗೊಂಡಿದ್ದೇನೆ. ಕೂಡಲೆ ನಿಮ್ಮನ್ನ ಮೀಟ್ ಮಾಡಬೇಕು” ಎಂದು.

ಆಗ ಫ್ಲೈಟ್ ಹತ್ತಿ ಕೂತ್ತಿದ್ದಾಗಿತ್ತು.  ಗಗನಸಖಿ ಮೊಬೈಲ್ ಆಫ್ ಮಾಡಲು ಕೇಳಿಕೊಳ್ಳುತ್ತಿದ್ದಳು.

ನಂತರ ಮಾತಾಡುತ್ತೇನೆ ಎಂದು ಆತನಿಗೆ ಹೇಳಿ ಫೋನ್ ಆಫ್ ಮಾಡಿದ್ದೆ. ಹೆಸರೂ ಸಹಾ ಕೇಳಲಿಲ್ಲ

ನಂತರ ಕಾನ್ಪ್‌ರೆನ್ಸ್ ಅದೂ ಇದೂ ಗಲಾಟೆಯಲ್ಲಿ ಒಂದೆರೆಡು ಕರೆಗಳನ್ನು ಮಿಸ್ ಮಾಡಿಕೊಂಡೆ.

ಈಗ ಮತ್ತೆ ಬೆಂಗಳೂರಿಗೆ ಬಂದಾಗ ಮೊದಲ ಕರೆ ಆ ವ್ಯಕ್ತಿಯದ್ದೆ. “ಆಯ್ತು  ಬನ್ನಿ” ಎಂದು ವಿಳಾಸ ಕೊಟ್ಟೆ. ಸಂಜೆ  ಆರು ಗಂಟೆಗೆ ಸರಿಯಾಗಿ ಬಂದರವರು.

ಸಾಮಾನ್ಯವಾಗಿ ಭೇಟಿಗೆ ಮುಂಚೆಯೇ ಒಂದಷ್ಟು ಫಾರ್ಮ್ ಕಳಿಸುತ್ತಿದ್ದವಳು  ಈ ಬಾರಿ ನೇರವಾಗಿ ಭೇಟಿಯಾದೆ. ಅವರು ಶುರು ಮಾಡಿದರು..

ವ್ಯಕ್ತಿಯ ಹೆಸರು ಸೂರ್ಯವಂಶಿ .ಸುಮಾರು ನಲವತ್ತೆರೆಡು ವರ್ಷ. ಮದುವೆ  ಆಗಿದೆ. ಮಗನಿಗೆ  ಹದಿನಾರು ವರ್ಷ. ಗಂಡ ಹೆಂಡತಿ  ಬಹಳ ಅನ್ಯೋನ್ಯರು..ಪ್ರೇಮ ವಿವಾಹ. ಇಬ್ಬರಿಗೂ ಒಬ್ಬರನ್ನೊಬ್ಬರು ಬಿಟ್ಟಿರಲಾಗದಷ್ಟು  ಪ್ರೀತಿ. ಈತ ಸರ್ಕಾರದ ಉನ್ನತ ಇಲಾಖೆಯ ಕಮಿಷನರ್. ಆಕೆ ಪ್ರತಿಷ್ಠಿತ ಕಂಪನಿಯಲ್ಲಿ ಜನರಲ್ ಮ್ಯಾನೇಜರ್.

ಮಗ ಅತಿ ಬುದ್ಧಿವಂತ. ಹತ್ತನೇ ತರಗತಿಯಲ್ಲಿ ಮೊದಲ  rank.  ಬಹಳವೇ ಒಳ್ಳೆಯವ. ಅವರ ಬದುಕು ಅತಿ ಸುಂದರವೇ ಆಗಿದೆ  ಅನಿಸಿತು. ಇಷ್ಟು ಹೇಳಿ ಆತ ಸುಮ್ಮನಾಗಿ ಬಿಟ್ಟರು.

“ಸಾರ್, ಮುಂದೆ ?”

“ಇದ್ದಕಿದ್ದ  ಹಾಗೆ ಆತ್ಮಹತ್ಯೆ ಮಾಡಿಕೊಳ್ಳಬೇಕು ಅನಿಸಿತು”

” ಆತ್ಮಹತ್ಯೆ ನಾ? ಯಾಕೆ”

” ಗೊತ್ತಿಲ್ಲ. ಅವತ್ತು ರಾತ್ರಿ ನನಗೆ ಸಾಯಬೇಕು ಅಂತ ಅನಿಸಲಾರಂಭಿಸಿತು. “

” ಯಾವತ್ತು?”

“ಒಂದು ಇಂಗ್ಲೀಷ್  ಸಿನಿಮಾ ನೋಡಿದೆ. ಸತ್ತ ಕ್ಷಣದಲ್ಲಿ ಮನುಷ್ಯನ್ನು ಕಾಡುವ ಯೋಚನೆಗಳ ಬಗೆಗಿನ ಸಿನಿಮಾ ಅದು.ನನಗೂ ಹುಚ್ಚು ಹತ್ತಿಸಿಬಿಟ್ಟಿತು.  ನನಗೂ ನನ್ನ ಮನಸಿನಾಳದಲ್ಲಿ ನಿಜಕ್ಕೂ ಕಾಡುವ ಯೋಚನೆಗಳ ಬಗ್ಗೆ  ತಿಳಿದುಕೊಳ್ಳಬೇಕು ಅನಿಸಿಬಿಟ್ಟಿತು. “

” ಓಹ್.. ಅದಕ್ಕೆ ಸಾಯಬೇಕಂತಲೇ ಇಲ್ಲ.  ನೀವಾಗಿಯೇ  ಡೆತ್ ಬೆಡ್ ನಲ್ಲಿ ಕೂತಂತೆ ಕಲ್ಪಿಸಿಕೊಳ್ಬಹುದು. ” ಈ ಆಲೋಚನೆಯಿಂದ ತಪ್ಪಿಸಿಕೊಳ್ಳಬೇಕು ಅಂತಲೇ  ನಾನು ನಿಮಗೆ ಕರೆಮಾಡಿದ್ದು”

” ಸಾರಿ. ಆದರೆ ನನಗೆ ನಿಜವಾಗಲೂ ಆ ಸಮಯ ಕ್ರಿಟಿಕಲ್ ಇದ್ದುದರಿಂದ ಉತ್ತರಿಸಲಾಗಲಿಲ್ಲ. “

” ಇರಲಿ ಬಿಡಿ ಮೇಡಮ್. ನಿಮಗೆ ಕರೆ ಮಾಡಿ ನೀವು ಸಿಗಲಿಲ್ಲ ಅಂದಾಗ ಕೊನೆಗೆ ನನ್ನ ಹೆಂಡತಿ ಜೊತೆ ಮಾತಾಡಿದೆ. ಆಕೆ ಮೊದಲು ಬೈದಳು , ನಂತರ ನಾನು ಕಾಡತೊಡಗಿದೆ , ಸಾಯಬೇಕು ಒಂದೆರೆಡು ಕ್ಷಣ. ಆದರೆ ಸಾಯಬಾರದು.  ಆಮೇಲೆ ಮತ್ತೆ ವಾಪಸ್ ಬಂದು ಬಿಡಬೇಕು. ಅಂತಹ ಮೆಡಿಸಿನ್ ಬೇಕು ಎಂದು ಕಾಡತೊಡಗಿದೆ. ನಿಮಗೆ ಹೇಳಿಲ್ಲ ಅಲ್ಲವೇ.  ಅವಳು ಮೆಡ್ ಫಾರ್ಮಾ ಎನ್ನುವ ಕಂಪನಿಯ  GM. ಹಾಗಾಗಿಯೇ ಅವಳಿಗೆ ಇದರ ಬಗ್ಗೆ  ಗೊತ್ತಿರುತ್ತದೆ ಎಂದು ಅವಳ ಬಳಿ ಮಾತಾಡಿದೆ”

” ಓಹ್.”  ಕುತೂಹಲಕಾರಿಯಾಗಿತ್ತು 

“ಅವಳು ಬೈದಳು ಆಗಲ್ಲ ಅಂದಳು.  ಕೊನೆಗೆ ನನ್ನ ಬಲವಂತಕ್ಕೆ ಗುಟ್ಟು ಬಿಟ್ಟುಕೊಟ್ಟಳು. ಅವರ ಕಂಪನಿಯಲ್ಲಿ  ಅಂತಹ ಮೆಡಿಸಿನ್  ಅಂದರೆ ಹೃದಯವನ್ನು ಕೆಲ ಸಮಯಗಳ ಮಟ್ಟಿಗೆ  ಸ್ಥಗಿತಗೊಳಿಸುವ ಡ್ರಗ್ ಇದೆ ಎಂದು ತಿಳಿಸಿದಳು. ಅದನ್ನು ಶಸ್ತ್ರ ಚಿಕಿತ್ಸೆಯಲ್ಲಿ ಬಳಸುತ್ತಾರಂತೆ”

ಆತ ಒಂದು ಕ್ಷಣ ಸುಮ್ಮನಾಗಿ ಮತ್ತೆ ಮುಂದುವರೆಸಿದರು ” ನನ್ನ ಆಸೆ ಇತ್ತಲ್ಲ.  ಆಕೆಯನ್ನು ಬಲವಂತಪಡಿಸಿ ಮೂರುದಿನದ ಹಿಂದೆ ಆಕೆಯಿಂದ ಆ ಡ್ರಗ್ ಅನ್ನು ಪಡೆದೆ. ಆ ಡ್ರಗ್ ಇಂಜಕ್ಟ್  ಮಾಡಿ ಮೂರು ನಿಮಿಷಗಳ ನಂತರ ಮತ್ತೊಂದು ಡ್ರಗ್ ಇಂಜೆಕ್ಟ್ ಮಾಡಬೇಕು ನಂತರ ನಾನು ಮತ್ತೆ ಈ ಲೋಕಕ್ಕೆ ಮರಳಬೇಕು. “

ಈ ಬಗ್ಗೆ ನಾನು ಕೇಳೇ ಇರಲಿಲ್ಲ.

“ಆಮೇಲೆ ?” ಪ್ರಶ್ನಿಸಿದೆ.

“ಅವತ್ತು ರಾತ್ರಿ ಅವಳು ನನಗೆ ಇಂಜಕ್ಟ್ ಮಾಡಿದಳು. ಕಣ್ಣು ಮುಚ್ಚಿದೆ. ಅ ಘಳಿಗೆಗೆ ನನಗೆ ಈ ಲೋಕವೇ ಕಾಣಲಿಲ್ಲ. ಇಡೀ ಜಗತ್ತು ಒಂದು ಕಣವಾಗಿ ನಾನು ಬೃಹದಾಕಾರವಾಗಿ ನಿಂತಿದ್ದೆ. ಆ ಕ್ಷಣದಿಂದ  ಪುಟ್ಟ ಪುಟ್ಟ ನಾಯಿಮರಿಗಳು ಹಿಂದೆ ಹಿಂದೆ ಬರುತ್ತಿವೆ. ಅದರ ಹಿಂದೆ ಮಕ್ಕಳು,  ಅವರ ಹಿಂದೆ  ಆ ವ್ಯಕ್ತಿ  , ಆ ಹೆಂಗಸು.. ಇನ್ನೂ ಅನೇಕರು ಎಲ್ಲರೂ ಎಲ್ಲರೂ.

ಓಹ್ ಆ ನಾಯಿ ಮರಿಯನ್ನೇ ನಾನು ಜೀವಂತವಾಗಿ  ಕಿರುಚುತ್ತಿದೆ ಎಂದು ಹೂತು ಹಾಕಿದ್ದು , ಆ ಹೆಣ್ಣುಮಗುವನ್ನೇ ನಾನು ಲೈಂಗಿಕ ಆಶೆಗೆ ಬಳಸಿಕೊಂಡಿದ್ದು.  ಆ ವ್ಯಕ್ತಿಗೆ ಸಿಗಬೇಕಿದ್ದ ಕೆಲಸವನ್ನು ಲಂಚ ಕೊಟ್ಟು ನನ್ನೆಡೆಗೆ ಮಾಡಿಕೊಂಡಿದ್ದು. ಆ ಹೆಂಗಸರೆಲ್ಲಾ  ನನ್ನ ಅಧಿಕಾರದ ಮದಕ್ಕೆ ಬಲಿಯಾದವರು…ಓಹ್… ಒಂದೊಂದಾಗಿ ನನ್ನ ಪಾಪಗಳೆಲ್ಲಾ ಬೃಹದಾಕಾರವಾಗಿ ನಿಲ್ಲತೊಡಗಿದವು.

ಇವೆಲ್ಲವೂ ನನ್ನ ಮೇಲೆ ಧಾಳಿ ಮಾಡಲಾರಂಭಿಸುತ್ತಿವೆ ಸೇಡು ತೀರಿಸಿಕೊಳ್ಳಲೆಂಬಂತೆ..ಓಹ್ ಅಲ್ಲಿಂದ ಓಡಿ ತಪ್ಪಿಸಿಕೊಳ್ಳೋದಿಕ್ಕೆ ಜಾಗವೇ ಇಲ್ಲವಾಯಿತು. ಮೂರು ನಿಮಿಷಗಳು ಮೂರು ಘಂಟೆಗಳಿಗಿಂತ ಹೆಚ್ಚುತ್ತಾ ಹೋಯಿತು.” ನನಗೆ ಈತ ನಿಜ ನುಡಿಯುತ್ತಿದ್ದಾರೆಯೋ ಅಥವಾ ಮಾನಸಿಕವಾಗಿ ಅಸ್ವಸ್ಥರಾಗಿದ್ದು ಹೀಗೇ ಮಾತನಾಡುತ್ತಿದ್ದಾರೆಯೋ ಗೊತ್ತಾಗಲಿಲ್ಲ.

“ನಾನು ಸತ್ತು ಹೋದೆ. ನನ್ನ ಹೆಂಡತಿ ಮೂರು ನಿಮಿಷಗಳಾದ ಮೇಲೆ ಕೊಡಬೇಕಿದ್ದ ಔಷಧಿಯನ್ನು ಕೊಡಲಿಲ್ಲ. ಈಗ ನಾನು ನಡೆದಾಡುವ ಆತ್ಮ. ಸತ್ತು ಮೂರು ದಿನಗಳಾಗಿವೆ “

ಆ ವ್ಯಕ್ತಿ ಕಣ್ಣುಗಳನ್ನು ಅಗಲಿಸಿ ನನ್ನತ್ತ ನೋಡಿ ನುಡಿದರು

ನನ್ನ ಹೃದಯ ಝಲ್ಲೆಂದಿತು.  ..ನಾನು ನೋಡುತ್ತಿರುವ,  ಕೇಳುತ್ತಿರುವ ಮಾತುಗಳು ಕನಸು ನನಸೋ ಗೊತ್ತಾಗುತ್ತಿಲ್ಲ.  ಸಮಯ ಆಗಲೇ ರಾತ್ರಿ ಎಂಟೂವರೆ.

” ಮೇಡಮ್ , ನೀವು ಅವತ್ತು ನನಗೆ ಸಮಯ ಕೊಟ್ಟಿದ್ದರೆ ನನಗೆ ದಿನ  ಇಂತಹ.ಈ  ಸಂದರ್ಭ ಬರುತ್ತಿರಲಿಲ್ಲ . ನಾನು ನನ್ನ ಹೆಂಡತಿ ಬಳಿ ಮಾತನಾಡಿದರೂ,  ನಡೆದಾಡಿದರೂ ಅವಳಿಗೀಗ  ನಾನು ಕಾಣುತ್ತಿಲ್ಲ ,ಏನೂ ಕೇಳಿಸುತ್ತಿಲ್ಲ.  ಹೇಗಾದರೂ ಮಾಡಿ ನನಗೆ ಮತ್ತೆ ಆ ಇಂಜಕ್ಷನ್ ಕೊಡುವಂತೆ ಹೇಳಿ.. ನನ್ನ ಕರೆ ಸ್ವೀಕರಿಸದೇ ನೀವು ಮಾಡಿದ ತಪ್ಪನ್ನು ಸರಿಪಡಿಸಿಕೊಳ್ಳಲು ಇದೊಂದು ಅವಕಾಶ ನಿಮಗೆ. ನಾನು ಮತ್ತೆ ಭೂಮಿಗೆ ಬರಬೇಕು. ನನಗೆ ಬದುಕಬೇಕು  ಒಂದು ವೇಳೆ ನಾನು ಬದುಕಿಗೆ ಮರಳದಿದ್ದಲ್ಲಿ ಇದಕ್ಕೆ  ಕಾರಣರಾದ ಯಾರನ್ನೂ ಸುಮ್ಮನೇ ಬಿಡುವುದಿಲ್ಲ. ಈಗಲೇ ಕರೆ ಮಾಡಿ ಕರೆಸಿ ಅವಳನ್ನು. ಇದೀಗ ಇವತ್ತೇ ನಿರ್ಣಯ ಆಗಬೇಕು”. ಹೆಂಡತಿಯ ನಂಬರ್ ನನ್ನ ಮುಂದೆ ಇಟ್ಟರು. ಅಲ್ಲ ಇಟ್ಟಿತು  ಆ ಆ ಆತ

ನಾನು ಸಂಪೂರ್ಣ ನಿಷ್ಕ್ರಿಯಳಾಗಿ ಹೋದೆ. ಮೈ ಬೆವೆತು ಹೋಗಿತ್ತು. ಬಾಯಿ ಒಣಗಿ ಮಾತು ಹೊರ ಬರುತ್ತಿಲ್ಲ. ಆ ಆತ್ಮ ಹೆಂಡತಿಯ ನಂಬರ್ ಇರುವ ಪೇಪರನ್ನು ಮತ್ತೊಮ್ಮೆ ಬಡಿಯಿತು.

ನಿಧಾನವಾಗಿ ಆ ನಂಬರಿಗೆ ಡಯಲ್ ಮಾಡಿದೆ. ಅತ್ತಲಿಂದ ಹಲೋ ಎಂದಿತು ಆ ಹೆಣ್ಣಿನ ಧ್ವನಿ….

ಮುಂದಿನ ಕುತೂಹಲಕಾರಿ ಭಾಗವನ್ನು ಡಾ. ರೂಪಾ ರಾವ್‌ ಅವರ ʼಸೈಕೋ ಹಾರರ್‌ ಕಥೆಗಳುʼ ಪುಸ್ತಕದಲ್ಲಿ ಓದಿ.

ಇದನ್ನೂ ಓದಿ- http://ಜೆಂಡರ್ ಚಾಂಪಿಯನ್ಸ್ -ಲಿಂಗ ಸಂವೇದನೆಯ ಉತ್ತೇಜನಕ್ಕೆ ಡೀಡ್ಸ್‌ ಕೊಡುಗೆhttps://kannadaplanet.com/gender-champions-deeds-contribution-to-gender-sensitization/

More articles

Latest article