ಬಾಪೂ ಹೋದರು…..!

ಮಹಾರಾಷ್ಟ್ರದ ಕೊಲ್ಹಾಪುರ ನಿವಾಸಿ ಮಧುಕರ್ ನಿಂಬಾಳ್ಕರ್ (87) ಕೊನೆಯುಸಿರೆಳೆದಿದ್ದಾರೆ. ಅವರ ಪುತ್ರ, ಹಿರಿಯ ಐಪಿಎಸ್ ಅಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರಾದ ಹೇಮಂತ್ ಎಂ.ನಿಂಬಾಳ್ಕರ್ ಅವರು ತನ್ನ ಅಪ್ಪನ (ಬಾಪೂ ) ಬಗೆಗಿನ  ಆರ್ದ್ರ ನೆನಪುಗಳನ್ನು  ಈ ಬರಹದಲ್ಲಿ ದಾಖಲಿಸಿದ್ದಾರೆ.

ನಾನು ಒಂದೂವರೆ ವರ್ಷದವನಿದ್ದಾಗ ಬಾಪೂ ನನ್ನನ್ನು ಸೋದರತ್ತೆಯ ಬಳಿಗೆ ಕೊಲ್ಲಾಪುರಕ್ಕೆ ಕರೆತಂದು ಬಿಟ್ಟು ಹೋದರು. ಹುಡುಗ ಊರಲ್ಲಿದ್ದರೆ ಶ್ಯಾಣ್ಯಾ ಆಗಲಾರನೆಂಬ ಕಾರಣಕ್ಕೆ ಹೇಮಂತನನ್ನು ಕೊಲ್ಲಾಪುರದಲ್ಲಿಡಬೇಕು ಎಂದು ಜೀಜಿ, ಬಾಪೂರವರು ಮನಸ್ಸು ಗಟ್ಟಿ ಮಾಡಿ, ಕನಿಷ್ಟ ನಡೆದಾಡಲು, ಮಾತಾಡಲು ಕಲಿತ ತಮ್ಮ ಮಗನನ್ನು ಅಕ್ಕನ ಮನೆಗೆ ತಂದು ಬಿಟ್ಟರು. ಇದೇ ಅಕ್ಕ ಬಾಪೂನಿಗೆ ಶಾಲೆ ಕಲಿಸಿ ಶ್ಯಾಣ್ಯಾನನ್ನಾಗಿ ಮಾಡಿದ್ದಳು. ಬಾಪೂ ನನಗೆ ಮಾಯಿ ಸಾಹೇಬರ ಬಾಲಮಂದಿರದಲ್ಲಿಯ ಶಾಲೆಗೆ ಸೇರಿಸಿದರು. ಹಳದಿ ಚಡ್ಡಿ ಮತ್ತು ಬಿಳಿ ಅಂಗಿಯನ್ನು ಧರಿಸಿ ಅತ್ತೆಯ ಕಠೋರ ಉಸ್ತುವಾರಿಯಲ್ಲಿ ನನ್ನ ಶ್ಯಾಣ್ಯಾ ಆಗುವ ಪ್ರವಾಸ ಶುರುವಾಯಿತು.

ಬಾಪೂ ಪ್ರತಿ ರವಿವಾರ ತಪ್ಪದೇ ಕೊಲ್ಲಾಪುರಕ್ಕೆ ಬಂದು ನನ್ನನ್ನು ಶಿವಾಜಿ ಚೌಕಿಗೆ ಕರೆದೊಯ್ದು ಇಂಪಿರಿಯಲ್‌ನಲ್ಲಿ ವ್ಹೆನಿಲಾ ಕೊಡಿಸುತ್ತಿದ್ದರು. ಇದು ಬಾಪೂನ ಪರಿಪಾಠವಾಗಿತ್ತು. ದೇವರಿಗೆ ಏರಿಸುವ ಹೂವು ತಪ್ಪಬಹುದು, ಆದರೆ ಬಾಪೂ ಕೊಲ್ಲಾಪುರಕ್ಕೆ ಬರುವುದನ್ನು ಎಂದೂ ತಪ್ಪಿಸಲಿಲ್ಲ. ಬಾಪೂನ ಹಾಗೂ ನನ್ನ ಆ ಕಾಲದ ಗುರುತು ಎಂದರೆ ನನಗೆ ರವಿವಾರ ಐಸ್‌ಕ್ರಿಮ್ ಕೊಡಿಸುವ ಮತ್ತು ನನಗಾಗಿ ತಪ್ಪದೇ ಮಟನ್ ತರುವ ಮನುಷ್ಯ ಇಷ್ಟಕ್ಕೇ ಸೀಮಿತ!

ಕಾಲ ಸರಿಯುತ್ತ ಹೋಯಿತು. ನಾನು ಮೂರನೇ ಕ್ಲಾಸಿನಲ್ಲಿದ್ದಾಗ ಅತ್ತೆ ಪನ್ಹಾಳಕ್ಕೆ ಇರಲೆಂದು ಹೋದಳು. ಆಗ ಬಾಪೂ ಊರು ಬಿಟ್ಟು ಜೀಜಿಯೊಂದಿಗೆ ನನ್ನ ಶಿಕ್ಷಣಕ್ಕಾಗಿ ಕೊಲ್ಲಾಪುರಕ್ಕೆ ಬಂದರು. ಅವಿಭಕ್ತ ಕುಟುಂಬವನ್ನು ತೊರೆದು ಅಥವಾ ಆ ಕಾಲದ ಭಾಷೆಯಲ್ಲಿ ಮನೆ ಒಡೆಯುವ ಅಪರಾಧ ಮಾಡಿ, ಬಾಪೂ ತೊಟ್ಟ ಬಟ್ಟೆ ಮತ್ತು ಮನೆ ತೊರೆದು ನನಗಾಗಿ ಕೊಲ್ಲಾಪುರದ ಶುಕ್ರವಾರ ಪೇಟೆಯಲ್ಲಿ ಮನೆ ಮಾಡಿದರು.

ಬಾಪೂ ಅವರ ಒಟ್ಟಾರೆ ಇಮೇಜ್ ಅಂದರೆ ಶೀಘ್ರ ಕೋಪಿ ಅಥವಾ ಮುಂಗೋಪಿ ಮತ್ತು ಕಠೋರ ಶಿಸ್ತಿನ ಮನುಷ್ಯ. ಊರಲ್ಲಿ ಎಲ್ಲರೂ ಬಾಪೂ ಅವರನ್ನು ಕಂಡರೆ ಹೆದರಿ ನಡುಗುತ್ತಿದ್ದರು. ಬಾಪೂ ಹೇಳಿದ್ದೇ ಅಂತಿಮ ವೇದವಾಕ್ಯ. ನಾನೂ ಸಹ ಹೆದರುತ್ತಿದ್ದೆ. ಪರ್ಯಾಯವಾಗಿ ಬಾಪೂ ಮತ್ತು ನನ್ನ ನಡುವೆ ನಡೆಯುವ ಸಂವಾದವಾದರೆ ಪ್ರಗತಿ ಪುಸ್ತಕಕ್ಕೆ ಸಹಿ ಹಾಕುವಷ್ಟು ಸೀಮಿತಗೊಂಡಿತು. ಕೊಲ್ಲಾಪುರಕ್ಕೆ ಬಂದ ಬಳಿಕ ಪಿಯರ್‌  ಪ್ರೆಶರ್‌ ನಿಂದಾಗಿ ಬಾಪೂ-ಜೀಜಿ ಅವರನ್ನು ಪಪ್ಪಾ-ಮಮ್ಮಿ ಎಂದು ಕರೆಯಲಾರಂಭಿಸಿದೆ. ಆದರೂ ಬಾಪೂ ಮಾತ್ರ ಬಾಪೂ ಆಗೇ ಉಳಿದರು. ಕೇವಲ ಮಮ್ಮಿ ಮಾತ್ರ ‘ಏ ಮಮ್ಮೆ’ ಎಂದು ಕೊಲ್ಲಾಪುರಿಕರಣಗೊಂಡು ಮುಂದೆ ‘ಅಮ್ಮ’(ಆಯಿ)ಕ್ಕೆ ಬಂದು ನಿಂತಿತು.

ಮಧುಕರ್ ನಿಂಬಾಳ್ಕರ್

ಬಾಪೂ ಕೆಲಸದಲ್ಲಿ ಬಿಜಿಯಾಗಿರುತ್ತಿದ್ದರು. ಹೀಗಾಗಿ ನಮ್ಮ ಪಾಠ ಪ್ರವಚನ, ಅಭ್ಯಾಸದ ಜವಾಬ್ದಾರಿಯು ಜೀಜಿ ಮೇಲೆ ಬಿತ್ತು. ಜೀಜಿ ನಾಲ್ಕನೇ ಕ್ಲಾಸ್‌ವರೆಗೆ ಕಲಿತಿದ್ದಳು. ಆದರೆ ತುಂಬ ಸುಶಿಕ್ಷಿತೆ ಮತ್ತು ಜಾಣ ಮಹಿಳೆ. ಪರೀಕ್ಷೆಗೆ ಏನು ಮಾಡಬೇಕು ಅಂದರೆ ಉತ್ತರ ಬರೆಯಬೇಕಾಗುತ್ತದೆ ಎಂಬ ಸಾದಾ ಸಮೀಕರಣವನ್ನು ಮನದೊಳಗಿಟ್ಟುಕೊಂಡು ನಾನು ಪ್ರತಿದಿನ ಐದು ಪಾಠಗಳ ಪ್ರಶ್ನೋತ್ತರ ಬರೆದು ಮುಗಿಸುವವರೆಗೆ ಊಟ ಹಾಕುವಂತಿಲ್ಲ ಎಂಬ ಬಾಪೂನ ಆದೇಶವನ್ನು ಈ ಧರ್ಮಪತ್ನಿಯು ವರ್ಷಾನುಗಟ್ಟಲೆ ಚಾಚೂತಪ್ಪದೆ ಪಾಲಿಸಿದಳು.

ಪ್ರಗತಿ ಪುಸ್ತಕದ ಪ್ರಶ್ನೆ ಬಗೆಹರಿಯಿತು. ಏಕೆಂದರೆ ಶಾಲೆಯಲ್ಲಿ ಮೊದಲನೇ ಸ್ಥಾನ ಗಳಿಸುವುದು ನನಗೆ ಮೈಗೂಡಿಬಿಟ್ಟಿತ್ತು. ಒಮ್ಮೆ ಹಿಂದಿ ಸರ್ ಮನೆಗೆ ಬಂದರು. ‘ಹೇಮಂತ ಟಿಳಕ ವಿದ್ಯಾಪೀಠದ ಪರೀಕ್ಷೆಗೆ ಹಾಜರಾಗುವುದಿಲ್ಲ ಅಂತಾನೆ. ಏಕೆಂದರೆ ಅಪ್ಪ ಬೇಡ ಎನ್ನುತ್ತಾನೆ’ ಎಂದು ಹೇಳಿದರು. ನಾನು ಸುಳ್ಳು ಹೇಳಿದೆನೆಂಬ ಕಾರಣಕ್ಕೆ ಬಾಪೂ ಮೈಗೆ ಬಾವು ಬರುವವರೆಗೆ ಕೋಲಿನಿಂದ ಬಡಿದರು. ಸಿಟ್ಟಿನಿಂದಲೇ ಪರೀಕ್ಷೆಗೆ ಹಾಜರಾದೆ. ಮೊದಲ ರ‍್ಯಾಂಕ್ ಗಳಿಸಿದೆ. ಪ್ರಮಾಣಪತ್ರ ತೋರಿಸಲು ಹೋದೆ. ಆಗ ಬಳಿಗೆ ಕರೆದು ಕಳಕಳಿಯಿಂದ ಇಷ್ಟೇ ಹೇಳಿದರು. ‘ಕಂದಾ! ಮಾರ್ಕ್ಸ್‌ ಗಳಿಸುವದು ಮಹತ್ವದ್ದಲ್ಲಪ್ಪ, ಆದರೆ ಎಂದಿಗೂ ಸುಳ್ಳು ಮಾತ್ರ ಮಾತಾಡಬೇಡ, ಅದರ ಅಗತ್ಯವಿರುವುದಿಲ್ಲ’.

​ಆ ದಿನ ಬಾಪೂ ನನಗೆ ಎರಡು ನಿಯಮಗಳನ್ನು ಹಾಕಿಕೊಟ್ಟರು. ಅದು ನನ್ನ ಜೀವನವನ್ನೇ ಬದಲಿಸಿತು ಮತ್ತು ಬೆಳಗಿಸಿತು. ಮೊದಲನೆಯದು, ಸುಳ್ಳು ಮಾತಾಡಬಾರದು ಎರಡನೆಯದು ಮೊದಲನೇ ನಿಯಮವನ್ನು ಎಂದಿಗೂ ಮುರಿಯಬಾರದು.

​ಆದರೆ ಆ ದಿನದಿಂದ ಬಾಪೂ ನನಗೆಂದೂ ಪ್ರಗತಿ ಪುಸ್ತಕದ ಬಗೆಗೆ ಕೇಳಲಿಲ್ಲ ಮತ್ತು ಅಭ್ಯಾಸ ಮಾಡು ಎಂದೂ ಹೇಳಲಿಲ್ಲ. ‘ಹೇಮಂತ ಊಟ ಮಾಡಿದನೇನು?’ ಎಂಬ ಒಂದೇ ಒಂದು ಪ್ರಶ್ನೆಯನ್ನು ಅವರು ನನ್ನ ತಾಯಿಗೆ ಯಾವಾಗಲೂ ಕೇಳುತ್ತಿದ್ದರು.

ನನ್ನ ಶೈಕ್ಷಣಿಕ ಪ್ರವಾಸವು ನನ್ನ ತುಂಟತನದೊಂದಿಗೆ ತಗ್ಗು ದಿಣ್ಣೆಯ ಏರಿಳಿತದಲ್ಲಿ ಮುಂದೆ ಸಾಗಿತು. ಬಾಪೂ ಮಾತ್ರ ಏನೂ ಹೇಳದೆ ಆ ಆಘಾತವನ್ನು ಅರಗಿಸಿಕೊಳ್ಳುತ್ತಲೇ ಇದ್ದರು. ನಾನು ತಾರುಣ್ಯದ ಸೊಕ್ಕಿನಲ್ಲಿ ನಿರ್ಲಕ್ಷ್ಯ ಮಾಡಲಾರಂಭಿಸಿದೆ.

ಡಿಗ್ರಿ ಮುಗಿದ ಬಳಿಕ ಒಮ್ಮೆಲೆ ಏನೂ ತೋಚದಂತಾಯಿತು. ಈಗ ಮುಂದೇನು ಎಂಬ ಪ್ರಶ್ನೆಗೆ ಉತ್ತರವಿರಲಿಲ್ಲ. ನಾನು ಎಲ್ಲ ಬಿಟ್ಟು ಕೊಲ್ಲಾಪುರದಲ್ಲಿ ಕೇಬಲ್ ಶುರು ಮಾಡಿದೆ. ‘ಕಂದಾ! ನೀನು ಕಲೆಕ್ಟರನಾಗಬಲ್ಲಷ್ಟು ಜಾಣ ಹುಡುಗ, ಬೇಡದ ಉಪದ್ವ್ಯಾಪ ಯಾಕ ಮಾಡ್ತಿ? ನೀನೀಗ ಎಂಥ ಕೆಲಸ ಮಾಡಿ ತೋರಿಸಬೇಕೆಂದರೆ ಜಗತ್ತು ನಿನ್ನನ್ನು ಮಧುಕರನ ಮಗ ಎಂದು ಗುರುತಿಸದೆ ನನ್ನನ್ನು ಹೇಮಂತನ ಅಪ್ಪ ಎಂದು ಗುರುತಿಸಬೇಕು’ ಎಂದರು ಬಾಪೂ.

ಈ ಮಾತು ನನ್ನ ಹೃದಯವನ್ನು ಘಾಸಿಗೊಳಿಸಿತು. ನಾನು ಕಲೆಕ್ಟರನಾಗೇ ತೋರಿಸಬೇಕೆಂದುಕೊಂಡೆ. ಬ್ಯಾಗ್ ಎತ್ತಿಕೊಂಡು ನೇರವಾಗಿ ಮುಂಬೈನ ಎಸ್‌ಐಎಸಿಗೆ ಬಂದೆ.

ಯುಪಿಎಸ್‌ಸಿಯಲ್ಲಿ ಇಡೀ ಭಾರತಕ್ಕೆ ಐವತ್ತೆರಡನೆಯ ರ‍್ಯಾಂಕ್ ಪಡೆದೆನೆಂಬ ಫೋನು ಮನೆಗೆ ಬಂದಿತು. ಬಾಪೂ ಗಕ್ಕನೆ ಕೆಳಗೆ ಕೂತರು. ‘ಸಾಕೇನು?’ ಎಂದು ನಾನು ಕೇಳಿದೆ.

ನನ್ನ ಎರಡೂ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ನನ್ನ ಅಪ್ಪ ಆ ದಿನ ಬಿಕ್ಕಿ ಬಿಕ್ಕಿ ಅತ್ತರು. ‘ಸಾಕು ಮಗನೇ ನನ್ನ ಜೀವನ ಸಾರ್ಥಕವಾಯಿತು’ ಎಂದರು ಮತ್ತು ಮಟನ್ ತರಲು ತಟ್ಟನೆ ಹೊರಬಿದ್ದರು.

ನನ್ನ ಬಗೆಗೆ ಪ್ರೀತಿಯನ್ನು ವ್ಯಕ್ತ ಮಾಡುವ ಒಂದೇ ಪದ್ಧತಿಯು ನನ್ನಪ್ಪನಿಗೆ ಗೊತ್ತಿತ್ತು. ನಾನು ಕೊಲ್ಲಾಪುರದ ಮನೆ ತಲುಪಿದಾಕ್ಷಣ ‘ಹೇಗಿದ್ದಿ?’ ಎಂದು ಎಂದೂ ಕೇಳದ ಬಾಪೂ ನನ್ನ ಶಿರಸಾಷ್ಟಾಂಗ ನಮಸ್ಕಾರ ಮುಗಿಯುವ ಮೊದಲೇ ಡಬ್ಬಿಯನ್ನು ಹಿಡಿದುಕೊಂಡು ಮಟನ್ ತರಲು ಹೊರಬೀಳುತ್ತಿದ್ದರು. ನಮ್ಮ ನಡುವಿನ ಇದೇ ಎಲ್ಲಕ್ಕಿಂತ ಆರ್ಥಪೂರ್ಣ ಸಂವಾದವು ಇಂದಿಗೂ ಅಖಂಡವಾಗಿ ಸಾಗಿ ಬಂದಿತ್ತು.

ಕೊಲ್ಲಾಪುರದ ಹಿರಿಯ ತಲೆಮಾರಿನ ಜನರು ವಿಚಿತ್ರವಾಗಿದ್ದಾರೆ. ತಮ್ಮ ಸ್ವಂತ ಮಗನ ಕ್ಷೇಮ ಸಮಾಚಾರವನ್ನು ಅವನ ತಾಯಿಯಿ ಮೂಲಕವೋ ಅಥವಾ ಬಹಳವೆಂದರೆ ಅವನ ಗೆಳೆಯರ ಮೂಲಕವೋ ತಿಳಿದುಕೊಳ್ಳುತ್ತಾರೆ. ‘ಹೇಗಿದ್ದಾನೆ ನಿನ್ನ ಗೆಳೆಯ? ನಾನು ಕ್ಷೇಮ ಸಮಾಚಾರ ಕೇಳಿದೆನೆಂದು ಹೇಳು ಅವನಿಗೆ’ ಇದು ಕೊಲ್ಲಾಪುರದ ಹಿರಿಯ ತಲೆಮಾರಿನವರ ಖಚಿತ ವಾಕ್ಯ. ‘ಏನೋ ಹೇಮಂತ ಹೇಗೆ ನಡೆದಿದೆ ನಿನ್ನದು?’ ಹೀಗೆ ನೇರವಾಗಿ ಕೇಳುವುದೆಂದರೆ ತಮ್ಮದೇ ಮಗನ ಬಗೆಗೆ ಸಂಶಯ ತಾಳಿದಂತೆ ಎಂದು ಅವರಿಗೆ ಅನಿಸುತ್ತಿರಬೇಕು. ದಯಾ ಮತ್ತು ಬಂಟಿಯರನ್ನು ನಾನು ಅದೃಷ್ಟವಂತರೆಂದೇ ಕರೆಯುತ್ತೇನೆ. ಅವರು ಬಾಪೂನ ಜೊತೆಗೆ ಗಂಟೆಗಟ್ಟಲೆ ಹರಟೆ ಹೊಡೆಯುತ್ತ ಕೂತಿರುತ್ತಾರೆ.

ನಿಮ್ಮ ಜೊತೆಗೆ ಹರಟೆ ಹೊಡೆಯುವ, ನಿಮ್ಮೊಂದಿಗೆ ಹೆದರಿ ಹೆದರುತ್ತಲೇ ಒಮ್ಮೆ ಚಿಯರ್ಸ್ ಹೇಳುವುದು ಉಳಿದುಬಿಟ್ಟಿತು ಬಾಪೂ….

​ಅಂಜಲಿ ಡಾಕ್ಟರ್‌ಳಾಗಿದ್ದು, ಅವಳು ಶಾಸಕಿಯಾಗಿದ್ದು ಅವರಿಗೆ ಬೆರಗಿನ ವಿಷಯವಾಗಿತ್ತು. ಮಲ್ಹಾರನು ಅರ್ಥಶಾಸ್ತ್ರ ಕಲಿಯಲು ಅಮೇರಿಕೆಗೆ ಹೋದನೆಂದು ಊರ ತುಂಬೆಲ್ಲ ಎದೆ ಬಿರಿಯುವವರೆಗೆ ಎಲ್ಲರೆದುರು ಹೇಳಿ ಬರುತ್ತಿದ್ದರು. ರಖಮಾ ಎರಡು ತಿಂಗಳ ವಯಸ್ಸಿನವಳಾಗಿದ್ದಾಗ ಅವಳ ಆಪರೇಶನ್ ಮಾಡಬೇಕಾಯಿತು. ಅವಳು ಆಪರೇಶನ್ ಥೇಟರ್‌ನಿಂದ ಹೊರಬರುವವರೆಗೆ ಬಾಗಿಲ ಬಳಿ ದೇವರಲ್ಲಿ ಮೊರೆಯಿಡುತ್ತ ಕೂತ ನನ್ನ ಅಪ್ಪ ಇಂದಿಗೂ ನನಗೆ ಹಾಗೇ ಕಾಣಿಸುತ್ತಾರೆ.

ಹೇಮಂತ್‌ ನಿಂಬಾಳ್ಕರ್‌ ಮತ್ತು ಅಂಜಲಿ ನಿಂಬಾಳ್ಕರ್

ಬಾಪೂವಿನ ಪ್ರೀತಿ, ಅವರ ಕಳಕಳಿ, ಅವರು ಪಟ್ಟ ಶ್ರಮ ಇದೆಲ್ಲ ಒಂದು ಅದೃಶ್ಯ ಕಲ್ಪವೃಕ್ಷದ ಒಂದು ನೆರಳಾಗಿತ್ತು. ಆ ನೆರಳಲ್ಲಿ ಆಡುವಾಗ ಮರದ ಇಲ್ಲವೇ ಅದರ ಅಸ್ತಿತ್ವದ ತೊಂದರೆ ನಮಗಾಗಬಾರದೆಂದು ಮರ ಸಹಿಸಿದ ಅಸಂಖ್ಯಾತ ಮಳೆ ಬಿಸಿಲಿನ ಯೋಚನೆಯು ನಮ್ಮ ಮನದೊಳಗೆಂದೂ ಬರಲಿಲ್ಲ. ಪ್ರಸಂಗ ಬಂದಾಗ ಅದೇ ಮರದ ಒಣಗಿದ ಎಲೆ ನಮಗೆ ಅಗ್ಗಿಷ್ಟಿಕೆಯ ಕಾವು ನೀಡಿತು. ಆದರೆ ನೀಡುವ ಎಲೆಗಳ ಪರಿವೇ ನಮಗಾಗಲಿಲ್ಲ.

ಮಳೆಗಾಲದಲ್ಲಿ ಹಾತಕಣಗಲೆಯ ಸ್ಟೇಶನ್‌ದಿಂದ ಹಳ್ಳದಾಟಿ ಮನೆಗೆ ಹೋಗುವಾಗ ನನ್ನ ಕಾಲಿಗೆ ಕೆಸರು, ಮುಳ್ಳು ಚುಚ್ಚಬಹುದೆಂದು ತಾನು ಮುಳ್ಳು, ಕೆಸರು ತುಳಿಯುತ್ತ ನನ್ನನ್ನು ಹೆಗಲ ಮೇಲೆ ಹೊತ್ತು ಹೋಗುವ ಅಪ್ಪನಿಗೆ ಹೆಗಲು ಕೊಡಬೇಕಾಗಬಹುದು ಎಂಬ ಭಾವನೆಯು ನನ್ನನ್ನೆಂದೂ ಸ್ಪರ್ಶಿಸಲಿಲ್ಲ. ಬಾಪೂ ರಿಟೈರ್ ಆದರು. ನಾನು ಐಪಿಎಸ್ ಆದೆ. ನನ್ನ ರಿಟೈರಮೆಂಟಿಗೆ ಬಾಪೂರನ್ನು ಕರೆದೊಯ್ಯಬೇಕೆಂಬ ನನ್ನ ಕನಸು, ಅವರು ಜೀವನದ ಆಟವನ್ನು ಅರ್ಧಕ್ಕೆ ಬಿಟ್ಟು ಹೋಗಿದ್ದರಿಂದ ಹಾಗೇ ಉಳಿದುಬಿಟ್ಟಿತು.

ನಿನ್ನೆ ಅಸ್ಥಿ ವಿಸರ್ಜನೆಯ ಕಾಲಕ್ಕೆ ಬೂದಿಯಲ್ಲಿ ಅವರ ಅಸ್ಥಿಯನ್ನು ಹುಡುಕುವಾಗ ಆಕಸ್ಮಿಕವಾಗಿ ಒಂದು ಭಯಾನಕ ಪೊಳ್ಳಿನ ಭೀಕರ ಅರಿವು ಸ್ಪರ್ಶಿಸಿ ಹೋಯಿತು. ನೋಡುನೋಡುವಷ್ಟರಲ್ಲಿ ಆ ಕತ್ತಲೆಯ ಪೊಳ್ಳು ನನ್ನ ಅಸ್ತಿತ್ವವನ್ನೇ ವ್ಯಾಪಿಸಿತು. ನಾನು ಮಾತ್ರ, ನನಗಾಗಿ ಇಡೀ ಆಯುಷ್ಯ ಕಣಕಣವಾಗಿ ಸವೆದ ಆ 87 ವರುಷದ ಸುಟ್ಟುಹೋದ ಅಸ್ಥಿಯೊಳಗೆ ಬಾಪೂನನ್ನು  ಹುಡುಕುವ ಅಸಹಾಯಕ ಪ್ರಯತ್ನ ಮಾಡುತ್ತಲೇ ಉಳಿದೆ.

​ಬಾಪೂ, ಐವತ್ತಾರು ವರ್ಷದ ನಾನು, ನಿನ್ನೆಯವರೆಗೆ ನನ್ನನ್ನು ಯುವಕನೆಂದು ಭಾವಿಸುತ್ತಿದ್ದೆ. ಇದು ನಿಮ್ಮ ಇರುವಿಕೆಯಿಂದ ಎನ್ನುವುದು ನನಗಿಂದು ಅರಿವಾಗುತ್ತಿದೆ. ಸ್ಮಶಾನದಲ್ಲಿ ಮಲ್ಹಾರ ನನ್ನ ಹೆಗಲ ಮೇಲೆ ತಲೆಯಿಟ್ಟು ಅಳುತ್ತಿದ್ದ ಮತ್ತು ನನಗೆ ನಾನು ಅಪ್ಪನಾಗಿರುವ ಅರಿವು ಮಾಡಿಕೊಡುತ್ತಿದ್ದ. ನಾನೀಗ ಯಾರ ಹೆಗಲ ಮೇಲೆ ತಲೆಯಿಟ್ಟು ಅಳಲಿ? ಎಂಬ ಪ್ರಶ್ನೆಯನ್ನು ನನ್ನ ಮನಸ್ಸು ನನಗೇ ಕೇಳುತ್ತಿತ್ತು. ನಿಮ್ಮ ನೋವಿನಿಂದ ನಮಗ್ಯಾರಿಗೂ ತೊಂದರೆಯಾಗಬಾರದೆಂದು ಸಂದೀಪ ಡಾಕ್ಟರರ ಪ್ರಯತ್ನವನ್ನೂ ಓವರ್‌ಟೇಕ್ ಮಾಡಿ ನಡೆದುಹೋಗುವವರಂತೆ ಹೊರಟು ಹೋದಿರಿ ನೀವು.

ಕಾಲ ಉರುಳಬಹುದು, ಸಮಯ ಸರಿದು ಹೋಗಬಹುದು, ದುಃಖ ಮತ್ತು ಶೋಕ ಸಹ ಮೆಲ್ಲಗೆ ಕರಗಿ ಹೋಗಬಹುದು. ಇದೇ ಜೀವನಚಕ್ರದ ತತ್ವ. ಆದರೆ ನನ್ನ ಸುಖ ಮತ್ತು ಕಲ್ಯಾಣದ ಬಗೆಗೆ ಸತತ ಎಚ್ಚರಿಕೆ ವಹಿಸುವ ನಿಮ್ಮ ನೆಟ್ಟ ನೋಟ ಮಾತ್ರ ಹೀಗೆಯೇ ಸ್ವರ್ಗದಿಂದಲೂ ನನ್ನ ಮೇಲೆ, ಮಕ್ಕಳ ಮೇಲೆ ಮತ್ತು ನಮ್ಮೆಲ್ಲರ ಮೇಲೆ ಉಳಿಯಲಿ ಎಂದೇ ದೇವರಲ್ಲಿ ಪ್ರಾರ್ಥನೆ.

ಶಬ್ದಗಳೂ ಮೂಡುತ್ತಿಲ್ಲ ಈಗ ನನ್ನಲ್ಲಿ. ಉಳಿದಿದೆ ಕೇವಲ ಭಾವನೆಗಳ ಆವೇಗ ಮತ್ತು ನೆನಪುಗಳು.

ಚೀಯರ್ಸ್ ಬಾಪೂ!

ಹೇಮಂತ! (ಭೈಯ್ಯಾ!)

ಹೇಮಂತ ನಿಂಬಾಳಕರ

ಹಿರಿಯ ಐಪಿಎಸ್ ಅಧಿಕಾರಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತರು

ಇದನ್ನೂ ಓದಿ- ಬಂದೂಕಿನ ನಳಿಕೆಯಲ್ಲಿ ಗುಬ್ಬಿ ಗೂಡು

More articles

Latest article

Most read