ನವದೆಹಲಿ, ಜು. 28: ಲೋಕಸಭೆಯಲ್ಲಿ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026 ಕುರಿತ ಚರ್ಚೆ ವೇಳೆ ಕಾಂಗ್ರೆಸ್ ಸಂಸದೆ ಪ್ರಿಯಾಂಕಾ ಗಾಂಧಿ ವಾದ್ರಾ ಇಂದು ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇತ್ತೀಚೆಗೆ ಜಂತರ್ ಮಂತರ್ ಹಾಗೂ ಸಂಸತ್ ಚಲೋ ಪ್ರತಿಭಟನೆ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೇಲೆ ನಡೆದ ಪೊಲೀಸ್ ಕ್ರಮವನ್ನು ಉಲ್ಲೇಖಿಸಿದ ಅವರು, “ವಿದ್ಯಾರ್ಥಿಗಳು ಭಯೋತ್ಪಾದಕರೇ? ಅವರ ಮೇಲೆ ಲಾಠಿ ಚಾರ್ಜ್ ಮಾಡಲು, ಪೆಲೆಟ್ ಗನ್ ಬಳಸಲು ಮತ್ತು ಅಶ್ರುವಾಯು ಪ್ರಯೋಗಿಸಲು ಆದೇಶ ನೀಡಿದ್ದು ಯಾರು?” ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಪ್ರಶ್ನಿಸಿದರು.
ಪ್ರಿಯಾಂಕಾ ಗಾಂಧಿ ತಮ್ಮ ಭಾಷಣದಲ್ಲಿ, ಶಿಕ್ಷಣ ವ್ಯವಸ್ಥೆಯಲ್ಲಿನ ದೋಷಗಳನ್ನು ಸರಿಪಡಿಸುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿದರು. ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯದೊಂದಿಗೆ ಸಂಬಂಧ ಹೊಂದಿರುವ ಪರೀಕ್ಷಾ ವ್ಯವಸ್ಥೆಯಲ್ಲಿ ನಿರಂತರವಾಗಿ ಅಕ್ರಮಗಳು ನಡೆಯುತ್ತಿವೆ ಎಂದು ಹೇಳಿದ ಅವರು, ಮೋದಿ ಸರ್ಕಾರದ ಅವಧಿಯಲ್ಲಿ 152 ಪೇಪರ್ ಲೀಕ್ ಪ್ರಕರಣಗಳು ನಡೆದಿವೆ. ಆದರೆ ಇದುವರೆಗೆ ಯಾರಿಗೂ ಪರಿಣಾಮಕಾರಿ ಶಿಕ್ಷೆಯಾಗಿಲ್ಲ ಎಂದು ಆರೋಪಿಸಿದರು.
ಸರ್ಕಾರ ಈಗ ಹೊಸ ತಿದ್ದುಪಡಿ ಮಸೂದೆ ತಂದಿರುವುದನ್ನು ಸ್ವಾಗತಿಸಿದರೂ, ಕೇವಲ ಕಾನೂನು ತರುವುದರಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂದು ಹೇಳಿದರು. ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಪುನಃ ಸ್ಥಾಪಿಸಲು ಹೊಣೆಗಾರಿಕೆ ನಿಗದಿ, ಪಾರದರ್ಶಕ ತನಿಖೆ ಹಾಗೂ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಅಗತ್ಯ ಎಂದು ಅವರು ಒತ್ತಾಯಿಸಿದರು.
“ಪೆಲೆಟ್ ಗನ್ ಬಳಸಲು ಆದೇಶ ನೀಡಿದ್ದು ಯಾರು?”
ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾತನಾಡಿದ ಪ್ರಿಯಾಂಕಾ ಗಾಂಧಿ, ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ವಿದ್ಯಾರ್ಥಿಗಳ ವಿರುದ್ಧ ಪೊಲೀಸರು ಅನುಸರಿಸಿದ ಕ್ರಮವನ್ನು ತೀವ್ರವಾಗಿ ಖಂಡಿಸಿದರು.
ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಪ್ರಶ್ನೆ ಕೇಳಿದರೆ ಅವರ ಮೇಲೆ ಲಾಠಿ ಚಾರ್ಜ್ ಮಾಡಲಾಗುತ್ತದೆ. ಪೆಲೆಟ್ ಗನ್ ಬಳಸಲಾಗುತ್ತದೆ. ಅಶ್ರುವಾಯು ಸಿಡಿಸಲಾಗುತ್ತದೆ. ಅವರು ಭಯೋತ್ಪಾದಕರೇ? ಈ ಆದೇಶ ನೀಡಿದ್ದು ಯಾರು? ಪ್ರಧಾನಿ ಮತ್ತು ಗೃಹ ಸಚಿವರು ದೇಶದ ಜನತೆಗೆ ಉತ್ತರಿಸಬೇಕು.”ಎಂದು ಅವರು ಸದನದಲ್ಲಿ ಆಗ್ರಹಿಸಿದರು.
“ಶಿಕ್ಷಣ ವ್ಯವಸ್ಥೆ ಕುಸಿದಿದೆ”
ಶಿಕ್ಷಣ ವ್ಯವಸ್ಥೆಯ ವಿಶ್ವಾಸಾರ್ಹತೆ ಗಂಭೀರ ಸಂಕಷ್ಟದಲ್ಲಿದೆ ಎಂದು ಹೇಳಿದ ಪ್ರಿಯಾಂಕಾ ಗಾಂಧಿ. ವಿದ್ಯಾರ್ಥಿಗಳು ವರ್ಷಗಳ ಕಾಲ ಶ್ರಮಪಟ್ಟು ಪರೀಕ್ಷೆಗೆ ಸಿದ್ಧರಾಗುತ್ತಾರೆ. ಆದರೆ ಪೇಪರ್ ಲೀಕ್‌ಗಳಿಂದ ಅವರ ಕನಸುಗಳು ನಾಶವಾಗುತ್ತಿವೆ ಎಂದು ಅವರು ಹೇಳಿದರು.
ಪೇಪರ್ ಲೀಕ್ ನಡೆದಾಗ ಅದರ ಬೆಲೆ ವಿದ್ಯಾರ್ಥಿಗಳು ಮತ್ತು ಅವರ ಕುಟುಂಬಗಳು ತೆರಬೇಕಾಗುತ್ತದೆ. ಆದರೆ ತಪ್ಪಿತಸ್ಥರು ತಪ್ಪಿಸಿಕೊಂಡು ಹೋಗುತ್ತಾರೆ. ಇದು ನ್ಯಾಯವೇ? ಎಂದು ಅವರು ಪ್ರಶ್ನಿಸಿದರು.
ಇದೇ ವೇಳೆ ಕೇಂದ್ರ ಸರ್ಕಾರ ಮಂಡಿಸಿರುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ-2026 ಪರೀಕ್ಷಾ ಅಕ್ರಮಗಳನ್ನು ತಡೆಯಲು ಶಿಕ್ಷೆಗಳನ್ನು ಇನ್ನಷ್ಟು ಕಠಿಣಗೊಳಿಸುವ ಉದ್ದೇಶ ಹೊಂದಿದೆ ಎಂದು ಸರ್ಕಾರ ಹೇಳಿದೆ. ಸಂಘಟಿತ ಪೇಪರ್ ಲೀಕ್ ಜಾಲಗಳ ವಿರುದ್ಧ ಕಠಿಣ ಕ್ರಮ, ವಿಶೇಷ ತನಿಖಾ ತಂಡ, ವೇಗದ ತನಿಖೆ ಹಾಗೂ ಫಾಸ್ಟ್-ಟ್ರ್ಯಾಕ್ ನ್ಯಾಯಾಲಯಗಳಂತಹ ಕ್ರಮಗಳನ್ನು ಮಸೂದೆಯಲ್ಲಿ ಪ್ರಸ್ತಾಪಿಸಲಾಗಿದೆ.
ಕಾನೂನು ತರುವುದಷ್ಟೇ ಸಾಕಾಗುವುದಿಲ್ಲ; ಈಗಾಗಲೇ ನಡೆದ ಪೇಪರ್ ಲೀಕ್ ಪ್ರಕರಣಗಳ ಹೊಣೆಗಾರಿಕೆಯನ್ನು ಸರ್ಕಾರ ಒಪ್ಪಿಕೊಳ್ಳಬೇಕು ಮತ್ತು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮದ ಬಗ್ಗೆ ಸಂಸತ್ತಿನಲ್ಲಿ ಉತ್ತರಿಸಬೇಕು ಎಂದು ಪ್ರತಿಪಕ್ಷಗಳು ಆಗ್ರಹಿಸಿವೆ.

