ನಂಗೆ ನಿದ್ದೆ ಅನ್ನೋದು ತುಂಬಾ ಇಷ್ಟ. ದಿನ ಇಡೀ ದುಡಿದು, ಮೈಕೈ ಚೆನ್ನಾಗಿ ಮಧುರವಾಗಿ ನೋವಾಗುತ್ತ, ದಿಂಬಿಗೆ ತಲೆ ಇಟ್ಟ ತಕ್ಷಣ ಕಣ್‍ರೆಪ್ಪೆ ಭಾರವಾಗಿ ಹಾಗೇ ತೇಲಿ ಬಿದ್ದು ಕಣ್ ಮುಚ್ಚಿದಾಗ ಎಲ್ಲಾ ನೋವೂ ಹಾರಿ ಹೋಗಿ ಸ್ವಪ್ನ ಲೋಕಕ್ಕೆ ತೇಲಿ ಹೋಗುವ ಅನುಭವ ಎಷ್ಟು ಚೆಂದ. ಅದ್ರೆ ನನಗೆ ನಿದ್ದೆ ಬರೋದೇ ಕಷ್ಟ. ಯಾವಾಗ ನಿದ್ದೆ ಮಾಡ್ತಿನಿ ಯಾವಾಗ ಏಳ್ತೀನಿ ಯಾವಾಗ ಕೆಲಸ ಮಾಡ್ತೀನಿ ಅನ್ನೋದು ಹೋತ್ಲ ಪೋತ್ಲ ಆಗ್ಬಿಟಿದೆ. ನಿದ್ದೆ ಬರಲ್ಲ ಚಿಂತೆ ಬಿಡಲ್ಲ. ಈ ನಡುವೆ ಎಷ್ಟೇ ಸುಸ್ತಾಗಿದ್ರು ನಿದ್ರೆ ಮಾತ್ರ ಬರಲ್ಲ ಒಂಥರಾ ಮಂಪರು. ಸುಖವಾದ ನಿದ್ದೆಯೂ ಅಲ್ಲ ತಲೇ ಕೆಡಿಸುವ ಯೋಚನೆಗಳೂ ಅಲ್ಲ.
ಅದೊಂದು ದೊಡ್ಡ ಬಾರ್. ಅಲ್ಲಿ ನನಗೆ ಕಾಣುತ್ತಿದ್ದುದು ಒಂಥರಾ ಸ್ವಪ್ನ ಲೋಕ. ಅಲ್ಲಿ ನೀರಿನಲ್ಲೂ ಮಧುರವಾದ ಮತ್ತು ಬಂದು ಎಲ್ಲರೂ ಸಂತೋಷವಾಗಿದ್ದ ಸ್ಪೇಸ್. ಆದ್ರೆ ಅಲ್ಲಿ ಯಾವ ಗಂಡಸರೂ ಇರಲಿಲ್ಲ. ನನಗೆ ತಿಳಿದಿರುವ ಅನೇಕ ವಯಸ್ಸಾದ ಮಹಿಳೆಯರು ಒಬ್ಬರ ಜೊತೆ ಒಬ್ಬರು ಮಾತನಾಡುತ್ತ, ಹೊಟ್ಟೆ ತುಂಬಾ ನಗುತ್ತ, ತಮ್ಮೆಲ್ಲಾ ಹಳೆಯ ನೋವು ಸಂಕಟ ಟ್ರಾಜಿಡಿಗಳನ್ನು ಮರೆತ ಸ್ಪೇಸ್ ಅದು..ನಾನು ಎಷ್ಟೇ ಕೇಳಿದರು ನನಗೆ ಮಾತ್ರ ಆ ನೀರನ್ನು ಅಥವಾ ಡ್ರಿಂಕ್ ನ್ನು ಕೊಡುತ್ತಿರಲಿಲ್ಲ. ಆದ್ರೂ ನನಗೆ ಏನೋ ವಿಚಿತ್ರ ಅನುಭವ. ಅವರ ಕಣ್ಣುಗಳು ಸಂತೋಷದಿಂದ ಹೊಳೆಯುತ್ತಿದ್ದವು.
ಹಾಗೇ ಹದ ಇಲ್ಲದೇ ನಡೆಯುತ್ತಿದ್ದಾಗ ನನಗೆ ಮೊದಲು ಕಾಣಿಸಿಕೊಂಡದ್ದು ನಮ್ಮ ಅಮ್ಮನ ಅಮ್ಮ. ವಿಚಿತ್ರ ಅಜ್ಜಿಯನ್ನು! ಅಂತಹ ಅಚ್ಚ ಬ್ರಾಹ್ಮಣರ ಹೆಂಗಸು ಮತ್ತೆ ಇಲ್ಲಿಗೆ!!! ಅವರು ನನ್ನ ನೋಡ್ತಾ ನಗುತ್ತಾ ಲೆಗ್ ಹಾರ್ಮೋನಿಯಂ ನುಡಿಸುತ್ತಾ ಒಂದು ಹಾಡನ್ನು ಹಾಡ್ತಿದ್ರು. ಅದು ಯಾವ ಹಾಡು ಅಂತ ಸ್ಪಷ್ಟ ಇರಲಿಲ್ಲ. ನನ್ನ ಅಜ್ಜಿಯನ್ನು ಈ ಥರ ನಾನು ಯಾವತ್ತೂ ನೋಡಿರಲಿಲ್ಲ. ನಿಜ ಜೀವನದಲ್ಲಿ ನಾನು ನೋಡಿದ ಆಯಮ್ಮನೇ ಅಲ್ಲ. ನಿಜ ಜೀವನದಲ್ಲಿ ಮನೆ ಮಠ ಕುಟುಂಬ ಅಂತ ಜೀವಿಸಿದ ಇವರು ಚಿಕ್ಕ ವಯಸ್ಸಿನಲ್ಲಿ ರಂಗ ನಟಿ. ಅದ್ಭುತವಾಗಿ ಹಾಡುತ್ತಿದ್ದವರು. 9 ವರ್ಷಕ್ಕೆ ಮದುವೆ ಆಗಿ 13 ವರ್ಷಕ್ಕೆ ಮಕ್ಕಳನ್ನು ಹೆರಕ್ಕೆ ಶುರು ಮಾಡಿದ ಇವರಿಗೆ ಮತ್ತೆ ಆ ರಂಗದ ರಂಗು ಹಚ್ಚಲು ಸಾಧ್ಯವಾಗಲೇ ಇಲ್ಲ. ಇದರ ಬಗ್ಗೆ ನಾನು ಎಷ್ಟೋ ಸರ್ತಿ ಯೋಚನೆ ಮಾಡಿದ್ದೆ ತಮಗೆ ಪ್ಯಾಶನ್ ಇರುವ ವಿಷಯವನ್ನು ಅನುಭವಿಸದೇ ಬದುಕುವುದು ಹೇಗೆ ಸಾಧ್ಯ ಅಂತ. ಅವರಿಗೆ ಹೀಗೆ ಮಾಡಬೇಕು ಎಂದು ಹೇಳುವ ಅವಕಾಶವೂ ಇರಲಿಲ್ಲ. ಅಜ್ಜಿದು ಒಳ್ಳೆ ಕಂಠ. ನಾನು ಕೇಳಿದ್ದೆ ಅವರು ಹಾಡೋದನ್ನು. ಆದ್ರೆ ಅಗ ಅವರಿಗೆ ವಯಸ್ಸಾಗಿತ್ತು. ಗಂಟಲು ಸ್ವಲ್ಪ ನಡುಗುತ್ತಿತ್ತು. ಆದ್ರೂ ಆ ವಾಯ್ಸ್ ನನಗೆ ಇಂದಿಗೂ ನೆನಪಿದೆ.
ಹಾಗೇ ಮುಂದೆ ನೋಡ್ತಾ ಬಂದೆ. ಆ … ಅವರು ನಂಗೆ ಗೊತ್ತು. ಅವರನ್ನು ನಾನು ಕೇರಳದಲ್ಲಿ ನೋಡಿದ್ದೆ. ಅವರ ಮುಖದ ಆ ನಗು ನನ್ನನ್ನು ಒಂದು ನಿಮಿಷ ಅವರನ್ನು ಮೊದಲು ಭೇಟಿ ಮಾಡಿದ ನೆನಪಿಗೆ ಕರ್ಕೊಂಡು ಹೋಯ್ತು. ಅವರು ನನ್ ಫ್ರೆಂಡ್ ರಿಲೆಟಿವ್. ಅವರು ಬಡ ಕುಟುಂಬದವರು. ಅವರು ಚೆನ್ನಾಗಿ ಓದುತ್ತಿದ್ದರೂ ಬಡತನದಿಂದಾಗಿ ಓದಕ್ಕೆ ಆಗಿಲ್ಲ. ಕಡೆಗೆ ಬೇರೆಯವರ ಮನೆಗಳಲ್ಲಿ ಕೆಲಸ ಮಾಡಿಕೊಂಡು ತಮ್ಮ ಕುಟುಂಬವನ್ನು ನೋಡಿಕೊಳ್ಳುತ್ತಿದ್ದರು. ಅವರಿಗೆ ಮದುವೆ ಆಯಿತು. ಎರಡು ಮಕ್ಕಳಾಯಿತು, ಗಂಡ ಬಿಟ್ಟು ಹೋದರು. ಹೀಗೇ ಕೆಲಸ ಮಾಡಿಕೊಂಡು ಮಕ್ಕಳನ್ನೂ ನೋಡಿಕೊಂಡು ಓದಿಸುತ್ತಾ ಬದುಕುವಾಗ ಮಗಳು ಏನೋ ವಿಷಯಕ್ಕೆ ಆತ್ಮಹತ್ಯೆ ಮಾಡಿಕೊಂಡಳು. ಒಂದೇ ವರ್ಷದಲ್ಲಿ ಮಗ ಯಾವುದೋ ಗಲಭೆಯಲ್ಲಿ ಕೊಲೆಯಾದ. ತಾವು ಬದುಕಿದ್ದು ತಮ್ಮ ಮಕ್ಕಳಿಗಾಗಿ ಮಾತ್ರ ಎಂದು ಹೇಳುತ್ತಿದ್ದ ಅವರು ಮುಂದೆ ಧೈರ್ಯ ಮಾಡಿ 65 ವರ್ಷ ಬದುಕಿದ್ದೇ ದೊಡ್ಡ ವಿಷಯ. ಕೊನೆಯ ತನಕ ಬದುಕನ್ನು ನಂಬಿ ಬದುಕಿದ್ದು ನೋಡ್ದಾಗ ಅ ಕನ್ವಿಕ್ಷನ್ ನಮಗೆ ಇಲ್ಲ ಅನಿಸುತ್ತೆ.
ಓಹ್ ಇದೇನು ನಿದ್ದೆನೋ ತಲೆ ಒಡೆಯುವ ಯೋಚನೆಗಳೋ ಎಂದು ತಲೆ ಹಿಡ್ಕೊಂಡು ಒಂದು ನಿಮಿಷ ಕಣ್ ಮುಚ್ಚಿ ಕಣ್ ತೆಗೆದೆ … ಅಲ್ಲಿ ಮತ್ತೊಂದು ಶ್ಯಾಡೋ… ಇದೆಲ್ಲೋ ನೋಡಿದ್ದೇನೆ, ಯಾರಿದು … ಅದು ನಮ್ಮ ಮರಿಯಮ್ಮ. ಅವಳು ಹೇಳ್ತಿದ್ಲು, ತನ್ನ ಚಿಕ್ಕ ವಯಸ್ಸಿನಲ್ಲಿ ಅವಳು ತುಂಬಾ ಸುಂದರಿ ಅಂತ. ಅವಳು ಕೆಲವು ಸಮಯ ಟೀಚರ್ ಆಗಿ ಕೆಲಸ ಮಾಡಿದ್ಲಂತೆ. ಅವಳನ್ನ ಒಬ್ಬ ಮೇಲ್ಜಾತಿಯವನು ಪ್ರೀತಿಸಿ ಅವಳು ಗರ್ಭಿಣಿಯಾದಾಗ ಬಿಟ್ಟು ಹೋದ್ನಂತೆ. ಕಡೆ ಕಾಲದಲ್ಲಿ ಅವಳು ಮಾರ್ಕೆಟ್ ನ ಒಂದು ಮೂಲೆಯಲ್ಲಿ ತನ್ನ ಮಗನನ್ನು ಕಾಯುತ್ತಾ ಕೂತು ನಮಗೆಲ್ಲಾ ಕಥೆ ಹೇಳ್ತಿದ್ಲು. ಅವಳು ಎಷ್ಟು ಆರಾಮಾಗಿ ಯಾವ ಚಿಂತೆ ಇಲ್ಲದೆ ಸುಂದರವಾಗಿ ಸಂತೋಷವಾಗಿ ಕಾಣ್ತಿದ್ಲು. ಹಾಗೇ ಬಂದು ನನ್ ತಲೆ ಸವರಿ ಹೋದ್ಲು ಕೈಯಲ್ಲಿ ಆ ʼನೀರುʼ ಹಿಡಿದಿದ್ಲು.
ನಾನು ತಲೆ ಕುಲುಕಿ ಇದ್ಯಾಕೆ ಇವರನ್ನೆಲ್ಲಾ ನೋಡ್ತ ಇದ್ದೀನಿ ಅಂತ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿದೆ. ಎಚ್ಚರಿಕೆ ಆಯ್ತು. ಹೆಗಲು ನೋಯ್ತಾ ಇತ್ತು. ಏನೋ ನಾಕೈದು ದಿವಸ ಸತತವಾಗಿ ಕೆಲಸ ಮಾಡಿದ ದಣಿವು. ಅಯ್ಯೋ ಯಾಕೆ ನಿದ್ದೆ ಬರ್ತಿಲ್ಲ ಯಾಕೆ ಇವರನ್ನೆಲ್ಲಾ ನೋಡ್ತಾ ಇದ್ದೀನಿ ಅಂತ ಗಟ ಗಟ ನೀರು ಕುಡಿದೆ.
ಇವತ್ತು ನಮಗಿರುವ ಒಂದೂ ಕಂಫರ್ಟ್ಸ್ ಇಲ್ಲದೆ ಇವರು ಹೇಗಾದರೂ ಬದುಕಿದರೋ.. ಒಬ್ಬರಲ್ಲ ಇಬ್ಬರಲ್ಲ ಅನೇಕ ಮಹಿಳೆಯರು. ಅದರಲ್ಲೂ ಜಾತಿ ವರ್ಗ ಧರ್ಮದಿಂದಾಗುವ ಮತ್ತಷ್ಟು ದೌರ್ಜನ್ಯ ಅನುಭವಿಸಿ. ಈಗಲೂ ಎಷ್ಟೋ ಮಂದಿ ಮಹಿಳೆಯರಿದ್ದಾರೆ ಅವರಿಗೆ ಮಧ್ಯಮ ವರ್ಗದ ಮಹಿಳೆಯರಿಗೆ ಸಿಗುವ ಯಾವ ಕಂಫರ್ಟ್ಸೂ ಇಲ್ಲ. ಬರೀ ಮಹಿಳೆಯರ ಬದುಕನ್ನು ಡಾಕ್ಯುಮೆಂಟ್ ಮಾಡಿದ್ರೆ ಸಾಕು ನಮ್ಗೆ ನಮ್ಮ ಇತಿಹಾಸ ಸಿಕ್ಕಿಬಿಡುತ್ತೆ.
ಇತಿಹಾಸ ಅಂದ್ರೆ ಬರೀ ರಾಜರು, ಯುದ್ಧಗಳು ಇಮಾರತ್ತುಗಳು ಅಲ್ಲ. ಈ ಮಹಿಳೆಯರು ತಮ್ಮ ಬದುಕಿನಲ್ಲಿ ಬೆಸ್ಟ್ ಎಕಾನಮಿ ಎಕ್ಸ್ ಪರ್ಟ್ಸ್, ಅವರು ತಮ್ಮ ಕುಟುಂಬ ನಿರ್ವಹಿಸಿ ಮತ್ತೆಯೂ ಹಣ ಸೇವ್ ಮಾಡುವ ರೀತಿ ನೋಡಿದರೆ ಅವರನ್ನು ಆರ್ಥಿಕ ಮಂತ್ರಿಗಳನ್ನಾಗಿ ಮಾಡಿದ್ರೆ ನಮ್ಮ ದೇಶ ಎಷ್ಟೋ ಮುಂದುವರೆಯ ಬಹುದಾಗಿತ್ತು. ಆಡಳಿತ ಅದು ಮಹಿಳೆಯರ ಮುಖ್ಯ ತಜ್ಞತೆ. ಅಧಿಕಾರ ಮಹಿಳೆಯರ ಕೈಯಲ್ಲಿ ಇದ್ದಿದ್ದರೆ ನಮ್ಮ ಇತಿಹಾಸದಲ್ಲಿ ಬರೀ ಯುದ್ಧಗಳಿರುತ್ತಿರಲಿಲ್ಲ. ನಮ್ಮ ಇತಿಹಾಸದಲ್ಲಿಯೂ ಸ್ವಲ್ಪವೇ ಸ್ಪೇಸ್ ಸಿಕ್ಕಿರುವ ಈ ಮಹಿಳೆಯರು ಅಂತಹ ಕನಸಿನ ಬಾರ್‌ನಲ್ಲಾದರೂ ತಮಗೆ ಬೇಕಾದಂತೆ ಬದುಕಲಿ ಎಂದೇ ಹೇಳಬಹುದಾಗಿದೆ.
ರೂಮಿ ಹರೀಶ್
ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು ಕಳೆದ ಸುಮಾರು 25 ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ ಮತ್ತು ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.
ಇದನ್ನೂ ಓದಿ- ನನ್ನ ಗಂಡಸುತನವನ್ನು ಹುಡುಕುತ್ತಲೇ ಇದ್ದೀನಿ..