Thursday, December 12, 2024

ನನ್ನ ಗಂಡಸುತನವನ್ನು ಹುಡುಕುತ್ತಲೇ ಇದ್ದೀನಿ..

Most read

ಅವನು ಮನೆಗೆ ಬಂದ. ನನ್ನ ಸ್ನೇಹಿತ ಕರೆತಂದಿದ್ದ.  ಅಂದೇನೋ ನಮ್ಮನೇಲಿ ಸಂಭ್ರಮ. ಅದಕ್ಕೆ ಕವನ  ಓದಲು ಎಲ್ಲರನ್ನೂ ಕರೆದಿದ್ದು. ಬಾಗಿಲು ತೆರೆದದ್ದು ನನ್ನ ಇನ್ನೊಬ್ಬ ದೋಸ್ತ. ನಾನು ನೆಲದಲ್ಲಿ ದೀಪಗಳನ್ನ ಜೋಡಿಸುತ್ತಿದ್ದೆ. ನಾನಂದು ಹಳದಿ ಶರ್ಟು ಇಟ್ಟಿಗೆ ರಂಗಿನ ಶಾರ್ಟ್ಸ್ ಹಾಕಿದ್ದೆ. ಬಾಗಿಲು ತೆರೆದಿದ್ದೇ ಕರೆಂಟು ಹೋಯ್ತು. ನಾನು ಹತ್ತಿಸಿದ್ದ ಬೆಳಕಿನ ರಚನೆಯಲ್ಲಿ ಮೊದಲಿಗೆ ನಾನವನ ಮುಖ ನೋಡಿದೆ. ನನ್ನ ಮುಖ ಹಾಗೇ ಒಂದು ಕಿರುನಗೆಯ ಅಸ್ತ್ರ ತೆಗೆದರೆ, ಆತ ಜಗತ್ತನ್ನಪ್ಪುವ ನಗೆಯಿಂದ ನನ್ನ ಅಪ್ಪಿದ. ಅ ನಗೆ ಅಲ್ಲೂ ತೀರುತ್ತಿಲ್ಲ ಇಲ್ಲೂ ತೀರುತ್ತಿಲ್ಲ. ನಮ್ಮ ನಗೆಯೇ ಅವತ್ತೆಲ್ಲಾ ಮಾತನಾಡಿತೋ ಎನೋ ಎನಿಸಿತು.

ಐವತ್ತರಲ್ಲಿಯೂ ನನ್ನ ಕಣ್ಣಿನ ಚುರುಕುತನಕ್ಕೇನೂ ಕಡಿಮೆ ಇಲ್ಲ. ಕಣ್ಣು ಹೊರಳುತ್ತಿದ್ದುದೇ ಅವನು ಇದ್ದ ಕಡೆ. ತೋಳು ತುಂಬುವ ಟಿ ಶರ್ಟನ್ನು ಮತ್ತು ಜೀನ್ಸ್ ಹಾಕಿಕೊಂಡು ಬಂದಿದ್ದ. ಕಣ್ಣೆತ್ತಿ ನೋಡುವ, ಮುಖ ನೋಡುವ ಪರಿಯೇ ಮೈಯಲ್ಲಿ ರೋಮಾಂಚನ ಹೊರಡಿಸುತ್ತಿತ್ತು. ಒಮ್ಮೊಮ್ಮೆ ಅವನು ಹಾಗೆ ನೋಡಿದಾಗಲೆಲ್ಲಾ ನನಗೆ ಏನೋ ಒಂಥರ. ನಾಚಿ ಹೂವಿನಂತರಳುತ್ತಿದ್ದೆ. ವೇಟ್ ವೇಟ್ …. ನಾನು ನಾಚಬಹುದಾ? ನಾನು ಗಂಡಸಲ್ವಾ?  ಸಂಪೂರ್ಣವಾಗಿ ಗೊಂದಲ. ಹಾಗೇ ರೂಮಿನೊಳಗೆ ಹೋಗಿ ತಲೆ ಚಚ್ಚಿಕೊಂಡು ನನಗೆ ನಾನೇ ಹೇಳಿದೆ “ಆಮಿರ್ ಮುಚ್ಕೊಂಡು ಅವನಿರುವಾಗ ಅವನು ದಯಪಾಲಿಸುವ ಕ್ಷಣಗಳನ್ನು ಈ ಪಾಲಿಟಿಕ್ಸ್ ಯೋಚಿಸುತ್ತ ಕಳೆಯ ಬೇಡ. ಅನುಭವಿಸುವುದನ್ನು  ಅನುಭವಿಸಿಬಿಡು. ಮಿಕ್ಕಿದ್ದು ಆಮೇಲೆ ನೋಡೋಣ”

ಅವ ಕಣ್ಣಿನಲ್ಲೇ ಮಾತನಾಡುವವ. ಕರೆಂಟು ಬಂದ ಮೇಲೆ ಅದು ನನಗೂ ಬೇಡವಾಗಿತ್ತು ಅವನಿಗೂ ಬೇಡವಾಗಿತ್ತು. ನಾ ರಚಿಸಿದ್ದ ದೀಪದ ರಚನೆಯಲ್ಲಿ ಅವನ ಕಣ್ಣುಗಳು ಎಂಬರ್ ನಂತೆ ಕಾಣುತ್ತ ಹೆಜ್ಜೆ ಹೆಜ್ಜೆಗೂ ನಾ ಹೋಗುವೆಡೆಗೆಲ್ಲಾ ಸೆಳೆತದಿಂದ ಹಿಂಬಾಲಿಸುತ್ತಿತ್ತು. ನನ್ನ ಹೇಳತೀರದ ಕನಸುಗಳ ಚೂರುಗಳು… ಆ ಕವಿಗೋಷ್ಟಿಯಲ್ಲಿ ಆಗಾಗ ಬಿದ್ದುದನು ನಾನು ಹೆಕ್ಕಿ ಹೆಕ್ಕಿ ತೆಗೆಯುವಾಗ ಆತ ಬಂದು  ಜೊತೆ ಕೂತು ಹೆಕ್ಕುವ, ನನಗೆ ಸಹಾಯ ಮಾಡುವ ಅವಶ್ಯಕತೆ ಇಲ್ಲದಿದ್ದರೂ ಕನಸುಗಳ ಹೆಕ್ಕಿ ತೆಗೆಯುವಲ್ಲಿ ನಿಸ್ಸೀಮ ನಿಪುಣ ಅವನು.

ನಾನು ಯಾವುದೋ ಹಳೇ ಕವಿತೆಗಳನ್ನು ಹುಡುಕೋದೇ ಆಗೋಯ್ತು. ಕಡೆಗೆ ಮೂರೋ ನಾಕೋ ಓದಿದೆ.  ಎಲ್ಲರೂ ಕುಡಿದ ನಶೆಗಿಂತ ಕವಿತೆಯ ನಶೆಗೆ ಶರಣಾಗಿ ಹೋದ್ವಿ ಆ ರಾತ್ರಿ.  ಎಲ್ಲರೂ ಮನೆಗೆ ತೆರಳಿದರೂ ಆ ಕಣ್ಣುಗಳು ಮಾತ್ರ ನನ್ನ ಹಿಂಬಾಲಿಸುವುದು ನನ್ನ ಮನದಲ್ಲೇ ನಡೆದಿತ್ತು. ಒಂದಷ್ಟು ದಿನ ಆ ಕಣ್ಣುಗಳ ಕವಿತೆಗಳು ಒಮ್ಮೊಮ್ಮೆ ಒಂದು ಝಲಕ್ಕಿನಂತೆ ನೆನಪಾದಾಗಲೂ ನನ್ನ ಕಣ್ಮಸಿ ಕರಗಿ ಬಿಡುತ್ತಿತ್ತು. ಅವನು ನನ್ನ ನಿಜಾಮನೆಂದು ತಿಳಿದ ಮೇಲಂತೂ ಕೇಳಲೇಬೇಡಿ. ಈ ಸರಸಕ್ಕೆ ಕನಸುಗಳು ಖಾಲಿಯಾಗೇ ಹೋದವು. ಅವನು ನನ್ನ ನಿಜಾಮನಾಗುವುದು, ನಾನವನ ಛೇಡಿಸುವುದು, ಅವನು ನನ್ನ ಮಾಂತ್ರಿಕವಾಗಿ ನಾನು ನಾನೇ ಅಲ್ಲದೆ ಮಾಯವಾಗಿಸಿ ಬಿಡುವುದು ಎಲ್ಲಾ ನನ್ನ ಕನಸಿನ ಪ್ರಕ್ರಿಯೆಯಾಗಿತ್ತು. ಅವನನ್ನು ಮತ್ತೆ ನೋಡಬೇಕು ಅಂತಲೇ ಅನಿಸಲಿಲ್ಲ.

ಅವನು ಮತ್ತೆ ಮತ್ತೆ ಭೇಟಿಯಾಗುತ್ತಿದ್ದ. ಆಗೆಲ್ಲ ನನ್ನ ಕನಸುಗಳು ಮತ್ತಷ್ಟು ಹೆಪ್ಪುಗಟ್ಟಿ ಒಡೆಯಲಾರಂಭಿಸುತ್ತಿತ್ತು. ನನಗೆ ತಿಳಿದಿತ್ತು ನಾನವನ ಪ್ರೇಮಿ ಆದರೆ ನಾನು ಯಾರು, ಅವನ ಸಖಿಯೋ ಸಖನೋ …. ಎಷ್ಟೋ ಸಾರಿ ನಾನವನಿಗೆ ಗಂಡು ತವಾಯಿಫ್ ಆಗಿ ಬದುಕುತ್ತಿದ್ದೆ. ಅಂದರೆ ನಾನೆಂತಾ ಗಂಡಸು?. ಅವನಿಂದ ನನ್ನ ಗಂಡಸುತನ ವಿಚಲಿತಗೊಂಡಿತೆ?, ಅಥವಾ ನಾನೆಂದೂ ನನ್ನನ್ನು ಹೆಂಗಸು ಎನ್ನದಿದ್ದರೂ, (ಏಕೆಂದರೆ ನಾನು ಹೆಂಗಸಲ್ಲಾ ಎಂಬ ಸ್ಪಷ್ಟತೆ ಇತ್ತು) ನನ್ನ ಗಂಡಸುತನ ಎಂಥದ್ದು ಅನ್ನುವ ಸ್ಪಷ್ಟತೆ ನನಗಿರಲಿಲ್ಲ. ನಾನವನನ್ನು ಉಪಚರಿಸಿ ನೋಡಿಕೊಳ್ಳುವಾಸೆ, ನಾನವನ ತಟ್ಟಿ ಮಲಗಿಸುವಾಸೆ, ನಾನವನ ತೊಡೆಯಲ್ಲಿ ಮಲಗಿಸಿಕೊಂಡು ಅವನ ಕವಿತೆ ಕೇಳುವಾಸೆ, ನಾನವನ ಶಿಷ್ಯನಾದ ನಂತರ ಅವನ ಕೈಲಿ ಬೈಸಿಕೊಳ್ಳುವಾಸೆ. ನನಗವನ ದೇಹದ ವಾಸನೆ ಉಸಿರಾಡಬಹುದಾಗಿತ್ತು, ಅವನು ನಿದ್ದೆಯೆ ತೆಕ್ಕೆಗೆ ಬೀಳುವ ಕ್ಷಣ ತಿಳಿಯುತ್ತಿತ್ತು. ….. ಇಷ್ಟಾದರೂ ನನಗೆ ನನ್ನತನದ ಗಂಡಸು ಎಂಥವನು ಎಂದು ತಿಳಿಯದೇ ಈಗಲೂ ತೊಳಲಾಡುತ್ತಿದ್ದೇನೆ.

ಈಗಂತೂ ಈ ಗೊಂದಲಗಳ ದೂರವಿಟ್ಟು ಬೆಂಬಿಡದ ಬೂತದಂತೆ ಮಾತು ಮಾತಿಗೂ ಪ್ರಶ್ನೆ ಮಾಡುತ್ತಾ, ನಾನೇ ಬೆಂದು ಬೆಂದು ಹದವಾದ ಅನ್ನ ಬೇಯುವಂತೆ ಮಾಡಿಬಿಟ್ಟಿದ್ದಾನೆ. ಈಗವನಿಗೆ ಹೆಸರಿಲ್ಲ ನನಗೆ ಯಾವ ಗಂಡಸು ಹೆಂಗಸೆಂಬ ಅನನ್ಯತೆಗಳ ಬಗ್ಗೆ ನಂಬಿಕೆಯೇ ಹೋಯಿತು.

ಜೀವನಕ್ಕೇನು?

ಅನುಕಂಪವೇ ಇಲ್ಲ.

ಫಕೀರನಂತೆ ಜೀವವ ಹುಡುಕುತ್ತಾ

ಎಲ್ಲಿ ಹೋದರೂ

ನೋಟ ಕಂಡಷ್ಟೂ

ಖಾಲಿತನ.

ಖಾಲಿ ಹೃದಯದಲ್ಲಿ

ಆತಂಕ ಹಸೀ ಮನೆ ಮಾಡಿ,

ನೆನಪುಗಳ ಮರುಕಳಿಸುವ

ರಂಗು ಹಚ್ಚಿ,

ಬೆಳಕು ಹರಡಿ

ದೇಹವನ್ನೇ ಭಸ್ಮ ಮಾಡಿದೆ.

ಸವರುವ ತಂಗಾಳಿ

ಮನೆ ಸುಡುವ ಕೆಂಡವ

ಮತ್ತೆ ಮತ್ತೆ ಹತ್ತಿಸಿದೆ.

ಬೆಂಕಿಯ ಪ್ರತಿಯೊಂದು ಜ್ವಾಲೆ

ನಡೆದೆಲ್ಲಾ ಕಿಸ್ಸಾಗಳಿಗೆ

ಲೆಕ್ಕ ಕೇಳುತ್ತದೆ.

ಕಿಡಿಗಳು ಹಾರುತ್ತಾ

ಎಲ್ಲಾ ಕಳೆದುಕೊಂಡ

ದೇಹದ ಮೆಲೆ 

ಫಕೀರನ ಹಾಡುಗಳ

ಹಾಡುತ್ತವೆ.

ಹೇಳುತ್ತವೆ….

ಏಳು, ತೆಗೆ ನಿನ್ನ ಝೋಲಿ

ನಡೆ, ನಡೆದು ನಡೆದು ನಡೆದು

ಅ ರಾತ್ರಿಯ ಸಮೀಪಿಸು.

ನಿದ್ದೆ ತುಂಬಿದ ಕಣ್ಪಾತ್ರೆಯಲ್ಲಿ

ಸೂಫಿ ಸುತ್ತುವ

ಉನ್ಮತ್ತವ ಬಿತ್ತಿ

ಫಕೀರ ತನ್ನ ಭಂಗಿಯ ಕುಡಿಯುತ್ತಾ

ತಮಾಷೆ ನೋಡುತ್ತಾನೆ.

ಹೊಗೆಯಿಂದ ಎಲ್ಲವ

ಮತ್ತಿನ ಅಸ್ಪಷ್ಟ ಮಾಡಿ

ಕಾಲಿಗೆ ನೋವು ನಿರಾಕರಣೆಯ

ಹಗ್ಗ ಹಾಕಿ ಎಳೆಯುತ್ತಾನೆ.

ಎಂಥಾ ದುಃಸ್ಥಿತಿ ಎಂದರೆ

ಆಯ ತಪ್ಪಿ ಮತ್ತೆ

ಜೀವನದ ಬರಡು ನೆಲಕ್ಕೇ

ಬೀಳುತ್ತೇನೆ. 

ಮತ್ತೆಂದೂ ಕವಿತೆಗಳ ಜೊತೆ ಆಟವಾಡಬಾರದೆಂಬ ಪಾಠ ಕಲಿತೆ, ಹಾಗೆ ಮತ್ತೆಂದೂ ದೀಪಗಳ ಹಚ್ಚಬಾರದೆಂದು ತೀರ್ಮಾನಿಸಿದೆ. ನನ್ನ ಗಂಡಸುತನವನ್ನು ಹುಡುಕುತ್ತಲೇ ಇದ್ದೀನಿ, ಈಗ ಹೆಕ್ಕಿಕೊಡಲು ಯಾರೂ ಇಲ್ಲ. ‌

ರೂಮಿ ಹರೀಶ್

ಹಿಂದೂಸ್ತಾನಿ ಶಾಸ್ತ್ರೀಯ ಗಾಯಕ, ಲಿಂಗ ಪರಿವರ್ತಿತ ಪುರುಷ ಮತ್ತು ಲೇಖಕರೂ ಆಗಿರುವ ಇವರು  ಕಳೆದ ಸುಮಾರು 2೫ ವರ್ಷಗಳಿಂದ ಲಿಂಗತ್ವ ಅಲ್ಪಸಂಖ್ಯಾತರ ಪರವಾದ ಹೋರಾಟ  ಮತ್ತು  ಲೈಂಗಿಕ ರಾಜಕಾರಣಕ್ಕೆ ಸಂಬಂಧಿಸಿದ ಕೆಲಸಗಳಲ್ಲಿ ತೊಡಗಿ ಕೊಂಡಿದ್ದಾರೆ.

ಇದನ್ನೂ ಓದಿ- ಕನಸುಗಳ ಉಣಬಡಿಸಿದ ನನ್ನ ʼಕಮ್ರʼ

More articles

Latest article