ಅರಿವಿನ ವಲಯವು ಪಿತೃಪ್ರಧಾನತೆಯ ತಂತ್ರಗಳನ್ನು ಒಡೆಯುತ್ತಿರುವ ವೇಗದ ನಿಧಾನಗತಿಗೂ, ಸಮಾಜದ ಯೋಚನಾ ಲಹರಿಯು ಹೆಣ್ಣಿನ ಸ್ವಾತಂತ್ರ್ಯದ ವಿರುದ್ಧ ಹಿಮ್ಮುಖವಾಗಿ ಚಲಿಸುತ್ತಿರುವ ವೇಗದ ತೀವ್ರತೆಗೂ ಇರುವ ವ್ಯತ್ಯಾಸವು ಆತಂಕಕಾರಿಯಾಗಿದೆ. ಹೆಣ್ಣು ತನ್ನ ಆತ್ಮಗೌರವಕ್ಕಾಗಿ ದನಿ ಎತ್ತಿದಾಗ ಆಕೆಯನ್ನು ಸಂಸ್ಕಾರಹೀನಳೆಂದು ಜರೆಯುವ ಬದಲು, ಆಕೆ ಪ್ರಶ್ನಿಸಬೇಕಾದ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ – ನಾಗಿಣಿ ಅಪ್ಪಸಾನಿ, ಕನ್ನಡ ಪ್ರಾಧ್ಯಾಪಕಿ.
ಬಸ್ಸಿನಲ್ಲಿ ಕೂತಿದ್ದವಳು ಯಾವುದೋ ಗಲಾಟೆ ಆದಂತನಿಸಿ ಕಿವಿಗಿದ್ದ ಇಯರ್ಫೋನ್ ತೆಗೆದು ಅತ್ತ ಕಿವಿಯಾದಾಗ ಮೊದಲು ಕಿವಿಗೆ ಬಿದ್ದಿದ್ದು, “ಥೂ ಸೂಳೆ ಮುಂಡೇರೆ!” ಎಂದು ಕಂಡಕ್ಟರ್ ಬಾಯಿಂದ ಉದುರಿದ ಅವಾಚ್ಯ ಪದ. ಇದನ್ನು ಕೇಳಿಸಿಕೊಂಡ ಅಲ್ಲಿದ್ದ ಹುಡುಗಿಯರು ತಿರುಗಿ ಬಿದ್ದರು. ತಮ್ಮ ಆತ್ಮಗೌರವಕ್ಕಾಗಿ ದನಿ ಎತ್ತಿದ ಹುಡುಗಿಯರ ಪರ ನಿಲ್ಲುವ ಬದಲು, ಬಸ್ಸಿನಲ್ಲಿದ್ದ ಕೆಲ ಹೆಂಗಸರು ಕಂಡಕ್ಟರ್ ಪರ ವಕಾಲತ್ತು ವಹಿಸಿದರು. ಗಂಡಸೊಬ್ಬ ಎಷ್ಟೇ ಅಸಭ್ಯವಾಗಿ ಬೈದರೂ ಸುಮ್ಮನಿರಬೇಕು; ತಿರುಗಿ ಪ್ರಶ್ನಿಸಬಾರದು ಎನ್ನುವಂತಿತ್ತು ಅವರ ಮಾತಿನ ದಾಟಿ. ಅವಾಚ್ಯ ಪದ ಬಳಸುವುದು ಸರಿಯಲ್ಲವೆಂಬ ನನ್ನ ಮಾತಿಗೆ, “ಗಂಡಸರಿಗೆ ಅವರ ವಯಸ್ಸಿಗೆ ಮರ್ಯಾದೆ ಕೊಡದೆ ಮಾತಾಡುವವರನ್ನು ಸಪೋರ್ಟ್ ಮಾಡುವವರು ಅವರೆಂಥವರೋ?” ಎಂಬ ಉತ್ತರ ಬಂತು.
ಹಿರಿಯರಿಗೆ ಗೌರವ ಕೊಡುವುದು ಅವರ ತಪ್ಪನ್ನು ಪ್ರಶ್ನಿಸುವುದು ಪರಸ್ಪರ ವಿರೋಧವೇಕೆ? ಹೆಣ್ಣು ತನ್ನ ಆತ್ಮಗೌರವಕ್ಕಾಗಿ ದನಿ ಎತ್ತಿದಾಗ ಅದನ್ನು ಅಹಂಕಾರವೆಂದು, ಮೌನವಾಗಿ ಎಲ್ಲವನ್ನೂ ಸಹಿಸಿಕೊಂಡಾಗ ಅದನ್ನು ʼಸಂಸ್ಕಾರʼ ವೆಂದು ವ್ಯಾಖ್ಯಾನಿಸುವ ಮನಸ್ಥಿತಿಯನ್ನು ನಾವು ಪ್ರಶ್ನಿಸಬೇಕಿದೆ. ಅಕ್ಕಮಹಾದೇವಿಯ ವಚನಗಳಲ್ಲಿ ಬರುವ ‘ಅವ್ವಗಳಿರಾ’, ‘ಎಲೆ ಅವ್ವಾ’, ‘ಕೇಳಾ ಕೆಳದಿ’ ಎನ್ನುವ ಸಂಬೋಧನೆಗಳ ಹಿಂದಿನ ನೋವಿನ ಮೂಲವೂ ಇಂತಹ ಸಾಮಾಜಿಕ ಮನಸ್ಥಿತಿಯಲ್ಲಿರಬಹುದೇನೋ ಅನಿಸುತ್ತದೆ. ಶತಮಾನಗಳ ಹಿಂದೆ ಅಕ್ಕ ತನ್ನ ಸುತ್ತಲಿನ ಹೆಂಗಸರನ್ನು ಉದ್ದೇಶಿಸಿ ಮಾತನಾಡಿದಾಗ ಎದುರಿಸಿದ ತಳಮಳದಲ್ಲಿ ಈ ಆಯಾಮವೂ ಇರಬಹುದು.
ಸಂಸ್ಕಾರವೆಂದರೆ ಹಿರಿಯರು ಹೇಳಿದ್ದನ್ನೆಲ್ಲ ಪ್ರಶ್ನಿಸದೆ ಒಪ್ಪಿಕೊಳ್ಳುವುದೋ, ಸಂಬಂಧಗಳನ್ನು ಉಳಿಸಿಕೊಳ್ಳಲು ತನ್ನ ನೋವನ್ನು ಮೌನವಾಗಿ ನುಂಗಿಕೊಳ್ಳುವುದೋ ಅಲ್ಲ. ಪರಸ್ಪರರ ಘನತೆಯನ್ನು ಗೌರವಿಸುವುದು, ಅನ್ಯಾಯವನ್ನು ಗುರುತಿಸುವುದು ಮತ್ತು ತಪ್ಪನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳುವುದೂ ಸಂಸ್ಕಾರದ ಭಾಗವೇ ಆಗಬೇಕು. ಸಂಸ್ಕಾರದ ಹೆಸರಿನಲ್ಲಿ ಹೆಣ್ಣಿನ ದನಿಯನ್ನು ಅಡಗಿಸುವ ಮನಃಸ್ಥಿತಿಯ ಸಂಸ್ಕಾರದ ಅರ್ಥವನ್ನೇ ಮರುಪರಿಶೀಲಿಸಬೇಕಿದೆ.
ಕಾಲೇಜಿನ ಕಾರಿಡಾರ್ನಲ್ಲಿ ಹುಡುಗ ಹಾಗೂ ಹುಡುಗಿಯ ನಡುವೆ ವಾಗ್ವಾದ ನಡೆದಾಗ, ಪ್ರಾಧ್ಯಾಪಕಿಯೊಬ್ಬರು ಹುಡುಗಿಯನ್ನು ಮಾತ್ರ ಕರೆದು ‘ಸಂಸ್ಕಾರದ’ ಪಾಠ ಹೇಳಿರುವುದನ್ನು ಗಮನಿಸಿದೆ. ತನ್ನ ನಿಲುವನ್ನು ಸಮರ್ಥಿಸಿಕೊಳ್ಳಬೇಕೆಂಬ ಹಂಬಲ, ಹಿರಿಯರ ಮಾತನ್ನು ಧಿಕ್ಕರಿಸಬಾರದೆಂಬ ಒತ್ತಡ, ತನ್ನನ್ನು ತಪ್ಪಾಗಿ ಅರ್ಥೈಸಿಕೊಳ್ಳಬಹುದೆಂಬ ಆತಂಕದಲ್ಲಿ ಆ ಎಳೆ ಮನಸು ಅರಳುವ ಮುನ್ನವೇ ಕಮರಿ ಹೋಗುವ ಅಪಾಯವಿದೆ.

ಈ ಸಂಘರ್ಷವನ್ನು ಅರ್ಥ ಮಾಡಿಕೊಳ್ಳಲು ಅವಕಾಶ ಕಲ್ಪಿಸಬೇಕಾದ ಶಿಕ್ಷಣ ವ್ಯವಸ್ಥೆಯೇ ಅಂಕಗಳನ್ನೇ ಅಂತಿಮ ಗುರಿಯಾಗಿಸಿಕೊಂಡಿರುವ ಯಾಂತ್ರಿಕ ವ್ಯವಸ್ಥೆಯಾಗಿ ಬದಲಾಗುತ್ತಿರುವುದು ವಿಪರ್ಯಾಸ. ವಿದ್ಯಾರ್ಥಿಗಳು ಪ್ರಶ್ನಿಸುವ, ತಮ್ಮ ಅನುಭವಗಳನ್ನು ಹಂಚಿಕೊಳ್ಳುವ ಮತ್ತು ಸಾಮಾಜಿಕ ಪೂರ್ವಗ್ರಹಗಳನ್ನು ವಿಮರ್ಶಾತ್ಮಕವಾಗಿ ಚರ್ಚಿಸುವ ಅವಕಾಶಗಳು ಇಂದಿನ ಪಠ್ಯದಲ್ಲಿ ಇಲ್ಲವಾಗಿವೆ. ಅಲ್ಪ ಸ್ವಲ್ಪ ಅವಕಾಶವಿರುವ ಭಾಷೆ ಮತ್ತು ಸಾಹಿತ್ಯ ತರಗತಿಗಳು ಅಂಕ ಸಂಸ್ಕೃತಿಗೆ ಬಲಿಯಾಗುತ್ತಿವೆ. ಸಾಹಿತ್ಯವು ಬದುಕನ್ನು ಅರ್ಥಮಾಡಿಕೊಳ್ಳುವ, ಇತರರ ನೋವನ್ನು ಗ್ರಹಿಸುವ ಮತ್ತು ಅನ್ಯಾಯವನ್ನು ಪ್ರಶ್ನಿಸುವ ವಿವೇಕವನ್ನು ಬೆಳೆಸಬೇಕಾದರೆ ಅದು ಪಠ್ಯಪುಸ್ತಕದ ಪ್ರಶ್ನೋತ್ತರಗಳಿಗೆ ಮಾತ್ರ ಸೀಮಿತವಾಗಬಾರದು. ತರಗತಿಯೊಳಗೆ ಹುಟ್ಟುವ ಅರಿವು ಬದುಕಿನ ನಿರ್ಧಾರಗಳಲ್ಲಿಯೂ ಪ್ರತಿಫಲಿಸಬೇಕು.
ವಿಶ್ವ ಆರ್ಥಿಕ ವೇದಿಕೆಯ 2026 ರ ವರದಿಯ ಪ್ರಕಾರ ಭಾರತದ ಒಟ್ಟಾರೆ ಲಿಂಗ ಸಮಾನತೆಯು ಶೇ.64.5 ರಷ್ಟಿದ್ದು 145 ದೇಶಗಳ ಪೈಕಿ ಭಾರತವು 131 ನೇ ಸ್ಥಾನದಲ್ಲಿದೆ. ಶೇ.93 ರಷ್ಟು ಲಿಂಗ ಸಮಾನತೆಯನ್ನು ಸಾಧಿಸುವ ಮೂಲಕ ಐಸ್ಲ್ಯಾಂಡ್ ದೇಶವು ಮೊದಲ ಸ್ಥಾನದಲ್ಲಿ ಮುಂದುವರೆದಿದೆ. ಈ ವರದಿಯ ಪ್ರಕಾರ ಭಾರತವು ಶೇ.96.6 ರಷ್ಟು ಶೈಕ್ಷಣಿಕ ಪ್ರಗತಿಯನ್ನು ಸಾಧಿಸಿದರೂ ಮಹಿಳೆಯರ ಶೇ.41.2 ರಷ್ಟು ಆರ್ಥಿಕ ಸಹಭಾಗಿತ್ವ ಮತ್ತು ಶೇ.24.5 ರಷ್ಟರ ಸೀಮಿತ ರಾಜಕೀಯ ಸಹಭಾಗಿತ್ವವು ಭಾರತದ ಲಿಂಗ ಸಮಾನತೆಯ ಸೂಚ್ಯಂಕದ ಹಿನ್ನಡೆಗೆ ಪ್ರಮುಖ ಕಾರಣವಾಗಿದೆ.
ಶಿಕ್ಷಣದ ಔದ್ಯಮಿಕ ವಿಸ್ತರಣೆಯು ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸುವ ವಾತಾವರಣವನ್ನು ರೂಪಿಸಿದೆ. ಆದರೆ ಉನ್ನತ ಹುದ್ದೆಗಳಲ್ಲಿ ಮತ್ತು ನಿರ್ಧಾರ ಕೈಗೊಳ್ಳುವ ಅಧಿಕಾರದಲ್ಲಿ ಮಹಿಳೆಯರಿಗೆ ಸಿಗುವ ಅವಕಾಶಗಳ ಕೊರತೆ, ಸಮಾನ ಕೆಲಸಕ್ಕೆ ಸಮಾನ ವೇತನ ಸಿಗದಿರುವುದು, ಉದ್ಯೋಗದಲ್ಲಿ ಮುಂದುವರಿಯಲು ಎದುರಾಗುವ ಕೌಟುಂಬಿಕ ನಿರ್ಬಂಧಗಳು ಹಾಗೂ ರಾಜಕೀಯ ಮತ್ತು ಆಡಳಿತಾತ್ಮಕ ಕ್ಷೇತ್ರಗಳಲ್ಲಿ ಮಹಿಳೆಯರ ಸೀಮಿತ ಪ್ರಾತಿನಿಧ್ಯ—ಇವೆಲ್ಲವೂ ಲಿಂಗ ಸಮಾನತೆಯ ಹಾದಿಯಲ್ಲಿನ ಅಡೆತಡೆಗಳಾಗಿವೆ. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕಲ್ಪಿಸಿರುವುದೇ ರಾಜಕೀಯ ನಿರ್ಧಾರಗಳಲ್ಲಿ ಅವರಿಗೆ ಸಂಪೂರ್ಣ ಸ್ವಾಯತ್ತತೆ ದೊರೆತಿದೆ ಎಂಬುದಕ್ಕೆ ಸಾಕ್ಷಿಯಲ್ಲ. ಮಹಿಳೆಯರು ಸ್ವತಂತ್ರವಾಗಿ ನಿರ್ಧಾರ ಕೈಗೊಳ್ಳುವ ಅವಕಾಶ ಮತ್ತು ಅಧಿಕಾರವನ್ನು ಹೊಂದಿದ್ದಾರೆಯೇ ಎಂಬುದೂ ಅಷ್ಟೇ ಮುಖ್ಯ. ರಾಜಕೀಯ, ಆರ್ಥಿಕ ಸಬಲೀಕರಣದ ಜತೆಗೆ, ಮಹಿಳೆಯರು ತಮ್ಮ ಬದುಕಿನ ನಿರ್ಧಾರಗಳಲ್ಲಿ ಸ್ವಾಯತ್ತತೆಯನ್ನು ಹೊಂದುವಂತೆ ಮಾಡುವುದು ಭಾರತದ ಮುಂದಿರುವ ಪ್ರಮುಖ ಸವಾಲಾಗಿದೆ.
ಇಂದಿನ ನಗರ ಬದುಕಿನ ಕಾರಣದಿಂದಲೋ, ಶಿಕ್ಷಣದಿಂದಲೋ, ಸ್ವಂತ ಗಳಿಕೆಯ ಆತ್ಮವಿಶ್ವಾಸದಿಂದಲೋ ಯುವತಿಯರಲ್ಲಿ ದಿಟ್ಟತನ ಪುಟಿದೇಳುತ್ತಿರುವುದು ನಿಜ. ಆದರೆ, ಈ ಹೊಸ ಅರಿವಿಗೂ ತಮ್ಮವರಿಂದ ನಿರೀಕ್ಷಿಸದ ಅಸಹಕಾರಕ್ಕೂ ನಡುವಿನ ಸಂಘರ್ಷದಲ್ಲಿ ಯುವಜನತೆ ನಲುಗುತ್ತಿದೆ. ಪಿತೃಪ್ರಧಾನತೆಯ ಅಧೀನತೆಯಿಂದ ಬಿಡಿಸಿಕೊಳ್ಳುವ ಹೊತ್ತಿಗೆ, ಅಚ್ಚುಕಟ್ಟಾಗಿ ಹೆಣೆದ ಅದರ ತಂತ್ರಗಳು ಮತ್ತೊಂದು ರೂಪದಲ್ಲಿ ಎದುರಾಗುತ್ತಿವೆ. ಒಂದು ಕಾಲದಲ್ಲಿ ನೇರವಾಗಿ ವಿಧೇಯತೆಯನ್ನು ನಿರೀಕ್ಷಿಸುತ್ತಿದ್ದ ವ್ಯವಸ್ಥೆ ಇಂದು ಪ್ರೀತಿ, ಕುಟುಂಬದ ಗೌರವ, ಆರ್ಥಿಕ ಅನಿವಾರ್ಯತೆ ಮತ್ತು ಜವಾಬ್ದಾರಿಗಳ ಹೆಸರಿನಲ್ಲಿ ಹೆಣ್ಣಿನ ಆಯ್ಕೆಗಳನ್ನು ನಿಯಂತ್ರಿಸುವುದನ್ನು ಮುಂದುವರಿಸುತ್ತಿದೆ.

ಸಾಹಿತ್ಯದ ಮೂಲಕ ವಿಮರ್ಶಾತ್ಮಕ ಅರಿವು ಬೆಳೆಸಿಕೊಂಡ ಇಪ್ಪತ್ತರ ಹರೆಯದ ಯುವತಿಯೊಬ್ಬಳು ಕುಟುಂಬದ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಕಾರಣಕ್ಕಾಗಿ ತನಗೆ ಇಷ್ಟವಿಲ್ಲದ ಮದುವೆಗೆ ಒಪ್ಪಬೇಕಾದ ಅನಿವಾರ್ಯತೆಯನ್ನು ಮುಂದಿಟ್ಟಾಗ, ಅರಿವು ಮತ್ತು ಅನಿವಾರ್ಯತೆಯ ನಡುವಿನ ಒತ್ತಡದಲ್ಲಿ ನಲುಗುವ ಯುವ ಮನಸ್ಸನ್ನು ಹೇಗೆ ಸಂತೈಸುವುದು? ತನ್ನ ಆಯ್ಕೆಯ ಮಹತ್ವದ ಅರಿವಿದ್ದರೂ ಕುಟುಂಬದ ಸಂಕಷ್ಟವನ್ನು ನಿರ್ಲಕ್ಷಿಸಲಾಗದ ಆಕೆಯ ಮನಸ್ಥಿತಿಯನ್ನು ಕೇವಲ ದೌರ್ಬಲ್ಯವೆಂದು ಪರಿಗಣಿಸಲು ಸಾಧ್ಯವೇ? ಅರಿವು ಮೂಡಿದ ಮಾತ್ರಕ್ಕೆ ವ್ಯಕ್ತಿಗೆ ತನ್ನ ನಿರ್ಧಾರವನ್ನು ಕಾರ್ಯರೂಪಕ್ಕೆ ತರುವಷ್ಟು ಸಾಮಾಜಿಕ, ಆರ್ಥಿಕ ಮತ್ತು ಭಾವನಾತ್ಮಕ ಸ್ವಾತಂತ್ರ್ಯ ದೊರೆಯುವುದಿಲ್ಲ ಎಂಬುದಕ್ಕೆ ಇಂತಹ ಸನ್ನಿವೇಶಗಳು ಸಾಕ್ಷಿಯಾಗುತ್ತವೆ.
ಇಲ್ಲಿ ನಿಜವಾದ ಸವಾಲಿರುವುದು ಗಂಡಾಳ್ವಿಕೆಯನ್ನು ಎದುರಿಸುವುದಷ್ಟೇ ಅಲ್ಲ; ಹೆಣ್ಣಿನ ಅಧೀನತೆಯನ್ನೇ ‘ಸಂಸ್ಕಾರ’ ಎಂದು ನಂಬಿ ಬದುಕುತ್ತಿರುವವರಿಗೆ ಆ ಮನಸ್ಥಿತಿಯಿಂದ ಹೊರಬರಲು ದಾರಿ ತೋರಿಸುವುದರಲ್ಲಿಯೂ ಇದೆ. ಪಿತೃಪ್ರಧಾನತೆಯನ್ನು ಜೋಪಾನವಾಗಿ ಕಾಪಿಡುವ ಜವಾಬ್ದಾರಿಯನ್ನು ಹೆಣ್ಣಿನ ಮೇಲೇ ಹೊರಿಸುವ ಅಧಿಕಾರ ವ್ಯವಸ್ಥೆಯ ತಂತ್ರಗಳನ್ನು ಸಾಮಾಜಿಕ ಹಾಗೂ ಕೌಟುಂಬಿಕ ಚೌಕಟ್ಟುಗಳು ಒಡೆಯಬೇಕಿದೆ. ಹೆಣ್ಣು ತನ್ನ ಕುಟುಂಬವನ್ನು ಪ್ರೀತಿಸಬಹುದು; ಅದರ ಜವಾಬ್ದಾರಿಗಳನ್ನು ಹಂಚಿಕೊಳ್ಳಬಹುದು. ಆದರೆ, ಆ ಪ್ರೀತಿ ಮತ್ತು ಜವಾಬ್ದಾರಿಗಳ ಹೆಸರಿನಲ್ಲಿ ತನ್ನ ಬದುಕಿನ ಆಯ್ಕೆಗಳನ್ನೇ ತ್ಯಜಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಬಾರದು.
ಪಿತೃಪ್ರಧಾನತೆಯನ್ನು ಒಡೆಯುವಲ್ಲಿ ಪುರುಷರ ಸಹಭಾಗಿತ್ವವೂ ಅತ್ಯಗತ್ಯ. ಮನೆಯ ಕೆಲಸಗಳಿಂದ ಹಿಡಿದು ಮಕ್ಕಳ ಆರೈಕೆ, ಕುಟುಂಬದ ಆರ್ಥಿಕ ನಿರ್ಧಾರಗಳು ಮತ್ತು ಹಿರಿಯರ ಜವಾಬ್ದಾರಿಗಳವರೆಗೆ ಸಮಾನ ಪಾಲ್ಗೊಳ್ಳುವಿಕೆ ಇರಬೇಕು. ಅಧಿಕಾರದ ಅಸಮಾನ ಹಂಚಿಕೆಯನ್ನು ಪ್ರಶ್ನಿಸುವುದು ಕುಟುಂಬದೊಳಗಿಂದಲೇ ಆರಂಭವಾಗಬೇಕು. ಪುರುಷರಿಗೆ ಸಾಮಾಜಿಕವಾಗಿ ನಿಗದಿಪಡಿಸಲಾದ ಪಾತ್ರಗಳ ಒತ್ತಡಗಳನ್ನು ಗುರುತಿಸುವುದೂ ಅಷ್ಟೇ ಮುಖ್ಯ. ಜತೆಗೆ ಹೆಣ್ಣಿನ ಮೇಲೆ ಹೇರಲಾಗಿರುವ ಅಸಮಾನ ನಿರೀಕ್ಷೆಗಳನ್ನು ಬದಲಿಸುವ ಜವಾಬ್ದಾರಿಯನ್ನೂ ಸ್ವೀಕರಿಸಬೇಕಿದೆ.
ಅರಿವಿನ ವಲಯವು ಪಿತೃಪ್ರಧಾನತೆಯ ತಂತ್ರಗಳನ್ನು ಒಡೆಯುತ್ತಿರುವ ವೇಗದ ನಿಧಾನಗತಿಗೂ, ಸಮಾಜದ ಯೋಚನಾ ಲಹರಿಯು ಹೆಣ್ಣಿನ ಸ್ವಾತಂತ್ರ್ಯದ ವಿರುದ್ಧ ಹಿಮ್ಮುಖವಾಗಿ ಚಲಿಸುತ್ತಿರುವ ವೇಗದ ತೀವ್ರತೆಗೂ ಇರುವ ವ್ಯತ್ಯಾಸವು ಆತಂಕಕಾರಿಯಾಗಿದೆ. ಹೆಣ್ಣು ತನ್ನ ಆತ್ಮಗೌರವಕ್ಕಾಗಿ ದನಿ ಎತ್ತಿದಾಗ ಆಕೆಯನ್ನು ಸಂಸ್ಕಾರಹೀನಳೆಂದು ಜರೆಯುವ ಬದಲು, ಆಕೆ ಪ್ರಶ್ನಿಸಬೇಕಾದ ಪರಿಸ್ಥಿತಿ ಏಕೆ ಸೃಷ್ಟಿಯಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಮನೋಭಾವ ಬೆಳೆಸಿಕೊಳ್ಳಬೇಕಿದೆ. ಪಿತೃಪ್ರಧಾನತೆಯ ತಂತ್ರಗಳನ್ನು ಮೆಟ್ಟಿ ನಿಲ್ಲುವ ಅರಿವಿನ ಹೊಸ ದಾರಿಗಳನ್ನು ಹುಡುಕುವ ಪ್ರಯತ್ನವು ಶಿಕ್ಷಣ ಸಂಸ್ಥೆಗಳಿಂದ ಕುಟುಂಬಗಳವರೆಗೆ, ವೈಯಕ್ತಿಕ ಬದುಕಿನಿಂದ ಸಾಮಾಜಿಕ ವ್ಯವಸ್ಥೆಯವರೆಗೆ ತೀವ್ರಗೊಳ್ಳಬೇಕಿದೆ. ಆಗ ಮಾತ್ರ ಸಂಸ್ಕಾರವು ಹೆಣ್ಣನ್ನು ಮೌನವಾಗಿಸುವ ಸಾಧನವಾಗದೆ, ಅವಳ ಘನತೆಯನ್ನು ಎತ್ತಿ ಹಿಡಿಯುವ ಮೌಲ್ಯವಾಗಿ ರೂಪುಗೊಳ್ಳಬಲ್ಲದು.
ನಾಗಿಣಿ ಅಪ್ಪಸಾನಿ
ಇವರು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಐಎಸ್ಬಿಆರ್ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿದ್ದಾರೆ. ಬೆಂಗಳೂರು ನಗರ ವಿಶ್ವವಿದ್ಯಾಲಯದಿಂದ ಚಿನ್ನದ ಪದಕ ಮತ್ತು ಪ್ರಥಮ ರ್ಯಾಂಕ್ ನೊಂದಿಗೆ ಕನ್ನಡ ಎಂ.ಎ ಪದವಿ ಪಡೆದಿದ್ದು ಪ್ರಸ್ತುತ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಸಂಶೋಧನಾರ್ಥಿಯಾಗಿದ್ದಾರೆ. ಕನ್ನಡ –ತೆಲುಗು ದ್ವಿಭಾಷಿ ಸಾಹಿತ್ಯ ಅನುವಾದಕರಾಗಿದ್ದಾರೆ. ಇವರ ಅಂಕಣ ʼಸಂತೆಯ ಮೌನ ʼ ಪ್ರತಿ ಹದಿನೈದು ದಿನಕ್ಕೊಮ್ಮೆ ಕನ್ನಡ ಪ್ಲಾನೆಟ್ ನಲ್ಲಿ ಪ್ರಕಟವಾಗಲಿದೆ.
ಇದನ್ನೂ ಓದಿ- ಉರಿಯುವ ನೆರಳಿನ ಆತ್ಮ ಕಥನ ‘ಆಫ್ಟರ್ ಶಾಕ್’


