ಬೆಂಗಳೂರು, ನ.12 : ಮುಂದಿನ ವರ್ಷ ವಿಶ್ವ ಕನ್ನಡ ಸಮ್ಮೇಳನವನ್ನು ನಡೆಸುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಘೋಷಿಸಿದ್ದಾರೆ. ಕನ್ನಡಿಗರ ಬದುಕು ನಾಶವಾಗುತ್ತಿರುವಾಗ ‘ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ ಜುಟ್ಟಿಗೆ ಮಲ್ಲಿಗೆ ಹೂವು’ ಎಂಬಂತೆ ಈ ಸಮ್ಮೇಳನ ನಡೆಸುವ ಔಚಿತ್ಯ ನನಗೆ ಅರ್ಥವಾಗುತ್ತಿಲ್ಲ. ಕನ್ನಡ ಎಂದರೆ ನನ್ನ ದೃಷ್ಟಿಯಲ್ಲಿ ಕೇವಲ ಒಂದು ನುಡಿಯಲ್ಲ, ಕನ್ನಡಿಗರ ಬದುಕು ಕೂಡ ಹೌದು. ಅಂಥ ಕನ್ನಡಿಗರೇ ಸೋತು ಹೋಗಿರುವಾಗ ಈ ಸಂಭ್ರಮಕ್ಕೆ ಯಾವ ಅರ್ಥವಿದೆ? ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ. ಎ. ನಾರಾಯಣ ಗೌಡ ಪ್ರಶ್ನಿಸಿದ್ದಾರೆ.
ವಿಶ್ವ ಕನ್ನಡ ಸಮ್ಮೇಳನವನ್ನು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಯವರ ನೇತೃತ್ವದಲ್ಲಿ ನಡೆಸುವುದಾಗಿಯೂ ಮುಖ್ಯಮಂತ್ರಿಗಳು ಹೇಳಿದ್ದಾರೆ. ವೀರಪ್ಪ ಮೊಯ್ಲಿಯವರು ತ್ರಿಭಾಷಾ ನೀತಿಯ ಪರವಾಗಿ ಇರುವವರು, ಕನ್ನಡಿಗರ ಮೇಲಿನ ಬಲವಂತದ ಹಿಂದಿ ಕಲಿಕೆಯ ಪರವಾಗಿ ಇರುವವರು. ಇಂಥವರು ವಿಶ್ವ ಕನ್ನಡ ಸಮ್ಮೇಳನದ ವೇದಿಕೆ ಮೇಲೆ ನಿಂತು ಏನನ್ನು ಹೇಳುತ್ತಾರೆ?
ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಆಸಕ್ತಿಯಿಂದ ಎಸ್ ಎಸ್ ಎಲ್ ಸಿ ಯಲ್ಲಿ ಮೂರನೇ ಭಾಷೆಗೆ ಅಂಕ ನೀಡದೆ ಇರುವ ತೀರ್ಮಾನವನ್ನು ಸರ್ಕಾರ ಕೈಗೊಂಡಿತ್ತು. ಆದರೆ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲಿ ಈ ಸುತ್ತೋಲೆ ಹೊರಡಿಸಿದ್ದರಿಂದಾಗಿ ಹೈಕೋರ್ಟ್ ರದ್ದು ಪಡಿಸಿತ್ತು. ಆದರೆ ಈಗ ಸರ್ಕಾರ ಎರಡು ನುಡಿ ನೀತಿಯ ಬಗ್ಗೆ ತುಟಿ ಎರಡು ಮಾಡುತ್ತಿಲ್ಲ. ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾವು ದ್ವಿಭಾಷಾ ನೀತಿಯ ಪರವಾಗಿ ಇರುವುದಾಗಿಯೂ, ಆದರೆ ಇದಕ್ಕೆ ವೀರಪ್ಪ ಮೊಯ್ಲಿ ಸೇರಿದಂತೆ ಹಲವರ ವಿರೋಧ ಇರುವುದಾಗಿಯೂ ಸ್ವತಃ ನನ್ನ ಬಳಿಯೇ ಹೇಳಿದ್ದರು.
ಉತ್ತರದ ರಾಜ್ಯಗಳ ಮಕ್ಕಳು ಎರಡೇ ಭಾಷೆ ಕಲಿಯುತ್ತ, ಮೂರನೇ ಭಾಷೆಯ ಬದಲಿಗೆ ಅವರ ಭವಿಷ್ಯಕ್ಕೆ ಪೂರಕವಾದ ತಾಂತ್ರಿಕ ಕೌಶಲ್ಯದ ಪಾಠಗಳನ್ನು ಕಲಿಯುತ್ತಿರುವಾಗ ಕನ್ನಡದ ಮಕ್ಕಳು ಏಕೆ ಮೂರನೇ ಭಾಷೆಯ ಹೊರೆ ಹೊರಬೇಕು? ತಲೆತಲಾಂತರಗಳಿಂದ ನಡೆಯುತ್ತಿರುವ ಈ ಅನ್ಯಾಯ ನಿಲ್ಲಿಸಿ ಎಂದರೆ ಅದು ಸರ್ಕಾರದ ಕಿವಿಗೆ ಹೋಗುತ್ತಿಲ್ಲ. ಎಂಥ ದುಸ್ಥಿತಿ ಬಂದಿದೆ ನೋಡಿ, ಸರ್ಕಾರದ ನೀತಿಗಳನ್ನು ಕನ್ನಡ ದ್ರೋಹಿಗಳೇ ನಿರ್ಧರಿಸುತ್ತಿದ್ದಾರೆ.
ಕರ್ನಾಟಕವನ್ನು ವಲಸಿಗರ ಸ್ವರ್ಗವನ್ನಾಗಿ ಮಾಡಿ ಅದನ್ನೇ ರಾಜ್ಯದ ಅಭಿವೃದ್ಧಿ ಎಂದು ನಮ್ಮ ಜನಪ್ರತಿನಿಧಿಗಳು ಎದೆ ಉಬ್ಬಿಸಿಕೊಂಡು ಓಡಾಡುತ್ತಿದ್ದಾರೆ. ಸರ್ಕಾರದ ಉನ್ನತ ಮಟ್ಟದ ಸಮಿತಿ ಒಂದು ನೀಡಿದ ಮಾಹಿತಿ ಪ್ರಕಾರ ರಾಜ್ಯದ ಎಂಜಿನಿಯರ್ ಪದವೀಧರರ ಪೈಕಿ ಶೇ. 17ರಷ್ಟು ಮಂದಿ ಮಾತ್ರ ಉದ್ಯೋಗ ಪಡೆದಿದ್ದಾರೆ. ಉಳಿದ ಶೇ.83 ರಷ್ಟು ಮಂದಿ ಎಲ್ಲಿಗೆ ಹೋದರು? ಅವರು ಈ ಜಗತ್ತಿನಿಂದಲೇ ಮಾಯವಾದರೆ? ಸರ್ಕಾರಕ್ಕೆ ಕಿಂಚಿತ್ ಕಾಳಜಿ ಇದ್ದಿದ್ದರೆ ನಮ್ಮ ಮಕ್ಕಳು ಪದವಿ ಪಡೆದೂ ನಿರುದ್ಯೋಗಿಗಳಾಗಿ ಬೀದಿ ಬೀದಿ ಅಲೆಯುತ್ತಿರುವುದನ್ನು ಗಂಭೀರವಾಗಿ ಪರಿಗಣಿಸುತ್ತಿತ್ತು.
ರಾಜ್ಯದ ಬಹುತೇಕ ಐಟಿ ಬಿಟಿ ಸೇರಿದಂತೆ ಖಾಸಗಿ ಸಂಸ್ಥೆಗಳು ಹೊರರಾಜ್ಯಗಳಿಂದ ಜನರನ್ನು ತಂದು ತುಂಬಿಕೊಳ್ಳುತ್ತಿವೆ. ಕರ್ನಾಟಕ ಈಗ ಕಸದ ತೊಟ್ಟಿ ಆಗಿ ಹೋಗಿದೆ. ಹೊರಗಿನಿಂದ ಬಂದವರ ಉದ್ದಾರಕ್ಕೆ ಸರ್ಕಾರವೇ ತೊಂಕ ಕಟ್ಟಿ ನಿಂತ ಮೇಲೆ ಯಾರೇನು ಮಾಡಲು ಆಗುತ್ತದೆ? ಕರ್ನಾಟಕದ ಉದ್ಯಮವೂ ನಮ್ಮ ಕೈಯಲ್ಲಿ ಇಲ್ಲ, ಉದ್ಯೋಗವೂ ನಮ್ಮ ಕೈಯಲ್ಲಿ ಇಲ್ಲ. ಕನಿಷ್ಟ ಪಕ್ಷ ಎಷ್ಟು ಮಂದಿ ಕನ್ನಡಿಗರಿಗೆ ಉದ್ಯೋಗ ಕೊಟ್ಟಿದ್ದೀರಿ ಎಂದು ಖಾಸಗಿ ಸಂಸ್ಥೆಗಳಿಗೆ ಕೇಳುವ ಧೈರ್ಯವೂ ಸರ್ಕಾರಕ್ಕೆ ಇಲ್ಲ. ಇಂಥ ಸಮೀಕ್ಷೆ ನಡೆಸಲು ಕಾರ್ಮಿಕ ಇಲಾಖೆ ಮೂರು ಬಾರಿ ಪ್ರಯತ್ನ ಪಟ್ಟು ವಿಫಲವಾಗಿದೆ. ಸರ್ಕಾರ ಈ ಕಾರ್ಪರೇಟ್ ಗೂಂಡಾಗಳಿಗೆ ಬೆದರಿ ಸಮೀಕ್ಷೆಗೆ ಅನುಮತಿಯನ್ನೇ ನೀಡಲಿಲ್ಲ.
ಈಗ ನಾವು, ಕರ್ನಾಟಕ ರಕ್ಷಣಾ ವೇದಿಕೆಯವರು ಐಟಿ ಬಿಟಿ ಸಂಸ್ಥೆಗಳಿಗೆ ತೆರಳಿ ‘ಕನ್ನಡಿಗರ ಲೆಕ್ಕ ಕೊಡಿ’ ಎಂದು ಅಭಿಯಾನ ಆರಂಭಿಸಿದರೆ ‘ಮಾರಲ್ ಪೋಲೀಸಿಂಗ್’ ಮಾಡಬೇಡಿ ಎಂದು ಮುಖ್ಯಮಂತ್ರಿಗಳು ಉಪದೇಶ ಮಾಡುತ್ತಾರೆ. ಸರ್ಕಾರವನ್ನು ಮುಖ್ಯಮಂತ್ರಿಗಳು, ಮಂತ್ರಿಗಳು, ಶಾಸಕರು ನಡೆಸುತ್ತಿದ್ದಾರಾ ಅಥವಾ ಈ ಕಾರ್ಪರೇಟ್ ಕಂಪನಿಗಳು ನಡೆಸುತ್ತಿವೆಯಾ?
ಸಾರ್ವಜನಿಕ ಮತ್ತು ಖಾಸಗಿ ವಲಯಗಳ ಎಲ್ಲಾ ಹಂತಗಳ ಉದ್ಯೋಗಗಳಲ್ಲಿ ಶೇ. 80 ರಷ್ಟನ್ನು ಕನ್ನಡಿಗರಿಗೆ ಮೀಸಲಾಗಿ ಇಡುವುದಾಗಿ ನಿಮ್ಮ ಚುನಾವಣಾ ಪ್ರಣಾಳಿಕೆಯಲ್ಲಿ ನೀವೇ ಹೇಳಿಕೊಂಡಿದ್ದಿರಿ. ಈಗ ಕಾರ್ಪರೇಟ್ ಕುಳಗಳಿಗೆ ಹೆದರಿ ಕಾಯ್ದೆ ಜಾರಿಗೆ ತರದೆ ಹೇಡಿಗಳಂತೆ ಕುಳಿತಿದ್ದೀರಿ. 2028ರ ಚುನಾವಣೆಗೆ ಯಾವ ಮುಖ ಹೊತ್ತುಕೊಂಡು ಮತ ಕೇಳಲು ಬರುತ್ತೀರಿ? ನೀವು ಕೊಟ್ಟ ಭರವಸೆ ನೀವೇ ಈಡೇರಿಸದೆ ಮತ್ತೆ ನಮ್ಮನ್ನು ಗೆಲ್ಲಿಸಿ ಎಂದು ಯಾವ ನೈತಿಕತೆಯಲ್ಲಿ ಕೇಳುತ್ತೀರಿ?
ರಾಜ್ಯ ಸರ್ಕಾರದ ಇಲಾಖೆಗಳ ಉದ್ಯೋಗಗಳನ್ನು ಒದಗಿಸುವ KPSC ಎಂಬ ವ್ಯವಸ್ಥೆಯನ್ನು ಎಲ್ಲಾ ರಾಜಕೀಯ ಪಕ್ಷಗಳು ಸೇರಿ ಸರ್ವನಾಶ ಮಾಡಿವೆ. ಭ್ರಷ್ಟಾಚಾರದ ಕೂಪವಾದ KPSC ನಡೆಸುವ ಪರೀಕ್ಷೆಗಳನ್ನು ನಂಬಿಕೊಂಡು ವರ್ಷಗಟ್ಟಲೆ ಊಟ, ನಿದ್ದೆ ಬಿಟ್ಟು ಓದಿದ ಕನ್ನಡದ ಮಕ್ಕಳ ಬದುಕು ನರಕ ಆಗಿದೆ. ಮನೆಯವರ ಪಾಲಿಗೆ ಈ ಮಕ್ಕಳು ಈಗ ಜೀವಂತ ಹೆಣಗಳಾಗಿದ್ದಾರೆ. ಎಷ್ಟೋ ಪರೀಕ್ಷೆಗಳು ನಡೆಯಲೇ ಇಲ್ಲ, ನಡೆದ ಪರೀಕ್ಷೆಗಳು ರದ್ದಾದವು. ಈ ಚಂದಕ್ಕೆ ನಮ್ಮ ತೆರಿಗೆ ಹಣದಲ್ಲಿ ಒಂದು ಸಂಸ್ಥೆ ಬೇಕಿತ್ತೆ?
ಸಾವಿರಾರು ಕನ್ನಡ ಶಾಲೆಗಳನ್ನು ಈಗಾಗಲೇ ಮುಚ್ಚಿದ್ದೀರಿ. ಸಾಲದಕ್ಕೆ ಈಗ ಉಳಿದ ಶಾಲೆಗಳನ್ನು ಕನ್ನಡ ವಿರೋಧಿ ಖಾಸಗಿ ಸಂಸ್ಥೆಗಳಿಗೆ ಚಿನ್ನದ ತಟ್ಟೆಯಲ್ಲಿ ಇಟ್ಟು ಕೊಡುತ್ತಿದ್ದೀರಿ. ಶಾಲೆ ನಡೆಸುವ ಯೋಗ್ಯತೆ ಸರ್ಕಾರಕ್ಕೆ ಇಲ್ಲ ಎನ್ನುವುದನ್ನೂ ಅದು ಹೇಗೆ ಹೆಮ್ಮೆಯಿಂದ ಹೇಳಿಕೊಳ್ಳುತ್ತೀರಿ? ಏನಾಗಿದೆ ನಿಮಗೆ? ಅದರಲ್ಲೂ ಸರ್ಕಾರಿ ಶಾಲಾ ಶಿಕ್ಷಕರ ಮೇಲೆ ಗೂಬೆ ಕೂರಿಸುವ ಕುತಂತ್ರಗಳು ಬೇರೆ. ಖಾಸಗಿ ಶಾಲೆಗಳ ಮಟ್ಟದಲ್ಲೇ ಫಲಿತಾಂಶ ನೀಡುತ್ತಿರುವ ಸರ್ಕಾರಿ ಶಾಲಾ ಶಿಕ್ಷಕರು ಈ ಕೊಂಕು ಮಾತು ಬೇರೆ ಕೇಳಬೇಕು.
ಇಷ್ಟೆಲ್ಲಾ ಇರುವಾಗ ನೀವು ಮಾಡಲು ಹೊರಟ ವಿಶ್ವ ಕನ್ನಡ ಸಮ್ಮೇಳನಕ್ಕೆ ಏನಾದರೂ ಅರ್ಥವಿದೆಯೇ? ನೆರೆಯ ಮಹಾರಾಷ್ಟ್ರ ಸರ್ಕಾರ ಅಲ್ಲಿನ ಮರಾಠಿ ಭಾಷಿಕರ ರಕ್ಷಣೆಗೆ ಏನೇನು ಮಾಡುತ್ತಿದೆ ಎಂಬುದನ್ನಾದರೂ ನೀವು ನೋಡಬಹುದಿತ್ತು. ನಿಮಗೆ ಆ ಇಚ್ಚಾಶಕ್ತಿ ಇಲ್ಲವೇ ಇಲ್ಲ ಬಿಡಿ. ಕನ್ನಡಿಗರ ಬದುಕನ್ನು ಶವ ಪೆಟ್ಟಿಗೆಯಲ್ಲಿ ಇಟ್ಟು ಅದರ ಮೇಲೆ ಎಷ್ಟು ಹೂವು ಸುರಿದರೆ ಏನು ಪ್ರಯೋಜನ? ಈ ಬೂಟಾಟಿಕೆ ಬಿಟ್ಟು ಕನ್ನಡದ ಮಕ್ಕಳ ರಕ್ಷಣೆಗೆ ಒಂದಷ್ಟು ಕಾಯ್ದೆಗಳನ್ನು ರೂಪಿಸುವ ಶಕ್ತಿ ನಿಮಗಿಲ್ಲವೇ? ಅದ್ಯಾವುದನ್ನೂ ಮಾಡದೇ ನೀವು ನಡೆಸುವ ವಿಶ್ವ ಕನ್ನಡ ಸಮ್ಮೇಳನ ನಿಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಇನ್ನೊಂದು ರಾಜಕೀಯ ಸಮಾವೇಶವಾಗುತ್ತದೆ ಅಷ್ಟೆ.
ಕನ್ನಡಿಗರು ಮುಗ್ಧರು. ಇಂಥ ಮೂಗಿಗೆ ತುಪ್ಪ ಸವರುವ ತಂತ್ರಕ್ಕೆ ಮರುಳಾಗುತ್ತಾರೆ ಎಂದು ಭಾವಿಸಬೇಡಿ. ಅನಿಯಂತ್ರಿತ ವಲಸೆ, ನಿಮ್ಮ ಕನ್ನಡಿಗರ ವಿರೋಧಿ ನೀತಿಗಳ ವಿರುದ್ಧ ಇಂದಲ್ಲ ನಾಳೆ ಜನ ದಂಗೆ ಏಳುತ್ತಾರೆ. ಆಗ ಹೊತ್ತಿಕೊಳ್ಳುವ ಬೆಂಕಿಯನ್ನು ಆರಿಸುವ ಶಕ್ತಿಯನ್ನು ನೀವು ಕಳೆದುಕೊಂಡಿರುತ್ತೀರಿ ಎಂಬುದನ್ನು ಮರೆಯಬೇಡಿ ಎಂದು ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ

