ಬೆಂಗಳೂರು, ನ .12 : ಪ್ರಧಾನಿ ನರೇಂದ್ರ ಮೋದಿ ಅವರು ನ.13 ರಂದು ಕರ್ನಾಟಕಕ್ಕೆ ಭೇಟಿ ನೀಡಲಿದ್ದು, ಕರ್ನಾಟಕದಲ್ಲಿ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ.
ನಗರ ಸಾರಿಗೆ, ವಿದ್ಯುತ್ ಪ್ರಸರಣ, ನವೀಕರಿಸಬಹುದಾದ ಇಂಧನ, ಪೆಟ್ರೋಲಿಯಂ, ತ್ಯಾಜ್ಯ ನಿರ್ವಹಣೆ ಮತ್ತು ರೈಲ್ವೆ ಕ್ಷೇತ್ರಗಳ ಹಲವು ಯೋಜನೆಗಳು ಈ ಕಾರ್ಯಕ್ರಮದಲ್ಲಿ ಸೇರಿವೆ.
ನ.13ರಂದು ಬೆಳಿಗ್ಗೆ 10.45ರ ಸುಮಾರಿಗೆ ಬೆಂಗಳೂರಿನ ಪ್ರಶಾಂತಿ ಕುಟೀರಂನಲ್ಲಿ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ಸಂಸ್ಥೆಯ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಮೋದಿ ಪಾಲ್ಗೊಂಡು ಮಾತನಾಡಲಿದ್ದಾರೆ. ಬಳಿಕ ಮಧ್ಯಾಹ್ನ 12.45ರ ಸುಮಾರಿಗೆ ತಾವರೆಕೆರೆಯಿಂದ ಐಐಎಂ ಬೆಂಗಳೂರು ಮೆಟ್ರೋ ನಿಲ್ದಾಣದವರೆಗೆ ಮೆಟ್ರೋ ಸಂಚಾರಕ್ಕೆ ಚಾಲನೆ ನೀಡಲಿದ್ದು, ಸ್ವತಃ ಮೆಟ್ರೋದಲ್ಲಿ ಪ್ರಯಾಣಿಸಲಿದ್ದಾರೆ.
ಮಧ್ಯಾಹ್ನ 1.15ರ ಸುಮಾರಿಗೆ 15,600 ಕೋಟಿ ರೂ.ಗೂ ಅಧಿಕ ಮೌಲ್ಯದ ಯೋಜನೆಗಳ ಉದ್ಘಾಟನೆ, ಶಂಕುಸ್ಥಾಪನೆ ಹಾಗೂ ರಾಷ್ಟ್ರಕ್ಕೆ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸುಮಾರು 3,470 ಕೋಟಿ ವೆಚ್ಚದ ಬೆಂಗಳೂರು ಮೆಟ್ರೋ ಪಿಂಕ್ ಲೈನ್ನ ಕಾಳೇನ ಅಗ್ರಹಾರ–ತಾವರೆಕೆರೆ ಮಾರ್ಗವೂ ಪ್ರಮುಖವಾಗಿದೆ.
ಇದೇ ವೇಳೆ ಕೊಪ್ಪಳ ಮತ್ತು ಗದಗ ನವೀಕರಿಸಬಹುದಾದ ಇಂಧನ ವಲಯಗಳ ಪ್ರಸರಣ ಯೋಜನೆಯ ಹಂತ-2 ಅನ್ನು 4,450 ಕೋಟಿ ರೂ.ವೆಚ್ಚದಲ್ಲಿ ಉದ್ಘಾಟಿಸಲಾಗುತ್ತದೆ. ಇದರಿಂದ ಸುಮಾರು 2 ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನವನ್ನು ಗ್ರಿಡ್ಗೆ ಸಾಗಿಸಲು ಸಾಧ್ಯವಾಗಲಿದೆ. ಬೀದರ್ ಸೌರಶಕ್ತಿ ವಲಯದ 1,370 ಕೋಟಿ ರೂ. ವೆಚ್ಚದ ಪ್ರಸರಣ ಯೋಜನೆಯಿಂದ 2.5 ಗಿಗಾವ್ಯಾಟ್ ಸೌರಶಕ್ತಿ ಸಾಗಣೆಗೆ ಅನುಕೂಲವಾಗಲಿದೆ.
ದಾವಣಗೆರೆ/ಚಿತ್ರದುರ್ಗ ಮತ್ತು ಬಳ್ಳಾರಿ ನವೀಕರಿಸಬಹುದಾದ ಇಂಧನ ವಲಯಗಳನ್ನು ಸಂಪರ್ಕಿಸುವ 3,450 ಕೋಟಿ ರೂ.ಗೂ ಅಧಿಕ ಮೊತ್ತದ ಪ್ರಸರಣ ಯೋಜನೆ ಹಾಗೂ ದಾವಣಗೆರೆ ಮತ್ತು ಬಳ್ಳಾರಿಯ ಹೆಚ್ಚುವರಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಂಯೋಜಿಸುವ 1,100 ಕೋಟಿ ರೂ.ಗೂ ಅಧಿಕ ವೆಚ್ಚದ ಪ್ರಸರಣ ವ್ಯವಸ್ಥೆ ಬಲವರ್ಧನೆ ಯೋಜನೆಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮಂಗಳೂರಿನ ಎಲ್ಪಿಜಿ ಘಟಕ ರಾಷ್ಟ್ರಕ್ಕೆ ಸಮರ್ಪಣೆ
ಮಂಗಳೂರಿನಲ್ಲಿ 850 ಕೋಟಿ ರೂ.ಗೂ ಅಧಿಕ ವೆಚ್ಚದಲ್ಲಿ ನಿರ್ಮಿಸಲಾಗಿರುವ 80,000 ಮೆಟ್ರಿಕ್ ಟನ್ ಸಾಮರ್ಥ್ಯದ ಭಾರತದ ಅತಿದೊಡ್ಡ ಭೂಗತ ಎಲ್ಪಿಜಿ ಸಂಗ್ರಹಣಾ ಘಟಕವನ್ನು ಮೋದಿ ರಾಷ್ಟ್ರಕ್ಕೆ ಸಮರ್ಪಿಸಲಿದ್ದಾರೆ. ಹೊಸ ಮಂಗಳೂರು ಬಂದರನ್ನು ಮುಖ್ಯ ಟರ್ಮಿನಲ್ಗೆ ಸಂಪರ್ಕಿಸುವ 9.4 ಕಿ.ಮೀ ಉದ್ದದ ಎಲ್ಪಿಜಿ ಪೈಪ್ಲೈನ್ ಕೂಡ ಯೋಜನೆಯ ಭಾಗವಾಗಿದೆ.
ಇದರ ಜೊತೆಗೆ ಬೆಂಗಳೂರಿನಲ್ಲಿ 330 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ಎಂಆರ್ಪಿಎಲ್ನ ದೇವನಗೊಂದಿ ಮಾರ್ಕೆಟಿಂಗ್ ಟರ್ಮಿನಲ್ನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ. ಬೆಂಗಳೂರಿನ ಹರಳಕುಂಟೆಯಲ್ಲಿ ಗೇಲ್ ಸ್ಥಾಪಿಸಲಿರುವ ಕಂಪ್ರೆಸ್ಡ್ ಬಯೋಗ್ಯಾಸ್ ಘಟಕಕ್ಕೂ ಶಂಕುಸ್ಥಾಪನೆ ನಡೆಯಲಿದೆ. ಈ ಘಟಕವು ಪ್ರತಿದಿನ 300 ಟನ್ ಪುರಸಭೆಯ ಘನತ್ಯಾಜ್ಯವನ್ನು ಸಂಸ್ಕರಿಸಿ ಸುಮಾರು 12.6 ಟನ್ ಕಂಪ್ರೆಸ್ಡ್ ಬಯೋಗ್ಯಾಸ್ ಉತ್ಪಾದಿಸುವ ಉದ್ದೇಶ ಹೊಂದಿದೆ.
ನಾಲ್ಕು ರೈಲು ನಿಲ್ದಾಣಗಳಿಗೂ ಹೊಸ ರೂಪ
‘ಅಮೃತ್ ಭಾರತ್ ನಿಲ್ದಾಣ ಯೋಜನೆ’ ಅಡಿಯಲ್ಲಿ ಮರು ಅಭಿವೃದ್ಧಿಪಡಿಸಿರುವ ಚಾಮರಾಜನಗರ, ಚಿಕ್ಕಮಗಳೂರು, ಸಕಲೇಶಪುರ ಮತ್ತು ಸುಬ್ರಹ್ಮಣ್ಯ ರಸ್ತೆ ರೈಲು ನಿಲ್ದಾಣಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.
284 ಕಿ.ಮೀ ಉದ್ದದ ಗದಗ–ಹೊಸಪೇಟೆ ರೈಲು ಮಾರ್ಗ ದ್ವಿಗುಣಗೊಳಿಸುವ ಯೋಜನೆಯ ಭಾಗವಾಗಿರುವ 45 ಕಿ.ಮೀ ಉದ್ದದ ಬಾಗಲಕೋಟೆ–ವಂದಾಲ ರೈಲು ಮಾರ್ಗವನ್ನು ರಾಷ್ಟ್ರಕ್ಕೆ ಸಮರ್ಪಿಸಲಾಗುತ್ತದೆ. ಈ ಮಾರ್ಗವು ಪ್ರಯಾಣಿಕರ ಹಾಗೂ ಸರಕು ಸಾಗಣೆಯನ್ನು ಸುಧಾರಿಸುವುದರ ಜೊತೆಗೆ ಕುಡ್ಗಿ ಎನ್ಟಿಪಿಸಿ ಘಟಕಕ್ಕೆ ಕಲ್ಲಿದ್ದಲು ಪೂರೈಕೆಗೆ ಸಹಕಾರಿಯಾಗಲಿದೆ.
ಸಕಲೇಶಪುರ–ಸುಬ್ರಹ್ಮಣ್ಯ ರಸ್ತೆ ಘಾಟ್ ವಿಭಾಗದ 55 ಕಿ.ಮೀ ರೈಲು ಮಾರ್ಗದ ವಿದ್ಯುದ್ದೀಕರಣವೂ ರಾಷ್ಟ್ರಕ್ಕೆ ಸಮರ್ಪಣೆಯಾಗಲಿದ್ದು, ಇದರೊಂದಿಗೆ ಬೆಂಗಳೂರು–ಮಂಗಳೂರು ರೈಲು ಮಾರ್ಗದ ಸಂಪೂರ್ಣ ವಿದ್ಯುದ್ದೀಕರಣ ಪೂರ್ಣಗೊಳ್ಳಲಿದೆ.
ವಂದೇ ಭಾರತ್ಗೆ ಚಾಲನೆ
ಕಾರ್ಯಕ್ರಮದ ಮತ್ತೊಂದು ಪ್ರಮುಖ ಘಟ್ಟವಾಗಿ ಬೆಂಗಳೂರು–ಮಂಗಳೂರು–ಮಡಗಾಂವ್ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ರೈಲು ಬೆಂಗಳೂರು, ಕರಾವಳಿ ಕರ್ನಾಟಕ ಮತ್ತು ಗೋವಾ ನಡುವಿನ ಸಂಪರ್ಕವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆಯಿದೆ. ಹಾಸನ, ಸಕಲೇಶಪುರ, ಮಂಗಳೂರು, ಉಡುಪಿ, ಮುರ್ಡೇಶ್ವರ, ಗೋಕರ್ಣ ಹಾಗೂ ಕಾರವಾರದಂತಹ ಪ್ರಮುಖ ಸ್ಥಳಗಳಿಗೆ ಸಂಪರ್ಕ ಕಲ್ಪಿಸಲಿದೆ.
ಮೈಸೂರಿನಲ್ಲಿ ಮಧ್ಯಾಹ್ನ ಸುಮಾರು 3.30ಕ್ಕೆ ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದ ಭಾಗವಾಗಿ ಭಾರತ ವನ್ನಲ್ಲಿ ಸಸಿ ನೆಡುವ ಕಾರ್ಯಕ್ರಮದಲ್ಲೂ ಪ್ರಧಾನಿ ಭಾಗವಹಿಸಲಿದ್ದಾರೆ. ಮಿಯಾವಾಕಿ ತಂತ್ರಜ್ಞಾನವನ್ನು ಬಳಸಿಕೊಂಡು ಸ್ಥಳೀಯ ಸಸ್ಯ ಪ್ರಭೇದಗಳಿಂದ ದಟ್ಟವಾದ ನಗರ ಅರಣ್ಯ ಬೆಳೆಸುವ ಉದ್ದೇಶವನ್ನು ಭಾರತ ವನ್ ಹೊಂದಿದೆ.
ಪ್ರಧಾನಿ ಮೋದಿ ಅವರ ಕರ್ನಾಟಕ ಪ್ರವಾಸದಲ್ಲಿ ಮೆಟ್ರೋ, ರೈಲ್ವೆ, ಇಂಧನ, ಪೆಟ್ರೋಲಿಯಂ, ತ್ಯಾಜ್ಯ ನಿರ್ವಹಣೆ ಹಾಗೂ ನಗರ ಮೂಲಸೌಕರ್ಯಕ್ಕೆ ಸಂಬಂಧಿಸಿದ ಹಲವು ಯೋಜನೆಗಳಿಗೆ ಚಾಲನೆ ದೊರೆಯಲಿದ್ದು, ರಾಜ್ಯದ ಸಾರಿಗೆ ಮತ್ತು ಇಂಧನ ಮೂಲಸೌಕರ್ಯಕ್ಕೆ ಇದು ಮಹತ್ವದ ಕಾರ್ಯಕ್ರಮವಾಗಲಿದೆ.

