ಬೆಂಗಳೂರು,ನ.12: ‘ನಮ್ಮ ಮೆಟ್ರೋ’ ಪಿಂಕ್ ಮಾರ್ಗಕ್ಕೆ ನ.13ಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದು, ಈ ಮೂಲಕ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದೆ ಎಂದು ಬೆಂಗಳೂರು ಅಭಿವೃದ್ದಿ ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ಬುಧವಾರ ವಿಕಾಸಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, “ನವೆಂಬರ್ 13 ರಂದು ಮಧ್ಯಾಹ್ನ 12.30ಕ್ಕೆ ಡೈರಿ ಸರ್ಕಲ್ ಬಳಿಯ ಅಗ್ನಿಶಾಮಕ ದಳದ ಆವರಣಕ್ಕೆ ಆಗಮಿಸಲಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಅವರು, ಅಲ್ಲೇ ಸಮೀಪವಿರುವ ತಾವರೆಕೆರೆ ಸುದ್ದುಗುಂಟೆಪಾಳ್ಯ ಮೆಟ್ರೋ ನಿಲ್ದಾಣದಲ್ಲಿ ಈ ಹೊಸ 7.5 ಕಿ.ಮೀ. ಮಾರ್ಗಕ್ಕೆ ಚಾಲನೆ ನೀಡಲಿದ್ದಾರೆ.
ರಾಜಧಾನಿ ಬೆಂಗಳೂರಿನ ಸಾರಿಗೆ ವ್ಯವಸ್ಥೆಗೆ ಮತ್ತೊಂದು ಮೈಲುಗಲ್ಲಾಗಲಿರುವ ‘ನಮ್ಮ ಮೆಟ್ರೋ’ ಪಿಂಕ್ 7.5 ಕಿಲೋಮೀಟರ್ಗಳ ಎತ್ತರಿಸಿದ ಮಾರ್ಗಕ್ಕೆ ಪ್ರಧಾನಿ ಚಾಲನೆ ನೀಡುತ್ತಾರೆ. ಬಳಿಕ ಐಐಎಂಬಿ ಸಭಾಂಗಣದಲ್ಲಿ ಸಭಾ ಕಾರ್ಯಕ್ರಮ ನಡೆಯುತ್ತದೆ. ಕಾಳೇನ ಅಗ್ರಹಾರದಿಂದ – ತಾವರೆಕೆರೆ (ಸುದ್ದುಗುಂಟೆಪಾಳ್ಯ) ನಿಲ್ದಾಣದವರೆಗಿನ ಈ ಹೊಸ ಮಾರ್ಗವು ನವೆಂಬರ್ 14 ರ ಬೆಳಿಗ್ಗೆ 6 ರಿಂದ ಸಾರ್ವಜನಿಕ ಸೇವೆಗೆ ಲಭ್ಯವಾಗಲಿದೆ ಎಂದು ಮಾಹಿತಿ ನೀಡಿದರು.
ಪಿಂಕ್ ಲೈನ್ ನ ಈ ಆರಂಭಿಕ ಭಾಗವು ಬನ್ನೇರುಘಟ್ಟ ರಸ್ತೆಯ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗಲಿದೆ. ವಿಶೇಷವಾಗಿ, ಜಯದೇವ ಮೆಟ್ರೋ ನಿಲ್ದಾಣದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮತ್ತು ಸಿಟಿ ಮಾರ್ಗಗಳಿಗೆ ಇಂಟರ್ಚೇಂಜ್ (ಸಂಪರ್ಕ) ಸೌಲಭ್ಯವಿರುವುದರಿಂದ, ಈ ಭಾಗದ ನಾಗರಿಕರು ಸಿಲ್ಕ್ ಬೋರ್ಡ್, ಹೆಚ್ಎಸ್ಆರ್ ಲೇಔಟ್, ಜಯನಗರ, ಮಜೆಸ್ಟಿಕ್ ಹಾಗೂ ವೈಟ್ಫೀಲ್ಡ್ ಸೇರಿದಂತೆ ನಗರದ ಯಾವುದೇ ಭಾಗಕ್ಕೆ ಸುಲಭವಾಗಿ ಪ್ರಯಾಣಿಸಬಹುದು.
ಆರಂಭಿಕ ಹಂತದಲ್ಲಿ ಈ ಮಾರ್ಗದಲ್ಲಿ 5 ಮೀಸಲು ರೈಲುಗಳು ಕಾರ್ಯನಿರ್ವಹಿಸಲಿದ್ದು, ಪ್ರತಿ 8 ನಿಮಿಷಕ್ಕೊಂದು ರೈಲು ಸಂಚರಿಸಲಿದೆ. ಮುಂಬರುವ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಮತ್ತು ಸಿಗ್ನಲಿಂಗ್ ವ್ಯವಸ್ಥೆಯ ಸ್ಥಿರತೆಯನ್ನು ಗಮನಿಸಿ ಈ ಕಾಲಾವಧಿಯನ್ನು ಮತ್ತಷ್ಟು ಕಡಿಮೆ ಮಾಡುವ ಯೋಜನೆಯಿದೆ. ಈ 7.5 ಕಿ.ಮೀ ಮಾರ್ಗ ಸೇರ್ಪಡೆಯೊಂದಿಗೆ ಬೆಂಗಳೂರಿನ ಒಟ್ಟು ಮೆಟ್ರೋ ಜಾಲವು 103 ಕಿ.ಮೀ. ತಲುಪಲಿದ್ದು, ನಗರವು 100 ಕಿ.ಮೀ. ಗಡಿ ದಾಟಿದ ಐತಿಹಾಸಿಕ ಸಾಧನೆಗೆ ಪಾತ್ರವಾಗಿದೆ. ಅಲ್ಲದೆ, ಭವಿಷ್ಯದಲ್ಲಿ 400 ರಿಂದ 500 ಕಿಮೀ ಮೆಟ್ರೋ ಜಾಲ ಹೊಂದಬೇಕೆಂಬ ದೂರದೃಷ್ಟಿಗೂ ಇದೊಂದು ಮೈಲುಗಲ್ಲು ಎಂದರು.
ನಗರದಲ್ಲಿ ಮುಂದಿನ ಒಂದೂವರೆ ವರ್ಷದ ಅವಧಿಯಲ್ಲಿ ಮೆಟ್ರೋ ಜಾಲವನ್ನು 170 ಕಿ.ಮೀ.ಗೆ ವಿಸ್ತರಿಸುವ ಸ್ಪಷ್ಟ ಗುರಿಯನ್ನು ಸರ್ಕಾರ ಹೊಂದಿದೆ ಎಂದು ಸಚಿವರು ಇದೇ ವೇಳೆ ತಿಳಿಸಿದರು.
ಕೇಂದ್ರದ ಪಾಲು ಹೆಚ್ಚಿಸಲಿ:
ಬೆಂಗಳೂರು ಮೆಟ್ರೋ ಯೋಜನೆಯ ಒಟ್ಟು ವೆಚ್ಚ ಹಂಚಿಕೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ನಡುವೆ ಇರುವ ಭಾರಿ ವ್ಯತ್ಯಾಸ ಇದೆ. ಮೆಟ್ರೋ-1 ನೇ ಹಂತದಿಂದ 3ನೇ ಹಂತದವರೆಗಿನ ಒಟ್ಟು 77,891 ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ಸರ್ಕಾರವೇ 65,291 ಕೋಟಿ ರೂ. (ಶೇ. 84) ಭರಿಸುತ್ತಿದ್ದು, ಕೇಂದ್ರ ಸರ್ಕಾರದ ಪಾಲು ಕೇವಲ 12,600 ಕೋಟಿ ರೂ. (ಶೇ. 16) ಆಗಿದೆ. ಮೆಟ್ರೋ ಮೊದಲ ಹಂತದಲ್ಲಿ ಶೇ. 80 ರಷ್ಟಿದ್ದ ಕೇಂದ್ರದ ಬಂಡವಾಳ ಹೂಡಿಕೆ, ಎರಡನೇ ಹಂತದಲ್ಲಿ ಕ್ರಮೇಣ ಶೇ. 16 ಕ್ಕೆ ಮತ್ತು ಪ್ರಸ್ತುತ ಶೇ. 14 ಕ್ಕೆ ಕುಸಿದಿದೆ ಎಂದು ತಿಳಿಸಿದರು.
ಅಂತರರಾಷ್ಟ್ರೀಯ ಸಂಸ್ಥೆಗಳಿಂದ ಪಡೆಯುವ ಸಾಲವನ್ನು ಕೇಂದ್ರದ ಮೂಲಕ ಪಡೆಯಲಾಗುತ್ತಿದ್ದರೂ, ರೂಪಾಯಿ ಮೌಲ್ಯ ಕುಸಿತದ ಹೆಚ್ಚುವರಿ ಹೊರೆ ಹಾಗೂ ಸಾಲದ ಪ್ರತಿಯೊಂದು ಪೈಸೆಯನ್ನು ರಾಜ್ಯ ಸರ್ಕಾರವೇ ಮರುಪಾವತಿಸುತ್ತಿದೆ. ಜೊತೆಗೆ ಭೂಸ್ವಾಧೀನದ ಶೇಕಡಾ 100 ರಷ್ಟು ವೆಚ್ಚ ಹಾಗೂ ಯೋಜನೆಯ ಅನುಮೋದನೆ ವಿಳಂಬದಿಂದ ಹೆಚ್ಚಾಗುವ ನಿರ್ಮಾಣ ವೆಚ್ಚವನ್ನು ರಾಜ್ಯವೇ ಭರಿಸಬೇಕಾಗಿದೆ.
ಮೆಟ್ರೋದ 1046 ಕೋಟಿ ರೂ. ನಷ್ಟವನ್ನು ಈಗಾಗಲೇ ರಾಜ್ಯವೇ ಸರಿದೂಗಿಸಿದೆ. ಇನ್ನೂ 52 ಕೋಟಿ ರೂ ನಷ್ಟ ಸಾಲ ಭರಿಸಿಕೊಡುವುದು ಬಾಕಿ ಇದ್ದು, ಮೆಟ್ರೋ ಆಡಳಿತ ಕೇಳಿದ ಕೂಡಲೇ ರಾಜ್ಯ ಸರ್ಕಾರ ಅದನ್ನೂ ಭರಿಸಲಿದೆ. ಈ ಎಲ್ಲಾ ಕಾರಣದಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರ ಮೆಟ್ರೋ ಹೂಡಿಕೆಯಲ್ಲಿ ಸಮಪಾಲು (ಫಿಫ್ಟಿ ಫಿಫ್ಟಿ) ಎಂದರೂ ಸಹ ವಾಸ್ತವವಾಗಿ ಶೇ.84 ರಷ್ಟು ರಾಜ್ಯ ಸರ್ಕಾರ ಭರಿಸುತ್ತಿದೆ, ಶೇ.16ರಷ್ಟು ಮಾತ್ರ ಕೇಂದ್ರ ಸರ್ಕಾರ ಭರಿಸುತ್ತಿದೆ ಎಂದು ಮಾಹಿತಿ ನೀಡಿದರು.

