ಸರ್ಕಾರಿ ಶಾಲೆಗಳು ಸರ್ಕಾರದ ಜವಾಬ್ದಾರಿ; ಅವು ಇಂದಿನ ಮತ್ತು ಭವಿಷ್ಯದ ಬಡ ಮಕ್ಕಳ ಹಕ್ಕು. ಅವುಗಳನ್ನು ಮುಚ್ಚದೆ, ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸದೆ, ಉಳಿಸಿ, ಬೆಳೆಸಿ, ಆಧುನಿಕ ಶಿಕ್ಷಣದ ಮಾದರಿ ಸಂಸ್ಥೆಗಳನ್ನಾಗಿ ರೂಪಿಸುವುದೇ ನಿಜವಾದ ಶಿಕ್ಷಣ ಅಭಿವೃದ್ಧಿ- ಚಂದ್ರಶೇಖರ ಶೆಟ್ಟಿ, ರಾಜಕೀಯ ವಿಶ್ಲೇಷಕರು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕಾರಣಕ್ಕೆ ಸರ್ಕಾರಿ ಶಾಲೆಗಳನ್ನು ಮುಚ್ಚುವ ಮತ್ತು ವಿಲೀನಗೊಳಿಸುವ ಬೆಳವಣಿಗೆಗಳ ನಡುವೆಯೇ, ಇದೀಗ ಅವುಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸುವ ಪ್ರಸ್ತಾವನೆ ಮತ್ತೊಂದು ಆತಂಕಕಾರಿ ಬೆಳವಣಿಗೆಯಾಗಿದೆ. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮದಡಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಕಾರ್ಪೊರೇಟ್ ಕಂಪನಿಗಳ ಸಹಕಾರ ಪಡೆಯುವ ಯೋಜನೆಯನ್ನು ಪ್ರಕಟಿಸಿದ್ದಾರೆ. ಮೊದಲ ಹಂತದಲ್ಲಿ 1,000 ಶಾಲೆಗಳನ್ನು ಖಾಸಗಿ ಸಂಸ್ಥೆಗಳೊಂದಿಗೆ ಜೋಡಿಸುವುದು ಮತ್ತು ಮುಂದೆ 2,000 ಶಾಲೆಗಳಿಗೆ ವಿಸ್ತರಿಸುವುದು ಇದರ ಉದ್ದೇಶವಾಗಿದೆ.
ಖಾಸಗಿ ಸಂಸ್ಥೆಗಳು ಸರ್ಕಾರಿ ಶಾಲೆಗಳಿಗೆ ಕಂಪ್ಯೂಟರ್, ಪ್ರಯೋಗಾಲಯ, ಗ್ರಂಥಾಲಯ ಮತ್ತು ಇತರ ಮೂಲಸೌಕರ್ಯಗಳನ್ನು ಒದಗಿಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಈಗಾಗಲೇ ವಿದ್ಯಾರ್ಥಿಗಳ ಕೊರತೆಯಿಂದ ಮುಚ್ಚುವ ಅಥವಾ ವಿಲೀನಗೊಳ್ಳುವ ಅಪಾಯ ಎದುರಿಸುತ್ತಿರುವ ಶಾಲೆಗಳನ್ನು ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸುವುದು ಸಾರ್ವಜನಿಕ ಶಿಕ್ಷಣದ ಭವಿಷ್ಯಕ್ಕೆ ಮತ್ತೊಂದು ಸಮಸ್ಯೆಯಾಗಬಹುದು. ಅಭಿವೃದ್ಧಿಗೆ ಖಾಸಗಿ ಸಂಸ್ಥೆಗಳ ನೆರವು ಪಡೆಯುವುದು ಬೇರೆ; ಸರ್ಕಾರಿ ಶಾಲೆಗಳ ಆಡಳಿತ ಮತ್ತು ಜವಾಬ್ದಾರಿಯನ್ನು ಅವುಗಳಿಗೆ ಒಪ್ಪಿಸುವುದು ಬೇರೆ. ಈ ವ್ಯತ್ಯಾಸವನ್ನು ಸರ್ಕಾರ ಸ್ಪಷ್ಟಪಡಿಸಬೇಕು.
ಸ್ವಾತಂತ್ರ್ಯಾನಂತರ ಭಾರತದಲ್ಲಿ ಸಾರ್ವಜನಿಕ ಶಿಕ್ಷಣದ ವಿಸ್ತರಣೆ ಸಾಮಾಜಿಕ ಪರಿವರ್ತನೆಯ ಪ್ರಮುಖ ಭಾಗವಾಗಿತ್ತು. ಶಿಕ್ಷಣದಿಂದ ಶತಮಾನಗಳಿಂದ ವಂಚಿತರಾಗಿದ್ದ ಬಡವರು, ದಲಿತರು, ಆದಿವಾಸಿಗಳು, ಹಿಂದುಳಿದವರು ಮತ್ತು ಮಹಿಳೆಯರಿಗೆ ವಿದ್ಯೆಯ ಅವಕಾಶ ಕಲ್ಪಿಸುವುದು ಪ್ರಜಾಪ್ರಭುತ್ವದ ಪ್ರಮುಖ ಆಶಯವಾಗಿತ್ತು. ಸ್ವಾತಂತ್ರ್ಯಾನಂತರದ ವಿವಿಧ ಹಂತಗಳಲ್ಲಿ ಕಾಂಗ್ರೆಸ್ ನೇತೃತ್ವದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈ ಉದ್ದೇಶಕ್ಕೆ ಹಲವು ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಜಾರಿಗೊಳಿಸಿ ವಿಸ್ತರಿಸಿದವು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಮಕ್ಕಳಿಗೆ ವಿದ್ಯಾರ್ಥಿವೇತನ, ಉಚಿತ ಪಠ್ಯಪುಸ್ತಕ, ಸಮವಸ್ತ್ರ, ವಸತಿ ನಿಲಯ ಮತ್ತು ಶುಲ್ಕ ವಿನಾಯಿತಿಯಂತಹ ಸೌಲಭ್ಯಗಳನ್ನು ಒದಗಿಸಲಾಯಿತು. ಪ್ರಾಥಮಿಕ ಶಿಕ್ಷಣದ ವಿಸ್ತರಣೆ, ಹೆಣ್ಣುಮಕ್ಕಳ ಶಿಕ್ಷಣ ಮತ್ತು ಬಡ ಮಕ್ಕಳ ಶಾಲಾ ದಾಖಲಾತಿ ಹೆಚ್ಚಳಕ್ಕೂ ಆದ್ಯತೆ ನೀಡಲಾಯಿತು.

1968 ಮತ್ತು 1986ರ ರಾಷ್ಟ್ರೀಯ ಶಿಕ್ಷಣ ನೀತಿಗಳು, ಸರ್ವಶಿಕ್ಷಣ ಅಭಿಯಾನ, ಮಧ್ಯಾಹ್ನದ ಬಿಸಿಯೂಟ ಯೋಜನೆಯ ವಿಸ್ತರಣೆ ಹಾಗೂ ಶಿಕ್ಷಣದ ಹಕ್ಕು ಕಾಯ್ದೆ ಈ ಪ್ರಯತ್ನಗಳ ಪ್ರಮುಖ ಘಟ್ಟಗಳಾಗಿವೆ. ವಿಶೇಷವಾಗಿ 2009ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಂಡು, 6ರಿಂದ 14 ವರ್ಷದ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣದ ಹಕ್ಕನ್ನು ಕಾನೂನುಬದ್ಧ ಗೊಳಿಸಲಾಯಿತು. 2002ರ 86ನೇ ಸಂವಿಧಾನ ತಿದ್ದುಪಡಿಯ ಮೂಲಕ ಸಂವಿಧಾನದ 21Aನೇ ವಿಧಿಯಲ್ಲಿ ಈ ಹಕ್ಕಿಗೆ ಅವಕಾಶ ಕಲ್ಪಿಸಲಾಗಿತ್ತು. ಶಿಕ್ಷಣವನ್ನು ಶ್ರೀಮಂತರ ಸವಲತ್ತಿನಿಂದ ಹೊರತಂದು ಪ್ರತಿಯೊಂದು ಮಗುವಿನ ಹಕ್ಕನ್ನಾಗಿಸುವುದು ಈ ಪ್ರಯತ್ನಗಳ ಹಿಂದಿನ ಆಶಯವಾಗಿತ್ತು.
ಸರ್ಕಾರಿ ಶಾಲೆಗಳು ಕೇವಲ ಇಂದಿನ ಬಡ ಮಕ್ಕಳಿಗಾಗಿ ಇರುವ ಸಂಸ್ಥೆಗಳಲ್ಲ. ಭವಿಷ್ಯದಲ್ಲಿ ಬಡ ಕುಟುಂಬಗಳಲ್ಲಿ ಹುಟ್ಟಬಹುದಾದ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಪಡೆಯಲು ಅವಕಾಶ ಕಲ್ಪಿಸಬೇಕಾದ ಸಾರ್ವಜನಿಕ ಆಸ್ತಿಗಳು. ಇಂದು ಆರ್ಥಿಕವಾಗಿ ಸದೃಢವಾಗಿರುವ ಕುಟುಂಬವೂ ಮುಂದಿನ ಪೀಳಿಗೆಯಲ್ಲಿ ಬಡತನಕ್ಕೆ ಸಿಲುಕಬಹುದು. ಆದ್ದರಿಂದ ಸರ್ಕಾರಿ ಶಾಲೆಗಳ ಅಗತ್ಯವನ್ನು ಪ್ರಸ್ತುತ ವಿದ್ಯಾರ್ಥಿಗಳ ಸಂಖ್ಯೆಯಿಂದ ಮಾತ್ರ ಅಳೆಯಲಾಗದು. ಅವುಗಳ ಸಾಮಾಜಿಕ ಮಹತ್ವ ಮತ್ತು ಭವಿಷ್ಯದ ಅಗತ್ಯವನ್ನೂ ಪರಿಗಣಿಸಬೇಕು.
ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಲು ಕಾರಣವೇನು ಎಂಬುದನ್ನು ಸರ್ಕಾರ ಮೊದಲು ಪರಿಶೀಲಿಸಬೇಕು. ಶಿಕ್ಷಕರ ಕೊರತೆ, ಮೂಲಸೌಕರ್ಯಗಳ ಅಭಾವ, ಬೋಧನೆಯ ಗುಣಮಟ್ಟ ಮತ್ತು ಆಡಳಿತಾತ್ಮಕ ನಿರ್ಲಕ್ಷ್ಯದಿಂದ ಪೋಷಕರು ಖಾಸಗಿ ಶಾಲೆಗಳತ್ತ ಆಕರ್ಷಿತರಾಗುತ್ತಿದ್ದಾರೆಯೇ ಎಂಬುದನ್ನು ಗುರುತಿಸಬೇಕು. ಸಮಸ್ಯೆಗಳನ್ನು ಸರಿಪಡಿಸುವ ಬದಲು ಶಾಲೆಗಳನ್ನು ಮುಚ್ಚುವುದು ಪರಿಹಾರವಲ್ಲ. ಸರ್ಕಾರಿ ಶಾಲೆಗಳ ಮೇಲಿನ ಪೋಷಕರ ವಿಶ್ವಾಸವನ್ನು ಮರಳಿ ಗಳಿಸುವಂತಹ ಸುಧಾರಣೆಗಳನ್ನು ಕೈಗೊಳ್ಳಬೇಕು.
ಖಾಸಗಿ ಸಂಸ್ಥೆಗಳ ನೆರವು ಪಡೆಯುವುದಾದರೆ ಅದು ಸರ್ಕಾರದ ಜವಾಬ್ದಾರಿಗೆ ಪೂರಕವಾಗಿರಬೇಕು. ಶಾಲೆಗಳ ಆಡಳಿತ, ಶಿಕ್ಷಕರ ನೇಮಕಾತಿ, ಪಠ್ಯಕ್ರಮ ಮತ್ತು ಶೈಕ್ಷಣಿಕ ಸ್ವಾಯತ್ತತೆ ಸರ್ಕಾರದ ನಿಯಂತ್ರಣದಲ್ಲಿಯೇ ಉಳಿಯಬೇಕು. ಖಾಸಗಿ ಸಂಸ್ಥೆಗಳು ತಮ್ಮ ಆದ್ಯತೆ ಬದಲಿಸಿ ನೆರವನ್ನು ಹಿಂಪಡೆದರೆ ಶಾಲೆಗಳ ಗತಿಯೇನು? ಖಾಸಗಿ ನೆರವು ದೊರೆಯದ ಗ್ರಾಮೀಣ ಶಾಲೆಗಳ ಮಕ್ಕಳಿಗೆ ಸಮಾನ ಸೌಲಭ್ಯವನ್ನು ಯಾರು ಒದಗಿಸುತ್ತಾರೆ? ಇಂತಹ ಪ್ರಶ್ನೆಗಳಿಗೆ ಸರ್ಕಾರ ಸ್ಪಷ್ಟ ಉತ್ತರ ನೀಡಬೇಕು. ಶಿಕ್ಷಣದ ಗುಣಮಟ್ಟವು ಯಾವ ಕಂಪನಿ ಯಾವ ಶಾಲೆಯನ್ನು ದತ್ತು ಪಡೆಯುತ್ತದೆ ಎಂಬುದರ ಮೇಲೆ ನಿರ್ಧಾರವಾಗಬಾರದು.
ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರ್ಕಾರವೇ ಸಮರ್ಪಕ ಬಜೆಟ್ ಮೀಸಲಿಡಬೇಕು. ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಭರ್ತಿ ಮಾಡಬೇಕು. ಸುಸಜ್ಜಿತ ತರಗತಿಗಳು, ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಕಂಪ್ಯೂಟರ್, ಇಂಟರ್ನೆಟ್ ಮತ್ತು ಕ್ರೀಡಾ ಸೌಲಭ್ಯಗಳನ್ನು ಒದಗಿಸಬೇಕು. ವಿಜ್ಞಾನ, ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯ ಯುಗಕ್ಕೆ ಅನುಗುಣವಾಗಿ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡಬೇಕು. ಅವರಲ್ಲಿ ವೈಜ್ಞಾನಿಕ ದೃಷ್ಟಿಕೋನ, ಪ್ರಶ್ನಿಸುವ ಮನೋಭಾವ, ಸೃಜನಶೀಲತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕು. ಶಾಲೆಗಳ ವಿಲೀನದ ನಿರ್ಧಾರ ಕೈಗೊಳ್ಳುವಾಗ ಮಕ್ಕಳ ಶಿಕ್ಷಣದ ಹಕ್ಕು, ಶಾಲೆಯ ದೂರ ಮತ್ತು ಸ್ಥಳೀಯ ಅಗತ್ಯಗಳನ್ನು ಸಮಗ್ರವಾಗಿ ಪರಿಶೀಲಿಸಬೇಕು.
ಒಂದು ಸಮಾಜದ ಪ್ರಗತಿಯನ್ನು ಶ್ರೀಮಂತ ಮಕ್ಕಳಿಗೆ ದೊರೆಯುವ ಶಿಕ್ಷಣದಿಂದ ಅಳೆಯಲಾಗದು; ಬಡವರ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಪಡೆಯಲು ಸಮಾನ ಅವಕಾಶವಿದೆಯೇ ಎಂಬುದೇ ನಿಜವಾದ ಮಾನದಂಡ. ಸರ್ಕಾರಿ ಶಾಲೆಗಳನ್ನು ಉಳಿಸುವುದು ಎಂದರೆ ಕೇವಲ ಈಗಿನ ವಿದ್ಯಾರ್ಥಿಗಳ ಶಿಕ್ಷಣವನ್ನು ರಕ್ಷಿಸುವುದಲ್ಲ; ಮುಂದಿನ ಪೀಳಿಗೆಯ ಬಡ ಮಕ್ಕಳಿಗೂ ಶಿಕ್ಷಣದ ಬಾಗಿಲು ತೆರೆದಿಡುವುದಾಗಿದೆ.
ಯಾವುದೇ ಪಕ್ಷದ ಸರ್ಕಾರವಿರಲಿ, ಬಡವರ ಮಕ್ಕಳಿಗೆ ಸಿಗಬೇಕಾದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಅಥವಾ ಅವುಗಳ ಸಾರ್ವಜನಿಕ ಜವಾಬ್ದಾರಿಯನ್ನು ಖಾಸಗಿ ಸಂಸ್ಥೆಗಳಿಗೆ ಪರಭಾರೆ ಮಾಡುವ ಮೂಲಕ ಅವರ ಭವಿಷ್ಯದ ಶಿಕ್ಷಣದ ಅವಕಾಶವನ್ನು ಕಸಿದುಕೊಳ್ಳಬಾರದು.
ಸರ್ಕಾರಿ ಶಾಲೆಗಳು ಸರ್ಕಾರದ ಜವಾಬ್ದಾರಿ; ಅವು ಇಂದಿನ ಮತ್ತು ಭವಿಷ್ಯದ ಬಡ ಮಕ್ಕಳ ಹಕ್ಕು. ಅವುಗಳನ್ನು ಮುಚ್ಚದೆ, ಖಾಸಗಿ ಸಂಸ್ಥೆಗಳ ಸುಪರ್ದಿಗೆ ಒಪ್ಪಿಸದೆ, ಉಳಿಸಿ, ಬೆಳೆಸಿ, ಆಧುನಿಕ ಶಿಕ್ಷಣದ ಮಾದರಿ ಸಂಸ್ಥೆಗಳನ್ನಾಗಿ ರೂಪಿಸುವುದೇ ನಿಜವಾದ ಶಿಕ್ಷಣ ಅಭಿವೃದ್ಧಿ.
ಚಂದ್ರಶೇಖರ ಶೆಟ್ಟಿ
ಇವರು ಬರಹಗಾರರು, ರಾಜಕೀಯ ವಿಶ್ಲೇಷಕರು ಮತ್ತು ವ್ಯಂಗ್ಯಚಿತ್ರಕಾರರು.
ಇದನ್ನೂ ಓದಿ- ಅಮೆರಿಕದ ಜನರ ತೀರ್ಪು – ಭಾರತಕ್ಕೂ ಒಂದು ಪಾಠ!


