ವಿದೇಶಗಳಲ್ಲಿಯೂ ಟ್ರಂಪ್ ಆಡಳಿತದ ಬಗ್ಗೆ ಟೀಕೆಗಳು ಮತ್ತು ವಿಶ್ವಾಸದ ಕೊರತೆ ಕಂಡುಬಂದಿದೆ. ಭಾರತದ ವಿಚಾರದಲ್ಲಿಯೂ ಜಾಗತಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ದೇಶಕ್ಕೆ ಇಂದು ಕೇವಲ ಭಾಷಣ ಮಾಡುವ ಪ್ರಧಾನಿಯಲ್ಲ, ಪತ್ರಿಕಾಗೋಷ್ಠಿಗಳನ್ನು ಎದುರಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವ ಮತ್ತು ಜನರಿಗೆ ಉತ್ತರದಾಯಿಯಾಗಿರುವ ನಾಯಕತ್ವದ ಅಗತ್ಯವಿದೆ – ಸುನಿಲ್ ಕುಮಾರ್ ಎಸ್, ಪಬ್ಲಿಕ್ ಹೆಲ್ತ್ ಇಂಜಿನಿಯರ್
2026ರ ನವೆಂಬರ್ 3ರಂದು ನಡೆದ ಅಮೆರಿಕದ ಮಧ್ಯಂತರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷ ದೊಡ್ಡ ಗೆಲುವು ಸಾಧಿಸಿ, ಸೆನೆಟ್ ಮತ್ತು ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಎರಡರಲ್ಲೂ ನಿಯಂತ್ರಣ ಪಡೆದಿದೆ. ಇದು ಡೊನಾಲ್ಡ್ ಟ್ರಂಪ್ ಅವರ ಎರಡನೇ ಅವಧಿಯ ಆಡಳಿತದ ವಿರುದ್ಧ ಅಮೆರಿಕದ ಮತದಾರರು ನೀಡಿದ ರಾಜಕೀಯ ಪ್ರತಿಕ್ರಿಯೆಯಾಗಿದೆ.
ಬೆಲೆ ಏರಿಕೆ, ಜೀವನ ವೆಚ್ಚ, ಆರ್ಥಿಕ ಸಂಕಷ್ಟ ಹಾಗೂ ದೇಶದ ವಿದೇಶಾಂಗ ನೀತಿಗಳ ಬಗ್ಗೆ ಜನರಲ್ಲಿ ಉಂಟಾದ ಅಸಮಾಧಾನ ಈ ಫಲಿತಾಂಶಕ್ಕೆ ಪ್ರಮುಖ ಕಾರಣಗಳಾಗಿವೆ. ವಿಶೇಷವಾಗಿ ಇಸ್ರೇಲ್, ಇರಾನ್ ಮತ್ತು ಪ್ಯಾಲೆಸ್ತೀನ್ ಸಂಘರ್ಷಗಳ ವಿಚಾರದಲ್ಲಿ ಟ್ರಂಪ್ ಆಡಳಿತ ತೆಗೆದುಕೊಂಡ ನಿರ್ಧಾರಗಳು ಹಾಗೂ ಅವುಗಳಿಂದ ಉಂಟಾದ ಆರ್ಥಿಕ ಪರಿಣಾಮಗಳು ಜನರ ತೀರ್ಪಿನ ಮೇಲೆ ಪ್ರಭಾವ ಬೀರಿವೆ.
ವಾಸ್ತವವಾಗಿ, ಟ್ರಂಪ್ ಅವರ ರಿಪಬ್ಲಿಕನ್ ಪಕ್ಷ ಜನರಿಗೆ ನೀಡಿದ್ದ ಭರವಸೆಗಳನ್ನು ಈಡೇರಿಸಿ, ಜನಸಾಮಾನ್ಯರ ಪರವಾಗಿ ಆಡಳಿತ ನಡೆಸಿದ್ದರೆ ಮತ್ತೊಮ್ಮೆ ಅಧಿಕಾರಕ್ಕೆ ಬರುವ ಅವಕಾಶವಿತ್ತು. ಈಗ ಗೆದ್ದಿರುವ ಡೆಮಾಕ್ರಟಿಕ್ ಪಕ್ಷವೂ ಶ್ರೀಮಂತ ಉದ್ಯಮಿಗಳ ಪರವಾದ ಆರ್ಥಿಕ ನೀತಿಗಳಿಂದ ಸಂಪೂರ್ಣವಾಗಿ ಹೊರತಾಗಿಲ್ಲ. ಆದರೂ ಜನರು ಬದಲಾವಣೆಗೆ ಅವಕಾಶ ನೀಡಿದ್ದಾರೆ.

ಈಗ ಡೆಮಾಕ್ರಟಿಕ್ ಪಕ್ಷಕ್ಕೆ ಜನರ ವಿಶ್ವಾಸ ಉಳಿಸಿಕೊಳ್ಳುವ ಜವಾಬ್ದಾರಿ ಇದೆ. ಉದ್ಯಮಿಗಳಿಗಿಂತ ಜನಸಾಮಾನ್ಯರ ಹಿತಾಸಕ್ತಿಗೆ ಆದ್ಯತೆ ನೀಡಿ, ಆರೋಗ್ಯ, ವಸತಿ, ಉದ್ಯೋಗ ಮತ್ತು ಆರ್ಥಿಕ ವಿಚಾರಗಳಲ್ಲಿ ಉತ್ತಮ ನೀತಿಗಳನ್ನು ರೂಪಿಸಬೇಕು. ಇತರ ದೇಶಗಳೊಂದಿಗೆ ಸ್ನೇಹಪರ ಹಾಗೂ ವಿಶ್ವಾಸಾರ್ಹ ಸಂಬಂಧಗಳನ್ನು ಬೆಳೆಸಬೇಕು. ಇಲ್ಲವಾದರೆ ಮುಂದಿನ ಚುನಾವಣೆಯಲ್ಲಿ ಅವರನ್ನೂ ಜನರು ತಿರಸ್ಕರಿಸಬಹುದು.
ಇಲ್ಲಿ ಗಮನಿಸಬೇಕಾದ ಪ್ರಮುಖ ಅಂಶವೆಂದರೆ ಅಮೆರಿಕದ ಚುನಾವಣಾ ವ್ಯವಸ್ಥೆಯಲ್ಲಿ ಜನರು ತಮ್ಮ ಆಡಳಿತಗಾರರಿಗೆ ತಕ್ಕ ಸಮಯದಲ್ಲಿ ಪಾಠ ಕಲಿಸುವ ಅವಕಾಶ ಹೊಂದಿದ್ದಾರೆ.
ಇದೇ ಪರಿಸ್ಥಿತಿಯನ್ನು ಭಾರತದೊಂದಿಗೆ ಹೋಲಿಸಿ ನೋಡಿದರೆ, ಕಳೆದ 12 ವರ್ಷಗಳ ಮೋದಿ ಆಡಳಿತದಲ್ಲಿ ಬೆಲೆ ಏರಿಕೆ, ನಿರುದ್ಯೋಗ, ಸಣ್ಣ ಕೈಗಾರಿಕೆಗಳ ಸಂಕಷ್ಟ ಮತ್ತು ಖಾಸಗೀಕರಣದ ಹೆಚ್ಚಳದಿಂದ ಸಾಮಾನ್ಯ ಜನರು ತೊಂದರೆ ಅನುಭವಿಸಿದ್ದಾರೆ. ಕೆಲವೇ ಉದ್ಯಮಿಗಳಿಗೆ ಹೆಚ್ಚಿನ ಅನುಕೂಲವಾಗುತ್ತಿದೆ ಎಂಬ ಟೀಕೆಗಳೂ ಇವೆ. ಇದರ ಜೊತೆಗೆ ಮಾಧ್ಯಮ ಸ್ವಾತಂತ್ರ್ಯ, ತನಿಖಾ ಸಂಸ್ಥೆಗಳ ಸ್ವಾಯತ್ತತೆ, ನ್ಯಾಯಾಂಗದ ಮೇಲಿನ ಪ್ರಭಾವ ಮತ್ತು ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆಯ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. SIR ಪ್ರಕ್ರಿಯೆಯಿಂದ ಕೋಟ್ಯಂತರ ಮತದಾರರು ಮತದಾರರ ಪಟ್ಟಿಯಿಂದ ಹೊರಗುಳಿಯುವ ಆತಂಕವೂ ವ್ಯಕ್ತವಾಗಿದೆ.
ಅಮೆರಿಕದ ಜನರು ತಮ್ಮ ರಾಜಕೀಯ ತೀರ್ಮಾನಗಳನ್ನು ಬದಲಾಯಿಸುವ ಮೂಲಕ ಆಡಳಿತಕ್ಕೆ ಪಾಠ ಕಲಿಸುತ್ತಿದ್ದಾರೆ. ಅದೇ ರೀತಿ ಭಾರತದ ಜನರೂ 2029ರ ಚುನಾವಣೆಯಲ್ಲಿ ತಮ್ಮ ತೀರ್ಪು ನೀಡುವ ಅವಕಾಶ ಹೊಂದಿದ್ದಾರೆ. ಮೋದಿ ಸರ್ಕಾರ ನೀಡಿದ ಭರವಸೆಗಳು ಕೇವಲ ಭರವಸೆಗಳಾಗಿಯೇ ಉಳಿದಿವೆ ಎಂಬ ಅಸಮಾಧಾನ ಜನರಲ್ಲಿ ಮುಂದುವರಿದರೆ, ಅಧಿಕಾರ ಬದಲಾವಣೆಯೂ ಅಸಾಧ್ಯವಲ್ಲ.
ವಿದೇಶಗಳಲ್ಲಿಯೂ ಟ್ರಂಪ್ ಆಡಳಿತದ ಬಗ್ಗೆ ಟೀಕೆಗಳು ಮತ್ತು ವಿಶ್ವಾಸದ ಕೊರತೆ ಕಂಡುಬಂದಿವೆ. ಭಾರತದ ವಿಚಾರದಲ್ಲಿಯೂ ಜಾಗತಿಕ ವಿಶ್ವಾಸಾರ್ಹತೆಯನ್ನು ಉಳಿಸಿಕೊಳ್ಳುವುದು ಅತ್ಯಂತ ಮುಖ್ಯ. ದೇಶಕ್ಕೆ ಇಂದು ಕೇವಲ ಭಾಷಣ ಮಾಡುವ ಪ್ರಧಾನಿಯಲ್ಲ, ಪತ್ರಿಕಾಗೋಷ್ಠಿಗಳನ್ನು ಎದುರಿಸಿ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸುವ, ಸಂಸತ್ತಿನಲ್ಲಿ ಚರ್ಚೆಗೆ ಅವಕಾಶ ನೀಡುವ ಮತ್ತು ಜನರಿಗೆ ಉತ್ತರದಾಯಿಯಾಗಿರುವ ನಾಯಕತ್ವದ ಅಗತ್ಯವಿದೆ.
ರಾಹುಲ್ ಗಾಂಧಿಯವರ ನಾಯಕತ್ವದಲ್ಲಿ ಅಂತಹ ಬದಲಾವಣೆಯನ್ನು ನಿರೀಕ್ಷಿಸುವವರೂ ಇದ್ದಾರೆ.
ಅಂತಿಮವಾಗಿ, ಪ್ರಜಾಪ್ರಭುತ್ವದಲ್ಲಿ ಯಾವುದೇ ಪಕ್ಷ ಶಾಶ್ವತವಾಗಿ ಅಧಿಕಾರದಲ್ಲಿರುವುದಿಲ್ಲ. ಜನರ ವಿಶ್ವಾಸ ಗಳಿಸಿದವರು ಅಧಿಕಾರದಲ್ಲಿ ಉಳಿಯುತ್ತಾರೆ; ಭರವಸೆಗಳನ್ನು ಮರೆತು ಜನವಿರೋಧಿ ಆಡಳಿತ ನಡೆಸಿದವರು ಜನರ ತೀರ್ಪಿಗೆ ತಲೆಬಾಗಲೇಬೇಕು.
ಸುನಿಲ್ ಕುಮಾರ್ ಎಸ್
ಪಬ್ಲಿಕ್ ಹೆಲ್ತ್ ಇಂಜಿನಿಯರ್
ಇದನ್ನೂ ಓದಿ- ʼಬಹುಜನʼರ ಅಸ್ತಿತ್ವ ಮತ್ತು ರಾಜಕೀಯ ಆಯ್ಕೆ


