ಭಾಷೆಯ ಅಸ್ತಿತ್ವ, ಕನ್ನಡಿಗರ ಅಸ್ಮಿತೆ, ಉದ್ಯೋಗ ಮತ್ತು ರಾಜಕೀಯ ನಾಯಕತ್ವದ ಹೊಣೆಗಾರಿಕೆ
ಕರ್ನಾಟಕ ಕೇವಲ ಭೌಗೋಳಿಕ ಪ್ರದೇಶವಾಗಿ ಉಳಿಯದೆ, ಜ್ಞಾನ, ಉದ್ಯೋಗ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ನೆಲೆಯಾಗಬೇಕು. ಅಂದು ಕನ್ನಡಿಗರು ಭೌಗೋಳಿಕ ಏಕೀಕರಣಕ್ಕಾಗಿ ಹೋರಾಡಿದರು. ಇಂದು ಭಾಷೆಯ ಅಸ್ತಿತ್ವ, ಆರ್ಥಿಕ ಸ್ವಾವಲಂಬನೆ, ಉದ್ಯೋಗದ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತರಾಗಬೇಕಾಗಿದೆ – ಭಾಗ್ಯ ಮರವಾಸಿ, ಉಪನ್ಯಾಸಕರು.
ಅಂದು ಕನ್ನಡ ನಾಡಿನ ಭೌಗೋಳಿಕ ಏಕೀಕರಣಕ್ಕಾಗಿ ಹೋರಾಟ ನಡೆದಿತ್ತು. ಇಂದು ಕನ್ನಡ ಭಾಷೆಯ ಉಳಿವು, ಕನ್ನಡಿಗರ ಉದ್ಯೋಗ, ಆರ್ಥಿಕ ಹಕ್ಕು ಮತ್ತು ಸಾಂಸ್ಕೃತಿಕ ಅಸ್ಮಿತೆಗಾಗಿ ಹೋರಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಕರ್ನಾಟಕ ರಾಜ್ಯೋತ್ಸವವೆಂದರೆ ಕೇವಲ ಕನ್ನಡ ಧ್ವಜ ಹಾರಿಸಿ, ಸಿಹಿ ಹಂಚಿ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿ ಸಂಭ್ರಮಿಸುವ ದಿನವಲ್ಲ. ಅದು ನಮ್ಮ ಇತಿಹಾಸವನ್ನು ನೆನಪಿಸಿಕೊಳ್ಳುವ, ನಮ್ಮ ಹಕ್ಕುಗಳನ್ನು ಪ್ರಶ್ನಿಸುವ ಮತ್ತು ನಮ್ಮ ರಾಜಕೀಯ ನಾಯಕತ್ವದ ಜವಾಬ್ದಾರಿಯನ್ನು ವಿಮರ್ಶಿಸುವ ಆತ್ಮಾವಲೋಕನದ ದಿನವಾಗಬೇಕು.
ಏಕೀಕರಣದ ಇತಿಹಾಸ: :ವಿಭಜನೆಯಿಂದ ಐಕ್ಯತೆಯ ಕನಸಿನವರೆಗೆ
1799ರ ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧವು ದಕ್ಷಿಣ ಭಾರತದ ರಾಜಕೀಯ ಇತಿಹಾಸದಲ್ಲಿ ಮಹತ್ವದ ತಿರುವು. ಬ್ರಿಟಿಷರ ವಿರುದ್ಧ ಹೋರಾಡಿದ ಟಿಪ್ಪು ಸುಲ್ತಾನನ ಪತನ ಮತ್ತು ಮರಣದೊಂದಿಗೆ ಮೈಸೂರು ಸಾಮ್ರಾಜ್ಯದ ರಾಜಕೀಯ ಶಕ್ತಿ ಕುಸಿಯಿತು. ಈ ಯುದ್ಧದಲ್ಲಿ ಬ್ರಿಟಿಷರಿಗೆ ಮರಾಠರು ಮತ್ತು ಹೈದರಾಬಾದಿನ ನಿಜಾಮರು ಬೆಂಬಲ ನೀಡಿದ್ದರು. ಯುದ್ಧಾನಂತರ ಬ್ರಿಟಿಷರು ತಮ್ಮ ರಾಜಕೀಯ ಹಿತಾಸಕ್ತಿಗಳಿಗೆ ಅನುಗುಣವಾಗಿ ಪ್ರದೇಶಗಳ ಮರುಹಂಚಿಕೆ ಮಾಡಿದರು. ಮೈಸೂರು ಒಡೆಯರ ಆಡಳಿತವನ್ನು ಮರುಸ್ಥಾಪಿಸಿದರೂ ಅನೇಕ ಪ್ರದೇಶಗಳು ಬ್ರಿಟಿಷರ ನೇರ ಆಡಳಿತಕ್ಕೆ ಮತ್ತು ಅವರ ಮಿತ್ರ ಸಂಸ್ಥಾನಗಳ ಅಧೀನಕ್ಕೆ ಹೋದವು.

ನಂತರದ ವಸಾಹತುಶಾಹಿ ಆಡಳಿತದಲ್ಲಿ ಕನ್ನಡ ಮಾತನಾಡುವ ಪ್ರದೇಶಗಳು ಮೈಸೂರು ಸಂಸ್ಥಾನ, ಮುಂಬೈ ಪ್ರಾಂತ್ಯ, ಮದ್ರಾಸ್ ಪ್ರಾಂತ್ಯ, ಹೈದರಾಬಾದ್ ನಿಜಾಮರ ಸಂಸ್ಥಾನ ಮತ್ತು ಕೊಡಗು ಸೇರಿದಂತೆ ವಿವಿಧ ಆಡಳಿತ ವ್ಯವಸ್ಥೆಗಳ ಅಡಿಯಲ್ಲಿ ಹಂಚಿಹೋದವು. ಒಂದೇ ಭಾಷೆ, ಸಂಸ್ಕೃತಿ ಮತ್ತು ಐತಿಹಾಸಿಕ ಪರಂಪರೆ ಹೊಂದಿದ್ದ ಕನ್ನಡಿಗರು ಆಡಳಿತಾತ್ಮಕವಾಗಿ ಬೇರ್ಪಟ್ಟರು.
ಈ ವಿಭಜನೆಯ ವಿರುದ್ಧ ಕನ್ನಡಿಗರಲ್ಲಿ ಭಾಷಾವಾರು ಏಕತೆಯ ಪ್ರಜ್ಞೆ ಬೆಳೆಯಿತು. ಆಲೂರು ವೆಂಕಟರಾಯರು, ಅಂದಾನಪ್ಪ ದೊಡ್ಡ ಮೇಟಿ, ಸಿದ್ದಪ್ಪ ಕಂಬಳಿ, ಕುವೆಂಪು, ಎಸ್ ನಿಜಲಿಂಗಪ್ಪ, ರಂಜಾನ್ ಸಾಬ್ ಪಿಂಜಾರ, ಗುಡ್ಲೆಪ್ಪ ಹಳ್ಳಿಕೇರಿ, ಕಯ್ಯಾರ ಕಿಞ್ಞಣ್ಣ ರೈ, ಮುಂತಾದವರು ಕರ್ನಾಟಕ ಏಕೀಕರಣದ ಚಿಂತನೆಗೆ ಬಲ ತುಂಬಿದರು. ಸಾಹಿತಿಗಳು, ಪತ್ರಕರ್ತರು, ಹೋರಾಟಗಾರರು ಮತ್ತು ಕನ್ನಡಪರ ಸಂಘಟನೆಗಳು ಜನಜಾಗೃತಿ ಮೂಡಿಸಿದವು. ದಶಕಗಳ ಹೋರಾಟದ ಫಲವಾಗಿ 1956ರ ನವೆಂಬರ್ 1ರಂದು ಕನ್ನಡ ಮಾತನಾಡುವ ಪ್ರದೇಶಗಳನ್ನು ಒಗ್ಗೂಡಿಸಿ ವಿಶಾಲ ಮೈಸೂರು ರಾಜ್ಯ ರಚಿಸಲಾಯಿತು. 1973ರ ನವೆಂಬರ್ 1ರಂದು ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ಮರುನಾಮಕರಣ ಮಾಡಲಾಯಿತು.
ಅಂದು ನಡೆದ ಹೋರಾಟದ ಆಶಯ ಕೇವಲ ಭೂಪ್ರದೇಶಗಳನ್ನು ಒಂದಾಗಿಸುವುದಾಗಿರಲಿಲ್ಲ. ಕನ್ನಡಿಗರಿಗೆ ಅವರದೇ ಭಾಷೆಯಲ್ಲಿ ಶಿಕ್ಷಣ, ಆಡಳಿತ, ಉದ್ಯೋಗ ಮತ್ತು ಸಾಮಾಜಿಕ ಗೌರವ ದೊರೆಯಬೇಕು ಎಂಬುದಾಗಿತ್ತು.
ಗೋಕಾಕ್ ಚಳವಳಿ: ಕನ್ನಡದ ಸ್ಥಾನಮಾನಕ್ಕಾಗಿ ಮತ್ತೊಂದು ಹೋರಾಟ
ಏಕೀಕರಣದ ನಂತರವೂ ಕನ್ನಡದ ಸ್ಥಾನಮಾನಕ್ಕಾಗಿ ಹೋರಾಟ ನಿಲ್ಲಲಿಲ್ಲ. 1980ರ ದಶಕದ ಗೋಕಾಕ್ ಚಳವಳಿ ಕನ್ನಡ ಭಾಷೆಯ ಇತಿಹಾಸದಲ್ಲಿ ಮಹತ್ವದ ಮೈಲಿಗಲ್ಲಾಯಿತು. ಡಾ. ವಿ. ಕೃ. ಗೋಕಾಕ್ ಸಮಿತಿಯ ಶಿಫಾರಸುಗಳ ಹಿನ್ನೆಲೆಯಲ್ಲಿ ಕನ್ನಡಕ್ಕೆ ಶಿಕ್ಷಣದಲ್ಲಿ ಪ್ರಥಮ ಭಾಷೆಯ ಸ್ಥಾನಮಾನ ದೊರೆಯಬೇಕೆಂಬ ಬೇಡಿಕೆ ಪ್ರಬಲವಾಯಿತು. ಡಾ. ರಾಜ್ಕುಮಾರ್ ಸೇರಿದಂತೆ ಸಾಹಿತಿಗಳು, ಕಲಾವಿದರು, ವಿದ್ಯಾರ್ಥಿಗಳು ಮತ್ತು ಕನ್ನಡಪರ ಸಂಘಟನೆಗಳು ಈ ಹೋರಾಟಕ್ಕೆ ಶಕ್ತಿ ತುಂಬಿದವು.
ಆದರೆ ಅಂದು ಕನ್ನಡಕ್ಕಾಗಿ ಬೀದಿಗಿಳಿದ ಜನರ ಆಶಯ ಇಂದು ಎಷ್ಟು ಈಡೇರಿದೆ? ಸರ್ಕಾರಿ ಕನ್ನಡ ಶಾಲೆಗಳಲ್ಲಿ ವಿದ್ಯಾರ್ಥಿಗಳ ಕೊರತೆ, ಶಿಕ್ಷಕರ ಖಾಲಿ ಹುದ್ದೆಗಳು, ಮೂಲಸೌಕರ್ಯಗಳ ಅಭಾವ ಮತ್ತು ಇಂಗ್ಲಿಷ್ ಮಾಧ್ಯಮದ ಹೆಚ್ಚುತ್ತಿರುವ ಪ್ರಭಾವದಿಂದ ಸಂಕಷ್ಟದಲ್ಲಿವೆ. ಕನ್ನಡ ಶಾಲೆಗಳನ್ನು ಉಳಿಸುವ ಬದಲು ಅವುಗಳ ವಿಲೀನದ ಬಗ್ಗೆ ಚರ್ಚಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಮಾಧ್ಯಮದಲ್ಲಿ ಕಲಿಯುವ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ತಂತ್ರಜ್ಞಾನ ಮತ್ತು ಉದ್ಯೋಗದ ಅವಕಾಶಗಳನ್ನು ಒದಗಿಸುವ ಜವಾಬ್ದಾರಿ ಸರ್ಕಾರಗಳ ಮೇಲಿದೆ.

ಸರೋಜಿನಿ ಮಹಿಷಿ ವರದಿ:- ಕನ್ನಡಿಗರ ಉದ್ಯೋಗದ ಹಕ್ಕು
ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ರಚಿಸಲಾದ ಸರೋಜಿನಿ ಮಹಿಷಿ ಸಮಿತಿಯ ವರದಿ ದಶಕಗಳೇ ಕಳೆದರೂ ಸಂಪೂರ್ಣವಾಗಿ ಅನುಷ್ಠಾನಗೊಂಡಿಲ್ಲ. ಕೇಂದ್ರ ಸರ್ಕಾರಿ ಸಂಸ್ಥೆಗಳು, ಸಾರ್ವಜನಿಕ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಉದ್ಯೋಗಾವಕಾಶ ಕಲ್ಪಿಸಬೇಕೆಂಬ ಅದರ ಆಶಯ ಇನ್ನೂ ಹಾಗೆ ಉಳಿದಿದೆ
ಕರ್ನಾಟಕದ ಭೂಮಿ, ನೀರು, ವಿದ್ಯುತ್ ಮತ್ತು ಮೂಲಸೌಕರ್ಯಗಳನ್ನು ಬಳಸಿಕೊಂಡು ಲಾಭ ಗಳಿಸುವ ಸಂಸ್ಥೆಗಳು ಸ್ಥಳೀಯ ಯುವಜನರಿಗೆ ಉದ್ಯೋಗ ನೀಡುವ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು. ಕನ್ನಡಿಗರು ತಮ್ಮದೇ ರಾಜ್ಯದಲ್ಲಿ ಉದ್ಯೋಗಕ್ಕಾಗಿ ಹೋರಾಡಬೇಕಾದ ಪರಿಸ್ಥಿತಿ ಇಂದು ನಿರ್ಮಾಣವಾಗಿದೆ
ಕರ್ನಾಟಕದ ಬ್ಯಾಂಕುಗಳ ವಿಲೀನ: ಆರ್ಥಿಕ ಇತಿಹಾಸದ ಅಸ್ಮಿತೆ
ಕರ್ನಾಟಕದ ಬ್ಯಾಂಕಿಂಗ್ ಇತಿಹಾಸವನ್ನು ನೆನಪಿಸಿಕೊಂಡಾಗ ಕರಾವಳಿ ಕರ್ನಾಟಕದ ಕೊಡುಗೆಯನ್ನು ಮರೆಯಲು ಸಾಧ್ಯವಿಲ್ಲ. ಮಂಗಳೂರಿನಲ್ಲಿ ಹುಟ್ಟಿಕೊಂಡ ವಿಜಯಾ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್ ಮತ್ತು ಮೈಸೂರು ಸಂಸ್ಥಾನದ ಹೆಮ್ಮೆಯಾಗಿದ್ದ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಕೇವಲ ಹಣಕಾಸು ಸಂಸ್ಥೆಗಳಾಗಿರಲಿಲ್ಲ. ಅವು ಕನ್ನಡಿಗರ ಉದ್ಯಮಶೀಲತೆ, ಪರಿಶ್ರಮ ಮತ್ತು ಆರ್ಥಿಕ ಸ್ವಾವಲಂಬನೆಯ ಸಂಕೇತಗಳಾಗಿದ್ದವು.
2017ರಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎಸ್ಬಿಐನಲ್ಲಿ ವಿಲೀನವಾಯಿತು. 2019ರಲ್ಲಿ ವಿಜಯಾ ಬ್ಯಾಂಕ್ ಬ್ಯಾಂಕ್ ಆಫ್ ಬರೋಡಾದಲ್ಲಿ ವಿಲೀನವಾಯಿತು. 2020ರಲ್ಲಿ ಕಾರ್ಪೊರೇಷನ್ ಬ್ಯಾಂಕ್ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಹಾಗೂ ಸಿಂಡಿಕೇಟ್ ಬ್ಯಾಂಕ್ ಕೆನರಾ ಬ್ಯಾಂಕಿನಲ್ಲಿ ವಿಲೀನವಾದವು.
ಬ್ಯಾಂಕುಗಳ ವಿಲೀನದ ಹಿಂದೆ ಆರ್ಥಿಕ ದಕ್ಷತೆ ಮತ್ತು ಬಂಡವಾಳ ಸಾಮರ್ಥ್ಯ ಹೆಚ್ಚಿಸುವ ಉದ್ದೇಶವಿದೆ ಎಂಬ ಕೇಂದ್ರ ಸರ್ಕಾರದ ಸಮರ್ಥನೆಯನ್ನು ಪರಿಗಣಿಸಬಹುದು. ಆದರೆ ಕರ್ನಾಟಕದ ಐತಿಹಾಸಿಕ ಬ್ಯಾಂಕುಗಳ ಹೆಸರು ಮತ್ತು ಅಸ್ತಿತ್ವವನ್ನು ಉಳಿಸಿಕೊಳ್ಳುವ ಪರ್ಯಾಯ ಮಾರ್ಗಗಳನ್ನು ಏಕೆ ಗಂಭೀರವಾಗಿ ಪರಿಗಣಿಸಲಿಲ್ಲ?
ವಿಲೀನ ಅನಿವಾರ್ಯವಾಗಿದ್ದರೆ ವಿಜಯಾ ಬ್ಯಾಂಕ್ ಅಥವಾ ಕಾರ್ಪೊರೇಷನ್ ಬ್ಯಾಂಕ್ನ ಹೆಸರನ್ನು ಉಳಿಸಿಕೊಂಡು ಹೊಸ ಬ್ಯಾಂಕಿಂಗ್ ಸಂಸ್ಥೆಯನ್ನು ರೂಪಿಸುವ ಸಾಧ್ಯತೆ ಇರಲಿಲ್ಲವೇ? ಈ ನಿರ್ಧಾರಗಳ ಸಂದರ್ಭದಲ್ಲಿ ಕರ್ನಾಟಕದ ಸಂಸದರು ಎಷ್ಟು ಪ್ರಬಲವಾಗಿ ಧ್ವನಿ ಎತ್ತಿದರು? ರಾಜ್ಯದ ಆರ್ಥಿಕ ಮತ್ತು ಸಾಂಸ್ಕೃತಿಕ ಅಸ್ಮಿತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಅವರು ಯಾವ ಪರ್ಯಾಯ ಪ್ರಸ್ತಾಪಗಳನ್ನು ಮುಂದಿಟ್ಟರು?
ಇದು ಕೇವಲ ಬ್ಯಾಂಕಿನ ಹೆಸರಿನ ಪ್ರಶ್ನೆಯಲ್ಲ; ಕರ್ನಾಟಕದ ಆರ್ಥಿಕ ಇತಿಹಾಸದ ಮೇಲಿನ ಗೌರವದ ಪ್ರಶ್ನೆಯಾಗಿದೆ.

ಸಂಸತ್ತಿನಲ್ಲಿ ಕರ್ನಾಟಕದ ಧ್ವನಿ: ಜನಪ್ರತಿನಿಧಿಗಳ ಹೊಣೆಗಾರಿಕೆ
ಕರ್ನಾಟಕದಿಂದ ಆಯ್ಕೆಯಾದ ಸಂಸದರು ಪಕ್ಷ ರಾಜಕಾರಣದ ಗಡಿಗಳನ್ನು ಮೀರಿ ರಾಜ್ಯದ ಹಿತಾಸಕ್ತಿಗಳನ್ನು ಪ್ರತಿನಿಧಿಸಬೇಕಾಗಿದೆ. ತೆರಿಗೆ ಹಂಚಿಕೆ, ಕೇಂದ್ರದ ಅನುದಾನ, ರೈಲ್ವೆ ಯೋಜನೆಗಳು, ನೀರಾವರಿ, ಮೇಕೆದಾಟು, ಮಹದಾಯಿ, ಉದ್ಯೋಗ ಮತ್ತು ಭಾಷಾ ಹಕ್ಕುಗಳ ವಿಚಾರದಲ್ಲಿ ಕರ್ನಾಟಕದ ಪರವಾಗಿ ಒಗ್ಗಟ್ಟಿನ ಧ್ವನಿ ಮೊಳಗಬೇಕಾಗಿದೆ
ಕರ್ನಾಟಕವು ದೇಶದ ಆರ್ಥಿಕ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡುತ್ತಿದೆ. ಆದರೆ ಕೇಂದ್ರದಿಂದ ದೊರೆಯುವ ತೆರಿಗೆ ಪಾಲು ಮತ್ತು ಅನುದಾನದ ಹಂಚಿಕೆ ಕುರಿತು ರಾಜ್ಯದಲ್ಲಿ ಅಸಮಾಧಾನವಿದೆ. ನಮ್ಮ ರಾಜ್ಯದಿಂದ ಸಂಸತ್ತಿಗೆ ಆಯ್ಕೆಯಾದ ಪ್ರತಿನಿಧಿಗಳು ಈ ವಿಚಾರದಲ್ಲಿ ಎಷ್ಟು ಬಾರಿ ಒಗ್ಗಟ್ಟಿನಿಂದ ಪ್ರಶ್ನಿಸಿದ್ದಾರೆ? ಕರ್ನಾಟಕಕ್ಕೆ ನ್ಯಾಯಯುತ ತೆರಿಗೆ ಪಾಲು ದೊರೆಯಲು ಎಷ್ಟು ಪ್ರಬಲ ಹೋರಾಟ ನಡೆಸಿದ್ದಾರೆ? ರಾಜ್ಯದ ನೀರಾವರಿ ಮತ್ತು ಉದ್ಯೋಗದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಎಷ್ಟು ಗಂಭೀರವಾಗಿ ಪ್ರಸ್ತಾಪಿಸಿದ್ದಾರೆ?
ಸಂಸದರಾಗುವುದು ಕೇವಲ ರಾಜಕೀಯ ಅಧಿಕಾರವನ್ನು ಅನುಭವಿಸುವುದಕ್ಕಲ್ಲ; ಜನರ ಹಕ್ಕುಗಳನ್ನು ಪ್ರತಿನಿಧಿಸುವುದಕ್ಕಾಗಿ ಎಂಬುದನ್ನು ಮರೆಯಬಾರದು.
ಕನ್ನಡ ಅಧ್ಯಯನ ಪೀಠಗಳು: ಸಂಶೋಧನೆಗೆ ಬೇಕಿದೆ ಜಾಗತಿಕ ಮನ್ನಣೆ
ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸ್ಥಾಪಿಸಲಾಗಿರುವ ಕನ್ನಡ ಅಧ್ಯಯನ ಪೀಠಗಳ ಸ್ಥಿತಿಯೂ ಆತ್ಮಾವಲೋಕನಕ್ಕೆ ಅರ್ಹವಾಗಿದೆ. ಖಾಲಿ ಇರುವ ಬೋಧಕ ಹುದ್ದೆಗಳು, ಸಂಶೋಧನಾ ಅನುದಾನದ ಕೊರತೆ ಮತ್ತು ಶೈಕ್ಷಣಿಕ ಚಟುವಟಿಕೆಗಳ ಕುಂಠಿತ ಸ್ಥಿತಿಯ ಬಗ್ಗೆ ಗಂಭೀರ ಚರ್ಚೆ ನಡೆಯಬೇಕು.
ಕನ್ನಡದ ಪ್ರಾಚೀನತೆ, ವಚನ ಸಾಹಿತ್ಯ, ದಾಸ ಸಾಹಿತ್ಯ, ಜಾನಪದ, ಶಾಸನಗಳು, ಮತ್ತು ಕರ್ನಾಟಕದ ಸಾಂಸ್ಕೃತಿಕ ಪರಂಪರೆಯ ಕುರಿತು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಶೋಧನೆ ನಡೆಯಬೇಕು.
ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿರುವಾಗ ಅದರ ಸಂಶೋಧನೆಗೆ ಅಗತ್ಯವಾದ ಸೌಲಭ್ಯಗಳು, ಪ್ರಾಧ್ಯಾಪಕರ ನೇಮಕಾತಿ ಮತ್ತು ಅನುದಾನವನ್ನು ಒದಗಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಅಧ್ಯಯನ ಪೀಠಗಳನ್ನು ಸ್ಥಾಪಿಸುವುದಷ್ಟೇ ಸಾಕೇ? ಅಲ್ಲಿ ನಿರಂತರವಾಗಿ ಸಂಶೋಧನೆಗಳು ನಡೆಯಬೇಕಲ್ಲವೇ?
ಏಕೀಕರಣದ ನಂತರವೂ ಕನ್ನಡಿಗರ ಅಸ್ತಿತ್ವದ ಪ್ರಶ್ನೆ!
ಇಂದು ಕನ್ನಡದ ನೆಲದಲ್ಲಿಯೇ ಕನ್ನಡದ ಬಳಕೆಯು ಆಡಳಿತ, ವ್ಯಾಪಾರ, ತಂತ್ರಜ್ಞಾನ ಮತ್ತು ಖಾಸಗಿ ಉದ್ಯೋಗ ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದಲ್ಲಿಲ್ಲ. ಕನ್ನಡದಲ್ಲಿ ವ್ಯವಹರಿಸುವ ನಾಗರಿಕರಿಗೆ ಸೂಕ್ತ ಸೇವೆ ದೊರೆಯಬೇಕು. ಕನ್ನಡದಲ್ಲಿ ಶಿಕ್ಷಣ ಪಡೆದ ಯುವಜನರಿಗೆ ಸಮಾನ ಅವಕಾಶಗಳು ದೊರೆಯಬೇಕು.
ಒಂದು ದೇಶ, ಒಂದು ಭಾಷೆ ಎಂಬ ಏಕರೂಪತೆಯ ಚಿಂತನೆಗಿಂತ ಭಾರತದ ಬಹುಭಾಷಾ ಮತ್ತು ಬಹುಸಂಸ್ಕೃತಿಯ ವೈವಿಧ್ಯವನ್ನು ಗೌರವಿಸುವ ಮನೋಭಾವ ಮುಖ್ಯ. ಹಿಂದಿ, ಕನ್ನಡ, ತಮಿಳು, ತೆಲುಗು, ಮಲಯಾಳಂ, ಮರಾಠಿ ಸೇರಿದಂತೆ ಎಲ್ಲ ಭಾಷೆಗಳಿಗೂ ಅವುಗಳ ನೆಲದಲ್ಲಿ ಸಮಾನ ಗೌರವ ದೊರೆಯಬೇಕು.
ಕನ್ನಡದ ಅಸ್ತಿತ್ವ ಉಳಿಯಬೇಕಾದರೆ ಕನ್ನಡ ಕೇವಲ ರಾಜ್ಯೋತ್ಸವದ ವೇದಿಕೆಗಳ ಭಾಷಣಕ್ಕೆ ಸೀಮಿತವಾಗಬಾರದು. ಅದು ಆಡಳಿತದ ಭಾಷೆಯಾಗಬೇಕು, ಶಿಕ್ಷಣದ ಭಾಷೆಯಾಗಬೇಕು, ಉದ್ಯೋಗದ ಅವಕಾಶಗಳಿಗೆ ಪೂರಕವಾಗಬೇಕು ಮತ್ತು ಸಂಶೋಧನೆಯ ಭಾಷೆಯಾಗಿ ಬೆಳೆಯಬೇಕು

ಕರ್ನಾಟಕ ಏಕೀಕರಣವಾಗಿ ಏಳು ದಶಕಗಳು ಕಳೆದಿವೆ. ಆದರೆ ಕನ್ನಡಿಗರ ಮೂಲ ಆಶಯಗಳೆಲ್ಲ ಈಡೇರಿವೆಯೇ? ಕನ್ನಡ ಶಾಲೆಗಳ ಪರಿಸ್ಥಿತಿ ಏನಾಗಿದೆ? ಸರೋಜಿನಿ ಮಹಿಷಿ ವರದಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿದೆಯೇ? ಸ್ಥಳೀಯ ಯುವಜನರಿಗೆ ಉದ್ಯೋಗ ದೊರೆಯುತ್ತಿದೆಯೇ? ಕನ್ನಡ ಅಧ್ಯಯನ ಪೀಠಗಳಲ್ಲಿ ಸಂಶೋಧನೆಗೆ ಸೂಕ್ತ ವಾತಾವರಣವಿದೆಯೇ? ಕರ್ನಾಟಕದ ಐತಿಹಾಸಿಕ ಬ್ಯಾಂಕುಗಳ ಅಸ್ತಿತ್ವವನ್ನು ಉಳಿಸಲು ನಮ್ಮ ಜನಪ್ರತಿನಿಧಿಗಳು ಪ್ರಯತ್ನಿಸಿದ್ದಾರೆಯೇ? ಸಂಸತ್ತಿನಲ್ಲಿ ಕರ್ನಾಟಕದ ಧ್ವನಿ ನಿರೀಕ್ಷಿತ ಮಟ್ಟದಲ್ಲಿ ಮೊಳಗುತ್ತಿದೆಯೇ?
ಈ ಪ್ರಶ್ನೆಗಳಿಗೆ ರಾಜಕೀಯ ಪಕ್ಷಗಳು, ಸರ್ಕಾರಗಳು ಮತ್ತು ಜನಪ್ರತಿನಿಧಿಗಳು ಉತ್ತರ ನೀಡಬೇಕಾಗಿದೆ.
ಕರ್ನಾಟಕ ಏಕೀಕರಣಕ್ಕಾಗಿ ಹೋರಾಡಿದ ಹಿಂದಿನ ತಲೆಮಾರಿನ ತ್ಯಾಗಕ್ಕೆ ಗೌರವ ಸಲ್ಲಿಸುವ ನಿಜವಾದ ಮಾರ್ಗವೆಂದರೆ ಕನ್ನಡಿಗರ ಹಕ್ಕುಗಳನ್ನು ರಕ್ಷಿಸುವುದು. ಕನ್ನಡದ ಹೆಸರಿನಲ್ಲಿ ಅಧಿಕಾರ ಪಡೆದವರು ಕನ್ನಡದ ಅಭಿವೃದ್ಧಿಗೆ ನೀಡಿದ ಕೊಡುಗೆಯ ಲೆಕ್ಕವನ್ನು ಜನರ ಮುಂದೆ ಇಡಬೇಕು.
ಕರ್ನಾಟಕ ಕೇವಲ ಭೌಗೋಳಿಕ ಪ್ರದೇಶವಾಗಿ ಉಳಿಯದೆ, ಜ್ಞಾನ, ಉದ್ಯೋಗ, ಸಮಾನತೆ, ಸ್ವಾಭಿಮಾನ ಮತ್ತು ಮಾನವೀಯತೆಯ ನೆಲೆಯಾಗಬೇಕು. ಅಂದು ಕನ್ನಡಿಗರು ಭೌಗೋಳಿಕ ಏಕೀಕರಣಕ್ಕಾಗಿ ಹೋರಾಡಿದರು. ಇಂದು ಭಾಷೆಯ ಅಸ್ತಿತ್ವ, ಆರ್ಥಿಕ ಸ್ವಾವಲಂಬನೆ, ಉದ್ಯೋಗದ ಹಕ್ಕು ಮತ್ತು ಸಾಮಾಜಿಕ ನ್ಯಾಯಕ್ಕಾಗಿ ಜಾಗೃತರಾಗಬೇಕಾಗಿದೆ.
ಭಾಗ್ಯ ಮರವಾಸಿ
ಉಪನ್ಯಾಸಕರು
ಇದನ್ನೂ ಓದಿ- ಕನ್ನಡತ್ವದ ದೂರದೃಷ್ಟಿ


