ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಹೇಳಿಕೆಗಳು ಹಾಗೂ ನಡವಳಿಕೆ ವಿರುದ್ಧ ತೀವ್ರ ವಾಗ್ದಾಳಿ ನಡೆಸಲಾಗಿದ್ದು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಚಾರದಲ್ಲಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
‘ಆಚಾರವಿಲ್ಲದ ನಾಲಿಗೆ, ವಿಚಾರವಿಲ್ಲದ ಮಾತು’ ಎಂಬ ಮಾತು ಕುಮಾರಸ್ವಾಮಿ ಅವರಿಗೆ ಸೂಕ್ತವಾಗಿದೆ. ನಿನ್ನೆ, ಇಂದು ಮತ್ತು ನಾಳೆ ಏನು ಮಾತನಾಡಬೇಕು ಎಂಬ ಸ್ಪಷ್ಟತೆಯೇ ಅವರಿಗಿಲ್ಲ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರ ವಿಚಾರವನ್ನು ಮುಂದಿಟ್ಟುಕೊಂಡು ಒಮ್ಮೆ ಮುಖ್ಯಮಂತ್ರಿ ವಿರುದ್ಧ, ಮತ್ತೊಮ್ಮೆ ಜಮೀರ್ ಅಹಮದ್ ಖಾನ್ ವಿರುದ್ಧ, ಇನ್ನೊಮ್ಮೆ ಖರ್ಗೆ ಕುಟುಂಬದ ವಿರುದ್ಧ ಆರೋಪ ಮಾಡುತ್ತಿದ್ದಾರೆ. ಇತರರ ನಡುವೆ ಭಿನ್ನಾಭಿಪ್ರಾಯ ಸೃಷ್ಟಿಸಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಕಂಡವರ ಮನೆಗೆ ಬೆಂಕಿ ಹಚ್ಚಿ ಬೇಳೆ ಬೇಯಿಸಿಕೊಳ್ಳುವುದನ್ನು ಮನೆಮುರುಕತನ ಎನ್ನುತ್ತಾರೆ. “ಮನೆಮುರುಕತನ” ಎಂಬ ಪದದ ಅರ್ಥ ನಿಮಗೆ ತಿಳಿದಿದೆ ಎಂದುಕೊಂಡಿದ್ದೇನೆ ಎಂದು ವಾಗ್ದಾಳಿ ನಡೆಸಿದರು.
ಸಿದ್ದರಾಮಯ್ಯ ಅವರನ್ನು ರಾಜಕೀಯವಾಗಿ ಅತಿ ಹೆಚ್ಚು ಅವಮಾನಿಸಿದವರು ಕುಮಾರಸ್ವಾಮಿ. ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸುವಲ್ಲಿಯೂ ಕುಮಾರಸ್ವಾಮಿ ಪಾತ್ರವಿತ್ತು. ಸಿದ್ದರಾಮಯ್ಯನವರ ರಾಜಕೀಯ ಜೀವನದುದ್ದಕ್ಕೂ ಎಡೆಬಿಡದೆ ಕಾಡಿದವರು, ಇಂದು ಖರ್ಗೆ ಕುಟುಂಬದ ಕಡೆ ತಿರುಗಿದ್ದಾರೆ ಎಂದು ಆರೋಪಿಸಿದರು.
ಸ್ಟಿಂಗ್ ವಿಡಿಯೋ ಕುರಿತು ಪ್ರಶ್ನೆಗಳ ಸುರಿಮಳೆ
ಸ್ಟಿಂಗ್ ವಿಡಿಯೋ ವಿವಾದಕ್ಕೆ ಸಂಬಂಧಿಸಿದಂತೆ ಕುಮಾರಸ್ವಾಮಿ ಅವರಿಗೆ ಹಲವು ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ.
ಕುಮಾರಸ್ವಾಮಿ ಅವರ ಐಟಿ ಸೆಲ್‌ನವರು ವಿಚಾರಣೆಗೆ ಹಾಜರಾಗುತ್ತಿಲ್ಲವೇಕೆ? ಸ್ಟಿಂಗ್ ವಿಡಿಯೋ ಬಹಿರಂಗಪಡಿಸುವಲ್ಲಿ ತಮ್ಮವರ ಪಾತ್ರವಿಲ್ಲ ಎಂದು ಸ್ಪಷ್ಟಪಡಿಸುತ್ತಿಲ್ಲವೇಕೆ? ವಿಡಿಯೋ ಅಪ್‌ಲೋಡ್ ಮಾಡಿರುವುದನ್ನು ವಿರೋಧಿಸುತ್ತಿಲ್ಲವೇಕೆ? ಅಕ್ಕ ಸಮ್ಮೇಳನದ ಹೆಸರಿನಲ್ಲಿ ಅಮೆರಿಕಕ್ಕೆ ತೆರಳಿ ನಡೆಸಿದ ಷಡ್ಯಂತ್ರವೇನು ಎಂಬ ಪ್ರಶ್ನೆಗಳಿಗೆ ಉತ್ತರಿಸುವಂತೆ ಕೋರಿದ್ದಾರೆ.
ತಮ್ಮ ಸಹೋದರನ ಕುಟುಂಬದ ರಾಜಕೀಯ ಬೆಳವಣಿಗೆಯನ್ನೇ ಸಹಿಸದ ಕುಮಾರಸ್ವಾಮಿ ಇತರರ ಬೆಳವಣಿಗೆಯನ್ನು ಹೇಗೆ ಸಹಿಸುತ್ತಾರೆ ಎಂದು ಪ್ರಶ್ನಿಸಿರುವ ಹೇಳಿಕೆಯಲ್ಲಿ, ಮಾತಿನಲ್ಲಿ ಘನತೆ, ನಡವಳಿಕೆಯಲ್ಲಿ ಪ್ರಬುದ್ಧತೆ ಹಾಗೂ ಸತ್ಯ ಹೇಳುವ ಅಭ್ಯಾಸ ಬೆಳೆಸಿಕೊಳ್ಳುವಂತೆ ಕುಮಾರಸ್ವಾಮಿ ಅವರಿಗೆ ಸಲಹೆ ನೀಡಿದ್ದಾರೆ.

