ಯಾವ ಪತ್ರಿಕೆ ಯಾವ ಪಕ್ಷದಿಂದ ಎಷ್ಟು ಹಣ ಪಡೆದು ಯಾವ ರೀತಿಯ ವಿಷಯ ಪ್ರಕಟಿಸಿದೆ ಎಂಬುದನ್ನು ಓದುಗರಿಗೆ ತಿಳಿಸುವ ಪಾರದರ್ಶಕತೆಯ ಸಂಸ್ಕೃತಿ ಮಾಧ್ಯಮ ರಂಗದಲ್ಲಿ ಬರಬೇಕು. ಯಾಕೆಂದರೆ ಪತ್ರಿಕೋದ್ಯಮದ ಮೊದಲ ನಿಷ್ಠೆ ಜಾಹೀರಾತುದಾರನಿಗೆ, ಮಾಲೀಕನಿಗೆ, ರಾಜಕೀಯ ಪಕ್ಷಕ್ಕೆ ಅಲ್ಲ, ಬದಲಾಗಿ ಓದುಗನಿಗೆ ಇರಬೇಕು. ಆ ಓದುಗನ ವಿಶ್ವಾಸವನ್ನು ಕಾಪಾಡುವುದೇ ಪತ್ರಿಕೋದ್ಯಮದ ಮೊದಲ ಧರ್ಮವಾಗಬೇಕು – ದಿನೇಶ್ ಕುಮಾರ್ ಎಸ್ ಸಿ, ಸಂಪಾದಕರು, ಕನ್ನಡ ಪ್ಲಾನೆಟ್.
ಬೆಳಗ್ಗೆಯಿಂದ ಪತ್ರಿಕೆಗಳ ಪುಟಗಳನ್ನು ತಿರುವಿ ನೋಡುತ್ತಿರುವ ಓದುಗರಿಗೆ ಒಂದು ಪ್ರಶ್ನೆ ಕಾಡಬೇಕಿದೆ. ನಾವು ಕೈಯಲ್ಲಿ ಹಿಡಿದಿರುವುದು ಪತ್ರಿಕೆಯೇ? ಇಲ್ಲವೇ ಜಾಹೀರಾತಿನ ಮತ್ತೊಂದು ರೂಪವೇ?
ಭಾರತೀಯ ಜನತಾ ಪಕ್ಷ ನಡೆಸುತ್ತಿರುವ ರಾಜಕೀಯ ಪಾದಯಾತ್ರೆಗೆ ಸಂಬಂಧಿಸಿದಂತೆ ಇವತ್ತು ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿರುವ ವರದಿಗಳು ಈ ಪ್ರಶ್ನೆಯನ್ನು ಮತ್ತೆ ಮುನ್ನೆಲೆಗೆ ತಂದಿವೆ. ಪ್ರಜಾವಾಣಿಯೊಂದು ಈ ವಿಷಯವನ್ನು “ಪಿವಿ ಬ್ರ್ಯಾಂಡ್ ಸ್ಪಾಟ್” ಎಂದು ಗುರುತಿಸಿ ಪ್ರಕಟಿಸಿದೆ. ಪಿವಿ ಬ್ರಾಂಡ್ ಸ್ಪಾಟ್ ಎಂದರೆ ಏನು ಎಂಬುದು ಸಾಧಾರಣವಾಗಿ ಎಲ್ಲ ಓದುಗರಿಗೆ ಅರ್ಥವಾಗುವುದಿಲ್ಲ. ಜಾಹೀರಾತು ಬರೆಹ ಎಂದು ಸ್ಪಷ್ಟವಾಗಿ ನೇರವಾಗಿ ನಮೂದಿಸಬಹುದಿತ್ತು. ಆದರೆ ಪ್ರಜಾವಾಣಿ ಕನಿಷ್ಠ ಲಜ್ಜೆ ಉಳಿಸಿಕೊಂಡಿರುವ ಕಾರಣಕ್ಕೆ ಪಿವಿ ಬ್ರಾಂಡ್ ಸ್ಪಾಟ್ ಎಂದಾದರೂ ನಮೂದಿಸಿದೆ ಎಂದು ಸಮಾಧಾನಪಟ್ಟು ಕೊಳ್ಳಬಹುದು.
ಬಿಜೆಪಿ ಪಾದಯಾತ್ರೆಗೆ ಸಂಬಂಧಿಸಿದಂತೆ ಎಲ್ಲ ಪತ್ರಿಕೆಗಳಲ್ಲೂ ಒಂದೇ ಸುದ್ದಿಯನ್ನು ಪ್ರಕಟಿಸಲಾಗಿದೆ. ಅಲ್ಲಿಗೆ ಒಂದೇ ಸುದ್ದಿಯನ್ನು ಎಲ್ಲ ಪತ್ರಿಕೆಗಳಿಗೆ ದುಡ್ಡು ಕೊಟ್ಟು ಪ್ರಕಟಿಸುವಂತೆ ಮಾಡಲಾಗಿದೆ. ಅದು ಹಣ ಕೊಟ್ಟು ಪ್ರಕಟಿಸಿದ ವರದಿಯಾದ್ದರಿಂದ ಓದುಗರಿಗೆ ಅದನ್ನು ಹೇಳದೆ ಸುದ್ದಿ ರೂಪದಲ್ಲಿ ಪ್ರಕಟಿಸುವುದು ಯಾವ ನೈತಿಕತೆ? ಓದುಗರ ವಿಶ್ವಾಸವನ್ನು ಹೀಗೆ ದುರ್ಬಳಕೆ ಮಾಡಿಕೊಳ್ಳಬಹುದೇ?
ರಾಜಕೀಯ ಪಕ್ಷಗಳು ಜಾಹೀರಾತು ನೀಡುವುದರಲ್ಲಿ ಯಾವ ತಪ್ಪೂ ಇಲ್ಲ. ಯಾವುದೇ ಪಕ್ಷವಾಗಲಿ, ಯಾವುದೇ ವ್ಯಕ್ತಿಯಾಗಲಿ, ಯಾವುದೇ ಸಂಸ್ಥೆಯಾಗಲಿ ತನ್ನ ಕಾರ್ಯಕ್ರಮ, ನೀತಿ, ಸಾಧನೆ ಅಥವಾ ಪ್ರಚಾರವನ್ನು ಜಾಹೀರಾತಿನ ಮೂಲಕ ಜನರಿಗೆ ತಲುಪಿಸಿಕೊಳ್ಳಬಹುದು. ಪತ್ರಿಕೆಗಳು ಅದರಿಂದ ಆದಾಯ ಗಳಿಸುವುದೂ ಸಹಜ. ಅದನ್ನು ಯಾರೂ ವಿರೋಧಿಸುವುದಿಲ್ಲ. ಆದರೆ ಜಾಹೀರಾತನ್ನು ಜಾಹೀರಾತಾಗಿಯೇ ಪ್ರಕಟಿಸುವುದಕ್ಕೂ, ಜಾಹೀರಾತನ್ನು ಸುದ್ದಿಯ ವೇಷ ತೊಡಿಸಿ ಓದುಗರ ಮುಂದೆ ಇಡುವುದಕ್ಕೂ ನಡುವೆ ಆಕಾಶ–ಭೂಮಿಯಷ್ಟು ವ್ಯತ್ಯಾಸವಿದೆ.
ಪತ್ರಿಕೆಯೊಂದರಲ್ಲಿ ಒಂದು ಪಕ್ಷದ ಜಾಹೀರಾತು ಪ್ರಕಟವಾದರೆ ಓದುಗನಿಗೆ ಅದು ಜಾಹೀರಾತು ಎಂದು ಗೊತ್ತಿರುತ್ತದೆ. ಆತ ಅದನ್ನು ಜಾಹೀರಾತಿನ ದೃಷ್ಟಿಯಿಂದ ಓದುತ್ತಾನೆ. ಅದರಲ್ಲಿರುವ ಪ್ರತಿಯೊಂದು ಮಾತನ್ನೂ ಸ್ವತಂತ್ರ ಪತ್ರಕರ್ತನ ಪರಿಶೀಲಿತ ವರದಿ ಎಂದು ಭಾವಿಸುವುದಿಲ್ಲ. ಆದರೆ ಅದೇ ಜಾಹೀರಾತು ಸುದ್ದಿ ಪುಟಕ್ಕೆ ಬಂದು, ಪತ್ರಿಕೆಯ ವರದಿಗಾರನ ಬೈಲೈನ್ ಹೊತ್ತು, ಸಾಮಾನ್ಯ ಸುದ್ದಿಯ ವಿನ್ಯಾಸದಲ್ಲಿ, ಪಕ್ಷದ ಬಾವುಟ–ನಾಯಕರ ಚಿತ್ರಗಳೊಂದಿಗೆ ಪ್ರಕಟವಾದರೆ ಓದುಗನ ಮನಸ್ಸಿನಲ್ಲಿ ಅದರ ವಿಶ್ವಾಸಾರ್ಹತೆ ಬದಲಾಗುತ್ತದೆ. ಅದು ಇನ್ನು ಜಾಹೀರಾತಾಗಿ ಕಾಣುವುದಿಲ್ಲ. ಅದು ಸುದ್ದಿಯಾಗಿ ಕಾಣುತ್ತದೆ. ಇಲ್ಲಿಯೇ ಮೋಸ ಆರಂಭವಾಗುತ್ತದೆ.
ಭಾರತದ ಪತ್ರಿಕಾ ಮಂಡಳಿ (ಪ್ರೆಸ್ ಕೌನ್ಸಿಲ್ ಆಫ್ ಇಂಡಿಯಾ) ಕೂಡ ಪ್ರಯೋಜಿತ ಸುದ್ದಿಗಳು ಪ್ರಜಾಪ್ರಭುತ್ವದ ಮೂಲ ಆಶಯವನ್ನೇ ಹಾಳುಮಾಡಬಹುದು ಎಂದು ಎಚ್ಚರಿಸಿದೆ. ಅಷ್ಟೇ ಅಲ್ಲ, ಪತ್ರಿಕಾ ಮಂಡಳಿಯ ಮಾನದಂಡಗಳು ಜಾಹೀರಾತು, ಪ್ರಚಾರಾತ್ಮಕ ವಿಷಯ ಮತ್ತು ಸುದ್ದಿಯನ್ನು ಪ್ರತ್ಯೇಕವಾಗಿ ಗುರುತಿಸುವ ಜವಾಬ್ದಾರಿ ಪತ್ರಿಕೆಯ ಮೇಲಿದೆ ಎಂಬುದನ್ನು ಸ್ಪಷ್ಟಪಡಿಸುತ್ತವೆ. ಇತ್ತೀಚಿನ ಒಂದು ಪ್ರಕರಣದಲ್ಲಿ, ಓದುಗರೇ ಅದು ಸುದ್ದಿ ಅಥವಾ ಜಾಹೀರಾತು ಎಂದು ಊಹಿಸಿಕೊಳ್ಳಲಿ ಎನ್ನುವುದು ಪತ್ರಿಕೆಯ ಕೆಲಸವಲ್ಲ; ವಿಷಯದ ಸ್ವರೂಪವನ್ನು ಸ್ಪಷ್ಟವಾಗಿ ತಿಳಿಸುವುದು ಪತ್ರಿಕೆಯ ಕರ್ತವ್ಯ ಎಂದು ಮಂಡಳಿ ಹೇಳಿದೆ.
ಪಾವತಿಸಿದ ಸುದ್ದಿಯಾಗಿದ್ದರೆ “ಜಾಹೀರಾತು” ಎಂದು ಹೇಳಲು ಏಕೆ ಹಿಂಜರಿಕೆ? ಜಗತ್ತು ಇದನ್ನು ಬಹಳ ಹಿಂದೆಯೇ ಅರ್ಥ ಮಾಡಿಕೊಂಡಿದೆ. ಇದು ಭಾರತ ಮಾತ್ರ ಎದುರಿಸುತ್ತಿರುವ ಸಮಸ್ಯೆಯಲ್ಲ. ಜಗತ್ತಿನ ಅನೇಕ ಮಾಧ್ಯಮ ಸಂಸ್ಥೆಗಳು ಜಾಹೀರಾತು ಮತ್ತು ಸಂಪಾದಕೀಯ ವಿಷಯದ ನಡುವಿನ ಗೆರೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸುತ್ತವೆ.
ಅಮೆರಿಕದ Society of Professional Journalists ತನ್ನ ನೈತಿಕ ಸಂಹಿತೆಯಲ್ಲಿ ಸುದ್ದಿಯನ್ನು ಜಾಹೀರಾತಿನಿಂದ ಪ್ರತ್ಯೇಕಿಸಬೇಕು, ಎರಡರ ನಡುವಿನ ಗೆರೆಯನ್ನು ಮಸುಕಾಗಿಸುವ ಹೈಬ್ರಿಡ್ ಮಾದರಿಗಳನ್ನು ದೂರವಿಡಬೇಕು ಮತ್ತು ಪ್ರಾಯೋಜಿತ ವಿಷಯವನ್ನು ಸ್ಪಷ್ಟವಾಗಿ ಗುರುತಿಸಬೇಕು ಎಂದು ಹೇಳುತ್ತದೆ. ಜಾಹೀರಾತುದಾರರು ಅಥವಾ ಇತರ ಪ್ರಭಾವಿ ಹಿತಾಸಕ್ತಿಗಳಿಗೆ ವಿಶೇಷ ಸವಲತ್ತು ನೀಡಬಾರದು ಎಂಬುದನ್ನೂ ಅದು ಒತ್ತಿ ಹೇಳುತ್ತದೆ.
ಅಮೆರಿಕದ Federal Trade Commission ಕೂಡ “native advertising” ಕುರಿತು ಇದೇ ತತ್ವವನ್ನು ಮುಂದಿಟ್ಟಿದೆ. ಜಾಹೀರಾತು ಸುದ್ದಿ, ಲೇಖನ ಅಥವಾ ಸಂಪಾದಕೀಯ ವಿಷಯದಂತೆ ಕಾಣುತ್ತಿದ್ದರೆ, ಗ್ರಾಹಕರಿಗೆ ಅದರ ವಾಣಿಜ್ಯ ಸ್ವರೂಪ ಸ್ಪಷ್ಟವಾಗಿ ತಿಳಿಯುವಂತೆ ಬಹಿರಂಗಪಡಿಸಬೇಕು. “ಅದು ಜಾಹೀರಾತು ಎಂಬುದು ಜಾಹೀರಾತಿನಂತೆ ಕಾಣಬೇಕು” ಎಂಬುದು ಅದರ ಮೂಲ ತತ್ವ.
ಬ್ರಿಟನ್ನ Advertising Standards Authority ಕೂಡ ಅಡ್ವಟೋರಿಯಲ್ ಅನ್ನು ಸುದ್ದಿ ರೂಪದಲ್ಲಿದ್ದರೂ ಜಾಹೀರಾತೇ ಎಂದು ಪರಿಗಣಿಸುತ್ತದೆ. ಅಂಥ ವಿಷಯವನ್ನು “Advertisement”, “Advertisement Feature” ಮುಂತಾದ ಸ್ಪಷ್ಟ ಗುರುತುಗಳೊಂದಿಗೆ ಪ್ರತ್ಯೇಕಿಸಬೇಕು ಎಂದು ಹೇಳುತ್ತದೆ. ಓದುಗನಿಗೆ ಅದು ಸಾಮಾನ್ಯ ಸಂಪಾದಕೀಯ ಬರಹ ಎಂಬ ಭ್ರಮೆ ಉಂಟಾಗಬಾರದು.
ಆಸ್ಟ್ರೇಲಿಯಾದ Press Council ಕೂಡ ಇದೇ ನಿಲುವು ಹೊಂದಿದೆ. ವಾಣಿಜ್ಯ ಒಪ್ಪಂದದಡಿ ಪ್ರಕಟವಾಗುವ, ಸಂಪಾದಕೀಯ ಬರಹದಂತೆ ಕಾಣುವ ವಿಷಯವನ್ನು “advertisement”, “advertising feature”, “sponsored feature” ಮುಂತಾದ ಪದಗಳಿಂದ ಗುರುತಿಸಬೇಕು; ಇಲ್ಲದಿದ್ದರೆ ಓದುಗ ಅದನ್ನು ವಾಣಿಜ್ಯ ಪ್ರಭಾವದಿಂದ ಮುಕ್ತವಾದ ಸಂಪಾದಕೀಯ ವಿಷಯ ಎಂದು ತಪ್ಪಾಗಿ ಭಾವಿಸಬಹುದು ಎಂದು ಅದು ಹೇಳುತ್ತದೆ.
ಅಂದರೆ ಜಗತ್ತಿನ ಮಾಧ್ಯಮ ರಂಗಕ್ಕೆ ಸಂಬಂಧಿಸಿದ ಸಂಸ್ಥೆಗಳು ಹೇಳುತ್ತಿರುವ ಮಾತು ಬಹಳ ಸರಳ: ಜಾಹೀರಾತು ಮಾಡಬೇಡಿ ಎಂಬುದಲ್ಲ. ಜಾಹೀರಾತನ್ನು ಸುದ್ದಿ ಎಂದು ಮಾರಬೇಡಿ.
ಈ ಪ್ರಶ್ನೆಯನ್ನು ಬಿಜೆಪಿಯ ವಿರುದ್ಧದ ಪ್ರಶ್ನೆಯಾಗಿ ಮಾತ್ರ ನೋಡಿದರೆ ನಾವು ಸಮಸ್ಯೆಯನ್ನು ಮರೆಮಾಚಿದಂತಾಗುತ್ತದೆ. ಇವತ್ತು ಬಿಜೆಪಿ ಪಾದಯಾತ್ರೆಯ ವಿಷಯದಲ್ಲಿ ಪಾವತಿಸಿದ ಸುದ್ದಿ ಪ್ರಕಟವಾಗಿದ್ದರೆ, ನಾಳೆ ಕಾಂಗ್ರೆಸ್ ಅದೇ ದಾರಿ ಹಿಡಿಯಬಹುದು. ನಾಡಿದ್ದು ಜೆಡಿಎಸ್ ಹಿಡಿಯಬಹುದು. ಅದರ ನಂತರ ಯಾವುದಾದರೂ ಕಾರ್ಪೊರೇಟ್ ಕಂಪನಿ ತನ್ನ ಉತ್ಪನ್ನದ ಪ್ರಚಾರವನ್ನು “ವಿಶೇಷ ವರದಿ”ಯಾಗಿ ಮಾರಬಹುದು. (ಇದೂ ಕೂಡ ಈಗಾಗಲೇ ಆಗುತ್ತಿದೆ.)
ಒಮ್ಮೆ ಈ ಬಾಗಿಲು ತೆರೆದರೆ ಅದನ್ನು ಮುಚ್ಚುವುದು ಬಹಳ ಕಷ್ಟ. ಇವತ್ತು ರಾಜಕೀಯ ಪಕ್ಷದ ಪಾದಯಾತ್ರೆ. ನಾಳೆ ಚುನಾವಣಾ ಅಭ್ಯರ್ಥಿಯ “ಜನಪ್ರಿಯತೆ”. ನಾಡಿದ್ದು ಸರ್ಕಾರದ “ಅಭೂತಪೂರ್ವ ಸಾಧನೆ”. ಅದರ ನಂತರ ಕಾರ್ಪೊರೇಟ್ ಕಂಪನಿಯ “ಐತಿಹಾಸಿಕ ಸೇವೆ”.
ಕೊನೆಗೆ ಓದುಗನಿಗೆ ಯಾವುದು ಸುದ್ದಿ, ಯಾವುದು ಪ್ರಚಾರ, ಯಾವುದು ಹಣ ಕೊಟ್ಟು ಪ್ರಕಟಿಸಿದ ಬರಹ ಎಂಬುದೇ ಗೊತ್ತಾಗದ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಇದು ಪತ್ರಿಕೋದ್ಯಮದ ಅತಿದೊಡ್ಡ ಅಪಾಯ.
ಒಂದು ಮೂಲಭೂತ ಅಂಶವನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಓದುಗರು ದಿನಪತ್ರಿಕೆಯನ್ನು ಖರೀದಿಸುವುದು ಸುದ್ದಿಯನ್ನು ಖರೀದಿಸುವುದಕ್ಕಲ್ಲ. ಹಣ ಕೊಟ್ಟು ಜಾಹೀರಾತು ಸುದ್ದಿಯನ್ನು ಓದುವ ಅಗತ್ಯ ಅವನಿಗಿಲ್ಲ.
ಪತ್ರಿಕೆಯ ಸುದ್ದಿ ಪುಟದಲ್ಲಿ ಪ್ರಕಟವಾದ ಸುದ್ದಿಯನ್ನು ಆತ ಒಂದು ನಿರ್ದಿಷ್ಟ ಮಟ್ಟದ ಸ್ವತಂತ್ರ ಪರಿಶೀಲನೆ, ವೃತ್ತಿಪರ ಹೊಣೆಗಾರಿಕೆ ಮತ್ತು ಸಾರ್ವಜನಿಕ ಹಿತದ ಮಾನದಂಡಗಳ ಮೂಲಕ ಬಂದ ಮಾಹಿತಿ ಎಂದು ನಂಬುತ್ತಾನೆ. ಆ ನಂಬಿಕೆಯೇ ಪತ್ರಿಕೆಯ ನಿಜವಾದ ಬಂಡವಾಳ. ಜಾಹೀರಾತಿನಿಂದ ಬರುವ ಹಣ ಪತ್ರಿಕೆಯ ಆರ್ಥಿಕ ಬಂಡವಾಳವಾಗಬಹುದು. ಆದರೆ ಓದುಗರ ವಿಶ್ವಾಸ ಅದರ ನೈತಿಕ ಬಂಡವಾಳ. ಮೊದಲನೆಯದನ್ನು ಉಳಿಸಲು ಎರಡನೆಯದನ್ನು ಮಾರಿಬಿಟ್ಟರೆ, ಕೊನೆಗೆ ಉಳಿಯುವುದು ದೊಡ್ಡ ಮುದ್ರಣಾಲಯ ಮಾತ್ರ. ದೊಡ್ಡ ಕಚೇರಿ ಇರಬಹುದು. ಸಾವಿರಾರು ಸಿಬ್ಬಂದಿ ಇರಬಹುದು. ಆದರೆ ಪತ್ರಿಕೆ ಇರುವುದಿಲ್ಲ. ಪಾಂಪ್ಲೆಟ್ ಪ್ರಿಂಟ್ ಮಾಡುವ ಪ್ರೆಸ್ ಗಳಿಗೂ ದಿನಪತ್ರಿಕೆಗಳಿಗೂ ಯಾವ ವ್ಯತ್ಯಾಸವೂ ಉಳಿದಿರುವುದಿಲ್ಲ.
ಮಾಧ್ಯಮ ಸಂಸ್ಥೆಗಳಿಗೆ ಹಣ ಬೇಕು. ತಂತ್ರಜ್ಞಾನ ಬೇಕು. ಸಿಬ್ಬಂದಿ ಬೇಕು. ಜಾಹೀರಾತು ಬೇಕು. ಹೀಗಾಗಿ ಬಂಡವಾಳ ಅಗತ್ಯ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಬಂಡವಾಳ ಪತ್ರಿಕೆಯನ್ನು ನಡೆಸಬಹುದು; ಪತ್ರಿಕೋದ್ಯಮದ ಆತ್ಮಸಾಕ್ಷಿಯನ್ನು ನಡೆಸಬಾರದು.
ಮಾಲೀಕರ ವ್ಯವಹಾರಿಕ ಹಿತಾಸಕ್ತಿ ಸುದ್ದಿಯ ಆಯ್ಕೆಯನ್ನು ನಿರ್ಧರಿಸತೊಡಗಿದಾಗ, ಜಾಹೀರಾತುದಾರರ ಇಷ್ಟಾನಿಷ್ಟಗಳು ಸಂಪಾದಕೀಯ ನಿರ್ಧಾರಗಳನ್ನು ಬದಲಾಯಿಸತೊಡಗಿದಾಗ, ರಾಜಕೀಯ ಪಕ್ಷಗಳ ಹಣ ಸುದ್ದಿಯ ಭಾಷೆಯನ್ನು ನಿರ್ಧರಿಸತೊಡಗಿದಾಗ ಪತ್ರಿಕೋದ್ಯಮ ತನ್ನ ಸ್ವಾಯತ್ತತೆಯನ್ನು ಕಳೆದುಕೊಳ್ಳುತ್ತದೆ.
ಆಗ ಪತ್ರಕರ್ತ ವರದಿಗಾರನಾಗಿರುವುದಿಲ್ಲ. ಆತ ಮಾರಾಟ ವ್ಯವಸ್ಥೆಯ ಒಂದು ಭಾಗವಾಗುತ್ತಾನೆ. ಸಂಪಾದಕ ಸಂಪಾದಕನಾಗಿರುವುದಿಲ್ಲ. ಆತ ವಾಣಿಜ್ಯ ನಿರ್ವಾಹಕನಾಗುತ್ತಾನೆ. ಪತ್ರಿಕೆ ಮಾಧ್ಯಮವಾಗಿರುವುದಿಲ್ಲ. ಅದು ಪ್ರಚಾರದ ವೇದಿಕೆಯಾಗುತ್ತದೆ.
ಪತ್ರಿಕೆ ತಪ್ಪು ಸುದ್ದಿಯನ್ನು ಪ್ರಕಟಿಸಿದರೆ ಅದನ್ನು ನಂತರ ಸರಿಪಡಿಸಬಹುದು. ಆದರೆ ಪತ್ರಿಕೆ ಉದ್ದೇಶಪೂರ್ವಕವಾಗಿ ಜಾಹೀರಾತನ್ನು ಸುದ್ದಿಯ ರೂಪದಲ್ಲಿ ಮಾರಿದರೆ ಸಮಸ್ಯೆ ಇನ್ನೂ ಆಳವಾಗಿದೆ. ಏಕೆಂದರೆ ಓದುಗನ ನಿರ್ಧಾರವೇ ಬದಲಾಗಬಹುದು. ಒಬ್ಬ ಮತದಾರ ಒಂದು ವಿಷಯ/ವ್ಯಕ್ತಿ/ಗುಂಪು/ಪಕ್ಷದ ಕುರಿತು ತಪ್ಪು ಭಾವನೆ ಬೆಳೆಸಿಕೊಳ್ಳಬಹುದು. ಒಬ್ಬ ಗ್ರಾಹಕ ಉತ್ಪನ್ನದ ಬಗ್ಗೆ ತಪ್ಪು ನಿರ್ಧಾರ ತೆಗೆದುಕೊಳ್ಳಬಹುದು. ಒಬ್ಬ ನಾಗರಿಕ ಸರ್ಕಾರದ ಕಾರ್ಯಕ್ಷಮತೆಯ ಬಗ್ಗೆ ತಪ್ಪು ಅಭಿಪ್ರಾಯಕ್ಕೆ ಬರಬಹುದು. ಒಂದು ರಾಜಕೀಯ ಪಕ್ಷ ತನ್ನ ಪರವಾದ ನಿರೂಪಣೆಯನ್ನು ಸುದ್ದಿಯ ಹೆಸರಿನಲ್ಲಿ ಜನರ ಮನಸ್ಸಿನಲ್ಲಿ ಬಿತ್ತಬಹುದು. ಅದರ ಪರಿಣಾಮ ಕೇವಲ ಪತ್ರಿಕೆಯ ನೈತಿಕತೆಯ ಮೇಲೆ ಬೀಳುವುದಿಲ್ಲ. ಅದು ಸಾರ್ವಜನಿಕ ಅಭಿಪ್ರಾಯದ ಮೇಲೆ ಬೀಳುತ್ತದೆ. ಸಾರ್ವಜನಿಕ ಅಭಿಪ್ರಾಯದ ಮೇಲೆ ಬೀಳುವ ಪರಿಣಾಮ ಪ್ರಜಾಪ್ರಭುತ್ವದ ಮೇಲೆ ಬೀಳುತ್ತದೆ.
ಅದಕ್ಕಾಗಿಯೇ Press Council of India paid news ಅನ್ನು ಪ್ರಜಾಪ್ರಭುತ್ವದ ಮೂಲ ಆಶಯಕ್ಕೆ ಧಕ್ಕೆ ತರುವ ಸಂಗತಿ ಎಂದು ಗುರುತಿಸಿದೆ.
ಜಾಹೀರಾತು ಕೊಡುವವರು ಎಷ್ಟಾದರೂ ಜಾಹೀರಾತು ನೀಡಿ. ಅವು ನಮ್ಮ ಮಾಧ್ಯಮಗಳಿಗೆ ಬೇಕು. ಎಷ್ಟು ಬೇಕಾದರೂ ನಿಮ್ಮ ಕಾರ್ಯಕ್ರಮವನ್ನು ಪ್ರಚಾರ ಮಾಡಿಕೊಳ್ಳಿ, ನಿಮ್ಮ ಸಾಧನೆಗಳನ್ನು ಹೇಳಿಕೊಳ್ಳಿ. ಆದರೆ ಅದನ್ನು ಜಾಹೀರಾತು ಎಂದು ಹೇಳಿ.
ಮಾಧ್ಯಮ ಸಂಸ್ಥೆಗಳಿಗೂ ಸಹ ಇದೇ ಮಾತು ಹೇಳಬೇಕಾಗುತ್ತದೆ. ಜಾಹೀರಾತುಗಳನ್ನು ಸ್ವೀಕರಿಸಿ. ನಿಮ್ಮ ಪತ್ರಿಕೆ ನಡೆಯಬೇಕು. ನಿಮ್ಮ ಸಿಬ್ಬಂದಿಗೆ ಸಂಬಳ ಕೊಡಬೇಕು. ನಿಮ್ಮ ಸಂಸ್ಥೆ ಬೆಳೆಯಬೇಕು. ಆದರೆ ಸುದ್ದಿಯ ಪುಟಗಳನ್ನು, ಸಂಪಾದಕೀಯ ಪುಟವನ್ನು ಮಾರಬೇಡಿ. ಪ್ರಾಯೋಜಿತ ವಿಷಯವಿದ್ದರೆ ಅದರ ಮೇಲೆ ಸ್ಪಷ್ಟವಾಗಿ “ಜಾಹೀರಾತು”, “ಪ್ರಾಯೋಜಿತ ವಿಷಯ”, “ಪಾವತಿಸಿದ ವಿಷಯ” ಎಂದು ಬರೆಯಿರಿ. ಓದುಗನಿಗೆ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಕೊಡಿ. ಅದು ಪತ್ರಿಕೆಯ ಗೌರವವನ್ನು ಕಡಿಮೆ ಮಾಡುವುದಿಲ್ಲ. ವಾಸ್ತವವಾಗಿ, ಅದು ಪತ್ರಿಕೆಯ ಗೌರವವನ್ನು ಹೆಚ್ಚಿಸುತ್ತದೆ.
ಯಾವ ಪತ್ರಿಕೆ ಯಾವ ಪಕ್ಷದಿಂದ ಎಷ್ಟು ಹಣ ಪಡೆದು ಯಾವ ರೀತಿಯ ವಿಷಯ ಪ್ರಕಟಿಸಿದೆ ಎಂಬುದನ್ನು ಓದುಗರಿಗೆ ತಿಳಿಸುವ ಪಾರದರ್ಶಕತೆಯ ಸಂಸ್ಕೃತಿ ಮಾಧ್ಯಮ ರಂಗದಲ್ಲಿ ಬರಬೇಕು. ಯಾಕೆಂದರೆ ಪತ್ರಿಕೋದ್ಯಮದ ಮೊದಲ ನಿಷ್ಠೆ ಜಾಹೀರಾತುದಾರನಿಗೆ, ಮಾಲೀಕನಿಗೆ, ರಾಜಕೀಯ ಪಕ್ಷಕ್ಕೆ ಅಲ್ಲ, ಬದಲಾಗಿ ಓದುಗನಿಗೆ ಇರಬೇಕು. ಆ ಓದುಗನ ವಿಶ್ವಾಸವನ್ನು ಕಾಪಾಡುವುದೇ ಪತ್ರಿಕೋದ್ಯಮದ ಮೊದಲ ಧರ್ಮವಾಗಬೇಕು.
ದಿನೇಶ್ ಕುಮಾರ್ ಎಸ್ ಸಿ
ಸಂಪಾದಕರು, ಕನ್ನಡ ಪ್ಲಾನೆಟ್.ಕಾಮ್
ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್ ದಿನಗಳು ಮತ್ತು ವೀರೇಂದ್ರನ ಸಾಹಸಗಳು


