ಮಂಡ್ಯ ಸೆ. 3: ಕರ್ತವ್ಯನಿರತ ಮಹಿಳಾ ಪಿಎಸ್‌ಐ ಕೆನ್ನೆಗೆ ಹೊಡೆದ ಆರೋಪ ಎದುರಿಸುತ್ತಿರುವ ತುಮಕೂರು ಗ್ರಾಮಾಂತರ ಕ್ಷೇತ್ರದ ಬಿಜೆಪಿ ಶಾಸಕ ಬಿ. ಸುರೇಶ್‌ಗೌಡ ಅವರ ಪುತ್ರಿ ಐಶ್ವರ್ಯ ಅವರಿಗೆ ಸಂಕಷ್ಟ ಎದುರಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಐಶ್ವರ್ಯ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಶ್ರೀರಂಗಪಟ್ಟಣ ನ್ಯಾಯಾಲಯ ವಜಾಗೊಳಿಸಿದೆ.
ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಆರತಿ ಉಕ್ಕಡ ದೇವಸ್ಥಾನದಲ್ಲಿ ಆಗಸ್ಟ್ 12ರಂದು ಭೀಮನ ಅಮಾವಾಸ್ಯೆ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಸೇರಿದ್ದ ಸಂದರ್ಭದಲ್ಲಿ ಘಟನೆ ನಡೆದಿತ್ತು. ದೇವಸ್ಥಾನದಲ್ಲಿ ಭದ್ರತಾ ಕರ್ತವ್ಯದಲ್ಲಿದ್ದ ಪಿಎಸ್‌ಐ ಸವಿತಾ ಬಿ. ಪಾಟೀಲ್ ಅವರು ದರ್ಶನಕ್ಕೆ ಹೆಚ್ಚಿನ ಜನದಟ್ಟಣೆ ಇರುವುದರಿಂದ ಗರ್ಭಗುಡಿ ಪ್ರವೇಶಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಐಶ್ವರ್ಯ ಅವರಿಗೆ ತಿಳಿಸಿದ್ದರು.
ಇದೇ ವೇಳೆ ಮಫ್ತಿಯಲ್ಲಿ ಕರ್ತವ್ಯದಲ್ಲಿದ್ದ ಸರ್ಕಲ್ ಇನ್ಸ್‌ಪೆಕ್ಟರ್ ಗರ್ಭಗುಡಿಯತ್ತ ತೆರಳಿದ್ದನ್ನು ಐಶ್ವರ್ಯ ಪ್ರಶ್ನಿಸಿದ್ದು, ಅವರು ಕರ್ತವ್ಯದಲ್ಲಿರುವ ತಮ್ಮ ಮೇಲಾಧಿಕಾರಿ ಎಂದು ಪಿಎಸ್‌ಐ ಸ್ಪಷ್ಟಪಡಿಸಿದ್ದರು ಎನ್ನಲಾಗಿದೆ. ಬಳಿಕ ಮಾತಿಗೆ ಮಾತು ಬೆಳೆದು, ಐಶ್ವರ್ಯ ಅವರು ಪಿಎಸ್‌ಐಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಕಪಾಳಕ್ಕೆ ಹೊಡೆದಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಶಾಸಕನ ಪುತ್ರಿ ಪಿಎಸ್ ಐಗೆ ಹೊಡೆಯುವ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಈಗಾಗಲೇ ವೈರಲ್ ಆಗಿವೆ. ಘಟನೆ ಸಂಬಂಧ ಪಿಎಸ್‌ಐ ಸವಿತಾ ಅವರ ದೂರಿನ ಆಧಾರದ ಮೇಲೆ ಕ್ಯಾತನಹಳ್ಳಿ ಪೊಲೀಸ್ ಠಾಣೆಯಲ್ಲಿ ಐಶ್ವರ್ಯ ವಿರುದ್ಧ BNSನ 132, 115(2), 352 ಹಾಗೂ 351(2)ರ ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.
ಪ್ರಕರಣ ಬೆಳಕಿಗೆ ಬಂದ ಬಳಿಕ ಶಾಸಕ ಸುರೇಶ್‌ಗೌಡ ಅವರು ಪುತ್ರಿಯ ಪರವಾಗಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದರು. ಸಾರ್ವಜನಿಕ ಜೀವನದಲ್ಲಿರುವವರು ತಾಳ್ಮೆ ಕಳೆದುಕೊಳ್ಳಬಾರದು ಎಂದು ಹೇಳಿದ್ದ ಅವರು, ಕಾನೂನು ಪ್ರಕಾರ ಕ್ರಮ ಎದುರಿಸುವುದಾಗಿ ತಿಳಿಸಿದ್ದರು. ಇದೀಗ ಜಾಮೀನು ಅರ್ಜಿಯೂ ವಜಾಗೊಂಡಿರುವ ಹಿನ್ನೆಲೆಯಲ್ಲಿ ಐಶ್ವರ್ಯ ಅವರನ್ನು ಪೊಲೀಸರು ಬಂಧಿಸುವ ಸಾಧ್ಯತೆ ಇದೆ.

