ತಮ್ಮ ದೇವಸ್ಥಾನವನ್ನು ಮಠವೆಂದು ಮಾಡಿಕೊಂಡು ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಕೋಟ್ಯಂತರ ಆದಾಯವುಳ್ಳ ಈ ಖಾಸಗಿ ಧಾರ್ಮಿಕ ಕೇಂದ್ರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಧಿಕಾರ ಹಸ್ತಾಂತರದ ಖಾಸಗಿ ಕಾರ್ಯಕ್ರಮಕ್ಕೆ ಸರಕಾರವೇ ಕೋಟ್ಯಂತರ ಸಾರ್ವಜನಿಕ ಹಣವನ್ನು ಮುತುವರ್ಜಿಯಿಂದ ಬಿಡುಗಡೆ ಮಾಡುತ್ತದೆ. ಈ ವರೆಗೆ ಚಿನ್ನದ ರಥ, ವಜ್ರ ಕಿರೀಟವೆಂದು ಭಕ್ತರು ಮತ್ತು ಸಾರ್ವಜನಿಕರಿಂದಲೇ ಹಲವಾರು ಸೇವೆಗಳು ನಡೆದಿದ್ದು ಇದೀಗ ಲೋಕದ ರಕ್ಷಣೆಗಾಗಿ ಮುಂಬರಲಿರುವ ಕಾಳಸರ್ಪವನ್ನೋಡಿಸಲು ಸಾರ್ವಜನಿಕರ ಸಹಕಾರವನ್ನು ಕೋರಲಾಗಿದ್ದುದು ಇಲ್ಲಿ ವಿಶೇಷ – ಶಂಕರ್ ಸೂರ್ನಳ್ಳಿ, ಲೇಖಕರು.
ಭಾರತದಲ್ಲಿ ಒಂದು ಕಾಲಾವಧಿಯಲ್ಲಿ ಅತ್ಯಂತ ಪ್ರಭಾವಿಯಾಗಿ ಜನ ಮನ್ನಣೆಗೆ ಪಾತ್ರರಾಗಿದ್ದ ಬುದ್ಧ ಮಹಾವೀರರುಗಳು ತಮ್ಮ ಶಿಷ್ಯರು ಮತ್ತು ಭಕ್ತಾದಿಗಳಿಂದ ತಮಗೆದುರಾಗುವ ದೇವರ ಕುರಿತಾದ ಯಾವ ಪ್ರಶ್ನೆಗಳಿಗೂ ಇದಮಿತ್ಥಂ ಎಂಬ ಸ್ಪಷ್ಟ ಉತ್ತರವನ್ನು ಯಾವತ್ತೂ ಕೊಡ ಹೋಗಲಿಲ್ಲ. ಸಹಜವಾಗಿ ವೈದಿಕ ಪುರೋಹಿತರುಗಳಿಂದ ತುಂಬಿದ್ದ ರಾಜಮನೆತನದಿಂದ ಬಂದಿರುವ ಇವರುಗಳಿಗೆ ವೈದಿಕ ದೇವ ದೇವರುಗಳ ಮತ್ತು ವೈದಿಕ ಪುರಾಣಗಳ ಅರಿವಿದ್ದರೂ ಜ್ಞಾನೋದಯದ ಬಳಿಕ ತಮ್ಮ ಯಾವ ಉಪದೇಶಗಳಲ್ಲೂ ಕೂಡ ಉದ್ದೇಶ ಪೂರ್ವಕವಾಗಿ ಇವನ್ನೆಲ್ಲ ಅವರು ಬದಿಗಿಟ್ಟಿದ್ದರು. ಒಂದು ವೇಳೆ ಬಾಯಿ ತಪ್ಪಿ ಈ ದೇವ ದೇವತೆ ಮತ್ತು ಪುರಾಣಗಳ ಪ್ರಸ್ತಾಪವನ್ನು ತಮ್ಮ ಪ್ರವಚನಗಳಲ್ಲಿ ಮಾಡ ಹೊರಟಿದ್ದರೆ ಈ ದೇವ ದೇವತೆಗಳೊಂದಿಗೆ ಅಲ್ಲಿನ ಸಕಲ ಮೌಢ್ಯಗಳೂ ಕೂಡ ಮುನ್ನುಗ್ಗಿ ಬರುವ ಅಪಾಯದ ಅರಿವು ಅವರಿಗಿತ್ತು
ಅಂದರೆ, ಜನರಲ್ಲಿ ದೇವರ ಭಯ ಹುಟ್ಟಿಸಿ ಆ ಮೂಲಕ ದೇವರನ್ನು ವ್ಯಾವಹಾರಿಕ (ಹೀಗೆ ಮಾಡಿದರೆ ಇಂತಹ ಪುಣ್ಯ ಹೀಗೆ ಮಾಡಿಲ್ಲವಾದರೆ ಘೋರ ನರಕ… ಇತ್ಯಾದಿ) ಸಂಗತಿಯನ್ನಾಗಿಸುವ ಬದಲು ಬದುಕಿನ ಹಾಗು ಸಾಮಾಜಿಕ ಉನ್ನತಿ ಮತ್ತು ಸಕಲ ಜೀವಗಳ ಒಳಿತನ್ನುದ್ದೇಶಿಸಿ ಉಪದೇಶಗಳನ್ನು ಕೈಗೊಳ್ಳುವ ಬುದ್ಧ ಮಹಾವೀರರಿಗೆ ವ್ಯಾವಹಾರಿಕ ದೇವ ದೇವತೆಗಳೆಲ್ಲ ಅನವಶ್ಯವಾಗಿ ಕಂಡಿದ್ದರು.
ಮೊನ್ನೆ ಮೊನ್ನೆ ರಾಜ್ಯದ ಒಂದು ಪ್ರಸಿದ್ಧ ಮಠದ ಸ್ವಾಮೀಜಿಯೊಬ್ಬರು ನಮ್ಮ ಮಠದಲ್ಲಿ ಕಂಡುಕೊಂಡ ಅಷ್ಟಮಂಗಳ ಪ್ರಶ್ನೆಯಲ್ಲಿ ಕಾಳಸರ್ಪ ಯೋಗ (ದೋಷವಲ್ಲ)ದ ಸೂಚನೆ ಕಂಡು ಬಂದಿದ್ದು ಇದರಿಂದ ದೇಶವಲ್ಲ ಇಡೀ ಲೋಕಕ್ಕೇ ಅನಾಹುತ ಕಾದಿದೆ. ಅದಕ್ಕಾಗಿ ಎಲ್ಲರೂ ಸೇರಿ ಇಂತ ಇಂತದ್ದೆಲ್ಲಾ ಮಾಡಬೇಕು ಎಂದು ಸಾರ್ವಜನಿಕವಾಗಿ (ಸಂಪ್ರದಾಯದಂತೆ ಅವರ ಪೀಠಾವಧಿ ಮುಗಿಯುವ ತನಕ ಅವರು ರಥಬೀದಿಯ ಹೊರ ಹೋಗುವಂತಿಲ್ಲ ಹಾಗಾಗಿ ಮಠದಲ್ಲೇ ಕುಳಿತು) ಮನವಿ ಮಾಡಿಕೊಂಡಿದ್ದರು

ತುಂಬಾ ಮುಗ್ಧರಂತೆ ತೋರುವ ಎಳೆಯ ವಯಸ್ಸಿನ ಅವರು ಅಲ್ಲಿ ಯಾರದೋ ಪ್ರಚೋದನೆಯಿಂದ ಮಾತನಾಡಿದಂತಿತ್ತು. ಅಸಲಿಗೆ ಕಾಳಸರ್ಪ ಎನ್ನಲು ಬಾರದೇ ಪಕ್ಕದವರನ್ನು ಅವರು ಕೇಳಿದಂತಿತ್ತು. ಆದರೆ, ತೀರಾ ಇತ್ತೀಚೆಗೆ ದೇಶಾದ್ಯಂತ ರಾಮನ ಹೆಸರಲ್ಲಿ ಕೋಟ್ಯಂತರ ಹಣ ನುಂಗಿದ ಸುದ್ದಿ ಬ್ರೇಕಿಂಗ್ ನ್ಯೂಸ್ ಆಗಿ ದೇಶದೆಲ್ಲೆಡೆ ಗುಲ್ಲೆಬ್ಬಿಸಿದ್ದು ಇನ್ನೂ ಹಸಿ ಇದ್ದಿರುವಾಗಲೇ ಇಲ್ಲಿ ಕಾಳಸರ್ಪದ ಹೆಸರಲ್ಲಿ ಸಾರ್ವಜನಿಕ ಹಣದ ಮತ್ತೊಂದು ದೇವರಾಟಕ್ಕೆ ಸಿದ್ಧತೆ ನಡೆಸಿರುವುದು ಹಲವರ ಅಸಮಾಧಾನಕ್ಕೆ ಕಾರಣವಾಗಿದೆ (ಜಾಲತಾಣಗಳಲ್ಲಿ ಭಕ್ತರೇ ಈ ಬಗ್ಗೆ ಸಾಕಷ್ಟು ಅಪಸ್ವರ ತೆಗೆದಿರುವುದೇ ಇದಕ್ಕೆ ಸಾಕ್ಷಿ).
ತಮ್ಮ ದೇವಸ್ಥಾನವನ್ನು ಮಠವೆಂದು ಮಾಡಿಕೊಂಡು ಸರಕಾರದ ಧಾರ್ಮಿಕ ದತ್ತಿ ಇಲಾಖೆಯಿಂದ ಹೊರಗಿರುವ ಕೋಟ್ಯಂತರ ಆದಾಯವುಳ್ಳ ಈ ಖಾಸಗಿ ಧಾರ್ಮಿಕ ಕೇಂದ್ರದಲ್ಲಿ ಎರಡು ವರ್ಷಕ್ಕೊಮ್ಮೆ ನಡೆಯುವ ಅಧಿಕಾರ ಹಸ್ತಾಂತರದ ಖಾಸಗಿ ಕಾರ್ಯಕ್ರಮಕ್ಕೆ ಸರಕಾರವೇ ಕೋಟ್ಯಂತರ ಸಾರ್ವಜನಿಕ ಹಣವನ್ನು ಮುತುವರ್ಜಿಯಿಂದ ಬಿಡುಗಡೆ ಮಾಡುತ್ತದೆ. ಈ ವರೆಗೆ ಚಿನ್ನದ ರಥ, ವಜ್ರ ಕಿರೀಟವೆಂದು ಭಕ್ತರು ಮತ್ತು ಸಾರ್ವಜನಿಕರಿಂದಲೇ ಹಲವಾರು ಸೇವೆಗಳು ನಡೆದಿದ್ದು ಇದೀಗ ಲೋಕದ ರಕ್ಷಣೆಗಾಗಿ ಮುಂಬರಲಿರುವ ಕಾಳಸರ್ಪವನ್ನೋಡಿಸಲು ಸಾರ್ವಜನಿಕರ ಸಹಕಾರವನ್ನು ಕೋರಲಾಗಿದ್ದುದು ಇಲ್ಲಿ ವಿಶೇಷ.
ಜಗತ್ತಿನ ಜನರ ದೈವ ಭಕ್ತಿಯ ಮೂಲ ಬಹುತೇಕ ಭಯದ ಹಿನ್ನೆಲೆಯಿಂದಲೇ ಬಂದಂತವುಗಳಾಗಿವೆ. ಕನಕದಾಸ, ತುಳಸೀದಾಸ, ಕಬೀರ, ಬೇಡರ ಕಣ್ಣಪ್ಪನಂತವರ ವ್ಯಾವಹಾರಿಕವಲ್ಲದ (ಪ್ರತಿಫಲಾಪೇಕ್ಷೆಗಳಿರದ ಪರಿಶುದ್ಧ) ಭಕ್ತಿಗಿಂತಲೂ ಲಾಭವೋ, ಪುಣ್ಯವೋ ಮೊದಲಾದ ಅಥವಾ ಪೂಜಿಸದೆ ನಿರ್ಲಕ್ಷ್ಯ ತೋರಿದರೆ ಏನು ಅನಾಹುತ ಕಾದಿದೆಯೋ ? ಎಂಬ ಅಳುಕುಗಳ ಹಿನ್ನೆಲೆಗಿಂತ ಶುದ್ಧ ಅಥವಾ ತೋರಿಕೆಯಿರದ ಭಕ್ತಿಯನ್ನು ಹುಡುಕುವುದು ಕಷ್ಟ. ಇದು ಎಲ್ಲಾ ಧರ್ಮ ದೇವರುಗಳಿಗೂ ಕೂಡ ಅನ್ವಯ. ಯಾವುದೂ ಸಹ ಹೊರತಲ್ಲ. ಒಟ್ಟಾರೆ, ದಯೆಯೇ ಧರ್ಮದ ಮೂಲವಯ್ಯ ಎಂದು ದಾರ್ಶನಿಕರು ಹೇಳಿದ್ದನ್ನು ಭಯವೇ ಧರ್ಮದ ಮೂಲವಯ್ಯ ಎಂದು ತಿದ್ದಿಕೊಂಡು ನಡೆಯುವವರೇ ಹಲವರು.
ವೈದಿಕ ಶಾಸ್ತ್ರಗಳ ಪ್ರಕಾರ ಜೋತಿಷವನ್ನು ‘ಪಂಚ ಭವೇತ್, ಪಂಚ ನ ಭವೇತ್ ‘ ಎನ್ನಲಾಗಿದೆ. ಅರ್ಥಾತ್ ಆಡು ಭಾಷೆಯಲ್ಲಿ ಹೇಳುವುದಾದರೆ ಫಿಫ್ಟಿ- ಫಿಫ್ಟಿ ಎಂದರ್ಥ. ಅದೇ ರೀತಿ ಕೇರಳ ಮೂಲದ ಈ ಅಷ್ಟ ಮಂಗಳ ಪ್ರಶ್ನಾ ಚಿಂತನೆಯೂ ಸಹ ಕಾಲ, ಸಂದರ್ಭ, ಶಕುನ ಸೂಚನೆ ಮುಂತಾದವುಗಳ ಆಧಾರದಲ್ಲಿ ಉತ್ತರವನ್ನು ಡೀ ಕೋಡ್ ಮಾಡಿ ಅವರಿಗನ್ನಿಸಿದಂತೆ ಹೇಳಲಾಗುತ್ತದೆಯೇ ಹೊರತು ಬೇರೇನಲ್ಲ. ಈ ರೀತಿಯಾಗಿ ಪ್ರಶ್ನಾ ಚಿಂತನದ ಉತ್ತರಗಳು ಒಬ್ಬನಿಂದ ಒಬ್ಬನಿಗೆ ವ್ಯತ್ಯಾಸವುಳ್ಳದ್ದಾಗಿರುತ್ತದೆ. ನಿಖರತೆಯನ್ನು ನಿರೀಕ್ಷಿಸುವಂತಿಲ್ಲ.
ಹೆಸರಿನಿಂದ ವಿಶೇಷವಾಗಿ ತೋರುವ ಈ ಅಷ್ಟ ಮಂಗಳ ಪ್ರಶ್ನೆ ನಿಜಕ್ಕೂ ಕಾರ್ಯ ಸಾಧುವಾಗಿದ್ದಿದ್ದರೆ ಸೌಜನ್ಯಾ ಪ್ರಕರಣಕ್ಕೆ ಇಷ್ಟೆಲ್ಲಾ ಹೋರಾಟ ಹಾರಾಟಗಳು ಬೇಕೇ ಇದ್ದಿರಲಿಲ್ಲ. ಗೂಢಚಾರಿಕೆ, ಪೊಲೀಸ್ ವ್ಯವಸ್ಥೆಗೆ ಕೆಲಸವೇ ಇರುತ್ತಿರಲಿಲ್ಲ. ದಾವೂದ್ ಎಲ್ಲಿದ್ದಾನೆಂದು ಪ್ರಶ್ನೆ ಹಾಕಿ ಯಾವತ್ತು ಈಚೆ ಕಡೆ ಬರುತ್ತಿದ್ದಾನೆಂದು ಕಂಡುಕೊಂಡು ಗಬಕ್ಕಂತ ಹಿಡಿದು ತಂದು ಗತಿಗಾಣಿಸಬಹುದಿತ್ತು. ಏನೂ ಮಾಡಕಾಗಲ್ಲ ಅವರವರ “ಹೊಟ್ಟೆ’ಪಾಡು ಏನಂತೀರಿ..!?
ಶಂಕರ್ ಸೂರ್ನಳ್ಳಿ
ಲೇಖಕರು
ಇದನ್ನೂ ಓದಿ- ಅದೊಂದು ದೊಡ್ಡ ಕತೆ- ಆತ್ಮಕಥನ ಸರಣಿ – 29 |ಬಿ ಎಡ್ ದಿನಗಳು ಮತ್ತು ವೀರೇಂದ್ರನ ಸಾಹಸಗಳು


