ಬೆಂಗಳೂರು: ಅತ್ಯಾಚಾರ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಜೈಲಿನಲ್ಲಿಯೂ ನಿಯಮ ಉಲ್ಲಂಘಿಸಿ ಮೊಬೈಲ್ ಬಳಸುತ್ತಿದ್ದ ಆರೋಪ ಕೇಳಿಬಂದಿದೆ. ಜೈಲಿನೊಳಗೆ ಪ್ರಜ್ವಲ್ ಮೊಬೈಲ್ನಲ್ಲಿ ಮಾತನಾಡುತ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಭಾರಿ ಚರ್ಚೆಗೆ ಕಾರಣವಾಗಿವೆ.
ಜೈಲಿನಲ್ಲಿ ಸಜಾ ಖೈದಿಗಳಿಗೆ ನಿಗದಿಪಡಿಸಿರುವ ಉಡುಪು ಧರಿಸದೆ ಪ್ರಜ್ವಲ್ ಡಾರ್ಕ್ ಬ್ಲೂ ಟೀ ಶರ್ಟ್ ಧರಿಸಿ ಆರಾಮವಾಗಿ ಕಾಲ ಕಳೆಯುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಪ್ರಜ್ವಲ್ನ ಸೆಲ್ನಲ್ಲಿ ಫ್ಯಾನ್ ಸೇರಿದಂತೆ ಹೆಚ್ಚುವರಿ ಸೌಲಭ್ಯಗಳನ್ನು ಕಲ್ಪಿಸಲಾಗಿತ್ತು ಎಂಬ ಆರೋಪವೂ ಇದೆ. ಈ ಸೌಲಭ್ಯಗಳು ಜೈಲು ಸಿಬ್ಬಂದಿಯ ಸಹಕಾರದಿಂದಲೇ ದೊರೆಯುತ್ತಿದ್ದವೇ ಎಂಬ ಅನುಮಾನ ಇದೀಗ ವ್ಯಕ್ತವಾಗಿದೆ.
ಜೈಲು ನಿಯಮದ ಪ್ರಕಾರ ಮೊಬೈಲ್ ಫೋನ್ ಬಳಕೆಗೆ ಅವಕಾಶವಿಲ್ಲ. ಆದರೆ ಪ್ರಜ್ವಲ್ ಜೈಲಿನೊಳಗೆ ಮೊಬೈಲ್ ಬಳಸುತ್ತಿದ್ದ ಮತ್ತು ಮನೆಯವರೊಂದಿಗೆ ನಿಶ್ಚಿಂತೆಯಿಂದ ಮಾತನಾಡುತ್ತಿದ್ದ ಎಂಬ ಆರೋಪ ಕೇಳಿಬಂದಿದೆ. ಈ ಕುರಿತ ದೃಶ್ಯಾವಳಿ ತನಿಖಾಧಿಕಾರಿಗಳ ಗಮನಕ್ಕೂ ಬಂದಿದೆ ಎನ್ನಲಾಗಿದೆ.
ಇನ್ನು ಜೈಲಿನಲ್ಲಿ ನಡೆದ ದಾಳಿ ವೇಳೆ ಪ್ರಜ್ವಲ್ ಬಳಿಯಿಂದ ಮೊಬೈಲ್ ಫೋನ್, ಪೆನ್ಡ್ರೈವ್ ಮತ್ತು ನೋಟ್ಬುಕ್ ಪತ್ತೆಯಾಗಿರುವುದು ಪ್ರಕರಣಕ್ಕೆ ಮತ್ತಷ್ಟು ತಿರುವು ನೀಡಿದೆ. ಪೆನ್ಡ್ರೈವ್ನಲ್ಲಿ 70ಕ್ಕೂ ಹೆಚ್ಚು ಅಶ್ಲೀಲ ವಿಡಿಯೋಗಳು ಇದ್ದವು ಎನ್ನಲಾಗಿದ್ದು, ಸೆಲ್ನಲ್ಲಿ ನಟಿಯರು ಹಾಗೂ ಮಾಡೆಲ್ಗಳ ಅರೆನಗ್ನ ಚಿತ್ರಗಳು ಪತ್ತೆಯಾಗಿವೆ ಎಂಬ ಮಾಹಿತಿಯೂ ಹೊರಬಿದ್ದಿದೆ. ಮೊಬೈಲ್ನಲ್ಲಿ ಒಟಿಟಿ ಅಪ್ಲಿಕೇಷನ್ಗಳ ಬಳಕೆಯ ಕುರಿತೂ ತನಿಖೆ ನಡೆಯುತ್ತಿದೆ ಎನ್ನಲಾಗಿದೆ.
ಪ್ರಜ್ವಲ್ನ ಸೆಲ್ನಲ್ಲಿ ಮೊಬೈಲ್ ಪತ್ತೆಯಾದ ಪ್ರಕರಣದಲ್ಲಿ ಜೈಲಿನ ಅಸಿಸ್ಟೆಂಟ್ ಸೂಪರಿಂಡೆಂಟ್ ಈರಣ್ಣ ಅವರ ಪಾತ್ರದ ಬಗ್ಗೆಯೂ ಪ್ರಶ್ನೆಗಳು ಎದ್ದಿವೆ. ಜೈಲಿನ ಮೇಲೆ ದಾಳಿ ನಡೆಸಲು ಅಧಿಕಾರಿಗಳು ಬಂದಾಗ ಅವರನ್ನು ಒಳಗೆ ಬಿಡದೆ ಸುಮಾರು 15ರಿಂದ 20 ನಿಮಿಷಗಳ ಕಾಲ ತಡಮಾಡಲಾಗಿತ್ತು ಎಂಬ ಆರೋಪ ಕೇಳಿಬಂದಿದೆ. ದಾಳಿ ಸಂದರ್ಭದಲ್ಲಿ ಯಾವುದೇ ವಸ್ತುಗಳು ಸಿಗದಂತೆ ಮಾಡಲು ಈ ವಿಳಂಬ ಮಾಡಲಾಗಿತ್ತೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎನ್ನಲಾಗಿದೆ.
ದಾಳಿಯಲ್ಲಿ ಸಿಕ್ಕಿರುವ ನೋಟ್ಬುಕ್ ಕೂಡ ಇದೀಗ ತನಿಖೆಯ ಪ್ರಮುಖ ಅಂಶವಾಗಿದೆ. ಅದರಲ್ಲಿ 30ಕ್ಕೂ ಹೆಚ್ಚು ಮೊಬೈಲ್ ಸಂಖ್ಯೆಗಳು ನಮೂದಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ. ತಾಯಿ, ತಂದೆ ಹಾಗೂ ಸ್ನೇಹಿತರ ಸಂಖ್ಯೆಗಳನ್ನೂ ಪ್ರಜ್ವಲ್ ಬೇರೆ ಬೇರೆ ಹೆಸರುಗಳಲ್ಲಿ ಬರೆದಿಟ್ಟಿದ್ದ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಯಿಯ ಮೊಬೈಲ್ ಸಂಖ್ಯೆಯನ್ನು ‘ಪಾರ್ವತಿ’ ಎಂಬ ಹೆಸರಿನಲ್ಲಿ ಹಾಗೂ ತಂದೆಯ ಸಂಖ್ಯೆಯನ್ನು ‘ಶಿವಪ್ಪ’ ಎಂಬ ಹೆಸರಿನಲ್ಲಿ ಬರೆದಿಟ್ಟಿದ್ದ ಎನ್ನಲಾಗಿದೆ. ಸ್ನೇಹಿತೆಯೊಬ್ಬರ ಸಂಖ್ಯೆಯೂ ನೋಟ್ಬುಕ್ನಲ್ಲಿ ದಾಖಲಾಗಿರುವ ಮಾಹಿತಿ ಲಭ್ಯವಾಗಿದೆ. ಈ ಎಲ್ಲ ಸಂಖ್ಯೆಗಳು ಯಾರಿಗೆ ಸೇರಿವೆ, ಜೈಲಿನೊಳಗಿಂದ ಯಾರೊಂದಿಗೆ ಸಂಪರ್ಕ ಹೊಂದಲಾಗುತ್ತಿತ್ತು ಮತ್ತು ಮೊಬೈಲ್ ಅನ್ನು ಹೇಗೆ ಜೈಲಿನೊಳಗೆ ತರಲಾಯಿತು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಇನ್ನು ವಶಕ್ಕೆ ಪಡೆದಿರುವ ಮೊಬೈಲ್ನ ಪಾಸ್ವರ್ಡ್ ಅನ್ನು ಪ್ರಜ್ವಲ್ ಇನ್ನೂ ನೀಡಿಲ್ಲ ಎನ್ನಲಾಗಿದ್ದು, ಮೊಬೈಲ್ನಲ್ಲಿರುವ ಮಾಹಿತಿಯನ್ನು ಪಡೆಯಲು ತನಿಖಾಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಮೊಬೈಲ್, ಪೆನ್ಡ್ರೈವ್ ಹಾಗೂ ನೋಟ್ಬುಕ್ ಪತ್ತೆಯಾದ ಹಿನ್ನೆಲೆಯಲ್ಲಿ ಜೈಲಿನೊಳಗೆ ಪ್ರಜ್ವಲ್ಗೆ ಈ ವಸ್ತುಗಳು ಹೇಗೆ ತಲುಪಿದವು ಮತ್ತು ಇದಕ್ಕೆ ಯಾರಾದರೂ ಜೈಲು ಸಿಬ್ಬಂದಿ ನೆರವು ನೀಡಿದ್ದಾರೆಯೇ ಎಂಬುದನ್ನು ಪತ್ತೆಹಚ್ಚುವುದು ತನಿಖೆಯ ಪ್ರಮುಖ ಭಾಗವಾಗಿದೆ.
ಆದರೆ, ಜೈಲಿನಲ್ಲಿ ಅಶ್ಲೀಲ ಚಿತ್ರಗಳನ್ನು ವೀಕ್ಷಿಸುತ್ತಿದ್ದ, ನಟಿಯರ ಅರೆನಗ್ನ ಚಿತ್ರಗಳನ್ನು ಸಂಗ್ರಹಿಸಿದ್ದ ಎಂಬ ಆರೋಪಗಳು ಸೇರಿದಂತೆ ಕೆಲವು ಮಾಹಿತಿಗಳು ತನಿಖೆಯ ಹಂತದಲ್ಲಿದ್ದು, ಅವುಗಳ ಅಧಿಕೃತ ದೃಢೀಕರಣ ಇನ್ನಷ್ಟೇ ಆಗಬೇಕಿದೆ. ಜೈಲು ನಿಯಮ ಉಲ್ಲಂಘನೆಯ ಆರೋಪ ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕಾನೂನು ಹಾಗೂ ಕಾರಾಗೃಹ ನಿಯಮಗಳಡಿ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಮೊಬೈಲ್ ಪತ್ತೆಯಾದ ಬೆನ್ನಲ್ಲೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ವಿಐಪಿ ಸೆಲ್ನಿಂದ ಪ್ರಜ್ವಲ್ ರೇವಣ್ಣನನ್ನ ಜನರಲ್ ಕೈದಿಗಳಿರುವ ಸೆಲ್ಗೆ ಎತ್ತಂಗಡಿ ಮಾಡಲಾಗಿದೆ. 20 ಕೈದಿಗಳಿರುವ ಬ್ಯಾರಕ್ಗೆ ಪ್ರಜ್ವಲ್ ರೇವಣ್ಣನನ್ನ ಶಿಫ್ಟ್ ಮಾಡಲಾಗಿದ್ದು, ಸಿಸಿಟಿವಿ ಕಣ್ಗಾವಲಿನಲ್ಲಿ ಇರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

