ದೇಹ ಕಾಣುತ್ತೆ, ದನಿ ಕೇಳಲ್ಲ!

ಹೆಣ್ಣಿನ ಉಡುಪನ್ನು ಅಳೆಯುವಷ್ಟು ಆಸಕ್ತಿ ಆಕೆಯ ಮಾತನ್ನು ಕೇಳುವುದರಲ್ಲಿ ಏಕೆ ಇರುವುದಿಲ್ಲ? ಆಕೆಯ ದೇಹದ ಬಗ್ಗೆ ತೀರ್ಪು ಕೊಡುವಷ್ಟು ಆತುರ ಆಕೆ ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಏಕೆ ಇರುವುದಿಲ್ಲ? – ರುಕ್ಮಿಣಿ ನಾಗಣ್ಣವರ, ಬರಹಗಾರ್ತಿ.

ಹೆಣ್ಣು ಪ್ರತಿಭಟಿಸಿದಾಗ ಆಕೆ ಎತ್ತುವ ಪ್ರಶ್ನೆಗಳಿಗಿಂತ ಆಕೆ ಹೇಗೆ ಕಾಣುತ್ತಿದ್ದಾಳೆ ಎಂಬುದೇ ಹೆಚ್ಚು ಚರ್ಚೆಯಾಗುತ್ತದೆ. ಆಕೆ ಏನು ಹೇಳುತ್ತಿದ್ದಾಳೆ ಎನ್ನುವುದಕ್ಕಿಂತ ಆಕೆಯ ಉಡುಪು, ದೇಹ ಮತ್ತು ನೋಟದ ಬಗ್ಗೆ ಮಾತುಗಳು ಶುರುವಾಗುತ್ತವೆ. ಆಕೆಯ ಮಾತುಗಳನ್ನು ಕೇಳಬೇಕಾದ ಸಮಾಜ ಆಕೆಯ ದೇಹದ ಸುತ್ತ ಚರ್ಚೆ ನಡೆಸುತ್ತದೆ. ಇದು ಕೇವಲ ಕೆಲವು ವ್ಯಕ್ತಿಗಳ ಮನಸ್ಥಿತಿಯಲ್ಲ, ಹೆಣ್ಣನ್ನು ನೋಡುವ ನಮ್ಮ ಪಿತೃಪ್ರಭುತ್ವದ ಸಾಮಾಜಿಕ ದೃಷ್ಟಿಯ ಸಮಸ್ಯೆಯೂ ಹೌದು.

ಡಿಜಿಟಲ್ ಲೋಕದ ವಿಕೃತಿ

ಇತ್ತೀಚೆಗೆ ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಗೆ ಸಂಬಂಧಿಸಿದಂತೆ, ಮಹಿಳಾ ಪ್ರತಿಭಟನಾಕಾರರನ್ನು ಹೋಲುವ ಲೈಂಗಿಕೀಕೃತ ನಕಲಿ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ಬಗ್ಗೆ ವರದಿಗಳಾಗಿವೆ. ಇವು ಕೃತಕ ಬುದ್ಧಿಮತ್ತೆಯ ಮೂಲಕ ಸೃಷ್ಟಿಸಿದ ನಕಲಿ ಚಿತ್ರಗಳು ಎಂದು ಸತ್ಯಶೋಧನಾ ವರದಿಗಳು ತಿಳಿಸಿವೆ. ಪ್ರತಿಭಟನೆಯ ಉದ್ದೇಶ ಮತ್ತು ಮಹಿಳೆಯರು ಎತ್ತಿದ ಪ್ರಜಾಸತ್ತಾತ್ಮಕ ಪ್ರಶ್ನೆಗಳ ಬಗ್ಗೆ ಚರ್ಚೆಯಾಗಬೇಕಾದ ಜಾಗದಲ್ಲಿ ಅವರ ದೇಹವನ್ನು ಮುನ್ನೆಲೆಗೆ ತಂದು ವಿಷಯಾಂತರ ಮಾಡುವ ಯತ್ನ ಇಲ್ಲಾಗಿದೆ.

ಇದೇ ಸಂದರ್ಭದಲ್ಲಿ ನೇಹಾ ಬೋರಾ ಅವರ ಪ್ರತಿಭಟನೆಯ ದೃಶ್ಯಗಳನ್ನು ಕೆಲವು ಅಂತರ್ಜಾಲ ಹಾಗೂ ದೃಶ್ಯ ಮಾಧ್ಯಮಗಳು ಬಿಂಬಿಸಿದ ರೀತಿಯೂ ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ. ಆಕೆಯ ಮೊಲೆಗಳ ಮೇಲೆಯೇ ಕ್ಯಾಮೆರಾ ಜೂಮ್ ಮಾಡಿ, ಆ ದೃಶ್ಯಗಳನ್ನು ಪದೇಪದೆ ಪ್ರಸಾರ ಮಾಡಿದ್ದವು. ಈ ದೃಶ್ಯಗಳನ್ನು ಬಳಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಅಶ್ಲೀಲ ಹಾಗೂ ಲೈಂಗಿಕ ಅರ್ಥದ ಅನಿಸಿಕೆಗಳನ್ನು ನೀಡುವ ಮೂಲಕ ತಮ್ಮ ವಿಕೃತ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ.

ಕನ್ನಡದ ಸಾಮಾಜಿಕ ಜಾಲತಾಣದಲ್ಲೂ ದೀಕ್ಷಿತ್ ಕೊಣಾಜೆ ಎಂಬ ಯುವಕ ಹಂಚಿಕೊಂಡಿದ್ದ ಫೋಟೊವೊಂದರ ಕೆಳಗೆ ವ್ಯಕ್ತವಾದ ಅಶ್ಲೀಲ ಅನಿಸಿಕೆಗಳೂ ಇದೇ ಸಾಲಿಗೆ ಸೇರುತ್ತವೆ. ಮಹಿಳೆಯರ ಚಿತ್ರಗಳನ್ನು ಅವರ ವ್ಯಕ್ತಿತ್ವ ಮತ್ತು ಘನತೆಯನ್ನು ಕಡೆಗಣಿಸಿ ನೋಡುವ ಈ ವಿಕೃತ ಮನಸ್ಥಿತಿ ಭಾಷೆ, ಪ್ರಾದೇಶಿಕತೆ ಮತ್ತು ಗಡಿಗಳನ್ನು ಮೀರಿ ಕಾಣಿಸಿಕೊಳ್ಳುತ್ತದೆ.

ಇಲ್ಲಿ ಮತ್ತೊಂದು ತಾಂತ್ರಿಕ ಸತ್ಯವೂ ಇದೆ. ಇಂದಿನ ಸಾಮಾಜಿಕ ಜಾಲತಾಣಗಳ ಸ್ವಯಂಚಾಲಿತ ಗಣಿತೀಯ ಸೂತ್ರಗಳು ಚರ್ಚಾಸ್ಪದ ಹಾಗೂ ಲೈಂಗಿಕೀಕೃತ ವಿಷಯಗಳಿಗೆ ಹೆಚ್ಚು ಪ್ರಚಾರ ಮತ್ತು ಸಾರ್ವಜನಿಕ ತಲುಪುವಿಕೆ ನೀಡುವಂತೆ ವಿನ್ಯಾಸಗೊಂಡಿವೆ. ಈ ಡಿಜಿಟಲ್ ಬಂಡವಾಳಶಾಹಿಯು ಜನರ ವಿಕೃತಿಯನ್ನೇ ತನ್ನ ಲಾಭಕ್ಕೆ ಬಳಸಿಕೊಳ್ಳುತ್ತದೆ. ಒಂದು ಅಸಭ್ಯ ಚಿತ್ರವನ್ನು ಸೃಷ್ಟಿಸಿದವನು ಮಾತ್ರವಲ್ಲ, ಅದನ್ನು ಪರಿಶೀಲಿಸದೆ ಹಂಚುವವರು, ತಮಾಷೆಯ ಪ್ರತಿಕ್ರಿಯೆ ನೀಡುವವರೂ ಈ ಸೈಬರ್ ಹಿಂಸೆಯ ಭಾಗವೇ ಆಗುತ್ತಾರೆ. ಹಂಚುವುದು ಕ್ಷಣದ ಮೋಜಿನ ಕೆಲಸವಿರಬಹುದು, ಆದರೆ ಅದರ ಪರಿಣಾಮವನ್ನು ತಮ್ಮ ಇಡೀ ಬದುಕಿನಲ್ಲಿ ಎದುರಿಸಬೇಕಾದವರು ಆ ಚಿತ್ರದಲ್ಲಿರುವ ಮಹಿಳೆಯರು.

ಮಾಧ್ಯಮದ ನೈತಿಕತೆ

ಸಾಮಾಜಿಕ ಜಾಲತಾಣಗಳಲ್ಲಿ ಅಶ್ಲೀಲ ಕಾಮೆಂಟ್‌ಗಳನ್ನು ಮಾಡುವವರನ್ನು ಮಾತ್ರ ಪ್ರಶ್ನಿಸಿದರೆ ಸಾಲದು. ಮಹಿಳೆಯ ದೇಹವನ್ನು ಅನಗತ್ಯವಾಗಿ ಜೂಮ್ ಮಾಡಿ ಪ್ರಸಾರ ಮಾಡುವ ಜನಪ್ರಿಯತೆಯ ಹಸಿವಿನ ಮಾಧ್ಯಮಗಳನ್ನೂ ಕಟುವಾಗಿ ಪ್ರಶ್ನಿಸಬೇಕಿದೆ. ಪತ್ರಿಕೋದ್ಯಮದ ಉದ್ದೇಶ ಸಾರ್ವಜನಿಕರಿಗೆ ನಿಖರ ಮಾಹಿತಿ ನೀಡುವುದೇ ಹೊರತು, ಮಹಿಳೆಯ ದೇಹವನ್ನು ಪ್ರದರ್ಶನದ ವಸ್ತುವಾಗಿ ಮಾಡಿ ನೋಡುಗರ ಚಾಪಲ್ಯವನ್ನು ಬಂಡವಾಳ ಮಾಡಿಕೊಳ್ಳುವುದಲ್ಲ. ಪ್ರತಿಭಟನೆಯ ವರದಿ ಮಾಡುವಾಗ ಮಹಿಳೆಯ ಹೋರಾಟದ ಉದ್ದೇಶ ಮತ್ತು ಆಕೆಯ ನೈಜ ಪ್ರಶ್ನೆಗಳಿಗೆ ಮೊದಲ ಆದ್ಯತೆ ಸಿಗಬೇಕು.

ಈ ಮನಸ್ಥಿತಿಯ ಬೇರುಗಳು ಇಂದಿನ ಮಾರುಕಟ್ಟೆ ಸಂಸ್ಕೃತಿಯಲ್ಲೂ ಆಳವಾಗಿ ಅಡಗಿವೆ. ಜಾಹೀರಾತುಗಳು, ಸಿನಿಮಾಗಳು ಮತ್ತು ರಂಜನೆಯ ಲೋಕದಲ್ಲಿ ಹೆಣ್ಣನ್ನು ಕೇವಲ ದೃಶ್ಯ ಸೊಬಗಿನ ಅಥವಾ ಭೋಗದ ವಸ್ತುವಾಗಿ ಕಾಣುವ ರೂಢಿ ಬೆಳೆಸಲಾಗಿದೆ. ಹೀಗಾಗಿ ಸಮಾಜವು ಕ್ರೀಡಾಂಗಣದಲ್ಲಾಗಲಿ, ಬೀದಿ ಹೋರಾಟದಲ್ಲಾಗಲಿ ಅಥವಾ ವೃತ್ತಿಪರ ರಂಗದಲ್ಲಾಗಲಿ ಹೆಣ್ಣನ್ನು ಒಬ್ಬ ಸ್ವತಂತ್ರ ಚಿಂತಕಳಾಗಿ ನೋಡುವುದಕ್ಕಿಂತ ಮುಂಚೆ ಒಂದು ದೃಶ್ಯವಾಗಿ ನೋಡಲು ಹವಣಿಸುತ್ತದೆ.

ಉಡುಪಿನ ಅಳತೆಗೋಲು

ಮಹಿಳಾ ಕ್ರೀಡಾಪಟುಗಳ ವಿಚಾರದಲ್ಲಿಯೂ ಇದೇ ರೀತಿಯ ನಿಯಂತ್ರಣದ ಮನಸ್ಥಿತಿ ಕಾಣಿಸುತ್ತದೆ. 2005ರಲ್ಲಿ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ಅವರ ಉಡುಪಿನ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಕ್ರೀಡಾಂಗಣದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಬೇಕಾದ ಆಟಗಾರ್ತಿಯ ಉಡುಪೇ ಸಾಂಸ್ಕೃತಿಕ ಚರ್ಚೆಯ ವಿಷಯವಾಗಿತ್ತು. ಮಹಿಳಾ ಕ್ರೀಡಾಪಟು ಗೆದ್ದಾಗ ಆಕೆಯ ಸಾಧನೆಯನ್ನು ಮೆಚ್ಚುವ ಸಮಾಜ, ತನ್ನ ಉಡುಪಿನ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಆಕೆಯ ಸ್ವಾತಂತ್ರ್ಯವನ್ನು ಒಪ್ಪಿಕೊಳ್ಳಲು ಏಕೆ ಹಿಂಜರಿಯುತ್ತದೆ? ಉಡುಪು ಹೇಗಿದ್ದರೂ ಅದು ಯಾರಿಗೂ ಆಕೆಯ ಸಮ್ಮತಿಯಿಲ್ಲದೆ ಆಕೆಯ ಚಿತ್ರವನ್ನು ದುರುಪಯೋಗಪಡಿಸಿಕೊಳ್ಳುವ ಹಕ್ಕನ್ನು ಕೊಡುವುದಿಲ್ಲ.

ಸದಾ ತನ್ನ ದೇಹ, ಉಡುಪು, ನೋಟ ಮತ್ತು ನಡೆನುಡಿಯ ಬಗ್ಗೆ ಸಮಾಜದ ಕಣ್ಣುಗಳು ತೀರ್ಪು ನೀಡುತ್ತಿರುತ್ತವೆ ಎಂಬ ಅರಿವು ಹೆಣ್ಣಿನ ಮೇಲೆ ನಿರಂತರ ಮಾನಸಿಕ ಒತ್ತಡವನ್ನು ಉಂಟುಮಾಡುತ್ತದೆ. ಸಾರ್ವಜನಿಕ ವಲಯದಲ್ಲಿ ಕೆಲಸ ಮಾಡುವ ಮಹಿಳೆಯರು ತಮ್ಮ ಆಲೋಚನೆ ಮತ್ತು ಕೆಲಸದ ಮೇಲಿನ ಗಮನಕ್ಕಿಂತ, “ನನ್ನ ನೋಟ ಹೇಗಿದೆ?” ಎಂಬ ಅನಗತ್ಯ ಆತ್ಮವೀಕ್ಷಣೆಗೂ ಒಳಗಾಗಬೇಕಾದ ಅನಿವಾರ್ಯತೆಯನ್ನು ಈ ವ್ಯವಸ್ಥೆ ಸೃಷ್ಟಿಸುತ್ತದೆ. ಇದು ಹೆಣ್ಣಿನ ಆತ್ಮವಿಶ್ವಾಸವನ್ನು ಕುಗ್ಗಿಸುವ ಪರೋಕ್ಷ ಅಸ್ತ್ರವೂ ಹೌದು.

ಸಾನಿಯಾ ಮಿರ್ಜಾ

ಬೀದಿಯ ಅಭದ್ರತೆ

ಇದೇ ಸಂದರ್ಭದಲ್ಲಿ, ಅಕ್ಟೋಬರ್ 3ರಂದು ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯ ವೇಳೆ ಮಹಿಳಾ ಪತ್ರಕರ್ತೆಯರ ಮೇಲೆ ನಡೆದಿದೆ ಎನ್ನಲಾದ ದೌರ್ಜನ್ಯದ ಘಟನೆಗಳು ಆತಂಕಕಾರಿ. ವರದಿಗಾರಿಕೆ ಮಾಡುತ್ತಿದ್ದ ಮಹಿಳಾ ಪತ್ರಕರ್ತೆಯೊಬ್ಬರನ್ನು ಅಧಿಕಾರಿಯೊಬ್ಬರು ಮೊಲೆ ಹಿಡಿದು ನೂಕಿದ್ದಾರೆ ಎಂದು ಆರೋಪಿಸಿದ್ದಾರೆ. ಒಟ್ಟು ಮೂವರು ಮಹಿಳಾ ಪತ್ರಕರ್ತರು ದೆಹಲಿ ಪೊಲೀಸ್ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ ನಡೆದಿದೆ ಎಂದು ದೂರಿಟ್ಟಿದ್ದಾರೆ.

ಈ ಗಂಭೀರ ಆರೋಪಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಪರಿಗಣಿಸಿ ವರದಿ ಕೇಳಿದೆ. ರಕ್ಷಣೆ ನೀಡಬೇಕಾದ ಕಾನೂನು ಪಾಲಕರೇ ಇಂತಹ ಕೃತ್ಯಕ್ಕೆ ಇಳಿದಾಗ ಮಹಿಳೆಯರಲ್ಲಿ ಅಭದ್ರತೆ ಹೆಚ್ಚಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಭಟಿಸುವ ಮತ್ತು ವರದಿ ಮಾಡುವ ಮಹಿಳೆಯರ ಸುರಕ್ಷತೆ ಹಾಗೂ ಘನತೆಯ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವನ್ನು ಈ ಘಟನೆ ಮುಂದಿಡುತ್ತದೆ.

ಸಾಂಸ್ಥಿಕ ಹೊಣೆಗಾರಿಕೆ

ಕೇವಲ ನೈತಿಕತೆಯ ಮಾತಿನಿಂದ ಅಥವಾ ಸಾಮಾಜಿಕ ಉಪದೇಶಗಳಿಂದ ಮಾತ್ರ ಇಂತಹ ಅಪರಾಧಗಳನ್ನು ತಡೆಯಲು ಸಾಧ್ಯವಿಲ್ಲ. ಅಂತರ್ಜಾಲ ವಲಯದಲ್ಲಿ ಮಹಿಳೆಯರ ನಕಲಿ ಚಿತ್ರಗಳನ್ನು ಸೃಷ್ಟಿಸುವ ಮತ್ತು ಹಂಚುವ ಸೈಬರ್ ಅಪರಾಧಿಗಳಿಗೆ ತಕ್ಷಣ ಶಿಕ್ಷೆಯಾಗುವಂತೆ ದಂಡನಾತ್ಮಕ ಪ್ರಕ್ರಿಯೆಗಳು ಚುರುಕಾಗಬೇಕಿದೆ. ಹಾಗೆಯೇ, ಸುದ್ದಿವಾಹಿನಿಗಳು ಮತ್ತು ಡಿಜಿಟಲ್ ಮಾಧ್ಯಮಗಳು ಮಹಿಳೆಯರ ವರದಿಗಾರಿಕೆ ಮಾಡುವಾಗ ಅನುಸರಿಸಬೇಕಾದ ನೈತಿಕ ಮಾರ್ಗಸೂಚಿಗಳನ್ನು ಪ್ರಸಾರ ಭಾರತಿ ಹಾಗೂ ಮಾಧ್ಯಮ ಮಂಡಳಿಗಳು ಕಡ್ಡಾಯಗೊಳಿಸುವ ಮೂಲಕ ಲೈಂಗಿಕ ಕುತೂಹಲ ಕೆರಳಿಸುವ ಮಾಧ್ಯಮಗಳ ಮೇಲೆ ಸಾಂಸ್ಥಿಕ ನಿಯಂತ್ರಣ ಹೇರಬೇಕಿದೆ.

ಇದರ ಜೊತೆಗೆ, ಸಮಾಜದಲ್ಲಿ ದೀರ್ಘಕಾಲಿಕ ಬದಲಾವಣೆ ತರಲು ಶಾಲಾ-ಕಾಲೇಜುಗಳ ಹಂತದಲ್ಲೇ ಲಿಂಗ ಸಂವೇದನಾಶೀಲತೆಯ ತರಬೇತಿಯನ್ನು ಶಿಕ್ಷಣ ವ್ಯವಸ್ಥೆಯ ಭಾಗವಾಗಿಸಬೇಕಿದೆ. ಸಣ್ಣ ವಯಸ್ಸಿನಿಂದಲೇ ಹುಡುಗ-ಹುಡುಗಿಯರಲ್ಲಿ ಪರಸ್ಪರ ಗೌರವ, ಪ್ರಜ್ಞಾವಂತಿಕೆ ಮತ್ತು ಸಮಾನತೆಯ ಆಲೋಚನೆ ಬೆಳೆಸಿದಾಗ ಮಾತ್ರ ಇಂತಹ ಪಿತೃಪ್ರಭುತ್ವದ ವಿಕೃತಿಗಳಿಗೆ ತಡೆ ಹಾಕುವುದು ಸಾಧ್ಯ.

ಬದಲಾಗಲಿ ದೃಷ್ಟಿ

ಇದರಲ್ಲಿ ಸಾಮಾಜಿಕ ಜಾಲತಾಣ ಬಳಸುವ ಪ್ರತಿಯೊಬ್ಬರಿಗೂ ನೈತಿಕ ಹೊಣೆಗಾರಿಕೆಯಿದೆ. ಮಹಿಳೆಯರ ಬಗ್ಗೆ ಅಸಭ್ಯ ಚಿತ್ರಗಳು ಅಥವಾ ಅವಹೇಳನಕಾರಿ ಬರಹಗಳು ಕಂಡಾಗ ಅವನ್ನು ಮತ್ತಷ್ಟು ಹರಡುವ ಬದಲು ಪ್ರಶ್ನಿಸುವ ಮತ್ತು ತಕ್ಷಣವೇ ದೂರು ದಾಖಲಿಸುವ ಅಥವಾ ವರದಿ ಮಾಡುವ ಪ್ರಜ್ಞಾವಂತ ಮನೋಭಾವ ಬೆಳೆಸಿಕೊಳ್ಳಬೇಕು.

ಹೆಣ್ಣಿನ ಉಡುಪನ್ನು ಅಳೆಯುವಷ್ಟು ಆಸಕ್ತಿ ಆಕೆಯ ಮಾತನ್ನು ಕೇಳುವುದರಲ್ಲಿ ಏಕೆ ಇರುವುದಿಲ್ಲ? ಆಕೆಯ ದೇಹದ ಬಗ್ಗೆ ತೀರ್ಪು ಕೊಡುವಷ್ಟು ಆತುರ ಆಕೆ ಎದುರಿಸುತ್ತಿರುವ ಸಮಸ್ಯೆಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಏಕೆ ಇರುವುದಿಲ್ಲ?

ಮನೆ, ಶಾಲೆ, ಸಾರ್ವಜನಿಕ ವೇದಿಕೆಗಳು ಹಾಗೂ ಡಿಜಿಟಲ್ ಜಗತ್ತಿನಲ್ಲಿ ಹೆಣ್ಣನ್ನು ಒಬ್ಬ ಸ್ವತಂತ್ರ ಚಿಂತಕಳಾಗಿ, ಸಮಾನ ವ್ಯಕ್ತಿಯಾಗಿ ಕಾಣುವ ಪ್ರಬುದ್ಧ ಸಂಸ್ಕೃತಿಯನ್ನು ನಾವು ಕಟ್ಟಬೇಕಿದೆ.

ರುಕ್ಮಿಣಿ ನಾಗಣ್ಣವರ

ಇವರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ತೋರಣಗಟ್ಟಿಯವರು. ಕವಯಿತ್ರಿ, ಬರಹಗಾರ್ತಿ. ಪ್ರಸ್ತುತ ಬೆಂಗಳೂರಿನ ಸರ್ಕಾರೇತರ ಸಂಸ್ಥೆಯೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

More articles

Latest article

Most read