ಬೆಂಗಳೂರು ಅ. 11: ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾಗಿರುವ ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಬೆಳಗಾವಿಯ ಹಿಂಡಲಗಾ ಜೈಲಿಗೆ ಸ್ಥಳಾಂತರಿಸುವ ಪ್ರಕ್ರಿಯೆಗೆ ತಾತ್ಕಾಲಿಕ ಹಿನ್ನಡೆಯಾಗಿದೆ. ಬೆಂಗಳೂರಿನಿಂದ ಬೆಳಗಾವಿಗೆ ಕರೆದೊಯ್ಯುತ್ತಿದ್ದ ಪೊಲೀಸರು, ಅರ್ಧ ದಾರಿಯಿಂದಲೇ ಪ್ರಜ್ವಲ್ ನನ್ನು ವಾಪಸ್ ಕರೆತಂದಿದ್ದಾರೆ ಎಂದು ವರದಿಯಾಗಿದೆ.
ಹಿಂಡಲಗಾ ಜೈಲಿನಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಪ್ರಜ್ವಲ್ ರೇವಣ್ಣನಿಗೆ ಅಗತ್ಯ ಭದ್ರತೆ ಒದಗಿಸುವುದು ಕಷ್ಟ ಎಂಬ ಅಭಿಪ್ರಾಯವನ್ನು ಜೈಲು ಅಧೀಕ್ಷಕರು ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಆತನನ್ನು ಬೆಳಗಾವಿ ಜೈಲಿಗೆ ಸ್ಥಳಾಂತರಿಸುವ ನಿರ್ಧಾರಕ್ಕೆ ತಾತ್ಕಾಲಿಕ ತಡೆ ಉಂಟಾಗಿದೆ.
ಪ್ರಜ್ವಲ್ ನನ್ನು ಮತ್ತೆ ಬೆಂಗಳೂರಿಗೆ ಕರೆತಂದಿರುವ ಹಿನ್ನೆಲೆಯಲ್ಲಿ, ಆತನನ್ನು ಬೆಳಗಾವಿ ಜೈಲಿಗೆ ಸ್ಥಳಾಂತರಿಸುವ ಕುರಿತು ಕಾರಾಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತೊಮ್ಮೆ ಚರ್ಚೆ ನಡೆಸಲಿದ್ದಾರೆ. ಕಾರಾಗೃಹ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಈ ಸಂಬಂಧ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿದುಬಂದಿದೆ.
ಇಂದು ಪ್ರಜ್ವಲ್ ರೇವಣ್ಣ ನನ್ನು ಬೆಳಗಾವಿಗೆ ಸ್ಥಳಾಂತರಿಸಬೇಕೇ ಅಥವಾ ಬೇಡವೇ ಎಂಬ ಕುರಿತು ಅಧಿಕಾರಿಗಳ ನಡುವೆ ಮತ್ತೆ ಚರ್ಚೆ ನಡೆಯುವ ಸಾಧ್ಯತೆಯಿದೆ. ಹಿಂಡಲಗಾ ಜೈಲಿನ ಸಿಬ್ಬಂದಿ ಕೊರತೆ, ಭದ್ರತಾ ವ್ಯವಸ್ಥೆ ಹಾಗೂ ಸ್ಥಳಾಂತರದ ಕಾರ್ಯಸಾಧ್ಯತೆಯನ್ನು ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳುವ ನಿರೀಕ್ಷೆಯಿದೆ.
ಪ್ರಜ್ವಲ್ ರೇವಣ್ಣನ ಜೈಲು ಸ್ಥಳಾಂತರ ವಿಚಾರ ಈಗ ಕಾರಾಗೃಹ ಇಲಾಖೆಯ ಮುಂದಿನ ನಿರ್ಧಾರದ ಮೇಲೆ ಅವಲಂಬಿತವಾಗಿದೆ.

