ನವದೆಹಲಿ ಅ 11: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ವಿರುದ್ಧದ ಹೋರಾಟವನ್ನು ತೀವ್ರಗೊಳಿಸಿರುವ ಇಂಡಿಯಾ ಒಕ್ಕೂಟದ ನಾಯಕರು ಇಂದು ದೆಹಲಿಯಲ್ಲಿ ಸುಪ್ರೀಂ ಕೋರ್ಟ್ ಚಲೋಗೆ ಕರೆ ನೀಡಿದ್ದಾರೆ. “ಡರೋ ಮತ್” (ಹೆದರಬೇಡಿ) ಎಂಬ ಘೋಷಣೆಯೊಂದಿಗೆ ನಡೆಯಲಿರುವ ಈ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಸೇರಿದಂತೆ ಇಂಡಿಯಾ ಒಕ್ಕೂಟದ ವಿವಿಧ ಪಕ್ಷಗಳ ನಾಯಕರು ಭಾಗವಹಿಸಲಿದ್ದಾರೆ.
ಮತದಾರರ ಹಕ್ಕುಗಳ ರಕ್ಷಣೆ, ಮತಗಳ್ಳತನಕ್ಕೆ ಅಂತ್ಯ ಹಾಡುವುದು ಮತ್ತು ಚುನಾವಣಾ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಕಾಪಾಡುವುದು ಪ್ರತಿಭಟನೆಯ ಪ್ರಮುಖ ಉದ್ದೇಶಗಳಾಗಿವೆ. SIR ಪ್ರಕ್ರಿಯೆಯನ್ನು ಸ್ಥಗಿತಗೊಳಿಸಬೇಕು, ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆ ನೀಡಬೇಕು ಹಾಗೂ ಮತಪತ್ರಗಳ ಬಳಕೆಯನ್ನು ಮರಳಿ ಜಾರಿಗೆ ತರಬೇಕು ಎಂಬ ಬೇಡಿಕೆಗಳನ್ನು ವಿರೋಧ ಪಕ್ಷಗಳು ಮುಂದಿಟ್ಟಿವೆ.
ರಾಹುಲ್ ಗಾಂಧಿ ಅವರು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ಸಂದೇಶದಲ್ಲಿ, ಪಕ್ಷ, ಜಾತಿ, ಧರ್ಮ, ಲಿಂಗ ಮತ್ತು ರಾಜ್ಯಗಳ ಗಡಿಗಳನ್ನು ಮೀರಿ ಪ್ರಜಾಪ್ರಭುತ್ವ ಹಾಗೂ ಸಂವಿಧಾನದಲ್ಲಿ ನಂಬಿಕೆ ಹೊಂದಿರುವ ಎಲ್ಲರೂ ಒಗ್ಗೂಡಬೇಕು ಎಂದು ಕರೆ ನೀಡಿದ್ದಾರೆ. ಶಾಂತಿಯುತವಾಗಿ ಮೆರವಣಿಗೆ ನಡೆಸಿ, ದೇಶದ ಪರವಾಗಿ ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿಗಳಿಗೆ ಮನವಿ ಸಲ್ಲಿಸುವ ಉದ್ದೇಶವನ್ನು ಅವರು ತಿಳಿಸಿದ್ದಾರೆ.
ಆದರೆ, ಇಂಡಿಯಾ ಒಕ್ಕೂಟದ ನಾಯಕರು ಮುಖ್ಯ ನ್ಯಾಯಮೂರ್ತಿ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಭೇಟಿ ಮಾಡಲು ಮಾಡಿದ ಪ್ರಯತ್ನಕ್ಕೆ ಅನುಮತಿ ದೊರೆತಿಲ್ಲ. SIR ಮತ್ತು ಮುಖ್ಯ ಚುನಾವಣಾ ಆಯುಕ್ತರ ಕುರಿತಾದ ವಿಷಯಗಳು ಈಗಾಗಲೇ ನ್ಯಾಯಾಲಯದ ವಿಚಾರಣೆಯಲ್ಲಿರುವುದರಿಂದ, ಈ ಕುರಿತು ಆಡಳಿತಾತ್ಮಕವಾಗಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ ಎಂಬ ನಿಲುವನ್ನು ಸಿಜೆಐ ವ್ಯಕ್ತಪಡಿಸಿದ್ದಾರೆ.
ಈ ವಿಷಯದಲ್ಲಿ ನ್ಯಾಯಾಲಯದ ಗಮನ ಸೆಳೆಯಲು ಬಯಸಿದರೆ, ನಿಯಮಿತ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅರ್ಜಿ ಸಲ್ಲಿಸಬಹುದು ಎಂಬ ಸೂಚನೆಯನ್ನೂ ಅವರು ನೀಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೂಲಭೂತ ಹಕ್ಕುಗಳಿಗೆ ಧಕ್ಕೆಯಾದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ನಾಗರಿಕರ ನೆರವಿಗೆ ಸದಾ ಸಿದ್ಧವಿದೆ ಎಂಬ ಅಭಿಪ್ರಾಯವನ್ನೂ ಸಿಜೆಐ ವ್ಯಕ್ತಪಡಿಸಿದ್ದಾರೆ.
ಸಿಜೆಐ ಭೇಟಿಗೆ ನಿರಾಕರಣೆ ಎದುರಾದರೂ ಹೋರಾಟದಿಂದ ಹಿಂದೆ ಸರಿಯದಿರಲು ವಿರೋಧ ಪಕ್ಷಗಳು ನಿರ್ಧರಿಸಿವೆ. ದೆಹಲಿಯ ಕನ್ನಾಟ್ ಪ್ಲೇಸ್–ಬರಾಖಂಬಾ ರಸ್ತೆ ಜಂಕ್ಷನ್ನಿಂದ ಸುಪ್ರೀಂ ಕೋರ್ಟ್ವರೆಗೆ ಮೆರವಣಿಗೆ ನಡೆಸುವ ಯೋಜನೆ ರೂಪಿಸಲಾಗಿದೆ. ಪ್ರತಿಭಟನೆಯ ಹಿನ್ನೆಲೆಯಲ್ಲಿ ದೆಹಲಿಯ ಕೆಲವು ಮೆಟ್ರೋ ನಿಲ್ದಾಣಗಳಲ್ಲಿ ಪ್ರವೇಶ ಮತ್ತು ನಿರ್ಗಮನ ನಿರ್ಬಂಧಗಳನ್ನು ವಿಧಿಸಲಾಗಿದೆ.
ಚುನಾವಣಾ ಪ್ರಕ್ರಿಯೆಯ ಪಾರದರ್ಶಕತೆ ಮತ್ತು ಮತದಾರರ ಹಕ್ಕುಗಳ ರಕ್ಷಣೆಗಾಗಿ ಬೀದಿಗಿಳಿದಿರುವ ವಿರೋಧ ಪಕ್ಷಗಳು, ತಮ್ಮ ಬೇಡಿಕೆಗಳ ಬಗ್ಗೆ ನ್ಯಾಯಾಂಗದ ಗಮನ ಸೆಳೆಯಲು ಮುಂದಾಗಿವೆ. ಮತ್ತೊಂದೆಡೆ, ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ವಿಷಯಗಳನ್ನು ನ್ಯಾಯಾಂಗ ಪ್ರಕ್ರಿಯೆಯ ಮೂಲಕವೇ ಮುಂದುವರಿಸಬೇಕು ಎಂಬುದು ಸಿಜೆಐ ಅವರ ನಿಲುವಾಗಿದೆ. ಹೀಗಾಗಿ, ದೆಹಲಿಯ ಇಂದಿನ ಪ್ರತಿಭಟನೆ ರಾಜಕೀಯ ಹೋರಾಟದ ಜೊತೆಗೆ ನ್ಯಾಯಾಂಗದ ಗಮನ ಸೆಳೆಯುವ ಪ್ರಯತ್ನವಾಗಿಯೂ ಮಹತ್ವ ಪಡೆದುಕೊಂಡಿದೆ.

