ನವದೆಹಲಿ ಅ. 12: ಶಾಂತಿಯುತವಾಗಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದ ತಮ್ಮ ಮೇಲೆ ದೆಹಲಿ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್) ಸಿಬ್ಬಂದಿ ಹಲ್ಲೆ ನಡೆಸಿ, ಬಲವಂತವಾಗಿ ಪೊಲೀಸ್ ವಾಹನಕ್ಕೆ ಎಳೆದುಕೊಂಡು ಹೋಗಿದ್ದಾರೆ ಎಂದು ರಾಜ್ಯಸಭಾ ಸದಸ್ಯ ಹಾಗೂ ಸಿಪಿಐ(ಎಂ) ಸಂಸದ ಜಾನ್ ಬ್ರಿಟ್ಟಾಸ್ ಆರೋಪಿಸಿದ್ದಾರೆ. ಈ ಸಂಬಂಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ದೂರು ಸಲ್ಲಿಸಿರುವ ಅವರು, ಪ್ರಕರಣದ ಕುರಿತು ಸ್ವತಂತ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಡೆಯುತ್ತಿರುವ ಪ್ರಜಾಸತ್ತಾತ್ಮಕ ಪ್ರತಿಭಟನೆಗಳ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಬ್ರಿಟ್ಟಾಸ್ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 11ರಂದು ಮಧ್ಯಾಹ್ನ ಸುಮಾರು 12.30ರ ವೇಳೆಗೆ ದೆಹಲಿಯ ಕನ್ನಾಟ್ ಪ್ಲೇಸ್‌ನಲ್ಲಿ ಯುವ ಹೋರಾಟಗಾರರ ಮೇಲೆ ಪೊಲೀಸರು ಹಲ್ಲೆ ನಡೆಸಿ ವಶಕ್ಕೆ ಪಡೆಯುತ್ತಿರುವ ಮಾಹಿತಿ ತಿಳಿದು ತಾವು ಸ್ಥಳಕ್ಕೆ ತೆರಳಿದ್ದಾಗಿ ಹೇಳಿದ್ದಾರೆ. ಅಲ್ಲಿ ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದಾಗ ಪೊಲೀಸರು ತಮ್ಮನ್ನು ಬಲವಂತವಾಗಿ ಎಳೆದೊಯ್ದಿದ್ದಾರೆ ಎಂದು ಆರೋಪಿಸಿದ್ದಾರೆ.
ತಾವು ರಾಜ್ಯಸಭೆಯ ಹಾಲಿ ಸದಸ್ಯ ಎಂದು ಪದೇಪದೇ ತಿಳಿಸಿದರೂ ಪೊಲೀಸರು ಸುಮಾರು 50 ಮೀಟರ್ ದೂರ ಎಳೆದುಕೊಂಡು ಹೋಗಿದ್ದಾರೆ. ಬಳಿಕ ತಮ್ಮನ್ನು ಬಲವಂತವಾಗಿ ಎತ್ತಿ ಪೊಲೀಸ್ ವಾಹನದೊಳಗೆ ಹಾಕಿ, ವಾಹನದಲ್ಲಿ ಹಲ್ಲೆ ನಡೆಸಿ ಆಸನಕ್ಕೆ ಒತ್ತಿ ಹಿಡಿದಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದಾರೆ. ಯಾವುದೇ ಪ್ರಚೋದನೆ ಇಲ್ಲದಿದ್ದರೂ ಪೊಲೀಸರು ಇಂತಹ ಕ್ರಮ ಕೈಗೊಂಡಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.
ವಾಹನದೊಳಗೆ ಹಲ್ಲೆ ನಡೆಸಿದ ಬಳಿಕ ತಮ್ಮನ್ನು ರಸ್ತೆಯ ಬದಿಯಲ್ಲಿ ಬಿಟ್ಟು ಹೋಗಲಾಗಿದೆ. ಸಂಬಂಧಪಟ್ಟ ಡಿಸಿಪಿ ಅವರು ತಮ್ಮನ್ನು ವಶದಲ್ಲಿಟ್ಟುಕೊಳ್ಳುವುದು ಕಾನೂನುಬಾಹಿರ ಎಂದು ತಿಳಿಸಿದ ನಂತರ ಬಿಡುಗಡೆ ಮಾಡಲಾಗಿದೆ ಎಂದು ಬ್ರಿಟ್ಟಾಸ್ ಹೇಳಿದ್ದಾರೆ. ಹಲ್ಲೆಯಿಂದಾಗಿ ತೀವ್ರ ದೈಹಿಕ ನೋವು ಮತ್ತು ತೊಂದರೆ ಅನುಭವಿಸುತ್ತಿರುವುದಾಗಿಯೂ ತಿಳಿಸಿದ್ದಾರೆ.
ಘಟನೆಯನ್ನು ಪ್ರತ್ಯಕ್ಷವಾಗಿ ಕಂಡ ಜಾರ್ಖಂಡ್ ಮೂಲದ ಯುವಕನೊಬ್ಬ ತಮಗೆ ನೆರವಾಗಿದ್ದಾನೆ. ಆತನ ಸಾಕ್ಷ್ಯವನ್ನು ಸುರಕ್ಷಿತವಾಗಿ ದಾಖಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಘಟನೆಯ ವಿಡಿಯೋಗಳು, ಪತ್ರಕರ್ತರು ಮತ್ತು ಸಾರ್ವಜನಿಕರು ಮಾಡಿರುವ ದಾಖಲೆಗಳು ಸೇರಿದಂತೆ ಲಭ್ಯವಿರುವ ಎಲ್ಲ ಸಾಕ್ಷ್ಯಗಳನ್ನು ಸಂಗ್ರಹಿಸಿ ಸಂರಕ್ಷಿಸಬೇಕು. ಹಲ್ಲೆಯಲ್ಲಿ ಭಾಗಿಯಾದ ಪೊಲೀಸರಷ್ಟೇ ಅಲ್ಲದೆ, ಅವರಿಗೆ ಸೂಚನೆ ನೀಡಿದ ಅಥವಾ ಘಟನೆಯ ಬಗ್ಗೆ ತಿಳಿದಿದ್ದ ಮೇಲಧಿಕಾರಿಗಳ ಪಾತ್ರವನ್ನೂ ಸ್ವತಂತ್ರವಾಗಿ ತನಿಖೆ ಮಾಡಬೇಕು ಎಂದು ರಾಷ್ಟ್ರಪತಿಗೆ ಸಲ್ಲಿಸಿರುವ ದೂರಿನಲ್ಲಿ ಮನವಿ ಮಾಡಿದ್ದಾರೆ.
ಸುಪ್ರೀಂ ಕೋರ್ಟ್ ಸೂಚನೆಗಳ ನಡುವೆಯೇ ಹಲ್ಲೆ?
ಶಾಂತಿಯುತ ಪ್ರತಿಭಟನಾಕಾರರ ರಕ್ಷಣೆ, ಅಕ್ರಮ ಬಂಧನಕ್ಕೆ ತಡೆ, ಇಂಟರ್‌ನೆಟ್ ಸಂಪರ್ಕ ಹಾಗೂ ಮೆಟ್ರೋ ಮತ್ತು ರೈಲು ಸೇವೆಗಳ ಸಾಮಾನ್ಯ ಕಾರ್ಯಾಚರಣೆಯನ್ನು ಖಚಿತಪಡಿಸುವಂತೆ ಸುಪ್ರೀಂ ಕೋರ್ಟ್ ಸ್ಪಷ್ಟ ಸೂಚನೆಗಳನ್ನು ನೀಡಿದ ಕೆಲವೇ ಗಂಟೆಗಳಲ್ಲಿ ಈ ಘಟನೆ ನಡೆದಿದೆ ಎಂದು ಬ್ರಿಟ್ಟಾಸ್ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಹಿಂದಿನ ದಿನವೂ ಕೇರಳದ ಮಾಜಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ವಶಕ್ಕೆ ಒಳಗಾಗಿದ್ದರು. ಅವರನ್ನು ದೆಹಲಿಯ ವಿವಿಧೆಡೆಗೆ ಕರೆದೊಯ್ಯಲಾಗಿದ್ದು, ಆಹಾರ ಮತ್ತು ಅಗತ್ಯ ಔಷಧಗಳನ್ನು ನೀಡುವಲ್ಲಿ ವಿಳಂಬವಾಗಿದೆ ಎಂಬ ಆತಂಕಗಳೂ ವ್ಯಕ್ತವಾಗಿದ್ದವು ಎಂದು ಅವರು ತಿಳಿಸಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತರ ರಾಜೀನಾಮೆಗೆ ಆಗ್ರಹಿಸುವುದು ಮತ್ತು ಚುನಾವಣಾ ವ್ಯವಸ್ಥೆಯ ಸಮಗ್ರತೆಯನ್ನು ಕಾಪಾಡುವಂತೆ ಒತ್ತಾಯಿಸುವುದು ಪ್ರಜಾಸತ್ತಾತ್ಮಕ ಹಕ್ಕುಗಳ ಭಾಗವಾಗಿದೆ. ಸರ್ಕಾರದ ನಿರ್ಧಾರಗಳನ್ನು ವಿರೋಧಿಸುವವರ ಮೇಲೆ ದೈಹಿಕ ಬಲ ಪ್ರಯೋಗಿಸುವುದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾದದ್ದು ಎಂದು ಬ್ರಿಟ್ಟಾಸ್ ಹೇಳಿದ್ದಾರೆ.
ಸಂವಿಧಾನದ ಹಕ್ಕುಗಳ ಉಲ್ಲಂಘನೆಯ ಆರೋಪ
ತಮ್ಮ ಮೇಲಿನ ಪೊಲೀಸ್ ಕ್ರಮವು ಸಂವಿಧಾನದ 19(1)(a)ನೇ ವಿಧಿ ನೀಡಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ, 19(1)(b)ನೇ ವಿಧಿ ನೀಡಿರುವ ಶಾಂತಿಯುತವಾಗಿ ಸಭೆ ಸೇರುವ ಹಕ್ಕು ಹಾಗೂ 21ನೇ ವಿಧಿ ಖಾತರಿಪಡಿಸಿರುವ ಜೀವ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಉಲ್ಲಂಘನೆಯ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ.
ರಾಜ್ಯಸಭಾ ಸದಸ್ಯತ್ವವು ಕಾನೂನಿನಿಂದ ವಿನಾಯಿತಿ ನೀಡುವುದಿಲ್ಲ ಎಂಬುದನ್ನು ಒಪ್ಪಿಕೊಂಡಿರುವ ಅವರು, ಆದರೆ ಸಂಸದನೊಬ್ಬ ಸಾರ್ವಜನಿಕ ಮಹತ್ವದ ವಿಷಯದ ಕುರಿತು ಮಾಧ್ಯಮಗಳೊಂದಿಗೆ ಮಾತನಾಡುತ್ತಿರುವಾಗ ಆತನ ಮೇಲೆ ಹಲ್ಲೆ ನಡೆದಿರುವುದು ಗಂಭೀರ ಸಾಂಸ್ಥಿಕ ಪರಿಶೀಲನೆಗೆ ಒಳಪಡಬೇಕು ಎಂದು ಹೇಳಿದ್ದಾರೆ.
ಸಂಸದರ ಹಕ್ಕುಗಳು ಮತ್ತು ಸದನದ ಘನತೆಗೆ ಸಂಬಂಧಿಸಿದ ವಿಚಾರವಾಗಿಯೂ ಈ ಘಟನೆಯನ್ನು ಪರಿಶೀಲಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ. ಪೊಲೀಸ್ ಸಮವಸ್ತ್ರ ಧರಿಸಿರುವುದು ಹಲ್ಲೆ, ಅಕ್ರಮ ಬಂಧನ ಅಥವಾ ಅಧಿಕಾರ ದುರುಪಯೋಗಕ್ಕೆ ಅನುಮತಿ ನೀಡುವುದಿಲ್ಲ ಎಂದು ದೂರಿನಲ್ಲಿ ಸ್ಪಷ್ಟಪಡಿಸಿದ್ದಾರೆ.
ಘಟನೆಯ ಎಲ್ಲ ವಿಡಿಯೋ ದಾಖಲೆಗಳನ್ನು ಪರಿಶೀಲಿಸಿ, ಸಾಕ್ಷಿಗಳಿಗೆ ರಕ್ಷಣೆ ಒದಗಿಸಿ, ಹಲ್ಲೆಗೆ ಕಾರಣರಾದವರು ಹಾಗೂ ಮೇಲಧಿಕಾರಿಗಳ ಹೊಣೆಗಾರಿಕೆಯನ್ನು ನಿಗದಿಪಡಿಸುವಂತೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಜಾನ್ ಬ್ರಿಟ್ಟಾಸ್ ಮನವಿ ಮಾಡಿದ್ದಾರೆ.

