ಶಾಂತಿಯುತ ಪ್ರತಿಭಟನೆ ಪ್ರತಿಯೊಬ್ಬರ ಹಕ್ಕು, ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಬಾರದು : ಸುಪ್ರೀಂಕೋರ್ಟ್‌ ಆದೇಶ

'ದೆಹಲಿ ಮೆಟ್ರೋ ನಿಲ್ದಾಣಗಳನ್ನು ಸಂಪೂರ್ಣವಾಗಿ ಮುಚ್ಚಬಾರದು'

ನವದೆಹಲಿ : ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಮತ್ತು ಸಂಘಟನೆಯಾಗುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ನಾಳೆ ದೆಹಲಿಯಲ್ಲಿ ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆಗೆ ಮುನ್ನ ರಾಜಧಾನಿಯಲ್ಲಿ ವ್ಯಾಪಕ ನಿರ್ಬಂಧಗಳನ್ನು ವಿಧಿಸಿರುವ ಕುರಿತು ಹಿರಿಯ ವಕೀಲರು ನ್ಯಾಯಾಲಯದ ಗಮನ ಸೆಳೆದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.

ದೆಹಲಿಗೆ ರೈಲು ಸೇವೆಗಳ ರದ್ದು, ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ಮತ್ತು ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಕಪಿಲ್‌ ಸಿಬಲ್‌ ಇದರ ವಕಾಲತು ವಹಿಸಿಕೊಂಡಿದ್ದರು.

ರಾಷ್ಟ್ರ ರಾಜಧಾನಿಯನ್ನು ಅಭೂತಪೂರ್ವ ರೀತಿಯಲ್ಲಿ ‘ಮುಚ್ಚುವ’ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆತಂಕವನ್ನು ಹಿರಿಯ ವಕೀಲರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಸಂಘಟನೆಯ ಹಕ್ಕಿನ ಮಹತ್ವವನ್ನು ಸುಪ್ರೀಂ ಕೋರ್ಟ್ ಒತ್ತಿಹೇಳಿತು.

ರೈಲು ಸಂಚಾರವನ್ನು ಸಂಪೂರ್ಣ ಸ್ಥಗಿತಗೊಳಿಸಬಾರದು ಮತ್ತು ದೆಹಲಿ ಮೆಟ್ರೋ ನಿಲ್ದಾಣಗಳನ್ನು ಸಂಪೂರ್ಣವಾಗಿ ಮುಚ್ಚಬಾರದು ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದೆ.

ಸಾರ್ವಜನಿಕರಿಗೆ ಅನಾನುಕೂಲವಾಗದಂತೆ, ಪ್ರಮಾಣಬದ್ಧತೆ ಮತ್ತು ಸಮತೋಲನದ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ರೈಲು ಹಾಗೂ ಮೆಟ್ರೋ ಸೇವೆಗಳನ್ನು ನಿಯಂತ್ರಿತ ರೀತಿಯಲ್ಲಿ ಮುಂದುವರಿಸಲು ನ್ಯಾಯಾಲಯ ಸೂಚಿಸಿದೆ.

ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬಹುದು ಎಂಬುದನ್ನು ಒಪ್ಪಿಕೊಂಡ ನ್ಯಾಯಾಲಯ, ಅವು ಸಂಪೂರ್ಣ ನಿಷೇಧಕ್ಕೆ ಕಾರಣವಾಗಬಾರದು ಎಂದು ಸ್ಪಷ್ಟಪಡಿಸಿತು. ಇದಕ್ಕೆ ಪ್ರತಿಕ್ರಿಯಿಸಿದ ಭಾರತದ ಸಾಲಿಸಿಟರ್ ಜನರಲ್, ಸೇವೆಗಳನ್ನು ನಿಯಂತ್ರಿತ ರೀತಿಯಲ್ಲಿ ಮುಂದುವರಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಸಂಚಾರಕ್ಕೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ಸಾರ್ವಜನಿಕರಿಗೆ ವ್ಯಾಪಕವಾಗಿ ತಲುಪಿಸುವಂತೆಯೂ ನ್ಯಾಯಾಲಯ ನಿರ್ದೇಶಿಸಿದೆ. ಪತ್ರಿಕೆಗಳು ಮತ್ತು ಅಧಿಕೃತ ವೆಬ್‌ಸೈಟ್‌ಗಳಲ್ಲಿ ಈ ಮಾಹಿತಿಯನ್ನು ಪ್ರಕಟಿಸಿ, ಸಾರ್ವಜನಿಕರು ಪ್ರಯಾಣಿಸುವಾಗ ತೊಂದರೆ ಅನುಭವಿಸದಂತೆ ಕ್ರಮ ಕೈಗೊಳ್ಳಬೇಕು ಎಂದು ಹೇಳಿದೆ.

ಸಾರ್ವಜನಿಕರ ಹಿತವೇ ಮುಖ್ಯ: ಸುಪ್ರೀಂ ಕೋರ್ಟ್‌

ಅಧಿಕಾರಿಗಳು ಪ್ರತಿಭಟನೆ ಹಿನ್ನೆಲೆಯಲ್ಲಿ ವಿಧಿಸಿರುವ ನಿರ್ಬಂಧಗಳನ್ನು ಪ್ರಶ್ನಿಸಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ ಸೇರಿದಂತೆ ಇತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ಪೀಠ ಈ ನಿರ್ದೇಶನ ನೀಡಿದೆ.

ಹಿರಿಯ ವಕೀಲರಾದ ಕಪಿಲ್ ಸಿಬಲ್, ಗೋಪಾಲ್ ಶಂಕರನಾರಾಯಣನ್, ಡಾ. ಎ.ಎಂ. ಸಿಂಗ್‌ವಿ, ಎನ್. ಹರಿಹರನ್ ಮತ್ತು ವೃಂದಾ ಗ್ರೋವರ್ ಸೇರಿದಂತೆ ಹಲವು ವಕೀಲರು ತುರ್ತು ವಿಚಾರಣೆಗೆ ಮನವಿ ಮಾಡಿದ ಬಳಿಕ ನ್ಯಾಯಾಲಯ ಅರ್ಜಿಗಳನ್ನು ಕೈಗೆತ್ತಿಕೊಂಡಿತು. ರೈಲು ಮತ್ತು ಮೆಟ್ರೋ ಸೇವೆಗಳ ಸಂಪೂರ್ಣ ಸ್ಥಗಿತದಿಂದ ಸಾರ್ವಜನಿಕರಿಗೆ ಉಂಟಾಗಬಹುದಾದ ಸಮಸ್ಯೆಗಳ ಬಗ್ಗೆ ನ್ಯಾಯಪೀಠ ಕಳವಳ ವ್ಯಕ್ತಪಡಿಸಿತು.

“ಸಾಮಾನ್ಯ ಜನರಿಗೆ ಸಾರಿಗೆ ಸೌಲಭ್ಯ ನಿರಾಕರಿಸುವಂತಿಲ್ಲ”

ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರನ್ನು ಉದ್ದೇಶಿಸಿ ಮಾತನಾಡಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ಮೆಟ್ರೋ ನಿಲ್ದಾಣಗಳ ಪ್ರವೇಶ ದ್ವಾರಗಳನ್ನು ಸಂಪೂರ್ಣವಾಗಿ ಮುಚ್ಚಿರುವ ವಿಚಾರದ ಬಗ್ಗೆ ಗಂಭೀರ ಕಳವಳವಿದೆ ಎಂದು ಹೇಳಿದರು.

“ನಮ್ಮ ಕಾಳಜಿ ಪ್ರತಿಭಟನಾಕಾರರು ಅಥವಾ ಯಾವುದೇ ವ್ಯಕ್ತಿಯ ಬಗ್ಗೆ ಅಲ್ಲ. ಗುರಗಾಂವ್, ಗ್ರೇಟರ್ ನೋಯ್ಡಾ, ಪೂರ್ವ ದೆಹಲಿ ಮತ್ತು ದಕ್ಷಿಣ ದೆಹಲಿಯಿಂದ ಜೀವನೋಪಾಯಕ್ಕಾಗಿ ದೆಹಲಿಗೆ ಬರುವ ನೂರಾರು, ಸಾವಿರಾರು ಪ್ರಯಾಣಿಕರ ಬಗ್ಗೆ ನಮ್ಮ ಕಾಳಜಿ ಇದೆ. ಅವರಲ್ಲಿ ವಿದ್ಯಾರ್ಥಿಗಳು, ಉದ್ಯೋಗಿಗಳು ಮತ್ತು ಹಿರಿಯ ನಾಗರಿಕರು ಸೇರಿದ್ದಾರೆ. ಇವರೆಲ್ಲರೂ ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸಿದ್ದಾರೆ,” ಎಂದು ನ್ಯಾಯಮೂರ್ತಿ ಹೇಳಿದರು.

ಕಾನೂನು ಸುವ್ಯವಸ್ಥೆ ಕಾಪಾಡಲು ಅಧಿಕಾರಿಗಳು ಅಗತ್ಯ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಲು ಅವಕಾಶವಿದೆ. ಅಶಿಸ್ತಿನ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕೂ ಯಾವುದೇ ಅಡ್ಡಿಯಿಲ್ಲ. ಆದರೆ, ಅದರ ಹೆಸರಿನಲ್ಲಿ ಎಲ್ಲ ಸಾರಿಗೆ ವ್ಯವಸ್ಥೆಯನ್ನೇ ಸ್ಥಗಿತಗೊಳಿಸಿ ಜನರನ್ನು ಪರ್ಯಾಯ ಸೌಲಭ್ಯವಿಲ್ಲದೆ ಬಿಡಬಾರದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

“ಪ್ರತಿಯೊಬ್ಬರ ಬಳಿಯೂ ಕಾರು ಇರುವುದಿಲ್ಲ. ಎಲ್ಲರಿಗೂ ಖಾಸಗಿ ಸಾರಿಗೆ ಸೌಲಭ್ಯವೂ ಲಭ್ಯವಿರುವುದಿಲ್ಲ. ಅನೇಕರು ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದಾರೆ,” ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಹೇಳಿದರು.

ಪ್ರತಿಭಟನೆ ಹಿನ್ನೆಲೆಯಲ್ಲಿ ಭದ್ರತಾ ಕ್ರಮಗಳನ್ನು ಕೈಗೊಳ್ಳುವಾಗ ಸಾರ್ವಜನಿಕರ ದೈನಂದಿನ ಜೀವನ ಮತ್ತು ಸಂಚಾರಕ್ಕೆ ಅನಗತ್ಯ ಅಡಚಣೆ ಉಂಟಾಗದಂತೆ ನೋಡಿಕೊಳ್ಳಬೇಕು ಎಂಬ ಸಂದೇಶವನ್ನು ಸುಪ್ರೀಂ ಕೋರ್ಟ್‌ ನೀಡಿದೆ.

More articles

Latest article

Most read