ನವದೆಹಲಿ, ಅ.9: ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದು ಮತ್ತು ಸಂಘಟನೆಯಾಗುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಅಕ್ಟೋಬರ್ 10ರಂದು ದೆಹಲಿಯಲ್ಲಿ ನಡೆಯಲಿರುವ ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದ ಪ್ರತಿಭಟನೆಗೆ ಮುನ್ನ ರಾಜಧಾನಿಯಲ್ಲಿ ವ್ಯಾಪಕ ನಿರ್ಬಂಧಗಳನ್ನು ವಿಧಿಸಿರುವ ಕುರಿತು ಹಿರಿಯ ವಕೀಲರು ನ್ಯಾಯಾಲಯದ ಗಮನ ಸೆಳೆದ ಹಿನ್ನೆಲೆಯಲ್ಲಿ ಈ ಅಭಿಪ್ರಾಯ ವ್ಯಕ್ತವಾಗಿದೆ.
ರಾಷ್ಟ್ರ ರಾಜಧಾನಿಯನ್ನು ಅಭೂತಪೂರ್ವ ರೀತಿಯಲ್ಲಿ ‘ಮುಚ್ಚುವ’ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಆತಂಕವನ್ನು ಹಿರಿಯ ವಕೀಲರು ಪ್ರಸ್ತಾಪಿಸಿದರು. ಈ ಸಂದರ್ಭದಲ್ಲಿ ಶಾಂತಿಯುತ ಪ್ರತಿಭಟನೆ ಮತ್ತು ಸಂಘಟನೆಯ ಹಕ್ಕಿನ ಮಹತ್ವವನ್ನು ಸುಪ್ರೀಂ ಕೋರ್ಟ್ ಒತ್ತಿಹೇಳಿತು.
ಮುಖ್ಯ ಚುನಾವಣಾ ಆಯುಕ್ತರ ವಿರುದ್ಧ ಅಕ್ಟೋಬರ್ 10 ರಂದು ಸಿಜೆಪಿ (CJP) ಘೋಷಿಸಿರುವ ಪ್ರತಿಭಟನೆಗಳ ಹಿನ್ನೆಲೆಯಲ್ಲಿ, ದೆಹಲಿಗೆ ರೈಲು ಸೇವೆಗಳ ರದ್ದು, ಮೆಟ್ರೋ ನಿಲ್ದಾಣಗಳ ಮುಚ್ಚುವಿಕೆ ಮತ್ತು ಇಂಟರ್ನೆಟ್ ಸೇವೆಗಳ ಸ್ಥಗಿತವನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನಲ್ಲಿ ಸಿಪಿಐ(ಎಂ) ಪ್ರಧಾನ ಕಾರ್ಯದರ್ಶಿ ಎಂ ಎ ಬೇಬಿ ಸುಪ್ರಿಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ಹಿರಿಯ ವಕೀಲ ಕಪಿಲ್ ಸಿಬಲ್ ಇದರ ವಕಾಲತು ವಹಿಸಿಕೊಂಡಿದ್ದರು.

