ಬೆಂಗಳೂರು : ತಮಿಳು ನಾಡಿಗೆ ನೀರು ಹರಿಸುವಂತೆ ನೀಡಿರುವ ಆದೇಶ ಖಂಡಿಸಿ ವಾಟಾಳ್ ನಾಗರಾಜ್ ಕರೆ ನೀಡಿರುವ ಕರ್ನಾಟಕ ಬಂದ್‌ಗೆ ರಾಜ್ಯಾದ್ಯಂತ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿವೆ.
ಕನ್ನಡ ಸಂಘಟನೆಗಳು ಹಾಗೂ ಸಾರಿಗೆ ಒಕ್ಕೂಟಗಳು ಬಂದ್‌ಗೆ ಬೆಂಬಲ ನೀಡದಿರುವುದರಿಂದ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿ ಬಸ್‌ಗಳ ಸಂಚಾರ, ಆಟೋ, ಕ್ಯಾಬ್ ಸಂಚಾರ ಎಂದಿನಂತೆ ಸಾಗುತ್ತಿದೆ. ಶಾಲಾ- ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ.
ಬೆಂಗಳೂರಿನಲ್ಲಿ ಯಾವುದೇ ಬಂದ್ ವಾತಾವರಣ ಇಲ್ಲದ ಹಿನ್ನೆಲೆಯಲ್ಲಿ ತಮಿಳುನಾಡು ಬಸ್‌ಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಸ್ಯಾಟಲೈಟ್ ಬಸ್ ನಿಲ್ದಾಣದಿಂದ ತಮಿಳುನಾಡಿನ ವಿವಿಧ ಭಾಗಗಳತ್ತ ಬಸ್‌ಗಳು ಎಂದಿನಂತೆ ಹೊರಡುತ್ತಿವೆ.
ಗಡಿಯಲ್ಲಿ ಪ್ರತಿಭಟನೆ: ಆನೇಕಲ್ ತಾಲೂಕಿನ ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿ 47ರ ತಮಿಳುನಾಡು-ಕರ್ನಾಟಕ ಗಡಿ ಅತ್ತಿಬೆಲೆಯಲ್ಲಿ ಇಂದು ಬೆಳಗ್ಗೆ ಕನ್ನಡ ಜಾಗೃತಿ ವೇದಿಕೆ ಪ್ರತಿಭಟನೆ ನಡೆಸಿತು. ತಮಿಳುನಾಡಿಗೆ ನೀರು ಹರಿಸಿರುವುದನ್ನು ಖಂಡಿಸಿ ಪ್ರತಿಭಟನಾಕಾರರು ಹೆದ್ದಾರಿ ತಡೆಗೆ ಮುಂದಾಗಿದ್ದರು. ಆದರೆ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು, ಅತ್ತಿಬೆಲೆ ಪೊಲೀಸ್ ಠಾಣೆಗೆ ಕರೆದೊಯ್ದು ಬಳಿಕ ಬಿಡುಗಡೆ ಮಾಡಿದ್ದಾರೆ.
ಮಂಡ್ಯದಲ್ಲಿ ಪ್ರತಿಭಟನೆ : ರಾಜ್ಯದ ಕುಡಿಯುವ ನೀರು ಮತ್ತು ಕೃಷಿ ಅಗತ್ಯಗಳನ್ನು ಉಲ್ಲೇಖಿಸಿ, ಇನ್ನು ಹೆಚ್ಚಿನ ನೀರನ್ನು ಬಿಡುಗಡೆ ಮಾಡದಂತೆ ಪ್ರತಿಭಟನಾಕಾರರು ಕರ್ನಾಟಕ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಕಾವೇರಿ ಹೋರಾಟದ ಕೇಂದ್ರಬಿಂದುವಾಗಿರುವ ಮಂಡ್ಯದಲ್ಲಿ, ರೈತರು ಮತ್ತು ಕನ್ನಡ ಪರ ಸಂಘಟನೆಗಳು ಸಂಜಯ ವೃತ್ತ ಹಾಗೂ ಇತರ ಸ್ಥಳಗಳಲ್ಲಿ ಪ್ರತಿಭಟನೆ ನಡೆಸಿದವು.
ಪ್ರತಿಭಟನಾಕಾರರು ಖಾಲಿ ಮಡಿಕೆಗಳು ಮತ್ತು ಹುರುಳಿಯನ್ನು ಹಿಡಿದುಕೊಂಡು “ನಮ್ಮ ನೀರು, ನಮ್ಮ ಹಕ್ಕು” ಎಂಬ ಘೋಷಣೆಗಳನ್ನು ಕೂಗಿದರು ಹಾಗೂ ಬೆಂಗಳೂರು-ಮೈಸೂರು ಹಳೆಯ ಹೆದ್ದಾರಿಯನ್ನು ತಡೆದರು.
ಮಂಡ್ಯ ಜಿಲ್ಲೆಯಲ್ಲಿ ಕಾವೇರಿ ನೀರಿಗಾಗಿ ವಿದ್ಯಾರ್ಥಿಗಳು ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ. ಮಂಡ್ಯದ ಪಾಂಡವಪುರದಲ್ಲಿ ವಿದ್ಯಾರ್ಥಿಗಳು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದು, ಪಾಂಡವಪುರ ಬಸ್ ನಿಲ್ದಾಣದ ಸರ್ಕಲ್ ಬಳಿ ರೈತರ ಹೋರಾಟ ನಡೆಸಿದರು.
ಮಂಡ್ಯದ ವಿದ್ಯಾರ್ಥಿಗಳು, ಕಾವೇರಿ ನೀರಿಗಾಗಿ ರೈತರ ಹೋರಾಟಕ್ಕೆ ಸಂಪೂರ್ಣವಾಗಿ ಕೈಜೋಡಿಸಿದ್ದಾರೆ. ಮಂಡ್ಯ ಭಾಗದ ರೈತರಿಗೆ ಅವರ ಬೆಳೆಗೆ ನೀರು ಬಿಡದೆ, ಪ್ರಾಧಿಕಾರದ ಆದೇಶ ಪಾಲಿಸಿ ಪಕ್ಕದ ರಾಜ್ಯಕ್ಕೆ ನೀರು ಹರಿಬಿಡುತ್ತಿರುವುದನ್ನು ವಿದ್ಯಾರ್ಥಿಗಳು ತೀವ್ರವಾಗಿ ಖಂಡಿಸಿದ್ದಾರೆ.
ಮೈಸೂರಿನಲ್ಲಿ “ಬಾರ್ಕೋಲ್ ಚಳವಳಿ” ಮೂಲಕ ರೈತರು ರಾಜಕಾರಣಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಲ್ಲಿ ಉರುಳು ಸೇವೆ ಮಾಡಿ ತಮ್ಮ ಆಕ್ರೋಶವನ್ನು ಹೊರಹಾಕಿದರು. ಕರವೇ ಶಿವರಾಮೇಗೌಡ ಬಣ ಹಾಗೂ ರೈತ ಮುಖಂಡರು ಪ್ರತಿಭಟನೆ ನಡೆಸಿದ್ದಾರೆ.
ಬೆಳಗಾವಿಯ ರಾಣಿ ಚನ್ನಮ್ಮ ವೃತ್ತ ಬಂದ್ ಮಾಡಿ ಹೋರಾಟ ಮಾಡುತ್ತಿದ್ದು, ರಸ್ತೆ ಮೇಲೆ ಉರುಳು ಸೇವೆ ಮಾಡಿದ ರೈತರು ಆಕ್ರೋಶ ಹೊರ ಹಾಕಿದ್ದಾರೆ.
ಚಿಕ್ಕಮಗಳೂರು ನಗರದಲ್ಲಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪರ ಸಂಘಟನೆಗಳು, ರೈತ ಸಂಘ ಹಾಗೂ ದಲಿತ ಸಂಘಟನೆಗಳ ನೂರಾರು ಕಾರ್ಯಕರ್ತರು ನಗರದ ಬೀದಿಗಿಳಿದು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ನಗರದ ಪ್ರಮುಖ ತಾಣವಾದ ಹನುಮಂತಪ್ಪ ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ತಮಿಳುನಾಡು ಸರ್ಕಾರ ಹಾಗೂ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಕನ್ನಡ ಸೇನೆ ಜಿಲ್ಲಾಧ್ಯಕ್ಷ ರಾಜೇಗೌಡ ಅವರ ನೇತೃತ್ವದಲ್ಲಿ ಹೋರಾಟಗಾರರು ಖಾಲಿ ಕೊಡಗಳನ್ನು ಕೈಯಲ್ಲಿ ಹಿಡಿದು ರಸ್ತೆಯಲ್ಲಿ ಉರುಳುಸೇವೆ ಮಾಡುವ ಮೂಲಕ ವಿಶಿಷ್ಟ ರೀತಿಯಲ್ಲಿ ತಮ್ಮ ಪ್ರತಿಭಟನೆಯನ್ನು ನಡೆಸಿದರು. ಹನುಮಂತಪ್ಪ ವೃತ್ತದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯು ಎಂ. ಜಿ. ರಸ್ತೆ ಮಾರ್ಗವಾಗಿ ಆಜಾದ್ ಪಾರ್ಕ್‌ವರೆಗೆ ಸಾಗಿತು. ಮೆರವಣಿಗೆಯಲ್ಲಿದ್ದ 50ಕ್ಕೂ ಹೆಚ್ಚು ಹೋರಾಟಗಾರರು ರಾಜ್ಯದ ಹಿತರಕ್ಷಣೆಗೆ ಒತ್ತಾಯಿಸಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಘೋಷಣೆಗಳನ್ನು ಕೂಗಿದರು.

