ವೀರಗೊಲ್ಲಾಳರು ಕುರಿಕಾಯುತ್ತಲೇ ಶರಣರಾದರು; ಕುರಿಹಿಕ್ಕೆಯ ರಾಶಿಯಲ್ಲಿಯೇ ಲಿಂಗವನ್ನು ಕಂಡರು. ಇಂದಿಗೂ ಈ ವಚನಗಳು ಕೇಳುವ ಪ್ರಶ್ನೆ ತೀವ್ರವಾದದ್ದೇ ನಮ್ಮ ನಮ್ಮ ದಿನನಿತ್ಯದ ದುಡಿಮೆಯನ್ನು ನಾವು ಎಷ್ಟು ಪ್ರಾಮಾಣಿಕವಾಗಿ, ಎಷ್ಟು ಎಚ್ಚರದಿಂದ ನಿರ್ವಹಿಸುತ್ತಿದ್ದೇವೆ? ಶಾಸ್ತ್ರ ತಿಳಿಯದ ಗೊಲ್ಲಾಳನ ಈ ಪ್ರಶ್ನೆ, ಶಾಸ್ತ್ರ ಬಲ್ಲವರನ್ನೂ ಮೀರಿ ನಿಲ್ಲುತ್ತದೆ – ಡಾ. ರವಿ ಎಂ. ಸಿದ್ಲಿಪುರ, ಸಹಾಯಕ ಪ್ರಾಧ್ಯಾಪಕರು.
90ರ ದಶಕದಲ್ಲಿ ಒಬ್ಬ ಕುರುಬ ಸಂಸ್ಕೃತಿಯ ಹಿನ್ನೆಲೆಯ ವ್ಯಕ್ತಿ ಆರ್ಥಿಕತೆಯ ಬಗ್ಗೆ ಮಾತನಾಡಿದಾಗ ಕೇಳಿಬಂದ ಲೇವಡಿಗಳು, ನಮ್ಮ ಸಮಾಜದ ಜ್ಞಾನದ ಅಧಿಕಾರಶಾಹಿಯನ್ನು ಎತ್ತಿ ತೋರಿಸುತ್ತವೆ. ಆದರೆ, 800 ವರ್ಷಗಳ ಹಿಂದೆಯೇ ಕುರಿಮಂದೆಯ ಹಿಂದೆ ಕೋಲು ಹಿಡಿದು ನಡೆಯುವ ಗೊಲ್ಲಾಳನೊಬ್ಬ ದೇವರ ಕುರಿತು ಮಾತನಾಡಬಲ್ಲನೆ? ಗುಡಿ ಗರ್ಭಗುಡಿ ಆಗಮ ಶಾಸ್ತ್ರಗಳ ಸೋಂಕಿಲ್ಲದ, ಬಿಸಿಲಿನಲ್ಲಿ ಸುಟ್ಟ ಮೈಯ, ಕುರಿಹಿಕ್ಕೆಯ ವಾಸನೆ ಹಿಡಿದ ಕೈಗಳ ಒಬ್ಬ ಕುರಿಗಾಹಿ ಷಟ್ಸ್ಥಲದ ಆಳ ನುಡಿಯಬಲ್ಲನೆ? ವೀರಗೊಲ್ಲಾಳರ ಹತ್ತು ವಚನಗಳು ಈ ಪ್ರಶ್ನೆಗಳಿಗೆ ಉತ್ತರವಾಗಿ ನಿಲ್ಲುತ್ತವೆ. ಏಕೆಂದರೆ ಗೊಲ್ಲಾಳರು ಶಾಸ್ತ್ರದ ಭಾಷೆಯನ್ನು ಎರವಲು ಪಡೆಯುವುದೇ ಇಲ್ಲ; ತಮ್ಮ ಕುಲಕಸುಬಿನ ನುಡಿಗಟ್ಟನ್ನೇ ತತ್ವದ ಪರಿಭಾಷೆಯನ್ನಾಗಿ ಮಾರ್ಪಡಿಸಿಕೊಳ್ಳುತ್ತಾರೆ. ಆಡು ಕುರಿ ಟಗರು ಹೋತು ನಾಯಿ ತೋಳ ಹುಲಿ ಕಳ್ಳ- ಇವೆಲ್ಲ ಮಂದೆಗಾರನ ದಿನಚರಿಯ ಪದಗಳು. ಆದರೆ ಗೊಲ್ಲಾಳರ ಕೈಯಲ್ಲಿ ಇವು ಮನಸ್ಸಿನ ಒಳರಚನೆಯನ್ನು, ಇಂದ್ರಿಯಗಳ ಹಪಹಪಿಕೆಯನ್ನು, ಮೃತ್ಯುವಿನ ಹೊಂಚನ್ನು ಬಿಡಿಸಿ ತೋರುವ ಪರಿಕರಗಳಾಗುತ್ತವೆ. ಈ ಪರಿವರ್ತನೆಯ ಬೆರಗಿನಲ್ಲಿಯೇ ಗೊಲ್ಲಾಳರ ವಚನಗಳ ವಿಶಿಷ್ಟತೆ ಅಡಗಿದೆ. ಇಲ್ಲಿ ವೃತ್ತಿ ಎಂಬುದು ಆಧ್ಯಾತ್ಮಕ್ಕೆ ಒದಗಿಸಿದ ಸಾಧನವಲ್ಲ, ಸ್ವತಃ ಆಧ್ಯಾತ್ಮದ ಮಾರ್ಗವೇ ಆಗಿಬಿಡುತ್ತದೆ.
ಕಾಯಕದ ಪದಕೋಶ
ಗೊಲ್ಲಾಳರ ವಚನಗಳಲ್ಲಿ ಹೆಚ್ಚಾಗಿರುವುದು ನಾಮಪದಗಳಲ್ಲ, ಕ್ರಿಯಾಪದಗಳು. ಕಟ್ಟಿ, ಹೊತ್ತು, ನಡಸುತ್ತ, ಹೊಡೆವುತ್ತ, ತಿಟ್ಟುತ್ತ, ಇಡುತ್ತ, ಒತ್ತಿ, ಕೆಡಹಿ, ಗೆದ್ದು, ಹೊಡದು, ಕೂಡಿ, ನಿಲಿಸಿ, ತಡದು, ಕಳೆದು, ಕಾವ- ಈ ಸಾಲು ಸಾಲು ಕ್ರಿಯಾಪದಗಳು ವಚನಗಳ ನಡುವೆ ವಿರಾಮವಿಲ್ಲದ ಚಲನೆಯನ್ನು ಸೃಷ್ಟಿಸುತ್ತವೆ. ಇತರ ಹಲವು ವಚನಕಾರರಲ್ಲಿ ಕಾಣುವ ಧ್ಯಾನಸ್ಥ ಶಾಂತಿಯ ಬದಲು, ಗೊಲ್ಲಾಳರಲ್ಲಿ ಇರುವುದು ಬೆವರಿನ ಚಲನಶೀಲತೆ. ಇದೇ ಗೊಲ್ಲಾಳರ ವಿಶಿಷ್ಟ ಕೊಡುಗೆ: ಸ್ಥಿರತೆಯಲ್ಲ, ನಿರಂತರ ಎಚ್ಚರಿಕೆಯೇ ಇಲ್ಲಿ ಭಕ್ತಿಯ ಸ್ವರೂಪ. ಕುರಿಗಾಹಿಗೆ ವಿಶ್ರಾಂತಿ ಇಲ್ಲ; ಒಂದು ಕ್ಷಣ ಕಣ್ಣು ಮುಚ್ಚಿದರೂ ಹಿಂಡು ಚದುರುತ್ತದೆ, ತೋಳ ಎರಗುತ್ತದೆ. ಇದೇ ರೀತಿ ಸಾಧಕನಿಗೂ ವಿಶ್ರಾಂತಿ ಇಲ್ಲ; ಒಂದು ಕ್ಷಣ ಎಚ್ಚರ ತಪ್ಪಿದರೂ ಮನಸ್ಸೆಂಬ ಮಂದೆ ಚದುರುತ್ತದೆ.
ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ , ದೊಡ್ಡೆಯ ಹೊಡೆವುತ್ತ ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ ,
ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.
ಮೇಲಿನ ವಚನದಲ್ಲಿನ ‘ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ’ ಎಂಬ ಸಾಲಿನ ವರ್ತಮಾನಕಾಲದ ಪ್ರಯೋಗ ಗಮನಾರ್ಹ. ಇದು ಪೂರ್ಣಗೊಂಡ ಸಾಧನೆಯಲ್ಲ, ನಡೆಯುತ್ತಿರುವ ಪ್ರಕ್ರಿಯೆ. ಗೊಲ್ಲಾಳರ ಭಕ್ತಿ ಸಿದ್ಧಿಯ ಘೋಷಣೆಯಲ್ಲ, ಸಾಧನೆಯ ವರದಿ. ಹೀಗೆ ವೃತ್ತಿಪರಿಭಾಷೆ ತತ್ವಪರಿಭಾಷೆಯಾಗಿ ಮೇಲೇರುವುದು ಕೇವಲ ರೂಪಕದ ಸೊಗಸಲ್ಲ; ಅದು ಒಂದು ಜ್ಞಾನಮೀಮಾಂಸೆಯ ಆಯ್ಕೆ – ದೇಹದ ದುಡಿಮೆಯನ್ನೇ ತಿಳಿವಿನ ಮೂಲವನ್ನಾಗಿ ಒಪ್ಪಿಕೊಳ್ಳುವ ಆಯ್ಕೆ. ಇಲ್ಲಿ ಭಕ್ತಿ ಎಂಬುದು ಕುಳಿತು ಮಾಡುವ ಧ್ಯಾನವಲ್ಲ, ಅದು ನಡೆಯುತ್ತಾ, ದುಡಿಯುತ್ತಾ ಸಾಧಿಸುವ ‘ಜಾಗೃತ ಸ್ಥಿತಿ’. ಗೊಲ್ಲಾಳರ ವಚನಗಳಲ್ಲಿ ದೇವರು ಸ್ಥಿರವಾದ ವಿಗ್ರಹವಲ್ಲ, ಅವರ ಕಾಯಕದ ಜೊತೆಗೇ ನಡೆಯುವ ಸಹಗಾಮಿ.
ಹಿಂಡು ಎಂಬ ಒಳಜಗತ್ತು
ಗೊಲ್ಲಾಳರ ವಚನಗಳಲ್ಲಿ ಹಿಂಡು ಎರಡು ಸ್ತರಗಳಲ್ಲಿ ಕೆಲಸ ಮಾಡುತ್ತದೆ. ಹೊರಗಿನ ನಿಜವಾದ ಕುರಿಮಂದೆಯಾಗಿ ಮತ್ತು ಒಳಗಿನ ಮನಸ್ಸಿನ ಪ್ರವೃತ್ತಿಗಳ ಗುಂಪಾಗಿ. ಕೆಳಗಿನ ವಚನದಲ್ಲಿ ಈ ಎರಡು ಸ್ತರಗಳ ಸಂಧಿ ಸ್ಪಷ್ಟವಾಗುತ್ತದೆ.
ಹೋತು ಹುಸಿ, ಆಡು ಬಹುಮಾತಿನ ನೀತಿ,
ಕುರಿ ಸಕಲೇಂದ್ರಿಯದ ನೆಲ ಹೊಲ, ತಗರು ತಥ್ಯಮಿಥ್ಯದ ಹೋರಟೆ,
ಹುಲಿ ದ್ವೇಷದಾಗರ, ತೋಳ ಕೊಂದು ತಿಂಬ ಕಾಟ.
ಚೋರ ಮೃತ್ಯು ಇಂತಿವು ಮೊದಲಾದ
ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ,
ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ ?
ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ,
ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು, ನೆರೆ ವೀರಬೀರೇಶ್ವರಾ.
ಇಲ್ಲಿ ಗಮನಿಸಬೇಕಾದ್ದು ಪ್ರತಿ ಪ್ರಾಣಿಗೂ ಒಂದು ನಿರ್ದಿಷ್ಟ ದೋಷವನ್ನು ಆರೋಪಿಸುವ ವಿಧಾನ. ಹೋತು ಸುಳ್ಳಿನ, ಆಡು ಹೆಚ್ಚು ಮಾತಿನ ಆಡಂಬರದ, ಕುರಿ ಇಂದ್ರಿಯಲಂಪಟತೆಯ, ಟಗರು ವಾದ-ವಿವಾದದ, ಹುಲಿ ದ್ವೇಷದ, ತೋಳ ಹಿಂಸೆಯ ಸಂಕೇತಗಳಾಗುತ್ತವೆ. ಇದೊಂದು ಸೂಕ್ಷ್ಮ ಮನೋವಿಜ್ಞಾನ: ಮನಸ್ಸಿನ ದೋಷಗಳನ್ನು ಏಕರೂಪದ ‘ಪಾಪ’ವೆಂದು ಸಾಮಾನ್ಯೀಕರಿಸದೆ, ಪ್ರತಿಯೊಂದು ದೋಷಕ್ಕೂ ಅದರದೇ ಆದ ಜೀವಸ್ವಭಾವವನ್ನು, ಅದರದೇ ಆದ ವರ್ತನೆಯ ಮಾದರಿಯನ್ನು ಕೊಡುವುದು. ಸಾಕುಪ್ರಾಣಿಗಳು ಆಂತರಿಕ ದೌರ್ಬಲ್ಯಗಳಾದರೆ, ಹುಲಿ-ತೋಳಗಳೆಂಬ ವನ್ಯಮೃಗಗಳು ಹೊರಗಿನಿಂದ ಬಂದೆರಗುವ ವಿಪತ್ತುಗಳು ಮತ್ತು ಕಳ್ಳನೆಂಬ ಮೃತ್ಯು ಈ ಎಲ್ಲದರ ಅಂತಿಮ ಫಲಿತ. ಸಾಕುಪ್ರಾಣಿ ಮತ್ತು ವನ್ಯಮೃಗಗಳ ನಡುವಿನ ಈ ವಿಭಜನೆ ಗಮನಾರ್ಹ- ದೋಷಗಳು ನಮ್ಮೊಳಗೇ ಸಾಕಲ್ಪಟ್ಟಿರುತ್ತವೆ, ಆದರೆ ಅವು ಪಳಗಿಸಲ್ಪಡದೆ ಬಿಟ್ಟರೆ ಕಾಡುಪ್ರಾಣಿಗಳಿಗೆ ಆಹಾರವಾಗಿ, ಕೊನೆಗೆ ಮೃತ್ಯುವಿಗೆ ತುತ್ತಾಗುತ್ತವೆ ಎಂಬ ಎಚ್ಚರಿಕೆ ಇಲ್ಲಿದೆ. ಒಳಗಿನ ಶಿಥಿಲತೆಯೇ ಹೊರಗಿನ ವಿಪತ್ತಿಗೆ ಬಾಗಿಲು ತೆರೆಯುತ್ತದೆ ಎಂಬ ಈ ಒಳನೋಟ ಕೇವಲ ನೀತಿಬೋಧೆಯಲ್ಲ, ಒಂದು ಕಾರಣ-ಕಾರ್ಯ ಸರಪಳಿಯ ವಿಶ್ಲೇಷಣೆ.
ಆಡು ಆರುದಿಂಗಳು ಹುಟ್ಟಿ, ಮೂರುದಿನ ಬದುಕಿ,
ಒಂದು ದಿನ ಸತ್ತಿತ್ತು.
ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು.
ಮರಿಯು ಮೊಲೆಯ ನುಂಗಿ, ಕುರುಹಿನೊಳಗಡಗಿತ್ತು.
ಆಡು ಕುರಿ ಬಂದ ಬಟ್ಟೆಯ ಸೋಧಿಸಿಕೊಂಡು,
ತೋಳನ ತೊಡಕಿನಲ್ಲಿ ಸಾಯದೆ, ಅರಿ ವೀರಬೀರೇಶ್ವರಲಿಂಗವಾ.
ಇಲ್ಲಿ ಆಡಿನ ಆರು ತಿಂಗಳ ಹುಟ್ಟು, ಮೂರು ದಿನದ ಬದುಕು, ಒಂದು ದಿನದ ಸಾವು ಎಂಬ ಸಂಖ್ಯಾಕ್ರಮ ಕೇವಲ ಬೆಡಗಿನ ಸಂಖ್ಯೆಗಳಲ್ಲ. ಇವು ಆಯುಷ್ಯದ ಅಸಂಗತ ಗಣಿತವನ್ನು ಸೂಚಿಸುತ್ತವೆ. ಹುಟ್ಟಿಗೆ ಬೇಕಾದ ಕಾಲ ಬದುಕಿಗಿಂತ ಹೆಚ್ಚು, ಬದುಕಿಗಿಂತ ಸಾವು ಶೀಘ್ರ- ಈ ಅಸಮತೋಲನವೇ ಅಸ್ಥಿರತೆಯ ಸಾರ್ವತ್ರಿಕ ಸತ್ಯವನ್ನು ಧ್ವನಿಸುತ್ತದೆ. ಮರಿ ಮೊಲೆಯ ನುಂಗಿ ಕುರುಹಿನೊಳಗೆ ಅಡಗುವುದು ಎಂಬ ಚಿತ್ರಣವಂತೂ ಆಳವಾದ ವಿಡಂಬನೆ: ಪೋಷಣೆಯ ಕ್ರಿಯೆಯೇ(ಮೊಲೆಯುಣಿಸುವಿಕೆ) ಮುಂದಿನ ಪೀಳಿಗೆಯ ಆಸೆಗಳನ್ನು ಬಿತ್ತುವ ಕ್ರಿಯೆಯಾಗಿ ಬದಲಾಗುತ್ತದೆ; ತಾಯಿಯ ಪ್ರೀತಿಯೇ ಮರಿಯ ಬಂಧನದ ಬೇರಾಗುತ್ತದೆ. ಗೊಲ್ಲಾಳರ ದೃಷ್ಟಿಯಲ್ಲಿ ಆಸೆಗಳ ಸಂತತಿ ಪ್ರೀತಿಯ ಗರ್ಭದಿಂದಲೇ ಹುಟ್ಟುತ್ತದೆ ಎಂಬುದು ಸಾಮಾನ್ಯ ನೀತಿಬೋಧೆಗಳಿಗಿಂತ ಹೆಚ್ಚು ಸಂಕೀರ್ಣವಾದ, ಹೆಚ್ಚು ಪ್ರಾಮಾಣಿಕವಾದ ಒಳನೋಟ.
ಕುರುಹಿನ ಮಿತಿ, ಕುರುಹಿಲ್ಲದ ಅರಿವು
ಗೊಲ್ಲಾಳರ ವಚನಗಳಲ್ಲಿ ಆಂತರ್ಯದಲ್ಲಿ ಕೇಳಿಬರುವ ಪದ ‘ಕುರುಹು’. ಇದು ಶರಣ ಸಾಹಿತ್ಯದ ಕೇಂದ್ರ ಪರಿಕಲ್ಪನೆಗಳಲ್ಲಿ ಒಂದಾಗಿದೆ. ಇಷ್ಟಲಿಂಗ ಎಂಬ ಬಾಹ್ಯ ಸಂಕೇತ ಮತ್ತು ಅದು ಸೂಚಿಸುವ ಆಂತರಿಕ ಸತ್ಯದ ನಡುವಿನ ಸಂಬಂಧ. ಗೊಲ್ಲಾಳರು ಈ ಸಂಬಂಧವನ್ನು ನಿಷ್ಠುರವಾಗಿ ಪರೀಕ್ಷಿಸುತ್ತಾರೆ.
ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು…
ಈ ಸಾಲುಗಳನ್ನು ಕೇವಲ ವಿಗ್ರಹಭಂಜಕ ವಾದವೆಂದು ಓದಬಾರೆದೆನಿಸುತ್ತದೆ. ಗೊಲ್ಲಾಳರು ಪ್ರತಿ ವಸ್ತುವನ್ನೂ ತಿರಸ್ಕರಿಸುವುದು ಅದರ ಸ್ವಭಾವತಃ ಕೊರತೆಗಾಗಿ ಅಲ್ಲ, ಬದಲಿಗೆ ಅದು ಬಾಹ್ಯ ಶಕ್ತಿಗೆ ಒಳಗಾಗುವ ಸಾಧ್ಯತೆಗಾಗಿ- ಉಳಿಗೆ ಒಡೆಯಬಹುದು, ಉರಿಗೆ ಸುಡಬಹುದು, ನೀರಿಗೆ ಕದಡಬಹುದು. ಅಂದರೆ ದೈವತ್ವದ ಪರೀಕ್ಷೆ ಇಲ್ಲಿ ಸ್ವರೂಪದ್ದಲ್ಲ, ಸ್ಥಿತಿಸ್ಥಾಪಕತ್ವದ್ದು. ಬಾಹ್ಯ ಬಲಕ್ಕೆ ಎದುರಾದಾಗ ಬದಲಾಗುವುದೆಲ್ಲ ದೇವರಲ್ಲ. ಇದೇ ತರ್ಕವನ್ನು ಒಳಮುಖಗೊಳಿಸಿ ಗೊಲ್ಲಾಳರು “ಇಂತಿವನೆಲ್ಲವನರಿವ ಚಿತ್ತ ದೇವರಲ್ಲ. ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು” ಎಂದು ಘೋಷಿಸುತ್ತಾರೆ. ಅರಿಯುವ ಮನಸ್ಸು ಕೂಡ ಇಂದ್ರಿಯಗಳ ಸಮೂಹದೊಳಗೆ ಬಂಧಿತವಾಗಿರುವುದರಿಂದ ಅದೂ ದೇವರಲ್ಲ ಎಂಬ ಈ ಹೆಜ್ಜೆ ಅಸಾಧಾರಣ ತಾತ್ವಿಕ ಧೈರ್ಯದ್ದು. ಕಲ್ಲು ಮರ ಮಣ್ಣುಗಳ ನಿರಾಕರಣೆಗಿಂತ ಚಿತ್ತದ ನಿರಾಕರಣೆ ಹೆಚ್ಚು ಆಘಾತಕಾರಿ, ಏಕೆಂದರೆ ಅದು ಸಾಧಕನ ಸ್ವಂತ ಜ್ಞಾನೇಂದ್ರಿಯದ ಮೇಲೂ ಅನುಮಾನ ಎತ್ತುತ್ತದೆ. ಹೀಗೆ ದೈವ ಎಲ್ಲಿಯೂ ಇಲ್ಲ, ಎಲ್ಲಾ ಕುರುಹುಗಳ ಆಚೆಗೆ ಎಂಬ ನಿರಾಕರಣಾತ್ಮಕ ಮಾರ್ಗದಿಂದ ಗೊಲ್ಲಾಳರು ನಿಜಲಿಂಗದ ಕಡೆಗೆ ಸಾಗುತ್ತಾರೆ. “ಕಂಡವರೊಳಗೆ ಕೈಕೊಂಡಾಡದೆ, ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ, ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ.” ಇಲ್ಲಿ ‘ವಿಶ್ವಾಸ’ ಎಂಬ ಪದ ಮಹತ್ವದ್ದೆನಿಸುತ್ತದೆ. ತರ್ಕದಿಂದಲ್ಲ, ನಂಬಿಕೆಯಿಂದ ನಿಂತಲ್ಲಿಯೇ ನಿಜಲಿಂಗ ಸಾಕ್ಷಾತ್ಕಾರವಾಗುತ್ತದೆ ಎಂಬ ಈ ಮಾತು ಬುದ್ಧಿಯ ಮಿತಿಯನ್ನೂ, ಭಕ್ತಿಯ ಅಪರಿಮಿತತೆಯನ್ನೂ ಏಕಕಾಲದಲ್ಲಿ ಸೂಚಿಸುತ್ತದೆ.
ಹೋತನ ಕೊಯ್ದು, ಕುರಿಯ ಸುಲಿದು,
ಮರಿಯ ಕೊರಳನೊತ್ತಿ , ಕಾವಲ ಕುನ್ನಿಯ ಕೆಡಹಿ,
ತೋಳನ ಕುಲವ ಗೆದ್ದು, ಕುರುಬನ ಕುರುಹಿನ ಕುಲವಡಗಿ,
ನೆರೆ ಅರಿವಿನ ಕುಲದಲ್ಲಿ ಅಡಗಬೇಕು,
ವೀರಬೀರೇಶ್ವರಲಿಂಗವನರಿದ ಶರಣ.
ಇಲ್ಲಿ ಗಮನಿಸಬೇಕಾದ್ದು ‘ಕುರುಬನ ಕುರುಹಿನ ಕುಲವಡಗಿ’ ಎಂಬ ಪದಪುಂಜ. ಸ್ವತಃ ಕುರುಬನ(ಗೊಲ್ಲಾಳನ) ಜಾತಿ-ಗುರುತೂ ಒಂದು ಕುರುಹೇ, ಅದೂ ಕರಗಬೇಕಾದ್ದೇ ಎಂಬ ಧೈರ್ಯದ ಘೋಷಣೆ. ಅಂದರೆ ಗೊಲ್ಲಾಳರು ತಮ್ಮ ಕುಲಕಸುಬನ್ನು ರೂಪಕವಾಗಿ ಬಳಸುತ್ತಿದ್ದರೂ, ಆ ಕುಲಗುರುತಿಗೂ ಅಂಟಿಕೊಳ್ಳುವುದಿಲ್ಲ; ಅಂತಿಮವಾಗಿ ಎಲ್ಲಾ ಕುಲಕುರುಹುಗಳನ್ನೂ ಮೀರಿದ ‘ಅರಿವಿನ ಕುಲ’ದಲ್ಲಿ ಲೀನವಾಗುವುದೇ ಗುರಿ. ಇಲ್ಲಿ ಕುಲಕಸುಬು ಮೆಟ್ಟಿಲಾಗಿ ಕಾರ್ಯನಿರ್ವಹಿಸುತ್ತದೆಯೇ ಹೊರತು ಅಂತಿಮ ಗಮ್ಯವಾಗಿ ಅಲ್ಲ ಎಂಬುದನ್ನು ಸ್ಪಷ್ಟಪಡಿಸುತ್ತಾರೆ. ಇದು ಕುಲಕಸುಬಿನ ಘನತೆಯನ್ನು ಎತ್ತಿ ಹಿಡಿಯುತ್ತಲೇ, ಅದನ್ನೂ ಅಂಟಿಸಿಕೊಳ್ಳಬಾರದ ಇನ್ನೊಂದು ಕುರುಹಾಗಿ ಗುರುತಿಸುವ ಸೂಕ್ಷ್ಮ ಸಮತೋಲನ.
ದೇವರೂ ಗೊಲ್ಲಾಳನೇ
ಗೊಲ್ಲಾಳರ ವಚನಗಳ ಅತ್ಯಂತ ಧೈರ್ಯಶಾಲಿ ನಡೆ ಈ ವಚನದಲ್ಲಿ ವ್ಯಕ್ತವಾಗಿದೆ.
ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ,
ತಗರ ತಡದು, ಹಿಂಡನೊಬ್ಬುಳಿತೆಮಾಡಿ,
ಹುಲಿ ತೋಳ ಚೋರ ಭಯಮಂ ಕಳೆದು,
ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.
ಇಲ್ಲಿ ದೇವರನ್ನು ಸಂಬೋಧಿಸುತ್ತಿರುವುದೇ ‘ಗೊಲ್ಲಾಳ’. ಅಂದರೆ ಭಕ್ತನ ಕುಲಕಸುಬಿನ ಹೆಸರೇ ದೇವರ ಇನ್ನೊಂದು ನಾಮಧೇಯವಾಗುತ್ತದೆ. ಸಾಮಾನ್ಯವಾಗಿ ಭಕ್ತಿ ಸಾಹಿತ್ಯದಲ್ಲಿ ದೇವರು ಒಡೆಯ, ಭಕ್ತ ಸೇವಕ ಅಥವಾ ಕುರಿ(ಪಶು) ಎಂಬ ರೂಪಕ ಸಾಮಾನ್ಯ. ದೇವರು ಕುರುಬ, ಭಕ್ತರು ಆತನ ಕುರಿಗಳು ಎಂಬ ಚಿತ್ರಣ ಜಗತ್ತಿನ ಬಹುತೇಕ ಭಕ್ತಿಪಂಥಗಳಲ್ಲಿ ಸಾಮಾನ್ಯವೇ. ಆದರೆ ಗೊಲ್ಲಾಳರ ವಿಶೇಷವೆಂದರೆ ಈ ರೂಪಕವನ್ನು ಕ್ರಮಾನುಗತವಾಗಿ ಬಳಸದೆ, ಸಹೋದ್ಯೋಗದ ಸಂಬಂಧವಾಗಿ ಪುನರ್ರೂಪಿಸುವುದು. ದೇವರು ಭಕ್ತನ ಮೇಲಿನ ಒಡೆಯನಲ್ಲ, ಭಕ್ತನ ಜೊತೆ ದುಡಿಯುವ, ಅದೇ ಕಾಯಕದಲ್ಲಿ ತೊಡಗಿದ ಸಹ-ಗೊಲ್ಲಾಳ. ಇದು ಭಕ್ತಿಯ ಲಂಬರೇಖೆಯ ಸಂಬಂಧವನ್ನು ಅಡ್ಡರೇಖೆಯ ಸಂಬಂಧವಾಗಿ ಬದಲಿಸುವ ಕ್ರಾಂತಿಕಾರಿ ನಡೆ. ದೇವರನ್ನು ಒಂದು ಉನ್ನತ ಸ್ಥಾನದಲ್ಲಿ ಕುಳ್ಳಿರಿಸಿ ಆರಾಧಿಸುವ ಬದಲು, ತನ್ನದೇ ಕಾಯಕದೊಳಗೆ ಎಳೆದುಕೊಂಡು ತನ್ನ ಸಹೋದ್ಯೋಗಿಯನ್ನಾಗಿಸುವ ಈ ಕ್ರಮ ಶರಣ ಚಳವಳಿಯ ಸಮತಾ ತತ್ವದ ಅತ್ಯಂತ ಮೂರ್ತ ರೂಪ. ಇನ್ನೊಂದು ವಚನದ ಕೊನೆಯ ಸಾಲು ‘ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು’ ಎಂಬಲ್ಲಿಯೂ ಚಲನೆ ಒಂದೇ ದಿಕ್ಕಿನದಲ್ಲ; ಹಿಂಡು ಮಂದೆಯಾಗಿ, ಗೊಲ್ಲಾಳ ಗುರಿಯೆಡೆಗೆ, ಎರಡೂ ಜೊತೆಜೊತೆಗೇ ಚಲಿಸುತ್ತಿವೆ ಎಂಬ ಸಾಮೂಹಿಕ ಚಲನೆಯ ಪ್ರಜ್ಞೆ ಇದೆ.
‘ಗೊತ್ತಿನವನಲ್ಲ’ ಎಂಬ ಪ್ರಾಮಾಣಿಕ ಘೋಷಣೆ
ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ
ಷಡುಸ್ಥಲವ ಮುನ್ನವೆ ಅರಿಯೆ
ತತ್ತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ.
ಇಲ್ಲಿ ಗೊಲ್ಲಾಳರು ಷಟ್ಸ್ಥಲ, ತತ್ವ, ಇಪ್ಪತ್ತೈದು ತತ್ವ, ಭಕ್ತಿ-ಜ್ಞಾನ-ವೈರಾಗ್ಯ ತ್ರಿವಿಧ – ಇವ್ಯಾವುದೂ ತಮಗೆ ಗೊತ್ತಿಲ್ಲ ಎಂದು ಪದೇಪದೇ ಪುನರುಚ್ಚರಿಸುತ್ತಾರೆ. ಇದನ್ನು ಕೇವಲ ವಿನಯದ ಮಾತಾಗಿ ಓದುವುದು ಸುಲಭ, ಆದರೆ ಇದರಲ್ಲಿ ಆಳವಾದ ಸಾಮಾಜಿಕ ವಿಮರ್ಶೆಯೂ ಅಡಗಿದೆ. ಷಟ್ಸ್ಥಲ, ಅಷ್ಟಾವರಣ, ಪಂಚಾಚಾರಗಳಂತಹ ವ್ಯವಸ್ಥಿತ ಸಿದ್ಧಾಂತ ಶಾಸ್ತ್ರ ಕಲಿಕೆಗೆ, ಗ್ರಂಥಪಠಣಕ್ಕೆ, ಗುರುಪರಂಪರೆಯ ಔಪಚಾರಿಕ ದೀಕ್ಷೆಗೆ ಅವಕಾಶವಿರುವ ವರ್ಗಕ್ಕೆ ಸುಲಭಸಾಧ್ಯ. ಬೆಳಗ್ಗೆಯಿಂದ ಸಂಜೆಯವರೆಗೆ ಕುರಿ ಕಾಯುತ್ತ ಅಲೆದಾಡುವ ಗೊಲ್ಲಾಳನಿಗೆ ಇಂತಹ ವ್ಯವಸ್ಥಿತ ಶಾಸ್ತ್ರಾಧ್ಯಯನಕ್ಕೆ ಸಮಯವೂ ಇಲ್ಲ, ಅವಕಾಶವೂ ಇಲ್ಲ. ಆದ್ದರಿಂದ ‘ಅರಿಯೆ’ ಎಂಬ ಈ ಪದೇಪದೇಯ ನಿರಾಕರಣೆ ಒಂದು ಬಗೆಯ ಸಾಮಾಜಿಕ ಸ್ಥಾನದ ಪ್ರಾಮಾಣಿಕ ಘೋಷಣೆ. ಶಾಸ್ತ್ರಪ್ರವೇಶದ ಅವಕಾಶದಿಂದ ವಂಚಿತನಾದ ಕೆಳಸ್ತರದ ದನಿ. ಆದರೆ ಇಲ್ಲಿಯೇ ವಚನದ ನಿಜವಾದ ತಿರುವು ಇರುವುದು: ಈ ‘ಅರಿಯದಿರುವಿಕೆ’ಯನ್ನು ಗೊಲ್ಲಾಳರು ಕೊರತೆಯಾಗಿ ಒಪ್ಪಿಕೊಳ್ಳುತ್ತಲೇ, ಅದನ್ನೊಂದು ಪ್ರತ್ಯೇಕ ಮಾರ್ಗದ ಆಧಾರವಾಗಿ ಪರಿವರ್ತಿಸುತ್ತಾರೆ.
ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ,
ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ,
ಮಹಾಮಹಿಮ ವೀರಬೀರೇಶ್ವರಾ.
ಶಾಸ್ತ್ರ ಕಲಿಯದ ಗೊಲ್ಲಾಳನಿಗೆ ದೇವರು ಪುಸ್ತಕದ ಪುಟದಲ್ಲಿ ಸಿಗುವುದಿಲ್ಲ, ಆತನ ದಿನಚರಿಯ ಅತ್ಯಂತ ತ್ಯಾಜ್ಯ ವಸ್ತುವಿನಲ್ಲೇ ಸಿಗುತ್ತಾನೆ ಎಂಬ ಈ ನಿಲುವು ಜ್ಞಾನಸಂಪಾದನೆಯ ಒಂದು ಪರ್ಯಾಯ ಮಾರ್ಗವನ್ನೇ ಸೂಚಿಸುತ್ತದೆ. ಗ್ರಂಥಸ್ಥ ಜ್ಞಾನಕ್ಕೆ ಪ್ರತಿಯಾಗಿ ಅನುಭವಸ್ಥ ಜ್ಞಾನ.
ಗುಡಿಸಿದ ಹಿಕ್ಕೆಯಲ್ಲಿ ಬಂದು…
‘ಹಿಕ್ಕೆಯೇ ಇಷ್ಟಲಿಂಗ’ ಎಂಬರ್ಥದ ಮೇಲಿನ ಮಾತು ಶರಣ ಚಳವಳಿಯ ಅತ್ಯಂತ ಆಮೂಲಾಗ್ರ ಸಾಮಾಜಿಕ ಹೇಳಿಕೆಗಳಲ್ಲಿ ಒಂದು. ವೈದಿಕ ವ್ಯವಸ್ಥೆಯಲ್ಲಿ ಶುದ್ಧಿ-ಅಶುದ್ಧಿಯ ನಿಕಷವೇ ಜಾತಿ ಶ್ರೇಣೀಕರಣದ ಬುನಾದಿ-ಗರ್ಭಗುಡಿ ಶುದ್ಧ, ಬೀದಿ ಅಶುದ್ಧ; ಪುರೋಹಿತ ಶುದ್ಧ, ಕೆಳಜಾತಿಯ ದೇಹ ಅಶುದ್ಧ. ಇಂತಹ ವ್ಯವಸ್ಥೆಯಲ್ಲಿ ಕುರಿಹಿಕ್ಕೆಯಂತಹ ಪ್ರಾಣಿತ್ಯಾಜ್ಯ ಅಶುದ್ಧತೆಯ ಪರಮಾವಧಿ. ಗೊಲ್ಲಾಳರು ಇದೇ ಹಿಕ್ಕೆಯ ರಾಶಿಯನ್ನು ದೈವಸಾಕ್ಷಾತ್ಕಾರದ ತಾಣವನ್ನಾಗಿ ಘೋಷಿಸುವ ಮೂಲಕ ಶುದ್ಧಿ-ಅಶುದ್ಧಿಯ ಇಡೀ ಶ್ರೇಣಿವ್ಯವಸ್ಥೆಯನ್ನೇ ತಲೆಕೆಳಗು ಮಾಡುತ್ತಾರೆ. ಇದೊಂದು ಕೇವಲ ಕಾವ್ಯಾತ್ಮಕ ಧೈರ್ಯವಲ್ಲ; ಅಸ್ತಿತ್ವದ ಪ್ರಶ್ನೆಯ ಪುನರ್ ವ್ಯಾಖ್ಯಾನ. ದೇವರನ್ನು ಗರ್ಭಗುಡಿಯಿಂದ ಎಳೆದು ತಂದು, ಬೀದಿಯ ದೂಳಿನಲ್ಲಿ, ಕುರಿಹಟ್ಟಿಯ ಕಸದ ರಾಶಿಯಲ್ಲಿ ಕೂರಿಸುವುದೆಂದರೆ, ಪವಿತ್ರತೆಯ ಸ್ಥಳಪಲ್ಲಟವನ್ನೇ ಮಾಡಿದಂತೆ. ಪವಿತ್ರತೆ ಇನ್ನು ಮುಂದೆ ಸ್ಥಳಾಧಾರಿತವಲ್ಲ(ಗುಡಿ, ಪೀಠ), ಭಾವಾಧಾರಿತ(ನಿಷ್ಠೆ, ವಿಶ್ವಾಸ). ಈ ಪುನರ್ ವ್ಯಾಖ್ಯಾನದಿಂದಲೇ ಗೊಲ್ಲಾಳರಂತಹ ಕೆಳಸ್ತರದ ವಚನಕಾರರಿಗೆ ದೇವರ ಬಾಗಿಲು ತೆರೆದುಕೊಂಡಿತು. ಗುಡಿಯ ಹೊಸ್ತಿಲಲ್ಲಿ ನಿಲ್ಲಿಸಲ್ಪಟ್ಟವರಿಗೆ, ತಮ್ಮ ಅಂಗೈಯ ಇಷ್ಟಲಿಂಗವೇ, ತಮ್ಮ ಕಾಯಕದ ನೆಲವೇ ಗುಡಿಯಾಯಿತು. ಹೀಗೆ ಗೊಲ್ಲಾಳರಂತಹ ಕೆಳಸ್ತರದ ವಚನಕಾರರು ‘ಲಿಂಗಾಯತ ಸಿದ್ಧಾಂತ’ಗಳಿಗೆ ಬದ್ಧರಾಗದೆ; ತಮ್ಮ ಕುಲಮೂಲದ ಕಾಯಕದಲ್ಲಿಯೇ ತಮ್ಮದೇ ಆದ ‘ಭಕ್ತಿ ಸಿದ್ಧಾಂತ’ವನ್ನು ರೂಪಿಸಿಕೊಂಡಂತಿದೆ.
ಸಿದ್ಧಾಂತವಿಲ್ಲದ ಸಿದ್ಧಿ
ಗೊಲ್ಲಾಳರ ವಚನಗಳಲ್ಲಿ ಒಂದು ವಿರೋಧಾಭಾಸವಿದೆ. ಗೊಲ್ಲಾಳರಿಗೆ ಷಟ್ಸ್ಥಲದ ಆಳ ಗೊತ್ತಿಲ್ಲ, ಆದರೆ ಶರಣತ್ವದ ಆಳ ಸಂಪೂರ್ಣ ಗೊತ್ತಿದೆ. ಶಾಸ್ತ್ರ ಗೊತ್ತಿಲ್ಲದ ಈ ಗೊಲ್ಲಾಳ, ಕುಲಕಸುಬಿನ ಅನುಭವದಿಂದಲೇ ಇಂದ್ರಿಯ ನಿಗ್ರಹ, ಅಹಂಕಾರ ವಿಸರ್ಜನೆ, ನಿರಂತರ ಎಚ್ಚರಿಕೆ, ಶುದ್ಧಿ-ಅಶುದ್ಧಿಯ ಮರುವ್ಯಾಖ್ಯಾನ ಎಂಬ ಸಂಕೀರ್ಣ ತಾತ್ವಿಕತೆಯನ್ನು ಕಟ್ಟಿಕೊಡುತ್ತಾನೆ. ಇದರಿಂದ ತಿಳಿಯುವುದೇನೆಂದರೆ, ಆಧ್ಯಾತ್ಮಿಕ ಆಳ ಗ್ರಂಥಪಾಂಡಿತ್ಯದ ಸ್ವತ್ತಲ್ಲ; ಪ್ರತಿ ಕಾಯಕವೂ, ಅದನ್ನು ಪ್ರಾಮಾಣಿಕವಾಗಿ, ಸಂಪೂರ್ಣ ಎಚ್ಚರದಿಂದ ನಿರ್ವಹಿಸಿದಾಗ, ಅದೇ ಒಂದು ದರ್ಶನವಾಗಿ ಅರಳಬಲ್ಲದು. ವೀರಗೊಲ್ಲಾಳರು ಕುರಿಕಾಯುತ್ತಲೇ ಶರಣರಾದರು; ಕುರಿಹಿಕ್ಕೆಯ ರಾಶಿಯಲ್ಲಿಯೇ ಲಿಂಗವನ್ನು ಕಂಡರು. ಇಂದಿಗೂ ಈ ವಚನಗಳು ಕೇಳುವ ಪ್ರಶ್ನೆ ತೀವ್ರವಾದದ್ದೇ ನಮ್ಮ ನಮ್ಮ ದಿನನಿತ್ಯದ ದುಡಿಮೆಯನ್ನು ನಾವು ಎಷ್ಟು ಪ್ರಾಮಾಣಿಕವಾಗಿ, ಎಷ್ಟು ಎಚ್ಚರದಿಂದ ನಿರ್ವಹಿಸುತ್ತಿದ್ದೇವೆ? ಶಾಸ್ತ್ರ ತಿಳಿಯದ ಗೊಲ್ಲಾಳನ ಈ ಪ್ರಶ್ನೆ, ಶಾಸ್ತ್ರ ಬಲ್ಲವರನ್ನೂ ಮೀರಿ ನಿಲ್ಲುತ್ತದೆ.
ಡಾ. ರವಿ ಸಿದ್ಲಿಪುರ
ಇವರು ರಾಣೇಬೆನ್ನೂರು ತಾಲೂಕಿನ ಸುಣಕಲ್ಲಬಿದರಿಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇದನ್ನೂ ಓದಿ- ಪಿ.ಲಂಕೇಶರ ‘ಅವ್ವ’: ನಿರಾಕರಣೆಯ ಅಸ್ತಿತ್ವ


