ನೊಂದವರ ನೋವಿಗೆ ಧ್ವನಿಯಾದ, ಭಾರತದ ಭಾಗ್ಯ ವಿಧಾತ ಡಾ.ಬಾಬಾಸಾಹೇಬ ಅಂಬೇಡ್ಕರ್ ರವರ ಕುರಿತು ಅದೆಷ್ಟೇ ನಾಟಕಗಳು ಬಂದರೂ ಸ್ವಾಗತಾರ್ಹ. ಅವರ ಬದುಕಿನ ವೇದನೆ ಮತ್ತು ಮೇರು ಸಾಧನೆಗಳನ್ನು ದೃಶ್ಯ ರೂಪದಲ್ಲಿ ಕಟ್ಟಿ ಹೆಚ್ಚು ಜನರಿಗೆ ತಲುಪಿಸುವಲ್ಲಿ ಕನ್ನಡ ರಂಗಮಾಧ್ಯಮ ಪ್ರಯತ್ನಿಸುತ್ತಲೇ ಬಂದಿದೆ..
ದಲಿತ ಪ್ರಜ್ಞೆಯ ಪ್ರತಿಭಾವಂತ ನಾಟಕಕಾರರಾದ ಕೋಟಗಾನಹಳ್ಳಿ ರಾಮಯ್ಯನವರು ಅವರ ಅನುಭವಕ್ಕೆ ದಕ್ಕಿದ ಬಾಬಾಸಾಹೇಬರನ್ನು “ನನ್ನ ಅಂಬೇಡ್ಕರ್” ಎನ್ನುವ ನಾಟಕ ರೂಪದಲ್ಲಿ ರಚಿಸಿದ್ದಾರೆ. ಬೆಳಗಾವಿಯ “ಆಶಾದೀಪ ಸಮುದಾಯ ಕಲಾಕೇಂದ್ರ” ಕ್ಕೆ ಬಾಬಾಸಾಹೇಬ ಕಾಂಬಳೆಯವರು ನಿರ್ದೇಶಿಸಿದ್ದು, ಕರ್ನಾಟಕ ನಾಟಕ ಅಕಾಡೆಮಿಯ ‘ತಿಂಗಳ ನಾಟಕ ಸಂಭ್ರಮ’ ಯೋಜನೆಯಡಿ ಜುಲೈ 18 ರಂದು ಕಲಾಗ್ರಾಮದ ಸಮುಚ್ಛಯ ಭವನದಲ್ಲಿ ಪ್ರದರ್ಶನಗೊಂಡಿತು.
ಇತ್ತೀಚೆಗೆ ರಾಮಯ್ಯನವರು ಬರೆದ “ಅಂಬೇಡ್ಕರ್ ಕೊಲ್ಯಾಜ್” ಎನ್ನುವ ನಾಟಕವನ್ನು ಮೈಸೂರು ರಂಗಾಯಣವು ಚಿದಂಬರರಾವ್ ಜಂಬೆಯವರ ನಿರ್ದೇಶನದಲ್ಲಿ ನಾಡಿನಾದ್ಯಂತ ಪ್ರದರ್ಶಿಸಿತ್ತು. ಬಹುತೇಕ ಅದೇ ಕೊಲ್ಯಾಜ್ ಮಾದರಿಯ, ಅದೇ ವಸ್ತು ವಿಷಯಗಳಿರುವ ನಾಟಕ ಈ “ನನ್ನ ಅಂಬೇಡ್ಕರ್”.
ಈ ನಾಟಕದ ಆರಂಭದಲ್ಲಿ ಸ್ವತಃ ನಾಟಕಕಾರರೇ ತಮ್ಮ ಪಾತ್ರವನ್ನು ಸೃಷ್ಟಿಸಿಕೊಂಡು ತಮ್ಮ ಒಳಗಿನ ಒತ್ತಡ ಹಾಗೂ ಗೊಂದಲಗಳನ್ನು ತೋಡಿಕೊಂಡಿದ್ದಾರೆ. “ನಾನು ಕೇವಲ ನಾಟಕಕಾರನಾಗಿದ್ದರೆ ಸಮಸ್ಯೆ ಇರ್ತಾ ಇರಲಿಲ್ಲವೇನೋ, ಆದರೆ ನಾನೊಬ್ಬ ದಲಿತ ಪ್ರಜ್ಞೆಯ ನಾಟಕಕಾರ. ಅದಕ್ಕೆ ನೂರೆಂಟು ಗೊಂದಲ, ಈ ದಲಿತ ಎನ್ನುವ ಲೇಬಲ್ ಯಾಕೆ ಬಂತು? ಈ ಲೇಬಲ್ ನನ್ನ ಆಯ್ಕೆಯೋ ಇಲ್ಲಾ ಬೇರೆಯವರು ಅಂಟಿಸಿದ್ದೋ ಗೊತ್ತಿಲ್ಲ. ಅಂತೂ ಈ ಲೇಬಲ್ಲಿನಿಂದ ನನಗೆ ಅವಮಾನ, ಅಭಿಮಾನ, ಅನುಕೂಲ ಅನನುಕೂಲಗಳಾಗಿವೆ, ಒಟ್ನಲ್ಲಿ ಈ ಲೇಬಲ್ ನನ್ನನ್ನ ಒಂದು ಜಾತಿಗೆ ಬಿಗಿದು ನನ್ನ ಪ್ರಜ್ಞೆ ಆಲೋಚನೆ ಬರವಣಿಗೆ ಕ್ರಿಯೆ ಎಲ್ಲವೂ ನಿರ್ಬಂಧಕ್ಕೆ ಒಳಪಟ್ಟಿದೆ” ಎಂದು ರಾಮಯ್ಯನವರು ನಾಟಕಕಾರನ ಪಾತ್ರದ ಮೂಲಕ ಹೇಳಿಸುತ್ತಾರೆ.

ಹೌದು.. ದಲಿತ ಎನ್ನುವ ಲೇಬಲ್ಲಿನಲ್ಲಿ ದಲಿತ ಸಮುದಾಯ ಈಗಲೂ ನೋವು ಅವಮಾನಗಳನ್ನು ಅನುಭವಿಸುತ್ತಲೇ ಇದೆ. ಹಾಗೂ ಅಂಬೇಡ್ಕರ್ ರವರ ಹೆಸರಿನಲ್ಲಿ ಕೆಲವರು ಅನುಕೂಲಗಳನ್ನೂ ಅನುಭವಿಸುತ್ತಿದ್ದಾರೆ. ಅಂಬೇಡ್ಕರ್ ರವರ ತತ್ವ ಸಿದ್ಧಾಂತ ಆದರ್ಶಗಳನ್ನು ಬಿಟ್ಟು ಅವರ ಜಯಂತಿ ಪರಿನಿರ್ವಾಣಗಳ ಆಚರಣೆಗಳಿಗೆ ಹೆಚ್ಚು ಮಹತ್ವ ಕೊಡುತ್ತಿದ್ದಾರೆ. ಈ ಆತಂಕ ಈ ನಾಟಕಕಾರನನ್ನು ಬಾಧಿಸಿದೆ. ಹೀಗಾಗಿ ನಾಟಕದ ಆರಂಭಕ್ಕೆ ಅಂಬೇಡ್ಕರ್ ಪ್ರತಿಮೆಯೇ ಜೀವ ತಳೆದು ಜಯಂತಿಯ ಜಯಕಾರದ ಸಂದರ್ಭದಲ್ಲಿ “ಅರೆ ಇದೇನಿದು ದಿಕ್ಕೆ ಬದಲಾಗಿ ಹೋಗಿದೆಯಲ್ಲಾ, ಇದಕ್ಕೇ ನಾನು ನನ್ನ ಹುಟ್ಟು ಹಬ್ಬದ ಆಚರಣೆಗೆ ವಿರೋಧ ವ್ಯಕ್ತಪಡಿಸಿದ್ದು. ಆರಾಧನೆ, ವ್ಯಕ್ತಿ ಪೂಜೆಗಳು ಮೌಢ್ಯವನ್ನು ಬಿತ್ತಿ ಬೆಳೆಯಬಲ್ಲುದು, ಅದು ಒಂದು ಸಾರ್ವಜನಿಕ ಅಸಹ್ಯವಾಗಿಯೂ ಪರಿಣಮಿಸಬಹುದು” ಎಂದು ಹೇಳುವ ಮಾತುಗಳು ತುಂಬಾ ಮಾರ್ಮಿಕವಾಗಿವೆ.
“ನಡೆಗಳಲ್ಲಿ ನುಡಿಗಳಲ್ಲಿ ಕಂಡುಕೊಳ್ಳುವುದನ್ನು ಗುಡಿಗಳಲ್ಲಿ ಕಂಡುಕೊಳ್ಳುವಂತಾಗಿರುವುದು ವೈಚಾರಿಕ ದಾರಿದ್ರ್ಯ, ನನ್ನ ಆಲೋಚನೆಗಳನ್ನು ಸರಿಯಾದ ದಿಕ್ಕಿನತ್ತ ನಡೆಸಬೇಕು ಎಂಬ ಜವಾಬ್ದಾರಿ ಮರೆತು, ನನ್ನ ಹೆಸರನ್ನು ತೂಗುಯ್ಯಾಲೆ ಮಾಡಿಕೊಂಡು ತೂಗಿ ತೂಗಿ ಆಕಳಿಸುತ್ತಾ ದೀರ್ಘ ನಿದ್ರೆಗೆ ಜಾರತಾ ಇರುವ ಗುಲಾಮ ಪೀಳಿಗೆ” ಎನ್ನುವ ಅಂಬೇಡ್ಕರ್ ಪ್ರತಿಮೆಯ ಮಾತು ಪ್ರತಿಯೊಬ್ಬರ ಆತ್ಮಸಾಕ್ಷಿಯನ್ನು ಪ್ರಶ್ನಿಸುವಂತಿದೆ.
“ನನ್ನ ಒಳಗನ್ನಾಗಲೀ, ನನ್ನ ವಿಚಾರಗಳ ತಿರುಳನ್ನಾಗಲೀ ಮುಟ್ಟೋವಂತಹ ಪೀಳಿಗೆ ಇನ್ನೂ ಬಂದಿಲ್ಲ. ಬಂದೇ ಬರ್ತಾರೆ ಎನ್ನುವ ಭರವಸೆ ನನ್ನದು. ನಾನೂ ಅಂಥ ಪೀಳಿಗೆಗಾಗಿ ಹುಡುಕ್ತಾನೇ ಇರ್ತೀನಿ.. ಕಾಯ್ತಾನೇ ಇರ್ತೀನಿ” ಎಂದು ಪ್ರತಿಮೆಯ ಮೂಲಕ ಹೇಳಿಸುವ ನಾಟಕಕಾರರು ಹತಾಶೆಯ ನಡುವೆಯೂ ಆಶಾ ಭಾವನೆ ವ್ಯಕ್ತಪಡಿಸಿದ್ದಾರೆ. ಇದು ಈ ‘ನನ್ನ ಅಂಬೇಡ್ಕರ್” ನಾಟಕದ ಆಶಯವೂ ಆಗಿದೆ.
ಇದನ್ನು ಹೊರತು ಪಡಿಸಿ ಅಂಬೇಡ್ಕರ್ ಬದುಕಿನ ಕೆಲವು ಪ್ರಮುಖ ಘಟನೆಗಳನ್ನು ಕ್ರಮಬದ್ಧತೆ ಇಲ್ಲದೇ ಚಿತ್ತ ಬಂದ ಹಾಗೆ ಜೋಡಿಸಲಾಗಿದೆ. ನಾಟಕಕ್ಕೆ ನೇರ ಸಂಬಂಧವಿಲ್ಲದೇ ಇರುವ ವೇಮುಲ ಪಾತ್ರ ಸೃಷ್ಟಿಯನ್ನೂ ಮಾಡಿ ನೋಡುಗರನ್ನು ಗೊಂದಲಗೊಳಿಸಲಾಗಿದೆ. ಪ್ಲಾಶ್ ಬ್ಯಾಕ್ ದೃಶ್ಯಗಳನ್ನು ಜೋಡಿಸಿ ಕಲಸುಮೇಲೋಗರ ಮಾಡಲಾಗಿದೆ. ಬಿಡಿ ಹೂವುಗಳನ್ನು ಒಂದು ದಾರದಲ್ಲಿ ಪೋಣಿಸಿ ಹಾರ ಮಾಡಿದರೆ ಚೆಂದ. ಆದರಿಲ್ಲಿ ಯಾವುದ್ಯಾವುದೋ ಬಿಡಿ ಘಟನೆಗಳನ್ನು ಯಾವುದೇ ಸೂತ್ರ ಬಂಧ ಚೌಕಟ್ಟಿನ ಹಂಗಿಲ್ಲದೇ ಪ್ರೇಕ್ಷಕರ ಮುಂದಿರಿಸಲಾಗಿದೆ. ಹೀಗಾಗಿ ನಾಟಕ ಎಲ್ಲಿಂದ ಎಲ್ಲಿಗೋ ಪಯಣಿಸಿ ಕೊನೆಗೆ ಪರಿನಿರ್ವಾಣದಲ್ಲಿ ಕೊನೆ ಗೊಳ್ಳುತ್ತದೆ. ನೋಡುಗರ ಚಿತ್ತ ಭಿತ್ತಿಯಲ್ಲಿ ಇಡೀ ನಾಟಕ ಅಚ್ಚೊತ್ತದೇ ಬಿಡಿ ದೃಶ್ಯಗಳು ಮಾತ್ರ ಗೋಚರಿಸುವಂತಾಗಿದೆ.
ಜ್ಯೋತಿಬಾ ಪುಲೆ ಪಾತ್ರ ಬಂದು ಶೂದ್ರರು ಯಾರು ಎಂದು ವಿವರಿಸೋದು, ತಮ್ಮ ಹೆಂಡತಿ ರಮಾ ಹಾಗೂ ತೀರಿಕೊಂಡ ಮಕ್ಕಳನ್ನು ಅಂಬೇಡ್ಕರ್ ರವರು ಸ್ಮರಿಸಿಕೊಳ್ಳುವುದು, ಹೆಸರಿಲ್ಲದ ಬಾಲಕ ರಾಹುಲ್ ವೇಮುಲ ಆಗಿದ್ದು, ಅಂಬೇಡ್ಕರ್ ಕಾಲಾನಂತರ ಅವರ ದೆಹಲಿಯ ಮನೆಯನ್ನು ಖಾಲಿ ಮಾಡಲು ಅವರ ಹೆಂಡತಿ ಸವಿತಾರವರಿಗೆ ಕೋರ್ಟ್ ಆದೇಶ ಮಾಡಿದ್ದು, ಪಾರ್ಸಿ ವಸತಿ ಗೃಹದಲ್ಲಿ ಜಾತಿ ಕಾರಣಕ್ಕೆ ಅಂಬೇಡ್ಕರ್ ರವರನ್ನು ಅವಮಾನಿಸಿ ಹೊರಗೆ ಹಾಕಿದ್ದು, ವೇಮುಲ ಆತ್ಮಹತ್ಯೆ ಪತ್ರ ಓದಿದ್ದು, ಬಾಬಾಸಾಹೇಬರು ತಮ್ಮ ‘ಬುದ್ಧ ಮತ್ತು ಧಮ್ಮ’ ಎನ್ನುವ ಸಂಶೋಧನಾತ್ಮಕ ಪುಸ್ತಕ ಪ್ರಕಟಿಸಲು ಪರದಾಡಿದ್ದು, ಮಹಾಡ್ ಕೆರೆಗೆ ಬಂದು ಬಾಬಾಸಾಹೇಬರು ಸಮಾನತೆಯ ಭಾಷಣ ಮಾಡಿದ್ದು, ಮಹಾತ್ಮಾ ಗಾಂಧಿಯವರೊಂದಿಗೆ ಚರ್ಚಿಸಿದ್ದು, ಕೊನೆಗೆ ಬೌದ್ದ ದೀಕ್ಷೆ ಪಡೆದಿದ್ದು… ಹೀಗೆ ಇಷ್ಟೆಲ್ಲಾ ಚದುರಿದ ಚಿತ್ರಗಳಂತಹ ದೃಶ್ಯಗಳನ್ನು “ನನ್ನ ಅಂಬೇಡ್ಕರ್” ನಾಟಕ ಅನಾವರಣಗೊಳಿಸುತ್ತದೆ.

ಈ ಕಲಸುಮೇಲೋಗರದ ಇಂತಹ ಬೌದ್ಧಿಕ ಪ್ರಧಾನ ನಾಟಕವನ್ನು ನೋಡಬೇಕಾದರೆ ಮೊದಲೇ ಅಂಬೇಡ್ಕರ್ ರವರ ಕುರಿತು ತಿಳಿದಿದ್ದರೆ ಇಡೀ ನಾಟಕ ಅರ್ಥವಾಗಬಹುದೇನೋ? ಬಾಬಾಸಾಹೇಬರ ಬದುಕಿನ ಆಳ ಅಗಲ ಗೊತ್ತಿರದ ಪ್ರೇಕ್ಷಕರಿಗೆ ಈ ನಾಟಕ ಕನೆಕ್ಟ್ ಆಗುವುದು ಕಷ್ಟಸಾಧ್ಯ. ಸರಳವಾಗಿ ಹೇಳಬಹುದಾದ್ದನ್ನು ಅದ್ಯಾಕೆ ಇಷ್ಟೊಂದು ಗೊಂದಲಕಾರಿಯಾಗಿ ತೋರಿಸಿದ್ದಾರೋ ಗೊತ್ತಿಲ್ಲ. ನಿರ್ದೇಶಕರಾದರೂ ಆದಷ್ಟೂ ಸರಳವಾಗಿ ಹಾಗೂ ಕ್ರಮಬದ್ಧವಾಗಿ ದೃಶ್ಯ ಜೋಡಣೆ ಮಾಡಿದ್ದರೆ ಈ ನಾಟಕ ಸಾಮಾನ್ಯ ಪ್ರೇಕ್ಷಕರ ಮೆದುಳಿಗೆ ಇಳಿಯಬಹುದಾಗಿತ್ತು. ನೋಡುಗರ ಮನಸ್ಸನ್ನು ಮುಟ್ಟಬಹುದಾಗಿತ್ತು.
ಪ್ರಿ ರೆಕಾರ್ಡೆಡ್ ಹಾಡು ಹಾಗೂ ಹಿನ್ನಲೆ ಸಂಗೀತದ ಜೊತೆಗೆ ಲೈವ್ ಹಾಡುಗಳನ್ನು ಮಿಶ್ರ ಗೊಳಿಸಿದ್ದು “ಅರಿವೇ ಅಂಬೇಡ್ಕರಾ, ಗುರುವೇ ಅಂಬೇಡ್ಕರಾ” ಎನ್ನುವ ಹಾಡು ಕೇಳುಗರಲ್ಲಿ ಸಂಚಲನವನ್ನುಂಟು ಮಾಡಿತು. ಅದ್ಯಾಕೋ ನಾಟಕದಲ್ಲಿ ಬಳಸಲಾದ ನೃತ್ಯಗಳು ಬ್ಲೆಂಡ್ ಆಗದೇ ಬಲವಂತವಾಗಿ ಸೇರ್ಪಡೆಯಾದಂತಿತ್ತು. ನಿರ್ದೇಶಕರು ನೃತ್ಯ ಸಂಯೋಜನೆಯತ್ತ ಇನ್ನೂ ಹೆಚ್ಚು ಗಮನ ಹರಿಸಬಹುದಾಗಿತ್ತು. ಅವುಗಳನ್ನು ತೆಗೆದಿದ್ದರೂ ನಾಟಕಕ್ಕೆ ಏನೂ ತೊಂದರೆಯಾಗುತ್ತಿರಲಿಲ್ಲ.
ಇನ್ನೂ ಹೊಸಬರು ಅಭಿನಯದಲ್ಲಿ ಪಳಗಬೇಕಿದೆ ಹಾಗೂ ನಿರ್ದೇಶಕರು ಪಳಗಿಸಬೇಕಿದೆ. ಅಂಬೇಡ್ಕರ್ ಪಾತ್ರವನ್ನು ಸುನಿಲ್ ಎನ್ನುವ ಯುವಕ ತನ್ನ ಶಕ್ತಿ ಮೀರಿ ಅಭಿನಯಿಸಿದ್ದರೂ ಪ್ರತಿ ಸಂಭಾಷಣೆಯನ್ನೂ ಸದಾ ಸಿಟ್ಟಿನಲ್ಲೇ ಹೇಳುವ ಅಗತ್ಯ ಇರಲಿಲ್ಲ. ಈ ನಾಟಕದಲ್ಲಿ ಸಿಡುಕ ಅಂಬೇಡ್ಕರ್ ರವರನ್ನು ಕಾಣಬಹುದಾಗಿದೆ. ನಾಟಕದಲ್ಲಿ ಗಮನಸೆಳೆದದ್ದು ಅಂಬೇಡ್ಕರ್ ಪುತ್ತಳಿಯ ಮೇಕಪ್ ಮತ್ತು ಕಾಸ್ಟೂಮ್ ಹಾಗೂ ಸಹನೆಯಿಂದ ಹತ್ತಾರು ನಿಮಿಷಗಳ ಕಾಲ ಕೈಎತ್ತಿ ತೋರುಬೆರಳು ತೋರಿಸುವ ದೃಶ್ಯ. ಅದ್ಯಾಕೋ ವಸ್ತ್ರಾಲಂಕಾರ ಸಮರ್ಪಕ ಎನ್ನಿಸುವಂತಿಲ್ಲ. ಅಂಬೇಡ್ಕರ್ ರವರಿಗೆ ತೊಡಿಸಿದ ನಿಲುವಂಗಿಯಂತಹ ಕೋಟು ಸಹಜ ಸೈಜಿನದಾಗಿರಲಿಲ್ಲ. ಕೊನೆಗೆ ಬೌದ್ದ ಧರ್ಮ ಸ್ವೀಕಾರದ ಸಮಯದಲ್ಲಿ ಬೌದ್ದ ಭಿಕ್ಕುಗಳ ವೇಷವನ್ನು ಅಂಬೇಡ್ಕರ್ ರವರಿಗೆ ತೊಡಿಸುವುದನ್ನು ಬಿಟ್ಟು ಬಿಳಿ ಶ್ವೇತಾಂಬರಿ ಜೈನರ ಹಾಗೆ ಬಿಳಿ ವಸ್ತ್ರ ತೊಡಿಸಿದ್ದು ಅತ್ಯಂತ ಆಭಾಸಕಾರಿಯಾಗಿದೆ.
ನಾಟಕದ ಎಲ್ಲಾ ವಿಭಾಗದಲ್ಲೂ ವೃತ್ತಿಪರತೆಯ ಕೊರತೆ ಎದ್ದು ಕಾಣುತ್ತಿತ್ತು. ನಾಟಕ ಅಕಾಡೆಮಿ ಸ್ಪಾನ್ಸರ್ ನಾಟಕ ಎಂಬ ನಿರೀಕ್ಷೆಯಿಂದ ಬಂದವರಿಗೆ ಸಾಧಾರಣವಾದ ನಾಟಕ ನೋಡಿದ್ದು ಒಂದಿಷ್ಟು ನಿರಾಸೆಯೂ ಆಯ್ತು.
ದೃಶ್ಯ ಸಂಯೋಜನೆಯಲ್ಲಿ ಕ್ರಮಬದ್ಧತೆ ತೋರಿದ್ದರೆ, ಹಾಡು ಸಂಗೀತದಲ್ಲಿ ಒಂಚೂರು ಅಬ್ಬರ ಕಡಿಮೆ ಮಾಡಿದ್ದರೆ, ಪಾತ್ರೋಚಿತವಾಗಿ ವಸ್ತ್ರವಿನ್ಯಾಸ ಮಾಡಿದ್ದರೆ, ಸಾಂಕೇತಿಕ ಸೆಟ್ ಡಿಸೈನ್ ಮಾಡಿದ್ದರೆ ಈ ನಾಟಕ ಕಳೆಗಟ್ಟುತ್ತಿತ್ತು. ಸ್ವಲ್ಪ ಅರ್ಜೆಂಟಲ್ಲಿ ನಿರ್ಮಿಸಿದಂತಿರುವ “ನನ್ನ ಅಂಬೇಡ್ಕರ್” ಮುಂದಿನ ಪ್ರದರ್ಶನದಲ್ಲಿ ಸೂಕ್ತ ಬದಲಾವಣೆಗಳೊಂದಿಗೆ ಪ್ರಯೋಗವಾದರೆ ನೋಡುಗರ ಅಂಬೇಡ್ಕರ್ ಆಗಬಹುದಾಗಿದೆ.
ಏನೇ ಆಗಲಿ ಪ್ರಯೋಗಶೀಲತೆಯ ಪ್ರಯತ್ನ ದೊಡ್ಡದು, ಹಾಗೆಯೇ ವೃತ್ತಿಪರತೆಯ ಕೊರತೆ ನೀಗಿಕೊಳ್ಳಬಹುದಾದದ್ದು. ಈ ನಾಟಕದಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಹಾಗೂ ಇತರ ಕಾಲೇಜುಗಳ ವಿದ್ಯಾರ್ಥಿಗಳೇ ನಟಿಸಿದ್ದು ಅವರಿಗಿನ್ನೂ ಅಭಿನಯದ ಅನುಭವ ಸಾಲದು. ಹೊಸ ಯುವಕರಲ್ಲಿರುವ ಪ್ರತಿಭೆಯನ್ನು ಹೊರತೆಗೆದು ಪಾತ್ರವಾಗಿಸುವ ನಿಟ್ಟಿನಲ್ಲಿ ನಿರ್ದೇಶಕರು ಇನ್ನೂ ಶ್ರಮಿಸಬೇಕಿದೆ. ಮುಂದಿನ ಪ್ರದರ್ಶನಗಳಲ್ಲಿಯಾದರೂ ನಾಟಕ ಇನ್ನಷ್ಟು ಗಟ್ಟಿಯಾಗಬೇಕಿದೆ.
ಶಶಿಕಾಂತ ಯಡಹಳ್ಳಿ
ಇವರು ಕನ್ನಡದ ಪ್ರಮುಖ ರಂಗಕರ್ಮಿಗಳು, ಪತ್ರಕರ್ತರು, ಅಂಕಣಕಾರರು. ಪ್ರಚಲಿತ ಸಾಮಾಜಿಕ ಹಾಗೂ ರಾಜಕೀಯ ವಿದ್ಯಮಾನಗಳ ಬಗ್ಗೆ ತಮ್ಮ ವಿಚಾರಗಳನ್ನು ಪ್ರಖರವಾಗಿ ಮಂಡಿಸುತ್ತಾ ಬಂದಿದ್ದಾರೆ.
ಇದನ್ನೂ ಓದಿ- ಪ್ರಹಸನ | ಗಂಡಿಗೆ ಬೇಕು ಅಂಕುಶ


