ಬೆಂಗಳೂರು : ಮಾಧ್ಯಮ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಅಧಿಕೃತ ಸಂವಹನದ ಕುರಿತು ಪೊಲೀಸ್ ಸಿಬ್ಬಂದಿಗೆ ರಾಜ್ಯ ಸರಕಾರ ಸಮಗ್ರ ಮಾರ್ಗಸೂಚಿಗಳನ್ನು ಹೊರಡಿಸಿದೆ.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ, ಅಪರಾಧ ತನಿಖೆ ಹಾಗೂ ಸಾರ್ವಜನಿಕ ಸುರಕ್ಷತೆಗೆ ಸಂಬಂಧಿಸಿದ ಮಾಹಿತಿಯನ್ನು ಜವಾಬ್ದಾರಿಯುತವಾಗಿ ಮತ್ತು ಸಮನ್ವಯದೊಂದಿಗೆ ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರ ಕಚೇರಿಯಿಂದ ಹೊರಡಿಸಿರುವ ಹೊಸ ಮಾರ್ಗಸೂಚಿಗಳ ಮೂಲಕ, ಪೊಲೀಸ್ ಇಲಾಖೆಯ ವಿವಿಧ ಹಂತಗಳಲ್ಲಿ ಮಾಧ್ಯಮಗಳಿಗೆ ನೀಡಲಾಗುವ ಮಾಹಿತಿ, ಅಪರಾಧ ಪ್ರಕರಣಗಳ ತನಿಖಾ ವಿವರಗಳು ಹಾಗೂ ಸಾರ್ವಜನಿಕ ಪ್ರಕಟಣೆಗಳ ಕುರಿತು ಸ್ಪಷ್ಟ ನಿಯಮಾವಳಿ ಜಾರಿಗೆ ತರಲಾಗಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಲಿಖಿತ ಅನುಮತಿಯಿಲ್ಲದೆ ಸ್ವತಂತ್ರ ಹೇಳಿಕೆಗಳನ್ನು ನೀಡಬಾರದು, ಮಾಧ್ಯಮ ಚರ್ಚೆಗಳಲ್ಲಿ ಭಾಗವಹಿಸಬಾರದು, ತನಿಖಾ ವಿವರಗಳು, ಆಂತರಿಕ ಸಂವಹನಗಳು, ಅಪರಾಧ ಸ್ಥಳದ ಛಾಯಾಚಿತ್ರಗಳು, ವೀಡಿಯೊಗಳು ಅಥವಾ ಅಧಿಕೃತ ದಾಖಲೆಗಳನ್ನು ಹಂಚಿಕೊಳ್ಳಬಾರದು ಎಂದು ಪೊಲೀಸ್ ಸಿಬ್ಬಂದಿಗೆ ನಿರ್ದೇಶಿಸಲಾಗಿದೆ.
ಈ ಶಿಷ್ಟಾಚಾರವು ಸಾಮಾಜಿಕ ಮಾಧ್ಯಮಗಳಿಗೂ ವಿಸ್ತರಿಸುತ್ತದೆ, ನಡೆಯುತ್ತಿರುವ ತನಿಖೆಗಳು, ಗುಪ್ತಚರ ಮಾಹಿತಿಗಳು ಮತ್ತು ಸೂಕ್ಷ್ಮ ಕಾರ್ಯಾಚರಣೆಯ ವಿಷಯಗಳಿಗೆ ಸಂಬಂಧಿಸಿದ ಅನಧಿಕೃತ ಪೋಸ್ಟ್ಗಳು ಅಥವಾ ಮಾಹಿತಿಯ ಪ್ರಸರಣವನ್ನು ನಿಷೇಧಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದಾದ್ಯಂತ ಪೊಲೀಸ್ ಠಾಣೆಗಳು, ಜಿಲ್ಲಾ ಪೊಲೀಸ್ ಕಚೇರಿಗಳು, ನಗರ ಪೊಲೀಸ್ ಆಯುಕ್ತಾಲಯಗಳು ಹಾಗೂ ವಿಶೇಷ ಘಟಕಗಳು ಮಾಧ್ಯಮಗಳಿಗೆ ಮಾಹಿತಿ ಹಂಚುವ ಸಂದರ್ಭದಲ್ಲಿ ಏಕೀಕೃತ ವಿಧಾನವನ್ನು ಅನುಸರಿಸಲಿದ್ದು, ಇದರಿಂದ ತಪ್ಪು ಮಾಹಿತಿ ಹರಡುವುದನ್ನು ತಡೆಯುವ ಜೊತೆಗೆ ತನಿಖೆಯ ಗೌಪ್ಯತೆ ಕಾಪಾಡಲು ಸಹಾಯವಾಗಲಿದೆ ಎಂದೂ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

