ಬೆಂಗಳೂರು : ಜಿಬಿಎ ವ್ಯಾಪ್ತಿಯಲ್ಲಿ ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವುದಿಲ್ಲ, ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಿಂದ ವಾರ್ಡ್ ರಸ್ತೆಗಳಿಗೆ ಸ್ಥಳಾಂತರಿಸುವ ಕಾರ್ಯವನ್ನು ಕೈಗೊಳ್ಳಲಾಗುತ್ತಿದೆ ಎಂದು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಸ್ಪಷ್ಟಪಡಿಸಿದರು.
ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಸಂಬಂಧಿತ ಅಧಿಕಾರಿಗಳ ಜೊತೆ ನಡೆದ ವರ್ಚುವಲ್ ಸಭೆ(VC)ಯನ್ನು ಉದ್ದೇಶಿಸಿ ಮಾತನಾಡಿದ ಅವರು, ಪಾದಚಾರಿ ಮಾರ್ಗಗಳಿಂದ ಬೀದಿ ಬದಿ ವ್ಯಾಪಾರಿಗಳಷ್ಟೇ ಅಲ್ಲದೆ, ವಿವಿಧ ಅಡೆತಡೆಗಳು, ಅನಾಥ ವಾಹನಗಳು ಹಾಗೂ ಅಕ್ರಮವಾಗಿ ನಿಲ್ಲಿಸಿರುವ ಪಾರ್ಕಿಂಗ್ ವಾಹನಗಳನ್ನು ಸಹ ತೆರವುಗೊಳಿಸಿ, ನಾಗರಿಕರಿಗೆ ಸುಗಮ ಹಾಗೂ ವ್ಯವಸ್ಥಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕು ಎಂದು ಸೂಚಿಸಿದರು. ಈ ಸಂಬಂಧ ಎಲ್ಲ ಒತ್ತುವರಿಗಳನ್ನು ಹಂತ ಹಂತವಾಗಿ ತೆರವುಗೊಳಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಗರದಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯಾಚರಣೆಗೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಪ್ರಮುಖ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳನ್ನು ಹೊರತುಪಡಿಸಿ, ಉಳಿದ ವಾರ್ಡ್ ರಸ್ತೆಗಳಲ್ಲಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಬೀದಿ ಬದಿ ವ್ಯಾಪಾರಿಗಳು ವ್ಯಾಪಾರ ನಡೆಸಲು ಅವಕಾಶ ಕಲ್ಪಿಸುವ ಕುರಿತು ಮಾಹಿತಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಇರುವ ವ್ಯವಸ್ಥೆಯನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಿದರೆ ಸಾರ್ವಜನಿಕರ ಬೆಂಬಲವೂ ದೊರೆಯುತ್ತದೆ. ಅಸಾಧ್ಯವೆನಿಸುವ ಕೆಲಸವನ್ನೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಎಲ್ಲ ಅಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೆಂಗಳೂರಿನ ನಾಗರಿಕರಿಗೆ ಸುಗಮ, ಸುರಕ್ಷಿತ ಹಾಗೂ ವ್ಯವಸ್ಥಿತ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿಕೊಡಬೇಕು ಎಂದು ಹೇಳಿದರು.
ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ:
ಪಾದಚಾರಿ ಮಾರ್ಗಗಳ ಒತ್ತುವರಿ ತೆರವುಗೊಳಿಸಿದ ರಸ್ತೆಗಳಲ್ಲಿ ತಕ್ಷಣವೇ ಅಭಿವೃದ್ಧಿ ಕಾಮಗಾರಿಗಳನ್ನು ಆರಂಭಿಸಬೇಕು. ಇತರೆ ರಸ್ತೆಗಳಲ್ಲಿ ಪಾದಚಾರಿ ಮಾರ್ಗಗಳ ಒತ್ತುವರಿಯನ್ನು ನಿರಂತರವಾಗಿ ತೆರವುಗೊಳಿಸುವ ಕಾರ್ಯವೂ ಸಮಾನಾಂತರವಾಗಿ ನಡೆಯಬೇಕು. ಪಾದಚಾರಿಗಳಿಗೆ ಸುರಕ್ಷಿತ ಹಾಗೂ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಉತ್ತಮ ಗುಣಮಟ್ಟದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಬೇಕೆಂದು ಸೂಚಿಸಿದರು.
ಅಭಿವೃದ್ಧಿಪಡಿಸಿದ ಪಾದಚಾರಿ ಮಾರ್ಗಗಳ ಪರಿಶೀಲನೆ:
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲೂ ಪಾದಚಾರಿ ಮಾರ್ಗಗಳ ಒತ್ತುವರಿ ತೆರವು ಕಾರ್ಯ ಪೂರ್ಣಗೊಂಡ ಬಳಿಕ, ಅವುಗಳನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಬೇಕು. ನಂತರ ಸ್ಥಳೀಯ ನಾಗರಿಕರೊಂದಿಗೆ ಅಭಿವೃದ್ಧಿಪಡಿಸಿದ ಪಾದಚಾರಿ ಮಾರ್ಗಗಳ ಪರಿಶೀಲನೆ ನಡೆಸಿ, ಸಾರ್ವಜನಿಕರ ಅಭಿಪ್ರಾಯವನ್ನೂ ಪಡೆಯಬೇಕು ಎಂದು ಸೂಚಿಸಿದರು.
ಜುಲೈ 10ರಿಂದ ಅನಾಥ ವಾಹನಗಳ ತೆರವು ಅಭಿಯಾನ:
ನಗರದ ರಸ್ತೆ ಬದಿಗಳಲ್ಲಿ ನಿಂತಿರುವ ಅನಾಥ ವಾಹನಗಳ ತೆರವು ಕಾರ್ಯಾಚರಣೆಯನ್ನು ಜುಲೈ 10ರಿಂದ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ನಗರ ಪಾಲಿಕೆ ಹಾಗೂ ಸಂಚಾರಿ ಪೊಲೀಸರ ಸಮನ್ವಯದೊಂದಿಗೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿ, ವ್ಯವಸ್ಥಿತ ಕಾರ್ಯಯೋಜನೆ ರೂಪಿಸಿ ಅಭಿಯಾನವನ್ನು ಪರಿಣಾಮಕಾರಿಯಾಗಿ ನಡೆಸುವಂತೆ ಸೂಚಿಸಿದರು.
ಬೃಹತ್ ತ್ಯಾಜ್ಯ ಹಾಗೂ ಗಿಡಗಂಟಿಗಳ ತೆರವು:
ನಗರದಲ್ಲಿರುವ ಬೃಹತ್ ಕಟ್ಟಡ ತ್ಯಾಜ್ಯ ಹಾಗೂ ಗಿಡಗಂಟಿಗಳ ತೆರವು ಅಭಿಯಾನವನ್ನು ಜುಲೈ 15ರ ನಂತರ ಆರಂಭಿಸಲು ಯೋಜನೆ ರೂಪಿಸಬೇಕು. ಈ ಅಭಿಯಾನವನ್ನು ನಗರ ಪಾಲಿಕೆ, ಮೆಟ್ರೋ ಹಾಗೂ ರೈಲ್ವೆ ಇಲಾಖೆಗಳ ಸಹಯೋಗದಲ್ಲಿ ಜಂಟಿಯಾಗಿ ನಡೆಸಿ, ನಗರವನ್ನು ಮತ್ತಷ್ಟು ಸ್ವಚ್ಛ ಹಾಗೂ ಸುಂದರಗೊಳಿಸುವ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದರು.
ಪಾದಚಾರಿ ಮಾರ್ಗಗಳ ಮೇಲಿನ ರ್ಯಾಂಪ್ಗಳ ತೆರವು:
ನಗರದಲ್ಲಿ ಮತ್ತೊಂದು ಪ್ರಮುಖ ಸಮಸ್ಯೆಯೆಂದರೆ ಮನೆಗಳು ಹಾಗೂ ವಾಣಿಜ್ಯ ಕಟ್ಟಡಗಳ ಮುಂಭಾಗದಲ್ಲಿ ವಾಹನಗಳ ಪ್ರವೇಶಕ್ಕಾಗಿ ಪಾದಚಾರಿ ಮಾರ್ಗಗಳ ಮೇಲೆ ರ್ಯಾಂಪ್ಗಳನ್ನು ನಿರ್ಮಿಸಲಾಗಿದೆ. ಇದರಿಂದ ಪಾದಚಾರಿಗಳ ಓಡಾಟಕ್ಕೆ ತೀವ್ರ ತೊಂದರೆಯಾಗುತ್ತಿದೆ. ಆದ್ದರಿಂದ ಮುಂದಿನ ಹಂತದಲ್ಲಿ ಇಂತಹ ರ್ಯಾಂಪ್ಗಳನ್ನು ತೆರವುಗೊಳಿಸುವ ವಿಶೇಷ ಕಾರ್ಯಾಚರಣೆಯನ್ನು ಕೈಗೆತ್ತಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸುಪ್ರೀಂಕೋರ್ಟ್ ಆದೇಶದ ಹಿನ್ನಲೆ ಫುಟ್ಪಾತ್ ತೆರವು
ಪಾದಾಚಾರಿ ಒತ್ತುವರಿ ತೆರವು ಕಾರ್ಯಾಚರಣೆ ಕುರಿತು ಬೆಂಗಳೂರಿನ ನಾಗರೀಕರಲ್ಲಿ ವಿಡಿಯೋ ಮೂಲಕ ತಮ್ಮ ಅಭಿಪ್ರಾಯವನ್ನೂ ಹಂಚಿಕೊಂಡಿರುವ ಅವರು, “ಬೆಂಗಳೂರಿನ ಜನರ ಬಹುವರ್ಷಗಳ ಒತ್ತಾಯ ಮತ್ತು ಮತ್ತೊಂದೆಡೆ ಸುಪ್ರೀಂ ಕೋರ್ಟ್ನ ಆದೇಶದ ಹಿನ್ನೆಲೆಯಲ್ಲಿ, ಬೆಂಗಳೂರಿನ ಕೆಲವು ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ.
ಬೆಂಗಳೂರು ಉತ್ತಮ ನಗರವಾಗಿರಬೇಕು. ನಗರದಲ್ಲಿ ವಾಸಿಸುವ ಜನರಿಗೆ ಅಗತ್ಯ ಮೂಲಸೌಕರ್ಯಗಳು ಲಭ್ಯವಾಗಬೇಕು. ಅವುಗಳಲ್ಲಿ ಸುರಕ್ಷಿತ ಪಾದಚಾರಿ ಮಾರ್ಗವೂ ಒಂದು. ಎಲ್ಲ ರಸ್ತೆಗಳಲ್ಲಿಯೂ ಒತ್ತುವರಿ ತೆರವುಗೊಳಿಸುವುದು ತಕ್ಷಣ ಸಾಧ್ಯವಾಗದಿದ್ದರೂ, ಹೆಚ್ಚು ಜನ ಸಂಚರಿಸುವ ರಸ್ತೆಗಳಲ್ಲಿ ಆದ್ಯತೆಯ ಮೇರೆಗೆ ಕಾರ್ಯಾಚರಣೆ ನಡೆಸುವುದು ಸರ್ಕಾರದ ಕರ್ತವ್ಯವಾಗಿದ್ದು, ಇದು ಸಾರ್ವಜನಿಕರ ಬಹುಕಾಲದ ಬೇಡಿಕೆಯೂ ಆಗಿದೆ.
ಪಾದಚಾರಿ ಮಾರ್ಗದಲ್ಲಿ ನಡೆಯಲು ಸಾಧ್ಯವಾಗದಿದ್ದರೆ ಜನರು ರಸ್ತೆಯಲ್ಲೇ ನಡೆಯಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ವಾಹನ ಡಿಕ್ಕಿ ಹೊಡೆಯುವ ಅಥವಾ ಅಪಘಾತ ಸಂಭವಿಸುವ ಅಪಾಯ ಹೆಚ್ಚಾಗುತ್ತದೆ. ಅದರ ಪರಿಣಾಮವಾಗಿ ಪ್ರಾಣಹಾನಿ ಸಂಭವಿಸಬಹುದು ಅಥವಾ ಗಂಭೀರ ಗಾಯಗಳಾಗಬಹುದು. ಪ್ರತಿವರ್ಷ ನೂರಾರು ಜನರು ಪಾದಚಾರಿ ಮಾರ್ಗ ಬಳಸಲು ಸಾಧ್ಯವಾಗದೆ ರಸ್ತೆಯಲ್ಲಿ ಸಂಚರಿಸುವ ವೇಳೆ ಅಪಘಾತಕ್ಕೀಡಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಅನೇಕರು ಕೈ-ಕಾಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಕೆಲವರು ಜೀವನಪೂರ್ತಿ ಹಾಸಿಗೆ ಹಿಡಿಯುವಂತಹ ಸ್ಥಿತಿಗೆ ತಲುಪುತ್ತಿದ್ದಾರೆ. ಮತ್ತೂ ಕೆಲವರು ತಲೆಗೆ ಗಂಭೀರ ಗಾಯವಾಗಿ ಕೋಮಾ ಸ್ಥಿತಿಯಲ್ಲಿ ಜೀವನ ಸಾಗಿಸುವಂತಾಗುತ್ತಿದೆ. ಹೀಗೆ ಸಾವಿರಾರು ಕುಟುಂಬಗಳು ಅಪಘಾತಗಳ ದುಷ್ಪರಿಣಾಮವನ್ನು ಅನುಭವಿಸುತ್ತಿವೆ. ಈ ಎಲ್ಲ ಕಾರಣಗಳನ್ನು ಗಮನಿಸಿದರೆ, ಬೆಂಗಳೂರಿನ ಜನರು ಕನಿಷ್ಠ ಪ್ರಮುಖ ರಸ್ತೆಗಳಲ್ಲಿ ಸುರಕ್ಷಿತವಾಗಿ ನಡೆದು ಸಂಚರಿಸುವ ವ್ಯವಸ್ಥೆ ಇರಬೇಕು ಎಂಬುದು ಪ್ರತಿಯೊಬ್ಬ ನಾಗರಿಕರ ಸಹಜ ಬಯಕೆಯಾಗಿದೆ.
ಈ ಬಯಕೆಯನ್ನು ಈಡೇರಿಸುವುದು ಸರ್ಕಾರದ ಜವಾಬ್ದಾರಿ. ಈ ಪ್ರಯತ್ನ ಯಶಸ್ವಿಯಾಗಬೇಕಾದರೆ ಸಾರ್ವಜನಿಕರ ಸಹಕಾರ ಅತ್ಯಗತ್ಯ. ಆದ್ದರಿಂದ ನಾನು ಮತ್ತೊಮ್ಮೆ ನಿಮ್ಮಲ್ಲಿ ಮನವಿ ಮಾಡುತ್ತೇನೆ. ನೀವು ವಾಣಿಜ್ಯ ಕಟ್ಟಡಗಳನ್ನು ನಿರ್ಮಿಸಿ ಪಾದಚಾರಿ ಮಾರ್ಗದ ಮೇಲೆ ಅತಿಕ್ರಮಣ ಮಾಡಿಕೊಂಡಿದ್ದರೆ, ದಯವಿಟ್ಟು ಸ್ವಯಂಪ್ರೇರಿತರಾಗಿ ಅದನ್ನು ತೆರವುಗೊಳಿಸಿ. ಅಂಗಡಿಗಳ ವಿಸ್ತರಣೆಯನ್ನು ಪಾದಚಾರಿ ಮಾರ್ಗದವರೆಗೆ ಮಾಡಿದ್ದರೆ, ಅದನ್ನೂ ತೆರವುಗೊಳಿಸಿ. ಸಾರ್ವಜನಿಕರು ಸುಗಮವಾಗಿ ಮತ್ತು ಸುರಕ್ಷಿತವಾಗಿ ಸಂಚರಿಸಲು ಅವಕಾಶ ಕಲ್ಪಿಸಿ.
ಪಾದಚಾರಿ ಮಾರ್ಗದ ಮೇಲೆಯೇ ವ್ಯಾಪಾರ ನಡೆಸುತ್ತಿರುವವರು, ಪ್ರಮುಖ ರಸ್ತೆಗಳನ್ನು ಬಿಟ್ಟು ಪರ್ಯಾಯ ರಸ್ತೆಗಳಲ್ಲಿ ವ್ಯಾಪಾರ ಮುಂದುವರಿಸಬಹುದು. ಯಾರ ಜೀವನೋಪಾಯಕ್ಕೂ ತೊಂದರೆ ಉಂಟುಮಾಡುವುದು ಸರ್ಕಾರದ ಉದ್ದೇಶವಲ್ಲ. ಆದರೆ ಪಾದಚಾರಿ ಮಾರ್ಗ ಬಳಸಲು ಸಾಧ್ಯವಾಗದೆ ಜನರು ಪ್ರಾಣ ಕಳೆದುಕೊಳ್ಳುತ್ತಿರುವಾಗ ಸರ್ಕಾರ ಸುಮ್ಮನೆ ಕುಳಿತುಕೊಳ್ಳಲು ಸಾಧ್ಯವಿಲ್ಲ.
ನಾವು ನಗರದ ಎಲ್ಲಾ ರಸ್ತೆಗಳಲ್ಲಿ ಅಲ್ಲ, ಕೇವಲ ಶೇ. 20ರಷ್ಟು ಪ್ರಮುಖ ರಸ್ತೆಗಳ ಪಾದಚಾರಿ ಮಾರ್ಗಗಳಲ್ಲಿನ ಒತ್ತುವರಿಯನ್ನು ಮಾತ್ರ ತೆರವುಗೊಳಿಸುತ್ತಿದ್ದೇವೆ. ಉಳಿದ ಶೇ. 80ರಷ್ಟು ರಸ್ತೆಗಳಲ್ಲಿ ವ್ಯಾಪಾರ ನಡೆಸಲು ಅವಕಾಶವಿದೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸಂಚರಿಸುವ ಪ್ರಮುಖ ಪಾದಚಾರಿ ಮಾರ್ಗಗಳ ಮೇಲೆ ವ್ಯಾಪಾರ ನಡೆಸುವುದು ಸಾರ್ವಜನಿಕರ ಮೂಲಭೂತ ಹಕ್ಕಿಗೆ ಧಕ್ಕೆಯಾಗಿದೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆ ಹಕ್ಕನ್ನು ಸರ್ಕಾರವೂ ಉಲ್ಲಂಘಿಸಲು ಸಾಧ್ಯವಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಈ ತೀರ್ಪನ್ನು ಗೌರವಿಸಬೇಕು.
ಬೆಂಗಳೂರು ಇನ್ನಷ್ಟು ಸುಂದರ, ಸುರಕ್ಷಿತ ಮತ್ತು ವ್ಯವಸ್ಥಿತ ನಗರವಾಗಬೇಕೆಂಬ ಉದ್ದೇಶದಿಂದ ಕೈಗೊಂಡಿರುವ ಈ ಪ್ರಯತ್ನಕ್ಕೆ ನೀವೆಲ್ಲರೂ ಕೈಜೋಡಿಸಿ, ಸಹಕರಿಸಬೇಕು. ನೀವು ಮತ್ತು ನಾವು ಒಟ್ಟಾಗಿ ಪ್ರಯತ್ನಿಸಿದಾಗ ಮಾತ್ರ ಬೆಂಗಳೂರಿನಲ್ಲಿ ಶಾಶ್ವತ ಸುಧಾರಣೆ ಸಾಧ್ಯವಾಗುತ್ತದೆ” ಎಂದು ಸಂದೇಶ ನೀಡಿದ್ದಾರೆ.

