ಬೆಂಗಳೂರು : ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಕಾರ್ಯವನ್ನು ಕನ್ನಡದಲ್ಲಿಯೇ ನಡೆಸುವಂತೆ ಕರ್ನಾಟಕ ರಕ್ಷಣಾ ವೇದಿಕೆ ಆಗ್ರಹಿಸಿದೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ, ರಾಜ್ಯದಲ್ಲಿ ನಡೆಯುತ್ತಿರುವ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ ಸಂದರ್ಭದಲ್ಲಿ ಕನ್ನಡದ ಗ್ರಾಮಗಳ ಹೆಸರುಗಳು, ಮತಗಟ್ಟೆಗಳ ಹೆಸರುಗಳು ಹಾಗೂ ಇತರ ವಿವರಗಳನ್ನು ಇಂಗ್ಲಿಷ್‌ಗೆ ತಪ್ಪಾಗಿ ಅನುವಾದಿಸುವ ಮೂಲಕ ಗಂಭೀರ ಅವಾಂತರಗಳು ಸೃಷ್ಟಿಯಾಗುತ್ತಿವೆ. ಇದರಿಂದಾಗಿ ಮತದಾರರ ಗುರುತು, ಸ್ಥಳದ ಗುರುತು ಹಾಗೂ ಸರ್ಕಾರಿ ದಾಖಲೆಗಳ ವಿಶ್ವಾಸಾರ್ಹತೆಯ ಮೇಲೆಯೇ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಆತಂಕ ವ್ಯಕ್ತಪಡಿಸಿದ್ದಾರೆ.
ಈಗ ಚುನಾವಣಾ ಆಯೋಗ ನಡೆಸುತ್ತಿರುವ SIR ಪ್ರಕ್ರಿಯೆಯಲ್ಲಿ ಒಂದು ಸ್ಪೆಲಿಂಗ್ ಲೋಪವಿದ್ದರೂ ನಾಗರಿಕರು ತಮ್ಮ ಮತದಾನದ ಹಕ್ಕನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂತಹ ನೂರಾರು ಉದಾಹರಣೆಗಳೂ ಈಗಾಗಲೇ ಪಶ್ಚಿಮ ಬಂಗಾಳ, ಬಿಹಾರಗಳಲ್ಲಿ ನಡೆದಿವೆ. ಹೀಗಾಗಿ ಇಂಗ್ಲಿಷ್ ನಲ್ಲಿ ಮಾಹಿತಿ ದಾಖಲಿಸುವುದು ಸಹ ಜನರಿಗೆ ತೊಂದರೆಯನ್ನು ಉಂಟು ಮಾಡಲಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲ್ಲೂಕಿನ “ಮುರ” ಎಂಬ ಗ್ರಾಮದ ಮತಗಟ್ಟೆಯ ಹೆಸರು ಮತದಾರರ ಪಟ್ಟಿಯಲ್ಲಿ ಇಂಗ್ಲಿಷ್‌ನಲ್ಲಿ “Tree” ಎಂದು ಬದಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಕನ್ನಡದ “ಮುರ” ಎಂಬ ಹೆಸರನ್ನು ಮೊದಲು “ಮರ” ಎಂದು ತಪ್ಪಾಗಿ ದಾಖಲಿಸಿ, ನಂತರ “ಮರ”ಕ್ಕೆ ಇಂಗ್ಲಿಷ್ ಪದವಾದ “Tree” ಎಂದು ಅನುವಾದಿಸಿರುವುದು ಅತ್ಯಂತ ಬೇಜವಾಬ್ದಾರಿತನದ ಕೆಲಸವಾಗಿದೆ. ಇದು ಒಂದೇ ಉದಾಹರಣೆಯಾಗಿದ್ದು, ರಾಜ್ಯದಾದ್ಯಂತ ಇಂತಹ ಅನೇಕ ದೋಷಗಳು ನಡೆದಿರುವ ಸಾಧ್ಯತೆ ಇದೆ ಎಂದಿದ್ದಾರೆ.
ಗ್ರಾಮಗಳ ಹೆಸರುಗಳು, ವ್ಯಕ್ತಿಗಳ ಹೆಸರುಗಳು, ಕೆರೆ, ಹಳ್ಳಿ, ಕೋಟೆ, ಪಾಳ್ಯ, ಪೇಟೆ, ಬೀದಿ, ರಸ್ತೆ, ವಾರ್ಡ್ ಸೇರಿದಂತೆ ಸ್ಥಳನಾಮಗಳು ಯಾವುದೂ ಅನುವಾದಕ್ಕೆ ಒಳಪಡಬಾರದು. ಅವುಗಳಿಗೆ ಐತಿಹಾಸಿಕ, ಸಾಂಸ್ಕೃತಿಕ ಹಾಗೂ ಭೌಗೋಳಿಕ ಮಹತ್ವವಿದೆ. ಅಂತಹ ಹೆಸರುಗಳನ್ನು ಅರ್ಥ ಬದಲಿಸಿ ಇಂಗ್ಲಿಷ್‌ಗೆ ಅನುವಾದಿಸುವುದು ಅಧಿಕೃತ ದಾಖಲೆಗಳ ಮೂಲಸ್ವರೂಪವನ್ನೇ ವಿಕೃತಗೊಳಿಸುತ್ತದೆ.
ಕರ್ನಾಟಕದಲ್ಲಿ ಕನ್ನಡವೇ ಅಧಿಕೃತ ಆಡಳಿತ ಭಾಷೆಯಾಗಿದೆ. ಆದ್ದರಿಂದ ಮತದಾರರ ಪಟ್ಟಿ ಪರಿಷ್ಕರಣೆ, ದತ್ತಾಂಶ ನಮೂದು, ಪರಿಶೀಲನೆ, ತಿದ್ದುಪಡಿ ಸೇರಿದಂತೆ ಸಂಪೂರ್ಣ ಪ್ರಕ್ರಿಯೆಯ ಮೂಲ ದಾಖಲೆಗಳು ಕನ್ನಡದಲ್ಲಿಯೇ ನಿರ್ವಹಣೆಯಾಗಬೇಕು. ಇಂಗ್ಲಿಷ್ ಅಗತ್ಯವಿದ್ದರೆ ಕನ್ನಡ ಪದಗಳ ಲಿಪ್ಯಂತರವನ್ನು ಮಾತ್ರ ಬಳಸಬೇಕು; ಯಾವುದೇ ಕಾರಣಕ್ಕೂ ಅರ್ಥಾನುವಾದ ಮಾಡಬಾರದು ಎಂದು ಎಚ್ಚರಿಸಿದ್ದಾರೆ.
ಕೃತಕ ಬುದ್ಧಿಮತ್ತೆ ಅಥವಾ ಸ್ವಯಂಚಾಲಿತ ಅನುವಾದ ವ್ಯವಸ್ಥೆಗಳನ್ನು ಬಳಸುವ ಸಂದರ್ಭದಲ್ಲಿ ಸಮರ್ಪಕ ಮಾನವ ಪರಿಶೀಲನೆ ಇಲ್ಲದಿದ್ದರೆ ಇಂತಹ ಗಂಭೀರ ದೋಷಗಳು ಹೆಚ್ಚಾಗುವ ಸಾಧ್ಯತೆ ಇದೆ. ಚುನಾವಣೆಯಂತಹ ಅತ್ಯಂತ ಮಹತ್ವದ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಇಂತಹ ನಿರ್ಲಕ್ಷ್ಯಕ್ಕೆ ಅವಕಾಶ ಇರಬಾರದು.
ಕರ್ನಾಟಕ ರಕ್ಷಣಾ ವೇದಿಕೆಯ ಆಗ್ರಹಗಳು
- ಮತದಾರರ ಪಟ್ಟಿ ಪರಿಷ್ಕರಣೆಯ ಸಂಪೂರ್ಣ ಕಾರ್ಯವನ್ನು ಕನ್ನಡದಲ್ಲಿಯೇ ನಡೆಸಬೇಕು.
- ಗ್ರಾಮ, ಪಟ್ಟಣ, ಮತಗಟ್ಟೆ ಹಾಗೂ ವ್ಯಕ್ತಿಗಳ ಹೆಸರುಗಳನ್ನು ಯಾವುದೇ ಕಾರಣಕ್ಕೂ ಇಂಗ್ಲಿಷ್‌ಗೆ ಅನುವಾದಿಸಬಾರದು; ಅಗತ್ಯವಿದ್ದರೆ ಕನ್ನಡದಿಂದ ಇಂಗ್ಲಿಷ್‌ಗೆ ಲಿಪ್ಯಂತರ ಮಾತ್ರ ಮಾಡಬೇಕು.
- ಈಗಾಗಲೇ ಪ್ರಕಟವಾಗಿರುವ ಮತದಾರರ ಪಟ್ಟಿಗಳಲ್ಲಿ ಇಂತಹ ಎಲ್ಲಾ ದೋಷಗಳನ್ನು ರಾಜ್ಯವ್ಯಾಪಿಯಾಗಿ ಪರಿಶೀಲಿಸಿ ತಕ್ಷಣ ತಿದ್ದುಪಡಿ ಮಾಡಬೇಕು.
- ಮತದಾರರ ಪಟ್ಟಿಯ ದತ್ತಾಂಶ ಸಿದ್ಧಪಡಿಸುವ ಸಿಬ್ಬಂದಿಗೆ ಕನ್ನಡ ಭಾಷೆ ಮತ್ತು ಸ್ಥಳನಾಮಗಳ ಕುರಿತು ಸೂಕ್ತ ತರಬೇತಿ ನೀಡಬೇಕು.
- ಸಾರ್ವಜನಿಕರು ತಪ್ಪುಗಳನ್ನು ಸುಲಭವಾಗಿ ವರದಿ ಮಾಡಲು ವಿಶೇಷ ಸಹಾಯವಾಣಿ ಹಾಗೂ ತ್ವರಿತ ತಿದ್ದುಪಡಿ ವ್ಯವಸ್ಥೆಯನ್ನು ಕಲ್ಪಿಸಬೇಕು.
ಕನ್ನಡ ನುಡಿಯ ಪದಗಳನ್ನು ವಿಕೃತಗೊಳಿಸುವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಜನರ ಗುರುತು, ಊರಿನ ಇತಿಹಾಸವನ್ನು ಬದಲಿಸುವ ಬೇಜವಾಬ್ದಾರಿತನನ್ನು ಚುನಾವಣಾ ಆಯೋಗ ಕೂಡಲೇ ನಿಲ್ಲಿಸಬೇಕು ಮತ್ತು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ ತಕ್ಷಣ ಅಗತ್ಯ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ರೂಪಿಸುವ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಚಿಂತನೆ ನಡೆಸಲಿದೆ.

