ವೆನೆಜುವೆಲಾ : ದಕ್ಷಿಣ ಅಮೆರಿಕಾ ರಾಷ್ಟ್ರ ವೆನೆಜುವೆಲಾದಲ್ಲಿ ಸಂಭವಿಸಿದ ಸರಣಿ ಭೂಕಂಪದಲ್ಲಿ ಇದುವರೆಗೆ ಸಾವಿನ ಸಂಖ್ಯೆ 1,430ಕ್ಕೆ ಏರಿದೆ. 68,900 ಜನರು ನಾಪತ್ತೆಯಾಗಿದ್ದಾರೆ. ಅವಶೇಷಗಳಡಿ ಸಿಲುಕಿದವರಿಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ನಿಧಾನವಾಗಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾರ್ಯಾಚರಣೆ ತಂಡಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಕ್ಷಣಾ ತಂಡಗಳು ನಡೆಸುತ್ತಿರುವ ಕಾರ್ಯಾಚರಣೆಯ ಜತೆಗೆ ಜನರು ತಮ್ಮ ಪ್ರೀತಿಪಾತ್ರರನ್ನು ಮತ್ತು ನೆರೆಹೊರೆಯವರಿಗಾಗಿ ಸಲಿಕೆಗಳು, ದೊಡ್ಡ ಉಪಕರಣಗಳು, ಹಗ್ಗಗಳು ಮತ್ತಿತರ ವಸ್ತುಗಳನ್ನು ಬಳಸಿ ಹುಡುಕಾಟ ನಡೆಸುತ್ತಿದ್ದಾರೆ.
ಅವಶೇಷಗಳಡಿ ಸಿಲುಕಿದ ಜನರನ್ನು ಜೀವಂತವಾಗಿ ಹೊರತರಲು ಮೊದಲ 48ರಿಂದ 72 ಗಂಟೆಗಳು ನಿರ್ಣಾಯಕ. ಈಗಾಗಲೇ ದುರಂತ ಸಂಭವಿಸಿ 2 ದಿನ ಕಳೆದಿದೆ. 1,600ಕ್ಕೂ ಹೆಚ್ಚು ರಕ್ಷಣಾ ತಂಡದ ಸದಸ್ಯರನ್ನು ಹೊತ್ತ 17 ವಿಮಾನಗಳು ಶನಿವಾರ ಇಳಿದಿವೆ ಎಂದು ವೆನೆಜುವೆಲಾದ ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪ ಸಂಭವಿಸಿ 72 ಗಂಟೆಗಳು ಕಳೆದರೆ, ಸಂಕಷ್ಟದಲ್ಲಿ ಸಿಲುಕಿರುವ ಜನರನ್ನು ಜೀವಂತವಾಗಿ ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ಈ ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂಬ ಆತಂಕ ಮನೆ ಮಾಡಿದೆ.
ರಕ್ಷಣಾ ಕಾರ್ಯಾಚರಣೆ ಮೇಲೆ ಆಕ್ರೋಶ: 14,000ಕ್ಕೂ ಹೆಚ್ಚು ಮಿಲಿಟರಿ ಮತ್ತು ಪೊಲೀಸ್ ಸದಸ್ಯರು ಈ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾರೆ ಎಂದು ಹಂಗಾಮಿ ಅಧ್ಯಕ್ಷ ಡೆಲ್ಸಿ ರೊಡ್ರಿಗಸ್ ಸರ್ಕಾರಿ ಮಾಧ್ಯಮದಲ್ಲಿ ತಿಳಿಸಿದ್ದಾರೆ. ಕೆಲ ಸೂಕ್ಷ್ಮ ಪ್ರದೇಶಗಳಲ್ಲಿ ಜನರ ಸಂಚಾರವನ್ನು ನಿರ್ಬಂಧಿಸಲಾಗಿದೆ. ಅಲ್ಲಿಗೆ ತೆರಳಲು ವಿಶೇಷ ಪರವಾನಗಿ ಪಡೆಯಬೇಕಾಗಿದೆ. ಆದರೆ ಅಂತಹ ವಿಪತ್ತು ವಲಯಗಳಲ್ಲಿ ಸರ್ಕಾರದ ರಕ್ಷಣಾ ಕಾರ್ಯಾಚರಣೆ ಚುರುಕಾಗಿಲ್ಲ ಎಂಬುದು ಜನರು ಆರೋಪ.
ಕೆಲವೆಡೆ ಕಟ್ಟಡಗಳ ಅವಶೇಷಗಳನ್ನು ಹತ್ತಿದ ಜನರು ತಮ್ಮವರ ಹೆಸರುಗಳನ್ನು ಕೂಗುತ್ತಾ, ಅವರು ಬದುಕಿರುವುದನ್ನು ಪತ್ತೆ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಕಟ್ಟಡಗಳು ಧರೆಗುರುಳಿ ಧೂಳು ಆವರಿಸಿಕೊಂಡಿದೆ. ಇನ್ನೊಂದೆಡೆ ಸಾವಿಗೀಡಾದವರ ಶವಗಳು ಕೊಳೆಯುತ್ತಿದ್ದು, ದುರ್ವಾಸನೆ ಹರಡುತ್ತಿದೆ. ಹೆಚ್ಚಿನ ಜನರು ಮುಖಗವಸು ಧರಿಸಿ ಓಡಾಡುತ್ತಿದ್ದಾರೆ.
ರಕ್ಷಣೆಗೆ ಬಂದು ಫೋಟೋ ತೆಗೆದುಕೊಂಡರು: ಅಮಾನವೀಯ ಮತ್ತು ಆಘಾತಕಾರಿ ಘಟನೆಯಲ್ಲಿ ರಕ್ಷಣಾ ತಂಡಗಳು ದುರಂತಕ್ಕೀಡಾದ ಕೆಲ ಪ್ರದೇಶಗಳಿಗೆ ಬಂದು ಅಲ್ಲಿ ರಕ್ಷಣಾ ಕಾರ್ಯ ನಡೆಸಿದಂತೆ ಫೋಟೋ ತೆಗೆದುಕೊಂಡು ತೆರಳುತ್ತಿದ್ದಾರೆ. ಸರ್ಕಾರಕ್ಕೆ ಲೆಕ್ಕ ತೋರಿಸಲು ಈ ರೀತಿ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ನಾವೇ ಐದು ಶವಗಳನ್ನು ಅವಶೇಷಗಳಿಂದ ಹೊರತೆಗೆದೆವು. ರಕ್ಷಣಾ ತಂಡಗಳು ಇಲ್ಲಿಗೆ ಬಂದು ಫೋಟೋ ಕ್ಲಿಕ್ಕಿಸಿಕೊಂಡು ಹೊರಟು ಹೋದವು. ನಮ್ಮ ರಕ್ಷಣಾ ಕಾರ್ಯಕ್ಕೂ ಸಹಾಯ ಮಾಡಲಿಲ್ಲ. ಅವರು ನಮ್ಮಂತೆ ತಮ್ಮ ಸಮವಸ್ತ್ರವನ್ನು ಕೊಳಕು ಮಾಡಲಿಲ್ಲ. ನಾವು ಮೂರು ದಿನಗಳಿಂದ ಇಲ್ಲಿ ಜನರ ಹುಡುಕಾಟ ನಡೆಸುತ್ತಿದ್ದೇವೆ ಎಂದು ಯೀಸನ್ ಮಾರ್ಕಾನೊ ಎಂಬವರು ಸರ್ಕಾರದ ನಿರ್ಲಕ್ಷ್ಯವನ್ನು ತೆರೆದಿಟ್ಟಿದ್ದಾರೆ.
ಅಂತಾರಾಷ್ಟ್ರೀಯ ವಲಸೆ ಸಂಸ್ಥೆಯ ಪ್ರಕಾರ, 6 ಮಿಲಿಯನ್ಗಿಂತಲೂ ಹೆಚ್ಚು ಜನರು ಈ ಭೂಕಂಪನದ ಪರಿಣಾಮ ಎದುರಿಸುತ್ತಿದ್ದಾರೆ. ರಾಜಧಾನಿ ಕ್ಯಾರಕಾಸ್ನಲ್ಲಿ ಮಾತ್ರವೇ ಸುಮಾರು 2 ಮಿಲಿಯನ್ ಜನರು ಸಿಲುಕಿದ್ದಾರೆ ಎಂದು ಅಂದಾಜಿಸಿದೆ.
ವೆನೆಜುವೆಲಾ ಒಂದು ದಶಕದಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದೆ. ಹಿಂದಿನ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ದಾಳಿ ಮಾಡಿ ಬಂಧಿಸಿ ಕರೆದೊಯ್ದಿದೆ. ಉಪಾಧ್ಯಕ್ಷ ರೊಡ್ರಿಗಸ್ ಅವರಿಗೆ ಈ ವಿಪತ್ತು ನಿರ್ವಹಣೆ ದೊಡ್ಡ ಸವಾಲಾಗಿದೆ. ಮೆಕ್ಸಿಕೊ, ಅಮೆರಿಕ, ಬ್ರೆಜಿಲ್, ಎಲ್ ಸಾಲ್ವಡಾರ್, ಫ್ರಾನ್ಸ್ ಮತ್ತು ಭಾರತ ಸೇರಿದಂತೆ ವಿವಿಧೆಡೆಯಿಂದ ಶೋಧ ತಂಡಗಳು ಬರುತ್ತಲೇ ಇದ್ದರೂ ರಕ್ಷಣಾ ಕಾರ್ಯಾಚರಣೆ ಸಾಕಾಗುತ್ತಿಲ್ಲ.

