ಮೈಸೂರು : ಬಿಜೆಪಿಯು ವ್ಯವಸ್ಥಿತವಾಗಿ ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಹೆಸರನ್ನು ಮತದಾರರ ಪಟ್ಟಿಯಿಂದ ಕೈಬಿಡಲು ಹುನ್ನಾರ ನಡೆಸುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಮೈಸೂರು ನಗರದ ಜೆ.ಕೆ. ಮೈದಾನದಲ್ಲಿ ಕಾಂಗ್ರೆಸ್‌ನಿಂದ ಏರ್ಪಡಿಸಲಾಗಿದ್ದ ಮೈಸೂರು ವಿಭಾಗೀಯ ಮಟ್ಟದ ಎಸ್‌ಐಆರ್ ಜಾಗೃತಿ ಸಮಾವೇಶ ವನ್ನು ಉದ್ದೇಶಿಸಿ ಮಾತನಾಡಿದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಶೇ. 36 ರಷ್ಟು ಮಂದಿ ಮಾತ್ರ ಬಿಜೆಪಿಗೆ ಒಲವು ತೋರಿದ್ದರೆ, ಶೇ. 64 ರಷ್ಟು ಜನರು ಅವರ ವಿರುದ್ಧ ಇದ್ದಾರೆ. ಈ ಶೇ. 64 ರಲ್ಲಿ ಶೇ. 10 ರಷ್ಟು ಮತಗಳನ್ನು ಪಟ್ಟಿಯಿಂದ ಕಿತ್ತುಹಾಕಿದರೂ ಅದು ಪ್ರಜಾಪ್ರಭುತ್ವಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ ಎಂದು ವಿಶ್ಲೇಷಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಕುರಿತು ಪ್ರತಿಯೊಬ್ಬರೂ ಎಚ್ಚೆತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವದ ಮಾರಣಹೋಮ ಆಗಲಿದ್ದು, ದೇಶವು ಮತ್ತೆ ಸರ್ವಾಧಿಕಾರದ ಕಪಿಮುಷ್ಟಿಗೆ ಸಿಲುಕಲಿದೆ ಎಂದು ಸಿದ್ದರಾಮಯ್ಯ ಏಕಕಾಲದಕ್ಕೆ ಆತಂಕ ವ್ಯಕ್ತಪಡಿಸಿ, ಎಚ್ಚರಿಯನ್ನೂ ನೀಡಿದರು.
ಬಿಜೆಪಿಗೆ ಪ್ರಜಾಪ್ರಭುತ್ವ, ಸಂವಿಧಾನ ಅಥವಾ ಸಾಮಾಜಿಕ ನ್ಯಾಯದಲ್ಲಿ ಕಿಂಚಿತ್ತೂ ನಂಬಿಕೆ ಇಲ್ಲ. ಹಿಂದುಗಳಲ್ಲಿ ಜಾತಿ ಪದ್ಧತಿ, ವರ್ಣಾಶ್ರಮವನ್ನು ಹುಟ್ಟುಹಾಕಿದ್ದು ಯಾರು? ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದು ಯಾರು? ಎಂಬುದರ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸುಳ್ಳು ಉತ್ಪಾದಿಸುವ ಕಾರ್ಖಾನೆ
‘ಶೂದ್ರರು ಎಂದಿಗೂ ಬಿಜೆಪಿ ಜೊತೆ ಗುರುತಿಸಿಕೊಳ್ಳಬಾರದು. ಅದು ಶೂದ್ರ ವಿರೋಧಿ ಪಕ್ಷವಾಗಿದ್ದು, ಕೇವಲ ಸುಳ್ಳುಗಳನ್ನು ಉತ್ಪಾದಿಸುವ ಮತ್ತು ಮಾರಾಟ ಮಾಡುವ ಕಾರ್ಖಾನೆಯಾಗಿದೆ’ ಎಂದು ಟೀಕಿಸಿದರು.
ಬಿಜೆಪಿ ಅಧಿಕಾರಕ್ಕಾಗಿ ಏನನ್ನೂ ಮಾಡಲು ಹೇಸುವುದಿಲ್ಲ. ಬ್ರಿಟಿಷರ ಕಾಲದಲ್ಲೇ ಆರ್.ಎಸ್.ಎಸ್ ನಾಯಕ ಹೆಡಗೇವಾರ್ ಅವರು ತಮ್ಮ ಆಪ್ತರನ್ನು ಇಟಲಿ ಮತ್ತು ಜರ್ಮನಿಗೆ ಕಳುಹಿಸಿ ಸರ್ವಾಧಿಕಾರದ ಬಗ್ಗೆ ಅಧ್ಯಯನ ಮಾಡಿಸಿದ್ದರು. ಪ್ರಸ್ತುತ ಕೇಂದ್ರ ರ್ಕಾರ ಪ್ರತಿಪಾದಿಸುತ್ತಿರುವ ‘ಒಂದು ದೇಶ, ಒಂದು ಚುನಾವಣೆʼ ಪ್ರತಿಪಾದಿಸುತ್ತಿದೆ ಎಂದು ಟೀಕಾಪ್ರಹಾರ ನಡೆಸಿದರು.
ದೇಶದ ಸಂವಿಧಾನ ಮತ್ತು ಪ್ರಜಾಪ್ರಭುತ್ವದ ಉಳಿವಿಗೆ ಮತದಾರರ ಹಕ್ಕುಗಳನ್ನು ರಕ್ಷಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯ ಎಂದು ಪ್ರತಿಪಾದಿಸಿದ ಸಿದ್ದರಾಮಯ್ಯ, ಶೂದ್ರರನ್ನು ಶಿಕ್ಷಣದಿಂದ ವಂಚಿತರನ್ನಾಗಿಸಿದ್ದು ಯಾರು? ಎಂಬುದರ ಇತಿಹಾಸವನ್ನು ಪ್ರತಿಯೊಬ್ಬರೂ ಅರಿತುಕೊಳ್ಳಬೇಕು ಎಂದು ಹೇಳಿದರು.

