ಬೆಂಗಳೂರು, ಜು.03: ರಾಜ್ಯದಲ್ಲಿ ವಿದ್ಯುತ್ ಖಾಸಗೀಕರಣಕ್ಕೆ ಪ್ರಸ್ತಾವನೆ ಸಲ್ಲಿಸಿದ್ದ ಟಾಟಾ ಕಂಪನಿ ಕೆಇಆರ್ಸಿ ಆಕ್ಷೇಪಣೆ ವೇಳೆ ಸಂಸ್ಥೆ ಪ್ರಸ್ತಾವನೆ ವಾಪಸ್ ಪಡೆದುಕೊಂಡಿದೆ. ವಿದ್ಯುತ್ ಖಾಸಗೀಕರಣಕ್ಕೆ ರೈತರು, ಎಸ್ಕಾಂ ನೌಕರರು ದೊಡ್ಡ ಮಟ್ಟದಲ್ಲಿ ತೀವ್ರ ವಿರೋಧ ವ್ಯಕ್ತಪಡಿಸಿದ್ದರು.
ವಿದ್ಯುತ್ ಸರಬರಾಜು ಪರವಾನಿಗೆಗೆ ಸಲ್ಲಿಸಿದ್ದ ಅರ್ಜಿಯನ್ನು ಕಂಪನಿ ವಾಪಸ್ ಪಡೆದ ನಿರ್ಧಾರವನ್ನು ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಸ್ವಾಗತಿಸಿದೆ. ಸಂಘದ ಅಧ್ಯಕ್ಷ ರಮೇಶ್, ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವ ಕೆ. ಜೆ ಜಾರ್ಜ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ.
ಟಾಟಾ ಪವರ್ ಕಂಪನಿ ನಡೆ ವಿರುದ್ಧ 20 ಲಕ್ಷ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆ ಆಗಿದ್ದವು. ರೈತರು, ಇಲಾಖೆ ನೌಕರರು, ಗುತ್ತಿಗೆದಾರರು ಸಂಘಟಿತ ಹೋರಾಟಕ್ಕೆ ಕೊನೆಗೂ ಫಲ ಸಿಕ್ಕಿದೆ. ಕೆಇಆರ್ಸಿಯಿಂದ ಟಾಟಾ ಪವರ್ ಕಂಪನಿ ಅರ್ಜಿ ವಾಪಸ್ ಪಡೆದಿದೆ.
ಹಳ್ಳಿ, ತಾಲೂಕು, ಜಿಲ್ಲಾ ಮಟ್ಟದಲ್ಲೂ ಭಾರೀ ವಿರೋಧ ವ್ಯಕ್ತ ಮಾಡಿ ಹೋರಾಟ ಆಗಿತ್ತು. ಸ್ವಯಂ ಪ್ರೇರಿತವಾಗಿ ಟಾಟಾ ಪವರ್ ಕಂಪನಿ ಪ್ರಸ್ತಾವನೆ ಹಿಂಪಡೆದಿದೆ.
ಮಳೆ ಕೊರತೆಯಿಂದ ವಿದ್ಯುತ್ ಉತ್ಪಾದನೆಯಲ್ಲಿ ವ್ಯತ್ಯಯ
ಈ ವರ್ಷ ಎಲ್ ನಿನೊ ಪರಿಣಾಮ ಮಳೆ ಕೊರತೆಯಾಗಿದ್ದು, ಇದು ವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರಲಿದೆ. ಹೀಗಾಗಿ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಂತೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸೂಚನೆ ನೀಡಿದ್ದಾರೆ.
ಶಕ್ತಿ ಭವನದಲ್ಲಿ ಶುಕ್ರವಾರ ಇಂಧನ ಇಲಾಖೆಯ ಪ್ರಗತಿ ಪರಿಶೀಲನೆ ನಡೆಸಿದ ಅವರು, ವಿದ್ಯುತ್ ಕೊರತೆಯಿಂದ ಉಂಟಾಗುವ ಸಮಸ್ಯೆಗಳಿಂದ ಪಾರಾಗಲು ವಿಶೇಷ ತುರ್ತು ಕಾರ್ಯಯೋಜನೆ ರೂಪಿಸುವ ಜೊತೆಗೆ ಸಂಗ್ರಹಣೆ ಮತ್ತು ಇತರೆ ಮೂಲಗಳ ಉತ್ಪಾದನೆಗೆ ತುರ್ತು ಗಮನ ಹರಿಸಿ ಎಂದು ಹೇಳಿದರು.
ಇಂಧನ ಭದ್ರತೆಗಾಗಿ ಸರ್ಕಾರಕ್ಕೆ ಮೀಸಲಾದ ಕಲ್ಲಿದ್ದಲು ಗಣಿಗಳನ್ನು ಕಾರ್ಯಾರಂಭಗೊಳಿಸಿ, ಸಾಕಷ್ಟು ಕಲ್ಲಿದ್ದಲು ಸಂಗ್ರಹವನ್ನು ನಿರಂತರವಾಗಿ ಕಾಯ್ದುಕೊಳ್ಳಬೇಕು ಎಂದು ಸೂಚನೆ ನೀಡಿದರು.
ಹಿಂದಿನ ವರ್ಷಕ್ಕೆ ಹೋಲಿಸಿದರೆ ಸದ್ಯ ನಮ್ಮಲ್ಲಿ ವಿದ್ಯುತ್ ಸಂಗ್ರಹಣಾ ಸ್ಥಿತಿ ಸುಸ್ಥಿತಿಯಲ್ಲಿದೆ. ಹಿಂದಿನ ಮೂರು ವರ್ಷ ವಿದ್ಯುತ್ ಕಡಿತ ಇಲ್ಲದೆ ನಿರ್ವಹಿಸಿದ್ದೇವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಸದ್ಯದ ಸ್ಥಿತಿಯಲ್ಲಿ ನವೀಕರಿಸಬಹುದಾದ ಇಂಧನದ ಸಮರ್ಥ ನಿರ್ವಹಣೆಗಾಗಿ ಬ್ಯಾಟರಿ ಎನರ್ಜಿ ಸ್ಟೋರೇಜ್ ಸಿಸ್ಟಮ್ಗಳು, ಪಂಪ್ಡ್ ಸ್ಟೋರೇಜ್ ಯೋಜನೆಗಳನ್ನು ತ್ವರಿತವಾಗಿ ಜಾರಿಗೊಳಿಸಬೇಕು ಎಂದರು.
ನಾವು ಐಟಿ ಕ್ಯಾಪಿಟಲ್ ಆಗಿದ್ದೇವೆ. ಕೃತಕ ಬುದ್ದಿಮತ್ತೆಯಲ್ಲೂ ನಮ್ಮ ರಾಜ್ಯ ಕ್ಯಾಪಿಟಲ್ ಆಗಬೇಕು ಎನ್ನುವ ದಿಕ್ಕಿನಲ್ಲಿ ನಾವು ಮುಂದುವರೆಯುತ್ತಿದ್ದೇವೆ. ಹೀಗಾಗಿ ಡೇಟಾ ಸೆಂಟರ್ಗಳು, ಕೃತಕ ಬುದ್ಧಿಮತ್ತೆ ಮೂಲಸೌಕರ್ಯ ಹಾಗೂ ಡಿಜಿಟಲ್ ಆರ್ಥಿಕತೆಯಿಂದ ಹೆಚ್ಚುತ್ತಿರುವ ವಿದ್ಯುತ್ ಬೇಡಿಕೆಗೆ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕು ಎಂದರು.
ಗೃಹಜ್ಯೋತಿ ಯೋಜನೆಯಿಂದಾಗಿ ಯಾವುದೇ ಹೊರೆ ಆಗಿಲ್ಲ. ಆದರೆ, ಸರ್ಕಾರಿ ಇಲಾಖೆಗಳು ಎಸ್ಕಾಂಗಳಿಗೆ ಪಾವತಿಸಬೇಕಿರುವ 12,631 ಕೋಟಿ ರೂಪಾಯಿ ಬಾಕಿಯನ್ನು ತ್ವರಿತವಾಗಿ ಪಾವತಿಸುವುದು ಅಥವಾ ಹಣಕಾಸು ಭದ್ರತೆ ಮೂಲಕ ಪರಿಹರಿಸಲು ಕ್ರಮ ಕೈಗೊಳ್ಳಬೇಕು ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು.
ರೈತರ ಅನುಕೂಲಕ್ಕಾಗಿ ನಮ್ಮ ಸರ್ಕಾರ ಕೃಷಿ ವಿದ್ಯುತ್ ಸಹಾಯಧನವನ್ನು ವರ್ಷಕ್ಕೆ 22,000 ಕೋಟಿ ರೂ. ನೀಡುತ್ತಿದ್ದೇವೆ. ಹೀಗಾಗಿ ಫೀಡರ್ ಸೌರೀಕರಣ, ಇಂಧನ-ದಕ್ಷ ಪಂಪ್ಸೆಟ್ಗಳ ಬಳಕೆ, ವಿದ್ಯುತ್ ಬೇಡಿಕೆ ನಿರ್ವಹಣೆ ಕಾರ್ಯಕ್ರಮಗಳನ್ನು ವೇಗಗೊಳಿಸಬೇಕು. 2035ರ ವೇಳೆಗೆ ಗರಿಷ್ಠ ವಿದ್ಯುತ್ ಬೇಡಿಕೆ 38 ಗಿಗಾವ್ಯಾಟ್ ತಲುಪುವ ನಿರೀಕ್ಷೆಯಿರುವುದರಿಂದ ಇದಕ್ಕೆ ತಕ್ಕಂತೆ ಉತ್ಪಾದನಾ ಸಾಮರ್ಥ್ಯವನ್ನು ಹೆಚ್ಚಿಸುವ ಯೋಜನೆ ಜೊತೆಗೆ ಅಗತ್ಯವಾದ ಹಣಕಾಸು ನಕ್ಷೆ ಸಿದ್ಧಪಡಿಸಬೇಕು ಎಂದು ಸಲಹೆ ನೀಡಿದರು.
ಸ್ಮಾರ್ಟ್ ಮೀಟರ್ ವೇಗವಾಗಿ ಅಳವಡಿಸಿ
ಮೀಟರ್ಗಳು ಹಾಗೂ ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕಾಗಿ ಕೇಂದ್ರ ಸರ್ಕಾರದ ನೆರವು ಪಡೆಯುವ ಉದ್ದೇಶದಿಂದ ಪರಿಷ್ಕೃತ ವಿತರಣಾ ವಲಯ ಯೋಜನೆಯನ್ನು ವೇಗವಾಗಿ ಅನುಷ್ಠಾನಗೊಳಿಸಬೇಕು. ಸ್ಮಾರ್ಟ್ ಮೀಟರ್ಗಳನ್ನು ಪಾರದರ್ಶಕವಾಗಿ ಹಾಗೂ ನಿಗದಿತ ಸಮಯದಲ್ಲಿ ಅಳವಡಿಸಬೇಕು.
ರಾಜ್ಯದಲ್ಲಿ ವೇಗವಾಗಿ ಹೆಚ್ಚುತ್ತಿರುವ ನವೀಕರಿಸಬಹುದಾದ ಇಂಧನ ಸಾಮರ್ಥ್ಯವನ್ನು ಸಮರ್ಪಕವಾಗಿ ನಿಭಾಯಿಸಲು ರಾಜ್ಯದ ವಿದ್ಯುತ್ ಜಾಲ ಮೂಲಸೌಕರ್ಯವನ್ನು ಮತ್ತಷ್ಟು ಬಲಪಡಿಸಬೇಕು. ವಿದ್ಯುತ್ ಪ್ರಸರಣ ಯೋಜನೆಗಳಿಗೆ ಇರುವ ತಾಂತ್ರಿಕ ಸಮಸ್ಯೆಗಳನ್ನು ಶೀರ್ಘವಾಗಿ ಬಗೆಹರಿಸಿಕೊಳ್ಳಿ. ಭೂಸ್ವಾಧೀನ, ಹಕ್ಕುಮಾರ್ಗ ಹಾಗೂ ಕಾನೂನುಬದ್ಧ ಅನುಮತಿಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ ಯೋಜನೆಗಳನ್ನು ವೇಗಗೊಳಿಸಬೇಕು ಎಂದರು.
ಸಭೆಯಲ್ಲಿ ಇಂಧನ ಸಚಿವ ಕೆ.ಜೆ. ಜಾರ್ಜ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಅಪರ ಮುಖ್ಯ ಕಾರ್ಯದರ್ಶಿಗಳಾದ ಗೌರವ್ ಗುಪ್ತಾ, ರಿತೇಶ್ ಕುಮಾರ್ ಸಿಂಗ್, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಎಲ್.ಕೆ. ಅತೀಕ್, ಕೆಪಿಟಿಸಿಎಲ್ ಎಂಡಿ ರಾಮ್ ಪ್ರಸಾತ್ ಮನೋಹರ್, ಕರ್ನಾಟಕ ವಿದ್ಯುತ್ ನಿಗಮದ ಎಂ ಡಿ ರಾಜೇಂದ್ರ ಚೋಳನ್ ಮತ್ತಿತರ ಅಧಿಕಾರಿಗಳು ಇದ್ದರು

