ಬೆಂಗಳೂರು: ಕೇಂದ್ರ ಚುನಾವಣಾ ಆಯೋಗ ಪ್ರಕಟಿಸಿರುವ ಎಸ್ಐಆರ್ ಅಂತಿಮ ಮತದಾರರ ಪಟ್ಟಿಯನ್ನು ಕರ್ನಾಟಕ ಸರ್ಕಾರ ತಿರಸ್ಕರಿಸಬೇಕು. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಈ ಪಟ್ಟಿಯನ್ನು ಯಾವುದೇ ಕಾರಣಕ್ಕೂ ಬಳಸಬಾರದು ಎಂದು ಎಸ್ಐಆರ್ ವಿರೋಧಿ ಜಾತ್ಯತೀತ ಪಕ್ಷಗಳು ಮತ್ತು ಜನಪರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.
ಈ ಸಂಬಂಧ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿರುವ ಒಕ್ಕೂಟ, ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಮತದಾರರನ್ನು ಪಟ್ಟಿಯಿಂದ ಕೈಬಿಟ್ಟಿರುವ ಬಗ್ಗೆ ಚುನಾವಣಾ ಆಯೋಗ ಸಮರ್ಪಕ ಸ್ಪಷ್ಟನೆ ನೀಡಿಲ್ಲ ಎಂದು ಆರೋಪಿಸಿದೆ.
2025ರ ಮತದಾರರ ಪಟ್ಟಿಗೆ ಸುಮಾರು 6.5 ಲಕ್ಷ ಹೊಸ ಮತದಾರರು ಸೇರ್ಪಡೆಯಾಗಿದ್ದರೆ, ಅಂತಿಮ ಪಟ್ಟಿಯಿಂದ 1.06 ಕೋಟಿ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇವರಲ್ಲಿ ಮೃತಪಟ್ಟವರು ಹಾಗೂ ಒಂದಕ್ಕಿಂತ ಹೆಚ್ಚು ಮತದಾರರ ಗುರುತಿನ ಚೀಟಿ ಹೊಂದಿರುವವರ ಸಂಖ್ಯೆ ಸುಮಾರು 25 ಲಕ್ಷ ಎಂದು ಆಯೋಗ ತಿಳಿಸಿದೆ. ಹಾಗಾದರೆ ಉಳಿದ ಸುಮಾರು 75 ಲಕ್ಷ ಮತದಾರರ ಹೆಸರುಗಳು ಏಕೆ ಕಾಣೆಯಾಗಿವೆ ಎಂಬುದಕ್ಕೆ ಉತ್ತರ ನೀಡಬೇಕು ಎಂದು ಒಕ್ಕೂಟ ಪ್ರಶ್ನಿಸಿದೆ.
ಬೆಂಗಳೂರಿನಲ್ಲಿ ಶೇ.43ರಷ್ಟು ಮತದಾರರು ನಾಪತ್ತೆ?
ವೇಗವಾಗಿ ಬೆಳೆಯುತ್ತಿರುವ ಬೆಂಗಳೂರಿನಲ್ಲಿ ಶೇ.43ರಷ್ಟು ಮತದಾರರು ಪಟ್ಟಿಯಿಂದ ಹೊರಗುಳಿದಿರುವುದು ಗಂಭೀರ ಅನುಮಾನಗಳಿಗೆ ಕಾರಣವಾಗಿದೆ ಎಂದು ಒಕ್ಕೂಟ ಹೇಳಿದೆ. ‘ನಾಗರಿಕ ಮತ ಕಾವಲು ಸಮಿತಿ’ ನಡೆಸಿದ ಬೂತ್ ಮಟ್ಟದ ಪರಿಶೀಲನೆಯಲ್ಲಿ ಹಲವು ಲೋಪಗಳು ಪತ್ತೆಯಾಗಿವೆ ಎಂದು ಆರೋಪಿಸಿದೆ.
ವಾಸವಿದ್ದ ಸ್ಥಳದಲ್ಲೇ ಇರುವವರನ್ನು ಸ್ಥಳಾಂತರಗೊಂಡಿದ್ದಾರೆ ಎಂದು ದಾಖಲಿಸಿ ಹೆಸರು ಕೈಬಿಟ್ಟಿರುವುದು, ಜೀವಂತವಾಗಿರುವವರನ್ನು ಮೃತಪಟ್ಟಿದ್ದಾರೆ ಎಂದು ನಮೂದಿಸಿರುವುದು ಸೇರಿದಂತೆ ಹಲವು ದೋಷಗಳು ಕಂಡುಬಂದಿವೆ. ಈ ಬಗ್ಗೆ ಅಧಿಕಾರಿಗಳಿಗೆ ಮಾಹಿತಿ ನೀಡಿದರೂ ಅರ್ಹ ಮತದಾರರ ಹೆಸರುಗಳನ್ನು ಮರುಸೇರ್ಪಡೆಗೊಳಿಸಿಲ್ಲ ಎಂದು ಪ್ರಕಟಣೆಯಲ್ಲಿ ದೂರಲಾಗಿದೆ.
ಕಾಂಗ್ರೆಸ್ ನಾಯಕರ ಹೇಳಿಕೆಗಳಿಗೆ ಅಸಮಾಧಾನ
ದೇಶಾದ್ಯಂತ ಎಸ್ಐಆರ್ ವಿರುದ್ಧ ಪ್ರತಿಪಕ್ಷಗಳು ಹೋರಾಟ ನಡೆಸುತ್ತಿರುವಾಗ, ಕರ್ನಾಟಕದ ಕಾಂಗ್ರೆಸ್ ಸಚಿವರು ಪ್ರಕ್ರಿಯೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡುತ್ತಿರುವುದು ಒಕ್ಕೂಟದ ಅಸಮಾಧಾನಕ್ಕೆ ಕಾರಣವಾಗಿದೆ.
‘ಬೆಂಗಳೂರಿನಲ್ಲಿ ಮಾತ್ರ ಸಮಸ್ಯೆಯಿದೆ, ಇತರ ಜಿಲ್ಲೆಗಳಲ್ಲಿ ಇಲ್ಲ’ ಅಥವಾ ‘ನಮ್ಮ ಕ್ಷೇತ್ರದಲ್ಲಿ ಸರಿಯಾಗಿ ಕೆಲಸ ಮಾಡಿರುವುದರಿಂದ ಸಮಸ್ಯೆಯಾಗಿಲ್ಲ’ ಎಂಬ ಹೇಳಿಕೆಗಳು ಹೋರಾಟದ ಆಶಯಕ್ಕೆ ವಿರುದ್ಧವಾಗಿವೆ ಎಂದು ಟೀಕಿಸಿದೆ. ಈ ವಿಚಾರದಲ್ಲಿ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಸರ್ಕಾರ ಮತ್ತು ಪಕ್ಷದ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದೆ.
ನ.5ರ ಪ್ರತಿಭಟನೆಗೆ ಬೆಂಬಲ
ಮುಖ್ಯ ಚುನಾವಣಾ ಆಯುಕ್ತ ಗ್ಯಾನೇಶ್ ಕುಮಾರ್ ಅವರ ರಾಜೀನಾಮೆ ಹಾಗೂ ಎಸ್ಐಆರ್ ಪ್ರಕ್ರಿಯೆ ರದ್ದತಿಗೆ ಆಗ್ರಹಿಸಿ ‘ಇಂಡಿಯಾ’ ಒಕ್ಕೂಟದ ಪಕ್ಷಗಳು ನವೆಂಬರ್ 5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲು ಕರೆ ನೀಡಿವೆ. ಈ ಹೋರಾಟಕ್ಕೆ ಎಸ್ಐಆರ್ ವಿರೋಧಿ ಒಕ್ಕೂಟ ಬೆಂಬಲ ಘೋಷಿಸಿದೆ.
ಪ್ರಜಾಪ್ರಭುತ್ವದ ರಕ್ಷಣೆಗೆ ಪಾರದರ್ಶಕ ಚುನಾವಣಾ ವ್ಯವಸ್ಥೆ ಅಗತ್ಯ. ಪ್ರತಿಯೊಬ್ಬ ಅರ್ಹ ಮತದಾರನ ಹೆಸರೂ ಪಟ್ಟಿಯಲ್ಲಿ ಇರಬೇಕು. ಹೀಗಾಗಿ ಎಲ್ಲ ವರ್ಗದ ಜನರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದೆ.
2025ರ ಮತದಾರರ ಪಟ್ಟಿಯ ಪರಿಷ್ಕರಣೆಗೆ ಆಗ್ರಹ
ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಕೇಂದ್ರ ಚುನಾವಣಾ ಆಯೋಗದ ಎಸ್ಐಆರ್ ಪಟ್ಟಿಯನ್ನೇ ಬಳಸುವ ಅಗತ್ಯವಿಲ್ಲ ಎಂದು ಒಕ್ಕೂಟ ಪ್ರತಿಪಾದಿಸಿದೆ. ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳಲ್ಲಿಯೂ ಸ್ಥಳೀಯ ಚುನಾವಣೆಗಳಿಗೆ ಎಸ್ಐಆರ್ ಪಟ್ಟಿಯನ್ನು ಬಳಸುತ್ತಿಲ್ಲ ಎಂದು ಉಲ್ಲೇಖಿಸಿದೆ.
ಕರ್ನಾಟಕದಲ್ಲಿಯೂ ರಾಜ್ಯ ಚುನಾವಣಾ ಆಯೋಗದ ಮೂಲಕ ಎಲ್ಲ ಮತಗಟ್ಟೆಗಳಲ್ಲಿ ಸಾರ್ವಜನಿಕ ಪರಿಶೀಲನಾ ಸಭೆಗಳನ್ನು ನಡೆಸಬೇಕು. 2025ರ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ, ಲೋಪದೋಷಗಳನ್ನು ಸರಿಪಡಿಸಿದ ಬಳಿಕ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಿಗೆ ಬಳಸಬೇಕು ಎಂಬುದು ಒಕ್ಕೂಟದ ಪ್ರಮುಖ ಬೇಡಿಕೆಯಾಗಿದೆ.

