ಮಾರಿಕೊಂಡ ಮಾಧ್ಯಮಗಳಲ್ಲಿ ಕೆಲಸ ಮಾಡುವುದು ತಪ್ಪೇನಲ್ಲ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಅಂತಹ ಮಾಧ್ಯಮಗಳನ್ನು ಸಮರ್ಥಿಸಿಕೊಳ್ಳುವುದು ಹಾಗೂ ಮಡಿಲ ಮಾಧ್ಯಮಗಳನ್ನು ಪ್ರಶ್ನಿಸಿದವರ ವಿರುದ್ಧ ತಿರುಗಿ ಬೀಳುವುದು ಅಕ್ಷಮ್ಯ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಹು ಭಾಷಾ ಕಲಾವಿದರಾದ ಪ್ರಕಾಶ್ ರೈ ಏನೇ ಮಾತಾಡಿದರೂ ವಿವಾದ ಸೃಷ್ಟಿಸಲಾಗುತ್ತಿದೆ. ಯಾಕೆಂದರೆ ಅವರು ಸತ್ಯಕ್ಕೆ ಹತ್ತಿರವಾದದ್ದನ್ನು ನೇರವಾಗಿ ನಿರ್ಭಿಡೆಯಿಂದ ನುಡಿಯುತ್ತಾರೆ.
ಚಿನ್ನಯ್ಯ ಎನ್ನುವ ಬುರುಡೆ ವ್ಯಕ್ತಿಯು ತನ್ನ ಮೇಲೆ ಮಾಡಿರುವ ವ್ಯತಿರಿಕ್ತ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಲು ಜೂನ್ 16 ರಂದು ಪ್ರಕಾಶ್ ರೈಯವರು ಸುದ್ದಿಗೋಷ್ಠಿಯನ್ನು ಕರೆದಿದ್ದರು. ತಮ್ಮ ಟ್ವಿಟ್ಟರ್ ಅಕೌಂಟಲ್ಲಿ “ಮಾರಿಕೊಂಡ ಮಾಧ್ಯಮಗಳಿಗೆ ವಿಶೇಷ ಆಹ್ವಾನ” ಎಂದು ಬರೆದಿದ್ದರು. ಈ ಒಂದು ಸಾಲಿನ ಧ್ವನಿ ಪರ ವಿರೋಧವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಓಡಾಡಿ ಸುದ್ದಿಗೋಷ್ಠಿಯಲ್ಲಿ ಪ್ರತಿಧ್ವನಿಸಿತು.
ಇಷ್ಟಕ್ಕೂ ಪ್ರಕಾಶ್ರವರು ಹೇಳಬಾರದ್ದನ್ನೇನೂ ಹೇಳಿರಲಿಲ್ಲ. ಈಗ ದೇಶಾದ್ಯಂತ ಮೋದಿ ಪರವಾಗಿ ಪುಂಗುವ ಗೋದಿ ಮಾಧ್ಯಮಗಳ ಹಾವಳಿಯೇ ಅತಿಯಾಗಿರುವಾಗ, ಪ್ರಭುತ್ವವನ್ನು ಪ್ರಶ್ನಿಸುವ ಬದಲು, ಹಾಗೆ ಪ್ರಶ್ನಿಸುವವರನ್ನೇ ಪ್ರಶ್ನಿಸುವ ಬಹುತೇಕ ಸುದ್ದಿ ಮಾಧ್ಯಮಗಳಿಗೆ “ಮಾರಿಕೊಂಡ ಮಾಧ್ಯಮಗಳು” ಎಂದು ಆರೋಪಿಸಿದ್ದರಲ್ಲಿ ತಪ್ಪೇನಿಲ್ಲ. ಇತ್ತೀಚೆಗೆ ನಡೆದ ಕಾಕ್ರೋಚ್ ಪಾರ್ಟಿಯ ಪ್ರತಿಭಟನೆಗಳಲ್ಲಿ ಗೋದಿ ಮಾಧ್ಯಮಗಳ ವಿರುದ್ಧ ಕೇಳಿಬಂದ ಘೋಷಣೆಗಳೇ ಈ ಮಾರಿಕೊಂಡ ಮಡಿಲ ಮಾಧ್ಯಮಗಳ ವಿರುದ್ಧದ ಜನಾಕ್ರೋಶಕ್ಕೆ ಲೇಟೆಸ್ಟ್ ಉದಾಹರಣೆಯಾಗಿದೆ. ಅದನ್ನೇ ಸ್ವಲ್ಪ ನೇರವಾಗಿ ಹಾಗೂ ವ್ಯಂಗ್ಯವಾಗಿ ಪ್ರಕಾಶ್ ರಾಜ್ ರವರು ಹೇಳಿ ಅಂತಹ ಮಾಧ್ಯಮಗಳಲ್ಲಿ ಕಾರ್ಯಪ್ರವೃತ್ತರಾದವರ ಅಸಹನೆಗೆ ಅವರು ಕಾರಣರಾಗಿದ್ದಾರೆ. ಮಾಧ್ಯಮ ಗೋಷ್ಠಿಯಲ್ಲೇ ಕೆಲವಾರು ಪತ್ರಕರ್ತರು ಒಂದೂವರೆ ಗಂಟೆಗಳ ಕಾಲ ಗದ್ದಲ ಎಬ್ಬಿಸಿದರು.
“ನಾನು ಹೇಳಿದ್ದು ಮಾರಿಕೊಂಡ ಮಾಧ್ಯಮಗಳ ಬಗ್ಗೆಯೇ ಹೊರತು ಮಾರಿಕೊಳ್ಳದೇ ಇರುವವರ ಬಗ್ಗೆ ಅಲ್ಲ, ಕುಂಬಳಕಾಯಿ ಕಳ್ಳ ಅಂದರೆ ಯಾಕೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದೀರಿ” ಎಂದು ಪ್ರಕಾಶ್ ರವರು ಸಮರ್ಥನೆ ಮಾಡಿಕೊಂಡರೂ ಕೆಲವಾರು ಪತ್ರಕರ್ತರ ಆವೇಶ ನಿಲ್ಲಲಿಲ್ಲ. ಅಂತವರ ಆಕ್ರೋಶಕ್ಕೆ ಪ್ರಕಾಶ್ ರವರೂ ಮಣಿಯಲಿಲ್ಲ. “ತಾಕತ್ತಿದ್ದರೆ, ಮರ್ಯಾದೆ ಇದ್ದರೆ ಉತ್ತರ ಹೇಳಿ ಇಲ್ಲವೇ ಕ್ಷಮೆ ಕೇಳಿ” ಎಂದು ಕೆಲ ಪತ್ರಕರ್ತರು ಒತ್ತಾಯಿಸಿದಾಗ “ಕ್ಷಮೆ ಕೇಳಲು ನಾನು ಸಾವರ್ಕರ್ ಅಲ್ಲ” ಎಂದೇ ರೈ ಉತ್ತರಿಸಿದರು. ನಿಮ್ಮ ಪ್ರಶ್ನೆಗಳಿಗೆ ಉತ್ತರಿಸಲೆಂದೇ ಪ್ರೆಸ್ ಮೀಟ್ ಕರೆದಿದ್ದೇನೆ. ಪ್ರೆಸ್ ಮೀಟ್ ಮಾಡದೇ ಇರಲು ನಾನು ಪ್ರಧಾನಿ ಅಲ್ಲ” ಎಂದು ಉಡಾಫೆ ಪತ್ರಕರ್ತರನ್ನು ಕಿಚಾಯಿಸಿದರು.

ಇಲ್ಲಿ ಪ್ರಕಾಶ ರಾಜ್ ರವರು ಹೇಳಿದ್ದು ಮಾರಿಕೊಂಡ ಮಾಧ್ಯಮಗಳ ಕುರಿತು. ಆದರೆ ಅವರ ಹೇಳಿಕೆಯ ವಿರುದ್ಧ ತಿರುಗಿ ಬಿದ್ದಿದ್ದು ಪತ್ರಕರ್ತರುಗಳು. ಅಂದರೆ ತಾವೂ ಮಾರಿಕೊಂಡ ಮಾಧ್ಯಮಗಳ ಪ್ರತಿನಿಧಿ ಪತ್ರಕರ್ತರೆಂದು ಪರೋಕ್ಷವಾಗಿ ಒಪ್ಪಿಕೊಂಡಂತಾಯ್ತು. ರೈಯವರ ಆರಂಭಿಕ ಆಹ್ವಾನದಲ್ಲಿರುವ ವಿಡಂಬನೆಯನ್ನೂ ಅರ್ಥ ಮಾಡಿಕೊಳ್ಳದ ಹಂತಕ್ಕೆ ನಮ್ಮ ಕೆಲವು ಪತ್ರಕರ್ತರು ಬಂದಿದ್ದಾರೊ ಅಥವಾ ತಾವೂ ಮಾರಿಕೊಂಡ ಮಾಧ್ಯಮಗಳ ಭಾಗವಾಗಿದ್ದಕ್ಕೆ ಕೆರಳಿದರೋ ಗೊತ್ತಿಲ್ಲ. ಆದರೆ ಪ್ರಕಾಶರವರು ಯಾವುದೇ ಪತ್ರಕರ್ತರ ಬಗ್ಗೆ ಪ್ರಸ್ತಾಪಿಸಿರಲಿಲ್ಲ. ಮಾಧ್ಯಮಗಳ ಬಗ್ಗೆ ಕಾಲೆಳೆದರೆ ಈ ಪತ್ರಕರ್ತರುಗಳು ಯಾಕೆ ಕೆರಳಬೇಕು?
ಹೌದು.. ಬಹುತೇಕ ಸುದ್ದಿ ಮಾಧ್ಯಮಗಳು ದೇಶವಾಳುವ ಪ್ರಭುತ್ವಕ್ಕೆ, ಬಲಪಂಥೀಯ ಸಿದ್ಧಾಂತಕ್ಕೆ ತಮ್ಮನ್ನು ಮಾರಿಕೊಂಡಿವೆ. ಅಂತಹ ಮಾಧ್ಯಮಗಳಿಗೆ ಗೋದಿ ಮೀಡಿಯಾಗಳು ಎನ್ನಲಾಗುತ್ತದೆ. ಇಂತಹ ಮಾಧ್ಯಮಗಳಲ್ಲೂ ಹಲವಾರು ಪತ್ರಕರ್ತರು ಈಗಲೂ ವೃತ್ತಿಪರತೆಯಿಂದ ಕೆಲಸ ಮಾಡುತ್ತಿದ್ದಾರೆ. ಅಂತವರಲ್ಲಿ ಬಹುತೇಕರಿಗೆ ಸಿದ್ಧಾಂತ ಹಾಗೂ ವೃತ್ತಿಪರ ಬದ್ಧತೆಗಿಂತಲೂ ಹೊಟ್ಟೆಪಾಡು ಮುಖ್ಯವಾಗಿರುತ್ತದೆ. ಆಯಾ ಮಾಧ್ಯಮಗಳ ಮಾಲೀಕರ ಧೋರಣೆಗೆ ಪೂರಕವಾಗಿ ಕೆಲಸ ಮಾಡಬೇಕಾಗುತ್ತದೆ. ಪ್ರಶ್ನಿಸಿದರೆ ಕೆಲಸ ಕಳೆದು ಕೊಳ್ಳಬೇಕಾಗುತ್ತದೆ. ಯಾಕೆಂದರೆ ಯಾವೊಬ್ಬ ಪತ್ರಕರ್ತರಿಗೂ ಈಗ ಕಾನೂನಾತ್ಮಕ ಉದ್ಯೋಗ ಭದ್ರತೆ ಎನ್ನುವುದಿಲ್ಲ. ಎಲ್ಲರೂ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುವವರೆ. ಮಾಲೀಕತ್ವವನ್ನು ಎದುರು ಹಾಕಿಕೊಂಡರೆ ಯಾವಾಗ ಕೆಲಸ ಹೋಗುತ್ತದೋ, ಬದುಕು ಅತಂತ್ರವಾಗುತ್ತದೋ ಎನ್ನುವ ತೂಗುಗತ್ತಿ ಪ್ರತಿಯೊಬ್ಬ ಪತ್ರಕರ್ತನ ತಲೆಯ ಮೇಲೆ ಸದಾ ತೂಗುತ್ತಲೇ ಇರುತ್ತದೆ. ಬಹುತೇಕ ಪತ್ರಕರ್ತರಿಗೆ ಪ್ರಾಮಾಣಿಕತೆ ಹಾಗೂ ವೃತ್ತಿಪರತೆಯ ಪ್ರಶ್ನೆಗಿಂತಲೂ ಬದುಕಿನ ಪ್ರಶ್ನೆ ಕಾಡುತ್ತದೆ, ಮಾಲೀಕರ ಧೋರಣೆಗೆ ಹೊಂದಿಕೊಂಡು ಹೋಗಬೇಕಾಗುತ್ತದೆ.
ಹಾಗಂತ ಪತ್ರಕರ್ತರೆಲ್ಲಾ ಅಪ್ರಾಮಾಣಿಕರು, ಪಕ್ಷವೊಂದರ ಪ್ರತಿಪಾದಕರು, ಕೋಮುವಾದಿ ಪರ ನಿಲುವನ್ನು ಹೊಂದಿರುವವರು ಎನ್ನುವುದು ತಪ್ಪಾಗುತ್ತದೆ. “ಅದು ಹೇಗೆ ನೀವು ಒಂದು ಪಕ್ಷ ಹಾಗೂ ಅದರ ಸಿದ್ಧಾಂತದ ಪರವಾಗಿ ಮಾತಾಡುತ್ತೀರಿ”ಎಂದು ಹಲವಾರು ಗೋದಿ ಮಾಧ್ಯಮಗಳ ನಿರೂಪಕರನ್ನು ನಾನು ಪ್ರಶ್ನಿಸಿದ್ದೇನೆ. “ಏನು ಮಾಡುವುದು ನಮ್ಮ ಹೊಟ್ಟೆಪಾಡು, ಹಾಗೆ ಮಾಡದೆ ಹೋದರೆ ಕೆಲಸ ಕಳೆದುಕೊಳ್ಳಬೇಕಾಗುತ್ತದೆ” ಎನ್ನುವ ಉತ್ತರ ಕೇಳಿಬಂದಿದೆ.
ಯಾವಾಗ ಬದುಕಿನ ಪ್ರಶ್ನೆ ಬರುತ್ತದೋ ಆಗ ಅನಿವಾರ್ಯವಾಗಿ ಸುದ್ದಿ ಮಾಧ್ಯಮಗಳ ಧೋರಣೆಗೆ ತಕ್ಕಂತೆ ಹೊಂದಾಣಿಕೆ ಮಾಡಿಕೊಳ್ಳುವುದು ಪತ್ರಕರ್ತರಿಗೆ ಅನಿವಾರ್ಯವಾಗುತ್ತದೆ. ಇಲ್ಲಿ ವೃತ್ತಿಪರತೆ, ಬದ್ಧತೆ, ಸಿದ್ಧಾಂತ, ಜನಪರ ನಿಲುವುಗಳಿಗಿಂತಲೂ ಸಿಕ್ಕ ಕೆಲಸವನ್ನು ಉಳಿಸಿಕೊಂಡು ಹೋಗುವ ಪ್ರಯತ್ನವೇ ಮುಖ್ಯವಾಗುತ್ತದೆ. ಯಾಕೆಂದರೆ ಈಗ ಪತ್ರಿಕೋದ್ಯಮಕ್ಕೆ ಬರುತ್ತಿರುವ ಹೊಸ ತಲೆಮಾರಿನ ಬಹುತೇಕ ಯುವಕ ಯುವತಿಯರಿಗೆ ಜನಪರ ಸಿದ್ಧಾಂತಗಳ ಕುರಿತ ಬದ್ಧತೆ ಬೇಕಾಗಿಲ್ಲ. ಪತ್ರಕರ್ತ ಎಂದರೆ ಆಯಾ ಸುದ್ದಿ ಮಾಧ್ಯಮಗಳ ಧೋರಣೆಗಳಿಗೆ ತಕ್ಕಂತೆ ಕೆಲಸ ನಿರ್ವಹಿಸುವ ಯಾಂತ್ರಿಕ ವ್ಯಕ್ತಿ ಎಂಬುದೇ ಈ ಮಾರಿಕೊಂಡ ಮಾಧ್ಯಮಗಳ ಧೋರಣೆಯಾಗಿದೆ. ಸ್ವಂತ ಬುದ್ಧಿ ಉಪಯೋಗಿಸಿ ನಿಷ್ಠುರವಾಗಿ ಸುದ್ದಿಯನ್ನು ವಿಶ್ಲೇಷಿಸುವ ಕಾಲವೂ ಹೊರಟು ಹೋಗಿದೆ. ಮಾಧ್ಯಮಗಳ ಮಾಲೀಕರುಗಳ ಒಪ್ಪಿತ ಸಿದ್ಧಾಂತಗಳ ವಿರುದ್ಧ ನ್ಯಾಯ ನಿಷ್ಠೆಗಳ ಪರವಾಗಿ ನಿರ್ಧಾರ ತೆಗೆದುಕೊಳ್ಳುವ ಅವಕಾಶವೂ ಪತ್ರಕರ್ತರಿಗೆ ಇಲ್ಲವಾಗಿದೆ.
ತಮಗೆ ಕೆಲಸ ಕೊಟ್ಟ ಮಾಲೀಕರಿಗೆ ನಿಷ್ಠೆ ತೋರಿಸುವ ಅನಿವಾರ್ಯತೆಗೆ ಒಳಗಾದ ಪತ್ರಕರ್ತರಿಗೆ “ಮಾರಿಕೊಂಡ ಮಾಧ್ಯಮಗಳು” ಎಂದರೆ ಮುಜುಗರವಾಗುತ್ತದೆ. ಇಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುವ ಬಹುತೇಕ ಪತ್ರಕರ್ತರು ತಮ್ಮನ್ನು ಮಾರಿಕೊಂಡಿಲ್ಲದೇ ಇರಬಹುದು, ಆದರೆ ಮಾರಿಕೊಂಡ ಮಾಧ್ಯಮಗಳ ಭಾಗವಾಗಿ ಕೆಲಸ ನಿರ್ವಹಿಸುತ್ತಿರುವುದರಿಂದ ಮಡಿಲ ಮಾಧ್ಯಮಗಳನ್ನು ಠೀಕಿಸಿದರೆ ತಮ್ಮನ್ನೇ ಆಕ್ಷೇಪಿಸುತ್ತಿದ್ದಾರೆ ಎನ್ನುವ ಆತಂಕಕ್ಕೆ ಒಳಗಾಗುತ್ತಾರೆ. ಠೀಕಿಸಿದವರ ಮೇಲೆ ಪ್ರಶ್ನೆಗಳ ಗದಾಪ್ರಹಾರ ಮಾಡುತ್ತಾರೆ. ಹೊಟ್ಟೆಪಾಡಿಗಾಗಿ ವೃತ್ತಿಪರತೆಯ ನಿಯತ್ತು ಮಾರಿಕೊಂಡವರು ಪ್ರಶ್ನಿಸುವವರ ತಾಕತ್ತನ್ನು ಪ್ರಶ್ನಿಸುತ್ತಿದ್ದಾರೆ.
ಬಹುತೇಕ ನ್ಯೂಸ್ ಚಾನೆಲ್ಗಳ ಡಿಬೇಟ್ ಗಳನ್ನು ಹಾಗೂ ಅವುಗಳನ್ನು ನಡೆಸಿಕೊಡುವ ನಿರೂಪಕರ ಮಾತುಗಳನ್ನು ಕೇಳಿದಾಗ ಆ ಚಾನೆಲ್ ಮಾರಿಕೊಂಡ ಮಾಧ್ಯಮವೋ ಅಲ್ಲವೋ ಎನ್ನುವುದು ಗೊತ್ತಾಗುತ್ತದೆ. ಪತ್ರಕರ್ತರ ಪ್ರಶ್ನೆಗಳಿಗೆ ಎಂದೂ ಉತ್ತರಿಸದ ಪ್ರಧಾನಿಯವರ ಪರವಾಗಿ ಮೋದಿಯವರ ಮಾಸ್ಟರ್ ಸ್ಟ್ರೋಕ್, ಸರ್ಜಿಕಲ್ ಸ್ಟ್ರೈಕ್ ಎಂದು ಹೊಗಳುವಾಗ ಈ ನಿರೂಪಕರಿಗೆ ಆತ್ಮಸಾಕ್ಷಿ ಎನ್ನುವುದು ಬಾಧಿಸುವುದಿಲ್ವಾ?. ಮೋದಿ ಹಾಗೂ ಅವರ ಸಮರ್ಥಕರು ಮಾಡುವ ಮತಾಂಧತೆ ಪ್ರೇರಿತ ದ್ವೇಷ ಭಾಷಣಗಳು ಸಮಾಜಘಾತುಕ ಎಂದು ಈ ಗೋದಿ ಮಾಧ್ಯಮಗಳ ನಿರೂಪಕರಿಗೆ ಅನ್ನಿಸುವುದಿಲ್ವಾ? ತಿಕ್ಕಲು ಟ್ರಂಪ್ ಗೆ ಮೋದಿಯವರು ಶರಣಾಗಿದ್ದು ಇವರಿಗೆ ಅರ್ಥವಾಗುವುದಿಲ್ವಾ? ವಿದೇಶಿ ನೀತಿಗಳ ವೈಫಲ್ಯತೆ ಕಾಣುವುದೇ ಇಲ್ವಾ? ವಿಪರೀತ ಬೆಲೆ ಏರಿಕೆ ಹಾಗೂ ದೇಶದ ಆರ್ಥಿಕ ದುಸ್ಥಿತಿ ಗಮನಕ್ಕೆ ಬರೋದೇ ಇಲ್ವಾ? 160 ದೇಶಗಳ ಜಾಗತಿಕ ಸಮೀಕ್ಷೆಯಲ್ಲಿ ಭಾರತದ ಪತ್ರಿಕಾ ಸ್ವಾತಂತ್ರ್ಯ 156 ನೇ ಸ್ಥಾನದಲ್ಲಿರುವುದು ಅರಿವಿಗೆ ಬರುವುದಿಲ್ವಾ?. ಇವೆಲ್ಲವನ್ನೂ ನಿಷ್ಕರ್ಷೆಗೆ ಒಳಪಡಿಸುವ ಬದಲಾಗಿ ಮೋದಿ ಭಜನೆ ಮಾಡುತ್ತಿರುವ ಸುದ್ದಿ ಮಾಧ್ಯಮಗಳನ್ನು ಗೋದಿ ಮಾಧ್ಯಮಗಳು ಎಂದರೆ ಅಂತಹ ಮಾಧ್ಯಮಗಳಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಯಾಕೆ ಆಕ್ರೋಶ ಉಕ್ಕಿ ಬರಬೇಕು?

ಮೊದಲು ಹೊಟ್ಟೆಪಾಡಿನ ನೆಪ ಹೇಳಿ ಮಾರಿಕೊಂಡ ಮಾಧ್ಯಮಗಳಲ್ಲಿ ತಮ್ಮ ಮನಸ್ಸಿನ ವಿರುದ್ಧ ಕೆಲಸ ಮಾಡುತ್ತಿರುವ ಪತ್ರಕರ್ತರುಗಳು ತಮ್ಮ ತಮ್ಮ ಆತ್ಮಸಾಕ್ಷಿಯನ್ನು ಕೇಳಿಕೊಳ್ಳಬೇಕಿದೆ. ಬದುಕಲೇ ಬೇಕೆಂದರೆ ಬೇಕಾದಷ್ಟು ಕೆಲಸಗಳಿವೆ. ಆತ್ಮಸಾಕ್ಷಿಯನ್ನು ಬದಿಗಿಟ್ಟು ಮಾಧ್ಯಮಗಳ ಜನವಿರೋಧಿ ಧೋರಣೆಗಳ ಪರವಾಗಿ ಕೆಲಸ ಮಾಡುವ ಹಾಗೂ ತಮಗೆ ಕೆಲಸ ಕೊಟ್ಟಿದ್ದಾರೆ ಎನ್ನುವ ಕಾರಣಕ್ಕೆ ಮಡಿಲ ಮಾಧ್ಯಮಗಳನ್ನು ಸಮರ್ಥಿಸಿಕೊಳ್ಳುವ ಆತ್ಮವಂಚಕತೆಯಿಂದ ಮೊದಲು ಪತ್ರಕರ್ತರು ಹೊರಬರಬೇಕಿದೆ. ಈಗಾಗಲೇ ಕೆಲವಾರು ಪತ್ರಕರ್ತ ಮಿತ್ರರು ಮಡಿಲ ಮಾಧ್ಯಮಗಳಿಂದ ಹೊರಗೆ ಬಂದು ಸಾಮಾಜಿಕ ಜಾಲತಾಣಗಳೆಂಬ ಸ್ವತಂತ್ರ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದಾರೆ. ಪ್ರಭುತ್ವದ ಜನವಿರೋಧಿತನಗಳ ವಿರುದ್ಧ ಧ್ವನಿ ಎತ್ತಿದ್ದಾರೆ. ಧಾರ್ಮಿಕ ಕ್ಷೇತ್ರಗಳಲ್ಲಿ ಆದ ಅಧರ್ಮ ಕಾರ್ಯಗಳನ್ನು ಬಯಲು ಮಾಡುತ್ತಿದ್ದಾರೆ. ದೇಶದ ವಾಸ್ತವ ಪರಿಸ್ಥಿತಿಯನ್ನು ಜನರ ಮುಂದೆ ವಿವರಿಸುತ್ತಿದ್ದಾರೆ. ಜೆನ್ ಜಿ (Gen Z) ಜನರೇಶನ್ ಗೋದಿ ಮಾಧ್ಯಮಗಳ ಗುಲಾಮಗಿರಿಯ ವಿರುದ್ಧ ತಿರುಗಿ ಬಿದ್ದಿದೆ. ಅದಾನಿ ಅಂಬಾನಿಯಂತಹ ಕಾರ್ಪೋರೇಟ್ ಉದ್ಯಮಿಗಳ ಮಾಲೀಕತ್ವದ ಸುದ್ದಿ ಮಾಧ್ಯಮಗಳ ಮೇಲೆ ಜನರಿಗೂ ನಂಬಿಕೆ ನಶಿಸುತ್ತಿದೆ. ಹೀಗಾಗಿ ಜನರೇ ಈ ಮಾಧ್ಯಮದವರ ವಿರುದ್ಧ ತಿರುಗಿ ಬೀಳುವ ಮೊದಲು, ಮಾರಿಕೊಂಡ ಮಾಧ್ಯಮಗಳಿಗೆ ಮಾನ್ಯತೆ ಇಲ್ಲ ಎಂದು ಹೇಳುವ ಮೊದಲು ಅಂತಹ ಮಾಧ್ಯಮಗಳಲ್ಲಿ ಕೆಲಸ ಮಾಡುತ್ತಿರುವವರು ಜಾಗೃತರಾಗಬೇಕಿದೆ. ಗೋದಿ ಮಾಧ್ಯಮ ಎನ್ನುವ ಹಣೆಪಟ್ಟಿ ಗೋದಿ ಪತ್ರಕರ್ತರಿಗೂ ಅನ್ವಯಿಸುತ್ತದೆ.
ಹೀಗಾಗಿ.. ಮಾರಿಕೊಂಡ ಮಾಧ್ಯಮಗಳಲ್ಲಿ ಕೆಲಸ ಮಾಡುವುದು ತಪ್ಪೇನಲ್ಲ. ಪ್ರಜಾಪ್ರಭುತ್ವಕ್ಕೆ ಮಾರಕವಾಗಿರುವ ಅಂತಹ ಮಾಧ್ಯಮಗಳನ್ನು ಸಮರ್ಥಿಸಿಕೊಳ್ಳುವುದು ಹಾಗೂ ಮಡಿಲ ಮಾಧ್ಯಮಗಳನ್ನು ಪ್ರಶ್ನಿಸಿದವರ ವಿರುದ್ಧ ತಿರುಗಿ ಬೀಳುವುದು ಅಕ್ಷಮ್ಯ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- https://kannadaplanet.com/el-nino-the-crutch-of-the-escapists/ ಎಲ್ನಿನೊ, ಉಣುಚಿಕೊಳ್ಳುವವರ ಊರುಗೋಲು – ಭಾಗ 1


