ಏರುತ್ತಿರುವ ತಾಪಮಾನ ಮತ್ತು ಕುಸಿಯುತ್ತಿರುವ ಮಳೆಯ ಪ್ರಮಾಣವನ್ನು ನಾವೀಗ ಅನುಭವಿಸುತ್ತಿದ್ದೇವೆ. ಭಾರತದ ಮುಂಗಾರಿನ ಮೇಲೆ ಹೀಗೆ ಪರಿಣಾಮ ಬೀರುವ ಬೆಳವಣಿಗೆಗಳ ಕುರಿತು ಸವಿವರವಾಗಿ ಬರೆದಿದ್ದಾರೆ ಹಾಸನದ ವಿಜ್ಞಾನ ಲೇಖಕ ಕೆ ಎಸ್ ರವಿಕುಮಾರ್. ಸರಣಿಯಲ್ಲಿ ಪ್ರಕಟವಾಗಲಿರುವ ಲೇಖನದ ಮೊದಲ ಭಾಗ ಇಲ್ಲಿದೆ.
2024ರ ಮೇ 29ರಂದು ಬಿರುಸು ಬಿಸಿಯಲೆಗಳು ಕವಿದು, ದೆಹಲಿಯ ಮುಂಗೇಶಪುರದಲ್ಲಿ ದಿನದ ಅತಿ ಹೆಚ್ಚಿನ ತಾಪ 52.3 ಡಿಗ್ರಿ ಸೆಲ್ಸಿಯಸ್ ದಾಖಲಾಯಿತು. ಆ ತಾಪ ಆ ದಿನದ ಮಟ್ಟಿಗಲ್ಲ, 1901ರಲ್ಲಿ ಭಾರತೀಯ ಹವಾಮಾನ ಇಲಾಖೆ ಅಧಿಕೃತವಾಗಿ ತಾಪ ದಾಖಲಿಸಲು ಶುರು ಮಾಡಿದಂದಿನಿಂದ ಆ ತನಕ ಈ ಮಟ್ಟಿಗೆಂದೂ ಕಂಡುಬಂದಿರಲಿಲ್ಲ. ಜಗತ್ತಿನ ಬೇರೆಡೆಯೂ ಆ ದಿನ ಅಷ್ಟು ತಾಪ ದಾಖಲಾಗಿರಲಿಲ್ಲ. ಜಾಗತಿಕ ಮಾಧ್ಯಮಗಳಲ್ಲಿ ಮುಂಗೇಶಪುರದ ತಾಪದ ಬಗ್ಗೆ ಗಂಭೀರ ವರದಿಗಳು ಪ್ರಕಟಗೊಂಡವು. ಆದರೆ ನಮ್ಮ ಹವಾಮಾನ ಇಲಾಖೆ ಮುಂದಿನ ಒಂದೆರಡು ದಿನಗಳಲ್ಲೆ ‘ಅದು ಹಾಗಲ್ಲ, ಆ ದಿವಸ ಮುಂಗೇಶಪುರದಲ್ಲಿ ಹೆಚ್ಚೆಂದರೆ 49.1 ಡಿಗ್ರಿ ಸೆಲ್ಸಿಯಸ್ ತಾಪವಿತ್ತು. ತಪ್ಪು ದಾಖಲಿಕೆಗೆ ಸ್ವಯಂಚಾಲಿತ ತಾಪ ಗ್ರಹಿಸುವ ಸೆನ್ಸಾರ್‌ನಲ್ಲಿ ಕುಂದು ಇದ್ದದ್ದೇ ಕಾರಣ’ ಎಂಬ ಹೇಳಿಕೆಯನ್ನು ಬಿಡುಗಡೆ ಮಾಡಿತು. ಅಷ್ಟೇ, ಅಲ್ಲಿಗೆ ದೇಶ ಆ ವಿಚಾರವನ್ನು ಮರೆವಿನ ಕಸದಬುಟ್ಟಿಗೆ ಎಸೆಯಿತು. ‘ಕುಂದುಕೊರತೆಗಳಿರುವ ಸೆನ್ಸಾರ್‌ಗಳನ್ನು ಏಕೆ ಅಳವಡಿಸಿದ್ದೀರಿ’ ಎಂಬ ಪ್ರಶ್ನೆ ಮುಖ್ಯವಾಹಿನಿಯ (ತುತ್ತೂರಿ ಅಥವಾ ನಗಾರಿ) ಮಾಧ್ಯಮಗಳಲ್ಲಾಗಲಿ, (ಭಟ್ಟಂಗಿ) ವಿಜ್ಞಾನಿಗಳ ವಲಯದಲ್ಲಾಗಲಿ ಕೇಳಿಬರಲಿಲ್ಲ. ತಮಾಷೆಯೆಂದರೆ ಕೇವಲ ಎರಡು ವರುಷಗಳ ಹಿಂದೆಯಷ್ಟೆ ಇಲಾಖೆ ಅಳವಡಿಸಿದ್ದ ಸೆನ್ಸಾರ್‌ನಲ್ಲಿ ಕುಂದು ಕಂಡುಬಂದಿತ್ತು! ಅಷ್ಟು ಬೇಗ ಕೆಟ್ಟು ಅದು ತಪ್ಪು ಮಾಹಿತಿಯನ್ನು ದಾಖಲಿಸಿತೆ? ಲಕ್ಷಾಂತರ ರೂಪಾಯಿಗಳನ್ನು ತೆತ್ತು ಕಳಪೆ ಸೆನ್ಸಾರ್ ಅಳವಡಿಸಿದ್ದೇಕೆ? ಕಳಪೆ ಸೆನ್ಸಾರ್‌ಗಳ ಪೊರಯಿಕೆಯಲ್ಲಿ ರುಶುವತ್ತು ಇತ್ತೆ? ಇವತ್ತಿಗೂ ಉತ್ತರ ದಕ್ಕದ ಪ್ರಶ್ನೆಗಳಿವು. ಇನ್ನೂ ಅಚ್ಚರಿಯೆಂದರೆ ಈ ಸಂಬಂಧ ಒಕ್ಕೂಟ ಸರಕಾರದ ಪರಿಸರ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂವಿಜ್ಞಾನಗಳ ಮಿನಿಸ್ಟ್ರಿಗಳು ಕೂಡಾ ಹವಾಮಾನ ಇಲಾಖೆಯನ್ನು ತರಾಟೆಗೆ ತೆಗೆದುಕೊಂಡವೆ, ಇಲ್ಲವೆ ಎಂಬುದು ದೇಶಕ್ಕೆ ತಿಳಿಯಲಿಲ್ಲ. ಸರಕಾರ ಮತ್ತು ಇಲಾಖೆಗಳು ಹವಾಮಾನ ಬದಲಾವಣೆಯ ಅಡ್ಡಪರಿಣಾಮಗಳನ್ನು ದೇಶಕ್ಕೆ ತಿಳಿಸುವ ಒಳ್ಳೆಯ ತೆರಹನ್ನು ಬಳಸಿಕೊಳ್ಳುವ ಬದಲು ಮುಚ್ಚಿಡುವ ಪ್ರಯತ್ನಕ್ಕೆ ಒತ್ತುಕೊಟ್ಟವು. ಹೀಗೆ ಎಷ್ಟು ದಿನ ಮಾಡಲಾದೀತು?
ಮತ್ತೆ ದೆಹಲಿಯಲ್ಲೆ ನಮ್ಮ ಮೊಕ್ಕಾಂ ಹೂಡೋಣ. ದೆಹಲಿಯ ಗಾಳಿಕಲುಹೆ (ಏರ್ ಪೊಲ್ಯುಶನ್) ಜಗತ್ತಿನಲ್ಲೆ ಕುಖ್ಯಾತ. ಆ ಕುಖ್ಯಾತಿಯನ್ನು ತೊಡೆದುಹಾಕುವ ಸಲುವಾಗಿ ದೆಹಲಿಯ ‘ಘನ’ ಸರಕಾರ ಒಂದು ಭಾರೀ ತೀರ್ಮಾನ ಮಾಡಿತು. ಮೋಡಬಿತ್ತನೆಯ ಮೂಲಕ ಮಳೆ ಬರಿಸಿ ಗಾಳಿಕಲುಹೆಯನ್ನು ಕಮ್ಮಿಮಾಡಲು ಕಾನ್ಪುರದ ಐಐಟಿ ಮೇಧಾವಿಗಳ ನೆರವು ಕೇಳಿತು. 2025ರ ಅಕ್ಟೋಬರ್ 28ನೇ ತಾರೀಕನ್ನು ಮೋಡಬಿತ್ತನೆಗೆ ಆಯ್ದುಕೊಳ್ಳಲಾಯಿತು. ಐಐಟಿಗೆ ಸೇರಿದ ಸೆಸ್ನಾ ವಿಮಾನ 10 ಕಿ.ಗ್ರಾಂ.ನಷ್ಟು ಸಿಲ್ವರ್ ಐಯೊಡೈಡ್, ಐಯೋಡಿಕರಿಸಿದ ಸಾಮಾನ್ಯ ಉಪ್ಪು ಮತ್ತು ಐಯೋಡಿಕರಿಸದ ಕಲ್ಲುಪ್ಪುಗಳ ಬೆರೆಕೆಯನ್ನು ಒಂದಲ್ಲ ಎರಡು ಬಾರಿಯ ಹಾರಾಟದಲ್ಲಿ ದೆಹಲಿಯ ಆಗಸದಲ್ಲಿ ಚೆಲ್ಲಾಡಿಬಂತು. ಆಮೇಲೆ ಮಳೆ ಬಂತೆ? ಉಹುಂ, ಹೇಗೆ ಬಂದೀತು, ಮೋಡವೆ ಇಲ್ಲದ ಮೇಲೆ ಮಾಡಿದ ಬಿತ್ತನೆಯಿಂದ ಪ್ರಯೋಜನವೇನು!? ಅಂದರೆ…!? ನಿಮಗಚ್ಚರಿಯಾಗಿರಬೇಕು. ಅಕ್ಟೋಬರ್ 28ರಂದು ದೆಹಲಿಯ ಆಗಸದಲ್ಲಿ ಮೋಡಗಳಿರುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿರಲಿಲ್ಲ. ಇದ್ದರೂ ಬಹಳ ತೆಳ್ಳಗಿನ ಮೋಡಗಳು ಚೆದುರಿದಂತೆ ತೇಲಿಹೋಗಬಹುದಿತ್ತು. ಇನ್ನು ತೇವಾಂಶ ತುಂಬಿಕೊಂಡ ಮಳೆಮೋಡಗಳಂತೂ ಇರಲಿಲ್ಲ. ಮತ್ತೇಕೆ ಮೋಡಬಿತ್ತನೆಯ ಕಸರತ್ತನ್ನು ಕಾನ್ಪುರ ಐಐಟಿ ಹಮ್ಮಿಕೊಂಡಿತು? ಲಕ್ಷಾಂತರ, ಕೋಟ್ಯಂತರ ರೂಪಾಯಿಗಳನ್ನು ಸುಮ್ಮನೆ ಈ ಕಸರತ್ತಿಗೆ ಸುರಿಯಲಾಯಿತು? ಅವತ್ತಿನ ಬರಡು ಬಿತ್ತನೆಗೆ 55 ಲಕ್ಷದಿಂದ 1.5 ಕೋಟಿ ರೂಪಾಯಿಗಳವರೆಗೆ ಪೋಲಾಗಿರಬೇಕು ಎಂಬ ಅಂದಾಜಿದೆ. ಐಐಟಿಯ ಮೇಧಾವಿಗಳಿಗೆ ಮಳೆಮೋಡಗಳಿಲ್ಲದೆ ‘ಮಾಳ್ಕೆಯ ಮಳೆ’ (ಆರ್ಟಿಫಿಶಿಯಲ್ ರೇನ್, ಹೆಚ್ಚಿನ ಮಾಹಿತಿಗೆ 2025ರ ನವೆಂಬರ್ 2ನೇ ತಾರೀಕಿನ ‘ದ ಹಿಂದೂ’ವಿನ ಅಚ್ಚಿನ ಪುಟವನ್ನು ನೋಡಬಹುದು) ಬರಿಸುವುದು ಸಾಧ್ಯವಿಲ್ಲ ಎಂದೇಕೆ ತಿಳಿದಿರಲಿಲ್ಲ? ತಿಳಿದಿದ್ದರೆ ಸರಕಾರದ ಸೂಚನೆಯನ್ನು ಏಕೆ ಪ್ರಶ್ನೆ ಮಾಡಲಿಲ್ಲ? ಬಹಳ ಮುಖ್ಯವಾಗಿ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ದೆಹಲಿಯ ‘ಘನ’ ಸರಕಾರ ಮತ್ತು ಐಐಟಿಯ ಮೇಧಾವಿಗಳು ಏಕೆ ಕಡೆಗಣಿಸಿದರು? ಮೇಲುನೋಟಕ್ಕೇ ಒಂದು ಹಗರಣದಂತೆ ತೋರುವ ದೆಹಲಿಯ ಮೋಡಬಿತ್ತನೆಯನ್ನು ಮಾಧ್ಯಮಗಳು ಏಕೆ ಪ್ರಶ್ನಿಸಲಿಲ್ಲ? ಇಡೀ ಯೋಜನೆಗೆ ನಿಜಕ್ಕೂ ಎಷ್ಟು ರೊಕ್ಕ ವೆಚ್ಚವಾಗಿರಬಹುದು, ಯಾರ್ಯಾರು ಎಷ್ಟೆಷ್ಟು ಕಿಕ್‍ಬ್ಯಾಕ್ ಪಡೆದಿರಬಹುದು, ಒಕ್ಕೂಟ ಸರಕಾರಕ್ಕೆ ಆ ಬಗ್ಗೆ ಮಾಹಿತಿಯಿರಲಿಲ್ಲವೆ ಮುಂತಾಗಿ ತಿವಿಯುವ ಪ್ರಯತ್ನಗಳು ಕಾಣಲಿಲ್ಲ. ಸರಿ ಇವರೆಲ್ಲ ಹೋಗಲಿ, ತನ್ನ ಮುನ್ಸೂಚನೆಯನ್ನು ಗಂಭೀರವಾಗಿ ಪರಿಗಣಿಸದೆ ಇದ್ದದ್ದಕ್ಕೆ ಹವಾಮಾನ ಇಲಾಖೆಯಾದರೂ ತಗಾದೆ ತೆಗೆಯಬೇಕಿತ್ತಲ್ಲ, ತೆಗೆಯಲಿಲ್ಲ. ಕಡೆಯಪಕ್ಷ ಮೋಡಬಿತ್ತನೆಯ ಪ್ರಯೋಗವು ಬಯಸಿದ ಗುರಿ ಮುಟ್ಟಬೇಕಾದರೆ ಏನೇನು ಪೂರಕ ಅಂಶಗಳಿರಬೇಕು ಎಂಬ ಕಿವಿಮಾತನ್ನಾದರೂ ಅದು ಮಾಧ್ಯಮಗಳಿಗೊ, ಅಥವಾ ದೆಹಲಿ ಸರಕಾರಕ್ಕೋ ನೀಡಬೇಕಿತ್ತು. ಅಂತಹುದೇನೂ ನಡೆದಂತಿಲ್ಲ. ಹವಾಮಾನವನ್ನೂ ಈಗ ಕಳ್ಳ ಖಮಾಯಿಯ ಹೊಸ ಮೂಲವಾಗಿ ನೋಡಲಾಗುತ್ತಿದೆಯೆ? ಮೋಡಗಳು ಹವಾಮಾನ ಇಲಾಖೆಯ ಚೌಕಟ್ಟಿನಲ್ಲಿ ಕಾಣಿಸಿಕೊಳ್ಳುವುದರಿಂದ ನಾನಿಲ್ಲಿ ಮೇಲಿನ ತಕರಾರನ್ನು ಎತ್ತಿದ್ದೇನೆ.

ಮತ್ತೊಂದು ಎತ್ತುಗೆಯನ್ನು ನಿಮ್ಮ ಮುಂದಿಡುವೆ. ಅದು ನಮ್ಮ ಕರುನಾಡಿನ ಶಿವಮೊಗ್ಗ ಜಿಲ್ಲೆಗೆ ಸಂಬಂಧಿಸಿದ್ದು. ಕಳೆದ ಮೂರ್ನಾಲ್ಕು ವರುಷಗಳಿಂದ ಮಲೆನಾಡಿನ ತಾಣಗಳು ವಾಡಿಕೆಗಿಂತ ಹೆಚ್ಚಿನ ಮಳೆಯ ಹೊಡೆತಕ್ಕೆ ಸಿಲುಕಿವೆ. ಅಡಿಕೆ ತೋಟಗಳಲ್ಲಿ ಸತತ ನೀರು ಆರದೆ ಶಿಲೀಂಧ್ರಗಳು ಹೊಸದಾಗಿ ತರುತ್ತಿರುವ ‘ಎಲೆ ಚುಕ್ಕಿ ಕಾಯಿಲೆ’ ಮತ್ತು ‘ಹಳದಿ ಎಲೆ ಕಾಯಿಲೆ’ಗಳು ಅಡಿಕೆ ಇಳುವರಿಯನ್ನು ಬಹಳ ಕುಗ್ಗಿಸುತ್ತಿವೆ. ಈ ಸಂಬಂಧ ಕಂಗಾಲಾಗಿರುವ ಅಡಿಕೆ ಬೆಳೆಗಾರರ ಅಳಲು ರಾಜ್ಯದ ಹರವು ದಾಟಿ ಸಂಸತ್ತಿನಲ್ಲಿ ಚರ್ಚೆಗೆ ಬಂತು. ಶಿವಮೊಗ್ಗದ ಸಂಸತ್ ಸದಸ್ಯರು ಕಳೆದ ವರುಷ ಡಿಸೆಂಬರ್ ನಾಲ್ಕರಂದು ಅಡಿಕೆ ಬೆಳೆಗಾರರಿಗೆ ಆಗಿರುವ ಹಾನಿಗೆ ತಕ್ಕ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದರು. ಹವಾಮಾನ ಬದಲಾವಣೆ ತಂದ ಮಳೆಯ ಹೆಚ್ಚಳದ ಬಗ್ಗೆ ಚರ್ಚೆ ಆಗಲಿಲ್ಲವೆನ್ನಿ. ಮುಖ್ಯವಾಗಿ ಎರಡು ಕಾಯಿಲೆಗಳ ಕುರಿತು ಅವರು ಮಾತನಾಡಿದರು. ಅತಿಯಾಗಿ ಮಳೆ ಬಂದದ್ದನ್ನು ತಿಳಿಯುವುದು ಹೇಗೆ? ಸ್ಥಳೀಯವಾಗಿ ಅಳವಡಿಸಿರುವ ಮಳೆಅಳಕ(ರೇನ್ ಗೇಜ್)ಗಳು ನೀಡುವ ಪ್ರಮಾಣದಿಂದ ತಿಳಿಯಬೇಕು. ಆದರೆ ತಕ್ಕ ನಿಗಾ ಇಲ್ಲದೆ ಅವು ಕಳಪೆಯಾಗಿದ್ದರೆ ಹೇಗೆ ತಿಳಿಯುವುದು? ಆಗ ಹವಾಮಾನ ಇಲಾಖೆ ಹವಾಮಾನ ಉಪಗ್ರಹಗಳು ಮತ್ತು ಡಾಪ್ಲರ್ ರೆಡಾರ್‌ಗಳು ನೀಡುವ ಮಾಹಿತಿಯೊಂದಿಗೆ ಹಿಂದಿನ ವರುಷಗಳ ಮಾಹಿತಿಗಳನ್ನು ಅನುಸರಿಸಿ ಗಣಿತೀಯ ಲೆಕ್ಕಾಚಾರಗಳಿಂದ ಮಳೆಯ ಪ್ರಮಾಣವನ್ನು ಅಳೆಯುತ್ತದೆ (ಆ ನಿಟ್ಟಿನಲ್ಲಿ ನಾಸಾದ ‘ಗ್ಲೋಬಲ್ ಪ್ರಿಸಿಪಿಟೇಶನ್ ಮೆಸರ್‍ಮೆಂಟ್’ ಉಪಗ್ರಹಗಳ ನೆರವನ್ನೂ ನಮ್ಮ ಹವಾಮಾನ ಇಲಾಖೆ ಪಡೆಯುವುದೂ ಇದೆ). ಆದರೂ ನೆಲದ ಮೇಲೆ ಬಿದ್ದ ಮಳೆಯ ಕರಾರುವಾಕ್ ಪ್ರಮಾಣ ನೇರವಾಗಿ ತಿಳಿಯಲು ಮೇಲಿನೆರಡು ವಿಧಾನಗಳಿಂದ ಸಾಧ್ಯವಿಲ್ಲ; ನಿಖರತೆಗೆ ಹತ್ತಿರ ಲೆಕ್ಕಿಸಬಹುದು. ಏನಿದ್ದರೂ ಕಡೆಗೆ ಒದಗುವುದು ಮಳೆಅಳಕಗಳೆ. ಡೆಪ್ಯುಟಿ ಕಮಿಶನರ್, ತೋಟಗಾರಿಕಾ ಇಲಾಖೆಯ ಜಾಯಿಂಟ್ ಡೈರೆಕ್ಟರ್ ಮುಂತಾದವರ ಹೇಳಿಕೆಯ ಪ್ರಕಾರ ಸುಮಾರು 280 ಹವಾಮಾನ ಕೇಂದ್ರ (Weather station)ಗಳು ಶಿವಮೊಗ್ಗ ಜಿಲ್ಲೆಯಲ್ಲಿ ಸರಿಯಾದ ಮೇಲ್ವಿಚಾರಣೆ ಇಲ್ಲದೆ ಗೊಡ್ಡಾಗಿವೆ. ಸರಿಯಾಗಿರುವ ಕಡೆಯಿಂದ ಪಡೆದ ಮಾಹಿತಿಯನ್ನು ಸರಿಯಿಲ್ಲದ ಕಡೆ ಬಿದ್ದ ಮಳೆಯ ಪ್ರಮಾಣವನ್ನು ಅಂದಾಜು ಮಾಡಲು ಬಳಸಲಾಗಿದ್ದು ಆ ಮಾಹಿತಿ ಅತಿಮಳೆಯ ಕಾರಣಕ್ಕೆ ಹೊಸ ಕಾಯಿಲೆಗಳು ಕಾಣಿಸಿಕೊಂಡಿದ್ದು ಎಂಬ ವಾದಕ್ಕೆ ಪೂರಕವಾಗಿಲ್ಲ. ಹೀಗಾಗಿ ಕಾಯಿಲೆಗಳಿಂದ ಹಾನಿ ಅನುಭವಿಸಿದ ಅಡಿಕೆ ಬೆಳೆಗಾರರಿಗೆ ಪರಿಹಾರ ನೀಡುವಲ್ಲಿ ಗೊಂದಲವಾಗಿದೆ. ವಾಡಿಕೆಗಿಂತ ಹೆಚ್ಚುವರಿ ಮಳೆಕಂಡರೂ ಎರಡು ಪಂಚಾಯಿತಿಗಳ ಬೆಳೆಗಾರರಿಗೆ ದಕ್ಕಿದ ಪರಿಹಾರ ದೊಡ್ಡ ಸೊನ್ನೆ. ಕಳಪೆ ಮಳೆಅಳಕಗಳಿರುವ ಹವಾಮಾನ ಕೇಂದ್ರಗಳು ರಾಜ್ಯದ ‘ನೈಸರ್ಗಿಕ ವಿಪತ್ತು ಮೇಲ್ವಿಚಾರಣೆ’ ಸುಪರ್ದಿನಲ್ಲಿವೆ. ಅವು ತನ್ನ ಜವಾಬುದಾರಿಯನ್ನು ಸರಿಯಾಗಿ ನಿರ್ವಹಿಸದಿದ್ದಾಗ ಹವಾಮಾನ ಇಲಾಖೆ ಮತ್ತು ಒಕ್ಕೂಟ ಸರಕಾರಗಳು ಮಧ್ಯಪ್ರವೇಶ ಮಾಡಬೇಕಾಗುತ್ತದೆ. ಹಾಗೇನೂ ಮಾಡದೆ ಬೇಕಾಬಿಟ್ಟಿ ಮಾಹಿತಿಗಳನ್ನು ನಿಭಾಯಿಸಿಕೊಂಡು ಹೋಗುವ ಎಲ್ಲರ ಮನಸ್ಥಿತಿಯಿಂದಾಗಿ ಕಡೆಯದಾಗಿ ಬಳಲುವುದು ಉತ್ಪಾದಕ ಸಮಾಜದ ತಳಮಟ್ಟದಲ್ಲಿರುವವರು, ಅಂದರೆ ನಿಸರ್ಗದೊಂದಿಗೆ ನೇರ ನಂಟು ಹೊಂದಿರುವವರು. ಶಿವಮೊಗ್ಗದ ಸಂಸತ್ ಸದಸ್ಯ ಅವರದ್ದೇ ಪಕ್ಷವಿರುವ ಒಕ್ಕೂಟ ಸರಕಾರವನ್ನು ಪ್ರತಿನಿಧಿಸುತ್ತಾರೆ. ಹವಾಮಾನ ಇಲಾಖೆಯ ಕಾರ್ಯವೈಖರಿಯನ್ನು ತರಾಟೆಗೆ ತೆಗೆದುಕೊಳ್ಳಲು ಆತ ತಯಾರಿರಲಿಲ್ಲ. ಕಳಪೆ ಹವಾಮಾನ ಕೇಂದ್ರಗಳ ಬಗ್ಗೆ ಆತನಿಗೆ ಯಾವ ತಕರಾರೂ ಇರಲಿಲ್ಲ. ಆದರೆ ಹವಾಮಾನ ಇಲಾಖೆ ಮಾಡಬೇಕಾದ ಮೊದಲ ಕೆಲಸವೆಂದರೆ ದೇಶದೆಲ್ಲೆಡೆ ಎಲ್ಲ ಕಳಪೆ ಹವಾಮಾನ ಸಂಬಂಧಿ ಸಲಕರಣೆಗಳನ್ನು ಬದಲಿಸಿ ಹೆಚ್ಚು ಆಧುನಿಕವಾಗಿರುವವನ್ನು ಅಳವಡಿಸಲು ಒತ್ತಡ ತರಬೇಡವೆ? ಎಷ್ಟು ದಿನವೆಂದು ಅದು ರಾಜ್ಯಗಳಲ್ಲಿ ಹದಗೆಟ್ಟ ಹವಾಮಾನ ಕೇಂದ್ರಗಳು ನೀಡಿದ ಅಸಮಂಜಸ ಮಾಹಿತಿಗಳನ್ನೆ ಅವಲಂಬಿಸಿ ದೇಶದ ಮಳೆಯ ಸಮಗ್ರ ಚಿತ್ರಣ ನೀಡುವ ಕಸರತ್ತನ್ನು ಮುಂದುವರಿಸುತ್ತದೆ? ವಿಪರೀತ ಒತ್ತರದಲ್ಲಿ ಬದಲಾಗುತ್ತಿರುವ ಹವಾಮಾನದ ಏರುಪೇರುಗಳನ್ನು ತಿಳಿಯಲು ಅಥವಾ ಅಳೆಯಲು ಯಾವ ಕಾರಣಕ್ಕೂ ನಾವು ಹಿಂದೆ ಬೀಳುವಂತಿಲ್ಲ. ಸೋಮಾರಿತನ ಬೆಳವಣಿಗೆಯಲ್ಲ. ಸವಾಲುಗಳನ್ನು ಎದುರಿಸಲು ಬೇಕಾದ ಹತಾರವಲ್ಲ.
(ಮುಂದಿನ ಭಾಗ ನಾಳೆ (19-06-2026) ನಿರೀಕ್ಷಿಸಿ.. )
ಕೆ.ಎಸ್.ರವಿಕುಮಾರ್, ಹಾಸನ
ಲೇಖಕರು. ಮುಖ್ಯವಾಗಿ ವಿಜ್ಞಾನ ಬರಹಗಾರರು. ಪರಿಸರದ ಮೇಲೆ ವಿಶೇಷ ಆಸಕ್ತಿ. ಚಾರಣ ಹವ್ಯಾಸ.
ಮೊ : 9964604297


